Friday, December 26, 2008

ವೈದ್ಯರಿಗೆ ಅಭಿನಂದನೆಗಳು..

ಸಮ್ಮೇಳನದ ಅಮೃತ ಮಹೋತ್ಸವದ ಸಿದ್ಧತೆಯ ವೇಳೆಯೇ ಸಂತಸದ ಸುದ್ದಿಯೊಂದು ಬಂದಿದೆ. ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ "ಹಳ್ಳ ಬಂತು ಹಳ್ಳ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ತಮ್ಮ ಹಾಸ್ಯ ಬರಹಗಳ ಮೂಲಕ ಚಿರಪರಿಚಿತರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , "ಸಂವಾದ" ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ನಡೆಯಿಸಿಕೊಂಡು ಬಂದಿದ್ದಾರೆ. ಇವರ ಕೆಲವು ಕೃತಿಗಳೆಂದರೆ ತಲೆಗೊಂದು ತರತರ, ಮನಸುಖರಾಯನ ಮನಸು, ರುಚಿಗೆ ಹುಳಿಯೊಗರು. ಇವುಗಳ ಜತೆಗೆ ಈ ಪ್ರಶಸ್ತಿಗೆ ಪಾತ್ರವಾಗಿರುವ ಕಾದಂಬರಿ "ಹಳ್ಳ ಬಂತು ಹಳ್ಳ".ಗಂಭೀರ ವಿಷಯದ ಕಾದಂಬರಿ. ಸುಮಾರು ೧೫೦ ವರ್ಷದ ಹರಹುಳ್ಳ ಒಂದು ಮನೆತನದ ಕಥೆ. ೧೮೫೭ರ ಸುಮಾರಿನ ಬ್ರಿಟಿಷರ ವಿರುದ್ಧದ ಬಂಡಾಯದ ಸಮಯದಲ್ಲಿ ಉತ್ತರದಿಂದ ನರಗುಂದದ ಬಾಬಾಸಾಹೇಬನಿಗೊಂದು ರಾಜಕೀಯ ಸಂದೇಶ ತಂದ ತರುಣ ನವಲಗುಂದದಲ್ಲಿಯೇ ನೆಲೆಯಾಗಬೇಕಾಗುತ್ತಾನೆ. ಅಲ್ಲಿಂದ ಆ ಮನೆಯ ಜನರ ಜೀವನದ ಏರಿಳಿತಗಳು ಸುತ್ತಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ತೊರೆಯ ನೀರಿನ ಹರಿವಿನ ಹಾಗೆ ಚಿತ್ರಿತವಾಗಿವೆ. ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಇನ್ನೊಂದು ವಿಶೇಷವೇನೆಂದರೆ ಧಾರವಾಡ ಜಿಲ್ಲೆಯ ನರಗುಂದ , ನವಲಗುಂದ ಪ್ರದೇಶದ ಆಡುಮಾತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡಿದೆ.ವೈದ್ಯರಿಗೆ ಅಭಿನಂದನೆಗಳು..

Friday, December 19, 2008

ಸಮ್ಮೇಳನಾಧ್ಯಕ್ಷರು ಡಾ.ಎಲ್. ಬಸವರಾಜು

75ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾಗಿದೆ. ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಸಮ್ಮೇಳಾಧ್ಯಕ್ಷರ ಸ್ಥಾನ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರು ಅಪ್ಪಟ ಮಾನವತವಾದಿ. ಜಾತಿ, ಕಂದಾಚಾರ, ಪುರೋಹಿತಷಾಹಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಬಂದ ಬಸವಣ್ಣ ಮತ್ತು ಆತನ ಸಹೋದರ ಶರಣರ ಚಿಂತನೆಗಳನ್ನು ಅಧ್ಯಯನ ಮಾಡಿದವರು ಬಸವರಾಜು. ಈ ಹೊತ್ತಿನಲ್ಲಿ ಅಂಥ ಚಿಂತನೆಗಳ ಅಗತ್ಯವಿದೆ. ಜಾತಿ, ಧರ್ಮಗಳಿಗಿಂತ ಮಿಗಿಲಾದ ಮಾನವತೆಯನ್ನು ಪ್ರತಿಪಾದಿಸಬೇಕಿದೆ. ಈ ಸಂದರ್ಭಧಲ್ಲಿ ಎಲ್. ಬಸವರಾಜು ಅವರು ಆಯ್ಕೆಯಾಗಿರುವುದು ದುರ್ಗದ ಹುಡುಗರಿಗೂ, ದುರ್ಗದ ಜನತೆಗೆ ಸಂತೋಷ ತಂದಿದೆ.
ಬಸವರಾಜು ಅವರ ಸಣ್ಣ ಪರಿಚಯ:
ಡಾ ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಅಪ್ಪಟ ಮಾನವತಾವಾದಿ.
ಇವರ ಕೆಲವು ಪ್ರಮುಖ ಕೃತಿಗಳು:
ಶೂನ್ಯ ಸಂಪಾದನೆ
ಕನ್ನಡ ಛಂದಸ್ಸು
ಶಿವದಾಸ ಗೀತಾಂಜಲಿ
ಭಾಸನ ಭಾರತ ರೂಪಕ
ನಾಟಕಾಮೃತ ಬಿಂದುಗಳು
ಅಲ್ಲಮನ ವಚನಗಳು
ದೇವರ ದಾಸೀಮಯ್ಯನ ವಚನಗಳು
ಭಾಸರಾಮಾಯಣ
ನಾಟಕ ತ್ರಿವೇಣಿ
ಇವರಿಗೆ 'ಪಂಪ ಪ್ರಶಸ್ತಿ','ಬಸವ ಪುರಸ್ಕಾರ' ವಲ್ಲದೆ ೧೯೯೪ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್' ಗೌರವ ದೊರಕಿದೆ.

Sunday, December 14, 2008

ಯಾರಾಗ್ತಾರೆ ಸಮ್ಮೇಳನಾಧ್ಯಕ್ಷರು?

ಸಮ್ಮೇಳನಕ್ಕೆ ಇನ್ನು 47 ದಿನ ಬಾಕಿ ಇದೆ. ಸಿದ್ಧತೆಗಳು ಭರದಿಂದ ಸಾಗಿವೆ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನವಿದು. ಜತೆಗೆ ಅಮೃತ ಮಹೋತ್ಸವದ ಸಮ್ಮೇಳನ.
ಈ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗ್ತಾರೆ?
ಇದು ಸದ್ಯದ ಕುತೂಹಲ.
ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿಂದು ಸ್ವಾಗತಸಮಿತಿಯ ಸಭೆ ನಡೆಯಿತು. ಈ ಬಾರಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಒಮ್ಮತದ ಅಭಿಪ್ರಾಯದೊಂದಿಗೆ ಒಂದು ಹೆಸರನ್ನು ಕೇಂದ್ರ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡುವ ಉದ್ದೇಶದೊಂದಿಗೆ ಸಭೆ ಆರಂಭವಾಗಿತ್ತು.
ಬಹುಮತದ ಮೇರೆಗೆ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ. ಕೇಂದ್ರ ಸಮಿತಿಗೆ ಶಿಫಾರಸು ಮಾಡುವುದಾಗಿ ಹೇಳಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಸಭೆ ಮುಗಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚಿಮೂ ಹೆಸರು ಬಿಟ್ಟರೆ ಡಾ.ಎಲ್. ಬಸವರಾಜು, ಬರಗೂರು ರಾಮಚಂದ್ರಪ್ಪನವರ ಹೆಸರು ಪ್ರಸ್ತಾಪವಾಯಿತು.
ಸಂಶೋಧಕರಾದ ಬಿ.ರಾಜಶೇಖರಪ್ಪ, ಶ್ರೀಶೈಲಾರಾಧ್ಯ ಸೇರಿದಂತೆ ಅನೇಕರು ಚಿಮೂ ಅವರನ್ನೇ ಪ್ರಸ್ತಾಪಿಸಿದರು. ಅನುಮೋದಿಸುವಂತೆ ಅನೇಕರನ್ನು ಪ್ರೇರೇಪಿಸಿದರು. ಬಂಡಾಯ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡು ಬಂದ ಸಿ.ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಶಿವಣ್ಣನಂಥವರು ಕೂಡ ಚಿಮೂ ಆಯ್ಕೆಯನ್ನು ಅನುಮೋದಿಸಿದ್ದು ಅಚ್ಚರಿ, ಬೇಸರಕ್ಕೆ ಕಾರಣವಾಯಿತು. ಇವರ ಬಂಡಾಯದ ನಿಲುವಿನ ಬಗ್ಗೆಯೇ ಸಂಶಯ ಹುಟ್ಟಿಸಿತು. ಜಾತಿ ಕಾರಣಕ್ಕೆ ಇವರು ಚಿಮೂ ಬೆಂಬಿಲಿಸಿದ್ದಾರೆಂದಾದ್ದಲ್ಲಿ ಸಾಮಾಜಿಕ ಬದ್ಧತೆ, ಸಾಹಿತ್ಯಕ ನಿಲುವು ಇತ್ಯಾದಿ ಮಾತುಗಳೆಲ್ಲ ಬೊಗಳೆ ಎಂದಷ್ಟೆ ಹೇಳಬೇಕಾಗುತ್ತದೆ. ನಿಷ್ಠುರವಾದಿ ಎನಿಸಿಕೊಂಡು ಇಂಥ ಸಾಹಿತಿಗಳಿಂದ ದೂರವೇ ಉಳಿಯುತ್ತಿದ್ದ ಬಿ.ಎಲ್. ವೇಣು ಕೂಡ ಈ ನಿಲುವಿನಿಂದ ಹೊರತಾಗಿರಲಿಲ್ಲ.
ಇವರೇ ಎಂಟು ಹತ್ತು ಮಂದಿ ಬಿಟ್ಟರೆ ಮತ್ತೊಬ್ಬ ಜಿಲ್ಲೆಯ ಹಿರಿಯ ಸಾಹಿತಿಗಳು ಕಾಣಿಸಲಿಲ್ಲ. ಕೆ.ಆರ್.ಸಂಧ್ಯಾರೆಡ್ಡಿ, ಬಿ.ವಿ.ವೈಕುಂಠರಾಜು ರಂಥ ಹಿರಿಯರು ಸಭೆಯಲ್ಲಿ ಕಾಣಿಸಲಿಲ್ಲ. 150 ಮಂದಿ ಸೇರುವ ಕೊಠಡಿಯೊಂದರಲ್ಲಿ ಹೀಗೊಂದು ಅಭಿಪ್ರಾಯ ಮೂಡಿಸುವ ಸಭೆ ಇಟ್ಟುಕೊಂಡು ಪೂರ್ವ ನಿರ್ಧರಿತ ಅಭಿಪ್ರಾಯವನ್ನು ಹೇಳುವುದಕ್ಕೆ ಸಭೆ ನಡೆಸಿದ ಹಾಗಿತ್ತು.
ಕನ್ನಡ-ಕರ್ನಾಟಕ-ಕನ್ನಡಿಗ, ಈ ನಿಟ್ಟಿನಲ್ಲಿ ಚಿಮೂ ಕೆಲಸ ಅದ್ಭುತವಾದದ್ದು. ಅವರು ಈ ಗೌರವಕ್ಕೆ ಅರ್ಹರು ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಲೇ ಹೋದರು.
ಇದೇ ಚಿಮೂ ಕಳೆದ ವರ್ಷ-ಎರಡು ವರ್ಷಗಳಿಂದ ಸಾಮಾಜಿ ಬದ್ಧತೆಯನ್ನು, ಸಾಮರಸ್ಯವನ್ನು ಕಿಂಚಿತ್ತೂ ಕಾಳಜಿ ಮಾಡದೆ ಇತಿಹಾಸದ ದಾಖಲೆಗಳನ್ನು ಉಲ್ಲೇಖಿಸುತ್ತಾ ಕೋಮುವಾದಿಯ ಹಾಗೇ ಮಾತನಾಡುತ್ತಾ ಅಲೆಯುತ್ತಿದ್ದಾರೆ. ಇಂಥವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಿರುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.
ಸಮ್ಮೇಳನವನ್ನು ರಾಜಕೀಯದಿಂದ, ಜಾತಿ ಮತಗಳಿಂದ ದೂರವಿಟ್ಟು, ಕನ್ನಡ, ಕರ್ನಾಟಕದ ಹಿನ್ನೆಲೆಯಲ್ಲಿ ಮಾಡಬೇಕೆಂದು ಭಾಷಣ ಬಿಗಿಯುತ್ತಾರೆ ಸಾಹಿತಿಗಳು. ಕೋಮುದಳ್ಳುರಿ ಹಚ್ಚುವ ಮಾತುಗಳನ್ನು ಆಡುತ್ತಿರುವ ವ್ಯಕ್ತಿಯೊಬ್ಬರನ್ನು ಯಾವ ಸಾಮಾಜಿಕ ಬದ್ಧತೆಯನ್ನು ಮಾನ್ಯ ಮಾಡಿ ಈ ಸ್ಥಾನವನ್ನು ಅಲಂಕರಿಸುವ ಅವಕಾಶ ಮಾಡಬೇಕು ಹೇಳಿ?
ನಾವು ಅಂದುಕೊಂಡದ್ದೆಲ್ಲ ಸುಳ್ಳಾಗುತ್ತಲೇ ಇದೆ. ಹಿಂದುಳಿದ ಜಿಲ್ಲೆ, ಶರಣರಂಥವರು ಇರುವ ಈ ಜಿಲ್ಲೆಯಲ್ಲಿ ನಡೆವ ಸಮ್ಮೇಳನ, ಕೋಮು ಸಾಮರಸ್ಯಕ್ಕೆ, ವರ್ಗಗಳ ತರತಮಕ್ಕೆ ಉತ್ತರವಾಗುವಂಥ, ಈ ನಿಟ್ಟಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಂಥ ಸಮ್ಮೇಳನವಾಗುತ್ತದೆ ಎಂದು ದೊಡ್ಡ ನಿರೀಕ್ಷೆ ಹುಸಿಯಾಗುತ್ತಲೇ ಇದೆ.
ಹಿಂದುಳಿದ ವರ್ಗವನ್ನು ಪ್ರತಿಬಿಂಬಿಸುವ, ದಮನಿತ ವರ್ಗದ ದನಿಯಾಗುವಂಥ, ಪ್ರಸ್ತುತ ಸಮಾಜದ ಚಿತ್ರಣಗಳ ನಿಕಷವಾಗಿ ವಿಮರ್ಶಿಸುವ ಮನಸ್ಸಿನ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪನವರು ಸಮ್ಮೇಳನಾಧ್ಯಕ್ಷರಾಗುವುದು ಇಂದಿನ ಅಗತ್ಯ.
ಚಿಮೂ ಸಮ್ಮೇಳಾಧ್ಯಕ್ಷ ಸ್ಥಾನದಲ್ಲಿ ದ್ವೇಷ ಕಾರುವ ಮಾತನಾಡಿ ಬಿಟ್ಟರೆ ಸಮ್ಮೇಳನದ ಗೋಷ್ಠಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಮಾನವೀಯತೆ ಬಗ್ಗೆ ಎಷ್ಟು ಚರ್ಚೆಯಾಗಿ ಏನು ಪ್ರಯೋಜನ? ನಮಗಿದು ಆತಂಕದ ಸಂಗತಿಯೂ ಆಗಿದೆ.
ಡಿಸೆಂಬರ್ 19ರಂದು ಕೇಂದ್ರ ಕಾರ್ಯಸಮಿತಿ ಸಮ್ಮೇಳನಾಧ್ಯಕ್ಷರನ್ನು ಘೋಷಿಸಲಿದೆ. ಈ ಸಮಿತಿಯಲ್ಲಿರುವ ಜವಾಬ್ದಾರಿಯುತ ವ್ಯಕ್ತಿಗಳಾದರೂ ಸಮ್ಮೇಳಾನಾಧ್ಯಕ್ಷರನ್ನು ಆರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ನಿರ್ಧರಿಸಲಿ.
ಚಿಮೂರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಚಿತ್ರದುರ್ಗದ ಪ್ರಖಾಂಡ ಪಂಡಿತರು ಪಣತೊಟ್ಟಿದ್ದಾರೆ. ಹಾಗೇನಾದರೂ ಆದಲ್ಲಿ ಪ್ರಜ್ಞಾವಂತ ಮಂದಿ ಸಮ್ಮೇಳನದಿಂದ ದೂರ ಉಳಿಯಲಿದ್ದಾರೆ ಎಂಬುದು ಬರೀ ಮಾತಲ್ಲ.
ಚಿಮೂ ಆಯ್ಕೆಯಾದರೆಂಬ ಸುದ್ದಿ ಪ್ರಕಟವಾದ ದಿನ ನಾವೂ ಈ ಬ್ಲಾಗ್ ಗೆ ಬರೆಯುವುದನ್ನು ನಿಲ್ಲಿಸಲಿದ್ದೇವೆ.

Sunday, December 7, 2008

ನಾಚಿಕೆಯಾಗಿದೆ... ಬೇಸರವಾಗಿದೆ..

ಎರಡು ತಿಂಗಳ ಮೇಲಾಯ್ತು. ದಿಢೀರನೆ ಒಂದು ಪೋಸ್ಟ್ ಅಪ್ ಡೇಟ್ ಆಗಿದೆ. ಒಂದು ಸಮಜಾಯಿಷಿ ಇಲ್ಲ. ಕ್ಷಮೆ ಕೇಳಲಿಲ್ಲ. ದೊಡ್ಡ ದೊಡ್ಡ ಮಾತಿನಿಂದ ಆರಂಭವಾಗಿ ಹೀಗೆ ಅನಾಥವಾಗಿ ಬಿಟ್ಟು ಹೋದರೆಂದು ಕಡೆಯ ಪಕ್ಷ ಒಂದಿಬ್ಬರಾದರೂ ಬೈದುಕೊಂಡಿರಬಹುದು.
ಅದೆಲಕ್ಕೂ ನಾವೂ ಭಾಜನರು. ನಮ್ಮಿಂದ ಆದ ಲೋಪಕ್ಕೆ ನಾವು ಮತ್ತೊಮ್ಮೆ ಕ್ಷಮೆ ಕೇಳುತ್ತೇವೆ.
ಕ್ಷಮೆ ಕೇಳಲೇ ಬೇಕಾದ ಮತ್ತೊಂದು ಕಾರಣವೂ ಇದೆ. 75ನೇ ಅಮೃತ ಮಹೋತ್ಸದ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸುವುದಕ್ಕೆ ನಮ್ಮ ಜಿಲ್ಲೆ ಜನಪ್ರತಿ ನಿಧಿಗಳು, ಮುಖಂಡರು, ಮಠಾಧೀಶರು ಹಿಂದೇಟು ಹಾಕಿದ್ದು, ಮುಂದೂಡಿ ಕೇಳಿಕೊಂಡಿದ್ದು, ಕಡೆಗೆ ನೀವು ಮಾಡದಿದ್ದರೆ ಇನ್ನೊಬ್ಬರಿಗೆ ಕೊಡುತ್ತೇವೆಂಬ ಧಮಕಿಗೆ ಹೆಸರಿ ನಿಗದಿತ ದಿನಕ್ಕೆ ಸಮ್ಮೇಳನ ಮಾಡುತ್ತೇವೆಂದು ಘೋಷಿಸಿದ್ದು ಇದೆಲ್ಲಕ್ಕೂ ಕ್ಷಮೆ ಕೇಳುತ್ತೇವೆ.
ಸಾಹಿತ್ಯ ಸೇವೆ ಮಾಡುತ್ತೇವೆ ನಾ ಮುಂದು ತಾಮುಂದು ತುದಿಗಾಲಲ್ಲಿ ನಿಲ್ಲುವ ಜಿಲ್ಲೆಗಳಿವೆ. ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಚಿತ್ರದುರ್ಗ ಜಿಲ್ಲೆ ಈ ವಿಷಯದಲ್ಲಿ ತೀರ ಸಣ್ಣದಾಗಿ ನಡೆದುಕೊಂಡಿತು ನಮ್ಮ ಅಭಿಪ್ರಾಯ. ಸಮ್ಮೇಳನದಲ್ಲಿ ಪ್ರಮುಖ ಪಾತ್ರವಹಿಸಬಹುದಾದರು ತಮ್ಮ ಒಣ ಪ್ರತಿಷ್ಠೆಗಾಗಿ ಸಮ್ಮೇಳನವನ್ನು ಮುಂದೂಡುವ, ಬೇರೊಂದು ಜಿಲ್ಲೆಗೆ ಸ್ಥಳಾಂತರಿಸುವುದಕ್ಕೆ ಅವಕಾಶವಾಗುವುದಕ್ಕೆ ಪ್ರೇರಣೆಯಾದರು ಎಂಬುದು ನಮಗೆ ನೋವುಂಟು ಮಾಡಿದ ಸಂಗತಿ.
ಇಂಥ ಬೆಳವಣಿಗೆಗಳು ನಮ್ಮ ಉತ್ಸಾಹಕ್ಕೆ ತಣ್ಣೀರು ಹಾಕಿ ಸುಮ್ಮನಿರಿಸಿದವು.
ಈಗ ದಿನಗಣನೆ ಆರಂಭವಾಗಿದೆ. 2009ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಸಿದ್ಧತೆ ಆರಂಭವಾಗಿದೆ. ಹೆಚ್ಚು ದಿನಗಳಿಲ್ಲ. ಸಮ್ಮೇಳನಕ್ಕೆ ಅಗತ್ಯವಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಮಾಡಬೇಕಿದೆ.ಈ ಪ್ರಕ್ರಿಯೆಗಳು ನಿಧಾನವಾಗಿ ಚುರುಕಾಗುತ್ತಿವೆ!
ಆಗಲಿ...
ಸಮಾಧಾನದ ಸಂಗತಿಯೊಂದಿದೆ:
ಚಿತ್ರದುರ್ಗದಲ್ಲಿ ನಡೆಯದೇ ಹೋಗಿದ್ದರೆ, ಸಮ್ಮೇಳನ ಬಳ್ಳಾರಿಗೆ ಹೋಗುತ್ತಿತ್ತು. ಬಳ್ಳಾರಿಯವರು ನಿಗದಿತ ದಿನದಂದೇ ಸಮ್ಮೇಳನ ನೆರವೇರಿಸುವ ಭರವಸೆ ನೀಡಿ ಅವಕಾಶ ಮಾಡಿಕೊಡಲು ಕೇಳಿಕೊಂಡಿದ್ದರು. ಗಣಿಧಣಿಗಳ ಊರಿನಲ್ಲಿ ಸಮ್ಮೇಳನ ಅದ್ದೂರಿಯಾಗಿ ಆಗುತ್ತದೆ, ಅಲ್ಲೇ ಆಗಲಿ ಎಂದು ಕೆಲವರು ತಾಳ ಹಾಕಿದರು.
ಹಾಗೇನಾದರೂ ಆಗಿದ್ದರೆ, ಸಮ್ಮೇಳನ, ಮೊನ್ನೆ ಮೊನ್ನೆ ನಡೆದ ಹಂಪಿ ಉತ್ಸವದ ಹಾಗೇ ಆಗಿ ಹೋಗುತ್ತಿತ್ತು. ಸಾಹಿತ್ಯದ ಜತೆಗೆ ಸಮಾಜ,ಸಂಸ್ಕೃತಿಗಳ ಚರ್ಚೆಯಾಗಬೇಕಾದ ವೇದಿಕೆಯಲ್ಲಿ ಒಂದು ಕವಿಗಳ ಪದ್ಯಗಳನ್ನು ಹಾಡಿಸಿಯೇ ಸಮ್ಮೇಳನ ಮುಗಿಸಿ ಬಿಡುತ್ತಿದ್ದರೇನೋ ಗಣಿಧಣಿಗಳು.
ಹಂಪಿ ಉತ್ಸವದಲ್ಲಿ ಇವರು ಮಾಡಿದ್ದೇನು? ಸೋನು ನಿಗಮ್, ಆಶಾರನ್ನು ಕರೆಸಿ ಹಾಡಿಸಿದರು. ಸದ್ಯದ ಅಂಥದ್ದಕ್ಕೆ ಅವಕಾಶವಾಗಿಲ್ಲ.
ಬೇಸರದ ಸಂಗತಿ ಇದೆ:
ರಾಜ್ಯ ಸರ್ಕಾರ ಸಮ್ಮೇಳನಕ್ಕೆ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿದೆ. ಕನ್ನಡದ ಕಾರ್ಯವೆಂದು ಬಾಯ್ತುಂಬು ಹೇಳಿಕೊಳ್ಳುವ ಸರ್ಕಾರದ ಮಂದಿ ಬೆಂಗಳೂರು ಹಬ್ಬದಂಥ ಮನರಂಜನೆಯೇ ಕೇಂದ್ರವಾಗಿರುವಂಥ ಕಾರ್ಯಕ್ರಮಕ್ಕೆ 2.5 ಕೋಟಿ ಮಂಜೂರು ಮಾಡಿತ್ತು.
ಯಾಕೆ ಹೀಗೆ..?

ಮರಡಿಹಳ್ಳಿಯಲ್ಲಿ ಪಿಲ್ಲೋ ಲಾವಾ!!ಪಿಲ್ಲೋ ಅಂದರೆ ದಿಂಬು. ಲಾವಾ ಜ್ವಾಲಾಮುಖಿಯಿಂದ ಹೊರಬೀಳುವ ರಸ. ದಿಂಬಿಗೂ, ಈ ಬೆಂಕಿಯಂಥ ರಸಕ್ಕೂ, ಚಿತ್ರದುರ್ಗಕ್ಕೂ ಏನು ಸಂಬಂಧ?
ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹೊರ ಬಿದ್ದ ಶಿಲಾರಸ ನೀರಿನ ಮೇಲೆ ತಣಿದಾಗ ದಿಂಬಿನಾಕಾರದ ರೂಪ ಪಡೆದುಕೊಂಡವು. ಈ ಅವಶೇಷವನ್ನು ಪಿಲ್ಲೋಲಾವಾ ರಚನೆಗಳೆಂದು ಕರೆಯುತ್ತಾರೆ.
ಚಿತ್ರದುರ್ಗದಿಂದ ಸುಮಾರು 16 ಕಿ.ಮೀ (ಬೆಂಗಳೂರಿನಿಂದ ಸುಮಾರು 180 ಕಿ.ಮೀ.)ದೂರದಲ್ಲಿರುವ ಮರಡಿಹಳ್ಳಿಯಲ್ಲಿ ಈ ಪಿಲ್ಲೋ ಲಾವಾ ಶಿಲೆಗಳಿವೆ. ಈಗ ಆರಂಭದ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.
ಭೂಗರ್ಭಶಾಸ್ತ್ರದ ಪ್ರಕಾರ ಚಿತ್ರದುರ್ಗದ ಬಹುಭಾಗ ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಿಂದ ಬಹುಭಾಗ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಸಂಭವಿಸಿದ ಜ್ವಾಲಾಮುಖಿಯೊಂದರಿಂದ ದಿಂಬಿನಾಕಾರದ ರಚನೆಗಳು ರೂಪ ಪಡೆದವು.
ಭಾರತದಲ್ಲಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ನೊಮಿರಾದಲ್ಲಿ ಶಿಲಾ ರಚನೆಗಳನ್ನು ಕಾಣಬಹುದು.
ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಬಹುಭಾಗ ಇತಿಹಾಸದ ಬಗ್ಗೆ ಈ ಶಿಲೆಗಳು ಬೆಳಕು ಚೆಲ್ಲಿವೆ. ದುರಾದೃಷ್ಟವೆಂದರೆ ಈ ಶಿಲಾರಚನೆಗಳು ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇಲ್ಲಿನ ಶಿಲೆಗಳು ಮರಡಿಹಳ್ಳಿಯ ಮನೆಗಳ ಮುಂದೆ ಬಿದ್ದಿವೆ. ಕಟ್ಟೆ, ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಗುಡ್ಡದ ಮೇಲಿರುವ ದೊಡ್ಡ ಗಾತ್ರದ ಶಿಲೆಗಳ ಮೇಲೆ ಪ್ರೇಮಿಗಳ ಹೆಸರುಗಳು ರಾರಾಜಿಸುತ್ತಿವೆ.
ಪ್ರಪಂಚದ ಕೆಲವೇ ದೇಶಗಳಲ್ಲಿ ಇಂಥ ಶಿಲಾರಚನೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಭೂಗರ್ಭಶಾಸ್ತ್ರ ವಿಜ್ಞಾನಿಗಳು. ಇತ್ತೀಚೆಗೆ ಕಾಂಗೋದ ವಿಜ್ಞಾನಿಗಳೂ ಇಲ್ಲಿನ ಶಿಲೆಗಳ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಇದರ ಕೆಲ ಸ್ಯಾಂಪಲ್ ಇಂಗ್ಲೆಂಡ್ ವಸ್ತು ಸಂಗ್ರಹಾಲಯದಲ್ಲೂ ಇಡಲಾಗಿದೆ. ಇಂಥ ವಿಶೇಷವಿರುವ ಈ ಸ್ಥಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
(ಈ ಮಾಹಿತಿ ಹಾಗೂ ಚಿತ್ರಗಳನ್ನು ಎಸ್.ಜೆ.ಎಂ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಸುಷ್ಮಾರಾಣಿ ಕಳಿಸಿಕೊಟ್ಟಿದ್ದಾರೆ. )