
ನಮ್ಮ ಪ್ರಯತ್ನಕ್ಕೆ ನಿಧಾನವಾಗಿಯಾದರೂ ಪ್ರತಿಕ್ರಿಯೆ ದೊರೆಯುತ್ತಿವೆ. ಮಿತ್ರ ವಿಜಯ್ ಪ್ರತಿಕ್ರಿಯೆ ನೀಡುತ್ತಾ , ಬರದ ನಾಡು ಚಿತ್ರದುರ್ಗದಲ್ಲಿ ಸಾಹಿತ್ಯ ಸಮೃದ್ಧಿ ಎನ್ನುವ ಮಾತು ಆಡಿದ್ದಾರೆ. ವರ್ಷವಿಡೀ ನಮ್ಮಿಂದ ಏನನ್ನೂ ಕೊಡಲು ಸಾಧ್ಯ? ಅನ್ನುವ ಪ್ರಶ್ನೆ ಇಟ್ಟುಕೊಂಡೇ ಏನೂ ಸಾಧ್ಯವೋ ಅದೆಲ್ಲವನ್ನೂ ಕೊಡೋಣ, ಎಂದೇ ನೀರಿಗೆ ಇಳಿದಿದ್ದೇವೆ. ವಿಜಯ್ ಬರದ ಸೀಮೆ ಎಂದು ಪ್ರಸ್ತಾಪಿಸಿದ ಪ್ರತಿಕ್ರಿಯೆ ಓದಿದಾಗ ನೆನಪಾಗಿದ್ದು ಇತ್ತೀಚೆಗೆ ಚಿತ್ರದುರ್ಗದ ಪ್ರಜಾವಾಣಿ ವರದಿಗಾರ ಪ್ರಕಾಶ್ ಕುಗ್ವೆ ಬರೆದ ವಿಶೇಷ ವರದಿ. ಅದರ ಪೂರ್ಣ ಪಾಠ ಇಲ್ಲಿದೆ..
ಐತಿಹಾಸಿಕ ನಗರ ಚಿತ್ರದುರ್ಗಕ್ಕೆ ಕೊನೆಗೂ ಸಾಹಿತ್ಯ ಸಮ್ಮೇಳನ ಆತಿಥ್ಯದ ಅದೃಷ್ಟ ಒಲಿದಿದೆ. ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಷ್ಟೇ ಅಲ್ಲ ಸಾಹಿತ್ಯ, ಸಂಶೋಧನೆಯಲ್ಲೂ ಹೆಸರಾಗಿರುವ ಚಿತ್ರದುರ್ಗಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತ ಮಹೋತ್ಸವ ಆಚರಣೆಯ ಅವಕಾಶ ಸಿಕ್ಕಿರುವುದು ಜನರಲ್ಲಿ ಸಂಭ್ರಮ ಹೆಚ್ಚಿಸಿದೆ.
ಬರದ ಸೀಮೆ ಎಂಬ ಶಾಶ್ವತ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಜಿಲ್ಲೆ ಸಾಹಿತ್ಯ ಕೃಷಿಯಲ್ಲಿ ಸಮೃದ್ಧ ಬೆಳೆಯನ್ನೇ ಬೆಳೆಯುತ್ತಾ ಬಂದಿದೆ. ಇಷ್ಟಾದರೂ ಅಖಲ ಭಾರತ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿರಲಿಲ್ಲ. ನಾಡಿನ ವಿವಿಧ ಭಾಗಗಳಲ್ಲಿ ೭೪ ಸಾಹಿತ್ಯ ಸಮ್ಮೇಳನಗಳು ನಡೆದರೂ ಚಿತ್ರದುರ್ಗ ಮಾತ್ರ ಶಾಪಗ್ರಸ್ತವಾಗಿತ್ತು.
3 ವರ್ಷದಿಂದ ಕಾರ್ಯ ಕಾರಿ ಸಮಿತಿ ಸಭೆಯನ್ನೇ ಕರೆಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂಘಟನೆಯನ್ನೇ ಮರೆತ ಇಲ್ಲಿನ ಕನ್ನಡಪರ ಸಂಘಟನೆಗಳಿಂದಾಗಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಾಧ್ಯವೇ ಎಂಬ ಅನುಮಾನ ಒಂದೆಡೆ ಕಾಯುತ್ತಿದೆ.
ಬಹುವರ್ಷಗಳ ಬೇಡಿಕೆ
ಚಿತ್ರರ್ದುಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ವೀರೇಶ್, ತಾವು ಅಧ್ಯಕ್ಷರಾದಾಗಿನಿಂದಲೂ ಈ ಸಂಬಂಧ ರಾಜ್ಯ ಘಟಕದ ಅಧ್ಯಕ್ಷರನ್ನು ಪ್ರತಿ ಸಮ್ಮೇಳನದಲ್ಲಿ ಒತ್ತಾಯಿಸುತ್ತಾ ಬಂದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ೭೩ನೇ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ನಡೆಸುವಂತೆ ಒತ್ತಡ ಹೇರಿದ್ದರು. ರಾಮನಗರ, ಉಡುಪಿ, ಕೋಲಾರಗಳಿಂದಲೂ ಒತ್ತಡ ತೀವ್ರವಾದಾಗ ಕನ್ನಡ ಸಾಹಿತ್ಯ ಪರಿಷತ್ತು ಈ ಬಗೆಗಿನ ನಿರ್ಧಾರವನ್ನು ಕೆಲ ದಿವಸಗಳ ಕಾಲ ಮುಂದೂಡಿತ್ತು.
ನಂತರ ಚಿಕ್ಕಮಗಳೂರಿನಲ್ಲಿ ನಡೆದ ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಡುಪಿ-ಚಿತ್ರದುರ್ಗಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಕೊನೆಗೂ ಒಮ್ಮತದ ನಿರ್ಧಾರ ಸಾಧ್ಯವಾಗದಿದ್ದಾಗ ಗುಪ್ತ ಮತದಾನ ನಡೆದು ೭೪ರ ಸಮ್ಮೇಳನ ನಡೆಸುವ ಅವಕಾಶ ಉಡುಪಿ ಪಾಲಾಯಿತು.
ಈ ಮಧ್ಯೆ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ೭೫ರ ಅವಕಾಶ ನಮ್ಮ ಜಿಲ್ಲೆಗೆ ನೀಡಿ ಎಂದು ಚಂಪಾ ಅವರಿಗೆ ಮನವಿ ಮಾಡಿದ್ದರು.
ದುರ್ಗದ ಸೊಗಸು
ಅಶೋಕನ ಶಿಲಾಶಾಸನ, ಪಾಳೇಗಾರರ ಏಳು ಸುತ್ತಿನ ಕೋಟೆ, ರಾಷ್ಟ್ರಕವಿ ಕುವೆಂಪು ಗುರುಗಳಾದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಹಾಗೆಯೇ ತರಾಸು, ಬೆಳೆಗೆರೆ ಕೃಷ್ಣಶಾಸ್ತ್ರಿಗಳು, ಕನ್ನಡ ಚಿತ್ರರಂಗದ ನಾಗೇಂದ್ರರಾವ್, ಕರ್ನಾಟಕದ ಏಕೀಕರಣದ ಶಿಲ್ಪಿ ಎಸ್.ನಿಜಲಿಂಗಪ್ಪ, ಮುರುಘಾಮಠ, ಸಿರಿಗೆರೆ ಮಠ ಸೇರಿದಂತೆ ವಿವಿಧ ಜಾತಿ- ಧರ್ಮದ ೫೦ಕ್ಕೂ ಹೆಚ್ಚು ಮಠಗಳಿರುವುದು ಜಿಲ್ಲೆಯ ಹೆಚ್ಚುಗಾರಿಕೆ.
ಈ ಮಹತ್ವಗಳಿಂದಾಗಿ ಸಮ್ಮೇಳನದ ಅಮೃತ ಮಹೋತ್ಸವಕ್ಕೆ ಚಿತ್ರದುರ್ಗ ಹೇಳಿ ಮಾಡಿಸಿದ ಊರು ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯ. ಆದರೆ ಕಥೆಗಾರ ರಾಘವೇಂದ್ರ ಪಾಟಿಲ, ‘ಸಮ್ಮೇಳನವನ್ನು ಸ್ವಾಗತಿಸುತ್ತೇನೆ. ಆದರೆ ನಿಷ್ಕ್ರಿಯವಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಘಟನೆ ಸಾಧ್ಯವೇ ಎನ್ನುವ ಭಯ ಕಾಡುತ್ತಿದೆ’ ಎನ್ನುತ್ತಾರೆ.
‘ಇಲ್ಲಿ ಇದುವರೆಗೂ ಸಮ್ಮೇಳನ ನಡೆಯುವುದು ವಿಷಾದಕರ. ಇಲ್ಲಿನ ಜನ ಜೇಬಿನಿಂದ ಬಡವರಾಗಿರಬಹುದು. ಹೃದಯದಿಂದ ಶ್ರೀಮಂತರಿದ್ದಾರೆ’ ಎಂದು ಅಭಿಪ್ರಾಯ ಪಡುತ್ತಾರೆ ಸಾಹಿತ್ಯದ ಪರಿಚಾರಕ ವೆಂಕಣ್ಣಾಚಾರ್.
‘ಇದು ಜಿಲ್ಲೆಗೆ ಸಂದ ಗೌರವ. ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿ ಸಮ್ಮೇಳನ ನಡೆಸುವ ಅವಕಾಶಗಲು ಇಲ್ಲಿವೆ ’ ಎನ್ನುವ ಅಭಿಪ್ರಾಯ ಶಿವಮೂರ್ತಿ ಮುರುಘಾ ಶರಣರು, ಸಂಶೋಧಕರ ಬಿ.ರಾಜಶೇಖರಪ್ಪ, ಹಾಗೂ ಕವಿ ಚಂದ್ರಶೇಖರ ತಾಳ್ಯ ಅವರದ್ದು.
‘ಸಾಹಿತ್ಯ ಸಮ್ಮೇಳನ ಇಲ್ಲಿ ನಡೆಯುವುದರಿಂದ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರಿನ ಗಡಿಭಾಗದ ಕನ್ನಡಿಗರನ್ನು ಜಾಗೃತಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಪರಸ್ಪರ ಸಹಕಾರರಿಂದ ಸಮ್ಮೇಳನ ಯಶಸ್ವಿಗೊಳಿಸುತ್ತೇವೆ’ ಎನ್ನುವ ಆತ್ಮವಿಶ್ವಾಸ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಎಂ.ವೀರೇಶ್ ಅವರದ್ದು.