Friday, February 6, 2009

"ಚಿತ್ರ" ಸಮ್ಮೇಳನ ಇಲ್ಲಿಗೆ ಬನ್ನಿ

ಸಾಹಿತ್ಯ ಸಮ್ಮೇಳನ ವಿವಿಧ ಮುಖಗಳನ್ನು ತೆರೆದಿಡುವ ಚಿತ್ರಗಳನ್ನು ಕನ್ನಡ ಪ್ರಭ ಗ್ಯಾಲರಿಯಲ್ಲಿ ನೋಡಿ. ಆನಂದಿಸಿ..
ಇಲ್ಲಿದೆ "ಚಿತ್ರ" ಸಮ್ಮೇಳನ

ಸಾಹಿತ್ಯ ಸಮ್ಮೇಳನ : ವರದಿಯಾಗದ ಸಂಗತಿಗಳು

ಬಿಸಿಲು, ಧೂಳು, ಸೆಕೆ ; ಊಟ ಸಿಗಲಿಲ್ಲ ಎಂಬ ಆರ್ತನಾದಕ್ಕೆ ಕರಗದ ದುರ್ಗದ ಕಲ್ಲುಗಳು ; ಮುಷ್ಕರಗಳು ; ಕಸಾಪ ಘಟಕಗಳ ನಡುವೆ ಭಿನ್ನಮತ ; ಆಯೋಜಕರ ಬೇಜವಾಬ್ದಾರಿ ; ಮೆರೆದ ಖಾದಿ, ಕಾವಿಗಳು...
ಇವೆಲ್ಲ ಎಲ್ಲ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಈಗಾಗಲೇ ವರದಿಯಾಗಿವೆ. ನಮ್ಮ ದೃಷ್ಟಿ ಏನಿದ್ದರೂ ವರದಿಯಾಗದ ಸಂಗತಿಗಳ ಕಡೆಗೆ.
***
ಸಮ್ಮೇಳನ ಉದ್ಘಾಟನೆಯ ಸಂದರ್ಭ. ಮಾನ್ಯ ಮುಖ್ಯಮಂತ್ರಿಗಳು ದೀಪ ಬೆಳಗಬೇಕು. ಆಚೆಗೂ ಈಚೆಗೂ ಎರಡು ಮೂರು ಮಾನ್ಯ ಶ್ರೀಶ್ರೀಶ್ರೀಗಳು, ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಪುಢಾರಿಗಳು, ಕಸಾಪ ಅಧ್ಯಕ್ಷರು... ಎಲ್ಲರೂ ಸೇರಿ ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರನ್ನು ಹಿಂದಕ್ಕೆ ತಳ್ಳಿಬಿಟ್ಟರು. ಮುಖ್ಯಮಂತ್ರಿ ದೀಪ ಉರಿಸುತ್ತಿದ್ದಾರೆ, ಬಸವರಾಜು ಕಾಣಿಸುತ್ತಲೇ ಇಲ್ಲ.
ಕಡೆಗೆ ಯಾರೋ ಮಾಧ್ಯಮದವರು ಕೂಗಿದರು. "ಅಧ್ಯಕ್ಷರು, ಅಧ್ಯಕ್ಷರು..."
ಈಗ ವೇದಿಕೆಯ ಮೇಲಿದ್ದವರಿಗೆ ಜ್ಞಾನೋದಯ. ಹಿಂದೆಲ್ಲೋ ನೂಕಲ್ಪಟ್ಟಿದ್ದ ಬಸವರಾಜು ಅವರನ್ನು ಮತ್ತೆ ದೀಪದ ಹತ್ತಿರಕ್ಕೆ ದೂಡಲಾಯಿತು.
ಖಾದಿ ಮತ್ತು ಕಾವಿ. ಇದರ ನಡುವೆ ಕಡೆಗಣಿಸಲ್ಪಡುವ ಸಾಹಿತಿ. ಇದು ನಮ್ಮ ರಾಜ್ಯದ ಇಂದಿನ ಸ್ಥಿತಿಗೆ ರೂಪಕ ಅಂತ ನಿಮಗೆ ಅನಿಸುತ್ತಿಲ್ಲವೆ ?
***
ಮಾನ್ಯ ಉಸ್ತುವಾರಿ ಸಚಿವರು- ಕರುಣಾಕರ ರೆಡ್ಡಿಯವರು- ಉದ್ಘಾಟನೆ ಸಂದರ್ಭ ಭರ್ರನೆ ಹೆಲಿಕಾಪ್ಟರ್‌ನಲ್ಲಿ ಬಂದರು. ಅಂದ ಹಾಗೆ, ದುರ್ಗದಲ್ಲೇ ಇರುವ ಅವರ ಮನೆಗೂ ಸಮ್ಮೇಳನದ ಸ್ಥಳಕ್ಕೂ ಎರಡು ಮೈಲಿಗಿಂತ ಹೆಚ್ಚು ದೂರವಿಲ್ಲ. ಇಷ್ಟು ದೂರಕ್ಕೂ ಅವರು ಕಾರು ಬಳಸುವುದಿಲ್ಲ. ಎಲ್ಲಿಗೆ ಹೋಗುವುದಾದರೂ ಹೆಲಿಕಾಪ್ಟರ್. ಇದರಲ್ಲೇ ಮುಖ್ಯಮಂತ್ರಿ ಕೂಡ ಪ್ರಯಾಣಿಸಿದರು. ನೆರೆದ ಜನ ನಿಬ್ಬೆರಗಾಗಿ ನೋಡಿದರು. ಯಾರಪ್ಪನ ಮನೆ ದುಡ್ಡು ! (ಬೆಟ್ಟದಡಿಯಿಂದ)

ಕೆಂಡ ಸಂಪಿಗೆಯಲ್ಲಿ ಸಮ್ಮೇಳನದ ಬಗ್ಗೆ ತರೀಕೆರೆ ಬರೆದಿದ್ದಾರೆ..

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಜ ಹೈಲೈಟ್ ಅಧ್ಯಕ್ಷ ಎಲ್. ಬಸವರಾಜು ಅವರ ಭಾಷಣ. ಅವರ ಭಾಷಣದ ಕಾರಣ ಚಿತ್ರದುರ್ಗದ ಸಮ್ಮೇಳನ ಇತಿಹಾಸ ಸೇರಿತು. ಇದುವರೆಗಿನ ಯಾವುದೇ ಸಾಹಿತಿ ಅಧ್ಯಕ್ಷ ಸ್ಥಾನದಿಂದ ಈ ನೆಲದ ದಲಿತರಿಗೆ ಉತ್ತಮ ಶಿಕ್ಷಣ ಕೊಡಿ ಎಂದು ಸರಕಾರವನ್ನು ಕೇಳಿರಲಿಲ್ಲ. ಅಂತೆಯೇ ಮಠಾಧೀಶರನ್ನು, ಬಂಡವಾಳ ಶಾಹಿಯನ್ನು ಕಳ್ಳ ಕಾಕರ ಜೊತೆ ಸಮೀಕರಿಸಿ ಮಾತನಾಡಿರಲಿಲ್ಲ. ಬಡವರಿಗೆ ಕೈಗೆಟುಕದೇ ಹೋಗಿರುವ ಶಿಕ್ಷಣವನ್ನು ಸರ್ಕಾರೀಕರಣ ಮಾಡಿ ಎಂದು ಬೊಬ್ಬೆ ಹಾಕಿರಲಿಲ್ಲ. ಆ ಕಾರಣಕ್ಕೆ ಇದು ವಿಶಿಷ್ಟ ಸಮ್ಮೇಳನ. ವಿಮರ್ಶಕ ರಹಮತ್ ತರೀಕೆರೆ ಕೆಂಡ ಸಂಪಿಗೆಯಲ್ಲಿರ ಬರೆದಿರುವ ಲೇಖನ ಓದಿ.

Monday, February 2, 2009

ಎಸ್ಸೆನ್ ಮ್ಯೂಸಿಯಂ
ಎಸ್.ನಿಜಲಿಂಗಪ್ಪ ದೇಶ ಕಂಡ ಅಪರೂಪದ ರಾಜಕಾರಣಿ. ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದವರು. ಇದೇ ಚಿತ್ರದುರ್ಗದವರು. ಅವರು ಬದುಕಿನ ಕಡೆ ದಿನಗಳನ್ನು ಕಡೆದ ಮನೆ ಸಮ್ಮೇಳನಕ್ಕೆ ಬರುವವರಿಗಾಗಿ ಬಾಗಿಲು ತೆರೆಯಲಿದೆ. ನಿಜಲಿಂಗಪ್ಪನವರ ಜೀವನವನ್ನು ನಮ್ಮ ಬಿಚ್ಚಿಡುವ ವಸ್ತು ಸಂಗ್ರಹಾಲಯವಾಗಿ ತೆರೆದುಕೊಳ್ಳಲಿದೆ.
ಸುಮಾರು 2 ಲಕ್ಷ ವೆಚ್ಚದಲ್ಲಿ ಮನೆಯನ್ನು ಎಸ್ಸೆನ್ ಸ್ಮಾರಕ ವಸ್ತು ಸಂಗ್ರಾಹಲಯವನ್ನಾಗಿ ಮಾಡಲಾಗಿದ. ಎಸ್ಸೆನ್ ಸದಾ ಕೂರುತ್ತಿದ್ದ ಕುರ್ಚಿ, ವಾಕಿಂಗ್ ಸ್ಟಿಕ್, ಹಿರಿಯರೊಂದಿಗೆ ಬೆರೆತ ಕ್ಷಣಗಳನ್ನು ನಮ್ಮ ಮುಂದಿಡುವ ಭಾವಚಿತ್ರಗಳು. ನಿಜಲಿಂಗಪ್ಪ ಅವರಿಗೆ ಸಂದ ಪ್ರಶಸ್ತಿ, ಫಲಕಗಳು ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇಲ್ಲಿ ನೋಡಲು ಸಿಗುತ್ತವೆ.
ಸಮ್ಮೇಳನದ ಮೊದಲ ದಿನ ಈ ವಸ್ತು ಸಂಗ್ರಹಾಲಯ ಉದ್ಘಾಟನೆಯಾಗಲಿದೆ. ಜಿಲ್ಲೆಯ ಹಿರಿಯ ನಾಯಕರೊಬ್ಬರ ಬದುಕನ್ನು ಪರಿಚಯಿಸುವ ಈ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ಕೊಡಿ.

Friday, January 30, 2009

ಸಮ್ಮೇಳನಾಧ್ಯಕ್ಷರ ಸಂದರ್ಶನ...

"ಬರಿಮಾತಿನ ಸಾಹಿತಿ, ಸ್ವಾಮೀಜಿ, ರಾಜಕಾರಣಿಗಳಿಂದ ದೇಶ ಹಾಳು"

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್. ಬಸವರಾಜು ಅವರು ಆಯ್ಕೆಯಾದ ಕೂಡಲೇ ಅದುವರೆಗಿದ್ದ ವಿವಾದದ ಹೊಗೆಯೆಲ್ಲವೂ ಒಮ್ಮೆಗೇ ಮಾಯವಾಯಿತು. ಆ ಸ್ಥಾನಕ್ಕೆ ಪ್ರೊಫೆಸರ್ ಎಲ್‌ಬಿ ಅಷ್ಟು ಸೂಕ್ತರು ಹಾಗೂ ವಿವಾದಾತೀತರು. 90ರ ಹರೆಯದಲ್ಲೂ ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಸಾಹಿತ್ಯದ ಸಹವಾಸದಿಂದ ಅವರು ದೂರವಾಗಿಲ್ಲ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್‌ಬಿ ಅವರೊಂದಿಗೆ ಬಿ.ಎಸ್. ನಾರಾಯಣಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೀವು ಬಹು ಹಿಂದೆಯೇ ಆಯ್ಕೆಯಾಗಬೇಕಿತ್ತು. ಇದೀಗ ನಾಡೋಜ ಪ್ರಶಸ್ತಿಯೂ ಸಂದಿದೆ. ಈ ಬಗ್ಗೆ...?
ಈ ಪ್ರಶಸ್ತಿಗಳೆಲ್ಲಾ ನಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸುತ್ತವೆ ಅಷ್ಟೆ. ಪ್ರಶಸ್ತಿ, ಪದವಿಯನ್ನೆಲ್ಲಾ ನಾನು ಯಾವತ್ತೂ ನಿರೀಕ್ಷಿಸಿದವನಲ್ಲ; ಅದಕ್ಕಾಗಿ ಕೆಲಸ ಮಾಡಿದವನಲ್ಲ.
ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಬರಹಗಳೆರಡರಲ್ಲೂ ತೊಡಗಿಸಿಕೊಂಡಿದ್ದೀರಿ. ನಿಮಗೆ ಖುಷಿ ಕೊಟ್ಟಿದ್ದು...
ಗ್ರಂಥ ಸಂಪಾದನೆ ಇರಲಿ, ಸೃಜನಶೀಲ ಬರವಣಿಗೆ ಇರಲಿ ಎರಡನ್ನೂ ಖುಷಿಯಿಂದಲೇ ಮಾಡಿದ್ದೀನಿ ಅಂತ ಹೇಳಬಲ್ಲೆ. ಈಗ ತಿರುಗಿ ನೋಡಿದರೆ ಇವನ್ನೆಲ್ಲಾ ಬರೆದದ್ದು ನಾನೇನಾ ಅನಿಸುತ್ತದೆ. ನಾನು ಬರೆದಿಲ್ಲ; ಯಾವುದೋ ಶಕ್ತಿ ನನ್ನ ಕೈಯಿಂದ ಬರೆಸಿತು ಅನ್ನುವುದೇ ನಿಜ. ಏನೇ ಮಾಡಿದರೂ ಆ ಒಂದು ಆವೇಶದಿಂದ, ಮನಃಪೂರ್ವಕವಾಗಿ ಮಾಡಬೇಕು. ಇಲ್ಲದೇ ಹೋದರೆ ಅದು ಕೂಲಿ ಕೆಲಸ ಆಗುತ್ತದೆ.
ಗ್ರಂಥ ಸಂಪಾದನೆಯತ್ತ ನಿಮ್ಮ ಒಲವು ಹರಿದಿದ್ದು ಹೇಗೆ?
ನಾನು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪ್ರಾಚೀನ ಪಠ್ಯಗಳನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಿದ್ದಾಗ ಕೆಲವು ಕಡೆ ಏನೋ ತಪ್ಪಿದೆ; ಅರ್ಥ ಸರಿ ಬರುತ್ತಿಲ್ಲಾ ಎನಿಸುತ್ತಿತ್ತು. ಇದನ್ನು ನಮ್ಮ ಗುರುಗಳಿಗೂ ಹೇಳುತ್ತಿದ್ದೆ. ಅವರೂ ಕೂಡಾ ನನ್ನ ಹಾಗೇ ಅಭಿಪ್ರಾಯಪಡುತ್ತಿದ್ದರು. ಆನಂತರ ಪ್ರಾಚೀನ ಕೃತಿಯೊಂದರ ಹಲವು ಪಠ್ಯಗಳನ್ನು ಓದಿ ಯಾವುದು ಸರಿ ಎಂದು ನಿರ್ಣಯಿಸುವುದೇ ನನಗೆ ಒಂದು ಹವ್ಯಾಸವಾಗಿ ಹೋಯಿತು. ಹೀಗಾಗಿ ಗ್ರಂಥ ಸಂಪಾದನೆಯತ್ತ ನನ್ನನ್ನು ತೊಡಗಿಸಿಕೊಂಡೆ. ಮೇಲಾಗಿ ನಮ್ಮ ಪ್ರಾಚೀನ ಕೃತಿಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಿವೆ. ಕೃತಿಯ ಉದ್ದೇಶವೇ ಮರೆಯಾಗಿ ಹೋಗುವಂತಹ ಪ್ರಕ್ಷೇಪಗಳಾಗಿವೆ. ಬಸವಣ್ಣನವರದಲ್ಲದ ಹಲವು ವಚನಗಳು ಅವರ ಅಂಕಿತನಾಮದಿಂದ ಪ್ರಕಟವಾಗಿದ್ದವು. ನಾನು ಅವನ್ನೆಲ್ಲಾ ಸ್ಥೂಲವಾಗಿ ಅಧ್ಯಯನ ಮಾಡಿ ಇವು ಬಸವಣ್ಣ ಅವರದಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಹಲವು ವಿರೋಧಗಳೂ ಬಂದವು. ಇನ್ನು 'ಶೂನ್ಯಸಂಪಾದನೆ'ಯಂತಹ ಕೃತಿಗಳು ಬಹಳಷ್ಟು ಕಾಲ ಕೃತಿಕಾರನ ಹೆಸರಿನ ಬದಲಿಗೆ ಯಾರ್‍ಯಾರದೋ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. ಇಂತಹ 'ಕಳ್ಳತನ'ದಲ್ಲಿ ಹಲವು ಮಠಗಳು, ಸ್ವಾಮೀಜಿಗಳೂ ಪಾಲ್ಗೊಂಡಿದ್ದು ಬೇಸರ ತರುವ ವಿಷಯ.
ಪ್ರಾಚೀನ ಕೃತಿಗಳು ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?
ಪ್ರಾಚೀನ ಕೃತಿಗಳಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗಟ್ಟಿ ಕೃತಿಗಳೇ ಈಗಲೂ ಉಳಿದಿರುವುದು. ಅವು ಇಂದಿಗೂ ಪ್ರಸ್ತುತ. ಪಂಪ, ರನ್ನ, ಬಸವಾದಿ ಶರಣರು... ಅವರೆಲ್ಲಾ ಎಂಥಾ ನೀತಿ ಹೇಳಿದ್ದಾರೆ? ಆದರೆ ಅವುಗಳನ್ನೆಲ್ಲಾ ಈಗಿನವರು ಓದಬೇಕಲ್ಲಾ... ಓದಿ ಅದರಂತೆ ನಡೆಯಬೇಕಲ್ಲಾ... ರನ್ನನ ಒಂದು ಕಂದ ಪದ್ಯ ಹೀಗಿದೆ: 'ಶ್ರೀಯುತನೊಳುದಾರತೆ, ವಾಕ್‌ಶ್ರೀಯುತನೊಳಮತ್ಸರತ್ವಂ ಆಗದು...' ಅಂದರೆ ಶ್ರೀಮಂತರಲ್ಲಿ ಉದಾರತೆಯೂ, ಕವಿ-ಸಾಹಿತಿಗಳಲ್ಲಿ ಅಮತ್ಸರವೂ (ಪ್ರೀತಿ) ಇರುವುದಿಲ್ಲ. ಅದರ ಬದಲು ಉದಾರವಂತನೇ ಶ್ರೀಮಂತನಾಗಿ, ಅಮತ್ಸರನು ಕವಿಯಾದರೆ ಎಷ್ಟು ಚೆನ್ನ ಎನ್ನುತ್ತಾನೆ ರನ್ನ. ಇದು ಈಗಲೂ ಎಷ್ಟು ನಿಜ ನೋಡಿ. ನಮ್ಮ ಸಾಹಿತ್ಯವಲಯದಲ್ಲಿ ಎಷ್ಟು ಮತ್ಸರ ಇದೆ ಗೊತ್ತಲ್ಲ! ಇಂದಿನವರು ಹಿರಿಯರ ನೀತಿಯನ್ನು ಪಾಲಿಸುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಧರ್ಮಕ್ಕೆ ಪ್ರತಿಯಾಗಿ ಸಮಾಜ ಸುಧಾರಣೆಯಾಗುವಂತಹ ಕಾಯಕ ಧರ್ಮವನ್ನು ಬೋಧಿಸಿದ. ಅದು ಜಾತಿರಹಿತ ಧರ್ಮ. ಆದರೆ ಈಗ ಬಸವನ ಅನುಯಾಯಿ ಎಂದುಕೊಳ್ಳುವವರು 'ಬ್ರಾಹ್ಮಣ'ರಾಗಲು ಹೊರಟಿದ್ದಾರೆ; ಜಾತಿ ರಾಜಕೀಯದಲ್ಲೇ ತೊಡಗಿದ್ದಾರೆ.
ಹಾಗಿದ್ದರೆ ಈಗಿನ ಸಾಹಿತ್ಯದ ಜಾಡು ಎತ್ತ ಸಾಗುತ್ತಿದೆ?
ಈಗಿನ ಸಾಹಿತ್ಯವೇ? ಅದೇ ನೋಡಿ, ಯಾರಿಗೆ ಅಕಾಡೆಮಿ ಪ್ರಶಸ್ತಿ ಬಂತು, ಯಾರಿಗೆ ಪಂಪ ಪ್ರಶಸ್ತಿ ಬಂತು, ನಾಡೋಜ ಬಂತು; ತನಗೆ ಬರಲಿಲ್ಲ... ಎಂಬ ಮತ್ಸರದಲ್ಲಿ ತೊಡಗಿದೆ ಅಷ್ಟೇ. ನನಗೆ ಪ್ರಶಸ್ತಿ ಬಂತು ಅಂತ ನಾನು ಉಳಿದವರ ಬಗ್ಗೆ ತಿರಸ್ಕಾರದಿಂದ ಈ ಮಾತು ಹೇಳುತ್ತಿಲ್ಲ. ಆದರೆ ವಾಸ್ತವ ಹೀಗಿದೆ. ಸಾಹಿತ್ಯ ಎನ್ನುವುದು ಸತ್ಕ್ರಿಯೆಗೆ ಪ್ರೇರೇಪಣೆ ನೀಡಬೇಕು. ಅಂದರೆ ಒಂದು ರೀತಿಯಲ್ಲಿ ದೀಪದಿಂದ ದೀಪ ಹಚ್ಚುವ ಕೆಲಸ ಮಾಡಬೇಕು. ಆದರೆ ಇವತ್ತು ಸಾಹಿತಿಗಳು ಬರೀ ಮಾತನಾಡುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತ್ಯ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೃತಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ಬರೆಯುವವರು, ಸಾಹಿತಿಗಳನ್ನು ಜನ ಮಹಾತ್ಮ ಎಂದೇ ತಿಳಿಯುತ್ತಾರೆ. ಆದರೆ ಆತ ಮಹಾತ್ಮನೇನೂ ಆಗಿರುವುದಿಲ್ಲ. ಅವನಲ್ಲೂ ಎಲ್ಲರಂತೆ ಓರೆ-ಕೋರೆಗಳು ಇರುತ್ತವೆ. ಯುರೋಪ್‌ನಲ್ಲಿ ಇಂಗ್ಲೆಂಡ್-ಫ್ರೆಂಚ್ ಯುದ್ಧದ ಸಂದರ್ಭದಲ್ಲಿ ವರ್ಡ್ಸ್‌ವರ್ತ್ ಕವಿ ತನ್ನ ದೇಶದ ಬಗ್ಗೆ ಬಹಳ ಅಭಿಮಾನದಿಂದ ಬರೆದ. ಆದರೆ ಅದೇ ವೇಳೆ ಅವನ ದೇಶದ ಜನ ಭಾರತದಲ್ಲಿ ಶೋಷಣೆ ಮಾಡುತ್ತಿದ್ದಾಗ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಕವಿಗಳೆಲ್ಲಾ ಮಹಾತ್ಮರೇನಲ್ಲ. ಇಂದು ಎಲ್ಲಾ ಕ್ಷೇತ್ರ ಹೊಲಸಾದ ಹಾಗೆ ಸಾಹಿತ್ಯವಲಯ ಕೂಡಾ ಹೊಲಸಾಗಿಬಿಟ್ಟಿದೆ. ನನಗಂತೂ ಯಾವುದೇ ಆಶಾವಾದ ಕಾಣುತ್ತಿಲ್ಲ. ಇವತ್ತು ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದು.
ಸಾಹಿತ್ಯ ಸಮ್ಮೇಳನಗಳು ಕೂಡಾ ವಿವಾದಗಳಿಂದ ಹೊರತಾಗುತ್ತಿಲ್ಲ...
ಅದೇ ನಾನು ಹೇಳಿದೆನಲ್ಲಾ. ಇವತ್ತು ದುಡ್ಡು, ದುರಹಂಕಾರ, ದುರಾಡಳಿತ ಇವುಗಳಿಂದ ಎಲ್ಲಾ ಕ್ಷೇತ್ರಗಳೂ ಹೊಲಸಾಗುತ್ತಿವೆ. ಸಾಹಿತ್ಯ ವಲಯ ಕೂಡಾ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನನಗೆ ಪರಮಾಶ್ಚರ್ಯ ಆಗುವಂಥ, ಆತಂಕಕಾರಿ ವಿಷಯ ಎಂದರೆ, ನಾವು ಪರಸ್ಪರ ಪ್ರೀತಿಸುತ್ತಲೇ ಇಲ್ಲ. ಬರೀ ದ್ವೇಷ ತುಂಬಿದೆ. ಪ್ರಾಯಶಃ ಯಾವ ದೇಶದಲ್ಲಿಯೂ ಇಷ್ಟೊಂದು ದ್ವೇಷ, ಕಚ್ಚಾಟ ಇಲ್ಲ ಎನಿಸುತ್ತೆ. ದ್ವೇಷ ಮಾಡುವುದೇ ನಮ್ಮ ಸಂಸ್ಕೃತಿಯಾ ಎಂಬ ಶಂಕೆ ಮೂಡಿಬಿಟ್ಟಿದೆ ನನಗೆ.
ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೂಡಾ ಕೇವಲ ನೆಪಮಾತ್ರಕ್ಕೆ ಎನಿಸಿಬಿಟ್ಟಿವೆ. ಅವುಗಳಿಗೆ ಏನಾದರೂ ಅರ್ಥ ಇದೆ ಎನ್ನುತ್ತೀರಾ?
ನಮ್ಮ ಭಾಷೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆದರೆ ಅದು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಕೈಗೊಳ್ಳಬೇಕಿದೆ. ಇದು ಒಂದು ರೀತಿ ಬಾಯಿ ಬಡಿದುಕೊಳ್ಳುವ ಕೆಲಸ, ಅಷ್ಟೇ.
ಶಾಸ್ತ್ರೀಯ ಸ್ಥಾನ-ಮಾನ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಈಗ ಆಗಬೇಕಾದ ಕೆಲಸಗಳೇನು?
ಪ್ರಾಚೀನ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಂಶೋಧನಾ ಕ್ಷೇತ್ರಕ್ಕೆ ನೆರವು ನೀಡಬೇಕು. ಅದಿರಲಿ. ಈ ಶಾಸ್ತ್ರೀಯ ಸ್ಥಾನ-ಮಾನ ಗಳಿಸಿಕೊಳ್ಳೋದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಯಿತು ನೋಡಿ. ಅದೂ 90ರ ಅಂಚಿನಲ್ಲಿರುವ ದೇಜಗೌ ಅವರಂತಹ ಹಿರಿಯರು ಉಪವಾಸ ಮಾಡಬೇಕಾಯಿತು. ಆದರೆ ಕೇಂದ್ರ ಸರ್ಕಾರ ಕೊಡೋ ದುಡ್ಡಿನಿಂದಲೇ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆ? ಏಕೆ, ರಾಜ್ಯ ಸರ್ಕಾರದ ಬಳಿ ದುಡ್ಡು ಇರಲಿಲ್ಲವೇ? ನಮ್ಮ ಭಾಷೆಯನ್ನು ನಾವೇ ಪ್ರೀತಿಸುತ್ತಿಲ್ಲ; ಮನುಷ್ಯ ಸ್ವಭಾವ ಎಷ್ಟು ವಿಚಿತ್ರ ನೋಡಿ. ನಮ್ಮ ಭಾಷೆಯನ್ನು ಉದ್ಧಾರ ಮಾಡೋದಕ್ಕೆ ನಮಗೇ ಮನಸಿಲ್ಲ!
ಈಗಿನ ಭಯೋತ್ಪಾದನೆ ಜಾಗತಿಕ ಸಮುದಾಯದ ಮೇಲೆ ಒಡ್ಡಿರುವ ಸವಾಲಿಗೆ ಸಾಹಿತ್ಯ ಹೇಗೆ ಪ್ರತಿಕ್ರಿಯಿಸಬೇಕು?
ಎಲ್ಲಿ ಮಹಾಕವಿ ವಿಫಲನಾಗುತ್ತಾನೋ ಅಲ್ಲಿ ಭಯೋತ್ಪಾದನೆ ದೈತ್ಯ ಸ್ವರೂಪ ತಾಳುತ್ತದೆ. ಇವತ್ತು ಮಹಾಕವಿ ವಿಫಲನಾಗಿದ್ದಾನೆ. ಎಲ್ಲಕ್ಕೂ ದ್ವೇಷವೇ ಮೂಲ ಆಗಿದೆ. ತಾನು ಒಂದು ಧರ್ಮ ಅನುಸರಿಸುತ್ತಿದ್ದೇನೆಂದರೆ ಮತ್ತೊಂದು ಧರ್ಮವನ್ನು ವಿರೋಧಿಸಬೇಕು, ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಪ್ರೀತಿ, ಸೌಹಾರ್ದವನ್ನು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕೇಳುವವರಿಲ್ಲ ಅಷ್ಟೇ. ಧರ್ಮವನ್ನು ಹೊಡೆದಾಟಕ್ಕೆ ಬಳಸಿಕೊಳ್ಳಲಾಗ್ತಿದೆ. ಆಡಳಿತ ಕೂಡಾ ಇದಕ್ಕೆ ಕುಮ್ಮಕ್ಕು ಕೊಡ್ತಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವುದು ಇದೇ. ಹಿಂದೆ ಜೈನ, ವೈಷ್ಣವ ಮತ್ತು ಶೈವರ ನಡುವೆ ಕಿತ್ತಾಟ, ಜಗಳಗಳು ನಡೆದಿವೆ. ಅಂದರೆ ಪರಸ್ಪರ ದ್ವೇಷವೇ ಮನುಷ್ಯನ ಸಂಸ್ಕೃತಿ ಎನಿಸಿಬಿಟ್ಟಿದೆ. ಇದಕ್ಕೆ ಸಣ್ಣ ನೆಪಗಳು ಸಿಕ್ಕರೂ ಸಾಕು. ಬೇಸರದ ವಿಷಯ ಅಂದರೆ ಎಳೆಯ ಮಕ್ಕಳ ಮನಸ್ಸನ್ನು ತಿದ್ದುವಂಥ ಶಿಕ್ಷಕರು, ಅಧ್ಯಾಪಕರು ಬಹುಮಂದಿ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡಾ ಹಾಳಾಗಿದೆ. ಮನುಷ್ಯನ ಮನಸ್ಸು ಸಾತ್ವಿಕತೆ ಕಡೆ ಸಾಗಲು ಬೇಕಾದ ತಯಾರಿ ಕೂಡಾ ಇಲ್ಲದಂತಾಗಿದೆ. ವಿದ್ಯಾಭ್ಯಾಸವನ್ನೇ ಖಾಸಗೀಕರಣ ಮಾಡಿಬಿಟ್ಟಿದ್ದಾರೆ. ಅಂದರೆ ವಿದ್ಯೆಯನ್ನು ಶ್ರಮಪಟ್ಟು ಗಳಿಸುವುದಲ್ಲ; ಬದಲಿಗೆ ದುಡ್ಡುಕೊಟ್ಟು ಖರೀದಿಸುವಂಥ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ಪೀಳಿಗೆ ಬಗ್ಗೆ ಯಾವುದೇ ಆಶಾವಾದ ಇಟ್ಟುಕೊಳ್ಳದಂಥ ಪರಿಸ್ಥಿತಿ ಇದೆ. ಇದನ್ನು ಹೇಗೆ ಉತ್ತಮಪಡಿಸುವುದು, ನನಗಂತೂ ಗೊತ್ತಾಗುತ್ತಿಲ್ಲ.
ನಿಮ್ಮ ಮುಂದಿನ ಬರವಣಿಗೆ?
ಪಂಪನ 'ವಿಕ್ರಮಾರ್ಜುನ ವಿಜಯಂ' ಕಾವ್ಯವನ್ನು ಮೂಲ ಮಹಾಭಾರತದೊಡನೆ ತುಲನೆ ಮಾಡಿ ಬರೆದ ಕೃತಿ ಅಚ್ಚಿನಲ್ಲಿದೆ. ಬಸವಣ್ಣನವರ ವಚನಗಳು ಈ ಕಾಲಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಬಗೆಗಿನ ವಿಮರ್ಶಾ ಕೃತಿಯೂ ಸದ್ಯವೇ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಈ ಎರಡು ಕೃತಿಗಳು ಬರಲಿವೆ. ಈಗಿನ ದೇಹಪ್ರಕೃತಿಯಲ್ಲಿ ಮುಂಚಿನ ಹಾಗೆ ಬರೆಯಲು ಸಾಧ್ಯವಾಗುವುದಿಲ್ಲ.
ಯುವ ಜನಾಂಗಕ್ಕೆ, ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ಏನು?
ನಾನು ಆಗಲೇ ಹೇಳಿದೆನಲ್ಲಾ, ಕಿವಿಮಾತು ಹೇಳಿದರೆ ಅದನ್ನು ಕೇಳುವವರು ಯಾರು? ನಮ್ಮ ಪ್ರಾಚೀನರೇ ಎಲ್ಲಾ ಹೇಳಿದ್ದಾರೆ. ಆದರೆ ಅನುಸರಿಸುವವರಿಲ್ಲ ಅಷ್ಟೇ. ನಮ್ಮ ದೇಶ, ಸಂಸ್ಕೃತಿಯನ್ನು ನಾನು ತುಂಬಾ ಬೈಯುತ್ತಿದ್ದೀನಿ ಅಂತ ನಿಮಗೆ ಅನಿಸುತ್ತಿದೆಯೇ? ಹಾಗೇನಾದರೂ ನಿಮಗೆ ಅನಿಸಿದ್ದರೆ ನಾನು ವಿವೇಕಸ್ಥ ಅಂತ ಅರ್ಥ!

(ಕೃಪೆ: ಸಂಡೇ ಇಂಡಿಯನ್)

Wednesday, January 28, 2009

ಡಿ.ವಿ.ಡಿಯಲ್ಲಿ ಚಿತ್ರದುರ್ಗ ಜಿಲ್ಲಾ ದರ್ಶನ


ಚಿತ್ರದುರ್ಗದೊಳು
ಕಲ್ಲು ಕಲ್ಲುಗಳು
ಕೂಗಿ ಕರೆಯುತಿಹವು,
ಮೆರೆದ ನಾಯಕರ
ಏಳು ಬೀಳುಗಳ
ಕಥೆಯ ಹೇಳುತಿಹವು.
ಕಲ್ಲಿಗೊಂದು ಕಥೆ,
ಕಲ್ಲಿಗೊಂದು ವ್ಯಥೆ
ಕಥನಕಾರರೇಕೆ ?
ಎಂದು ಬಯಲು ಬಂಡೆ ವಸ್ತುಸಂಗ್ರಹಾಲಯವಾದ ಚಿತ್ರದುರ್ಗದ ಚಿತ್ರವನ್ನು ಮಥಿಸಿ ಬರೆದುಕೊಟ್ಟ ಸುಬ್ರಹ್ಮಣ್ಯ ಭಟ್ಟರ ಕವಿವಾಣಿ ಕೇಳಿದವರು, ತ.ರಾ.ಸು. ಅವರ ಐತಿಹಾಸಿಕ ಕಾದಂಬರಿಗಳನ್ನು ಓದಿದವರು, ನಾಗರಹಾವು, ಹಂಸಗೀತೆ ಮತ್ತು ಕಲ್ಲರಳಿ ಹೂವಾಗಿ ಚಲನಚಿತ್ರಗಳನ್ನು ನೋಡಿದವರು, ದುರ್ಗದ ಕೋಟೆಯನ್ನು ಮಾತ್ರ ನೋಡಿದಂತಾಗಿದೆ. ಚಿತ್ರದುರ್ಗದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂಬ ಆಸೆ, ಕುತೂಹಲ ಇರುವವರಿಗಾಗಿ ಚಿತ್ರದುರ್ಗದ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರು ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಹೊರತಂದಿದ್ದು ಕೇವಲ 99 ರೂಪಾಯಿಗಳಲ್ಲಿ ಜಿಲ್ಲೆಯ ಸೊಗಡನ್ನು ವರ್ಣರಂಜಿತವಾಗಿ ಕಟ್ಟಿಕೊಟ್ಟಿದ್ದಾರೆ. ಸುದ್ದಿಗಿಡುಗ ಪತ್ರಿಕೆಯ ಸಂಪಾದಕ ಶ. ಮಂಜುನಾಥ್ ಅವರ ಸಲಹೆ, ಪಿ.ವಿ. ರಮೇಶ್ ರೆಡ್ಡಿ, ಪಿ.ವಿ. ವಾಸುದೇವ ರೆಡ್ಡಿ ಮತ್ತು ಮಕ್ಕಳ ಸಹಕಾರ, ಯುವ ಉತ್ಸಾಹಿಗಳಾದ ಕೆ.ಜಿ. ವೀರೇಂದ್ರಕುಮಾರ್ ಮತ್ತು ಎಸ್. ಸಾನಿಕಂ ಮಂಜುನಾಥ ರೆಡ್ಡಿ ಅವರ ನಿದರ್ೇಶನ, ಪಿ.ಆರ್. ಚಂದ್ರಕಾಂತ್ ಛಾಯಾಗ್ರಹಣ, ಸಿ. ನಾಗರತ್ನ, ಆರ್. ಗುರುಮೂತರ್ಿ, ಕೋಲಂನಳ್ಳಿ ಪೀತಾಂಬರ್ ಮತ್ತು ಜಯಪ್ರಕಾಶ್ ನಾಗತಿಹಳ್ಳಿ ಅವರ ಮಧುರ ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿಬಂದಿರುವ ಚಿತ್ರದುರ್ಗ ಜಿಲ್ಲಾ ದರ್ಶನ ಎಂಬ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಕಿರುಚಿತ್ರದ ಡಿವಿಡಿ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಸರಿಯಾಗಿ ಹೊರಬಂದಿರುವುದು ಅಪರೂಪದ ಸಾಧನೆಯೇ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರೆಲ್ಲರೂ ಒಂದೊಂದು ಡಿವಿಡಿ ತೆಗೆದುಕೊಂಡು ಹೋಗಲು ಅನುವಾಗುವಂತೆ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಏಪರ್ಾಡು ಮಾಡಿರುವುದು ಅಭಿನಂದನಾರ್ಹ ಕೆಲಸ. ಸುಮಾರು ಎರಡೂವರೆ ಗಂಟೆಗೂ ಹೆಚ್ಚುಕಾಲ, ಒಂದು ಚಲನಚಿತ್ರ ನೋಡುವಂತೆ, ಕೂತು ನೋಡಬಹುದಾದ ಈ ಡಿವಿಡಿಯಲ್ಲಿ ಮೂಡಿಬಂದಿರುವ ದೃಶ್ಯಾವಳಿಗೆ ಏಳು ಜನ ಲೇಖಕರು ನಿರೂಪಣಾ ಸಾಹಿತ್ಯ ಒದಗಿಸಿದ್ದಾರೆ. {ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ - ಚಿತ್ರದುರ್ಗ (50 ನಿಮಿಷ), ಕೋಲಂನಳ್ಳಿ ಪೀತಾಂಬರ್ - ಚಳ್ಳಕೆರೆ (17 ನಿಮಿಷ), ಬೆಲಗೂರು ಶ್ರೀಕಾಂತ್ ಮತ್ತು ಪೀಲಾಪುರ ಕಂಠೇಶ್ - ಹೊಸದುರ್ಗ (28 ನಿಮಿಷ), ಕೆ.ಜಿ. ವೆಂಕಟೇಶ್ - ಮೊಳಕಾಲ್ಮುರು (17 ನಿಮಿಷ), ಚಂದ್ರಶೇಖರ ತಾಳ್ಯ - ಹೊಳಲ್ಕೆರೆ (24 ನಿಮಿಷ) ಹಾಗೂ ಯಳನಾಡು ಅಂಜನಪ್ಪ - ಹಿರಿಯೂರು (12 ನಿಮಿಷ).} ಲಭ್ಯವಿರುವ ಜಿಲ್ಲಾ ಹಾಗೂ ತಾಲ್ಲೂಕು ದರ್ಶನಗಳು, ಲೇಖನಗಳು, ಜನಜನಿತ ನಂಬಿಕೆಗಳು, ಹೇಳಿಕೆಗಳು, ಐತಿಹ್ಯಗಳು ಮತ್ತು ದಾಖಲೆಗಳಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ಈ ಲೇಖಕರು ನಿರೂಪಣಾ ಸಾಹಿತ್ಯ ರಚಿಸಿರುವುದರಿಂದ ಅಲ್ಲಲ್ಲಿ ಚಚರ್ಾಸ್ಪದ ಅಂಶಗಳು ಉಳಿದಿವೆ. ಪ್ರಾಜ್ಞರು ಇವರ ಬಗ್ಗೆ ಹರಿಹಾಯದೆ ಇತಿಹಾಸಕಾರರಿಂದ ಪರಾಮಶರ್ಿತ ಮಾಹಿತಿ ಒದಗಿಸಿಕೊಟ್ಟಲ್ಲಿ, ಉತ್ತಮಗೊಳಿಸುವ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಕೂಡಲೇ ಅಳವಡಿಸಿಕೊಳ್ಳುವ ವಿಶಾಲ ಮನೋಭಾವ ಡಿವಿಡಿ ಸಿದ್ಧಪಡಿಸಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಖಂಡಿತಾ ಇದೆ ಎಂದು ಹೇಳಬಹುದು. ತಾಲ್ಲೂಕುವಾರು ಮಾಹಿತಿಯನ್ನು ಆಯಾಯ ತಾಲ್ಲೂಕಿನವರಿಂದ ಕ್ರೋಢೀಕರಿಸಿ, ಅಪರೂಪದ ಸ್ಥಳಗಳ ದೃಶ್ಯಗಳನ್ನು ಸೆರೆಹಿಡಿದು, ಸುಮಾರು ಮೂರು ವರ್ಷಗಳಿಗೂ ಹೆಚ್ಚುಕಾಲ ಶ್ರಮವಹಿಸಿದ ವೀರೇಂದ್ರ ಕುಮಾರ್ ಮತ್ತು ಗೆಳೆಯರ ತಂಡ ಚಿತ್ರದುರ್ಗದ ಅಮೃತ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕೆ ಕಳೆ ಕಟ್ಟುವಂತಹ ಅಪರೂಪದ ಕೆಲಸ ಮಾಡಿ, ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಚಿತ್ರದುರ್ಗ ಯಾವಾಗಲೂ ಒಂದು ಹೆಜ್ಜೆ ಮುಂದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ನೀವೂ ಒಂದು ಡಿ.ವಿ.ಡಿ. ಕೊಳ್ಳಿ. ನೋಡಿ. ಖುಷಿಯಾದರೆ ಚಿತ್ರದುರ್ಗದ ಚಚರ್್ ಬಡಾವಣೆಯಲ್ಲಿರುವ ಚಿನ್ಮೂಲಾದ್ರಿ ಕ್ರಿಯೇಷನ್ಸ್ ನವರಿಗೆ ಒಂದು ಥ್ಯಾಂಕ್ಸ್ ಹೇಳಿ. ಫೋನ್ : 9986142889 / 9844311515
ಪರಿಚಯಿಸಿದವರು: ಬೇದ್ರೆ ಮಂಜುನಾಥ ವಿಳಾಸ: ಪ್ರಸಾರ ನಿವರ್ಾಹಕರು, ಆಕಾಶವಾಣಿ, ಚಿತ್ರದುರ್ಗ