Friday, February 6, 2009

ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು

ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...
ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.
***
ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.
ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."
ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.
ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?
***
ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು ! (ಬೆಟ್ಟದಡಿಯಿಂದ)

No comments: