Friday, December 28, 2007

ಶ್ರೀನಿವಾಸರಾಜು ಎಂಬ ಚಿರಂಜೀವಿ

ನದಿ ಬತ್ತಬಹುದು... ಅಂತರ್ಜಲ ಅಷ್ಟು ಸಲೀಸಾಗಿ ಬತ್ತುವುದಿಲ್ಲ!
ಮೇಷ್ಟ್ರು ಎಂದೇ ನಾಡಿನಾದ್ಯಂತ ಪರಿಚಿತರಾದ ಚಿ.ಶ್ರೀನಿವಾಸರಾಜು ಇನ್ನಿಲ್ಲ. ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ಇಂದು ಮುಂಜಾನೆ ಅವರ ಜೀವ ಮುದುಡಿಕೊಂಡಿತು. ಅವರು ಬರೆದದಕ್ಕಿಂತ ಬರೆಸಿದ್ದು ಹೆಚ್ಚು. ಆ ಕಾರಣಕ್ಕೆ ಅವರು ಮೇಷ್ಟ್ರು. ತಮಗಿಂತ ಕಿರಿಯರು ಬರೆದದ್ದನ್ನು ಓದಿ, ಪ್ರೋತ್ಸಾಹದ ಮಾತುಗಳನ್ನಾಡಿ, ಪ್ರಕಟಣೆಗೆ ಸಹಾಯ ಮಾಡಿದರು. ಕವಿ ಜಿ.ಎಸ್. ಶಿವರುದ್ರಪ್ಪನವರ ಮಾತಿನಲ್ಲಿ ಹೇಳುವುದಾದರೆ ಅವರು ಅಂತರ್ಜಲದ ಹಾಗೆ. ಕನ್ನಡದ ಈ ಹೊತ್ತಿನ ಬಹುತೇಕ ಬರಹಗಾರರ ಹಿಂದಿನ ಸ್ಫೂತರ್ಿ ಸೆಲೆ ರಾಜು ಸರ್. ಇದೇ ವರ್ಷ ಅವರ ಹಿತೈಷಿಗಳು ಅವರಿಗೊಂದು ಅಭಿನಂದನಾ ಗ್ರಂಥ ಅಪರ್ಿಸಿದರು. ಕನರ್ಾಟಕ ಸಕರ್ಾರವೂ ಇದೇ ವರ್ಷ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ರಾಜು ಸರ್ ಹೆಸರಿಗೆ ಸಿನಾನಿಮಸ್ ಎಂಬಂತೆ ನೆನಪಾಗುವುದು ಕ್ರೈಸ್ಟ್ ಕಾಲೇಜು ಕನ್ನಡ ಸಂಘ. ಅಚ್ಚರಿಯ ಸಂಗತಿ ಎಂದರೆ ಭಾರತದ ಯಾವುದೇ ಕಾಲೇಜಿನ ಸಂಘ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟ ಮಾಡಿರುವಷ್ಟು ಪುಸ್ತಕ ಪ್ರಕಟಿಸಿಲ್ಲ. ಯುಜಿಸಿಯೇ ಈ ಮಾತನ್ನು ಪುಷ್ಟೀಕರಿಸಿ ಕಾಲೇಜಿನ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಂಘದ ಹಿಂದಿನ ಸ್ಫೂತರ್ಿ ರಾಜು ಸರ್. ಪ್ರತಿವರ್ಷ ಹಲವಾರು ಸಾಹಿತ್ಯಕ ಸ್ಪಧರ್ೆಗಳನ್ನು ಏರ್ಪಡಿಸಿ ನೂರಾರು ಪ್ರತಿಭೆಗಳನ್ನು ಕನ್ನಡ ಬರಹ ಪ್ರಪಂಚಕ್ಕೆ ಪರಿಚಯಿಸಿದರು. ಹಾಗೇ ಬರಹಗಾರರಾದವರೆಲ್ಲರಿಗೂ ಅವರು `ರಾಜು ಸರ್' ಆದರು. ಅವರಿಂದ ಬೆಳಕಿಗೆ ಬಂದ ಪ್ರತಿಭೆಗಳ ಸಂಖ್ಯೆ ದೊಡ್ಡದು.ಅವರು ಮೂಕ ನಾಟಕಗಳನ್ನು ಬರೆದರು. ಅವರ ಮಗ ಪತ್ರಕರ್ತ ಸುಗತ ಶ್ರೀನಿವಾಸರಾಜು ಅದೇ ನಾಟಕಗಳನ್ನು ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಅನುವಾದಿತ ಕೃತಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಅವರು ಇನ್ನಿಲ್ಲ. ಆದರೂ ಚಿಕ್ಕಬಳ್ಳಾಪುರದ ಶ್ರೀನಿವಾಸರಾಜು ಚಿರಂಜೀವಿ! ನದಿ ಬತ್ತಬಹುದು... ಅಂತರ್ಜಲ ಅಷ್ಟು ಸಲೀಸಾಗಿ ಬತ್ತುವುದಿಲ್ಲ

Wednesday, December 26, 2007

ದುರ್ಗದಲ್ಲಿ ನಾಗರಹಾವು


ನಾಗರಹಾವು ಕನ್ನಡ ಚಿತ್ರರಂಗದ ಅಪರೂಪದ ಚಿತ್ರಗಳಲ್ಲಿ ಒಂದು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರ ವಿವಿಧ ಕಾರಣಗಳಿಗಾಗಿ ಗಮನಾರ್ಹ ಎನಿಸುವಂಥದ್ದು.
ಕಾರಣ...
ಪುಟ್ಟಣ್ಣನವರಿಗೆ ವೃತ್ತಿ ಜೀವನದಲ್ಲಿ ಮತ್ತೊಂದು ಬದುಕು ಕೊಟ್ಟ ಚಿತ್ರ. ಐತಿಹಾಸಿಕ ಚಿತ್ರದುರ್ಗವನ್ನು ಬೆಳ್ಳಿತೆರೆಗೆ ತಂದ ಚಿತ್ರ. ಚಿತ್ರದುರ್ಗದವರೇ ಆದ ತ.ರಾ.ಸುಬ್ಬರಾಯರ ‘ಸರ್ಪಮತ್ಸರ’, ‘ಎರಡು ಹೆಣ್ಣು, ಒಂದು ಗಂಡು’ ಮತ್ತು ‘ನಾಗರಹಾವು’ ಕಾದಂಬರಿಗಳನ್ನು ಆಧರಿಸಿದ ಚಿತ್ರ.
ಅಷ್ಟೇ ಅಲ್ಲ, ಸಾಹಸಸಿಂಹ ಖ್ಯಾತಿಯ ನಟರಿಗೆ ಬ್ರೇಕ್ ಕೊಟ್ಟು, ವಿಷ್ಣುವರ್ಧನ ಎನ್ನುವ ಹೆಸರು ಕೊಟ್ಟ ಚಿತ್ರ.
‘ಸಾಕ್ಷಾತ್ಕಾರ’ ಚಿತ್ರದ ಸೋಲಿನ ನಂತರ ಪುಟ್ಟಣ್ಣ ಹೈರಾಣಾಗಿದ್ದರು. ಕಥೆ, ಕಾದಂಬರಿ ಆಧರಿಸಿ ಚಿತ್ರಗಳನ್ನು ನಿರ್ಮಿಸುತ್ತಾ, ನಿರ್ದೇಶಿಸುತ್ತಾ ಬಂದ ಪುಟ್ಟಣ್ಣರಿಗೆ ಸಾಕ್ಷಾತ್ಕಾರದ ಸೋಲು ಪೆಟ್ಟುಕೊಟ್ಟಿತು.
ಅಷ್ಟಕ್ಕೇ ಅವರಿಗೆ ತಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಷ್ಟವಿರಲಿಲ್ಲ. ಸದಭಿರುಚಿಯ ಚಿತ್ರಗಳನ್ನು ಕೊಡುವುದಕ್ಕೆ ಅವರು ಬದ್ಧರಾಗಿದ್ದರು.
ಆ ಹೊತ್ತಿಗಾಗಲೇ ಅವರ ತಲೆಯಲ್ಲಿ ತರಾಸು ಅವರ ‘ನಾಗರಹಾವು’ ಕಾದಂಬರಿಯನ್ನು ಚಿತ್ರವಾಗಿಸುವ ಆಸೆ ಮೊಳೆತಿತ್ತು.
ಇದೇ ಚಿತ್ರವನ್ನು ನಿರ್ಮಿಸಲು ಹಂಬಲಿಸಿದ್ದವರು ಅಂದಿನ ಯಶಸ್ವಿ ನಿರ್ಮಾಪಕ ವೀರಾಸ್ವಾಮಿ. ಚಿತ್ರವನ್ನು ನಿರ್ದೇಶಿಸುವಂತೆ ವೀರಾಸ್ವಾಮಿ ಪುಟ್ಟಣ್ಣನವರನ್ನು ಕೇಳಿಕೊಂಡರು.
ಪುಟ್ಟಣ್ಣ, ತರಾಸು ಅವರ ಇನ್ನೆರಡು ಕಾದಂಬರಿಗಳಾದ ‘ಸರ್ಪ ಮತ್ಸರ’ ಮತ್ತು ‘ಎರಡು ಹೆಣ್ಣು ಒಂದು ಗಂಡು’ ಕಾದಂಬರಿಗಳನ್ನಿಟ್ಟುಕೊಂಡು ನಾಗರಹಾವು ಚಿತ್ರಕಥೆಯನ್ನು ಸಿದ್ಧ ಮಾಡಿದರು.
ನಾಯಕನಾಗಿ ವಿಷ್ಣುವರ್ಧನ್, ನಾಯಕಿಯಾಗಿ ಆರತಿ, ಮೇಷ್ಟ್ರ ಪಾತ್ರದಲ್ಲಿ ಅಶ್ವಥ್, ಅಲ್ಲದೆ ಶಿವರಾಂ, ಶುಭ ಮುಖ್ಯ ಪಾತ್ರಗಳಿಗೆ ಆಯ್ಕೆಯಾಗಿದ್ದರು.
ಚಿತ್ರದ ಚಿತ್ರೀಕರಣಕ್ಕೆ ಅವರು ಆರಿಸಿಕೊಂಡ ಸ್ಥಳ ಐತಿಹಾಸಿಕ ಕೋಟೆ. ಚಿತ್ರೀಕರಣಕ್ಕೂ ಮುನ್ನ ಕೋಟೆ ಬಹುಭಾಗ ಸುತ್ತಿ ನೋಡಿದ್ದ ಪುಟ್ಟಣ್ಣ ಅದಿಷ್ಟನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು. ನಾಡಿನ ಜನತೆಗೆ ತೋರಿಸಬೇಕು ಎಂದು ನಿರ್ಧರಿಸಿದ್ದರು.
ಸುಲ್ತಾನ್ ಬತೇರಿ, ಕೋಟೆ ಸುತ್ತಲಿರುವ ಬೆಟ್ಟ ಗುಡ್ಡಗಳನ್ನು, ಬಂಡೆಗಳು, ಕೊಳಗಳು, ಗರಡಿ ಮನೆ, ಮಾರಿ ಕಣಿವೆಯನ್ನು ಚಿತ್ರಿಸಿದರು. ಜೊತೆಗೆ ವೀರ ವನಿತೆ ಓಬವ್ವಳ ಕಥೆಯನ್ನು ಚಿತ್ರದ ಒಂದು ಗೀತೆಯಾಗಿ ಚಿತ್ರಿಸಿ ಇಂದಿಗೂ ಓಬವ್ವ ಜನಮಾನಸದಲ್ಲಿ ನೆಲೆಸುವಂತೆ ಮಾಡಿದರು.
೧೯೭೨ರಲ್ಲಿ ಈ ಚಿತ್ರ ತೆರೆ ಕಂಡಿತು. ಪುಟ್ಟಣ್ಣ ಮುಖದಲ್ಲಿ ಹೊಸ ಉಲ್ಲಾಸ ತುಂಬಿತು. ನಾಡಿನಾದ್ಯಂತ ಚಿತ್ರಕ್ಕೆ ಜಯಭೇರಿ. ರೋಷದ ರಾಮಾಚಾರಿಯನ್ನು, ಆತ ಸುತ್ತಾಡಿದ ಕೋಟೆಯ ಭಾಗಗಳನ್ನು, ಒನಕೆ ಓಬವ್ವಳನ್ನು ಜನ ನೋಡಿ ಆನಂದಿಸಿದರು. ತರಾಸು ಅವರ ಕಥೆಯನ್ನು ಜನ ಕೊಂಡಾಡಿದರು.
ಅದೇ ವರ್ಷ ಚಿತ್ರಕ್ಕೆ ಅತ್ಯುತ್ತಮ ಚಿತ್ರ ನಾಟಕ ಕರ್ತೃ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಕಥಾಲೇಖಕ, ಅತ್ಯುತ್ತಮ ಸಂಭಾಷಣಕಾರಾ ಪ್ರಶಸ್ತಿಗಳನ್ನಾ ಬಾಚಿಕೊಂಡಿತು.
ಪುಟ್ಟಣ್ಣ ನಾಗರಹಾವು ಚಿತ್ರದ ಮೂಲಕ ಮತ್ತೆ ತಾವು ಶ್ರೇಷ್ಠ ನಿರ್ದೇಶಕ ಎಂದು ಸಾಬೀತು ಮಾಡಿದರು.
ನಾಗರಹಾವು ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪ್ರದರ್ಶನ ಕಂಡಿತು.
ಇದೆಲ್ಲಾ ಬೆಳವಣಿಗೆ ನಡುವೆ ಪುಟ್ಟಣ್ಣ ಕಟ್ಟಿ ಕೊಟ್ಟ ‘ನಾಗರಹಾವು’ ಚಿತ್ರವನ್ನು ‘ಕೇರೆ ಹಾವು’ ಎಂದು ಸಮಾರಂಭವೊಂದರಲ್ಲಿ ಖುದ್ದು ತರಾಸು ಪುಟ್ಟಣ್ಣನವರ ಉಪಸ್ಥಿತಿಯಲ್ಲಿ ಗರ್ಜಿಸಿದ್ದರು.
ಆದರೆ ಈ ಅಸಮಾಧಾನ ಕೆಲವೇ ದಿನಗಳಲ್ಲಿ ಕಡಮೆ ಆಯಿತು ಎಂದು ಪುಟ್ಟಣ್ಣನವರ ಜೀವನ ಚರಿತ್ರೆ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ ಡಿ.ಬಿ.ಬಸವೇಗೌಡ ಬರೆದಿದ್ದಾರೆ.
ವಂಶವೃಕ್ಷದಲ್ಲಿ ಸಣ್ಣಪಾತ್ರದಲ್ಲಿ ಕಾಣಿಸಿಕೊಂಡ ನಟ ಕುಮಾರ್ ಈ ಚಿತ್ರದ ಮೂಲಕ ವಿಷ್ಣುವರ್ಧನ್ ಆದರು. ಪುಟ್ಟಣ್ಣ ಮತ್ತೊಂದಿಷ್ಟು ಸದಭಿರುಚಿಯ ಚಿತ್ರಗಳನ್ನು ಮಾಡುವ ಉತ್ಸಾಹವನ್ನು ಕಂಡುಕೊಂಡರು. ತರಾಸು ಅವರಿಗೆ ಓದುಗ ಜೊತೆಗೆ ನೋಡುಗ ಅಭಿಮಾನಿಗಳು ಸಿಕ್ಕರು.
ಚಿತ್ರದುರ್ಗದ ಸಾಹಿತಿ ಮತ್ತು ಚಿತ್ರದುರ್ಗ ಚಿತ್ರರಂಗಕ್ಕೆ ಅಪರೂಪದ ಕಾಣಿಕೆ ನೀಡಿದರು.
ಇದಾದ ನಂತರ ಹಂಸಗೀತೆ, ಕಲ್ಲರಳಿ ಹೂವಾಗಿ ಮತ್ತೂ ಕೆಲ ಚಿತ್ರಗಳು ಕೋಟೆಯಲ್ಲಿ ಚಿತ್ರೀಕರಣಗೊಂಡವು.

Monday, December 24, 2007

ಬಯಲು ಬನದ ಹಕ್ಕಿ


ಇದು ಎಂಬಿ, ಜಿಬಿ ಮೆಮೊರಿ ಕಾಲ. ಹನ್ನೆರಡಾರಲಿ ಎಷ್ಟು ಎಂಬುದು ಥಟ್ಟಂತ ಹೊಳೆಯುವುದಿಲ್ಲ. ನಾಲ್ಕು ಮಂದಿ ಸ್ನೇಹಿತರ ಮೊಬೈಲ್ ನಂಬರ್ ಕೇಳಿದರೆ, ಎರಡನ್ನು ತಡವರಿಸುತ್ತಾ ಹೇಳಿ, ಮೂರನೆಯದ್ದಕ್ಕೆ ಮೊಬೈಲ್‌ನಲ್ಲಿ ಹುಡುಕುವವರ ಕಾಲವಿದು. ಇಂಥವರ ನಡುವೆ ಸಾವಿರಾರು ಪದ್ಯಗಳನ್ನು ತಡವರಿಸದೆ, ನಿರರ್ಗಳವಾಗಿ ಹಾಡುವವರಿದ್ದಾರೆ. ಅಂಥ ಒಂದು ಅಚ್ಚರಿ ಪ್ರತಿಭೆ, ಮೌಖಿಕ ಪರಂಪರೆಯ ದನಿ ನಮ್ಮೂರಲ್ಲಿದೆ. ಅದು ಜಾನಪದ ಸಿರಿ. ಹೆಸರು ಸಿರಿಯಜ್ಜಿ!

ಸಿರಿಯಜ್ಜಿ!ಹೆಸರಿನಲ್ಲೇ ಸಿರಿ ಇದೆ. ಅದು ಜಾನಪದ ಸಿರಿ. ನಮ್ಮೊಡನೇ ಇರುವ ಮೌಖಿಕ ಪರಂಪರೆಯ ದನಿ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿ ಯಾರಿಗೆ ಗೊತ್ತಿದೆ? ಇಂಥ ಅಜ್ಞಾತವೆನ್ನಬಹುದಾದ ಹಳ್ಳಿಯಲ್ಲಿ ಹುಟ್ಟಿದಾಕೆ ಸಿರಿಯಜ್ಜಿ.
ಯಾವಾಗ ಹುಟ್ಟಿದ್ದೋ ಆಕೆಗೆ ಅದು ತಿಳಿಯದು. ಯಾವುದಾದರೂ ಒಂದು ಹಬ್ಬದ ಹಿಂದು ಮುಂದು, ಹುಣ್ಣಿಯ ಆಚೀಚೆ ಎಂದು ನೆನಪಿಸಿ ಕೊಂಡೂ ಹೇಳಲಾರಳು.
ಆದರೆ ಆಕೆ ದನಿ ಎತ್ತಿದರೆ ಸಾವಿರಾರು ಹಾಡುಗಳು ಅನುರಣಿಸುತ್ತವೆ. ಗೊಲ್ಲರಹಟ್ಟಿಯಲ್ಲಷ್ಟೇ ಅಲ್ಲ, ಜಾನಪದ ಜಗತ್ತಿನ ತುಂಬಾ.
ಅಕ್ಕಿ ಆರಿಸುವಾಗ, ಸುಗ್ಗಿ ಹಬ್ಬದಲ್ಲಿ, ಊರ ದೇವತೆಯ ಜಾತ್ರೆಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಜೋಗುಳ ಹಾಡುತ್ತಾ ಎಲ್ಲಾ ಸಂತಸದ, ಸಮಾಧಾನದ ಗಳಿಗೆಗೂ ಹಾಡುತ್ತಾ ಹಾಡುಗಳ ಸಾಮ್ರಾಜ್ಞಿ ಎನಿಸಿಕೊಂಡಾಕೆ ಈ ಸಿರಿಯಜ್ಜಿ.
ಎಲ್ಲಿ ಕಲಿತೆ? ಎಂದು ಕೇಳಿದ್ದೆವು
ಆಕೆ ಬಿಚ್ಚಿಟ್ಟಿದ್ದು ತನ್ನ ಹಿಂದಿದ್ದ ಮೌಖಿಕ ಸಂಸ್ಕೃತಿಯೊಂದರ ಕಥೆ. ಅದರ ಭಾಗವಾಗಿದ್ದ ತನ್ನಂತೆ ತಮ್ಮ ನಿತ್ಯದ ಬದುಕನ್ನು ಹಾಡುತ್ತಾ ಕಳೆದ ತನ್ನ ತಾಯಿ, ಅಜ್ಜಿಯರ, ತನ್ನೊಂದಿಗೆ ದನಿಗೂಡಿಸಿದ್ದ ಗೆಳತಿಯರ ಕಥೆ.
ಕುರಿ ಕಾಯುತ್ತಾ, ಮನೆಯ ಕೆಲಸ ಗಳನ್ನು ಮಾಡುತ್ತಾ, ತಾವೇ ಕಟ್ಟಿದ ಪದಗಳನ್ನು ಹಾಡಿದರು. ಮನೆಯಲ್ಲಿ ಹುಟ್ಟಿದ ಮಗುವಿನ ಸಂಭ್ರಮ, ಗಂಡನಿಲ್ಲದ ಬೇಸರದ ನೋವು ಎಲ್ಲವೂ ಅಲ್ಲಿ ಪದಗಳಾದವು. ಕಾಯುವ ದೇವರ ಆರಾಧಿಸಿದರು.
ಸಿರಿಯಜ್ಜಿ ಇಂಥ ಸಾವಿರ ಪದಗಳನ್ನು ಹಾಡುತ್ತಲೇ ಬಂದರು ಎಂಬುದು ಜಿಬಿ ಮೆಮೊರಿ ಕುರಿತು ಮಾತನಾಡುವ ನಮ್ಮ ಕಾಲಕ್ಕೆ ನಿಜಕ್ಕೂ ಅಚ್ಚರಿ.
ಮೂರು ಮೊಬೈಲ್ ನಂಬರಗಳನ್ನು ಹೇಳಿ, ನಾಲ್ಕನೆಯದಕ್ಕೆ ತಲೆ ಕೆರೆದುಕೊಳ್ಳುವ ನಾವು ಯಾವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇವೋ?
ಇಂಥ ಸಿರಿಯಜ್ಜಿ ಗೊಲ್ಲರ ಹಟ್ಟಿಯಿಂದ ಆಚೆ ಬಂದಿದ್ದು ಜನರಿಗೆ ಗೊತ್ತಾಗಿದ್ದು ಎರಡೂವರೆ ದಶಕಗಳ ಹಿಂದೆ ಇರಬೇಕು.
೧೯೮೦ರಲ್ಲಿ ಸಾಹಿತಿ ಹನೂರು ಕೃಷ್ಣಮೂರ್ತಿ ಸಿರಿಯಜ್ಜಿಯನ್ನು, ಆಕೆಯ ಪ್ರತಿಭೆಯನ್ನು ಜನರಿಗೆ ಪರಿಚಯಿಸಿದರು. ಅಷ್ಟೇ ಅಲ್ಲ ಆಕೆಯೊಂದಿಗೆ ಮೂರು ವರ್ಷಗಳ ಕಾಲ ಇದ್ದು ೧೦ ಸಾವಿರ ಪದ್ಯಗಳನ್ನು ಅಕ್ಷರರೂಪಕ್ಕೆ ಇಳಿಸಿದರು!
ಆಗಿನ ಮುಖ್ಯಮಂತ್ರಿ ಗುಂಡೂರಾವ್ ಸಿರಿಯಜ್ಜಿ ಗೌರವಿಸಿದರು. ಭಾರತದ ಜಾನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಎ.ಕೆ.ರಾಮಾನುಜನ್ ಅವರಿಗೂ ಈಕೆಯ ಪ್ರತಿಭೆಗೆ ತಲೆ ಬಾಗಿದ್ದರಂತೆ. ಅಷ್ಟೇ ಅಲ್ಲದ ಜಾನಪದ ಅಧ್ಯಯನದಲ್ಲಿ ಅಪೂರ್ವ ಸಾಧನೆ ಮಾಡಿದ ದಿವಂಗತ ಎಚ್.ಎಲ್.ನಾಗೇಗೌಡರು ಅನೇಕ ದಿನಗಳ ಕಾಲ ಕೂತು ಆಕೆಯ ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡಿದ್ದರು ಕೂಡ.
ಕಲ್ಲು ಕೋಟೆಯ ನಾಡಿನಲ್ಲಿ, ಕೋಗಿಲೆ ಈ ನಮ್ಮ ಸಿರಿಯಜ್ಜಿ.

Thursday, December 20, 2007

ನೀರಿನ ಹೋರಾಟ ಇಂದಿನಿಂದಲ್ಲ...

ಚಿತ್ರದುರ್ಗವನ್ನು ಬರದ ನಾಡೆಂದೇ ಎಲ್ಲರೂ ಗುರುತಿಸುತ್ತಾರೆ. ಅಲ್ಲೇನಿದೆ ಬರೀ ಕಲ್ಲು ಎಂದೇ ಮಾತು ಆರಂಭಿಸುತ್ತಾರೆ. ಆದರೆ ಅದೆಷ್ಟು ಮಂದಿಗೆ ಈ ಬರದ ಹಿಂದಿನ ಬವಣೆ ಗೊತ್ತಿದೆಯೋ? ಜಿಲ್ಲೆಗೆ ಸಿಗಬೇಕಾದ ನೀರಿಗಾಗಿ ಸದಾ ಕಾಲ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಚಿತ್ರದುರ್ಗದ್ದು. ಹಾಗೆ ಹೋರಾಡಿದ್ದಕ್ಕೆ ಫಲವಾದರೂ ಸಿಕ್ಕಿದ್ದರೆ ಚಿತ್ರದುರ್ಗಕ್ಕೆ ಬರದ ಹಣೆ ಪಟ್ಟಿ ಇರುತ್ತಿರಲಿಲ್ಲವೇನೋ? ಭದ್ರಾ ವಿಷಯದಲ್ಲಿ ದಶಕಗಳಿಂದ ಚಿತ್ರದುರ್ಗ ಹೋರಾಡುತ್ತಲೇ ಇರುವುದು ಕಣ್ಣಮುಂದೆ ಇದೇ.
ನೀರಿನ ವಿಷಯದಲ್ಲಿ ಚಿತ್ರದುರ್ಗಕ್ಕೆ ಹೀಗೆ ತಿರಸ್ಕಾರಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಇದೇ ಮೊದಲಲ್ಲ. ಹಾಗೆ ಮೊದಲ ಪೆಟ್ಟು ಅನುಭವಿಸಿದ್ದು ವಾಣಿ ವಿಲಾಸ ಸಾಗರ ನೀರಾವರಿ ಯೋಜನೆ. ಬ್ರಿಟಿಷ್ ಸರ್ಕಾರ ಈ ನೀರಾವರಿ ಯೋಜನೆಗೆ ಅಡ್ಡಿ ಮಾಡಿತ್ತು. ಇದು ೧೫೦ ವರ್ಷಗಳ ಹಿಂದಿನ ಜಲ ಪುರಾಣ.
ಜಿಲ್ಲೆಯ ರೈತರು ಆಗಲೇ ಬೇಸತ್ತಿದ್ದರು. ಬರದ ಬರದ ಮೇಲೆ ಬರೆ ಬಿದ್ದ ಹಾಗೆ ಬೀಳುತ್ತಲೇ ಇತ್ತು. ಅತ್ತ ಬ್ರಿಟಿಷ್ ಸರ್ಕಾರ ತೆರಿಗೆ ಕಂದಾಯದ ಹೊರೆ ಏರಿಸುತ್ತಿತ್ತು. ಆರ್ಥಿಕವಾಗಿ ಕುಗ್ಗಿ ಹೋಗಿದ್ದ ರೈತರು ಮೊದಲು ನಗರ ದಂಗೆ ಮಾಡಿದರು. ಅದರ ಬೆನ್ನ ಹಿಂದೆಯೇ ಚಿತ್ರದುರ್ಗದ ರೈತರೂ ದಂಗೆ ಎದ್ದರು. ಮೈಸೂರನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ಸರ್ಕಾರ ಇಲ್ಲದ ಚೌಕಾಶಿ ವರ್ತನೆಯಿಂದಾಗಿ ಇಡೀ ಮೈಸೂರು ರಾಜ್ಯದಲ್ಲಿ ನೀರಾವರಿ ಕ್ಷೇತ್ರ ಸೊರಗಿ ಹೋಗಿತ್ತು. ಹಾಗಂತ ಮೈಸೂರು ಅರಸರೇನು ಕೈ ಕಟ್ಟಿ ಕೂರಲಿಲ್ಲ. ಅದು ಯಾವುದೇ ನೀರಾವರಿ ಯೋಜನೆ ಸಿದ್ಧ ಮಾಡಿದರೂ ಬ್ರಿಟಿಷ್ ಸರ್ಕಾರ ಅದರ ಕೈಕಟ್ಟಿ ಹಾಕುತ್ತಿತ್ತು. ಇಂಥ ಪರಿಸ್ಥಿತಿಯಲ್ಲೇ ವಾಣಿವಿಲಾಸಸಾಗರ ಯೋಜನೆಯನ್ನು ಸಿದ್ಧವಾಗಿತ್ತು.
ಚಿತ್ರದುರ್ಗದ ಹಿತಕ್ಕಾಗಿ ಮೈಸೂರು ಅರಸರು ವಾಣಿವಿಲಾಸಸಾಗರ ಯೋಜನೆಯನ್ನು ಸಿದ್ಧ ಮಾಡಿದರು. ಬ್ರಿಟಿಷ್ ಸರ್ಕಾರ ಅನುಷ್ಠಾನಕ್ಕೆ ಅವಕಾಶ ಕೊಡಲೇ ಇಲ್ಲ.
ಚಿತ್ರದುರ್ಗ ಕ್ಷಾಮದಿಂದ ತತ್ತರಿಸುತ್ತಿತ್ತು. ಜನ ಊರು ಮರುಭೂಮಿಯಾಗುತ್ತದೆ ಎಂದು ಆತಂಕವಾಗುವಷ್ಟು ಕ್ಷಾಮ ಆವರಿಸಿತ್ತು. ೧೮೫೫ರಲ್ಲಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಸಿದ್ಧವಾಯಿತು. ಆದರೆ ಬ್ರಿಟಿಷ್ ಸರ್ಕಾರ ತಡೆಯಿತು. ಯೋಜನೆ ಎಷ್ಟು ಅಗತ್ಯವಿದೆ ಎಂಬುದು ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆಯಾಗಿದ್ದರೂ ಅಡ್ಡಿ ಉಂಟು ಮಾಡಿತು. ೧೮೯೨ರಲ್ಲಿ ಮತ್ತೆ ಪ್ರಯತ್ನ. ಯಥಾ ಪ್ರಕಾರ ಬ್ರಿಟಿಷ್ ಸರ್ಕಾರದ ಅಡ್ಡಿ.
ಬ್ರಿಟಿಷರಿಗೇಕೆ ಚಿತ್ರದುರ್ಗದ ಮೇಲೆ ಸಿಟ್ಟು? ಅದು ಸಿಟ್ಟಿನ ಕಾರಣವಲ್ಲ, ಮದ್ರಾಸ್ ಪ್ರಾಂತ್ಯದ ನೀರಾವರಿ ಯೋಜನೆ ಎಲ್ಲ ಅಡ್ಡಿಗಳಿಗೆ ಕಾರಣವಾಗಿತ್ತು. ವಾಣಿ ವಿಲಾಸ ಸಾಗರ ಯೋಜನೆ ಅಸ್ತಿತ್ವಕ್ಕೆ ಬಂದರೆ ಮದ್ರಾಸಿನ ನೀರಾವರಿ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವಾಣಿ ವಿಲಾಸ ಸಾಗರ ಯೋಜನೆಯನ್ನು ಬ್ರಿಟಿಷರು ತಡೆಯುತ್ತಲೇ ಬಂದರು.
ಯಾವ ರೀತಿಯಲ್ಲೂ ಇದನ್ನು ಪ್ರಶ್ನಿಸುವ ಹಾಗೆ ಮಾಡಿ ಬಿಟ್ಟರು. ಯಾಕೆಂದರೆ ಮೈಸೂರು ಆಗ ಮದ್ರಾಸ್ ಸರ್ಕಾರದ ಆಧೀನ. ಹಾಗಾಗಿ ಮೈಸೂರಿನಂಥ ಊಳಿಗ ಮಾನ್ಯ ಸರ್ಕಾರ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಜಲ ಹಕ್ಕುಗಳು ಅನ್ವಯವಾಗುವುದಿಲ್ಲ. ಪರಮಾಧಿಕಾರ ಮತ್ತು ಮೈಸೂರಿನ ನಡುವೆ ಇರುವುದು ಊಳಿಗಮಾನ್ಯರೆಂಬ ಸಂಬಂಧ ಎಂದು ಕಡ್ಡಿ ಮುರಿದಂತೆ ಯೋಜನೆಯನ್ನು ತಡೆದು ಬಿಟ್ಟರು.
ಇದಾಗಿ ಐದಾರು ವರ್ಷಕ್ಕೆ ಅಂದರೆ ೧೮೯೮ರಲ್ಲಿ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತು. ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ಯೋಜನೆ ಅಸ್ತಿತ್ವಕ್ಕೆ ಬಂತು. ಆದರೆ ಇಷ್ಟಾಗುವ ಹೊತ್ತಿಗೆ ಜಿಲ್ಲೆಯ ಜನ ಬೇಸತ್ತಿದ್ದರು. ಸಿಡಿದಿದ್ದರು. ತಮ್ಮ ಆಕ್ರೋಶವನ್ನೆಲ್ಲಾ ಹೋರಾಟವಾಗಿಸಿದ್ದರು.
ಆದರೆ ಬೆಳೆಯುತ್ತಿರುವ ಜಿಲ್ಲೆಗೆ ವಾಣಿ ವಿಲಾಸವೊಂದೇ ಸಾಲುತ್ತದೆಯೇ? ಭದ್ರಾ ಮೇಲ್ದಂಡೆಗಾಗಿ ಹೋರಾಟ ಮುಂದುವರಿದೇ ಇದೆ. ಅಂದು ಬ್ರಿಟಿಷರು ನಮ್ಮ ಬಗ್ಗೆ ತೋರಿದ ನಿರ್ಲಕ್ಷ್ಯವನ್ನು ಇಂದು ನಮ್ಮವರೇ ತೋರುತ್ತಿದ್ದಾರೆ!

ನಮ್ಮ ಮೇಲೆ ಪ್ರೀತಿ, ಇರಲಿ ಸದಾ ಇದೇ ರೀತಿ


ಆತಂಕ ವ್ಯಕ್ತಪಡಿಸಿದ ಶಶಿ,
ಉತ್ಸಾಹದಿಂದ ಪ್ರತ್ರಿಕ್ರಿಯಿಸಿದ ಮಾಲಾ,
ಶಶಿಯ ಆತಂಕಕ್ಕೆ ಕಾರಣ ಹುಡುಕಿದ
ಗವಿಯಪ್ಪ ಗರುಡಾಪುರ,
ಮತ್ತೊಂದು ಆತಂಕವನ್ನು
ಎದುರಿಟ್ಟ ಕಿನ್ನಿದಾರು,
ಬೆನ್ನು ತಟ್ಟಿದ ಅಗ್ನಿಭೂತಿ,
ನಿಮಗೆಲ್ಲಾ ಈಗಲೇ ಥ್ಯಾಂಕ್ಸ್ ಹೇಳಿಬಿಡಬೇಕು ಎನ್ನುವಷ್ಟು ಸಂತೋಷವಾಗಿದೆ. ಹೇಳಿಬಿಟ್ಟರೆ? ಊಹೂಂ ನೀವಿನ್ನೂ ಈ ಬ್ಲಾಗ್ ನೋಡುತ್ತಿರಬೇಕು. ದುರ್ಗದವರೇ ಆದರೆ ನೀವೇ ಇಲ್ಲಿ ಬರೆಯಬೇಕು. ಇಂಥದ್ದೊಂದು ನಿರೀಕ್ಷೆಯನ್ನು ದುರ್ಗದ ಹುಡುಗರಾದ ನಾವು ಇಟ್ಟುಕೊಂಡಿದ್ದೇವೆ.
ಶಶಿ ಚಿತ್ರದುರ್ಗದವರೇ ಆದರೆ ಅವರ ‘ನಾವೂ ಬರುತ್ತೇವೆ ’ ಅನ್ನೋ ಮಾತನ್ನು ತಿದ್ದಬೇಕೆಂದುಕೊಳ್ಳುತ್ತೇನೆ. ನಾವು ಬರುವವರನ್ನು ಸ್ವಾಗತಿಸುವವರು. ಅದಕ್ಕೆ ಬೇಕಾದ ಸಿದ್ಧತೆ ಮಾಡಬೇಕಾದವರು. ನಾವೂ ಇರುತ್ತೇವೆ, ನೀವು ಬನ್ನಿ ಅಂದರೆ ಚೆನ್ನಾಗಿರುತ್ತೆ. ಏನಂತೀರಾ ಶಶಿ?
ಮಾಲಜಿ, ಚಿತ್ರ-ದುರ್ಗ ಅನ್ನೋ ಹೆಸರಿನ ನಿಮ್ಮ ಬ್ಲಾಗ್ ನೋಡಿ, ನೀವು ಚಿತ್ರದುರ್ಗದವರೇ ಅನ್ನೋ ಕಾರಣಕ್ಕೆ ಹಿಂದೂ ಮುಂದೂ ಏನು ಹೇಳದೆ, ಪ್ಲೀಸ್ ವಿಸಿಟ್ ಅಂತಾ ಒಂದೇ ರಿಕ್ವೆಸ್ಟ್ ಇಟ್ಟಿದ್ದೆವು. ನೀವು ನೋಡಿ ಮೆಚ್ಚಿದ್ದೀರ. ನೀವು ಚಿತ್ರದುರ್ಗದವರೇ ಆದರೆ, ನಿಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿ. ನಮ್ಮ ಜೊತೆಗಿರಿ.
ತರಲೇಗೆ ಹೇಳಿದ್ದರೂ, ಲವಲವಿಕೆ ಮೂಡಿಸುವುದಕ್ಕೆ ಹೇಳಿದ ಮಾತು ಗವಿಯಪ್ಪನವರದು ಅಂತಾ ನಮ್ಮ ಭಾವನೆ. ಖುಷಿ ಆಗಿದೆ. ಅವರಿಗೆ ನಮ್ಮ ಸಮಾಧಾನ; ಎಂಥ ದಾಳಿಗೂ ಹೆದರದ ಏಳು ಸುತ್ತಿನ ಕೋಟೆಯ ಊರು ದುರ್ಗ. ಹಾಗಾಗಿ ನಮಗೆ ಯಾರ ಭಯವೂ ಇಲ್ಲ.
ಹುಲ್ಲು ಹುಟ್ಟದಿದ್ದರೇನಂತೆ ಕಿನ್ನಿದಾರು, ಹುಲ್ಲು ಹುಟ್ಟಿಸೇ ತೀರುತ್ತೇವೆ ಅನ್ನೋ ಛಲ ಬಿತ್ತುತ್ತಾರೆ ಸಾಹಿತಿಗಳು, ವಿಚಾರವಂತರು. ಹುಲ್ಲು ಬೆಳೆದೇ ಬೆಳೆಯುತ್ತೇವೆ ಅನ್ನೋ ಹಂಬಲ ತುಂಬುತ್ತಾರೆ. ಅಷ್ಟು ಸಾಕು ಸ್ವಾಮಿ. ಭದ್ರಾ ಮೇಲ್ದಂಡೆಗೆ ನಾವು ಇಷ್ಟೂ ದಿನ ಹೋರಾಡ್ತಾ ಇದ್ದೀವಿ. ಇದಕ್ಕಿಂತ ಬೇಕಾ? ಚಿತ್ರದುರ್ಗದ ಗತಿ ಓನ್ಲೀ ಪ್ರಗತಿ. ಓಕೆ.
ಅಗ್ನಿ ಭೂತಿ ಇಟ್ಟೀರಿ ನಮ್ಮ ಮೇಲೆ ಪ್ರೀತಿ ಸದಾ ಇದೇ ರೀತಿ.

Wednesday, December 19, 2007

ನಾಯಕರ ನಾಡಿನಲ್ಲಿ ಕನ್ನಡದ ಕಾಯಕನಮ್ಮ ಪ್ರಯತ್ನಕ್ಕೆ ನಿಧಾನವಾಗಿಯಾದರೂ ಪ್ರತಿಕ್ರಿಯೆ ದೊರೆಯುತ್ತಿವೆ. ಮಿತ್ರ ವಿಜಯ್ ಪ್ರತಿಕ್ರಿಯೆ ನೀಡುತ್ತಾ , ಬರದ ನಾಡು ಚಿತ್ರದುರ್ಗದಲ್ಲಿ ಸಾಹಿತ್ಯ ಸಮೃದ್ಧಿ ಎನ್ನುವ ಮಾತು ಆಡಿದ್ದಾರೆ. ವರ್ಷವಿಡೀ ನಮ್ಮಿಂದ ಏನನ್ನೂ ಕೊಡಲು ಸಾಧ್ಯ? ಅನ್ನುವ ಪ್ರಶ್ನೆ ಇಟ್ಟುಕೊಂಡೇ ಏನೂ ಸಾಧ್ಯವೋ ಅದೆಲ್ಲವನ್ನೂ ಕೊಡೋಣ, ಎಂದೇ ನೀರಿಗೆ ಇಳಿದಿದ್ದೇವೆ. ವಿಜಯ್ ಬರದ ಸೀಮೆ ಎಂದು ಪ್ರಸ್ತಾಪಿಸಿದ ಪ್ರತಿಕ್ರಿಯೆ ಓದಿದಾಗ ನೆನಪಾಗಿದ್ದು ಇತ್ತೀಚೆಗೆ ಚಿತ್ರದುರ್ಗದ ಪ್ರಜಾವಾಣಿ ವರದಿಗಾರ ಪ್ರಕಾಶ್ ಕುಗ್ವೆ ಬರೆದ ವಿಶೇಷ ವರದಿ. ಅದರ ಪೂರ್ಣ ಪಾಠ ಇಲ್ಲಿದೆ..

ಐತಿಹಾಸಿಕ ನಗರ ಚಿತ್ರದುರ್ಗಕ್ಕೆ ಕೊನೆಗೂ ಸಾಹಿತ್ಯ ಸಮ್ಮೇಳನ ಆತಿಥ್ಯದ ಅದೃಷ್ಟ ಒಲಿದಿದೆ. ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಷ್ಟೇ ಅಲ್ಲ ಸಾಹಿತ್ಯ, ಸಂಶೋಧನೆಯಲ್ಲೂ ಹೆಸರಾಗಿರುವ ಚಿತ್ರದುರ್ಗಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತ ಮಹೋತ್ಸವ ಆಚರಣೆಯ ಅವಕಾಶ ಸಿಕ್ಕಿರುವುದು ಜನರಲ್ಲಿ ಸಂಭ್ರಮ ಹೆಚ್ಚಿಸಿದೆ.
ಬರದ ಸೀಮೆ ಎಂಬ ಶಾಶ್ವತ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಜಿಲ್ಲೆ ಸಾಹಿತ್ಯ ಕೃಷಿಯಲ್ಲಿ ಸಮೃದ್ಧ ಬೆಳೆಯನ್ನೇ ಬೆಳೆಯುತ್ತಾ ಬಂದಿದೆ. ಇಷ್ಟಾದರೂ ಅಖಲ ಭಾರತ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆದಿರಲಿಲ್ಲ. ನಾಡಿನ ವಿವಿಧ ಭಾಗಗಳಲ್ಲಿ ೭೪ ಸಾಹಿತ್ಯ ಸಮ್ಮೇಳನಗಳು ನಡೆದರೂ ಚಿತ್ರದುರ್ಗ ಮಾತ್ರ ಶಾಪಗ್ರಸ್ತವಾಗಿತ್ತು.
3 ವರ್ಷದಿಂದ ಕಾರ್‍ಯ ಕಾರಿ ಸಮಿತಿ ಸಭೆಯನ್ನೇ ಕರೆಯದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂಘಟನೆಯನ್ನೇ ಮರೆತ ಇಲ್ಲಿನ ಕನ್ನಡಪರ ಸಂಘಟನೆಗಳಿಂದಾಗಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಾಧ್ಯವೇ ಎಂಬ ಅನುಮಾನ ಒಂದೆಡೆ ಕಾಯುತ್ತಿದೆ.
ಬಹುವರ್ಷಗಳ ಬೇಡಿಕೆ
ಚಿತ್ರರ್ದುಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ವೀರೇಶ್, ತಾವು ಅಧ್ಯಕ್ಷರಾದಾಗಿನಿಂದಲೂ ಈ ಸಂಬಂಧ ರಾಜ್ಯ ಘಟಕದ ಅಧ್ಯಕ್ಷರನ್ನು ಪ್ರತಿ ಸಮ್ಮೇಳನದಲ್ಲಿ ಒತ್ತಾಯಿಸುತ್ತಾ ಬಂದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ೭೩ನೇ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ನಡೆಸುವಂತೆ ಒತ್ತಡ ಹೇರಿದ್ದರು. ರಾಮನಗರ, ಉಡುಪಿ, ಕೋಲಾರಗಳಿಂದಲೂ ಒತ್ತಡ ತೀವ್ರವಾದಾಗ ಕನ್ನಡ ಸಾಹಿತ್ಯ ಪರಿಷತ್ತು ಈ ಬಗೆಗಿನ ನಿರ್ಧಾರವನ್ನು ಕೆಲ ದಿವಸಗಳ ಕಾಲ ಮುಂದೂಡಿತ್ತು.
ನಂತರ ಚಿಕ್ಕಮಗಳೂರಿನಲ್ಲಿ ನಡೆದ ಕೇಂದ್ರ ಪರಿಷತ್ತಿನ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ಉಡುಪಿ-ಚಿತ್ರದುರ್ಗಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಕೊನೆಗೂ ಒಮ್ಮತದ ನಿರ್ಧಾರ ಸಾಧ್ಯವಾಗದಿದ್ದಾಗ ಗುಪ್ತ ಮತದಾನ ನಡೆದು ೭೪ರ ಸಮ್ಮೇಳನ ನಡೆಸುವ ಅವಕಾಶ ಉಡುಪಿ ಪಾಲಾಯಿತು.
ಈ ಮಧ್ಯೆ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ೭೫ರ ಅವಕಾಶ ನಮ್ಮ ಜಿಲ್ಲೆಗೆ ನೀಡಿ ಎಂದು ಚಂಪಾ ಅವರಿಗೆ ಮನವಿ ಮಾಡಿದ್ದರು.
ದುರ್ಗದ ಸೊಗಸು
ಅಶೋಕನ ಶಿಲಾಶಾಸನ, ಪಾಳೇಗಾರರ ಏಳು ಸುತ್ತಿನ ಕೋಟೆ, ರಾಷ್ಟ್ರಕವಿ ಕುವೆಂಪು ಗುರುಗಳಾದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಹಾಗೆಯೇ ತರಾಸು, ಬೆಳೆಗೆರೆ ಕೃಷ್ಣಶಾಸ್ತ್ರಿಗಳು, ಕನ್ನಡ ಚಿತ್ರರಂಗದ ನಾಗೇಂದ್ರರಾವ್, ಕರ್ನಾಟಕದ ಏಕೀಕರಣದ ಶಿಲ್ಪಿ ಎಸ್.ನಿಜಲಿಂಗಪ್ಪ, ಮುರುಘಾಮಠ, ಸಿರಿಗೆರೆ ಮಠ ಸೇರಿದಂತೆ ವಿವಿಧ ಜಾತಿ- ಧರ್ಮದ ೫೦ಕ್ಕೂ ಹೆಚ್ಚು ಮಠಗಳಿರುವುದು ಜಿಲ್ಲೆಯ ಹೆಚ್ಚುಗಾರಿಕೆ.
ಈ ಮಹತ್ವಗಳಿಂದಾಗಿ ಸಮ್ಮೇಳನದ ಅಮೃತ ಮಹೋತ್ಸವಕ್ಕೆ ಚಿತ್ರದುರ್ಗ ಹೇಳಿ ಮಾಡಿಸಿದ ಊರು ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯ. ಆದರೆ ಕಥೆಗಾರ ರಾಘವೇಂದ್ರ ಪಾಟಿಲ, ‘ಸಮ್ಮೇಳನವನ್ನು ಸ್ವಾಗತಿಸುತ್ತೇನೆ. ಆದರೆ ನಿಷ್ಕ್ರಿಯವಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂಘಟನೆ ಸಾಧ್ಯವೇ ಎನ್ನುವ ಭಯ ಕಾಡುತ್ತಿದೆ’ ಎನ್ನುತ್ತಾರೆ.
‘ಇಲ್ಲಿ ಇದುವರೆಗೂ ಸಮ್ಮೇಳನ ನಡೆಯುವುದು ವಿಷಾದಕರ. ಇಲ್ಲಿನ ಜನ ಜೇಬಿನಿಂದ ಬಡವರಾಗಿರಬಹುದು. ಹೃದಯದಿಂದ ಶ್ರೀಮಂತರಿದ್ದಾರೆ’ ಎಂದು ಅಭಿಪ್ರಾಯ ಪಡುತ್ತಾರೆ ಸಾಹಿತ್ಯದ ಪರಿಚಾರಕ ವೆಂಕಣ್ಣಾಚಾರ್.
‘ಇದು ಜಿಲ್ಲೆಗೆ ಸಂದ ಗೌರವ. ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಹೆಚ್ಚು ಅರ್ಥಪೂರ್ಣವಾಗಿ ಸಮ್ಮೇಳನ ನಡೆಸುವ ಅವಕಾಶಗಲು ಇಲ್ಲಿವೆ ’ ಎನ್ನುವ ಅಭಿಪ್ರಾಯ ಶಿವಮೂರ್ತಿ ಮುರುಘಾ ಶರಣರು, ಸಂಶೋಧಕರ ಬಿ.ರಾಜಶೇಖರಪ್ಪ, ಹಾಗೂ ಕವಿ ಚಂದ್ರಶೇಖರ ತಾಳ್ಯ ಅವರದ್ದು.
‘ಸಾಹಿತ್ಯ ಸಮ್ಮೇಳನ ಇಲ್ಲಿ ನಡೆಯುವುದರಿಂದ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರಿನ ಗಡಿಭಾಗದ ಕನ್ನಡಿಗರನ್ನು ಜಾಗೃತಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಪರಸ್ಪರ ಸಹಕಾರರಿಂದ ಸಮ್ಮೇಳನ ಯಶಸ್ವಿಗೊಳಿಸುತ್ತೇವೆ’ ಎನ್ನುವ ಆತ್ಮವಿಶ್ವಾಸ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಎಂ.ವೀರೇಶ್ ಅವರದ್ದು.

Monday, December 17, 2007

ಹೀಗೊಂದು ಸುದ್ದಿ ಬಂದಿದೆ..

ಚಿತ್ರದುರ್ಗದ ಸಮ್ಮೇಳನ ಅತ್ಯಂತ ವಿಶೇಷವಾದ ಸಮ್ಮೇಳನವಾಗುತ್ತದೆ ಎಂದು ಜಿಲ್ಲೆಯ ಲೇಖಕರು, ವಿಚಾರವಂತರು ಮಾತಾಡಿಕೊಳ್ಳಲಾರಂಭಿಸಿದ್ದಾರೆ. ಜಿಲ್ಲೆಯನ್ನು ಬಲ್ಲವರು ಮಾತು ಇದೆ. ಅದಕ್ಕೆ ಕಾರಣ ಶರಣಿರಿರುವ ಊರು. ಹಾಗಾಗಿ ಸಮ್ಮೇಳನ ಮಾದರಿ ಸಮ್ಮೇಳನವಾಗುತ್ತದೆ. ಅವಿಸ್ಮರಣೀಯವಾಗುತ್ತದೆ ಎಂಬ ಮಾತುಗಳು ಈಗಾಗಲೇ ವಿನಿಮಯವಾಗುತ್ತಿದೆ. ಆ ಮಟ್ಟಿನ ಶಕ್ತಿ ಅವರಿಗಿದೆ ಅನ್ನುವುದರಲ್ಲಿ ಸಂಶಯವೇ ಇಲ್ಲ. ನಮಗೂ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಎಂದಾಗ ನೆನಪಾಗಿದ್ದು ಮೊದಲು ಶರಣರೇ. ಆದರೆ ಈಗ ಬಂದಿರುವ ಸುದ್ದಿ ದಿಗಿಲು ಹುಟ್ಟಿಸುವಂಥದ್ದು. "ಅವಿಸ್ಮರಣೀಯವಾಗಬೇಕಿರುವ ಸಮ್ಮೇಳನದ ಅಮೃತಮಹೋತ್ಸವ ಶರಣ ಸಂಸ್ಕೃತಿಯ ಜೊತೆಗೆ ನಡೆದು ಹೋಗುತ್ತದೆ".ಕೇಳಿದ ಮಾತು ಸುಳ್ಳಾಗಲಿ ಎಂದು ದುರ್ಗದ ಹುಡುಗರು ಪ್ರಾಥರ್ಿಸುತ್ತಿದ್ದೇವೆ. ಇದು ಶರಣರ ಯೋಚನೆಯಾಗಿರಲಿಕ್ಕಿಲ್ಲ ಎಂದು ಲೆಕ್ಕ ಹಾಕಿಕೊಳ್ಳುತ್ತಿದ್ದೇವೆ. ಬಹುಶಃ ಯಾರೂ ಇದನ್ನು ಹೈಜಾಕ್ ಮಾಡುವುದಿಲ್ಲ ಎಂದು ಭಾವಿಸಿರುತ್ತೇವೆ. ಆಶಿಸುತ್ತೇವೆ.

ಸಂಭ್ರಮಕ್ಕೆ ಕಾರಣವಿಷ್ಟೆ...ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುವ ಸುದ್ದಿ ದುರ್ಗದ ಹುಡುಗರಿಗೆ ಸಂಭ್ರಮ ಸಂಗತಿ. ಕಾರಣ ಇಷ್ಟೆ. ಚಿತ್ರದುರ್ಗ ಅನೇಕ ಬಾರಿ ಅವಗಣನೆಗೆ ಗುರಿಯಾದ ಜಿಲ್ಲೆ. ಬರ, ಬರಡು, ಬಂಡೆ ಎಂಬ ರೂಪಕಗಳ ಮೂಲಕವೇ ಚಿತ್ರದುರ್ಗವನ್ನು ಚಿತ್ರಿಸುವ ಪರಿಪಾಠ ಬಹಳ ಕಾಲದಿಂದ ಬೆಳೆದಿದೆ. ಐತಿಹಾಸಿಕ ಕೋಟೆ, ಸುಂದರ ಗಿರಿಧಾಮ (ಜೋಗಿಮಟ್ಟಿ), ಅಶೋಕನ ಶಾಸನ, ಗುಹಾಂತರ ಚಿತ್ರಕಲೆ... ಹೀಗೆ ನಾನಾ ಕಾರಣಗಳಿಂದ ಮಹತ್ವ ಪಡೆದ ಜಿಲ್ಲೆಯಾದರೂ ಪ್ರವಾಸೋದ್ಯಮ ಇಲಾಖೆಗೆ ಇದು ಶೂನ್ಯ! ಅಕಾಡೆಮಿಗಳ ವಾಷರ್ಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲೂ ಮನ್ನಣೆ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲೇ ಬೇಕು ಎಂದು ಪಟ್ಟು ಹಿಡಿದರೆ ಅದು ಬೆಂಗಳೂರಿಗರನ್ನು ಮುಟ್ಟುವುದೇ ಇಲ್ಲ. ಇಂತಹ ಹಲವು ಲೋಪಗಳಿಗೆ ರಾಜಕಾರಣ ಕಾರಣ. ಚಿತ್ರದುರ್ಗ ಜಿಲ್ಲೆ ಇಡೀ ಜನಸಮುದಾಯವನ್ನು ಪ್ರತಿನಿಧಿಸುವ ಒಬ್ಬ ರಾಜಕಾರಣಿ ಇಲ್ಲ. ಮೂರು ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದರೂ ಕನಿಷ್ಠ ಮೂರು ನಿಮಿಷಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಸನ್ಮಾನ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದ್ದು ಯಾರಿಗೂ ನೆನಪಿಲ್ಲ. ಯಾಕೆ ನೆನಪಿಲ್ಲ? ಸನ್ಮಾನ್ಯರು ಮಾತನಾಡಿದ್ದರೆ ತಾನೆ? ಉಳಿದ ಶಾಸಕರ ಪಾಡು ಇದ್ದಕ್ಕಿಂತ ಭಿನ್ನವೇನಲ್ಲ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವ್ಯಕ್ತಿತ್ವ ಎಚ್. ಆಂಜನೇಯ. ಮೊದಲು ಕಾಂಗ್ರೆಸ್, ಜೆಡಿಯು, ನಂತರ ಜೆಡಿಎಸ್ ಈಗ ಎಂ.ಪಿ ಪ್ರಕಾಶ್ ಬಣ - ಹೀಗೆ ಹೆಸರಿಗೆ ತಕ್ಕಂತೆ ಒಂದೆಡೆ ನಿಲ್ಲದೆ ಹಾರುವ ಆಂಜನೇಯ ಮಾತನಾಡಿದರೂ ಮಹತ್ವ ದೊರಕದು.ಕನರ್ಾಟಕ ರಾಜಕೀಯ ಇತಿಹಾಸದಲ್ಲಿ ಚಿತ್ರದುರ್ಗವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ. ಆದರೆ ಅವರು ತಮ್ಮ ಅಧಿಕಾರ ವೇಳೆ ಚಿತ್ರದುರ್ಗಕ್ಕೆ ನೀಡಿದ ಕೊಡುಗೆ ಏನು? ಹಿರಿಯ ಪತ್ರಕರ್ತ ಡಾ. ಬಿ.ವಿ ವೈಕುಂಠರಾಜು ಮಾತಿನಲ್ಲೆ ಹೇಳುವುದಾದರೆ - ಏನೂ ಇಲ್ಲ.ಅದು 1998ರ ಜೂನ್. ಐತಿಹಾಸಿಕ ಕೋಟೆ ಆವರಣದಲ್ಲಿ ದುಗರ್ೋತ್ಸವ ಸಂಭ್ರಮದಿಂದ ನಡೆಯುತ್ತಿತ್ತು. ಚಿತ್ರದುರ್ಗ ಅಭಿವೃದ್ಧಿ ಕುರಿತ ಗೋಷ್ಠಿಯೊಂದರ ಅಧ್ಯಕ್ಷತೆವಹಿಸಬೇಕಿದ್ದವರು ನಿಯಲಿಂಗಪ್ಪ. ಅನಾರೋಗ್ಯ ಕಾರಣ ಸಭೆಗೆ ಬರಲಾಗಲಿಲ್ಲ. ಆದರೆ ಆ ಹೊತ್ತಿಗಾಗಲೇ ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ಸಭೆಯ ಅಧ್ಯಕ್ಷತೆ ಜವಾಬ್ದಾರಿ ವೈಕುಂಠರಾಜು ಅವರ ಮೇಲೆ ಬಿತ್ತು. ತಮ್ಮ ಮಾತುಗಳಲ್ಲಿ ಅವರು ಮೊದಲು ಟೀಕಿಸದ್ದು ನಿಜಲಿಂಗಪ್ಪನವರನ್ನೇ. "ಅವರು ಪ್ರಾಮಾಣಿಕರು. ಆದರೆ ಪ್ರಾಮಾಣಿಕತೆಯೊಂದಿದ್ದರೆ ಸಾಲದು. ಕೆಲಸ ಮಾಡಬೇಕು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಮನಸು ಮಾಡಿದ್ದರೆ ಭದ್ರಾ ನೀರು ಚಿತ್ರದುರ್ಗಕ್ಕೆ ಹರಿಸಬಹುದಿತ್ತು. ಆಗ ಏನು ಮಾಡದವರು ಈಗ ಉಪವಾಸ ಕೂರ್ತಾರಂತೆ. ಇವರ ಮಾತನ್ನು ಈಗ ಯಾರು ಕೇಳ್ತಾರೆ", ಎಂದರು.ಅದಿರಲಿ. ಇಂದಿನ ರಾಜಕಾರಣಿಗಳು ಮಾಡುತ್ತಿರುವುದಾದರೂ ಏನು? ಅವರೆಲ್ಲಾ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ಇಂದಿಗೂ ಹೋರಾಟ ನಡೆಯುತ್ತಿರುವುದು ಕೆಲ ಪ್ರಗತಿಪರ ಚಿಂತಕರು, ದಲಿತ ಸಂಘಟನೆ ಹಾಗೂ ಕೆಲ ಉತ್ಸಾಹಿ, ಬದ್ಧತೆಯುಳ್ಳ ಪತ್ರಕರ್ತರ ಕಾರಣದಿಂದ.ಇಂತಹ ಬೇಸರಗಳ ಮಧ್ಯೆ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದೆ ಎಂದರೆ ದುರ್ಗದ ಕೂಗಿಗೆ ಒಂದು ವೇದಿಕೆ ಸಿಗುತ್ತದೆ. ಆ ಮೂಲಕ ಬೇಡಿಕೆಗಳಿಗೆ ಒತ್ತು ನೀಡಬಹುದು. ಕೆಲದಿನಗಳ ಮಟ್ಟಿಗಾದರೂ ಮಾಧ್ಯಮಗಳ ಬಾಯಲ್ಲಿ ಚಿತ್ರದುರ್ಗ ನಲಿದಾಡುತ್ತದೆ. ಹಿಂಡುಗಟ್ಟಲೆ ಸಾಹಿತಿಗಳು, ಪತ್ರಕರ್ತರು ದುರ್ಗಕ್ಕೆ ಧಾವಿಸುತ್ತಾರೆ. ಒಂದಿಷ್ಟು ಹರಟುತ್ತಾರೆ.. ಈ ಎಲ್ಲಾ ಕಾರಣಗಳಿಗೆ ದುರ್ಗದ ಹುಡುಗರಾದ ನಾವು ಸಂಭ್ರಮ ಪಡುತ್ತೇವೆ.
- ಬೀರೇಶ್ ಬಾರಣ್ಣನವರ್

Saturday, December 15, 2007

ಹುರ್ರೇ... ನಮ್ಮೂರಲ್ಲಿ ಅಕ್ಷರ ಜಾತ್ರೆ...


ಕಡೆಗೂ ನಮ್ಮೂರಲ್ಲಿ ಅಕ್ಷರ ಜಾತ್ರೆ ಅಂತಾ ಘೋಷಣೆಯಾಯಿತು. ಸಾಹಿತ್ಯ ಸಮ್ಮೇಳನದ ೭೫ ವರ್ಷ- ಅಂದರೆ ಅಮೃತ ಮಹೋತ್ಸವ ನಮ್ಮೂರಲ್ಲಿ ನಡೆಯುತ್ತಿದೆ ಅನ್ನೋದು ಹೆಚ್ಚು ಸಂತೋಷ ಉಂಟು ಮಾಡಿರುವ ಸಂಗತಿ.
ನಮಗೆ ಗೊತ್ತಿದ್ದ ಹಾಗೆ ಮೂರು ವರ್ಷಗಳಿಂದ ನಡೆದ ಲಾಬಿ ನಮ್ಮೂರಲ್ಲಿ ಆಗಬೇಕಿದ್ದ ಸಾಹಿತ್ಯ ಸಮ್ಮೇಳನವನ್ನು ತಪ್ಪಿಸಿದ್ದವು. ಶಿವಮೂರ್ತಿ ಶರಣರು ೭೫ನೇ ಸಮ್ಮೇಳನ ನಮ್ಮಲ್ಲೇ ಆಗಬೇಕೆಂದು ಮನವಿ ಮಾಡಿದ್ದಕ್ಕೋ ಏನೋ ನಮ್ಮೂರಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಒಟ್ಟಾರೆ ಉಡುಪಿ ಕೃಷ್ಣನ ಸನ್ನಿಧಾನದಲ್ಲಿ ನ್ಯಾಯ ಸಿಕ್ಕ ಹಾಗಾಗಿದೆ.
ಸಾಂಸ್ಕೃತಿಕವಾಗಿ ರಾಜ್ಯದ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡ ಊರು ಚಿತ್ರದುರ್ಗ. ಇತಿಹಾಸಕಾರರನ್ನು ಸೆಳೆದ ಪ್ರಾಗೈತಿಹಾಸಿಕ ಕೇಂದ್ರ.
ಚಿತ್ರದುರ್ಗ ಎಂದರೆ ಏನೆಲ್ಲಾ ನೆನಪು ಮಾಡಿಕೊಳ್ಳಬಹುದೋ ಅದೆಲ್ಲವೂ ಇದೆ. ಸಾರಸ್ವತ ಲೋಕಕ್ಕೆ ತರಾಸು ಕೊಟ್ಟ ಕೊಡುಗೆ ಕಡಮೆಯೇ? ಅಕ್ಷರಗೊತ್ತಿಲ್ಲದವರ ಸಾಹಿತ್ಯವನ್ನು ಹಾಡಿ ನಾಡಿನುದ್ದಕ್ಕೂ ಹರಡಿದ ಸಿರಿಯಜ್ಜಿಯಂಥವರು ಕಡಮೆಯೋ? ಸಿದ್ಧರು ಇದ್ದ ನಾಡು, ಸೌಹಾರ್ದದ ಬೀಡು. ರಾಜ್ಯದ ಮಧ್ಯಭಾಗದಲ್ಲಿದ್ದು, ತನ್ನ ಪಾಡಿಗೆ ತಾನಾಗಿರುವ ಚಿತ್ರದುರ್ಗ ಹೃದಯದಂತೆ ಸದಾ ಮಿಡಿಯುತ್ತಿರುವ ಜಿಲ್ಲೆ.
ಪ್ರತಿ ಬಾರಿ ಸಮ್ಮೇಳನ ನಡೆಯುವಾಗ ಅದಕ್ಕೊಂದು ಪರ್‍ಯಾಯ ಸಮ್ಮೇಳನದ ಅಗತ್ಯವಿರದು . ಯಾಕಂದ್ರೆ, ಶರಣ ಇರುವ ಊರಿನಲ್ಲಿ ನಡೆಯಲಿರುವ ಅಮೃತ ಮಹೋತ್ಸವದ ಸಮ್ಮೇಳನ ಇದುವರೆಗಿನ ಸಮ್ಮೇಳನಗಳಿಗೆ ಪರ್‍ಯಾಯವಾಗಿ ನಡೆಯುವುದು ಅನ್ನುವುದು ಅನೇಕ ಮಿತ್ರರ ಅಭಿಪ್ರಾಯ. ಮುಂದಿನ ವರ್ಷ ನಡೆಯುವ ಸಮ್ಮೇಳನ ಚಿತ್ರದುರ್ಗದ ಅನೇಕ ಸಾಹಿತ್ಯಾಸಕ್ತರಲ್ಲಿ ಉತ್ಸಾಹ ತುಂಬಿದೆ.
ಈ ಹಿನ್ನೆಯಲ್ಲೇ ಸಿದ್ಧವಾದ ಈ ಬ್ಲಾಗಿನಲ್ಲಿ ಇನ್ನು ಮುಂದೆ ಚಿತ್ರದುರ್ಗದ ಸಾಂಸ್ಕೃತಿಕ ವಿವರಗಳನ್ನು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳು, ಶಿಕ್ಷಣ, ರಾಜಕೀಯ, ಪ್ರವಾಸೋದ್ಯಮ ಹತ್ತಾರು ವಿಷಯಗಳನ್ನು ಹಂಚಿಕೊಳ್ಳಲಾಗುವುದು.

ಎಲ್ಲಾ ಸಾಹಿತ್ಯಾಸಕ್ತ ಮಿತ್ರರಿಗೆ ೭೫ನೇ ಸಾಹಿತ್ಯ ಸಮ್ಮೇಳನಕ್ಕೆ ಸುಸ್ವಾಗತ....