Friday, February 6, 2009

"ಚಿತ್ರ" ಸಮ್ಮೇಳನ ಇಲ್ಲಿಗೆ ಬನ್ನಿ

ಸಾಹಿತ್ಯ ಸಮ್ಮೇಳನ ವಿವಿಧ ಮುಖಗಳನ್ನು ತೆರೆದಿಡುವ ಚಿತ್ರಗಳನ್ನು ಕನ್ನಡ ಪ್ರಭ ಗ್ಯಾಲರಿಯಲ್ಲಿ ನೋಡಿ. ಆನಂದಿಸಿ..
ಇಲ್ಲಿದೆ "ಚಿತ್ರ" ಸಮ್ಮೇಳನ

ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು

ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...
ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.
***
ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.
ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."
ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.
ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?
***
ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು ! (ಬೆಟ್ಟದಡಿಯಿಂದ)

ಕೆಂಡ ಸಂಪಿಗೆಯಲ್ಲಿ ಸಮ್ಮೇಳನದ ಬಗ್ಗೆ ತರೀಕೆರೆ ಬರೆದಿದ್ದಾರೆ..

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಜ ಹೈಲೈಟ್ ಅಧ್ಯಕ್ಷ ಎಲ್. ಬಸವರಾಜು ಅವರ ಭಾಷಣ. ಅವರ ಭಾಷಣದ ಕಾರಣ ಚಿತ್ರದುರ್ಗದ ಸಮ್ಮೇಳನ ಇತಿಹಾಸ ಸೇರಿತು. ಇದುವರೆಗಿನ ಯಾವುದೇ ಸಾಹಿತಿ ಅಧ್ಯಕ್ಷ ಸ್ಥಾನದಿಂದ ಈ ನೆಲದ ದಲಿತರಿಗೆ ಉತ್ತಮ ಶಿಕ್ಷಣ ಕೊಡಿ ಎಂದು ಸರಕಾರವನ್ನು ಕೇಳಿರಲಿಲ್ಲ. ಅಂತೆಯೇ ಮಠಾಧೀಶರನ್ನು, ಬಂಡವಾಳ ಶಾಹಿಯನ್ನು ಕಳ್ಳ ಕಾಕರ ಜೊತೆ ಸಮೀಕರಿಸಿ ಮಾತನಾಡಿರಲಿಲ್ಲ. ಬಡವರಿಗೆ ಕೈಗೆಟುಕದೇ ಹೋಗಿರುವ ಶಿಕ್ಷಣವನ್ನು ಸರ್ಕಾರೀಕರಣ ಮಾಡಿ ಎಂದು ಬೊಬ್ಬೆ ಹಾಕಿರಲಿಲ್ಲ. ಆ ಕಾರಣಕ್ಕೆ ಇದು ವಿಶಿಷ್ಟ ಸಮ್ಮೇಳನ. ವಿಮರ್ಶಕ ರಹಮತ್ ತರೀಕೆರೆ ಕೆಂಡ ಸಂಪಿಗೆಯಲ್ಲಿರ ಬರೆದಿರುವ ಲೇಖನ ಓದಿ.

Monday, February 2, 2009

ಎಸ್ಸೆನ್ ಮ್ಯೂಸಿಯಂ
















ಎಸ್.ನಿಜಲಿಂಗಪ್ಪ ದೇಶ ಕಂಡ ಅಪರೂಪದ ರಾಜಕಾರಣಿ. ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದವರು. ಇದೇ ಚಿತ್ರದುರ್ಗದವರು. ಅವರು ಬದುಕಿನ ಕಡೆ ದಿನಗಳನ್ನು ಕಡೆದ ಮನೆ ಸಮ್ಮೇಳನಕ್ಕೆ ಬರುವವರಿಗಾಗಿ ಬಾಗಿಲು ತೆರೆಯಲಿದೆ. ನಿಜಲಿಂಗಪ್ಪನವರ ಜೀವನವನ್ನು ನಮ್ಮ ಬಿಚ್ಚಿಡುವ ವಸ್ತು ಸಂಗ್ರಹಾಲಯವಾಗಿ ತೆರೆದುಕೊಳ್ಳಲಿದೆ.
ಸುಮಾರು 2 ಲಕ್ಷ ವೆಚ್ಚದಲ್ಲಿ ಮನೆಯನ್ನು ಎಸ್ಸೆನ್ ಸ್ಮಾರಕ ವಸ್ತು ಸಂಗ್ರಾಹಲಯವನ್ನಾಗಿ ಮಾಡಲಾಗಿದ. ಎಸ್ಸೆನ್ ಸದಾ ಕೂರುತ್ತಿದ್ದ ಕುರ್ಚಿ, ವಾಕಿಂಗ್ ಸ್ಟಿಕ್, ಹಿರಿಯರೊಂದಿಗೆ ಬೆರೆತ ಕ್ಷಣಗಳನ್ನು ನಮ್ಮ ಮುಂದಿಡುವ ಭಾವಚಿತ್ರಗಳು. ನಿಜಲಿಂಗಪ್ಪ ಅವರಿಗೆ ಸಂದ ಪ್ರಶಸ್ತಿ, ಫಲಕಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇಲ್ಲಿ ನೋಡಲು ಸಿಗುತ್ತವೆ.
ಸಮ್ಮೇಳನದ ಮೊದಲ ದಿನ ಈ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ. ಜಿಲ್ಲೆಯ ಹಿರಿಯ ನಾಯಕರೊಬ್ಬರ ಬದುಕನ್ನು ಪರಿಚಯಿಸುವ ಈ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ಕೊಡಿ.