Tuesday, June 10, 2008

ಕೆನ್ನಳ್ಳಿಯಿಂದ ಗೌನಹಳ್ಳಿಗೆ ಬಂದವರು

ಬಡೆತ್ತಿನ ಕಣಿವೆ - ಭೈರಜ್ಜಿಕಣಿವೆ ಮಧ್ಯೆ ಹರಿಯುತ್ತಿದ್ದ ಬಸವನ ಹೊಳೆ ಮಗ್ಗುಲ ಬಯಲಲ್ಲಿದ್ದ ಕೆನ್ನಳ್ಳಿ ಅಥವಾ ಕಂದಗಾನಹಳ್ಳಿ ತಮ್ಮೆದುರಲ್ಲೇ ಹಾಳಾದುದನ್ನು ಕಂಡಿದ್ದ ಸುಂತರ (ಸುಂಕ- ಸುಂತ ಆಗಿದೆ, ವಂಶಸ್ಥರು ಹಿರಿಯೂರಿನಲ್ಲಿ ಸುಂಕ ವಸೂಲಿ ಮಾಡುತ್ತಿದ್ದರಂತೆ) ದಾಸಣ್ಣ, ಸಂಬಂಧಿ ಮಾರನಾಯ್ಕ ಹಾಳೂರನ್ನು ತೊರೆಯಲು ತೀರ್ಮಾನಿಸಿದ್ದರು. ದಾಸಣ್ಣ ಹೆಂಡತಿ ಹುಚ್ಚಮ್ಮಳ ತೌರೂರು ಮರಡಿಹಳ್ಳಿಗೆ, ಮಾರನಾಯ್ಕ ಚಿತ್ರದುರ್ಗ ಸಮೀಪದ ಇಂಗಳದಾಳಿಗೆ (ಆತನಿಗೂ ಅಲ್ಲಿ ಬಂಧುಗಳಿದ್ದರು) ಹೋಗಿ ನೆಲೆಸಲು ತೀರ್ಮಾನಿಸಿದ್ದರು.
ನಸುಕಿನಲ್ಲಿಯೇ ಹೊರಡಬೇಕೆಂದು ತೀರ್ಮಾನಿಸಿದ್ದರಿಂದ, ರಾತ್ರಿಯೇ ಎರಡು ಎತ್ತಿನ ಬಂಡಿಗಳಿಗೆ ಬೇಕಾಗುವ ಸಾಮಾನು ಸರಂಜಾಮು ತುಂಬಿದ್ದರು. ಮೊದಲ ಕೋಳಿ ಕೂಗುತ್ತಲೇ ಎದ್ದು ಕೊನೆ ಅಡಿಗೆ ಮಾಡಿ ಆಡಿನ ಹಾಲು, ಆಕಳ ಹಾಲಿಗೆ ಒಂದೆರಡು ಪಾವು ಬೆಳ್ಳುಳ್ಳಿ - ಒಂದೆರಡು ಮೆಣನಸಿನಕಾಯಿ ಕೆಂಡದ ಮೇಲೆ ಬಿಸಿ ಮಾಡಿ ಹಾಕಿ ಕಿವಿಚಿಕೊಂಡು ಒಂದೊಂದು ಬಿಸಿ ಬಿಸಿ ರಾಗಿ ಮುದ್ದೆ ಉಂಡ ಶಾಸ್ತ್ರ ಮಾಡಿದ್ದರು. ಹಾದಿ ಮಧ್ಯೆ ಮಕ್ಕಳಿಗೆಂದು ಬುತ್ತಿಯನ್ನೂ ಕಟ್ಟಿದ್ದರು, ಹೆಂಗಸರು.
ಮಲಗಿದ್ದ ಮಕ್ಕಳನ್ನು ಏಳಿಸಿ ಮುಖಕ್ಕೆ ನೀರೆರಚಿ ಅವಕ್ಕೂ ತಿನ್ನೋವಷ್ಟು ಮುದ್ದೆ ತಿನ್ನಿಸಿ ಹೆಂಗಸರು, ಮಕ್ಕಳನ್ನು ಬಂಡಿಯಲ್ಲಿ ಕೂರಿಸಿ, ಖಾಲಿ ಮನೆಗಳಿಗೆ ಕಾಡು ಮಿಕಗಳು ಸೇರಬಾರದಲ್ಲ ಎಂದು ಬೀಗ ಹಾಕಿದ್ದರು. ಬೆಳೆದ ಗಂಡು ಮಕ್ಕಳು ಆಕಳು ಮೇಕೆಗಳನ್ನು ನಡೆಸಿಕೊಂಡು ಮುಂದೆ ಮುಂದೆ ನಡೆದರೆ, ದಾಸಣ್ಣ, ಮಾರನಾಯ್ಕ ಮತ್ತು ಹೆಂಗಸರು ಕಟ್ಟಿ ಬೆಳೆದ ಊರು ತೊರೆಯಬೇಕಲ್ಲಾ ಎಂಬ ಅವ್ಯಕ್ತ ಪ್ರೀತಿಯಿಂದ ಒತ್ತಿಬಂದ ಕಣ್ಣೀರನ್ನು ಒರೆಸಿಕೊಂಡು ಹೊರಟರು. ಮೂಡಲಲ್ಲಿ ಕೆಮ್ಮೋಡಗಳು ಹೊತ್ತು ಮೂಡುತ್ತಿರುವುದನ್ನು ಸೂಚಿಸುತ್ತಿದ್ದವು.
ಮೂಡಲ ಗುಡ್ಡದ ಸಂತೆ ಕಣಿವೆಯಲ್ಲಿ ಕಗ್ಗಲ್ಲ ದಾರಿಯಲ್ಲಿ ಒಗ್ಗಾಲಿ, ಗುಂಡಿ ಗೊಟರುಗಳಲ್ಲಿ ಬಂಡಿಗಳನ್ನು ಹತ್ತಿಸಿ, ಕಣಿವೆ ಭೂತಪ್ಪನಿಗೆ ಅಡ್ಡ ಬಿದ್ದು, ದೂರದಲ್ಲಿ ಕನ್ನಳ್ಳಿ ದಿಕ್ಕಿಗೆ ಕಾಣುತ್ತಿದ್ದ ಭೂಚಕ್ರದ ಕೊಡೆಯಂತಿದ್ದ ದೊಡ್ಡ ಕಮರದ ಮರ, ಹಾಲಗುಡ್ಡ, ಭೈರಜ್ಜಿಕಣಿವೆ, ರಾಮದಾಸನ ಮರಡಿ ಮುಂತಾದುವನ್ನು ನಿರ್ವಿಕಾರ ಮನೋಭಾವದಿಂದ ನೋಡಿ, ಬಂಡಿಗಳನ್ನು ಬಡಗಲು ದಿಕ್ಕಿಗೆ ತಿರುಗಿಸಿದರು.
ಆ ತನಕ ದಿಕ್ಕೆ ತೋಚದೆ ಶೂನ್ಯ ಮನಸ್ಕರಾಗಿ ಬಂಡಿ ಹಿಂದೆ ನಡೆಯುತ್ತಿದ್ದ ದಾಸಣ್ಣ, ಮಾರನಾಯ್ಕರಿಗೆ ಹಾಳಾದ ಊರು ಬಿಟ್ಟು ನೆಂಟರಿಷ್ಟರ ಊರುಗಳಿಗೆ ಹೋಗುವ ಪರಿಸ್ಥಿತಿ ಬಂದುದಕ್ಕೆ ನಿರಾಶೆ, ವ್ಯಾಕುಲ ಮನಸ್ಸು ತುಂಬಿದ್ದವು. `ಹೆಂಗಾದ್ರೂ ಮಾಡಿ ಬದುಕಬೇಕು, ಇದಕ್ಕೆ ಅಂಜಿದರೆ ಅವನು ಹೇಡಿ` ಅನ್ನುವ ಭಾವನೆಕೂಡ ಇಬ್ಬರಲ್ಲೂ ಮೂಡಿತ್ತು. ಆದರೂ `ಪರಸ್ಥಳ ಪರಮಕಷ್ಟ` ಅನ್ನೋ ಗಾದೆ ಮಾತಿನಂತೆ ಏನೇನು ಅನುಭವಿಸಬೇಕೋ ಎಂದು ಯೋಚಿಸುತ್ತಿದ್ದರು.
`ಎಣ್ತಿ ಅಣ್ಣಂದಿರು ದೇವರಂಥ ಮನುಷ್ಯರು, ಊರು ಬಿಟ್ಟು ಬರ್ರಿ ಅಲ್ಲೇನೈತೇ ಅಂತ ಇದೀರಾ` ಅಂತ ನಾಕೈದು ಬಾರಿ ವಿವೇಕದ ಮಾತು ಹೇಳಿದ್ರು. ಆದ್ರೂ ಏಸು ದಿನಾ ನೆಂಟರ ಮನೆಯಾಗಿರೋದು. ಬ್ಯಾರೆ ಮನೆ ಕಟ್ಟಿಕೋಬೇಕು. ಕೂಲಿ ನಾಲಿ ಮಾಡಿ ಮರುವಾದೆಯಿಂದ ಬಾಳಬೇಕು ಅನ್ನೋ ವಿಚಾರ ಮಾಡಿದ್ದರು.
ಆಕಳು ಆಡಿನ ಹುಡುಗರು ಹಿಂದೆ ಉಳಿದಿದ್ದರು. ಅವರನ್ನು ಕೂಡಿಕೊಳ್ಳುವ ಸಲುವಾಗಿ ಬಂಡಿಗಳನ್ನು ಕರೇ ಚಿಕ್ಕಯ್ಯನ ಕೊಪ್ಪದ ಹಳ್ಳದ ಬಳಿ ನಿಲ್ಲಿಸಿ ಎತ್ತುಗಳಿಗೆ ನೀರು ಕುಡಿಸಲು, ಬಂಡಿ ನಡೆಸುತ್ತಿದ್ದವರಿಗೆ ತಿಳಿಸಿ ಹಿಂದೆ ಉಳಿದರು. ದಾಸಣ್ಣನ ಮಗ ಓಬಳೇಶಿ ಗಾಡಿ ಕುಲುಕಾಟಕ್ಕೆ ರೋಸಿ ಬಂಡಿಯಿಂದ ನಡೆದು ಬರುತ್ತಿದ್ದವರನ್ನು ಕೂಡಿಕೊಂಡಿದ್ದ. `ಬಾಳ ದೂರ ನಡೀಬೇಕಪ್ಪಾ, ಕಾಲು ನೋವು ಬರುತ್ತೆ ಹೋಗಿ ಬಂಡಿ ಹತ್ಕೋ` ಅಂದರೂ ಕೇಳದೆ ಅವರ ಜೊತೆಯಲ್ಲಿಯೇ ನಡೆದಿದ್ದ.
ಆವಾಗ ಮಾರನಾಯ್ಕ `ಮಾಮಾ ಊರಂತೂ ಹಾಳಾಗೋಯ್ತು. ದೇವರ ಶಾಪಾನೇ ಇರಬೇಕು ಒಂದು ನರಪಿಳ್ಳೆ ಕೂಡ ಉಳೀಲಿಲ್ಲ. ಮುಂದೆ ಹೊಲ- ಮನೆಗತಿ ಹೆಂಗೆ` ಎಂದು ತನ್ನ ಸಂಕಟವನ್ನು ದಾಸಣ್ಣನ ಮುಂದಿಟ್ಟ. `ಈಗ ಮೂರು ವರ್ಸಾತು ಮಳೆ ಹನಿ ಅಂಬೋದು ನೆಲ ಮುಟ್ಟಿಲ್ಲ. ಮುಂದೇ ಕಾಲಕ್ಕೆ ಸರಿಯಾಗಿ ಬರುತ್ತೆ ಎಂಬ ನಂಬ್ಕೆ ಸಾಲ್ದು. ಸಾಕಿದ ಮ್ಯಾಕೆ ಮಾರಿಕೊಂಡು ಏಸು ದಿನ ಬದುಕಾಕಾದೀತು. ನೋಡ ಅಂಥ ಸುಭಿಕ್ಷದ ಕಾಲ ಬಂದ್ರೆ ಗೌನಳ್ಳೀಗ್ಯಾರಾನ ಕೋರಿಗೆ ಮಾಡ್ಯಾರು` ಮುಂದೆ ಹೆಂಗೋ, ಇರುವ ಎಂಬತ್ತು ಕೋಟಿ ಸಾಕೋನು ಅವನು ಅದಾನಲ್ಲಾ, ಏನಾದ್ರೂ ದಾರಿ ತೋರುಸ್ತಾನೆ` ಅಂದು ದಾಸಣ್ಣ ದಾರೀ ಕಡೆ ನೋಡಿದ. ದೂರದಲ್ಲಿ ಹುಡುಗರು ಮೇಕೆಗಳನ್ನು ಕರೆಯುತ್ತಿರುವ ಸಿಳ್ಳು, ಮುಂತಾದವು ಕೇಳಿಸುತ್ತಿದ್ದುವು.
`ದೇವ್ರೂ ಅಂಬೋನು ಇದಾನೇ ಅಂತೀಯಾ. ಇದ್ದಿದ್ರೇ ಮಳೆ ಯಾಕೆ ಮುಗಿಲು ಸೇರ್‌ಕೊಂಡ್ವೋ ನಾವು ಕೆನ್ನಳ್ಳಿ ಯಾಕೆ ಬಿಡಬೇಕಾಗಿತ್ತು` ಮಾರಯ್ಯನ ಹತಾಶೆಯ ಪ್ರತಿಕ್ರಿಯೆ. ನೀನೇ ನೋಡಿದ್ಯೆಲ್ಲಪ್ಪ ಮಾಡಬಾರದ್ದು ಮಾಡಿದ್ರೆ ಆಗಬಾರದು ಆಗುತ್ತೆ, ಅನ್ನೋದಕ್ಕೆ ಸಾಕ್ಷಿಯಂಗೆ ತಾವು ಸಾಯೋದಲ್ದೇ ಇಡೀ ವಂಶವೇ ನಿರ್ವಂಸ ಆಗೋದ್ವು ಊರಿಗೆ ಮುನಿ ನೆಳ್ಳು ಬಿದ್ದತೇ ಅಂತ ಒಂದಲ್ಲ ಎಳ್ಡುಕಡೆ ಊರು ಕಟ್ಗಂಡ್ರು ಅದ್ರೆ ತಮ್ಮ ಅನ್ಯಾಯ, ಅತ್ಯಾಚಾರ ಬಿಡಲಿಲ್ಲ. ಕಾಣದೋರ ಕುರಿ, ಮ್ಯಾಕೆ ಮೆಯ್ಯಾಕೆ ಹಳ್ಳದ ನೀರಿಗಂತ ಇತ್ಲಾಗೆ ಬಂದ್ರೆ ಅವನ್ನೇ ಹಿಡಿಕಂಡು ಕೊಯ್ಕುಂಡು ತಿಂದ್ರು. ಯಾರಾದ್ರೂ ದಾರಿ ಹೋಕರು ಬಸವನಹಳ್ಳದ ಕಡೇಲಿಂದ ತ್ರಿಶೂಲ್ಡಳ್ಳದ ಕಡೇಲಿಂದ ಬಂದ್ರೆ ಬಚ್ಚಿಟ್ಟುಕೊಂಡು ಹಳ್ಳದಾಗೆ ಹಿಡಕಂಡು ಅವರ ಹತ್ತಿರ ಇದ್ದಿದ್ದನ್ನೆಲ್ಲಾ ದೋಚುತ್ತಿದ್ದರು.
ದಾಸಪ್ಪನ ಬಂಡಿ ನೆಂಟರ ಮನೆಯಂಗಳದಲ್ಲಿ ಹೋಗಿ ನಿಂತಾಗ ಪಡುವಲಲ್ಲಿ ಹೊತ್ತು ಎರಡು ಮಾರು ಅಂತರದಲ್ಲಿತ್ತು. ಆಡು, ಆಕಳ ಸಮೇತ ಬಂದಿಳಿದ ಬೀಗರ ಕುಟುಂಬವನ್ನು ಮರಡಿಹಳ್ಳಿಯವರು ಸಂತೈಸುವ ರೀತಿಯಲ್ಲೇ ಸ್ವಾಗತಿಸಿದರು. ಅವರ ಮನೆಯ ಓಲೆಗಳು ಧಗ್ಗನೆ ಹೊತ್ತಿಕೊಂಡವು
ಸಂಜೆ ಆಕಳು, ಎಮ್ಮೆ ಕರ -ಮರೀನೆಲ್ಲಾ ದನದ ಕೊಟ್ಟಿಗೇಲಿ ಕಣ್ಣಿ ಹಾಕಿ ಕದಾ ಮುಂದಕ್ಕೆಳಕೊಂಡು ಬಂದ ಎಂಜಪ್ಪ ಗೌಡ್ರಿಗೆ ಅಟ್ ಮಾಳಿಗೆ ಜಗುತಿ ಮ್ಯಾಲೆ ಕುಂತುಕೊಂಡಿದ್ದ ಎಂಟತ್ತು ವರ್ಷ ಪ್ರಾಯದ ಹುಡುಗನ್ನ ನೋಡಿ ಆಶ್ಚರ್ಯವಾಯಿತು. ಇವನನ್ನ ಈ ಮುಂಚೆ ಎಲ್ಲೂ ಕಂಡ ನೆನೆಪಿರಲಿಲ್ಲ. ಹಾಗಾಗಿ ‘ಯಾವೂರಪ್ಪ, ಹೆಸರೇನು' ಎಂದು ವಿಚಾರಿಸಿದರು. ಹುಡುಗ ಬಾಯಿ ಬಿಡಲಿಲ್ಲ. ಬದಲು ಕೆಳ ಮಾರೇ ಮಾಡಿ ಕುಳಿತಿದ್ದವನು ಎದ್ದು ನಿಂತ. ಮೂಕಗೀಕ ಇರಬೇಕೆಂದುಕೊಂಡು ಮನೆ ಒಳಗೆ ಕರೆದರು. ಹುಡುಗ ಗೌಡರನ್ನು ಹಿಂಬಾಲಿಸಿದ್ದ.
ಎಂಜಪ್ಪಗೌಡರು ಆಕಳು, ಎಮ್ಮೆ ಹಾಲು ಕರೆಯಲು ಕರುಗಳನ್ನು ಊಡಲು ಬಿಟ್ಟು , ಅವುಗಳ ತಾಯಂದಿರು ಹಾಲು ಇಳಿಸಿದಾಗ ಕರುಗಳನ್ನು ಗೂಟಕ್ಕೆ ಕಣ್ಣಿ ಹಾಕಲು ಮುಂದಾದಾಗ ಹುಡುಗ ಕರುಗಳನ್ನು ಅವುಗಳ ಅಮ್ಮಂದಿರ ಮುಂದೆ ಹಿಡಿದು ನಿಂತು ಅವು ಮಕ್ಕಳನ್ನು ನೆಕ್ಕುತ್ತಾ ಚೊಂಬು ತುಂಬಾ ಹಾಲು ನೀಡಿದ್ದವು. ಹುಡುಗನಿಗೆ ಕರೆದುಕೊಟ್ಟಿದ್ದರು. ಹೊದೆಯಲು ಕಂಬಳಿ ನೀಡಿದ್ದರು, ಗೌಡರ ಮನೆಯವರು.
ಅಟ್‌ಮಾಳಿಗೇಲಿ ಮಲಗಿದ್ದ ಹುಡುಗ ಪಲ್ಪರಿಯುತ್ತಲೇ ಎದ್ದು ದನಕರುಗಳ ಸಗಣಿ ಬಾಚಿ ಈಚಲ ಪುಟ್ಟಿಗಳಿಗೆ ತುಂಬಿಸಿದ್ದ. ಗೌಡರ ಮನೆ ಮಂದಿಗೆ ಇದನ್ನು ನೋಡಿ ಸೋಜಿಗವಾಗಿತ್ತು. ಯಾರೋ ‘ಬದುಕಿ ಬಾಳಿದವರ ಮಗನಿರಬೇಕು' ಅಂದುಕೊಂಡಿದ್ದರು. ಕೈ ತೊಳೆದುಕೊಳ್ಳಲು ಬಿಸಿ ನೀರು ನೀಡಿದ್ದರು.
ಚಿಕ್ಕುಂಬತ್ತಿಗೆ ಬಿಸಿ ಬಿಸಿ ರಾಗಿಮುದ್ದೆ ಸೊಪ್ಪಿನ ಸಾರು ಊಟಕ್ಕೆ ನೀಡಿದ್ದರು. ಬಿಸಿ ಸಾರಿಗೆ ಕವಣಿಗಲ್ಲಷ್ಟು ಬೆಣ್ಣೆ ಹಾಕಿದ್ದರು. ಹುಡುಗ ಇಂಥಾ ಊಟ ಉಂಡು ಎಷ್ಟೋ ವರ್ಷವಾಗಿದ್ದವು. ಕಣ್ಣೀರು ಬಳ ಬಳ ಇಳಿದಿದ್ದವು. ಉಂಡು ಹೊಲಕ್ಕೆ ಹೊರಟ ಗೌಡರ ಮನೆ ಮಂದಿ ಜತೆ ಹುಡುಗನೂ ಹೊಲಕ್ಕೆ ಹೋಗಿದ್ದ. ಅಲ್ಲಿ ಕಳೆ ಕೀಳುವ ಕೂಲಿಜನರೊಂದಿಗೆ ಕಳೆ ಕಿತ್ತ. ಕಿತ್ತ ಕಳೆಯನ್ನು ಮೆಟ್ಟಿ ತುಂಬಾ ತುಂಬಿ ಹೊಲದ ಬದುವಿಗೆ ಹೊತ್ತೊಯ್ದು ಸುರುವಿದ್ದ. ಹುಡುಗ ಮೂಕನಿರಬೇಕೆಂದು ಗೌಡರ ಮನೆಯವರು ಸಂಜ್ಞೆ ಮೂಲಕ ನಡೆಸಿಕೊಂಡಿದ್ದರು.
ಹುಡುಗ ಬಂದು ಮೂರು ದಿನ ಕಳೆದಿದ್ದವು. ಆ ಸಂಜೆ ಕೆನ್ನಳ್ಳಿ ಕುಂತರ ದಾಸಣ್ಣ ಮತ್ತೊಬ್ಬರು ಗೌಡರ ಮನೆ ಬಳಿ ಬಂದರು. ‘ನಿಮ್ಮ ಮನೆಗೊಬ್ಬ ಹುಡುಗ ಬಂದಿದಾನಂತೆ, ನಿಜವೆ? ಯಾಕಂದ್ರೆ ನನ್ನ ಒಂಬತ್ತು ವರ್ಷದ ಮಗ ಓಬಳೀಶಿ ಮಳ್ದೀಹಳ್ಳಿಯಿಂದ ತಪ್ಪಿಸಿಕೊಂಡು ಈಗ ಮೂರ್ ದಿನ ಆಗೈತೆ, ಯಾರೋ ಇಂಗಿಂಗೆ ಅಂತ ಹೇಳಿದ್ರು. ನೋಡಾನಾಮ್ತ ಬಂದೆ' ಎಂದು ಅವರು ವಿಚಾರಿಸಿದ್ದರು. ‘ಯಾರೋ ಒಬ್ಬ ಹುಡುಗ ಬಂದೈದಾನೆ. ಮೂಕ ಇದ್ದಂಗೈದಾನೆ. ನಿಮ್ಮುಡುಗನೋ ಏನೋ ಗೊತ್ತಿಲ್ಲ. ಮೂರು ದಿನಕ್ಕೆ ಒಗ್ಕ್ಯಂಡ್ ಬಿಟ್ಟಿದ್ದಾನೆ. ಮಗ್ಗುಲ ಅಟ್ ಮಾಳಗೇಗೆ ಇರಬೇಕು ನೋಡ್ರಿ' ಗೌಡರ ಮನೆಯವರು ತಿಳಿಸಿದ್ದರು.
ಅಟ್ ಮಾಳಿಗೇಲಿ ಬಿಳೀ ಆಕಳು ಒಂದರ ಮೈ ಸವರುತ್ತಾ ತನ್ಮಯನಾಗಿದ್ದ ಮಗನನ್ನು ಕಂಡು ದಾಸಣ್ಣನ ಹೃದಯ ತುಂಬಿ ಬಂದಿತ್ತು. ಕಣ್ಣು ತೇವವಾಗಿದ್ದವು. ‘ಅಪ್ಪಯಾ ಓಬಳೇಶಿ' ಅನ್ನುತ್ತಾ ಮಗನ ಮಖ ಮೈ ಸವರಿ ಅಪ್ಪಿಕೊಂಡು ನಿಟ್ಟುಸಿರು ಬಿಟ್ಟ ದಾಸಣ್ಣ. ಕೂಡಲೇ ಓಬಳೇಶಿ ‘ತಗೀ ನಾನು ಬರಲ್ಲಾ ಇಲ್ಲೇ ಇರ್‍ತೀನಿ' ಎಂದು ಕಣ್ತುಂಬಿಕೊಂಡು ಪ್ರತಿಭಟಿಸಿದ. ಹುಡುಗನ ವರ್ತನೆ ನೋಡಿ ದಾಸಣ್ಣನಿಗೂ ಆತನ ಜೊತೆಗಾರನಿಗೂ ಮತ್ತು ಗೌಡರ ಮನೆಯವರಿಗೂ ಆಶ್ಚರ್ಯವಾಗಿತ್ತು.
‘ಇರಲಿ ಬುದ್ದಿಮಾತು ಹೇಳಿ ಕರಕಂಡೊಗೋನ' ಎಂದು ಆಗ ಸುಮ್ಮನಾಗಿದ್ದರು. ದಾಸಣ್ಣ ಆತನ ಭಾವಮೈದುನ ರಾತ್ರಿ ಗೌಡರ ಮನೆಯಲ್ಲಿ ತಂಗಿ, ಬೆಳಗೀಲೇ ಎದ್ದರೆ ಓಬಲೇಶಿ ಅಷ್ಟೊತ್ತಿಗೇ ಎದ್ದು ಸಗಣಿ ಬಾಚುತ್ತಿರುವುದನ್ನು ಕಂಡು ಆಶ್ಚರ್ಯವೂ, ಅನುಮಾನವೂ ಏಕಕಾಲದಲ್ಲಿ ಉಂಟಾಗಿದ್ದವು. ‘ಕೈತೊಳಕಳಪ್ಪಾ ಊರಿಗೆ ಹೋಗಾನ' ಎಂದು ದಾಸಣ್ಣ ತಿಳಿಸಿದರೂ ಹುಡುಗ , ತಂದೆಯ ಮಾತನ್ನು ಕಿವಿಯೊಳಗೆ ಹಾಕಿಕೊಂಡಿರಲಿಲ್ಲ.
ಅಷ್ಟೊತ್ತಿಗೆ ಎದ್ದು ಅಲ್ಲಿಗೆ ಬಂದಿದ್ದ ಗೌಡರು ಪಟೇಲ್ ಸಿದ್ದಯ್ಯ ‘ದಾಸಣ್ಣ ಬಡಾ ತನಕ ಚಿಕ್ಕುಂಬತ್ತಿಗೆಲೇ ಉಂಡು ಸಮಾಧಾನ ಮಾಡಿ, ಅವನ್ನಾ ಕರಕೊಂಡು ಹೋದಿಯಂತೆ' ಅಂದು ತಡೆದಿದ್ದರು. ಊಟ ಮಾಡಿ ಹೊರಟಾಗಲೂ ಹುಡುಗ ಅಪ್ಪನ ಜೊತೆ ಮರಡಿಹಳ್ಳಿಗೆ ಹೊರಡದೇ ಜಗ್ಗಾಡಿದ್ದ. ದಾಸಣ್ಣನಿಗೆ ಅರ್ಥವಾಗದೇ ಮತ್ತು ತಾಳ್ಮೆಯಿಂದಲೇ ‘ಓಬಳಿ ಹಠಾ ಮಾಡಬ್ಯಾಡಪ್ಪಾ, ಅಲ್ಲಿ ನಿಮ್ಮಮ್ಮಯ್ಯ ಏಟು ಎದಿಯಾರ ಪಡ್ತಾ ಇದಾಳೋ ಏನೋ. ನಿನ್ನ ತಮ್ಮ ತಿಮ್ಮಣ್ಣ ಹೆಂಗೆ ಆಟ ಆಡ್ತಾ ಐದಾನೇ ನೀನೇ ನೋಡಿಯಂತೆ, ನಡೀ ಮರೀ ಜಾಣ ' ಮುಂತಾಗಿ ಕಕ್ಕುಲತೆಯ ಮಾತಾಡಿದರೂ ಓಬಳೇಶಿ ಹೊರಡಲಿಲ್ಲ.
ದಾಸಣ್ಣನಿಗೆ ಸಿಟ್ಟು ಬಂದು ಎರಡೇಟು ಕೊಟ್ಟರೂ ಹುಡುಗ ಜಪ್ಪಯ್ಯ ಅಂದಿರಲಿಲ್ಲ. ಬದಲು ಅವನೇ ಅಳುತ್ತಲೇ ಮಾತಾಡಿದ್ದ. ‘ನಾನು ಬಿಲ್ಕುಲ್ ಅಲ್ಲಿಗೆ ಬರಲ್ಲ. ನೀನೇ ಈ ಊರಿಗೆ ಬಂದು ಇರು' ಅಂದ. ದಾಸಣ್ಣನಿಗೆ ಕೆಲ ಹೊತ್ತು ಏನೂ ತಿಳಿಯದಾಯಿತು.
ಆವಾಗ ಪಟೇಲರು ‘ನೋಡೋ ದಾಸಣ್ಣ ಮರಡಿಹಳ್ಳಿ ನಿನ್ನೇಣ್ತಿ ತೌರೂರು ನಿಜ. ಆದ್ರೂ ಬ್ಯಾರೆ ಊರು ತಾನೆ. ನೆಂಟರ ಮನೆಯಾಗೆ ಎಸ್ ದಿನಾ ಆಮ್ತ ಇರ್ತೀಯ. ಅಲ್ಲ್ಯಾದ್ರೂ ಒಂದು ಬೇರೆ ಮನೆ ಕಟ್ಗಾ ಬೇಕು. ನಿನಮಗ ಈ ಊರ್‍ನ ಇಷ್ಟ ಪಟ್ಟಿದ್ದಾನೆ. ಅವನ ಇಷ್ಟದಂಗೇ ಇಲ್ಲಿಗೇ ಬಂದು ಒಂದು ಮನೆ ಕಟ್ಗಂಡು, ನಿನ್ನ ಕೆನ್ನಳ್ಳಿ ಜಮೀನನ್ನೂ ನೋಡ್ಕೋ ಬೌದು. ಇದರಾಗೆ ವಿವೇಕಾನೂ ಐತೆ. ಯೋಚ್ನೆ ಮಾಡು' ಅಂದು ಸಲಹೆ ನೀಡಿದರು.
ಮಗನ ಮಾತು ಮತ್ತು ಪಟೇಲರ ಸಲಹೆಯನ್ನು ತೂಗಿ ನೋಡಿ ‘ಇದರಾಗೆ ಒಳ್ಳೇದು ಇದ್ದೀತು. ಅದ್ಕೇ ಮಗ ಹಠ ಮಾಡ್ತಾ ಇದಾನೆ. ಆ ಭಗವಂತನಿಚ್ಛೆ ಏನೈತೋ` ಎಂದು ತನ್ನ ಭಾಮೈದನ ಜತೆ ಸ್ವಲ್ಪ ಹೊತ್ತು ಚರ್ಚಿಸಿ ` ಹಂಗೆ ಆಗ್ಲೀ ಗೌಡ್ರೇ, ಈ ವೊತ್ತು ದೇವ್ರು ಮಗನ ರೂಪದಾಗೆ, ನಿಮ್ಮ ರೂಪ ರೂಪದಾಗೆ ನನಗೊಂದು ಹಾದಿ ತೋರುಸ್ತಾ ಇದಾನೆ ಅಂದ್ಕೊಂಡೀನಿ. ನಾವು ಮರಿಡೀಹಳ್ಳೀಗೋಗಿ ತಿರಿಗ್ಕಂಡ್ ಬರಾತಂಕ ಇವನ್ನ ನಿಮ್ಮ ಮಗನಂಗೆ ಅಂದ್ಕಳ್ರಿ` ಅನ್ನುವಾಗ ದಾಸಣ್ಣನಿಗೆ ಎದೆಯ ಮೇಲಿನ ಭಾರವೊಂದು ಸಲೀಸಾಗಿ ಇಳಿದಂಗಾಗಿತ್ತು.
ಗೌನಹಳ್ಳಿಗೆ ಬಂದು ಮೊದಲೊಂದು ಗುಡಿಸಲು ಕಟ್ಟಿಕೊಂಡು ಆನಂತರ ಅದೇ ಜಾಗದಲ್ಲಿ ಮಾಳಿಗೆ ಮನೆಯನ್ನೂ ಕಟ್ಟಿದ ದಾಸಣ್ಣನ ಸಂಸಾರ ಸುಸೂತ್ರವಾಗಿ ನಡೆದಿತ್ತು.
(ಕೃಪೆ: ಕೆಂಡಸಂಪಿಗೆ)

ಗೌನಹಳ್ಳಿಯ ವೃತ್ತಾಂತಗಳು - ರಾಗಿಚೀಲ ಮತ್ತು ಪೊಲೀಸಪ್ಪ

ಊರೆಲ್ಲಾ ಮಲಗಿ ಸದ್ದಡಗಿದ ಮೇಲೆ ಗಾಡಿ ಕಟ್ಟಿದ್ದರು. ಗಾಡಿ ಅಚ್ಚಿಗೆ ಕೀಲೆಣ್ಣೆ ಹಾಕಿದ್ದರಿಂದ ಗಾಡಿ ಸದ್ದು ಮಾಡುತ್ತಿರಲಿಲ್ಲ. ಗಾಡಿಯಲ್ಲಿ ರಾಗಿ ಹುಲ್ಲು ಒಟ್ಟಿ ಅದರ ನಡುವೆ ಆರು ರಾಗಿ ಚೀಲಗಳನ್ನು ಬಚ್ಚಿಟ್ಟುಕೊಂಡು ಕಾಡು ದಾರಿಯಲ್ಲಿ ಹೊರಟಿದ್ದರು. ಎಲ್ಲೆಲ್ಲೊ ಪೋಲೀಸರ ಕಾಟ. ಅದನ್ನು ತಪ್ಪಿಸಿಕೊಂಡು ಬೆಳಕು ಹರಿಯುವ ಹೊತ್ತಿಗೆ ಊರ ಸಮೀಪಕ್ಕೆ ಹೋದರೆ ಸಾಕು ರಾಗಿ ಚೀಲಗಳನ್ನು ಹೊಲದ ಬಣವೆಗಳಲ್ಲಿ ಬಚಾವು ಮಾಡಿ ರಾತ್ರಿ ಮನೆಗಳಿಗೆ ಒಯ್ಯಬಹುದೆಂದು ಅವರ ಅಂದಾಜು. ಆಕಾಶದಲ್ಲಿ ಚಂದ್ರ ಬೆಳಗುತ್ತಿದ್ದ. ದನಕರುಗಳು ಓಡಾಡಿ, ಸೌದೆ-ಸೊಪ್ಪು ಹೇರಿ ಉಂಟಾಗಿದ್ದ ದಾರಿಗಳವು. ಆ ದಾರಿ ಎಲ್ಲೋ ಕಾಡಿನ ಮಧ್ಯಕ್ಕೆ ಕರೆದೊಯ್ಯಿತು. ಊರ ದಿಕ್ಕನ್ನು ಗುರುತಿಸಿಕೊಂಡು ಆ ದಿಕ್ಕಿಗೆ ಗಾಡಿಯನ್ನು ತಿರುಗಿಸಿಕೊಂಡು ಹೊರಟರು. ಗಾಡಿಗೆ ದಾರಿ ತೋರಿಸಿಕೊಂಡು ಮುಂದೆ ಮುಂದೆ ಹೋಗುತ್ತಿದ್ದ ರಂಗಜ್ಜ, ಪುರುದಣ್ಣ ಕಣ್ಣಲ್ಲಿ ಕಣ್ಣಿಟ್ಟು ನಡೆಯುತ್ತಾ ಮುಂದೆ ಎಂಥಾ ವಿಪತ್ತು ಕಾದಿದೆಯೋ ಎಂದು ಚಿಂತಿತರಾಗಿದ್ದರು. ತಮ್ಮ ಪರಿಸ್ಥಿತಿಯನ್ನು ನೆನೆದು ಕೊಂಚ ಭಯವಿಹ್ವಲರಾಗಿದ್ದರು. ಹೊಟ್ಟೆ ಹೊರೆಯಾಕೂ ಕಷ್ಟಕ್ಕೆ ಬಂತು. ಬರಬಾರದ ಗೊಟ್ಟು ಬಂದಿರೋವಾಗ ಜನ ಹೆಂಗೋ ಬದುಕಿದರೆ ಸಾಕು ಅಂಬಾದ್ ಬಿಟ್ಟು ಸರ್ಕಾರದೋರು ರಾತ್ರೋ ರಾತ್ರಿ ಬಂದು ಪಳತದಾಗಿನ ರಾಗಿ, ಹಗೇವುದಾಗಿನ ನವಣೆ, ಜ್ವಾಳಾ ಎಲ್ಲಾ ಹೆದರಿಸಿ ಬೆದರಿಸಿ ಬೆಚ್ಚಿಸಿ ಹೇರಿಕೊಂಡು ಹೋಗ್ತಾರೆ. ಅವು ಮುಗಿದ ಮ್ಯಾಲೆ ಇನ್ನೇನ್ ಮಾಡ್ತಾರೋ. ಹೊಟ್ಟೆ ಹೊರಿಯಾಕೂ ಕಳ್ಳತನದಾಗೆ ಕಾಳು-ಕಡಿ ಹೇರಿಕ್ಯಂಡು ಹೋಗ್‌ಬೇಕಾಗೈತೆ. ಇದೆಂಥಾ ಸರ್ಕಾರ. ಎಲ್ಲೆಲ್ಲೂ ಪೊಲೀಸರ ಕಾಟ. ಮಾರಾಜರ ಸರ್ಕಾರದಾಗಿಂಥಾವೆಲ್ಲಾ ನಡಿಯೋಲ್ಲ ಅಮ್ತಾರೆ, ಆದ್ರೆ ಯಾಕಿಂಗೆ ಅದೇ ಹೊಳಿಯಲ್ಲ ಎಂಬ ವಿಚಾರ ಅವರಿಬ್ಬರನ್ನೂ ಕಾಡಿತ್ತು. ಇಂಗ್ಲೀಸ್ರ ಜಬರ್‌ದಸ್ತ್‌ಬಾಳ. ಅಮಲ್‌ದಾರ, ಶೇಕ್‌ದಾರ, ಶಾನ್‌ಬೋಗ ಇವರ್‍ದೆ ಎಲ್ಲಾ. ಏನ್ ಮಾಡಾಕಾಗುತ್ತೆ? ಅಂದುಕೊಂಡರು.
ಗಾಡಿ ಹಿಂದೆ ಬರುತ್ತಿದ್ದ ಈರಬಡಪ್ಪ, ದ್ಯಾಮಣ್ಣ ಇಂಥದೇ ಯೋಚನೆಯಲ್ಲಿದ್ದರು. ಗಾಡಿ ನಡೆಸುತ್ತಿದ್ದ ಗುರುಸಿದ್ದ ಮತ್ತು ಗಾಡಿ ಮೇಲೆ ಕುಳಿತಿದ್ದ ಪಾರತವ್ವರಿಗೂ ಏನೇನೋ ಆಲೋಚನೆಗಳು. ಹೆಂಗೋ ಊರು ಮುಟ್ಟಿ ರಾಗಿ ಎಲ್ಲಾ ಮನೆ ಮುಟ್ಟಿಸಿದರೆ ಸಾಕಾಗಿತ್ತು. ಮುಂದೆ ನಡೆಯುತ್ತಿದ್ದ ರಂಗಜ್ಜ, ಪುರುದಣ್ಣ ಸರವೊಂದರ ಮುಂದೆ ನಿಂತು, ಗಾಡಿಯನ್ನು ಆಚೆ ದಡಕ್ಕೆ ಹೆಂಗೆ ಒಯ್ಯಬೇಕು ಎಂದು ಯೋಚಿಸುತ್ತಿದ್ದರು. ಗಾಡಿ ಅಲ್ಲಿಗೆ ಬಂದು ನಿಂತು ಕೊಂಡಿತು. ಎಲ್ಲಾದರೂ ಇಳುಕಲು ಐತೇನೋ ನೋಡಾನ ನಿಲ್ರಪ್ಪಾ ಅನ್ನುತ್ತಾ ಸರದ ಉದ್ದಕ್ಕೆ ಎಡಾ-ಬಲಕ್ಕೆ ನಡೆದರು. ಎಲ್ಲೋ ಒಂದು ಕಡೆ ತಿರಾ ಕಡಿದಾಗಿಲ್ಲದ ಜಾಗವನ್ನು ಹುಡುಕಿ ಅಲ್ಲಿಗೆ ಗಾಡಿಯನ್ನು ನಡೆಸಿಕೊಂಡು ಹೋಗಿ ಹುಷಾರಾಗಿ ಗಾಡಿ ನಡೆಸಿ ಸರದ ಕೊರಕಲನ್ನು ಹತ್ತಿಸಿದರು.ಮೂರ್ ಪಯಣ ಬಂದರಬೌದು, ಒಂದೀಟು ನಿಲ್ಲಿಸ್ರಪ್ಪಾ ಎತ್ತುಗಳು ಸುಧಾರಿಸಿಗ್ಯಮ್ಲಿ ಎಂದು ರಂಗಜ್ಜ ನೀಡಿದ ಸಲಹೆಗೆ ಎತ್ತುಗಳ ಕೊಳ್ಳು ಹರಿದು ಅವುಗಳ ಮುಂದೆ ಹುಲ್ಲು ಹಾಕಿ ಕೊಡದಲ್ಲಿ ತಂದಿದ್ದ ನೀರು ಕುಡಿದರು. ಎಲ್ಲರೂ ಅಡಿಕೆ ಚೂರುಗಳನ್ನು ಬಾಯೊಳಗೆ ಹಾಕಿಕೊಂಡು, ಎಲೆಗೆ ಸುಣ್ಣ ಹಚ್ಚುತ್ತಾ ಆಕಳಿಸಿದರು. ಈರಬಡಪ್ಪ ತಲೆ ಎತ್ತಿ ಆಕಾ ನೋಡಿ ಎಟೋತ್ತಾಗಿರಬೌದು? ಸರುವೋತ್ತಾಗಿರಬೌದೆ? ಎಂದು ಪ್ರಶ್ನೆ ಹಾಕಿದ. ಇದಕ್ಕೆ ಆಗಿರಬೌದು. ಏಟು ದೂರ ಬಂದಿರಬೌದು? ಒಂದ್ ಎಂಟೊಂಬತ್ತು ಮೈಲಿ ಬಂದರಬೌದೆ? ಪಾರತವ್ವ ಅಂದಳು.ಎಂಟೊಂಬತ್ತು ಮೈಲಿ ಬಂದಿದ್ರೆ ಅರ್ಧಾದಾರಿ ಮುಗದಂಗಾತು. ಇನ್ನಾ ಊರು ಅತ್ತು ಮೈಲಿ ಇರಬೇಕು ಅಲ್ವೇನಣ್ಣಾ ಅಂದಳು ಆಕೆ. ಅದೆಂಗವ್ವಾ? ಕಾಡು ಮೇಡು ಅಲೆದಾಡಿಕ್ಯಂಡ್ ಬಂದಿದೀವಿ. ಏಳೋ ಎಂಟೋ ಮೈಲಿ ಬಂದಿರಬೇಕು ಅಂದ ರಂಗಜ್ಜ, ಎಲ್ಲಾರಿಗೂ ಹಂಗೆ ನಿದ್ದೆ ಮಂಪರು ಕವಿದಂಗಾತು. ಎದ್ದೆಳ್ರೋ ಮಾಯದ ನಿದ್ದೆ ಅಡರಿಕೆಂಬತ್ತೆ. ಪಯಣ ಸಾಗಬೇಕು. ಒಂದೀಸು ನೀರು ಕೊಡವ್ವಾ ಮಕಕ್ಕೆ ನೀರು ಹಾಕೈಂಡು ಒಳ್ದ್ರ್‌ಪ್ಪಾ ಅಂದು ನೀರು ಇಸಕಂಡು ಮಕಕ್ಕೆ ನೀರಾಕ್ಯೆಂಡು ಎಲ್ಲರನ್ನು ಏಳಿಸಿದ.
ಎಲ್ಲರೂ ದಡಾಬಡಾ ಎದ್ದು ಗಾಡಿ ಕಟ್ಟಿ ಮುಂದೆ ಹೊರಟರು. ಮೊದಲ ಕೋಳಿ ಕೂಗೋ ಹೊತ್ತಿಗೆ ಇನ್ನೊಂದು ಸರ ಅಡ್ಡಬಂತು. ಗಾಡಿ ನಿಲ್ಲಿಸಿ ಎತ್ತುಗಳ ಅಗಡು ಬಿಚ್ಚಿ ಗಾಡಿ ಹತ್ರ ಪಾರತವ್ವ ಮತ್ತೆ ಗರುರುಸಿದ್ದರನ್ನು ಬಿಟ್ಟು ಸರದ ಉದ್ದಕ್ಕೂ ನಡೆದರು. ಎಲ್ಲಿಯೂ ಅದನ್ನು ದಾಟುವಂಥಾಜಾಗ ಕಂಡು ಬರಲಿಲ್ಲ. ಹಿಂತಿರುಗುವಾಗ ರಂಗಜ್ಜನಿಗೆ ಒಂದು ಉಪಾಯ ಹೊಳೆಯಿತು. ಗಾಡಿ ಬಳಿಗೆ ಬಂದು ಬರ್ರೊನಿಮ್ಮಾ ಅದಕ್ಯಾಕೆ ಹೆದರಬೇಕೂ? ಅನ್ನುತ್ತಾ ಹಿಂದಕ್ಕೆ ಬಂದವನು ಗಾಡಿ ಗುಜ್ಜು ಎಲ್ಲಾ ಬಿಚ್ಚೀರಿ. ರಾಗಿ ಚೀಲಾ ಎಲ್ಲಾ ಇಳಿಸನಾ. ಆಚೆಕಡಿಗೆ ರಾಗಿ ಚೀಲ ಎಲ್ಲಾ ಹೊತ್ತಾಕಿ ಗಾಡಿಗಳಿಪಿಳಿ ಮಾಡಿ ಚಕ್ರಮದ್ಲು ಬಿಚ್ಚಿ ಆಚೆಕಡಿಗೆ ಹೊತ್ತಾಕನ. ಆಮೇಲೆ ಗಾಡಿ ಮೂಕು-ಪಾರು ಹೊತ್ತಾಕಿ ಚಕ್ರ ಕೂಡಿಸಿ ರಾಗಿಚೀಳ ಗಾಡ್ಯಾಗಾಕ್ಕೆಂಡ್ ಹೊಡಕಂಡ್ ಹೋಗನಾ ಎಂದು ಸಲಹೆ ನೀಡಿದ. ಅದರಂತೆ ಗಾಡಿಯಲ್ಲಿದ್ದ ರಾಗಿ ಚೀಲಗಳನ್ನು ಕೆಲಗಿಳಿಸಿ ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರ ಮತ್ತೆ ಪಾರು ಮೂಕಿ ಇತ್ಯಾದಿಗಳನ್ನು ಆಚೆಕಡೆ ದಡಕ್ಕೆ ಸಾಗಿಸಿದರು. ರಾಗಿ ಚೀಲಗಳನ್ನು ಸರದಾಚೆಗೆ ಸಾಗಿಸುವುದು ಸುಲಭ ಸಾಧ್ಯವಾದ ಮಾತಾಗಿರಲಿಲ್ಲ. ಚೀಲದ ಮಧ್ಯೆ ಒಂದು ಬಂಡಿಗುಜ್ಜನ್ನು ಕೊಟ್ಟು ಆಚೆಕಡೆ ಒಬ್ಬರು ಈಚೆಕಡೆ ಒಬ್ಬರು ಹಿಡಿದುಕೊಂಡರೆ ಮತ್ತಿಬ್ಬರು ಚೀಲದ ಹಿಂದೆ ಮುಂದೆ ಹಿಡಿದುಕೊಂಡು ನಿಧಾನವಾಗಿ ಸರದೊಳಕ್ಕೆ ಇಳಿದು ಮತ್ತೆ ಆಚೆ ಕಡೆ ಗಡ್ಡೆ ಹತ್ತಿ ಅಂತೂ ಚೀಲಗಳನ್ನು ಸಾಗಿಸಿ ಗಾಡಿಯಲ್ಲಿ ಹೇರಿದರು.
ಗಾಡಿಹೂಡಿ ಸ್ವಲ್ಪ ದೂರ ಹೋಗಿಲ್ಲ. ಮತ್ತೊಂದು ಸಮಸ್ಯೆ ಎದುರಾಯಿತು. ಒಂದು ಎತ್ತು ಕುಂಟು ಬಿತ್ತು. ಅದು ಮುಂದೆ ನಡೆಯದಾಯಿತು. ಆಗ ಒಬ್ಬರಾಗುತ್ಲೂ ಒಬ್ಬರು ಪುರುದಣ್ಣ, ದ್ಯಾಮಣ್ಣ ಮತ್ತೆ ರಂಗಜ್ಜ ಎತ್ತಿನ ಜೊತೆ ನೊಗಕ್ಕೆ ಕೈ ಹಾಕಿ ಗಾಡಿಯನ್ನು ಸುಮಾರು ದೂರ ಎಳೆದರು. ಪಲ್ಪರಿಯಾ ಹೊತ್ತಿಗೆ ಪರಿಚಯದ ಕಾಡು ಮೇಡು ಕಾಣಿಸಿತು. ಸ್ವಲ್ಪ ಹೊತ್ತು ನಿಲ್ಲಿಸಿ ಸುಧಾರಿಸಿಕೊಂಡರು. ಎತ್ತುಗಳು ರಾಗಿಕಡ್ಡಿಯನ್ನು ತಿನ್ನಲು ನಿರಾಕರಿಸಿದವು. ಅವಕ್ಕೆ ಪೂರಾ ದಣಿವಾಗಿತ್ತು. ಗಾಡಿಯಲ್ಲಿದ್ದ ಎರಡು ತುಂಬಿದ ಕೊಡಗಳ ನೀರುಕುಡಿಸಿ ಮತ್ತೆ ಗಾಡಿ ಹೂಡಿದರು. ಎತ್ತುಗಳಿಗೂ ಕಾಡಿನ ಪರಿಚಯ ಇದ್ದಿರಬೇಕು. ಅವೂ ಸಲೀಸಾಗಿ ಗಾಡಿಯನ್ನು ಎಳೆಯುತ್ತಿದ್ದವು. ಪೂರಾ ಬೆಳ್ಳಂಬೆಳಕಾಯಿತು. ಪರಿಚಯದ ಕಾಡಿನಲ್ಲಿ ಊರ ಕಡೆಗೆ ಸಾಗುವ ದಾರಿಯಲ್ಲಿ ಸಾಗುತ್ತಿದ್ದರು.
ಅಷ್ಟರಲ್ಲಿ ದ್ಯಾಮಣ್ಣನಿಗೆ ಒಂದು ಅನುಮಾನ ಕಾಡಿತು. ಆಗ ಅವನು ಗಾಡಿ ನಿಲ್ಲಿಸ್ರಪ್ಪಾ. ಮುಂದೆ ಯಾರಾನಾ ಪೊಲೀಸರು ಗೀಲೀಸರು ದಾರಿ ಕಾಯ್ತಾ ಐದಾರೇನೋ ನೋಡಬೇಕು, ಎಂದು ಸಲಹೆ ನೀಡಿದ. ತರ್‍ಲೆ ಜನ ಹೇಳಾಕ್ ಬರಲ್ಲ. ಯಾರಾನಾ ಪೋಲೀಸ್ರಿಗೆ ಸುದ್ದಿ ಕೊಟ್ಟಿದ್ರೆ. ಸಿಗೆ ಆಕ್ಯಂಡ್ ಬಿಡ್ತೀವಿ. ಕಣಿಮೆ ಉದಿಗೆ ಹೋಗಿ ನೋಡಿಕ್ಯೆಂಡು ಬರಬೇಕಾಗುತ್ತೆ ಎಂದು ಸಲಹೆ ನೀಡಿದ. ಅದರಂತೆ ನಾಲ್ಕು ಜನ ಮತ್ತು ಪಾರವ್ವ ಅತ್ತ ಹೊರಟರು. ಎಲ್ಲರೂ ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಾ ನಡೆಯುತ್ತಿರುವಾಗ ಕಣಿಮೆ ಉದಿಹತ್ರ ಒಂದು ಮರದ ಪಕ್ಕ ಒಂದು ಸೈಕಲ್ ನಿಲ್ಲಿಸಿರುವುದ ಕಾಣಿಸಿತು. ತಕ್ಷಣ ಎಲ್ಲರೂ ಏನೇನೋ ಗುಟ್ಟಾಗಿ ಮಾತಾಡಿಕೊಂಡರು.
ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲಾ ಅಲ್ಲಿಂದ ಚದುರಿದರು. ಪಾರತವ್ವ ಸೀರೆ ಕಾಶಿಕಟ್ಟಿಕೊಂಡು ಹತ್ತಿರದಲ್ಲಿದ್ದ ಹಳ್ಳದ ಕಡೆಗೆ ಹೊರಟಳು. ಹೊತ್ತು ಮೂಡಿ ನಿಧಾನವಾಗಿ ಮೇಲಕ್ಕೆ ಬರುತ್ತಿದ್ದ. ಪೊಲೀಸ್ ಪೇದೆ ಮರ ಏರಿ ಕುಳಿತು ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಿದ್ದ. ಮರ ಹಿಡಿದಿದ್ದ ಕೈ ಜಾರುತ್ತಿದ್ದವು. ಕಾಲು ಬೆವರಿದ್ದವು. ಆದರೂ ಪಟ್ಟು ಬಿಡದೆ ತನ್ನ ಬೇಟೆಯ ನಿರೀಕ್ಷೆಯಲ್ಲಿದ್ದ. ಎತ್ತಲಿಂದಲೋ ಭರ್ರನೇ ಬೀಸಿ ಬಂದ ಕವಣೆಗಲ್ಲೊಂದು ಪೊಲೀಸಪ್ಪನ ಟೋಪಿಯನ್ನು ಕೆಳಗೆ ಬೀಳಿಸಿತು. ಅದನ್ನು ಹಿಡಿಯಲು ಮುಂದೆ ಬಾಗಿ ತಾನೂ ಜಾರಿ ಕೆಳಗೆ ಬಿದ್ದ. ಸೊಂಟ ನೋವಾಗಿ ಮೇಲೇಳಲು ಸಾಧ್ಯವಾಗದಾಯಿತು. ಕಾಲು ಕೂಡಾ ನೋಯುತ್ತಿದ್ದವು. ಈ ನೋವಿನಲ್ಲೇ ಯಾರೋ ಆಸಾಮಿಗಳು ಇರೋ ಹಂಗಿದೆ ಅನ್ನಿಸಿತು ಪೋಲೀಸಪ್ಪನಿಗೆ. ಯಾವನ್ರಲೋ ಕಲ್ಲು ಹೊಡೆದಿದ್ದೂ? ಎಂದು ಕೂಗು ಹಾಕಿದ. ಮೇಲೇಳಲು ಪ್ರಯತ್ನಿಸಿ ವಿಫಲನಾದ ಅವನಿಗೆ ಯಾರದೋ ಮಾತು ಕೇಳಿ ಮಂಗನಾದೆ ಅನ್ನಿಸಿತು.
ಕಂಟ್ರೋಲ್ ಕಾಲದಲ್ಲಿ ಇಂಥಾ ಕೇಸು ಹಿಡಿದು ಕೊಟ್ಟರೆ ಇನಾಮು ಸಿಗುತ್ತಿತ್ತು ಮತ್ತು ಬಡ್ತಿ ಸಿಗುತ್ತಿತ್ತು. ಪಕ್ಕದ ಊರಿನ ಕೆಲವು ಚಾಡಿಕೋರರ ಮಾತು ಕೇಳು ಈ ಸಾಹಸಕ್ಕೆ ಮುಂದಾಗಿದ್ದ ಅವನಿಗೆ ಎಂಥಾ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡೆನಲ್ಲಾ ಎಂದು ಪರಿತಪಿಸುವಂತಾಯಿತು. ತಾನು ಈ ಟೋಪಿಯನ್ನು ಹಾಕಿಕೊಂಡು ಬರಬಾರದಿತ್ತು. ಟೋಪಿ ಇರದಿದ್ದರೆ ಪೋಸನೆಂದು ಯಾರು ನಂಬುತ್ತಾರೆ? ಹೀಗೆಲ್ಲಾ ಯೋಚಿಸುತ್ತಾ ಬಲು ತ್ರಾಸುಪಟ್ಟುಕೊಂಡು ಸೈಕಲ್ ಇದ್ದ ಮರದ ಬಳಿಗೆ ತೆವಳಿಕೊಂಡು ಹೋದ. ಮೈಯೆಲ್ಲಾ ಬೆವರಿತ್ತು. ಒರೆಸಿಕೊಂಡು ಮತ್ತೆ ಮೇಲೇಳಲು ಪ್ರಯತ್ನಿಸಿ ಮರದ ಬೊಡ್ಡೆ ಹಿಡಿದು ನಿಧಾನವಾಗಿ ಮೇಲೆದ್ದ. ಸುತ್ತಲೂ ನೋಡಿದ. ಯಾವನು ಕಲ್ಲಿನಲ್ಲಿ ಹೊಡಿದಿರಬಹುದು ಅದು ತಲೆಗೆನಾದರೂ ಬಿದ್ದಿದ್ದರೆ ಪ್ರಾಣಾಪಾಯವಾಗುತ್ತಿತ್ತಲ್ಲಾ ದೇವರೇ ಎಂದು ಕೂಡಾ ಆತಂಕಪಟ್ಟುಕೊಂಡ. ಸಿಗಲಿ ಮಾಡ್ತೀನಿ. ಹುಟ್ಟಿದ್ದಿನ ತೋರಿಸ್ತೀನಿ ಅಂದುಕೊಂಡು ಹಲ್ಲು ಕಡಿದ. ಹೊತ್ತು ಮೇಲೇರುತ್ತಿತ್ತು.
ಇತ್ತ ದ್ಯಾಮಣ್ಣ, ರಂಗಜ್ಜ ಮತ್ತೆ ಪುರದಣ್ಣರು ಕೂಡಿಕೊಂಡು ಗಾಡಿಯಲ್ಲಿದ್ದ ರಾಗಿಚೀಲಗಳನ್ನು ಇಳಿಸಿ ಪೊದೆಯಲ್ಲಿ ಬಚ್ಚಿಟ್ಟರು. ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರಮತ್ತೆ ಪಾರು, ಮೂಕಿಯನ್ನು ಇನ್ನೊಂದು ಪೊದೆಯಲ್ಲಿ ಬಚ್ಚಿಟ್ಟರು. ಇವುಗಳನ್ನು ಕಾಯಲು ಈರಬಡಪ್ಪನನ್ನು ಅಲ್ಲಿ ಬಿಟ್ಟು ಎತ್ತುಗಳಿಗೆ ನೀರು ಕುಡಿಸಲು ಹಳ್ಳದ ದಂಡೆಗುಂಟಾ ಹೊರಟರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಳ್ಳದ ಒಂದು ಗುಂಡಿಯಲ್ಲಿ ನೀರು ಇರುವುದು ಕಾಣಿಸಿತು. ಎತ್ತುಗಳಿಗೆ ನೀರು ಕುಡಿಸಿ, ತಮ್ಮ ಹೊಟ್ಟೆಗೆ ಒಂದೆರಡು ಈಚಲ ಗಿಡಗಳನ್ನು ಕೊಚ್ಚಿ ಕಡಿದು ಅವುಗಳ ಗೆಡ್ಡೆಗಳನ್ನು ತಿಂದು, ಗುರುಸಿದ್ದ-ಪಾರತವ್ವರಿಗೆ ಒಂದಿಷ್ಟು ಕಟ್ಟಿಕೊಂಡು ಹೊರಟು ಬಂದರು. ಎತ್ತುಗಳು ಅಲ್ಲಿ ಬೆಳೆದಿದ್ದ ಕಳ್ಡವನ್ನು ಮೇಯುತ್ತಿದ್ದವು. ಅತ್ತ ಕಡೇಲಿಂದ ಪಾರತವ್ವ ಬಂದು ಪೋಲೀಸಪ್ಪನಿಗೆ ಆಗಿರುವ ಪರಿಸ್ಥಿತಿಯನ್ನು ಬಣ್ಣನೆ ಮಾಡಿ ಹೇಳಿದಳು. ಸ್ವಲ್ಪ ಹೊತ್ತು ಎಲ್ಲರೂ ನಗಾಡಿದರು. ಕೂಡಲೇ ಪರಿಸ್ಥಿತಿಯ ಅರಿವಾಗಿ ತುಂಬಾ ಹೊತ್ತು ಚರ್ಚೆ ಮಾಡಿ ಪಾರತವ್ವ ಗುರುಸಿದ್ದರಿಗೆ ಒಂದು ಪಿಳಾನು ಹೇಳಿಕೊಟ್ಟರು.
ಅವರು ಇನ್ನೊಂದು ಕಡೇಲಿಂದ ಗೌರೀ ಗೌರೀ ಎಂದು ಕೂಗು ಹಾಕುತ್ತಾ ಪೋಲೀಸಪ್ಪನಿದ್ದ ಮರದ ಬಳಿಗೆ ತೆರಳಿದರು. ಅಲ್ಲಿದ್ದ ಪೋಲೀಸಪ್ಪನನ್ನ ಕಂಡು ಯಾಕಣ್ಣಾ ಪೊಲೀಸಣ್ಣಾ ಸೈಕಲ್ ಇಡಕಂಡ್ ನಿಂತಿದ್ದೀಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕೇಳಿದರು. ಪೋಲೀಸ್ ಪೇದೆ ಹೇಯ್ ಬಾರೋ ಇಲ್ಲಿ, ಯಾರೋ ನಿಮ್ಮನ್ನ ಕಳಿಸಿದ್ದು ಎಂದು ಗುರುಸಿದ್ದನನ್ನು ಕೇಳಿದ. ಯಾಕಣ್ಣಾ ಇಂಗೆ ಗದರಿಸಿ ಕೇಳ್ತೀಯಾ? ಅನ್ನುತ್ತಾ ಪಾರತವ್ವ ಅವನ ಬಳಿಗೆ ತೆರಳಿದಳು. ಆಕೆ ವ್ಯಸನ ತೋರಿಸುತ್ತಾ ನಮುದೊಂದು ಗಬ್ಬದಾಕಳಾ ರಾತ್ರಿ ತಪ್ಪಿಸ್ಗಂಡೈತೆ ಕಣಣ್ಣಾ. ರಾತ್ರಿ ಎಲ್ಲಾ ಉಡುಕಿದಿವಿ ಸಿಕಿಲ್ಲ ಕಣಣ್ಣಾ. ಅದನ್ನು ಹುಡಿಕ್ಕೆಂಡ್ ಬಂದ್ವಿ ಕಣಣ್ಣಾ ಅಂದಳು ಅಷ್ಟೇ ರಾಗವಾಗಿ.
ಯಾಕಣ್ಣಾ ನಿಂತ್ಗಂಡೇ ಇದ್ದೀಯಾ ಅಂದ ಗುರುಸಿದ್ದ. ಬಿದ್ದು ಸೊಂಟ ನೋವು ಮಾಡಿಕೆಂಡಿದೀನೀ ಕಣಯ್ಯಾ. ಈಗ ನಾನು ಸೈಕಲ್ ಮೇಲೆ ಕುತ್ಗಮ್ತೀನಿ, ನೀನು ಸೈಕಲ್ ತಳ್ಳಿಕೊಂಡು ಒಂದೀಟು ರಸ್ತೆಗೆ ಬಿಟ್ ಬಿಡಯ್ಯಾ. ಅಲ್ಲಿಂದ ಯಾವುದಾದ್ರೂ ಬಸ್ಸಿಗೆ ಹಿರಿವೂರಿಗೆ ಹೋಗ್ತಿನಿ. ಪುಣ್ಯ ಬರುತ್ತೆ, ಎಳ್ಡ್ ರೂಪಾಯ್ ಕೊಡ್ತೀನಿ ಎಂದು ಪುಸಲಾಯಿಸಿದ. ಅಕ್ಕಾ ಗೌರಿ ಹುಡಕೋಡು ಹೆಂಗೆ ಮತ್ತೆ? ಎಂದು ಪಾರತವ್ವಳ ಕಡೆಗೆ ನೋಡಿದ ಗುರುಸಿದ್ದ. ಇದೊಳ್ಳೆ ಫಜೀತಿ ಗಿಕ್ಯಂಡ್ ಬಿಡ್ತಲ್ಲೊ. ಈಟೊತ್ತಿಗೇಲೆ ಈಯಪ್ಪಾ ಯಾಕೆ ಬೀಳಬೇಕಾಗಿತ್ತೂ. ಕಷ್ಟದಾಗಿರೋರಿಗೆ ಸಹಾಯ ಮಾಡಬೇಕು. ಕರಕಂಡ್ ಹೋಗಿ ರಸ್ತೆ ಮುಟ್ಟಿಸಿಬಾರಪ್ಪಾ. ಎಳ್ಡ್ ರೂಪಾಯೀನೂ ಬ್ಯಾಡ ಯಾತ್ತೂ ಬ್ಯಾಡಾ ಅಂದಳು ಆಕೆ.
ಸ್ವಲ್ಪ ದೂರ ಮೂವರು ನಡೆದು ಊರ ಕಡೆಗೆ ತಿರುಗುವಲ್ಲಿ ಪಾರತವ್ವ ನಿಂತುಕೊಂಡಳು. ಇವರು ಮುಂದೆ ನಡೆದರು. ಪೋಲೀಸಪ್ಪ ಏನು ಕೇಳುತ್ತಾನೆ. ಅದಕ್ಕೆ ಏನು ಉತ್ತರ ಹೇಳಬೇಕು ಎಂಬುದನ್ನು ಗುರುಸಿದ್ದನಿಗೆ ಪಾರತವ್ವ ತಿಳಿಸಿದ್ದಳು. ಇದನ್ನೆಲ್ಲಾ ದ್ಯಾಮಣ್ಣಾ, ರಂಗಜ್ಜರು ನೋಡಿದ್ದರು. ಗುರುಸಿದ್ದ-ಪೋಲೀಸಪ್ಪರು ಮರೆಯಾಗುತ್ತಲೇ ಸರಬರಾ ನಡೆದು, ಪಾರತವ್ವ ತನ್ನವರನ್ನು ಕೂಡಿಕೊಂಡಿದ್ದಳು. ಅಷ್ಟೊತ್ತಿಗೆ ಮುಂದೆ ಹೋಗಿದ್ದವರು ಗಾಡಿಯನ್ನು ಸಿದ್ದಪಡಿಸಿದ್ದರು. ರಾಗಿಚೀಲಗಳನ್ನು ಹೇರಿಕೊಂಡು ಸದ್ದುಮಾಡದೇ ಇನ್ನೊಂದು ದಾರಿಯಿಲ್ಲದ ದಾರಿಯಲ್ಲಿ ಹೊರಟು ಊರಬಳಿಯ ತಮ್ಮ ಹೊಲವನ್ನು ತಲುಪಿ, ಅಲ್ಲಿ ರಾಗಿ ಚೀಲಗಳನ್ನು ತಾಬಂದು ಮಾಡಿದರು. ಮತ್ತೆ ಗಾಡಿಯನ್ನು ಗಳಿಪಿಳಿ ಮಾಡಿ ಬಣವೆಯಲ್ಲಿ ಬಚ್ಚಿಟ್ಟು ಒಬ್ಬೊಬ್ಬರೇ ಒಂದೊಂದು ದಾರಿಯಲ್ಲಿ ಊರು ಸೆರಿಕೊಂಡರು.
ಪಾರತವ್ವ ದೂರವಾಗುತ್ತಲೇ ಗುರುಸಿದ್ದನಿಗೆ ಕೇಳಬಾರದ್ದೆಲ್ಲಾ ಕೇಳಿದ್ದ ಪೋಲೀಸಪ್ಪ. ಅವನು ಬೇಜಾರಾಗಿ ತಾನು ಮುಂದೆ ಬರುವುದಿಲ್ಲವೆಂದು ಎರಡು ಬಾರಿಧಮಕಿಕೊಟ್ಟ ಮೇಲೆ ಸುಮ್ಮನಾಗಿದ್ದ. 'ಲೇ ಹುಡುಗ ನೀನು ಈಗ ಏನೂ ಹೇಳೋಲ್ಲ ಕಣೋ, ನನಿಗೆ ಗೊತ್ತೈತೆ, ನಿಮ್ಮನ್ನ ಹೆಂಗೆ ಬಾಯಿಬಿಡಿಸಬೇಕು ಅಂಬಾದು, ನಡೀ ಈವಾಗ, ಆಮೇಲೆ ನೊಡಿಕೆಮ್ತೀನಿ' ಎಂದು ಕೊಂಡಿದ್ದ ಪೋಲೀಸಪ್ಪ ಮನಸ್ಸಿನಲ್ಲೇ.
ಮುಂದುಗಡೆ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು ಇವರಿಗೆ. ಅಮಲ್ಲಾರ್ರು ಊರಿಗೆ ಬರ್‍ತಾರಂತೆ ಜಮಾಬಂದಿಗೆ, ನಾನು ಹಿರಿಯೂರಿಗೆ ಹೋಗಿ ಬರ್‍ತೀನಿ, ಎಂದು ಮನೆಯಲ್ಲಿ ತಿಳಿಸಿ ಸಿದ್ದಪ್ಪ ಗೌಡರು ಬೆಳಿಗ್ಗೇನೆ ಹೊರಟಿದ್ದರು. ಕಮರದ ದಾರಿ ಕೂಡಿಕೊಳ್ಳೋದಾರಿ ದಾಟಿ ಮುಂದಕ್ಕೆ ನಡೆದರೆ ಹಿಂದುಗಡೆ ಯಾರೋ ಸೈಕಲ್ ಮೇಲೆ ಕುಳಿತುಕೊಂಡು ಸೈಕಲನ್ನು ತಳ್ಳಿಸಿಕೊಂಡು ಬರುತ್ತಿರುವುದು ಕಾಣಿಸಿತು. ತಮ್ಮ ನಡಿಗೆಯನ್ನು ಸ್ವಲ್ಪ ನಿಧಾನ ಮಾಡಿದರು ಗೌಡರು. ಇವರು ಹತ್ತಿರ ಬರುತ್ತಲೇ ನೋಡಿದರೆ ಪೋಲೀಸ್ ನೋನು ಮತ್ತೆ ಗುರುಸಿದ್ದ. ಯಾಕಪ್ಪಾ ಏನಾತು ಎಂದು ಗೌಡರು ಕೇಳಿದರೆ ಪೋಲೀಸ್ ಪೇದೆ ಸೈಕಲ್ ಮೇಲಿಂದ ಬಿದ್ದು ಬಿಟ್ಟೆ ಗೌಡ್ರೇ. ಸೊಂಟ ಬಾಳ ನೋವಾಗೈತೆ. ಇವನು ದಾರ್‍ಯಾಗ್ ಸಿಕ್ಕ. ರಸ್ತೇಗೆ ಬಿಟ್ ಬಿಡಪ್ಪಾ ಅಂತ ಕರಕಂಡ್ ಬಂದೆ ಅಂದ. ಗುರುಸಿದ್ದನ ವಿಚಾರ ಗೌಡರಿಗೆ ಗೊತ್ತಿತ್ತು ಆದ್ದರಿಂದ ಅದನ್ನು ವಿಚಾರಿಸಿದೆ, ನಾನು ಹಿರಿಯೂರಿಗೆ ಹೊಲ್ಟಿದೀನಿ. ನೀನು ಹಿಂದಗಡೆ ಕುತ್ಗ. ನಾನು ಸೈಕಲ್ ತುಳಕಂಡು ಹಿರಿಯೂರಿಗೆ ಸೇರಿಸ್ತೀನಿ ಅನ್ನುತ್ತಾ ಗೌಡರು ಸೈಕಲ್ ಹತ್ತಿದರು. ಗುರುಸಿದ್ದನಿಗೂ ಇದೇ ಬೇಕಾಗಿತ್ತು.

(ಕೃಪೆ: ಕೆಂಡಸಂಪಿಗೆ)

ಗೌನಹಳ್ಳಿಯ ವೃತ್ತಾಂತಗಳು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಯುವ್ಯ ದಿಕ್ಕಿನ ಗಡಿ ಗ್ರಾಮ ಗೌನಹಳ್ಳಿ. ವಾಯುವ್ಯ ದಿಕ್ಕಿನಿಂದ ಹರಿದು ಬರುವ ಬಸವನಹೊಳೆ ಹಳ್ಳ ಮೂಡಲಕ್ಕೆ ಹರಿದು ಅನಂತರ ತೆಂಕಲಿಗೆ ತಿರುಗಿ ಊರ ಮುಂದೆ ಅಂದರೆ ಕೇವಲ ಫರ್ಲಾಂಗು ದೂರದಲ್ಲಿ ತೆಂಕಲು ದಿಕ್ಕಿಗೆ ಹರಿಯುತ್ತದೆ. ಊರಿನ ಮೂಡಲ ದಿಕ್ಕು ಮತ್ತು ಪಡುವಲ ದಿಕ್ಕಿಗೆ ಎರಡು ಗುಡ್ಡದ ಸಾಲು ಹಬ್ಬಿದೆ. ಗುಡ್ಡಗಳ ಅಂತರ ಕೇವಲ ಎರಡೇ ಮೈಲಿ. ಮಧ್ಯದ ಪ್ರದೇಶ, ಜಿಲ್ಲೆಯಲ್ಲೇ ಅತ್ಯಂತ ಫಲವತ್ತಾದ ಗೂಡು ಮಿಶ್ರಿತ ಕೆಂಪು ಮಣ್ಣಿನ ಭೂಮಿ.
ಪಡವಲ ಗುಡ್ಡದಾಚೆಗೆ ಸಹಸ್ರಾರು ಏಕರೆ ಕಾಯ್ದಿಟ್ಟ ಅರಣ್ಯವಿದೆ. ಹೀಗಾಗಿ 40-50 ವರ್ಷಗಳ ಹಿಂದೆ ಕಾಡಿನಲ್ಲಿ ವಾಸಿಸುತ್ತಿದ್ದ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳವಿತ್ತು. ಆಗಾಗ್ಗ ಗೌನಹಳ್ಳಿಯ ರೈತರ ಒಂದಿಲ್ಲೊಂದು ಆಕಳವೂ, ಎತ್ತೋ, ಎಮ್ಮೆಯೋ ಇವುಗಳಿಗೆ ಆಹುತಿಯಾಗುತ್ತಿದ್ದವು.
ಈ ನಿಸರ್ಗ ಸುಂದರ ಪ್ರದೇಶದಲ್ಲಿ ಭೂಮಾಪನ ಕಾಲಕ್ಕೆ ಮೊದಲು ಮುಂಗರಾಯ ಪಟ್ಟಣ, ನಡವಲಹಳ್ಳಿ, ಶಂಕರನಹಳ್ಳಿ ಎಂಬುವು ಇದ್ದವೆಂಬುದಕ್ಕೆ ಕುರುಹುಗಳಿವೆ. ಮಂಗರಾಯ ಕಟ್ಟಿಸಿರಬಹುದಾದ ಎತ್ತರದ ಕೆರೆಯ ಏರಿ ಈಗಲೂ ಸಾಕ್ಷಿಯಾಗಿದೆ. ಇವು ಹೇಗೆ ನಾಶವಾದವೋ ಗೊತ್ತಿಲ್ಲ. ಈ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಹಿರಿಯರಾರೂ ಈಗ ಬದುಕಿಲ್ಲ.
ಇತ್ತೀಚೆಗೆ ಅಂದರೆ 50 ವರ್ಷಗಳ ಹಿಂದೆ ಇದ್ದ ಕೆನ್ನಳ್ಳಿ (ಕೆಂದಗಾನಹಳ್ಳಿ) ಹಾಳಾಯಿತು. ಈ ಊರು ಎರಡು ಮೂರು ಕಡೆಗಳಲ್ಲಿ ಕಟ್ಟಿದರೂ ಉಳಿಯಲಿಲ್ಲ. ಆ ಹಳ್ಳಿಗರು ದರೋಡೆ, ಲೂಟಿ ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದದ್ದನ್ನು ಗೌನಹಳ್ಳಿಯ ಜನ ಇನ್ನೂ ಮರೆತಿಲ್ಲ.
ಗೌನಹಳ್ಳಿಗೆ ರಸ್ತೆ ಎಂಬ ಸೌಕರ್ಯ ಮತ್ತು ಪ್ರಾಥಮಿಕ ಶಾಲೆಯ ಅನುಕೂಲ ದೊರಕಿದ್ದೇ ದೇಶ ಸ್ವಾತಂತ್ರ್ಯ ಪಡೆದುಕೊಂಡ ವರ್ಷ. ಅಲ್ಲಿಯ ತನಕ ಊರ ನಿವಾಸಿಗಳು ಬಂಡಿ ಜಾಡಿನಲ್ಲಿ ಊರಿನ ಆಗ್ನೇಯ ದಿಕ್ಕಿಗಿರುವ ಕಳ್ಗಣಿವೆ ಮಾರ್ಗವಾಗಿ ಸಂಚರಿಸುತ್ತಿದ್ದರು.
ಗೌನಹಳ್ಳಿಯ ತೆಂಕಲಿಗೆ ಎರಡು ಮೈಲು ದೂರದಲ್ಲಿ ಗುಡಿಹಳ್ಳಿ ಎಂಬ ಗ್ರಾಮ ಬೇಚರಾಕ್ ಆಗಿದ್ದು ಈಗೀಗ ಈ ಭಾಗದಲ್ಲಿ ಜಮೀನು ಹೊಂದಿರುವವರು ವಾಸದ ಮನೆ ನಿರ್ಮಿಸುತ್ತಿದ್ದಾರೆ. ಇಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನವಿದೆ.
ಕಡಿದಾಳ್ ಮಂಜಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೌನಹಳ್ಳಿಗೊಂದು ಹೊಸಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಒಂದು ದಶಕ ಕಾಲ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. 1956-57 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಮರು ಅಂದಾಜು ಇತ್ಯಾದಿಗಳಿಂದ ವಿಳಂಬವಾಗಿ ಕೊನೆಗೆ 1963-64ರ ಹೊತ್ತಿಗೆ ಮುಕ್ತಾಯಗೊಂಡಿತು. ಆರ್. ಸಣ್ಣರಂಗಯ್ಯ ಎಂಬ ದಕ್ಷ ಇಂಜಿನೀಯರ್ ಕೆರೆ ನಿರ್ಮಾಣಕ್ಕೆ ಶ್ರಮಿಸಿದರು.
ಆ ಕಾಲದಲ್ಲಿ ಬಿಳಿಜೋಡಿನಿಂದ ಕೆರೆ ನಿರ್ಮಾಣಕ್ಕೆ ಬಂದಿದ್ದ ಮಣ್ಣು ಒಡ್ಡರು `ಸಂಗ್ಯಾ-ಬಾಳ್ಯಾ` ನಾಟಕವನ್ನು ಅಭಿನಯಿಸಿ, ಗೌನಹಳ್ಳಿಯ ಹಲವಾರು ಕಲಾವಿದರು ಅರಳುವಂತೆ ಮಾಡಿದ್ದರು. ಕೆರೆ ನಿರ್ಮಾಣ ಆರಂಭವಾಗಿ ಮುಕ್ತಾಯವಾಗುವಷ್ಟರಲ್ಲಿ ಮುಗ್ದೆಯಂತಿದ್ದ ಗೌನಹಳ್ಳಿಯ ನಿರುಮ್ಮಳ ಬದುಕು ಹಲವಾರು ಆಕರ್ಷಣೆಗಳಿಗೆ ಪಕ್ಕಾಯಿತು. ಯಾವ್ಯಾವ ಊರುಗಳಿಂದಲೋ ಜನ ವಲಸೆ ಬಂದರು. ಗೌನಹಳ್ಳಿಯ ಸುಮಾರು 25-30 ಹೆಣ್ಣು ಮಕ್ಕಳು ಪರ ಊರಿನ ಗಂಡುಗಳನ್ನು ಲಗ್ನವಾದರು. ಗಂಡಂದಿರ ಸಮೇತ ತೌರೂರಿಗೆ ಹಿಂತಿರುಗಿ ಸರ್ಕಾರಿ ಭೂಮಿಯನ್ನು ( ಆಹಾರ ಕಂಡ ಬಂಜರು) ಬಗರ್ ಹುಕುಂ ಸಾಗುವಳಿ ಮಾಡಿ, ಆನಂತರ ಭೂಮಿಯ ಒಡೆತನ ಪಡೆದುಕೊಂಡರು. ಗ್ರಾಂಟಿನ ಮನೆಗಳನ್ನು ಕಟ್ಟಿಸಿಕೊಂಡು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ವಲಸೆ ಬಂದವರೇ ಪ್ರತ್ಯೇಕವಾಗಿ ಕಟ್ಟಿಕೊಂಡಿರುವ ಕರ್ಲಹಟ್ಟಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿವೆ. ಪರಿಶಿಷ್ಠ ಪಂಗಡದವರೇ ಹೆಚ್ಚಾಗಿರುವ ಗೌನಹಳ್ಳಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮೇಕೆ ಸಾಕಿಕೊಂಡಿದ್ದಾರೆ.
ಹಳೇ ತಲೆಮಾರಿನ ವಾಸಿಗಳಿಗೆ ಮೂಡಲಗುಡ್ಡದ ಕಳ್ಗಣಿವೆ, ಹುಣಸೆಕಣಿವೆ, ಪಟ್ಣಮರಡಿ (ಮಂಗರಾಯನ ಪಟ್ಣ ಇದ್ದ ಸ್ಥಳ) ಸಂತೇಕಣಿವೆ, ಮೂಡಲಗುಡ್ಡ, ನೆಲ್ಲಿಮಲೆಕಲ್ಲು, ಸಿಡಿಲುಬಡಿದ ಕಲ್ಲು, ಗೋಡೆಕಲ್ಲು ಇತ್ಯಾದಿ ಸಾಂಸ್ಕೃತಿಕ ಸಂಬಂಧ ಪಡೆದುಕೊಂಡಿರುವಂತೆ ಪಡುವಲ ಗುಡ್ಡದ ಸಾಲಿನ, ಬಡೆತ್ತಿನ ಕಣಿವೆ, ಹಾಲಗುಡ್ಡ, ರಾಮದಾಸನ ಮರಡಿ, ಗಾಳಿಕೊಲ್ರ, ಎಮ್ಮೆ ತಿರುಗಿದ ನೆತ್ತಿ, ಭೂತನ ಕಣಿವೆ, ಎಮ್ಮೆ ಕಣಿವೆ, ಗೊಲ್ರ ಗುಡ್ಡ, ಜಾಮೇನಪ್ಪನ ಏಣು, ಕಣಿಮೆ ಉದಿ, ಕೋಣನ ಗುಂಡಿ ಮತ್ತು ನೀರಗುಡ್ಡ ಕೂಡಾ ಸಾಂಸ್ಕೃತಿಕ ಸಂಬಂಧ ಉಳಿಸಿಕೊಂಡಿವೆ.
ಮುಂಗಾರಿನಲ್ಲಿ ಬೀಜ ಬಿತ್ತಿದ ಮೇಲೆ ಮತ್ತು ಕೊಯ್ಲು ಮುಗಿದು, ಸುಗ್ಗಿಕಾಲ ಬಂತೆಂದರೆ ಗೌನಹಳ್ಳಿಯ ನೂರಾರು ದನಕರುಗಳು ಎಮ್ಮೆ ಕಣಿವೆ ಮೂಲಕ ಹಾಯ್ದು ಪಡುವಲ ಗುಡ್ಡವನ್ನು ಇಳಿದು ಕಮರದಲ್ಲಿ (ಕಾಯ್ದಿಟ್ಟ ಅರಣ್ಯ), ಬೆಳೆದಿರುವ ಹುಲ್ಲು ಮೇಯಲು ಹೋಗುತ್ತವೆ. ಈ ದಿನಗಳಲ್ಲಿ ದನ-ಕುರಿಗಾಹಿಗಳ ಪಿಳ್ಳಂಗೋವಿಯ ಸದ್ದು, ಕೇಕೆ ಮುಂತಾದವುಗಳಿಂದ ಅರಣ್ಯದಲ್ಲಿನ ಗಿಡಮರಗಳೇ ಲವಲವಿಕೆಯಿಂದ ಇರುವಂತೆ ಭಾಸವಾಗುತ್ತದೆ. ಈ ಮಧ್ಯೆ ಮರ ಕಡಿಯುವ ದುಷ್ಕರ್ಮಿ ನಿಕ್ಕರ್ಮಿಗಳು ಗೋಚರಿಸುತ್ತಾರೆ.
ಅರಣ್ಯ ಇಲಾಖೆಯ, ಗಾರ್ಡ್ ಕರ್ತವ್ಯ ನಿರ್ವಹಿಸುತ್ತಿದ್ದ ಹೀರಾ ಸಿಂಗ್‌ನನ್ನು ಹಳ್ಳಿಗರು ಮರೆತಿಲ್ಲ. ಸೋಮವಾರಗಳಂದು ಮೀಸಲು ಅರಣ್ಯದ ಬದಿಗೆ ಬೆಳೆದಿದ್ದ ಗಿಡಗಳನ್ನು ಸವರಲು ಮತ್ತು ಗುಡ್ಡದ ಬಾದೆ ಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಅದನ್ನು ನಂದಿಸಲು ಊರ ಯುವಕರನ್ನು ಈತ ಕರೆದೊಯ್ಯುತ್ತಿದ್ದ.
ಗೌನಹಳ್ಳಿಗೆ ವಾಸಕ್ಕೆ ಬಂದ ಹಿರಿಯೂರು ಶಾಸಕರಾಗಿದ್ದ ದಿವಂಗತ ಎ. ಮಸಿಯಪ್ಪನವರ ಪ್ರಯತ್ನದಿಂದ ಗಡಿಗ್ರಾಮವಾದ ಗೌನಹಳ್ಳಿಗೆ ೧೯೬೨ರಲ್ಲಿ ವಿದ್ಯುತ್ ಬಂತು. ಇದೇ ಮಹರಾಯರ ಶ್ರೀ ರಂಗನಾಥ ಬಸ್ ಗೌನಹಳ್ಳಿ ಮಾರ್ಗವಾಗಿ ಹಿರಿಯೂರು- ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಮೊದಲು ಗೌನಹಳ್ಳಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಚಿತ್ರದುರ್ಗದ ಮಾರುಕಟ್ಟೆಗೆ ಗಾಡಿಗಳ ಮೂಲಕ (೨೫ ಮೈಲಿ ದೂರ) ರಾತ್ರಿಯೆಲ್ಲಾ ಪ್ರಯಾಸದಿಂದ ಸಾಗಿಸುತ್ತಿದ್ದರು.
ರಾಜಕೀಯ ಸ್ಥಿತ್ಯಂತರಗಳಿಂದ ಹಾಗೂ ಹೊರಗಿನ ಪ್ರಚೋದನೆಗಳಿಂದ ಊರಿನಲ್ಲಿ ತಳ ಊರಿರುವ ಕೆಲವರ ಉಪಟಳದಿಂದ ಊರಿಗೆ ಹುಗ್ಗಿ ಹೊಯ್ದು ಊರು ಕಟ್ಟಿದ ಕುಂಚಿಟಿಗ ಲಿಂಗಾಯ್ತರು ಬಳಲಿದ್ದಾರೆ. ಇವರ ಪರಿಶ್ರಮದಿಂದ ಇತ್ತೀಚೆಗೆ ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆ ಬೆಳೆದು ಕೊಂಚ ನೆಮ್ಮದಿಯತ್ತ ಸಾಗಿರುವ ಹಳ್ಳಿಗರ ಬದುಕಿನಲ್ಲಿ ಗುಡಿಹಳ್ಳಿಯ ಏಳುಕೋಟಿ ಮೈಲಾರಲಿಂಗೇಶ್ವರ, ಗೌನಹಳ್ಳಿಯ ಆಂಜುನೇಯ, ಮಾರಿ ದೈವಗಳ ಪ್ರಭಾವವೇ ಹೆಚ್ಚು. ಮೈಲಾರಲಿಂಗೇಶ್ವರ ಜಾತ್ರೆ ಮಾಡುವವರೇ ಈ ಹಳ್ಳಿಯ ನಿವಾಸಿಗಳು. ಉಗಾದಿಯಿಂದ ಬರುವ ಹುಣ್ಣಿಮೆಗೆ(ಹಟ್ಟಿ ಹುಣ್ಣಿಮೆ ಎಂದು ಖ್ಯಾತಿ) ಜಾತ್ರೆ ಆರಂಭವಾಗಿ ಐದು ದಿನ ನಡೆಯುತ್ತದೆ. ಈ ಸಂದರ್ಭದಲ್ಲಿ ರೈತರು ನೇಗಿಲು ಹೂಡುವುದಿಲ್ಲ.
ಗುಡಿಗೌಡ ಮತ್ತಿತರ ಮುಖಂಡರ ತೀರ್ಮಾನದಂತೆ ‘ದೋಸೆ ಮಾರಿ' ಮತ್ತು ಹಿಟ್ಟಿನ ಮಾರಿ' ಜಾತ್ರೆಗಳು ಗೌನಹಳ್ಳಿಯಲ್ಲಿ ಜರುಗುತ್ತವೆ. ಹಿಟ್ಟಿನ ಮಾರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ದೋಸೆ ಮಾರಿ ಜಾತ್ರೆಯಲ್ಲಿ ಅದು ನಿಷಿದ್ಧ. ಊರ ಗೌಡರ ಪೂಜೆಯೇ ಮುಖ್ಯವಾಗಿರುವ ಎರಡೂ ಜಾತ್ರೆಗಳಲ್ಲಿ ಲಿಂಗಾಯ್ತರಿಂದ ಖರ್ಚು ವಸೂಲಾತಿ ಕಡ್ಡಾಯವಾಗಿದೆ.

(ಕೃಪೆ: ಕೆಂಡಸಂಪಿಗೆ)

ಉಜ್ಜನಪ್ಪ ಬರೆದ ಕೊಳಹಾಳದ ಕಥೆ

ಹಿರಿಯ, ಉತ್ಸಾಹಿ ಪತ್ರಕರ್ತ ಜಿ.ಎಸ್.ಉಜ್ಜನಪ್ಪ. ಕಥೆ, ಜಾನಪದ ಸಾಹಿತ್ಯದ ಬಗ್ಗೆ ಅಪಾರ ಒಲವಿಟ್ಟುಕೊಂಡಿರುವ ವ್ಯಕ್ತಿ. ಜಿಲ್ಲೆಯ ಮಣ್ಣಿನ ಗಂಧ, ಘಮಲು, ಅದರೊಳಗಿರುವ ಹತ್ತಾರು ಕಥೆಗಳನ್ನು ಬಲ್ಲ ವ್ಯಕ್ತಿ. ಅವರ ಲೇಖನಿಯಿಂದ ಅರಲಿದ ಲೇಖನ ಇಲ್ಲಿವೆ..


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೂಡಲ ದಿಕ್ಕಿನಲ್ಲಿರುವ ಗಡಿಗ್ರಾಮ ಕೊಳಹಾಳ. ಈ ಊರಿನಿಂದ ಪಕ್ಷಿ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರ್ ದೂರವಿರುವ ತಾಲೂಕು ಕೇಂದ್ರಕ್ಕೆ ನೇರ ಸಂಪರ್ಕವಿಲ್ಲ. ಕೊಳಹಾಳಿನಿಂದ ೧೨ ಕಿಲೋಮೀಟರ್ ಪಡುವಲ ದಿಕ್ಕಿಗೆ ಪ್ರಯಾಣಿಸಿದರೆ ಸಿಗುವ ಹೊರಕೇರಿ ದೇವರಪುರ (ಎಚ್ ಡಿ ಪುರ) ದಿಂದ ೧೦ ಕಿಲೋಮೀಟರ್ ಬಡಗಲು ದಿಕ್ಕಿಗೆ ಹೋಗಿ ಅಲ್ಲಿನ ಚಿತ್ರಹಳ್ಳಿ ಕ್ರಾಸ್ ನಿಂದ ಮತ್ತೆ ೧೪ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಪ್ರಯಾಣಿಸಿ ಹೊಳಲ್ಕೆರೆ ತಲುಪಬೇಕು.
ಗ್ರಾಮದ ಬಡಗಣ ದಿಕ್ಕಿಗೆ ಸಾಲು ಗುಡ್ಡ, ಅವುಗಳ ಆಚೆ ಕಡೆ ಮಗ್ಗುಲಿಗೆ ಚಿತ್ರದುರ್ಗ ತಾಲೂಕಿನ ಗಡಿ. ಮೂಡಲಕ್ಕೆ ಹಿರಿಯೂರು ಮತ್ತು ತೆಂಕಲಿಗೆ ಹೊಸದುರ್ಗ ತಾಲೂಕಿನ ಗಡಿಗಳು ಹೊಂದಿಕೊಂಡಿವೆ. ಈ ಹಳ್ಳಿಗೆ ಕುಡಿಯುವ ನೀರಿನ ಸೇದೋಬಾವಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಥಮಿಕ ಶಾಲೆ ದೊರೆತಿದ್ದು ಸ್ವಾಂತಂತ್ರ್ಯ ಗಳಿಸಿದ ಮೇಲೆಯೇ.
ಕೊಳಹಾಳಿಗೆ ಮೂಡಲ ದಿಕ್ಕಿನಲ್ಲಿ ೧ ಕಿಲೋಮೀಟರ್ ದೂರದ ಗೊಲ್ಲರಹಟ್ಟಿ, ೨ ಕಿಲೋಮೀಟರ್ ಈಶಾನ್ಯಕ್ಕೆ ಎಲಕೂರನಹಳ್ಳಿ, ಬಡಗಣಕ್ಕೆ ೨ ಕಿಲೋಮೀಟರ್ ದೂರದಲ್ಲಿ (ಗುಡ್ಡಾದಾಚೆಗೆ) ಎರೆಹಳ್ಳಿ , ಪಡುವಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ತೇಕಲವಟ್ಟಿ ಮತ್ತು ೬ ಕಿಲೋಮೀಟರ್ ನೈರುತ್ಯಕ್ಕೆ ಕೊಮಾರನಹಳ್ಳಿ ಹತ್ತಿರದ ಹಳ್ಳಿಗಳು.
ಈ ಊರು ಕಟ್ಟಿರುವುದೇ ಮಟ್ಟಿಯ ಮಗ್ಗುಲಲ್ಲಿ. ಮಟ್ಟಿಯ (ಮರಡಿ) ಮೇಲೊಂದು ಗುಂಡವ್ವರ ಮಾರನಾಯ್ಕ ಎಂಬುವವನು ಕಟ್ಟಿಸಿರುವ ಕಾವಲು ಬುರುಜು ಇದೆ. ದರೋಡೆ, ಸುಲಿಗೆಗಾರರು ಇತ್ತ ಬಂದಾಗ ಕಾವಲಿನವರು ಎಚ್ಚರಿಸುತ್ತಿದ್ದರಂತೆ. ಕೊಳಹಾಳಿನ ಪೂರ್ವದ ಹೆಸರು ‘ಕೊಳಪಾಲ' ಎಂದು ೧೦ನೇ ಶತಮಾನದ ಶಿಲಾಲೇಖ ತಿಳಿಸುತ್ತದೆ.
ಕೊಳಹಾಳಿನ ಬಡಗಣಕ್ಕೆ ಎರಡು ಫರ್ಲಾಂಗ್ ದೂರದಲ್ಲಿ ಪಡುವಲಿಂದ ಮೂಡಲಕ್ಕೆ ಇರುವ ದಾರಿಯನ್ನು ‘ತಿರುಪತಿ ಹಾದಿ' ಎಂದು ಕರೆಯುತ್ತಿದ್ದುದು ವಾಡಿಕೆ. ಇದು ಪಡುವಲ ಸೀಮೆಯಿಂದ ನೇರವಾಗಿ ಎಚ್ ಡಿ ಪುರ, ಸಂಗೇನಹಳ್ಳಿ, ತೇಕಲವಟ್ಟಿ, ಎಲಕೂರನಹಳ್ಳಿ, ಕುಂಬಾರಕಟ್ಟೆ ಮಾರ್ಗವಾಗಿ ಐಮಂಗಲವನ್ನು ತಲುಪುತ್ತದೆ.
ಇದೇ ಹಾದಿಯಲ್ಲಿ ಕೊಳಹಾಳಿಗೆ ಒಂದು ಕಿಲೋಮೀಟರ್ ಪಡುವಲಿಗೆ ಇರುವ ಕೊಗೋಮಟ್ಟಿ ಮಗ್ಗುಲಲ್ಲಿದ್ದ ತಿಮ್ಮಪ್ಪನಹಳ್ಳಿ ಹಾಳಾಗಿದೆ. ಈ ಹಳ್ಳಿಗರು ಮಟ್ಟಿ ಪಕ್ಕದಲ್ಲಿ ಹಾಯುವ ತಿರುಪತಿ ಹಾದಿಯಲ್ಲಿ ಬಂದು ಹೋಗುವ ದಾರಿಹೋಕರನ್ನು ಅಲ್ಲಿನ ಹಳ್ಳದಲ್ಲಿ ಸುಲಿಗೆ ಮಾಡಲಾಗುತ್ತಿತ್ತೆಂದೂ, ಇದರಿಂದ ನೊಂದವರ ಶಾಪದಿಂದ ಈ ಊರು ಹಾಳಾಯಿತೆಂದೂ ಈ ಪ್ರದೇಶದ ಜನರ ನಂಬುಗೆ.
ಒಮ್ಮೆ ಕೊಳಹಾಳಿನ ಲಿಂಗಾಯ್ತರ ಸಂಬಂಧಿಗಳು ಕೊಂಡ ರಾಗಿಯನ್ನು ಬಂಡಿಯಲ್ಲಿ ಹೇರಿಕೊಂಡು ಗೂಳಿಹೊಸಳ್ಳಿಗೆ ಸಾಗಿಸುತ್ತಿರುವಾಗ ದಾರಿ ಕಾಯುತ್ತಿದ್ದ ಸುಲಿಗೆಗಾರರ ಕೈಗೆ ಸಿಕ್ಕಿ ಕೊಳಹಾಳಿಗೆ ಕೇಳಿಸುವಂತೆ ಕೂಗುಹಾಕಿ, ತಮ್ಮ ಬವಣೆಯನ್ನು ತಲುಪಿಸಿದ್ದರಂತೆ. ಕೂಗು ಕೇಳಿಸಿಕೊಂಡ ಊರವರು ತಮ್ಮವರಿಗೆ ಆಗಿರಬಹುದಾದ ಸಂಕಷ್ಟದ ಅರಿವಾಗಿ ಓಡೋಡಿ ಹೋಗಿ ಸುಲಿಗೆಗಾರರಿಂದ ತಮ್ಮ ಬಂಧುಗಳನ್ನು ಬಿಡಿಸಿದ್ದರಂತೆ. ಅಂದು ಒಪ್ಪಂದ ಏರ್ಪಟ್ಟು ತಮ್ಮವರು ಈ ಹಾದಿಯಲ್ಲಿ ಬಂದಾಗ ‘ಕೆಂಚಪ್ಪರ ಸಂಬಂಧಿಗಳು' ‘ಕಾಡಪ್ಪರ ಸಂಬಂಧಿಗಳು' ಎಂದು ಹೇಳಿಕೊಂಡು ಪಾರಾಗುತ್ತಿದ್ದರಂತೆ. ಅಂದಿನಿಂದ ಇಲ್ಲಿನ ಮಟ್ಟಿಗೆ ‘ಕೂಗೋಮಟ್ಟಿ' ಎಂದು ಹೆಸರಾಯಿತಂತೆ ಎಂದು ತಿಳಿಸುತ್ತಾರೆ.
ಕೊಳಹಾಳ ಬೆನ್ನಿಗೇ ಆಗ್ನೇಯ ದಿಕ್ಕಿಗಿರುವ ಗುಡ್ಡದ ಸಾಲು ಮತ್ತು ಈ ಸಾಲಿನಲ್ಲಿರುವ ಭೈರಜ್ಜಿ ಕಣಿವೆ, ಈ ಕಣಿವೆಯ ಮೂಲಕ ಮುಂದೆ ನಡೆದರೆ ಸಿಗುವ ಬಸವನಹಳ್ಳ , ಅದರ ಪಕ್ಕದಲ್ಲಿದ್ದ ಕೆನ್ನಳ್ಳಿ ಇವು ಕೊಳಹಾಳಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ಮಿಳಿತಗೊಂಡಿವೆ. ಈ ಊರಿನ ಸುತ್ತಾ ಇರುವ ಕಪ್ಪು ಮಿಶ್ರಿತ ಕೆಂಪುಭೂಮಿ ತುಂಬಾ ಫಲವತ್ತಾಗಿದ್ದು ಕೊಳಹಾಳು ಮತ್ತು ಗೊಲ್ಲರಹಟ್ಟಿಯ ನಿವಾಸಗಳು ವರ್ಷಕ್ಕೆ ಎರಡು ಫಸಲು ಬೆಳೆಯಲು ಸಕಾಲದಲ್ಲಿ ಮಳೆ ಬೀಳುತ್ತಿತ್ತೆಂದು ರೈತರು ಸ್ಮರಿಸುತ್ತಾರೆ.
ಗೊಲ್ಲರಹಟ್ಟಿಯ ನಿವಾಸಿಗಳ ಜೊತೆಗೆ ಕೊಳಹಾಳಿನ ಕೆಲವು ಕುಂಚಿಟಿಗ ಲಿಂಗಾಯ್ತರೂ, ಬೇಡರೂ ಹಿಂದೆ ಕುರಿ ಮೇಕೆ ಸಾಕುತ್ತಿದ್ದರು. ಈಗ ಲಿಂಗಾಯ್ತರು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿದ್ದರೆ, ಗೊಲ್ಲರು ತಮ್ಮ ಕುಲ ಕಸುಬನ್ನು ಬಿಟ್ಟುಕೊಟ್ಟಿಲ್ಲ.
ಪಾರಂಪರಿಕ ಬೆಳೆಗಳಾದ ಗಿಡದಿಮ್ಮಿನ ಜೋಳ, ಕೇಸರಿಜೋಳ (ಮುಂಗಾರು), ನವಣೆ (ಪಶುಗಳ ತಲಮೇವು) ಸಜ್ಜೆ, ರಾಗಿ, ಅಲಸಂದೆ, ತೊಗರಿ , ಹರಳು, ಹುಚ್ಚೆಳ್ಳು ಮತ್ತು ಹಿಂಗಾರಿನಲ್ಲಿ ಬಿಳಿಜೋಳ ಮುಂತಾದವನ್ನು ಬೆಳೆದುಕೊಂಡು ಸುಖವಾಗಿದ್ದ ಜನ, ಇತ್ತೀಚೆಗೆ ಮಳೆ ಬೀಳುವುದರಲ್ಲಿ ಏರುಪೇರಾಗಿ ಈ ಬೆಳೆಗಳಿಗೆ ವಿದಾಯ ಹೇಳುತ್ತಿದ್ದಾರೆ. ತೋಡು ಬಾವಿಗಳು ಬತ್ತಿದವು. ಬೇಕು-ಬೇಕಿಲ್ಲದ ಕಡೆಗಳಲ್ಲೆಲ್ಲಾ ಭೂಮಿ ಕೊರೆದು ಕೊಳವೆ ಬಾವಿ ಮಾಡಿಕೊಂಡು ವಿಳ್ಳೆದೆಲೆ, ಕನಕಾಂಬರ, ಮಲ್ಲೆ, ಮಲ್ಲಿಗೆ., ಸುಗಂಧರಾಜ ಇತ್ಯಾದಿ ಹೂ ಮತ್ತು ಅಡಿಕೆ ತೋಟ ಮಾಡಿಕೊಂಡಿರುವ ಹಲವರು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ಕೊಳಹಾಳು ಪಡುವಲಕ್ಕೆ ಊರಿಗೆ ಹೊಂದಿಕೊಂಡೇ ಇರುವ ಹಿಂದೊಮ್ಮೆ ಕೆರೆಯಾಗಿದ್ದ ೧೨೦ ಎಕರೆ ಕೆರೆಯಂಗಳ ಪಟೇಲರ ವಂಶಸ್ಥರಿಗೆ ಸೇರಿದೆ. ಇವರು ಬಹಳ ಹಿಂದೆಯೇ ಕೊಳಹಾಳನ್ನು ತೊರೆದು ಚಿತ್ರದುರ್ಗ ಸಮೀಪದ ಪಾಲವ್ವನಹಳ್ಳಿಯಲ್ಲಿ ವಾಸಿಸುತ್ತಾ ಕೆರೆಯಂಗಳವನ್ನು ಊರಿನ ಬೇಡ ಮನೆತನಗಳಿಗೆ ಕೋರಿ ಉಳುಮೆಗೆ ನೀಡಿದ್ದರು. ಇತ್ತೀಚೆಗೆ ಸ್ಥಿತಿವಂತರಾದ ಕೊಳಹಾಳಿನ ಕೆಲವರು , ಕೆರೆಯ ಮುಕ್ಕಾಲು ಭಾಗವನ್ನು ಕೊಂಡು ಅಡಿಕೆ ಮಾಡಿಕೊಂಡಿದ್ದಾರೆ.
ಕೊಳಹಾಳಿನ ಸಾಂಸ್ಕೃತಿಕ ಬದುಕಿನಲ್ಲಿ ಊರಿನ ‘ಗದ್ದುಗೆ' ಯವರ ಮನೆತನ ಅತ್ಯಂತ ಹೆಸರುವಾಸಿಯಾದುದು. ಲಿಂಗವಂತರಾದ ಈ ಮನೆತನದ ಪೂರ್ವಿಕರು ಮತ್ತೋಡು ಸಮೀಪದ ನಿರುವುಗಲ್ಲಿನ ಹರಿಹರೇಶ್ವರ ದೇವರ ಪೂಜಾರಿಗಳಾಗಿದ್ದರು. ಮತ್ತೋಡು ದೊರೆ ಹಾಲಪ್ಪ ನಾಯಕನ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತ ಸಮಾರಂಭದ ನಿಮಿತ್ತ ಹೊರಡಿಸಿದ ಮರ್ಯಾದಾ ಶಾಸನದ (ಕ್ರಿ.ಶ ೧೬೫೧) ಅನುಸಾರ ಹಿರಿಯೂರು ತಾಲೂಕು ಮಾರೀಕಣಿವೆಯ (ವಾಣಿ ವಿಲಾಸಪುರ) ಕಣಿವೆ ಮಾರಿಕಾಂಬೆಯ ಪೂಜಾರಿಗಳಾಗಿ ನಿಯೋಜನೆಗೊಳ್ಳುತ್ತಾರೆ. ಮಾರೀಕಣೀವೆ ಸಮೀಪದ ಭರಮಗಿರಿಗೆ ಸ್ಥಳಾಂತರಗೊಂಡು ಕಣಿಮೆ ಮಾರಿಕಾಂಬೆಯ ಮೂಲಕ ಪೂಜಾರಿಕೆ ಕೈಂಕರ್ಯ ಮಾಡುತ್ತಿರುವಾಗ ಕಾಲಾನುಕ್ರಮದಲ್ಲಿ ಭರಮಗಿರಿಯ ಪಾಳೇಗಾರನ ಕಿರುಕುಳ ಸಹಿಸಲಸಾಧ್ಯವಾಗಿ ಒಂದು ಕುಟುಂಬ ದನಕುರಿ ಇತ್ಯಾದಿ ಸಮೇತ ಅಲ್ಲಿಂದ ಗುಳೇಹೊರಟು ಕೊಳಹಾಳಿಗೆ ಬಂದು ಸೇರುತ್ತಾರೆ.
‘ಉತ್ತಮರು' ಊರಿಗೆ ಬಂದುದು ಊರಿನ ಸೌಭಾಗ್ಯವೆಂದು ಭಾವಿಸಿದ ಕೊಳಹಾಳಿನ ಬೇಡ ಜನಾಂಗದವರು ಅವರಿಗೆ ಜಮೀನು ನೀಡಿದ್ದಲ್ಲದೆ ವಾಸಕ್ಕೆ ೪೮ ಕಂಬದ ಒಂದು ದೊಡ್ಡ ಮಾಳಿಗೆ ಮನೆಯನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇಲ್ಲಿ ನೆಲೆಸಿದ ಅವರ ‘ದೊಡ್ಡಮನೆ' ಅಥವಾ ಗದ್ದುಗೆ ಮನೆಯಲ್ಲೇ ಐದಾರು ತಲೆಮಾರಿನ ಬಳಿಕ ಮುಂದೆ ಅವಧೂತನಾದ ಕೆಂಚಪ್ಪ ಆತನ ಅತ್ಯಂತ ಚೆಲುವೆ ಮಗಳು ಭೈರಮ್ಮ ಜನಿಸಿದ್ದು.
ಕೆಂಚಪ್ಪ ಬಾಲಕನಾಗಿದ್ದಾಗಲೇ ಸದಾ ಅನ್ಯಮನಸ್ಕನಾಗಿರುತ್ತಿದ್ದನು. ಉಂಡು ಮಲಗುವ ಕ್ರಿಯೆಗಳು ಇವನಿಗೆ ಯಾಂತ್ರಿಕವಾಗಿದ್ದವು. ಅವನ ವಿಲಕ್ಷಣ ಸ್ಥಿತಿ ನಡವಳಿಕೆಗಳಿಂದ ‘ತಿಕಲ' ‘ಯೇಗಿ' ಎಂದು ಕರೆಯಿಸಿಕೊಂಡಿದ್ದನು. ಹುಚ್ಚಮ್ಮ ಎಂಬ ಕನ್ನೆಯೊಂದಿಗೆ ಲಗ್ನವಾದರೂ ಕೃಷಿ ಬದುಕಿಗಿಂತ ದನಗಾಹಿಯಾಗಿದ್ದವನು. ಇಂಥವನನ್ನು ಹುಡುಕಿಕೊಂಡು ಹೊಸಪೇಟೆ ಸಮೀಪದ ಕಾಳಘಟ್ಟ ಗುಡ್ಡದಲ್ಲಿ ವಾಸಿಯಾಗಿದ್ದ ರುದ್ರಮುನಿ ಅವಧೂತರೆಂಬುವವರು ಕುದುರೆ ಹತ್ತಿಸಿಕೊಂಡು ಬರುತ್ತಾರೆ.
ದನಗಾಹಿ ಕೆಂಚಪ್ಪ ತನ್ನ ಇಷ್ಟ ತಾಣವಾದ ಕೂಗೋಮಟ್ಟಿ ಬಡಗಣ ದಿಕ್ಕಿಗಿರುವ ಗುಡ್ಡದಾಚೆಗಿನ ಕಣಿವೆಯಲ್ಲಿನ ‘ಸಿದ್ದಪನ ವಜ್ರ'ದ ಬಳಿ ಕುಳಿತುಕೊಂಡು ತನ್ನ ಭಾವನಾಲೋಕದಲ್ಲಿ ವಿಹರಿಸುತ್ತಿರುವಾಗ ರುದ್ರಾವಧೂತರು ಈತನ ಎದುರಿಗೆ ಧುತ್ತೆಂದು ಕಾಣಿಸಿಕೊಳ್ಳುತ್ತಾರೆ. ಎದ್ದು ಅವರಿಗೆ ಅಡ್ಡಬಿದ್ದು ಕೆಂಚಪ್ಪನಿಗೆ ನನಗೆ ಹಸಿವಾಗಿದೆ ತಾಯಿ ಸ್ತನದಿಂದಾಗಲಿ ಪ್ರಾಣಿಗಳಿಂದಾಗಲಿ ಹಿಂಡಿ ಕರೆಯದ ಹಾಲನ್ನು ತಂದುಕೊಡು. ಅಲ್ಲಿಯವರೆಗೆ ಇಲ್ಲೇ ಕಾಯ್ತೀನಿ ಎಂದು ಅಪ್ಪಣೆ ಇತ್ತರು.
ಕೆಂಚಪ್ಪ ಕೆಲಕಾಲ ವಿಚಲಿತನಾದರೂ ಗುರುಗಳ ಮನದಿಚ್ಛೆಯನ್ನು ಅರ್ಥಮಾಡಿಕೊಂಡು ಹೋಗಿ ಈಚಲಮರದ ಹಾಲನ್ನು ಗಡಿಗೆ ತುಂಬಾ ಹೊತ್ತು ತರುತ್ತಾನೆ. ಅದನ್ನು ಪಡೆದ ಗುರುಗಳು ಸಾಕಾಗುವಷ್ಟು ಕುಡಿದು ಸಂತೃಪ್ತರಾಗಿ ಉಳಿದುದನ್ನು ಕುಡಿಯಲು ಕೆಂಚಪ್ಪನಿಗೆ ಸೂಚಿಸುತ್ತಾರೆ. ಅದುವರೆಗೆ ಅದೇನೆಂದು ಅರಿಯದಿದ್ದ ಕೆಂಚಪ್ಪ ಈಚಲುಮರದ ಹಾಲನ್ನು ಗಟಗಟನೆ ಕುಡಿದಿದ್ದ. ಗುರುಗಳು ಕೆಲಕಾಲ ಅಲ್ಲೇ ಇದ್ದು ಕೆಂಚಪ್ಪನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿ ಗುರುಭೋದೆ ನೀಡಿ ಹೋಗುತ್ತಾರೆ.
ಅವಾಗಿನಿಂದ ಕೆಂಚಪ್ಪ ತನ್ನವರ, ಕುಲಬಾಂಧವರ ತಿರಸ್ಕಾರಕ್ಕೆ ಈಡಾದರೂ ಅವಧೂತನಾಗುವ ಹಾದಿಯಲ್ಲಿ ಸಾಗುತ್ತಿದ್ದ. ಕಾಲ ಸರಿದಂತೆ ಕೆಂಚಪ್ಪನ ನಡವಳಿಕೆಗಳು ಅತ್ಯಂತ ವಿಲಕ್ಷಣವಾಗುತ್ತಿದ್ದವು. ಈತ ಅನಾಚಾರಿಯೆಂಬ ದೂರು ಚಿತ್ರದುರ್ಗದ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾಗಿದ್ದ ಮರುಘರಾಜೇಂದ್ರ ಸ್ವಾಮಿಗಳ ಮುಂದೆ ಪ್ರಸ್ತಾಪವಾಯ್ತು. ಗುರುಗಳು ಕೆಂಚಪ್ಪನನ್ನು ಪರೀಕ್ಷಿಸಿದ ಬಳಿಕ ಇವನೊಬ್ಬ ಅಸಾಮಾನ್ಯ ಮನುಷ್ಯ ಕಣ್ರಪ್ಪ, ಇವನು ನಿಮ್ಮಂತೆ ಸಾಮಾನ್ಯನಲ್ಲ ಅವನಗೊಡವೆಗೆ ಅವನನ್ನು ಬಿಟ್ಟು ಬಿಡಿ ಯಾರೂ ಪೀಡಿಸಬೇಡಿರಿ ಎಂಬುದಾಗಿ ಆದೇಶಿಸಿದರು.
ಕೆಂಚಪ್ಪನ ಮಗಳು ಕಡು ಚೆಲವೆ ಭೈರಮ್ಮಳೂ ಎಲ್ಲರಂತೆ ತಂದೆಯನ್ನು ಅಲಕ್ಷಿಸಿದ್ದಳು. ಆದರೆ ಈಕೆಯನ್ನು ಪ್ರೀತಿಯಿಂದ ಮತ್ತು ಅವಳಾಡುತ್ತಿದ್ದ ವಯಸ್ಸಿಗಿಂತ ವಿವೇಕದ ಮಾತುಗಳಿಗೆ ತಲೆದೂಗಿ ಭೈರಜ್ಜಿ ಎಂದು ಕರೆಯುತ್ತಿದ್ದರು. ಈಕೆಯ ಚೆಲವಿಗೆ ಮನಸೋತಿದ್ದ ಕೆನ್ನಳ್ಳಿಯ ಬೇಡರ ರಣಹದ್ದಿನಂಥವನೊಬ್ಬ ಭೈರಮ್ಮಳನ್ನು ಉಪಾಯದಿಂದ ತನ್ನ ತೆಕ್ಕೆಗೆ ಹಾಕಿಕೊಂಡ. ಇದರ ಸುಳಿವು ಕೆಂಚಪ್ಪನ ಒಳಗಣ್ಣಿಗೆ ಗೋಚರಿಸಿ ಅವಳಿಗೆ ಮುಂದೊದಗಬಹುದಾದುದನ್ನು ನೊಂದು ನುಡಿದಿದ್ದ. ಭೈರಮ್ಮ ತನ್ನ ಯೌವನದ ಅಮಲಿನಲ್ಲಿ ಕೊಳಾಳು- ಕೆನ್ನಳ್ಳಿಗಳ ಗುಡ್ಡದ ಕಣಿವೆ ಮಾರ್ಗವಾಗಿ ಓಡಾಡುತ್ತಿರುವಾಗ ತನ್ನ ಪ್ರಿಯಕರನ ಹೆಂಡತಿಯ ಹಿಕಮತ್ತಿನಲ್ಲಿ ಕಣಿವೆಯಲ್ಲಿ ಕೊಲೆಯಾದಳು. ಕೊಲೆಗಡುಕರಿಗೆ ‘ನಿಮ್ಗೆ ಹಾಲು ತುಪ್ದಾಗೆ ಕೈತೊಳಸಿದ್ನೆಲ್ರೋ ಹೆಂಗೆ ಮನಸ್ಸು ಬಂತ್ರೋ ನಿಮ್ಗೆ, ಬ್ಯಾಡಕಣ್ರೋ'ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಳಂತೆ. ಅಪರಾಧಿಗಳಲ್ಲೊಬ್ಬನಾದ ನಿಂಗನಾಯ್ಕ ಎಂಬುವವನು ತನಗೆ ಕೋರ್ಟಿನಿಂದ ಶಿಕ್ಷೆಯಾದಾಗ ಹಲುಬಿಕೊಂಡಿದ್ದನಂತೆ ಎಂದು ಅನೇಕ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಭೈರಮ್ಮ ಕೊಲೆಯಾದ ಕಣಿವೆಗೆ ಭೈರಜ್ಜಿ ಕಣಿವೆ ಎಂದು ಹೆಸರಿಡಲಾಗಿದೆ.
ಕೆಂಚಪ್ಪನ ಬದುಕಿನುದ್ದಕ್ಕೂ ಜನ ಬರೀ ಕಿರುಕುಳಗಳನ್ನು ಕೊಟ್ಟರು. ಐಮಂಗಲದ ಗೌಡರು ಒಂದು ಹಗಲು - ರಾತ್ರಿ ಕಂಬಕ್ಕೆ ಕಟ್ಟಿಸಿದ್ದರು. ಮತ್ಯಾರೋ ಹೊಳಲ್ಕೆರೆ ಪೊಲೀಸರಿಗೆ ಈತನ ಮೇಲೆ ಸಮಾಜದ್ರೋಹಿ ಎಂದು ದೂರು ನೀಡಿದರು. ಪೊಲೀಸರು ಸಾಕಷ್ಟು ಸತಾಯಿಸಿ ದೂರನ್ನು ಕೂರ್ಟಿಗೆ ಸಲ್ಲಿಸಿದರು. ಶಿವಮೊಗ್ಗೆಯಲ್ಲಿದ್ದ ಸೆಷನ್ಸ್ ಕೋರ್ಟಿನಲ್ಲಿ ಕೆಂಚಪ್ಪನನ್ನು ಹಾಜರುಪಡಿಸಲಾಯಿತು. ಅಲ್ಲಿಯೂ ಈತನ ವಿಲಕ್ಷಣ ವರ್ತನೆ ನಡದೇ ಇತ್ತು. ವಕೀಲರು ನ್ಯಾಯಾಧೀಶರೂ ‘ಏನು ಘನಂದಾರಿ ಕೇಸಯ್ಯಾ ಇದು, ಇವನು ಸಮಾಜ ದ್ರೋಹಿ ಹೆಂಗೆ ಆಗಿದ್ದಾನು, ತನ್ನ ಪಾಡಿಗೆ ತಾನು ಅರೆ ಹುಚ್ಚನಂತೆ ಇರೋನಿಗೆ ಕೋರ್ಟಿಗ್ಯಾಕೆ ಕರೆತಂದಿರಯ್ಯಾ' ಎಂದು ಪೊಲೀಸರಿಗೇ ಎಚ್ಚರಿಕೆ ನೀಡಿ ಕೆಂಚಪ್ಪನನ್ನು ಖುಲಾಸೆ ಮಾಡಿದ್ದರಂತೆ.
ಹೀಗಾಗಿ ಕೆಲವರು ಕೆಂಚಪ್ಪ ಅವಧೂತನೆಂದು ಗೌರವಿಸುತ್ತಿದ್ದರೆ ಈತ ಎತ್ತಲೋ ನೋಡುತ್ತಾ ವಿಲಕ್ಷಣವಾಗಿ ನಗುತ್ತಿದ್ದನಂತೆ. ಮತ್ತೆ ಕೆಲವೊಮ್ಮೆ ತಾನೂ ಪ್ರತಿಯಾಗಿ ಕೈಮುಗಿದು ಹುಸಿನೆಗೆ ನಗುತ್ತಿದ್ದನಂತೆ.
ನಿರಕ್ಷರಕುಕ್ಷಿಯಾಗಿದ್ದ ಕೆಂಚಪ್ಪ ಚಿದಾನಂದಾವಧೂತರು ರಚಿಸಿರುವ ದೇವಿಪುರಾಣದ ಮೊದಲ ಪದ್ಯ `ಪರಮ ಪರತರ ಪರಮ ಮಂಗಳ ಪರಮ ಪೂರ್ಣ ಜ್ಯೋತಿ ಪರಮಾಕಾಶ ಪರಮೇಶ` ದಿಂದ ಕೊನೆಯ ಮಂಗಳದ ಸಾಲಿನವರೆಗೆ ನಿರರ್ಗಳವಾಗಿ ಪಠಿಸುತ್ತಿದ್ದುದನ್ನು ಅವರ ಮೊಮ್ಮಗ ದಿವಂಗತ ಮೇಷ್ಟ್ರು ಕೆಂಚಪ್ಪ ಕೊಂಡಾಡುತ್ತಿದ್ದರು. ಇದನ್ನು ಇವರ ಮಗ ನಿವೃತ್ತ ಇಂಜಿನಿಯರ್ ಕೆ. ತಿಪ್ಪೇರುದ್ರಪ್ಪ ಈಗಲೂ ಸ್ಮರಿಸುತ್ತಾರೆ. ಭಂಗಿ ಸೊಪ್ಪಿನ ಚಿಲುಮೆ ಎಳೆದು ಭಜನೆಗೆ ಕುಳಿತರೆಂದರೆ ವಾಗ್ದೇವಿ ಕೆಂಚಪ್ಪರ ನಾಲಗೆ ಮೇಲೆ ಕಣೀತಿದ್ಲು ಎಂದು ಕೂಡ ದಿವಂಗತ ಮೇಷ್ಟ್ರು ಕೊಂಡಾಡುತ್ತಿದ್ದರಂತೆ.
ಅವಧೂತ ಕೆಂಚಪ್ಪರ ಸಮಾಧಿ ಇಂದು ಯಾತ್ರಾ ಸ್ಥಳವಾಗಿದೆ. ಪ್ರತಿ ಸೋಮವಾರ ನೂರಾರು ಭಕ್ತರು ಬಂದು ಭಕ್ತಿಯಿಂದ ಅವಧೂತರ ಪೊಜೆ ಮಾಡಿ ಹೆಂಡ, ಮಾಂಸದ ಅಡುಗೆ, ಸಿಹಿ ಅಡುಗೆ ಎಡೆ ಅರ್ಪಿಸುತ್ತಾರೆ. ರೋಗ ರುಜಿನಗಳಿಂದ ಹಿಡಿದು ಗೃಹಕೃತ್ಯದ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪದ ಅಪ್ಪಣೆ ಪಡೆಯುತ್ತಾರೆ. ಈ ಬಿಲ್ವಪತ್ರೆಯ ಅಪ್ಪಣೆಯಲ್ಲಿ ಏನು ಬೀಜ ಬಿತ್ತಲಿ, ಯಾವ ಫಸಲು ಚಂದಗಾದೀತು ಇಂಥಾ ಮನೆಯಿಂದ ಹೆಣ್ಣು ತಂದರೆ ಒಳ್ಳೇದಾದೀತೆ, ಮುಂತಾಗಿಯಲ್ಲದೆ ಕೋರ್ಟು ಖಟ್ಲೆಗಳನ್ನೂ ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಕೆಲವು ಭಕ್ತರು ತಮ್ಮ ಭಾದೆಗಳ ಪರಿಹಾರಕ್ಕೆ ಕೆಂಚಪ್ಪರಿಗೆ ಅತ್ಯಂತ ಪ್ರಿಯವಾಗಿದ್ದ ಹೊಗೆ ಸೊಪ್ಪು, ಎಲೆ ಅಡಿಕೆ ಇತ್ಯಾದಿಗಳನ್ನು ಸಮರ್ಪಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಕಾಳ ಘಟ್ಟದ ರುದ್ರಮುನಿ ಅವಧೂತರು ತಮ್ಮ ಶಿಷ್ಯ ಕೆಂಚಪ್ಪನಿಗೆ ಆರ್ಶೀವಾದ ಮಾಡಿ ನೀಡಿದ್ದ ಕನ್ನಡ ಮೋಡಿ ಲಿಫಿಯ ತಾಳೆಗರಿಗಳ ಕಟ್ಟು, ಪುರಾಣಗಳ ಗಂಟುಗಳನ್ನು ಗದ್ದುಗೆ ಮನೆತನದವರು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಕೊಂಡು ಬರುತ್ತಿದ್ದಾರೆ. ಅವುಗಳೊಳಗೇನಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಅವಧೂತರ ಮರಿಮಗ ಜಿ.ಎಸ್.ಕೆಂಚಪ್ಪ ತಿಳಿಸುತ್ತಾರೆ.


(ಕೃಪೆ: ಕೆಂಡಸಂಪಿಗೆ)

ಚುನಾವಣೆ ಮುಗಿದಿದೆ.. ಚುನಾವಣೆ ಬಾಕಿ ಇದೆ....

ದೊಡ್ಡ ತಲೆ ಭಾರ ಇಳಿದೆ. ಆದರೆ ಚಿತ್ರದುರ್ಗದ ಮಟ್ಟಿಗೆ ಸಾಹಿತ್ಯ ಸಮ್ಮೇಳನ.. ದೊಡ್ಡ ಕನಸಿನ ಭಾರವಿದೆ. ಅದನ್ನು ಯಶಸ್ವಿಯಾಗಿ ಹೊತ್ತೊಯ್ಯುವುದಕ್ಕೆ ಇನ್ನು ಮೇಲೆ ಸಿದ್ಧತೆಗಳು ಆರಂಭವಾಗಬೇಕು.
ಮೇ ಅಂತ್ಯಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಹುಶಃ ಇನ್ನೊಂದು ತಿಂಗಳಲ್ಲಿ ನಡೆಯಬಹುದು. ಹಾಗಾದರೂ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದಾ?
ಯಾಕೋ ಇದೊಂದು ಅನುಮಾನ ಕಾಡುತ್ತಿದೆ. ಗಣಿ ಧಣಿ, ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವುದು ಸಮ್ಮೇಳನಕ್ಕೆ ಹಣದ ಕೊರತೆಯ ಮಾತಿಲ್ಲ. ಪ್ರಶ್ನೆ ಇರುವುದು ಒಗ್ಗಟ್ಟಿನದು.... ಚಿತ್ರದುರ್ಗದ ಕ್ಷೇತ್ರದ ಶಾಸಕ ಎಸ್.ಕೆ.ಬಸವರಾಜನ್, ಮುರುಘ ಶ್ರೀ, ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್, ಜಿಲ್ಲೆಯ ಸಿರಿಗೆರೆ, ಹೊಸದುರ್ಗ, ಕಬೀರಾನಾಂದಾಶ್ರಮದ ಶ್ರೀಗಳು.. ಹೀಗೆ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದವರು ಒಗ್ಗಟ್ಟಾಗಿ ದುಡಿದರೆ ಸಮ್ಮೇಳನಕ್ಕೊಂದು ಕಳೆ ಎನ್ನುವುದು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಮತ.
ಸದ್ಯದ ರಾಜಕೀಯ ಬೆಳವಣಿಗೆ ಜಿಲ್ಲೆಯ ಕೆಲ ಹಿರಿಯರಲ್ಲಿ ವೈಮನಸ್ಸು ಉಂಟು ಮಾಡಿವೆ ಎಂಬುದೇ ಈ ಗುಮಾನಿಯ ಮಾತುಗಳಿಗೆ ಕಾರಣ.
ಜಿಲ್ಲೆಯ ಬುದ್ದಿಜೀವಿಗಳು, ಸಾಹಿತ್ಯಾಸಕ್ತರು ಒಂದೆಡೆ ಇನ್ನಾದರೂ ಸಮ್ಮೇಳನದ ಕುರಿತು ನಾಲ್ಕು ಮಾತುಗಳನ್ನು ಆಡಿ ಎಲ್ಲರೂ ಕೈಜೋಡಿಸಲು ಪ್ರೇರೇಪಿಸುವ ಅಗತ್ಯವಿದೆ..