Friday, December 26, 2008

ವೈದ್ಯರಿಗೆ ಅಭಿನಂದನೆಗಳು..

ಸಮ್ಮೇಳನದ ಅಮೃತ ಮಹೋತ್ಸವದ ಸಿದ್ಧತೆಯ ವೇಳೆಯೇ ಸಂತಸದ ಸುದ್ದಿಯೊಂದು ಬಂದಿದೆ. ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ "ಹಳ್ಳ ಬಂತು ಹಳ್ಳ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ತಮ್ಮ ಹಾಸ್ಯ ಬರಹಗಳ ಮೂಲಕ ಚಿರಪರಿಚಿತರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , "ಸಂವಾದ" ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ನಡೆಯಿಸಿಕೊಂಡು ಬಂದಿದ್ದಾರೆ. ಇವರ ಕೆಲವು ಕೃತಿಗಳೆಂದರೆ ತಲೆಗೊಂದು ತರತರ, ಮನಸುಖರಾಯನ ಮನಸು, ರುಚಿಗೆ ಹುಳಿಯೊಗರು. ಇವುಗಳ ಜತೆಗೆ ಈ ಪ್ರಶಸ್ತಿಗೆ ಪಾತ್ರವಾಗಿರುವ ಕಾದಂಬರಿ "ಹಳ್ಳ ಬಂತು ಹಳ್ಳ".ಗಂಭೀರ ವಿಷಯದ ಕಾದಂಬರಿ. ಸುಮಾರು ೧೫೦ ವರ್ಷದ ಹರಹುಳ್ಳ ಒಂದು ಮನೆತನದ ಕಥೆ. ೧೮೫೭ರ ಸುಮಾರಿನ ಬ್ರಿಟಿಷರ ವಿರುದ್ಧದ ಬಂಡಾಯದ ಸಮಯದಲ್ಲಿ ಉತ್ತರದಿಂದ ನರಗುಂದದ ಬಾಬಾಸಾಹೇಬನಿಗೊಂದು ರಾಜಕೀಯ ಸಂದೇಶ ತಂದ ತರುಣ ನವಲಗುಂದದಲ್ಲಿಯೇ ನೆಲೆಯಾಗಬೇಕಾಗುತ್ತಾನೆ. ಅಲ್ಲಿಂದ ಆ ಮನೆಯ ಜನರ ಜೀವನದ ಏರಿಳಿತಗಳು ಸುತ್ತಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ತೊರೆಯ ನೀರಿನ ಹರಿವಿನ ಹಾಗೆ ಚಿತ್ರಿತವಾಗಿವೆ. ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಇನ್ನೊಂದು ವಿಶೇಷವೇನೆಂದರೆ ಧಾರವಾಡ ಜಿಲ್ಲೆಯ ನರಗುಂದ , ನವಲಗುಂದ ಪ್ರದೇಶದ ಆಡುಮಾತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡಿದೆ.ವೈದ್ಯರಿಗೆ ಅಭಿನಂದನೆಗಳು..

Friday, December 19, 2008

ಸಮ್ಮೇಳನಾಧ್ಯಕ್ಷರು ಡಾ.ಎಲ್. ಬಸವರಾಜು

75ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾಗಿದೆ. ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಸಮ್ಮೇಳಾಧ್ಯಕ್ಷರ ಸ್ಥಾನ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರು ಅಪ್ಪಟ ಮಾನವತವಾದಿ. ಜಾತಿ, ಕಂದಾಚಾರ, ಪುರೋಹಿತಷಾಹಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಬಂದ ಬಸವಣ್ಣ ಮತ್ತು ಆತನ ಸಹೋದರ ಶರಣರ ಚಿಂತನೆಗಳನ್ನು ಅಧ್ಯಯನ ಮಾಡಿದವರು ಬಸವರಾಜು. ಈ ಹೊತ್ತಿನಲ್ಲಿ ಅಂಥ ಚಿಂತನೆಗಳ ಅಗತ್ಯವಿದೆ. ಜಾತಿ, ಧರ್ಮಗಳಿಗಿಂತ ಮಿಗಿಲಾದ ಮಾನವತೆಯನ್ನು ಪ್ರತಿಪಾದಿಸಬೇಕಿದೆ. ಈ ಸಂದರ್ಭಧಲ್ಲಿ ಎಲ್. ಬಸವರಾಜು ಅವರು ಆಯ್ಕೆಯಾಗಿರುವುದು ದುರ್ಗದ ಹುಡುಗರಿಗೂ, ದುರ್ಗದ ಜನತೆಗೆ ಸಂತೋಷ ತಂದಿದೆ.
ಬಸವರಾಜು ಅವರ ಸಣ್ಣ ಪರಿಚಯ:
ಡಾ ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಅಪ್ಪಟ ಮಾನವತಾವಾದಿ.
ಇವರ ಕೆಲವು ಪ್ರಮುಖ ಕೃತಿಗಳು:
ಶೂನ್ಯ ಸಂಪಾದನೆ
ಕನ್ನಡ ಛಂದಸ್ಸು
ಶಿವದಾಸ ಗೀತಾಂಜಲಿ
ಭಾಸನ ಭಾರತ ರೂಪಕ
ನಾಟಕಾಮೃತ ಬಿಂದುಗಳು
ಅಲ್ಲಮನ ವಚನಗಳು
ದೇವರ ದಾಸೀಮಯ್ಯನ ವಚನಗಳು
ಭಾಸರಾಮಾಯಣ
ನಾಟಕ ತ್ರಿವೇಣಿ
ಇವರಿಗೆ 'ಪಂಪ ಪ್ರಶಸ್ತಿ','ಬಸವ ಪುರಸ್ಕಾರ' ವಲ್ಲದೆ ೧೯೯೪ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್' ಗೌರವ ದೊರಕಿದೆ.

Sunday, December 14, 2008

ಯಾರಾಗ್ತಾರೆ ಸಮ್ಮೇಳನಾಧ್ಯಕ್ಷರು?

ಸಮ್ಮೇಳನಕ್ಕೆ ಇನ್ನು 47 ದಿನ ಬಾಕಿ ಇದೆ. ಸಿದ್ಧತೆಗಳು ಭರದಿಂದ ಸಾಗಿವೆ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನವಿದು. ಜತೆಗೆ ಅಮೃತ ಮಹೋತ್ಸವದ ಸಮ್ಮೇಳನ.
ಈ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗ್ತಾರೆ?
ಇದು ಸದ್ಯದ ಕುತೂಹಲ.
ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿಂದು ಸ್ವಾಗತಸಮಿತಿಯ ಸಭೆ ನಡೆಯಿತು. ಈ ಬಾರಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಒಮ್ಮತದ ಅಭಿಪ್ರಾಯದೊಂದಿಗೆ ಒಂದು ಹೆಸರನ್ನು ಕೇಂದ್ರ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡುವ ಉದ್ದೇಶದೊಂದಿಗೆ ಸಭೆ ಆರಂಭವಾಗಿತ್ತು.
ಬಹುಮತದ ಮೇರೆಗೆ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ. ಕೇಂದ್ರ ಸಮಿತಿಗೆ ಶಿಫಾರಸು ಮಾಡುವುದಾಗಿ ಹೇಳಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಸಭೆ ಮುಗಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚಿಮೂ ಹೆಸರು ಬಿಟ್ಟರೆ ಡಾ.ಎಲ್. ಬಸವರಾಜು, ಬರಗೂರು ರಾಮಚಂದ್ರಪ್ಪನವರ ಹೆಸರು ಪ್ರಸ್ತಾಪವಾಯಿತು.
ಸಂಶೋಧಕರಾದ ಬಿ.ರಾಜಶೇಖರಪ್ಪ, ಶ್ರೀಶೈಲಾರಾಧ್ಯ ಸೇರಿದಂತೆ ಅನೇಕರು ಚಿಮೂ ಅವರನ್ನೇ ಪ್ರಸ್ತಾಪಿಸಿದರು. ಅನುಮೋದಿಸುವಂತೆ ಅನೇಕರನ್ನು ಪ್ರೇರೇಪಿಸಿದರು. ಬಂಡಾಯ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡು ಬಂದ ಸಿ.ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಶಿವಣ್ಣನಂಥವರು ಕೂಡ ಚಿಮೂ ಆಯ್ಕೆಯನ್ನು ಅನುಮೋದಿಸಿದ್ದು ಅಚ್ಚರಿ, ಬೇಸರಕ್ಕೆ ಕಾರಣವಾಯಿತು. ಇವರ ಬಂಡಾಯದ ನಿಲುವಿನ ಬಗ್ಗೆಯೇ ಸಂಶಯ ಹುಟ್ಟಿಸಿತು. ಜಾತಿ ಕಾರಣಕ್ಕೆ ಇವರು ಚಿಮೂ ಬೆಂಬಿಲಿಸಿದ್ದಾರೆಂದಾದ್ದಲ್ಲಿ ಸಾಮಾಜಿಕ ಬದ್ಧತೆ, ಸಾಹಿತ್ಯಕ ನಿಲುವು ಇತ್ಯಾದಿ ಮಾತುಗಳೆಲ್ಲ ಬೊಗಳೆ ಎಂದಷ್ಟೆ ಹೇಳಬೇಕಾಗುತ್ತದೆ. ನಿಷ್ಠುರವಾದಿ ಎನಿಸಿಕೊಂಡು ಇಂಥ ಸಾಹಿತಿಗಳಿಂದ ದೂರವೇ ಉಳಿಯುತ್ತಿದ್ದ ಬಿ.ಎಲ್. ವೇಣು ಕೂಡ ಈ ನಿಲುವಿನಿಂದ ಹೊರತಾಗಿರಲಿಲ್ಲ.
ಇವರೇ ಎಂಟು ಹತ್ತು ಮಂದಿ ಬಿಟ್ಟರೆ ಮತ್ತೊಬ್ಬ ಜಿಲ್ಲೆಯ ಹಿರಿಯ ಸಾಹಿತಿಗಳು ಕಾಣಿಸಲಿಲ್ಲ. ಕೆ.ಆರ್.ಸಂಧ್ಯಾರೆಡ್ಡಿ, ಬಿ.ವಿ.ವೈಕುಂಠರಾಜು ರಂಥ ಹಿರಿಯರು ಸಭೆಯಲ್ಲಿ ಕಾಣಿಸಲಿಲ್ಲ. 150 ಮಂದಿ ಸೇರುವ ಕೊಠಡಿಯೊಂದರಲ್ಲಿ ಹೀಗೊಂದು ಅಭಿಪ್ರಾಯ ಮೂಡಿಸುವ ಸಭೆ ಇಟ್ಟುಕೊಂಡು ಪೂರ್ವ ನಿರ್ಧರಿತ ಅಭಿಪ್ರಾಯವನ್ನು ಹೇಳುವುದಕ್ಕೆ ಸಭೆ ನಡೆಸಿದ ಹಾಗಿತ್ತು.
ಕನ್ನಡ-ಕರ್ನಾಟಕ-ಕನ್ನಡಿಗ, ಈ ನಿಟ್ಟಿನಲ್ಲಿ ಚಿಮೂ ಕೆಲಸ ಅದ್ಭುತವಾದದ್ದು. ಅವರು ಈ ಗೌರವಕ್ಕೆ ಅರ್ಹರು ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಲೇ ಹೋದರು.
ಇದೇ ಚಿಮೂ ಕಳೆದ ವರ್ಷ-ಎರಡು ವರ್ಷಗಳಿಂದ ಸಾಮಾಜಿ ಬದ್ಧತೆಯನ್ನು, ಸಾಮರಸ್ಯವನ್ನು ಕಿಂಚಿತ್ತೂ ಕಾಳಜಿ ಮಾಡದೆ ಇತಿಹಾಸದ ದಾಖಲೆಗಳನ್ನು ಉಲ್ಲೇಖಿಸುತ್ತಾ ಕೋಮುವಾದಿಯ ಹಾಗೇ ಮಾತನಾಡುತ್ತಾ ಅಲೆಯುತ್ತಿದ್ದಾರೆ. ಇಂಥವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಿರುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.
ಸಮ್ಮೇಳನವನ್ನು ರಾಜಕೀಯದಿಂದ, ಜಾತಿ ಮತಗಳಿಂದ ದೂರವಿಟ್ಟು, ಕನ್ನಡ, ಕರ್ನಾಟಕದ ಹಿನ್ನೆಲೆಯಲ್ಲಿ ಮಾಡಬೇಕೆಂದು ಭಾಷಣ ಬಿಗಿಯುತ್ತಾರೆ ಸಾಹಿತಿಗಳು. ಕೋಮುದಳ್ಳುರಿ ಹಚ್ಚುವ ಮಾತುಗಳನ್ನು ಆಡುತ್ತಿರುವ ವ್ಯಕ್ತಿಯೊಬ್ಬರನ್ನು ಯಾವ ಸಾಮಾಜಿಕ ಬದ್ಧತೆಯನ್ನು ಮಾನ್ಯ ಮಾಡಿ ಈ ಸ್ಥಾನವನ್ನು ಅಲಂಕರಿಸುವ ಅವಕಾಶ ಮಾಡಬೇಕು ಹೇಳಿ?
ನಾವು ಅಂದುಕೊಂಡದ್ದೆಲ್ಲ ಸುಳ್ಳಾಗುತ್ತಲೇ ಇದೆ. ಹಿಂದುಳಿದ ಜಿಲ್ಲೆ, ಶರಣರಂಥವರು ಇರುವ ಈ ಜಿಲ್ಲೆಯಲ್ಲಿ ನಡೆವ ಸಮ್ಮೇಳನ, ಕೋಮು ಸಾಮರಸ್ಯಕ್ಕೆ, ವರ್ಗಗಳ ತರತಮಕ್ಕೆ ಉತ್ತರವಾಗುವಂಥ, ಈ ನಿಟ್ಟಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಂಥ ಸಮ್ಮೇಳನವಾಗುತ್ತದೆ ಎಂದು ದೊಡ್ಡ ನಿರೀಕ್ಷೆ ಹುಸಿಯಾಗುತ್ತಲೇ ಇದೆ.
ಹಿಂದುಳಿದ ವರ್ಗವನ್ನು ಪ್ರತಿಬಿಂಬಿಸುವ, ದಮನಿತ ವರ್ಗದ ದನಿಯಾಗುವಂಥ, ಪ್ರಸ್ತುತ ಸಮಾಜದ ಚಿತ್ರಣಗಳ ನಿಕಷವಾಗಿ ವಿಮರ್ಶಿಸುವ ಮನಸ್ಸಿನ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪನವರು ಸಮ್ಮೇಳನಾಧ್ಯಕ್ಷರಾಗುವುದು ಇಂದಿನ ಅಗತ್ಯ.
ಚಿಮೂ ಸಮ್ಮೇಳಾಧ್ಯಕ್ಷ ಸ್ಥಾನದಲ್ಲಿ ದ್ವೇಷ ಕಾರುವ ಮಾತನಾಡಿ ಬಿಟ್ಟರೆ ಸಮ್ಮೇಳನದ ಗೋಷ್ಠಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಮಾನವೀಯತೆ ಬಗ್ಗೆ ಎಷ್ಟು ಚರ್ಚೆಯಾಗಿ ಏನು ಪ್ರಯೋಜನ? ನಮಗಿದು ಆತಂಕದ ಸಂಗತಿಯೂ ಆಗಿದೆ.
ಡಿಸೆಂಬರ್ 19ರಂದು ಕೇಂದ್ರ ಕಾರ್ಯಸಮಿತಿ ಸಮ್ಮೇಳನಾಧ್ಯಕ್ಷರನ್ನು ಘೋಷಿಸಲಿದೆ. ಈ ಸಮಿತಿಯಲ್ಲಿರುವ ಜವಾಬ್ದಾರಿಯುತ ವ್ಯಕ್ತಿಗಳಾದರೂ ಸಮ್ಮೇಳಾನಾಧ್ಯಕ್ಷರನ್ನು ಆರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ನಿರ್ಧರಿಸಲಿ.
ಚಿಮೂರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಚಿತ್ರದುರ್ಗದ ಪ್ರಖಾಂಡ ಪಂಡಿತರು ಪಣತೊಟ್ಟಿದ್ದಾರೆ. ಹಾಗೇನಾದರೂ ಆದಲ್ಲಿ ಪ್ರಜ್ಞಾವಂತ ಮಂದಿ ಸಮ್ಮೇಳನದಿಂದ ದೂರ ಉಳಿಯಲಿದ್ದಾರೆ ಎಂಬುದು ಬರೀ ಮಾತಲ್ಲ.
ಚಿಮೂ ಆಯ್ಕೆಯಾದರೆಂಬ ಸುದ್ದಿ ಪ್ರಕಟವಾದ ದಿನ ನಾವೂ ಈ ಬ್ಲಾಗ್ ಗೆ ಬರೆಯುವುದನ್ನು ನಿಲ್ಲಿಸಲಿದ್ದೇವೆ.

Sunday, December 7, 2008

ನಾಚಿಕೆಯಾಗಿದೆ... ಬೇಸರವಾಗಿದೆ..

ಎರಡು ತಿಂಗಳ ಮೇಲಾಯ್ತು. ದಿಢೀರನೆ ಒಂದು ಪೋಸ್ಟ್ ಅಪ್ ಡೇಟ್ ಆಗಿದೆ. ಒಂದು ಸಮಜಾಯಿಷಿ ಇಲ್ಲ. ಕ್ಷಮೆ ಕೇಳಲಿಲ್ಲ. ದೊಡ್ಡ ದೊಡ್ಡ ಮಾತಿನಿಂದ ಆರಂಭವಾಗಿ ಹೀಗೆ ಅನಾಥವಾಗಿ ಬಿಟ್ಟು ಹೋದರೆಂದು ಕಡೆಯ ಪಕ್ಷ ಒಂದಿಬ್ಬರಾದರೂ ಬೈದುಕೊಂಡಿರಬಹುದು.
ಅದೆಲಕ್ಕೂ ನಾವೂ ಭಾಜನರು. ನಮ್ಮಿಂದ ಆದ ಲೋಪಕ್ಕೆ ನಾವು ಮತ್ತೊಮ್ಮೆ ಕ್ಷಮೆ ಕೇಳುತ್ತೇವೆ.
ಕ್ಷಮೆ ಕೇಳಲೇ ಬೇಕಾದ ಮತ್ತೊಂದು ಕಾರಣವೂ ಇದೆ. 75ನೇ ಅಮೃತ ಮಹೋತ್ಸದ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸುವುದಕ್ಕೆ ನಮ್ಮ ಜಿಲ್ಲೆ ಜನಪ್ರತಿ ನಿಧಿಗಳು, ಮುಖಂಡರು, ಮಠಾಧೀಶರು ಹಿಂದೇಟು ಹಾಕಿದ್ದು, ಮುಂದೂಡಿ ಕೇಳಿಕೊಂಡಿದ್ದು, ಕಡೆಗೆ ನೀವು ಮಾಡದಿದ್ದರೆ ಇನ್ನೊಬ್ಬರಿಗೆ ಕೊಡುತ್ತೇವೆಂಬ ಧಮಕಿಗೆ ಹೆಸರಿ ನಿಗದಿತ ದಿನಕ್ಕೆ ಸಮ್ಮೇಳನ ಮಾಡುತ್ತೇವೆಂದು ಘೋಷಿಸಿದ್ದು ಇದೆಲ್ಲಕ್ಕೂ ಕ್ಷಮೆ ಕೇಳುತ್ತೇವೆ.
ಸಾಹಿತ್ಯ ಸೇವೆ ಮಾಡುತ್ತೇವೆ ನಾ ಮುಂದು ತಾಮುಂದು ತುದಿಗಾಲಲ್ಲಿ ನಿಲ್ಲುವ ಜಿಲ್ಲೆಗಳಿವೆ. ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಚಿತ್ರದುರ್ಗ ಜಿಲ್ಲೆ ಈ ವಿಷಯದಲ್ಲಿ ತೀರ ಸಣ್ಣದಾಗಿ ನಡೆದುಕೊಂಡಿತು ನಮ್ಮ ಅಭಿಪ್ರಾಯ. ಸಮ್ಮೇಳನದಲ್ಲಿ ಪ್ರಮುಖ ಪಾತ್ರವಹಿಸಬಹುದಾದರು ತಮ್ಮ ಒಣ ಪ್ರತಿಷ್ಠೆಗಾಗಿ ಸಮ್ಮೇಳನವನ್ನು ಮುಂದೂಡುವ, ಬೇರೊಂದು ಜಿಲ್ಲೆಗೆ ಸ್ಥಳಾಂತರಿಸುವುದಕ್ಕೆ ಅವಕಾಶವಾಗುವುದಕ್ಕೆ ಪ್ರೇರಣೆಯಾದರು ಎಂಬುದು ನಮಗೆ ನೋವುಂಟು ಮಾಡಿದ ಸಂಗತಿ.
ಇಂಥ ಬೆಳವಣಿಗೆಗಳು ನಮ್ಮ ಉತ್ಸಾಹಕ್ಕೆ ತಣ್ಣೀರು ಹಾಕಿ ಸುಮ್ಮನಿರಿಸಿದವು.
ಈಗ ದಿನಗಣನೆ ಆರಂಭವಾಗಿದೆ. 2009ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಸಿದ್ಧತೆ ಆರಂಭವಾಗಿದೆ. ಹೆಚ್ಚು ದಿನಗಳಿಲ್ಲ. ಸಮ್ಮೇಳನಕ್ಕೆ ಅಗತ್ಯವಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಮಾಡಬೇಕಿದೆ.ಈ ಪ್ರಕ್ರಿಯೆಗಳು ನಿಧಾನವಾಗಿ ಚುರುಕಾಗುತ್ತಿವೆ!
ಆಗಲಿ...
ಸಮಾಧಾನದ ಸಂಗತಿಯೊಂದಿದೆ:
ಚಿತ್ರದುರ್ಗದಲ್ಲಿ ನಡೆಯದೇ ಹೋಗಿದ್ದರೆ, ಸಮ್ಮೇಳನ ಬಳ್ಳಾರಿಗೆ ಹೋಗುತ್ತಿತ್ತು. ಬಳ್ಳಾರಿಯವರು ನಿಗದಿತ ದಿನದಂದೇ ಸಮ್ಮೇಳನ ನೆರವೇರಿಸುವ ಭರವಸೆ ನೀಡಿ ಅವಕಾಶ ಮಾಡಿಕೊಡಲು ಕೇಳಿಕೊಂಡಿದ್ದರು. ಗಣಿಧಣಿಗಳ ಊರಿನಲ್ಲಿ ಸಮ್ಮೇಳನ ಅದ್ದೂರಿಯಾಗಿ ಆಗುತ್ತದೆ, ಅಲ್ಲೇ ಆಗಲಿ ಎಂದು ಕೆಲವರು ತಾಳ ಹಾಕಿದರು.
ಹಾಗೇನಾದರೂ ಆಗಿದ್ದರೆ, ಸಮ್ಮೇಳನ, ಮೊನ್ನೆ ಮೊನ್ನೆ ನಡೆದ ಹಂಪಿ ಉತ್ಸವದ ಹಾಗೇ ಆಗಿ ಹೋಗುತ್ತಿತ್ತು. ಸಾಹಿತ್ಯದ ಜತೆಗೆ ಸಮಾಜ,ಸಂಸ್ಕೃತಿಗಳ ಚರ್ಚೆಯಾಗಬೇಕಾದ ವೇದಿಕೆಯಲ್ಲಿ ಒಂದು ಕವಿಗಳ ಪದ್ಯಗಳನ್ನು ಹಾಡಿಸಿಯೇ ಸಮ್ಮೇಳನ ಮುಗಿಸಿ ಬಿಡುತ್ತಿದ್ದರೇನೋ ಗಣಿಧಣಿಗಳು.
ಹಂಪಿ ಉತ್ಸವದಲ್ಲಿ ಇವರು ಮಾಡಿದ್ದೇನು? ಸೋನು ನಿಗಮ್, ಆಶಾರನ್ನು ಕರೆಸಿ ಹಾಡಿಸಿದರು. ಸದ್ಯದ ಅಂಥದ್ದಕ್ಕೆ ಅವಕಾಶವಾಗಿಲ್ಲ.
ಬೇಸರದ ಸಂಗತಿ ಇದೆ:
ರಾಜ್ಯ ಸರ್ಕಾರ ಸಮ್ಮೇಳನಕ್ಕೆ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿದೆ. ಕನ್ನಡದ ಕಾರ್ಯವೆಂದು ಬಾಯ್ತುಂಬು ಹೇಳಿಕೊಳ್ಳುವ ಸರ್ಕಾರದ ಮಂದಿ ಬೆಂಗಳೂರು ಹಬ್ಬದಂಥ ಮನರಂಜನೆಯೇ ಕೇಂದ್ರವಾಗಿರುವಂಥ ಕಾರ್ಯಕ್ರಮಕ್ಕೆ 2.5 ಕೋಟಿ ಮಂಜೂರು ಮಾಡಿತ್ತು.
ಯಾಕೆ ಹೀಗೆ..?

ಮರಡಿಹಳ್ಳಿಯಲ್ಲಿ ಪಿಲ್ಲೋ ಲಾವಾ!!ಪಿಲ್ಲೋ ಅಂದರೆ ದಿಂಬು. ಲಾವಾ ಜ್ವಾಲಾಮುಖಿಯಿಂದ ಹೊರಬೀಳುವ ರಸ. ದಿಂಬಿಗೂ, ಈ ಬೆಂಕಿಯಂಥ ರಸಕ್ಕೂ, ಚಿತ್ರದುರ್ಗಕ್ಕೂ ಏನು ಸಂಬಂಧ?
ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹೊರ ಬಿದ್ದ ಶಿಲಾರಸ ನೀರಿನ ಮೇಲೆ ತಣಿದಾಗ ದಿಂಬಿನಾಕಾರದ ರೂಪ ಪಡೆದುಕೊಂಡವು. ಈ ಅವಶೇಷವನ್ನು ಪಿಲ್ಲೋಲಾವಾ ರಚನೆಗಳೆಂದು ಕರೆಯುತ್ತಾರೆ.
ಚಿತ್ರದುರ್ಗದಿಂದ ಸುಮಾರು 16 ಕಿ.ಮೀ (ಬೆಂಗಳೂರಿನಿಂದ ಸುಮಾರು 180 ಕಿ.ಮೀ.)ದೂರದಲ್ಲಿರುವ ಮರಡಿಹಳ್ಳಿಯಲ್ಲಿ ಈ ಪಿಲ್ಲೋ ಲಾವಾ ಶಿಲೆಗಳಿವೆ. ಈಗ ಆರಂಭದ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.
ಭೂಗರ್ಭಶಾಸ್ತ್ರದ ಪ್ರಕಾರ ಚಿತ್ರದುರ್ಗದ ಬಹುಭಾಗ ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಿಂದ ಬಹುಭಾಗ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಸಂಭವಿಸಿದ ಜ್ವಾಲಾಮುಖಿಯೊಂದರಿಂದ ದಿಂಬಿನಾಕಾರದ ರಚನೆಗಳು ರೂಪ ಪಡೆದವು.
ಭಾರತದಲ್ಲಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ನೊಮಿರಾದಲ್ಲಿ ಶಿಲಾ ರಚನೆಗಳನ್ನು ಕಾಣಬಹುದು.
ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಬಹುಭಾಗ ಇತಿಹಾಸದ ಬಗ್ಗೆ ಈ ಶಿಲೆಗಳು ಬೆಳಕು ಚೆಲ್ಲಿವೆ. ದುರಾದೃಷ್ಟವೆಂದರೆ ಈ ಶಿಲಾರಚನೆಗಳು ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇಲ್ಲಿನ ಶಿಲೆಗಳು ಮರಡಿಹಳ್ಳಿಯ ಮನೆಗಳ ಮುಂದೆ ಬಿದ್ದಿವೆ. ಕಟ್ಟೆ, ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಗುಡ್ಡದ ಮೇಲಿರುವ ದೊಡ್ಡ ಗಾತ್ರದ ಶಿಲೆಗಳ ಮೇಲೆ ಪ್ರೇಮಿಗಳ ಹೆಸರುಗಳು ರಾರಾಜಿಸುತ್ತಿವೆ.
ಪ್ರಪಂಚದ ಕೆಲವೇ ದೇಶಗಳಲ್ಲಿ ಇಂಥ ಶಿಲಾರಚನೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಭೂಗರ್ಭಶಾಸ್ತ್ರ ವಿಜ್ಞಾನಿಗಳು. ಇತ್ತೀಚೆಗೆ ಕಾಂಗೋದ ವಿಜ್ಞಾನಿಗಳೂ ಇಲ್ಲಿನ ಶಿಲೆಗಳ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಇದರ ಕೆಲ ಸ್ಯಾಂಪಲ್ ಇಂಗ್ಲೆಂಡ್ ವಸ್ತು ಸಂಗ್ರಹಾಲಯದಲ್ಲೂ ಇಡಲಾಗಿದೆ. ಇಂಥ ವಿಶೇಷವಿರುವ ಈ ಸ್ಥಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
(ಈ ಮಾಹಿತಿ ಹಾಗೂ ಚಿತ್ರಗಳನ್ನು ಎಸ್.ಜೆ.ಎಂ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಸುಷ್ಮಾರಾಣಿ ಕಳಿಸಿಕೊಟ್ಟಿದ್ದಾರೆ. )

Monday, September 8, 2008

ಕೆಮೆರಾ ಕಣ್ಣಲ್ಲಿ ದುರ್ಗದ ಕೋಟೆ..

ಚಿತ್ರದುರ್ಗದವರೇ ಆದ ಮಂಜುನಾಥ ಸ್ವಾಮಿ ಅವರ ಹಳ್ಳಿ ಕನ್ನಡ ಬ್ಲಾಗಿನಲ್ಲಿ ಚಿತ್ರದುರ್ಗದ ಕೋಟೆ ಚಿತ್ರಗಳು ರಾರಾಜಿಸುತ್ತಿವೆ. ದುರ್ಗದ ಕೋಟೆಗೆ ಇಂಥ ಸೊಬಗಿದೆಯೇ ಎಂದು ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ಚಿತ್ರಗಳು ಹೇಗಿವೆ ನೀವು ಹಳ್ಳಿಕನ್ನಡ ನೋಡಬಹುದು. ಸ್ಯಾಂಪಲ್ಲಿಗೆ ಈ ಚಿತ್ರ...

Monday, July 28, 2008

ಕಸಾಪ ಜಿಲ್ಲಾಧ್ಯಕ್ಷರಾಗಿ ವೀರೇಶ್ ಪುನಾ ಆಯ್ಕೆ..
ಇನ್ನೂ ಸಾಹಿತ್ಯ ಪರಿಷತ್ ಚುನಾವಣೆ ನಡೆದಿಲ್ಲ. ಆಗಲೇ ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷರ ಘೋಷಣೆಯಾಗಿದೆ. ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಂಟು ಮಂದಿ ನಾಮಪತ್ರ ವಾಪಸು ಪಡೆಯುವ ಕಡೇ ದಿನವಾದ ಶನಿವಾರ ವೀರೇಶ್ ಎರಡನೆ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಹಿಂದಿನ ಪೋಸ್ಟ್ನಲ್ಲಿ ಹೇಳಿದ ಮಾತುಗಳು ಇಲ್ಲಿ ಸ್ಪಷ್ಟವಾದಂತಿವೆ. ಸಮ್ಮೇಳನ ಒಪ್ಪಿಕೊಂಡವರ ಮೇಲೆ ಸಮ್ಮೇಳನ ನಡೆಸುವ ಹೊಣೆ ಹೊರಿಸಲಾಗಿದೆ. ಇದರ ಹಿಂದೆ ಯಾರದೋ ಕೈವಾಡ ಎನ್ನುವ ಮೂಲಕ ವೀರೇಶ್ ಅವರ ಆಯ್ಕೆ ಸಂಶಯಿಸುವ ಅಗತ್ಯವಿಲ್ಲ. ಅದರ ಔಚಿತ್ಯ ನಮಗಿಲ್ಲಿ ಕಾಣುತ್ತಿಲ್ಲ.


ವೀರೇಶ್ ಅಲ್ಲದೆ ಬೇರಾರೆ ಸಮ್ಮೇಳನ ಒಪ್ಪಿಕೊಂಡು ಬಂದು, ಅವರೇ ಆಯ್ಕೆ ಯಾಗಿದ್ದರೂ ಈ ಮಾತುಗಳೇ ವ್ಯಕ್ತವಾಗುತ್ತಿದ್ದವೇನೋ? ಇರಲಿ.. ವೀರೇಶ್ ಈಗ ಏನು ಮಾಡುತ್ತಾರೆಂಬುದೇ ಕುತೂಹಲ...ವೀರೇಶ್ ವಿಸ್ತೃತ ಅವಧಿ ಸೇರಿ ಮೂರೂವರೆ ವರ್ಷಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಜಿಲ್ಲಾ ಕಸಾಪದ ಮೂಲಕ ಮಾಡಿದ ಚಟುವಟಿಕೆಗಳೆಷ್ಟು? ಜಿಲ್ಲೆಯಲ್ಲಿ ಕಸಾಪವನ್ನು ಬೆಳೆಸಲು ಅವರು ಮಾಡಿದ ಕೆಲಸಗಳೇನು? (ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆದಿದ್ದವು, ಅಷ್ಟೇ ಅಲ್ಲ ದತ್ತಿ ನಿಧಿಗಳ ಸ್ಥಾಪನೆಯೂ ಆಗಿದ್ದವು.) ಹೀಗೆ ಪ್ರಶ್ನೆಗಳನ್ನು ಕೇಳಿದರೆ ಸ್ವತಃ ವೀರೇಶ್ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಾರೆನೋ? ಮೂರೂವರೆ ವರ್ಷಗಳ ಅವಧಿಯಲ್ಲಿ ಕೆಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದೇ ಅವರ ಸಾಧನೆ.ಇದನ್ನೇ ಜಿಲ್ಲಾ ಸಾಹಿತ್ಯ ವಲಯ ಮಾತಾಡಿಕೊಳ್ಳುತ್ತದೆ. ಹೀಗಾಗಿ ಯಾವುದೇ ನಿರೀಕ್ಷೆಗಳೇ ಇಲ್ಲದ ನಿರುತ್ಸಾಹದ ಮಾತುಗಳನ್ನಾಡುತ್ತಾರೆ.ಹಾಗಾಗಿ ವೀರೇಶ್ ಮುಂದೆ ದೊಡ್ಡ ಸವಾಲುಗಳೇ ಇವೆ. ಸಮ್ಮೇಳನ ಅಂಥ ಸವಾಲುಗಳಲ್ಲಿ ದೊಡ್ಡದು. ಆದರೆ ಅವರು ಇದಕ್ಕೂ ಮೊದಲು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಡೀ ಜಿಲ್ಲಾ ಸಾಹಿತ್ಯ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಮುಂದಿರುವ ಸವಾಲುಗಳಲ್ಲಿ ಒಂದು. ಇದುವರೆಗೂ ಏನೂ ಮಾಡಿಲ್ಲ ಎಂದೇ ಹೇಳುವ ಮಂದಿ ಮುಂದೆ ವೀರೇಶ್ ಬೆಂಬಲ, ನೆರವು, ಸಹಕಾರ ಕೇಳಬೇಕಾಗಿದೆ. ಇದನ್ನು ಯಾವುದೇ ಬಿಗುಮಾನವಿಲ್ಲದೆ ವೀರೇಶ್ ಮಾಡುತ್ತಾರಾ? ಮಾಡಲೇಬೇಕು, ಕಸಾಪ ಚುನಾವಣೆ ಮುಗಿಯಲು ಇನ್ನೊಂದು ತಿಂಗಳಾದರೂ ಬೇಕು, ಅಷ್ಟರೊಳಗೆ ಜಿಲ್ಲೆ ಸಾಹಿತಿಗಳು, ಹಿರಿಯರು, ವಿವಿಧ ಮುಖಂಡರಗಳ ಸಭೆ ಕರೆದು ಚರ್ಚೆ ಮಾಡಬಹುದು. ಈ ಸಮ್ಮೇಳನದ ಮಹತ್ವ, ಅದಕ್ಕಾಗಿ ಏನೆಲ್ಲಾ ಆಗಬೇಕಿದೆ ಎಂಬುದನ್ನೆಲ್ಲಾ ಚರ್ಚಿಸಬಹುದು. ಅವರಿಂದ ಸಲಹೆಗಳನ್ನು ಸ್ವೀಕರಿಸುವ ಮೂಲಕ ಅವರೆಲ್ಲಾ ವಿಶ್ವಾಸ ಪಡೆಯಬಹುದು. ವೀರೇಶ್ ಏನು ಮಾಡುತ್ತಾರೆ? ಕಾದು ನೋಡೋಣ.

ದೂರದ ಊರಿಂದ ಪತ್ರ ಬಂದಿದೆ...

(ದೂರದ ದಿಲ್ಲಿಯಲ್ಲಿ ಟೀವಿ ಪತ್ರಕರ್ತರಾಗಿರುವ ಶಿವಪ್ರಸಾದ್ ನಮ್ಮ ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಬರೆದಿರುವ ಪತ್ರವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ..ಹಾಂ ಅವರು ಬರೆಯುತ್ತಿರುವ ಬ್ಲಾಗಿನಲ್ಲಿ ನಮ್ಮ ಬ್ಲಾಗಿನ ಪರಿಚಯ ಮಾಡಿಕೊಟ್ಟಿದ್ದಾರೆ. )
ಓವರ್ ಟು ಲೆಟರ್...

ದುರ್ಗದ ಹುಡುಗರಿಗೆ ಜೈ!ನಿಜಕ್ಕೂ ಒಳ್ಳೆಯ ಪ್ರಯತ್ನ!
ನನಗೆ ತಿಳಿದ ಮಟ್ಟಿಗೆ ದುರ್ಗದ ಹುಡುಗರಲ್ಲಿ ಬಹುತೇಕರು ಈಗ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಆದರೂ ತಮ್ಮ ಊರಲ್ಲಿ ನಡೆಯಬೇಕಿರುವ ಸಾಹಿತ್ಯ ಸಮ್ಮೇಳನ ಕುರಿತು ಚರ್ಚೆ ನಡೆಸಲಿಕ್ಕೆ ಎಲ್ಲರೂ ಒಂದಾಗಿ ಬ್ಲಾಗ್ ಆರಂಭಿಸುವುದಿದೆಯಲ್ಲ... ಅದು ಗಮನಿಸಬೇಕಾದ್ದು. ನಿಮ್ಮ ಒಳಗೆ ಇರುವ ನಿಮ್ಮಊರಿನ ಬಗೆಗಿನ ಅಭಿಮಾನ ಗ್ರೇಟ್! ಆದರೆ ಇಲ್ಲಿ ಬ್ಲಾಗ್ ನಲ್ಲಿರುವ 'ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ' ಬರಹ ಕುರಿತ ನನ್ನ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.
1. ಸಾಹಿತ್ಯ ಯಾರಪ್ಪನ ಮನೆ ಸೊತ್ತೂ ಅಲ್ಲ. ಸಾಹಿತ್ಯದ ಬಗ್ಗೆ ತಿಳಿಯದವರು, ಬರೆಯದವರು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂಬುದು ಕನ್ನಡಕ್ಕೆ ಮಾಡುವ ಮೊದಲ ದ್ರೋಹ.
2. ದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಾಗ ಎಲ್ಲರೂ ಒಂದಾಗಿ ಕನ್ನಡದ ತೇರು ಎಳೆಯುವುದು ಬಿಟ್ಟು, ಅವರಿಗೆ ಬರೆಯೋಕೆ ಬರೋಲ್ಲ, ಇವರು ಇಂಥಹವರು, ಅವರುಒಪ್ಪಿಕೊಂಡು ಬಂದಿದ್ದಾರೆ, ಅವರೇ ಮಾಡಲಿ ಎಂದು ಯೂಸ್ಲೆಸ್ ಮಾತುಗಳನ್ನು ಹೇಳುವುದಿದೆಯಲ್ಲ, ಅದು ಕನ್ನಡಕ್ಕೆ ಮಾಡುವ ಎರಡನೇ ದ್ರೋಹ.
3. ಮೂರನೆಯದಾಗಿ ಗಣಿ ಧಣಿಗಳು ಪೂರ್ತಿ ಸಹಕಾರ ಕೊಡುವುದಿದ್ದರೆ ಅದನ್ನು ಖಂಡಿತಾ ಕನ್ನಡದ ಕೆಲಸಕ್ಕೆ ಬಳಸಿಕೊಳ್ಳಬೇಕು. ಕೇವಲ ಗಣಿಧಣಿಗಳು, ಶಾಸಕರನ್ನು ಖರೀದಿಸಿದರು, ಅಲ್ಲಿ ಹಾಗೆ ಅನ್ಯಾಯ ಮಾಡಿದರು, ಹೀಗೆ ಮಾಡಿದರು ಎಂದು ಹೀಗಳೆಯುವುದು ಕೇವಲ ಸಿನಿಕತನ. ಅವರಲ್ಲಿರುವ ಹಣ ಒಳ್ಳೆಯದಕ್ಕೆ, ಅದರಲ್ಲೂ ಕನ್ನಡದ ಕೆಲಸಕ್ಕೆ ಬಳಕೆಯಾಗುವುದಿದ್ದರೆ ಯಾಕೆ ಬೇಡ? ಸಮಾಜದಲ್ಲಿ ಹಣವುಳ್ಳವರು ಅನೇಕರಿದ್ದಾರೆ. ಅವರನ್ನು ಹಿಡಿದು ತಂದು ಇಂತಹ ಕೆಲಸಕ್ಕೆ, ಅವರನ್ನು ತೊಡಗಿಸುವುದು ನಿಜಕ್ಕೂ ಅರ್ಥಪೂರ್ಣ. ಇಂತಹ ಉತ್ತಮ ಕೆಲಸಕ್ಕೆಅಂಥಹವರನ್ನು ಎಳೆದು ತಂದು ಜೋಡಿಸದಿದ್ದರೆ, ಅವರು ಗಳಿಸಿದ ಹಣ ಸದ್ವಿನಿಯೋಗವಾಗುವುದಾದರೂ ಹೇಗೆ? ಗೋ ಅಹೆಡ್.
4. ಕೇವಲ ಸಾಹಿತ್ಯ ಬರೆಯುವವರಿಂದಲೇ ಸಮ್ಮೇಳನ ನಡೆಸಲು ಆಗುವುದಿಲ್ಲ. ಅದಕ್ಕೆ ಸಂಘಟಕರು ಬೇಕು. ವಿವಿಧ ರೀತಿಯ ಜನರನ್ನು ಒಗ್ಗೂಡಿಸಿ, ಅವರಿಂದ ಕೆಲಸ ತೆಗೆಸುವ ಕಲೆಗೊತ್ತಿರಬೇಕು. ಅಂತಹ ಸಂಘಟನಾ ಚಾತುರ್ಯ ಇದ್ದರೆ ಅನಕ್ಷರಸ್ಥ ಕೂಲಿ ಕೆಲಸದವನನ್ನು ಬಳಸಿದರೂ ನಾನು ಬೇಡ ಅನ್ನುವುದಿಲ್ಲ. ಅಂತಾದ್ದರಲ್ಲಿ ಒಂದು ಕ್ಷೇತ್ರದ ಶಾಸಕರಾದ ಬಸವರಾಜನ್ ಏಕೆ ಬೇಡ? ಅವರ ಇತರೆ ಅಂಶಗಳು ನಮಗೆ ಬೇಕಿಲ್ಲ. ಆದರೆ ಅವರ ಚಾತುರ್ಯ ಏಕೆ ಬಳಸಬಾರದು?? ಮೇಲಾಗಿ ಅವರಿಗೆ ಜನರು ನೀಡಿದ ಅಧಿಕಾರವಿದೆ. ಅವರು ಬೇಡ ಎನ್ನುವ ಹಕ್ಕುಯಾರಿಗೂ ಇಲ್ಲ.
5. ಕೇವಲ ಸಾಹಿತ್ಯವನ್ನೇ ಬರೆದುಕೊಂಡಿರುವ ಸಾತ್ವಿಕ ಸ್ವಭಾವದ ಸಾಹಿತಿಗಳನ್ನುಕಟ್ಟಿಕೊಂಡು ಸಾಹಿತ್ಯ ಸಮ್ಮೇಳನ ನಡೆಸುವುದು ಸಾಧ್ಯವೇ? ಸಾಹಿತಿಗಳಿಗೆ ಬರೆಯುವ ಕೆಲಸ. ಅವರದ್ದು ಸಂಕೋಚದ ಮನಸ್ಸು. ಯಾರ ಮುಂದೂ ಕೈಯೊಡ್ಡಲಾರದ ಸ್ವಾಭಿಮಾನ. ಅವರದ್ದೇನಿದ್ದರೂ, ಶಾಂತ ಸಾಹಿತ್ಯದ ಕೆಲಸ. ಆದರೆ ಅದನ್ನು ಜನರ ಬಳಿಗೆ ತಲುಪಿಸಲು ನೂರಾರು ಜನ ಸಾಹಿತ್ಯ ರಚಿಸಲಿಕ್ಕೆ ಬರದವರೂ ಕೈ ಜೋಡಿಸಬೇಕು. ಸಾಹಿತ್ಯ ಸಮ್ಮೇಳನದ ದಿನನೆರೆದ ಜನರಿಗೆ ಕಲ್ಲಂಗಡಿ ಹಣ್ಣು, ಸೌತೆಕಾಯಿ ಕುಯ್ದು ಕೊಡುವವ, ಮಂಡಕ್ಕಿ, ಮೆಣಸಿನಕಾಯಿ ತಯಾರಿಸಿ ಕೊಡುವವರದ್ದೂ ಸಹ ಸಾಹಿತ್ಯದ ಸೇವೆ, ಕನ್ನಡಮ್ಮನ ಸೇವೆ ಎಂಬುದು ನೆನಪಲ್ಲಿರಬೇಕು. ಎಲ್ಲರೂ ಸೇರಿಯೇ ಕೆಲಸವಾಗುವುದು.
6. ವೀರೇಶ್ ಅವರು ದುರ್ಗದ ಮೇಲಿನ ಅಭಿಮಾನಕ್ಕೆ, ಅದರಲ್ಲೂ 75 ನೇ ಸಾಹಿತ್ಯ ಸಮ್ಮೇಳನನಮ್ಮ ಊರಿನಲ್ಲೇ ಆಗಬೇಕು ಎಂದು ಬಯಸಿ ಒಪ್ಪಿ ಬಂದಿರುವಾಗ, ಅದು ಅವರ ನಿರ್ಧಾರ. ಒಪ್ಪಿಕೊಂಡು ಬಂದಿರುವ ಅವರೇ ಸಮ್ಮೇಳನ ಮಾಡಿಕೊಳ್ಳಲಿ ಎಂಬ ಧೋರಣೆ ಅಕ್ಷಮ್ಯ ಅಪರಾಧ.ಇದಕ್ಕಿಂತ ದೊಡ್ಡ ದ್ರೋಹ ಬೇರೊಂದಿಲ್ಲ. ವೀರೇಶ್ ಅವರ ಕಳಕಳಿ ಎಲ್ಲರೂ ಗಮನಿಸಬೇಕು.ಅವರ ಕಳಕಳಿಗೆ ಎಲ್ಲಾ ದುರ್ಗದ ಜನರೂ ಕೈ ಜೋಡಿಸಬೇಕು. ಕನ್ನಡ ಸಾಹಿತ್ಯ ಲೋಕದಲ್ಲಿಮೈಲುಗಲ್ಲಾಗಿರುವ 75 ನೇ ಸಮ್ಮೇಳನವನ್ನು ದುರ್ಗದಲ್ಲಿ ನಡೆಸಲು ಒಂದಾಗಿ ನಿಲ್ಲಬೇಕು.ಇಂತಹ ಅವಕಾಶ ಎಲ್ಲರಿಗೂ, ಯಾವಾಗಲೂ ಸಿಗದು ಎಂಬುದು ಗಮನದಲ್ಲಿರಲಿ.
7. ಇಂತಹ ಅಡ್ಡದಾರಿಯಲ್ಲಿ ಯೋಚಿಸುವನ್ನು ಬಿಟ್ಟು ದುಗದ ಜನ ಯಾವುದೇ ಕಾರಣಕ್ಕೂ 75 ನೇಸಮ್ಮೇಳನ ತಮ್ಮ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ರಾಜಕೀಯಪರಿಸ್ಥಿತಿಯಲ್ಲಿ ದುರ್ಗದ ಜನರ ನಿರ್ಲಕ್ಷ, ಒಡಕುತನ, ಆರೋಪ-ಪ್ರತ್ಯಾರೋಪ ನೋಡಿ, ಇವರಿಂದ ಏನೂ ಆಗೋಲ್ಲ ಎಂದು ಬೇರೆ ಜಿಲ್ಲೆಗೆ ಇದರ ಅವಕಾಶ ಜಾರದಿರಲಿ. ದುರ್ಗದ ಹುಡುಗರು ಹೇಳಿರುವಂತೆ ಇನ್ನಾದರೂ ಈ ಬಗ್ಗೆ ಪಾಸಿಟಿವ್ ಆಗಿ ಜನರು ಚಿಂತಿಸಲಿ. ದುರ್ಗದ ಜನರು ಒಂದಾಗಿ 75 ನೇ ಸಮ್ಮಳನದ ಬಗ್ಗೆ ಸಂಘಟಿತ ಪ್ರಯತ್ನ ಆರಂಭವಾಗಲಿ. ಜೈ ಕನ್ನಡ

Thursday, July 24, 2008

ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ...

ಅಂತು ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನದ ಸಂಚಲನ ಉಂಟಾಗಿದೆ. ಈಗ ಬಂದಿರುವ ವರ್ತಮಾನ ಕಳೆದೊಂದು ತಿಂಗಳಲ್ಲಿ ಸಮ್ಮೇಳನದ ಬಗ್ಗೆ ಆಗಿರುವ ಚರ್ಚೆಗಳ ಸುದ್ದಿ ಹೊತ್ತು ತಂದಿದೆ. ನಿಮಗೆ ನೆನಪಿರಬಹುದು. ಈ ಹಿಂದೆ ನಾವು ಸಮ್ಮೇಳನದ ಸೊಲ್ಲಿಲ್ಲ ಎಂದು ನಿರುತ್ಸಾಹದಿಂದ ಮಾತುಗಳನ್ನಾಡಿದ್ದೆವು.
ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಮ್ಮೇಳನದ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿವೆ. ಜಿಲ್ಲೆಯವರೇ ಆದ ಷಣ್ಮುಖಪ್ಪ ಎಂಬುವರು ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಗೊಂದು ಪತ್ರ ಬರೆದಿದ್ದರು.
ಬಹುಶಃ ಇದು ಸಾಹಿತ್ಯ ಸಮ್ಮೇಳನದ ಘೋಷಣೆಯಾದ ಮೇಲೆ ವಿದ್ಯುಕ್ತ ಚರ್ಚೆಗೆ ಚಾಲನೆ ನೀಡಿದ ಪತ್ರ. ಇದರಲ್ಲಿ ಷಣ್ಮುಖಪ್ಪನವರು ಸಾಹಿತ್ಯದ ಗಂಧವೇ ಇಲ್ಲದ ಶಾಸಕ ಎಸ್.ಕೆ.ಬಸವರಾಜನ್ ಅವರಿಂದ ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣದು ಎಂಬ ಅನುಮಾನದ ಮಾತುಗಳನ್ನಾಡಿದ್ದರು.
ಈ ಪತ್ರ ಪ್ರಕಟವಾಗುವ ಹೊತ್ತಿಗೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕರುಣಾಕರ ರೆಡ್ಡಿ ಸಮ್ಮೇಳನ ಅದ್ದೂರಿಯಾಗಿ ನಡೆಸುವ ಬಗ್ಗೆ ಧನಾತ್ಮಕವಾಗಿ ಹೇಳಿಕೆ ನೀಡಿದರು. ಇದಾದ ಮೇಲೂ ಸಮ್ಮೇಳನದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ. 75ರ ಸಮ್ಮೇಳನವನ್ನು ಕೈಬಿಟ್ಟು, ಮುಂದಿನ ಅಂದರೆ 76ನೆಯದೋ, 77ನೆಯದ್ದನ್ನೋ ಚಿತ್ರದುರ್ಗದಲ್ಲಿ ನಡೆಸೋಣ ಎಂಬಂಥ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮಿತ್ರರೇ, ಷಣ್ಮುಖಪ್ಪನವರಿಗೆ ಒಂದು ಮಾತು ಹೇಳಲೇಬೇಕು. ಸಮ್ಮೇಳನ ಘೋಷಣೆಯಾಗಿದೆ. ಇದರ ಮುಂದಾಳತ್ವದಲ್ಲಿ ಸ್ಥಳೀಯ ಶಾಸಕರು ಇದ್ದೇ ಇರುತ್ತಾರೆ. ಈ ವಿಷಯದಲ್ಲಿ ಅವರ ಹೊಣೆ ಹೆಚ್ಚೇ. ಅವರಿಗೆ ಸಾಹಿತ್ಯ ಗೊತ್ತಿದೆಯೋ ಇಲ್ಲವೋ. ಸಮ್ಮೇಳನದ ಯಶಸ್ಸಿಗೆ ಅದು ಮುಖ್ಯವೆ? ಕನ್ನಡದ ಕೈಂ ಕಾರ್ಯಮಾಡುವವರೆಲ್ಲಾ ಸಾಹಿತ್ಯ ಬಲ್ಲವರೇ ಆಗಬೇಕೆ? ಅವರು ಕನ್ನಡಿಗರು, ಕನ್ನಡದ ನೆಲದಲಿದ್ದಾರೆ. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅಷ್ಟು ಸಾಕಾಗದೆ? ಇಂಥ ವ್ಯಕ್ತಿಗೆ ಸಮ್ಮೇಳನದ ಮಹತ್ವ ಏನು?ಅದು ಹೇಗಾಗಬೇಕು? ಎಂಬ ಬಗ್ಗೆ ಅವರ ಗಮನಕ್ಕೆ ತರಬೇಕು. ಅವರಿಗೆ ಮನವರಿಕೆ ಮಾಡಬೇಕು. ಇಷ್ಟು ಮಾಡಿದರೆ ಸಾಕು. ಬಸವರಾಜನ್ ಅವರ ವಿಷಯದಲ್ಲಿ: ಅವರಿಗೆ ಸಾಹಿತ್ಯ ಸಮಾರಂಭಗಳು ಹೊಸದಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರುವ ಸಂಗತಿ. ಈಗಾಗಲೇ ಅವರು ಜಿಲ್ಲಾ ಸಾಹಿತ್ಯ ಪರಿಷತ್ ಸಮಿತಿಯಲ್ಲಿದ್ದರು ಎಂಬುದು ಒಂದು ಮಾಹಿತಿ. ಅಲ್ಲದೆ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ ಅನುಭವ ಅವರಿಗೆ ಇದೆ. ಹೀಗಿರುವಾಗ ಅವರಿಗೆ ನಾವಿದನ್ನೂ ನಿರೀಕ್ಷಿಸುತ್ತಿದ್ದೇವೆ ಎಂದು ಹುರಿದುಂಬಿಸುವುದನ್ನು ಬಿಟ್ಟು, ನಿಮ್ಮಿಂದೇನು ಆಗದು ಎಂದು ಕಾಲೇಳಿಯುತ್ತಿರುವುದೇಕೆ ಎಂಬುದು ಅರ್ಥವಾಗಿಲ್ಲ.
ಮಿತ್ರರೆ, ಸಮ್ಮೇಳನಕ್ಕೆ ಆರ್ಥಿಕ ಸಮಸ್ಯೆ ಎದುರಾಗುವ ಸಂದೇಹವಿತ್ತು. ಈಗ ಆ ಆತಂಕವೇ ಇಲ್ಲ. ಆ ವಿಶ್ವಾಸ ನೀಡಿದವರು, ನೀಡುವವರು ಕರುಣಾಕರ ರೆಡ್ಡಿ. ಅವರು ಗಣಿ ಧಣಿ. ಸಮ್ಮೇಳನದ ಸಂಪೂರ್ಣ ಹಣಕಾಸಿನ ಹೊಣೆ ಹೊರುವ ತಾಕತ್ತಿರುವವರು. ಹಾಗಾಗಿ ಹಣಕಾಸಿನ ತೊಂದರೆಯ ಮಾತೇ ಬರುವುದಿಲ್ಲ ಎಂಬುದು ನಮ್ಮ ನಂಬಿಕೆ.
ಇರುವುದೊಂದೆ ಸಮಸ್ಯೆ ಒಗ್ಗಟ್ಟಿನದು. ಹೌದು, 75ನೇ ಅಮೃತ ಮಹೋತ್ಸವದ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ಎಂದು ಘೋಷಣೆಯಾದಾಗಿನಿಂದ ಈ ಅಂಶವನ್ನು ನಾವು ಗಮನಿಸಿದ್ದೇವೆ. ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್ ಒಪ್ಪಿಕೊಂಡು ಬಂದಿದ್ದಾರೆ ಮಾಡಲಿ ಎಂದು ಎಲ್ಲರೂ ಹಿಂದೆ ಸರಿದಿದ್ದಾರೆ. ಬೃಹನ್ಮಠ, ಎಸ್.ಕೆ.ಬಸವರಾಜನ್, ಹೀಗೆ ಒಂದಿಷ್ಟು ಹೆಸರುಗಳ ನಡುವೆ ಸಮ್ಮೇಳನದ ಪರ ವಿರೋಧ ಮಾತುಗಳ ವಿನಿಮಯ ಆಗುತ್ತಲೇ ಇವೆ. ಜಿಲ್ಲೆಯವರೇ ಆದವರು ಏನಿರಬಹುದೆಂದು ಊಹಿಸಬಹುದು.
ಇರಲಿ.. ವಿಶೇಷವಾದ ಅವಕಾಶವೊಂದು ಒದಗಿ ಬಂದಿರುವ ವೇಳೆ ಇಂಥ ಸ್ವಪ್ರತಿಷ್ಠೆಯನ್ನು ಬಿಟ್ಟು ಎಲ್ಲರೂ ಕೈಜೋಡಿಸುವುದು ಮುಖ್ಯವಾಗಬೇಕಲ್ಲವೆ? ಜಿಲ್ಲೆಯ ಮಠಾಧೀಶರು ಈ ನಿಟ್ಟಿನಲ್ಲಿ ಒಂದಾಗಿ ಎಲ್ಲರ ಮನವೊಲಿಸಬೇಕು. ಒಗ್ಗಟ್ಟು ಉಂಟು.
ಬಾಗಲಕೋಟೆ, ಮುಧೋಳದಂತ ಜಿಲ್ಲೆಗಳಲ್ಲೇ ಸಮ್ಮೇಳನ ನಡೆಯುತ್ತದೆ. ಅಲ್ಲಿನ ಆ ಮಂದಿ ಅಂಥ ಧೈರ್ಯವನ್ನು ಹೊಂದಿದ್ದಾರೆಂದ ಮೇಲೆ ಚಿತ್ರದುರ್ಗ ಹಿಂದೆ ಬೀಳುವುದರ ಅರ್ಥವೇನು?
ಇನ್ನೇನು ಕಸಾಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಕೆ.ಎಂ. ವೀರೇಶ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಪಶು ವೈದ್ಯ ಇಲಾಖೆಯಲ್ಲೆ ಸೇವೆ ಸಲ್ಲಿಸುತ್ತಿರುವ, ಸಾಹಿತ್ಯ ಸಮಾರಂಭಗಳಲ್ಲಿ ಸದಾ ಕಾಣಿಸಿಕೊಳ್ಳುವ ದೊಡ್ಡಮಲ್ಲಯ್ಯ ಕೂಡ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿವೆ. ನಾಯಕನಹಟ್ಟಿಯ ಟಿ.ಎಂ.ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ ರಾಜ್ಯ ಮಟ್ಟದಲ್ಲಿ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ನಲ್ಲೂರು ಪ್ರಸಾದ್. ಆರ್.ಕೆ. ಕೃಷ್ಣ ಮಾ.ಚ, ಜಿ.ವಿ.ಪ್ರಭಾಕರ್ ರಾವ್, ಲಕ್ಷ್ಮಣ್ ರಾವ್ ಗೋಗಿ, ಡಾ.ಎಸ್.ವಿದ್ಯಾಶಂಕರ, ಡಾ.ಸಿ.ವೀರಣ್ಣ, ಸೋಸಲೆ ಜವರಯ್ಯ ಆ ಏಳು ಮಂದಿ. ಆಗಸ್ಟ್ 24ರಂದು ಮತದಾನ ನಡೆಯಲಿದೆ.

ಇನ್ನಾದರೂ ಸಮ್ಮೇಳನದ ವಿಷಯದಲ್ಲಿ ಜಿಲ್ಲೆಯ ಪಾಸಿಟಿವ್ ಆದ ಆಲೋಚನೆಗಳು ಹುಟ್ಟಲ್ಲಿ, ಕ್ರಿಯಾಶೀಲವಾಗಲಿ.

Wednesday, July 23, 2008

ಪ್ರೋತ್ಸಾಹದ ಸೆಲೆ ಎಂ.ವ್ಯಾಸ ಇನ್ನಿಲ್ಲ..

೬೯ರ ಅಂಚಿನಲ್ಲಿದ್ದೇನೆ... ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು? ಒಂದು ಆಗಾಧ ದೈಹಿಕ ನೋವು ಇಂಥ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ... ‘ಜೀವ ಒಂದು ಉಳಿದರೆ ಸಾಕು’ ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತದೆ- ಕೊನೆಯ ಉಸಿರಿರುವವರೆಗೂ..
ವಾರದ ಕೆಳಗೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕತೆಗಾರ ಎಂ. ವ್ಯಾಸ ಬರೆದ ಪತ್ರ ಅದು. ತಮ್ಮ ಕೊನೆಯ ದಿನಗಳ ಸುಳಿವು ತಮಗೆ ಸಿಕ್ಕಿದೆಯೇನೋ ಎಂಬ ಸೂಚನೆ ಅವರು, ಗೆಳೆಯರಿಗೆ ಕಿರಿಯ ಕತೆಗಾರರಿಗೆ ಬರೆದ ಪತ್ರದಲ್ಲಿತ್ತು.
ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ವಿಭಿನ್ನ ಸ್ಥಾನ ಸಂಪಾದಿಸಿಕೊಂಡಿದ್ದವರು ಎಂ. ವ್ಯಾಸ. ಅವರ ಕತೆಗಳ ಜಗತ್ತೂ ಮನೋಜಗತ್ತೂ ವಿಕ್ಷಿಪ್ತವಾಗಿರುತ್ತಿತ್ತು. ಸಂಭಾಷಣೆ ಧಾಟಿಯಲ್ಲಿ, ಪಾತ್ರಗಳ ಒಳಗುದಿ, ಒಳತೋಟಿ, ತಲ್ಲಣ ಮತ್ತು ಆತಂಕಗಳನ್ನು ಅವರು ಮನೋವಿಜ್ಞಾನಿಯ ನಿಖರತೆ ಹಾಗೂ ಕಥೆಗಾರನ ಕಸಬುದಾರಿಕೆಯ ಸಮ್ಮಿಶ್ರದಲ್ಲಿ ನಿಭಾಯಿಸುತ್ತಿದ್ದರು.
ಎರಡರಕ್ಷರದ ಕತೆಗಳಿಗೆ ಹೆಸರುವಾಸಿಯಾಗಿದ್ದವರು ವ್ಯಾಸ. ಆರಂಭದ ಮಿನಿ ಕಾದಂಬರಿ ‘ಕಂಬನಿ’ಯನ್ನು ಹೊರತುಪಡಿಸಿದರೆ, ಉಳಿದೆಲ್ಲ ಕತೆಗಳಿಗೆ ಎರಡೇ ಅಕ್ಷರದ ಆಕರ್ಷಕ ಶೀರ್ಷಿಕೆ. ಬೇರು, ಸ್ನಾನ, ಗೆಜ್ಜೆ, ರಥ, ವೃದ್ಧ, ದೋಣಿ, ಕೇಳಿ, ಯಕ್ಷಿ, ಹೆಣ, ಹದ್ದು.. ಹೀಗೆ. ಇಂಥ ಎರಡಕ್ಷರದ ಕತೆಗಾರನ್ನು ಇದೀಗ ಎರಡಕ್ಷರದ ಸಾವು ಕಥಾಲೋಕದಿಂದ ಕಣ್ಮರೆಯಾಗಿಸಿದೆ.
ನಗರ ಪರಿಸರದಿಂದ ದೂರ ಉಳಿದು, ತಮ್ಮದೇ ಕಲ್ಪನೆಯ ದುರ್ಗಾಪುರ, ಶಂಕರಿ ನದಿಗಳನ್ನು ಸೃಷ್ಟಿಸಿದರು, ಆ ನದೀತೀರದ ಊರಲ್ಲಿ ಮನೋಲೋಕದ ಸೂಕ್ಷ್ಮವ್ಯಾಪಾರಗಳನ್ನು ಚಿತ್ರಿಸುತ್ತಿದ್ದ ಎಂ. ವ್ಯಾಸ, ಸಾಹಿತ್ಯದ ಚಳವಳಿಗಳಿಂದ ದೂರ ಉಳಿದವರು. ಅವರು ಬರೆದ ಕತೆಗಳ ಸಂಖ್ಯೆ ಸುಮಾರು ಏಳುನೂರು. ಅವುಗಳ ಪೈಕಿ ಪ್ರಕಟಿತ ಕತೆಗಳು ಮುನ್ನೂರಕ್ಕೂ ಹೆಚ್ಚು. ಕಿರುಕಾದಂಬರಿಗಳು ಓದುಗರ ಮೆಚ್ಚುಗೆಗೆ ಪಾತ್ರವಾದದ್ದಷ್ಟೇ ಅಲ್ಲ ನಾಟಕರೂಪಕ್ಕೆ ಬಂದು ಅನೇಕ ಪ್ರದರ್ಶನಗಳನ್ನೂ ಕಂಡಿದ್ದವು.
ಕಿರಿಯ ಕತೆಗಾರರಿಗೆ ಸದಾ ಪ್ರೆತ್ಸಾಹದ ಸೆಲೆಯಾಗಿದ್ದವರು ವ್ಯಾಸ. ತಾವು ಒಂದು ಒಳ್ಳೆಯ ಕತೆ ಓದಿದರೆ ಸಾಕು, ತಕ್ಷಣವೇ ಪತ್ರ ಬರೆದು ಮೆಚ್ಚಿಕೊಳ್ಳುವ ಹವ್ಯಾಸ ಅವರಿಗಿತ್ತು. ನಾ ಡಿಸೋಜಾ ಸೇರಿದಂತೆ ಹಲವಾರು ಕತೆಗಾರರ ಆರಂಭದ ಕತೆಗಳು ಪ್ರಕಟವಾದದ್ದು ವ್ಯಾಸ ಅವರು ಹೊರತರುತ್ತಿದ್ದ ಅಜಂತಾ ಮಾಸಪತ್ರಿಕೆಯಲ್ಲಿ.
ತನ್ನ ವಿಶಿಷ್ಟ ಶೈಲಿ, ಹರಿತವಾದ ಮಾತುಗಾರಿಕೆ ಮತ್ತು ಅಂತರಂಗದ ಮಾತುಗಳಿಗೆ ದನಿಯಾಗುವ ಕತೆಗಳ ಮೂಲಕ ತಮ್ಮದೇ ಆದ ಓದುಗವಲಯದಿಂದ ವ್ಯಾಸರು ಹೊರನಡೆದಿದ್ದಾರೆ. ಅವರು ಇತ್ತೀಚೆಗಷ್ಟೇ ಅಂಕಣಬರಹಗಳ ಸಂಕಲನ ‘ವ್ಯಾಸಪಥ’ ಹೊರತಂದಿದ್ದರು.
ಇನ್ನು ವ್ಯಾಸರ ಹಳೆಯ ಕತೆಗಳ ಸಹವಾಸದಲ್ಲೇ ಅವರ ಅಭಿಮಾನಿ ಓದುಗರು ತೃಪ್ತರಾಗಬೇಕು. ಅವರು ಸೃಷ್ಟಿಸಿದ ದುರ್ಗಾಪುರದಲ್ಲಿ ಇನ್ನು ಬರೀ ಮೌನ.

( ಬುಧವಾರ ಸಾರಸ್ವತ ಲೋಕವನ್ನು ಅಗಲಿದ ವ್ಯಾಸರನ್ನು ಕುರಿತು ಜೋಗಿ ಬರೆದಿದ್ದು.)

Tuesday, June 10, 2008

ಕೆನ್ನಳ್ಳಿಯಿಂದ ಗೌನಹಳ್ಳಿಗೆ ಬಂದವರು

ಬಡೆತ್ತಿನ ಕಣಿವೆ - ಭೈರಜ್ಜಿಕಣಿವೆ ಮಧ್ಯೆ ಹರಿಯುತ್ತಿದ್ದ ಬಸವನ ಹೊಳೆ ಮಗ್ಗುಲ ಬಯಲಲ್ಲಿದ್ದ ಕೆನ್ನಳ್ಳಿ ಅಥವಾ ಕಂದಗಾನಹಳ್ಳಿ ತಮ್ಮೆದುರಲ್ಲೇ ಹಾಳಾದುದನ್ನು ಕಂಡಿದ್ದ ಸುಂತರ (ಸುಂಕ- ಸುಂತ ಆಗಿದೆ, ವಂಶಸ್ಥರು ಹಿರಿಯೂರಿನಲ್ಲಿ ಸುಂಕ ವಸೂಲಿ ಮಾಡುತ್ತಿದ್ದರಂತೆ) ದಾಸಣ್ಣ, ಸಂಬಂಧಿ ಮಾರನಾಯ್ಕ ಹಾಳೂರನ್ನು ತೊರೆಯಲು ತೀರ್ಮಾನಿಸಿದ್ದರು. ದಾಸಣ್ಣ ಹೆಂಡತಿ ಹುಚ್ಚಮ್ಮಳ ತೌರೂರು ಮರಡಿಹಳ್ಳಿಗೆ, ಮಾರನಾಯ್ಕ ಚಿತ್ರದುರ್ಗ ಸಮೀಪದ ಇಂಗಳದಾಳಿಗೆ (ಆತನಿಗೂ ಅಲ್ಲಿ ಬಂಧುಗಳಿದ್ದರು) ಹೋಗಿ ನೆಲೆಸಲು ತೀರ್ಮಾನಿಸಿದ್ದರು.
ನಸುಕಿನಲ್ಲಿಯೇ ಹೊರಡಬೇಕೆಂದು ತೀರ್ಮಾನಿಸಿದ್ದರಿಂದ, ರಾತ್ರಿಯೇ ಎರಡು ಎತ್ತಿನ ಬಂಡಿಗಳಿಗೆ ಬೇಕಾಗುವ ಸಾಮಾನು ಸರಂಜಾಮು ತುಂಬಿದ್ದರು. ಮೊದಲ ಕೋಳಿ ಕೂಗುತ್ತಲೇ ಎದ್ದು ಕೊನೆ ಅಡಿಗೆ ಮಾಡಿ ಆಡಿನ ಹಾಲು, ಆಕಳ ಹಾಲಿಗೆ ಒಂದೆರಡು ಪಾವು ಬೆಳ್ಳುಳ್ಳಿ - ಒಂದೆರಡು ಮೆಣನಸಿನಕಾಯಿ ಕೆಂಡದ ಮೇಲೆ ಬಿಸಿ ಮಾಡಿ ಹಾಕಿ ಕಿವಿಚಿಕೊಂಡು ಒಂದೊಂದು ಬಿಸಿ ಬಿಸಿ ರಾಗಿ ಮುದ್ದೆ ಉಂಡ ಶಾಸ್ತ್ರ ಮಾಡಿದ್ದರು. ಹಾದಿ ಮಧ್ಯೆ ಮಕ್ಕಳಿಗೆಂದು ಬುತ್ತಿಯನ್ನೂ ಕಟ್ಟಿದ್ದರು, ಹೆಂಗಸರು.
ಮಲಗಿದ್ದ ಮಕ್ಕಳನ್ನು ಏಳಿಸಿ ಮುಖಕ್ಕೆ ನೀರೆರಚಿ ಅವಕ್ಕೂ ತಿನ್ನೋವಷ್ಟು ಮುದ್ದೆ ತಿನ್ನಿಸಿ ಹೆಂಗಸರು, ಮಕ್ಕಳನ್ನು ಬಂಡಿಯಲ್ಲಿ ಕೂರಿಸಿ, ಖಾಲಿ ಮನೆಗಳಿಗೆ ಕಾಡು ಮಿಕಗಳು ಸೇರಬಾರದಲ್ಲ ಎಂದು ಬೀಗ ಹಾಕಿದ್ದರು. ಬೆಳೆದ ಗಂಡು ಮಕ್ಕಳು ಆಕಳು ಮೇಕೆಗಳನ್ನು ನಡೆಸಿಕೊಂಡು ಮುಂದೆ ಮುಂದೆ ನಡೆದರೆ, ದಾಸಣ್ಣ, ಮಾರನಾಯ್ಕ ಮತ್ತು ಹೆಂಗಸರು ಕಟ್ಟಿ ಬೆಳೆದ ಊರು ತೊರೆಯಬೇಕಲ್ಲಾ ಎಂಬ ಅವ್ಯಕ್ತ ಪ್ರೀತಿಯಿಂದ ಒತ್ತಿಬಂದ ಕಣ್ಣೀರನ್ನು ಒರೆಸಿಕೊಂಡು ಹೊರಟರು. ಮೂಡಲಲ್ಲಿ ಕೆಮ್ಮೋಡಗಳು ಹೊತ್ತು ಮೂಡುತ್ತಿರುವುದನ್ನು ಸೂಚಿಸುತ್ತಿದ್ದವು.
ಮೂಡಲ ಗುಡ್ಡದ ಸಂತೆ ಕಣಿವೆಯಲ್ಲಿ ಕಗ್ಗಲ್ಲ ದಾರಿಯಲ್ಲಿ ಒಗ್ಗಾಲಿ, ಗುಂಡಿ ಗೊಟರುಗಳಲ್ಲಿ ಬಂಡಿಗಳನ್ನು ಹತ್ತಿಸಿ, ಕಣಿವೆ ಭೂತಪ್ಪನಿಗೆ ಅಡ್ಡ ಬಿದ್ದು, ದೂರದಲ್ಲಿ ಕನ್ನಳ್ಳಿ ದಿಕ್ಕಿಗೆ ಕಾಣುತ್ತಿದ್ದ ಭೂಚಕ್ರದ ಕೊಡೆಯಂತಿದ್ದ ದೊಡ್ಡ ಕಮರದ ಮರ, ಹಾಲಗುಡ್ಡ, ಭೈರಜ್ಜಿಕಣಿವೆ, ರಾಮದಾಸನ ಮರಡಿ ಮುಂತಾದುವನ್ನು ನಿರ್ವಿಕಾರ ಮನೋಭಾವದಿಂದ ನೋಡಿ, ಬಂಡಿಗಳನ್ನು ಬಡಗಲು ದಿಕ್ಕಿಗೆ ತಿರುಗಿಸಿದರು.
ಆ ತನಕ ದಿಕ್ಕೆ ತೋಚದೆ ಶೂನ್ಯ ಮನಸ್ಕರಾಗಿ ಬಂಡಿ ಹಿಂದೆ ನಡೆಯುತ್ತಿದ್ದ ದಾಸಣ್ಣ, ಮಾರನಾಯ್ಕರಿಗೆ ಹಾಳಾದ ಊರು ಬಿಟ್ಟು ನೆಂಟರಿಷ್ಟರ ಊರುಗಳಿಗೆ ಹೋಗುವ ಪರಿಸ್ಥಿತಿ ಬಂದುದಕ್ಕೆ ನಿರಾಶೆ, ವ್ಯಾಕುಲ ಮನಸ್ಸು ತುಂಬಿದ್ದವು. `ಹೆಂಗಾದ್ರೂ ಮಾಡಿ ಬದುಕಬೇಕು, ಇದಕ್ಕೆ ಅಂಜಿದರೆ ಅವನು ಹೇಡಿ` ಅನ್ನುವ ಭಾವನೆಕೂಡ ಇಬ್ಬರಲ್ಲೂ ಮೂಡಿತ್ತು. ಆದರೂ `ಪರಸ್ಥಳ ಪರಮಕಷ್ಟ` ಅನ್ನೋ ಗಾದೆ ಮಾತಿನಂತೆ ಏನೇನು ಅನುಭವಿಸಬೇಕೋ ಎಂದು ಯೋಚಿಸುತ್ತಿದ್ದರು.
`ಎಣ್ತಿ ಅಣ್ಣಂದಿರು ದೇವರಂಥ ಮನುಷ್ಯರು, ಊರು ಬಿಟ್ಟು ಬರ್ರಿ ಅಲ್ಲೇನೈತೇ ಅಂತ ಇದೀರಾ` ಅಂತ ನಾಕೈದು ಬಾರಿ ವಿವೇಕದ ಮಾತು ಹೇಳಿದ್ರು. ಆದ್ರೂ ಏಸು ದಿನಾ ನೆಂಟರ ಮನೆಯಾಗಿರೋದು. ಬ್ಯಾರೆ ಮನೆ ಕಟ್ಟಿಕೋಬೇಕು. ಕೂಲಿ ನಾಲಿ ಮಾಡಿ ಮರುವಾದೆಯಿಂದ ಬಾಳಬೇಕು ಅನ್ನೋ ವಿಚಾರ ಮಾಡಿದ್ದರು.
ಆಕಳು ಆಡಿನ ಹುಡುಗರು ಹಿಂದೆ ಉಳಿದಿದ್ದರು. ಅವರನ್ನು ಕೂಡಿಕೊಳ್ಳುವ ಸಲುವಾಗಿ ಬಂಡಿಗಳನ್ನು ಕರೇ ಚಿಕ್ಕಯ್ಯನ ಕೊಪ್ಪದ ಹಳ್ಳದ ಬಳಿ ನಿಲ್ಲಿಸಿ ಎತ್ತುಗಳಿಗೆ ನೀರು ಕುಡಿಸಲು, ಬಂಡಿ ನಡೆಸುತ್ತಿದ್ದವರಿಗೆ ತಿಳಿಸಿ ಹಿಂದೆ ಉಳಿದರು. ದಾಸಣ್ಣನ ಮಗ ಓಬಳೇಶಿ ಗಾಡಿ ಕುಲುಕಾಟಕ್ಕೆ ರೋಸಿ ಬಂಡಿಯಿಂದ ನಡೆದು ಬರುತ್ತಿದ್ದವರನ್ನು ಕೂಡಿಕೊಂಡಿದ್ದ. `ಬಾಳ ದೂರ ನಡೀಬೇಕಪ್ಪಾ, ಕಾಲು ನೋವು ಬರುತ್ತೆ ಹೋಗಿ ಬಂಡಿ ಹತ್ಕೋ` ಅಂದರೂ ಕೇಳದೆ ಅವರ ಜೊತೆಯಲ್ಲಿಯೇ ನಡೆದಿದ್ದ.
ಆವಾಗ ಮಾರನಾಯ್ಕ `ಮಾಮಾ ಊರಂತೂ ಹಾಳಾಗೋಯ್ತು. ದೇವರ ಶಾಪಾನೇ ಇರಬೇಕು ಒಂದು ನರಪಿಳ್ಳೆ ಕೂಡ ಉಳೀಲಿಲ್ಲ. ಮುಂದೆ ಹೊಲ- ಮನೆಗತಿ ಹೆಂಗೆ` ಎಂದು ತನ್ನ ಸಂಕಟವನ್ನು ದಾಸಣ್ಣನ ಮುಂದಿಟ್ಟ. `ಈಗ ಮೂರು ವರ್ಸಾತು ಮಳೆ ಹನಿ ಅಂಬೋದು ನೆಲ ಮುಟ್ಟಿಲ್ಲ. ಮುಂದೇ ಕಾಲಕ್ಕೆ ಸರಿಯಾಗಿ ಬರುತ್ತೆ ಎಂಬ ನಂಬ್ಕೆ ಸಾಲ್ದು. ಸಾಕಿದ ಮ್ಯಾಕೆ ಮಾರಿಕೊಂಡು ಏಸು ದಿನ ಬದುಕಾಕಾದೀತು. ನೋಡ ಅಂಥ ಸುಭಿಕ್ಷದ ಕಾಲ ಬಂದ್ರೆ ಗೌನಳ್ಳೀಗ್ಯಾರಾನ ಕೋರಿಗೆ ಮಾಡ್ಯಾರು` ಮುಂದೆ ಹೆಂಗೋ, ಇರುವ ಎಂಬತ್ತು ಕೋಟಿ ಸಾಕೋನು ಅವನು ಅದಾನಲ್ಲಾ, ಏನಾದ್ರೂ ದಾರಿ ತೋರುಸ್ತಾನೆ` ಅಂದು ದಾಸಣ್ಣ ದಾರೀ ಕಡೆ ನೋಡಿದ. ದೂರದಲ್ಲಿ ಹುಡುಗರು ಮೇಕೆಗಳನ್ನು ಕರೆಯುತ್ತಿರುವ ಸಿಳ್ಳು, ಮುಂತಾದವು ಕೇಳಿಸುತ್ತಿದ್ದುವು.
`ದೇವ್ರೂ ಅಂಬೋನು ಇದಾನೇ ಅಂತೀಯಾ. ಇದ್ದಿದ್ರೇ ಮಳೆ ಯಾಕೆ ಮುಗಿಲು ಸೇರ್‌ಕೊಂಡ್ವೋ ನಾವು ಕೆನ್ನಳ್ಳಿ ಯಾಕೆ ಬಿಡಬೇಕಾಗಿತ್ತು` ಮಾರಯ್ಯನ ಹತಾಶೆಯ ಪ್ರತಿಕ್ರಿಯೆ. ನೀನೇ ನೋಡಿದ್ಯೆಲ್ಲಪ್ಪ ಮಾಡಬಾರದ್ದು ಮಾಡಿದ್ರೆ ಆಗಬಾರದು ಆಗುತ್ತೆ, ಅನ್ನೋದಕ್ಕೆ ಸಾಕ್ಷಿಯಂಗೆ ತಾವು ಸಾಯೋದಲ್ದೇ ಇಡೀ ವಂಶವೇ ನಿರ್ವಂಸ ಆಗೋದ್ವು ಊರಿಗೆ ಮುನಿ ನೆಳ್ಳು ಬಿದ್ದತೇ ಅಂತ ಒಂದಲ್ಲ ಎಳ್ಡುಕಡೆ ಊರು ಕಟ್ಗಂಡ್ರು ಅದ್ರೆ ತಮ್ಮ ಅನ್ಯಾಯ, ಅತ್ಯಾಚಾರ ಬಿಡಲಿಲ್ಲ. ಕಾಣದೋರ ಕುರಿ, ಮ್ಯಾಕೆ ಮೆಯ್ಯಾಕೆ ಹಳ್ಳದ ನೀರಿಗಂತ ಇತ್ಲಾಗೆ ಬಂದ್ರೆ ಅವನ್ನೇ ಹಿಡಿಕಂಡು ಕೊಯ್ಕುಂಡು ತಿಂದ್ರು. ಯಾರಾದ್ರೂ ದಾರಿ ಹೋಕರು ಬಸವನಹಳ್ಳದ ಕಡೇಲಿಂದ ತ್ರಿಶೂಲ್ಡಳ್ಳದ ಕಡೇಲಿಂದ ಬಂದ್ರೆ ಬಚ್ಚಿಟ್ಟುಕೊಂಡು ಹಳ್ಳದಾಗೆ ಹಿಡಕಂಡು ಅವರ ಹತ್ತಿರ ಇದ್ದಿದ್ದನ್ನೆಲ್ಲಾ ದೋಚುತ್ತಿದ್ದರು.
ದಾಸಪ್ಪನ ಬಂಡಿ ನೆಂಟರ ಮನೆಯಂಗಳದಲ್ಲಿ ಹೋಗಿ ನಿಂತಾಗ ಪಡುವಲಲ್ಲಿ ಹೊತ್ತು ಎರಡು ಮಾರು ಅಂತರದಲ್ಲಿತ್ತು. ಆಡು, ಆಕಳ ಸಮೇತ ಬಂದಿಳಿದ ಬೀಗರ ಕುಟುಂಬವನ್ನು ಮರಡಿಹಳ್ಳಿಯವರು ಸಂತೈಸುವ ರೀತಿಯಲ್ಲೇ ಸ್ವಾಗತಿಸಿದರು. ಅವರ ಮನೆಯ ಓಲೆಗಳು ಧಗ್ಗನೆ ಹೊತ್ತಿಕೊಂಡವು
ಸಂಜೆ ಆಕಳು, ಎಮ್ಮೆ ಕರ -ಮರೀನೆಲ್ಲಾ ದನದ ಕೊಟ್ಟಿಗೇಲಿ ಕಣ್ಣಿ ಹಾಕಿ ಕದಾ ಮುಂದಕ್ಕೆಳಕೊಂಡು ಬಂದ ಎಂಜಪ್ಪ ಗೌಡ್ರಿಗೆ ಅಟ್ ಮಾಳಿಗೆ ಜಗುತಿ ಮ್ಯಾಲೆ ಕುಂತುಕೊಂಡಿದ್ದ ಎಂಟತ್ತು ವರ್ಷ ಪ್ರಾಯದ ಹುಡುಗನ್ನ ನೋಡಿ ಆಶ್ಚರ್ಯವಾಯಿತು. ಇವನನ್ನ ಈ ಮುಂಚೆ ಎಲ್ಲೂ ಕಂಡ ನೆನೆಪಿರಲಿಲ್ಲ. ಹಾಗಾಗಿ ‘ಯಾವೂರಪ್ಪ, ಹೆಸರೇನು' ಎಂದು ವಿಚಾರಿಸಿದರು. ಹುಡುಗ ಬಾಯಿ ಬಿಡಲಿಲ್ಲ. ಬದಲು ಕೆಳ ಮಾರೇ ಮಾಡಿ ಕುಳಿತಿದ್ದವನು ಎದ್ದು ನಿಂತ. ಮೂಕಗೀಕ ಇರಬೇಕೆಂದುಕೊಂಡು ಮನೆ ಒಳಗೆ ಕರೆದರು. ಹುಡುಗ ಗೌಡರನ್ನು ಹಿಂಬಾಲಿಸಿದ್ದ.
ಎಂಜಪ್ಪಗೌಡರು ಆಕಳು, ಎಮ್ಮೆ ಹಾಲು ಕರೆಯಲು ಕರುಗಳನ್ನು ಊಡಲು ಬಿಟ್ಟು , ಅವುಗಳ ತಾಯಂದಿರು ಹಾಲು ಇಳಿಸಿದಾಗ ಕರುಗಳನ್ನು ಗೂಟಕ್ಕೆ ಕಣ್ಣಿ ಹಾಕಲು ಮುಂದಾದಾಗ ಹುಡುಗ ಕರುಗಳನ್ನು ಅವುಗಳ ಅಮ್ಮಂದಿರ ಮುಂದೆ ಹಿಡಿದು ನಿಂತು ಅವು ಮಕ್ಕಳನ್ನು ನೆಕ್ಕುತ್ತಾ ಚೊಂಬು ತುಂಬಾ ಹಾಲು ನೀಡಿದ್ದವು. ಹುಡುಗನಿಗೆ ಕರೆದುಕೊಟ್ಟಿದ್ದರು. ಹೊದೆಯಲು ಕಂಬಳಿ ನೀಡಿದ್ದರು, ಗೌಡರ ಮನೆಯವರು.
ಅಟ್‌ಮಾಳಿಗೇಲಿ ಮಲಗಿದ್ದ ಹುಡುಗ ಪಲ್ಪರಿಯುತ್ತಲೇ ಎದ್ದು ದನಕರುಗಳ ಸಗಣಿ ಬಾಚಿ ಈಚಲ ಪುಟ್ಟಿಗಳಿಗೆ ತುಂಬಿಸಿದ್ದ. ಗೌಡರ ಮನೆ ಮಂದಿಗೆ ಇದನ್ನು ನೋಡಿ ಸೋಜಿಗವಾಗಿತ್ತು. ಯಾರೋ ‘ಬದುಕಿ ಬಾಳಿದವರ ಮಗನಿರಬೇಕು' ಅಂದುಕೊಂಡಿದ್ದರು. ಕೈ ತೊಳೆದುಕೊಳ್ಳಲು ಬಿಸಿ ನೀರು ನೀಡಿದ್ದರು.
ಚಿಕ್ಕುಂಬತ್ತಿಗೆ ಬಿಸಿ ಬಿಸಿ ರಾಗಿಮುದ್ದೆ ಸೊಪ್ಪಿನ ಸಾರು ಊಟಕ್ಕೆ ನೀಡಿದ್ದರು. ಬಿಸಿ ಸಾರಿಗೆ ಕವಣಿಗಲ್ಲಷ್ಟು ಬೆಣ್ಣೆ ಹಾಕಿದ್ದರು. ಹುಡುಗ ಇಂಥಾ ಊಟ ಉಂಡು ಎಷ್ಟೋ ವರ್ಷವಾಗಿದ್ದವು. ಕಣ್ಣೀರು ಬಳ ಬಳ ಇಳಿದಿದ್ದವು. ಉಂಡು ಹೊಲಕ್ಕೆ ಹೊರಟ ಗೌಡರ ಮನೆ ಮಂದಿ ಜತೆ ಹುಡುಗನೂ ಹೊಲಕ್ಕೆ ಹೋಗಿದ್ದ. ಅಲ್ಲಿ ಕಳೆ ಕೀಳುವ ಕೂಲಿಜನರೊಂದಿಗೆ ಕಳೆ ಕಿತ್ತ. ಕಿತ್ತ ಕಳೆಯನ್ನು ಮೆಟ್ಟಿ ತುಂಬಾ ತುಂಬಿ ಹೊಲದ ಬದುವಿಗೆ ಹೊತ್ತೊಯ್ದು ಸುರುವಿದ್ದ. ಹುಡುಗ ಮೂಕನಿರಬೇಕೆಂದು ಗೌಡರ ಮನೆಯವರು ಸಂಜ್ಞೆ ಮೂಲಕ ನಡೆಸಿಕೊಂಡಿದ್ದರು.
ಹುಡುಗ ಬಂದು ಮೂರು ದಿನ ಕಳೆದಿದ್ದವು. ಆ ಸಂಜೆ ಕೆನ್ನಳ್ಳಿ ಕುಂತರ ದಾಸಣ್ಣ ಮತ್ತೊಬ್ಬರು ಗೌಡರ ಮನೆ ಬಳಿ ಬಂದರು. ‘ನಿಮ್ಮ ಮನೆಗೊಬ್ಬ ಹುಡುಗ ಬಂದಿದಾನಂತೆ, ನಿಜವೆ? ಯಾಕಂದ್ರೆ ನನ್ನ ಒಂಬತ್ತು ವರ್ಷದ ಮಗ ಓಬಳೀಶಿ ಮಳ್ದೀಹಳ್ಳಿಯಿಂದ ತಪ್ಪಿಸಿಕೊಂಡು ಈಗ ಮೂರ್ ದಿನ ಆಗೈತೆ, ಯಾರೋ ಇಂಗಿಂಗೆ ಅಂತ ಹೇಳಿದ್ರು. ನೋಡಾನಾಮ್ತ ಬಂದೆ' ಎಂದು ಅವರು ವಿಚಾರಿಸಿದ್ದರು. ‘ಯಾರೋ ಒಬ್ಬ ಹುಡುಗ ಬಂದೈದಾನೆ. ಮೂಕ ಇದ್ದಂಗೈದಾನೆ. ನಿಮ್ಮುಡುಗನೋ ಏನೋ ಗೊತ್ತಿಲ್ಲ. ಮೂರು ದಿನಕ್ಕೆ ಒಗ್ಕ್ಯಂಡ್ ಬಿಟ್ಟಿದ್ದಾನೆ. ಮಗ್ಗುಲ ಅಟ್ ಮಾಳಗೇಗೆ ಇರಬೇಕು ನೋಡ್ರಿ' ಗೌಡರ ಮನೆಯವರು ತಿಳಿಸಿದ್ದರು.
ಅಟ್ ಮಾಳಿಗೇಲಿ ಬಿಳೀ ಆಕಳು ಒಂದರ ಮೈ ಸವರುತ್ತಾ ತನ್ಮಯನಾಗಿದ್ದ ಮಗನನ್ನು ಕಂಡು ದಾಸಣ್ಣನ ಹೃದಯ ತುಂಬಿ ಬಂದಿತ್ತು. ಕಣ್ಣು ತೇವವಾಗಿದ್ದವು. ‘ಅಪ್ಪಯಾ ಓಬಳೇಶಿ' ಅನ್ನುತ್ತಾ ಮಗನ ಮಖ ಮೈ ಸವರಿ ಅಪ್ಪಿಕೊಂಡು ನಿಟ್ಟುಸಿರು ಬಿಟ್ಟ ದಾಸಣ್ಣ. ಕೂಡಲೇ ಓಬಳೇಶಿ ‘ತಗೀ ನಾನು ಬರಲ್ಲಾ ಇಲ್ಲೇ ಇರ್‍ತೀನಿ' ಎಂದು ಕಣ್ತುಂಬಿಕೊಂಡು ಪ್ರತಿಭಟಿಸಿದ. ಹುಡುಗನ ವರ್ತನೆ ನೋಡಿ ದಾಸಣ್ಣನಿಗೂ ಆತನ ಜೊತೆಗಾರನಿಗೂ ಮತ್ತು ಗೌಡರ ಮನೆಯವರಿಗೂ ಆಶ್ಚರ್ಯವಾಗಿತ್ತು.
‘ಇರಲಿ ಬುದ್ದಿಮಾತು ಹೇಳಿ ಕರಕಂಡೊಗೋನ' ಎಂದು ಆಗ ಸುಮ್ಮನಾಗಿದ್ದರು. ದಾಸಣ್ಣ ಆತನ ಭಾವಮೈದುನ ರಾತ್ರಿ ಗೌಡರ ಮನೆಯಲ್ಲಿ ತಂಗಿ, ಬೆಳಗೀಲೇ ಎದ್ದರೆ ಓಬಲೇಶಿ ಅಷ್ಟೊತ್ತಿಗೇ ಎದ್ದು ಸಗಣಿ ಬಾಚುತ್ತಿರುವುದನ್ನು ಕಂಡು ಆಶ್ಚರ್ಯವೂ, ಅನುಮಾನವೂ ಏಕಕಾಲದಲ್ಲಿ ಉಂಟಾಗಿದ್ದವು. ‘ಕೈತೊಳಕಳಪ್ಪಾ ಊರಿಗೆ ಹೋಗಾನ' ಎಂದು ದಾಸಣ್ಣ ತಿಳಿಸಿದರೂ ಹುಡುಗ , ತಂದೆಯ ಮಾತನ್ನು ಕಿವಿಯೊಳಗೆ ಹಾಕಿಕೊಂಡಿರಲಿಲ್ಲ.
ಅಷ್ಟೊತ್ತಿಗೆ ಎದ್ದು ಅಲ್ಲಿಗೆ ಬಂದಿದ್ದ ಗೌಡರು ಪಟೇಲ್ ಸಿದ್ದಯ್ಯ ‘ದಾಸಣ್ಣ ಬಡಾ ತನಕ ಚಿಕ್ಕುಂಬತ್ತಿಗೆಲೇ ಉಂಡು ಸಮಾಧಾನ ಮಾಡಿ, ಅವನ್ನಾ ಕರಕೊಂಡು ಹೋದಿಯಂತೆ' ಅಂದು ತಡೆದಿದ್ದರು. ಊಟ ಮಾಡಿ ಹೊರಟಾಗಲೂ ಹುಡುಗ ಅಪ್ಪನ ಜೊತೆ ಮರಡಿಹಳ್ಳಿಗೆ ಹೊರಡದೇ ಜಗ್ಗಾಡಿದ್ದ. ದಾಸಣ್ಣನಿಗೆ ಅರ್ಥವಾಗದೇ ಮತ್ತು ತಾಳ್ಮೆಯಿಂದಲೇ ‘ಓಬಳಿ ಹಠಾ ಮಾಡಬ್ಯಾಡಪ್ಪಾ, ಅಲ್ಲಿ ನಿಮ್ಮಮ್ಮಯ್ಯ ಏಟು ಎದಿಯಾರ ಪಡ್ತಾ ಇದಾಳೋ ಏನೋ. ನಿನ್ನ ತಮ್ಮ ತಿಮ್ಮಣ್ಣ ಹೆಂಗೆ ಆಟ ಆಡ್ತಾ ಐದಾನೇ ನೀನೇ ನೋಡಿಯಂತೆ, ನಡೀ ಮರೀ ಜಾಣ ' ಮುಂತಾಗಿ ಕಕ್ಕುಲತೆಯ ಮಾತಾಡಿದರೂ ಓಬಳೇಶಿ ಹೊರಡಲಿಲ್ಲ.
ದಾಸಣ್ಣನಿಗೆ ಸಿಟ್ಟು ಬಂದು ಎರಡೇಟು ಕೊಟ್ಟರೂ ಹುಡುಗ ಜಪ್ಪಯ್ಯ ಅಂದಿರಲಿಲ್ಲ. ಬದಲು ಅವನೇ ಅಳುತ್ತಲೇ ಮಾತಾಡಿದ್ದ. ‘ನಾನು ಬಿಲ್ಕುಲ್ ಅಲ್ಲಿಗೆ ಬರಲ್ಲ. ನೀನೇ ಈ ಊರಿಗೆ ಬಂದು ಇರು' ಅಂದ. ದಾಸಣ್ಣನಿಗೆ ಕೆಲ ಹೊತ್ತು ಏನೂ ತಿಳಿಯದಾಯಿತು.
ಆವಾಗ ಪಟೇಲರು ‘ನೋಡೋ ದಾಸಣ್ಣ ಮರಡಿಹಳ್ಳಿ ನಿನ್ನೇಣ್ತಿ ತೌರೂರು ನಿಜ. ಆದ್ರೂ ಬ್ಯಾರೆ ಊರು ತಾನೆ. ನೆಂಟರ ಮನೆಯಾಗೆ ಎಸ್ ದಿನಾ ಆಮ್ತ ಇರ್ತೀಯ. ಅಲ್ಲ್ಯಾದ್ರೂ ಒಂದು ಬೇರೆ ಮನೆ ಕಟ್ಗಾ ಬೇಕು. ನಿನಮಗ ಈ ಊರ್‍ನ ಇಷ್ಟ ಪಟ್ಟಿದ್ದಾನೆ. ಅವನ ಇಷ್ಟದಂಗೇ ಇಲ್ಲಿಗೇ ಬಂದು ಒಂದು ಮನೆ ಕಟ್ಗಂಡು, ನಿನ್ನ ಕೆನ್ನಳ್ಳಿ ಜಮೀನನ್ನೂ ನೋಡ್ಕೋ ಬೌದು. ಇದರಾಗೆ ವಿವೇಕಾನೂ ಐತೆ. ಯೋಚ್ನೆ ಮಾಡು' ಅಂದು ಸಲಹೆ ನೀಡಿದರು.
ಮಗನ ಮಾತು ಮತ್ತು ಪಟೇಲರ ಸಲಹೆಯನ್ನು ತೂಗಿ ನೋಡಿ ‘ಇದರಾಗೆ ಒಳ್ಳೇದು ಇದ್ದೀತು. ಅದ್ಕೇ ಮಗ ಹಠ ಮಾಡ್ತಾ ಇದಾನೆ. ಆ ಭಗವಂತನಿಚ್ಛೆ ಏನೈತೋ` ಎಂದು ತನ್ನ ಭಾಮೈದನ ಜತೆ ಸ್ವಲ್ಪ ಹೊತ್ತು ಚರ್ಚಿಸಿ ` ಹಂಗೆ ಆಗ್ಲೀ ಗೌಡ್ರೇ, ಈ ವೊತ್ತು ದೇವ್ರು ಮಗನ ರೂಪದಾಗೆ, ನಿಮ್ಮ ರೂಪ ರೂಪದಾಗೆ ನನಗೊಂದು ಹಾದಿ ತೋರುಸ್ತಾ ಇದಾನೆ ಅಂದ್ಕೊಂಡೀನಿ. ನಾವು ಮರಿಡೀಹಳ್ಳೀಗೋಗಿ ತಿರಿಗ್ಕಂಡ್ ಬರಾತಂಕ ಇವನ್ನ ನಿಮ್ಮ ಮಗನಂಗೆ ಅಂದ್ಕಳ್ರಿ` ಅನ್ನುವಾಗ ದಾಸಣ್ಣನಿಗೆ ಎದೆಯ ಮೇಲಿನ ಭಾರವೊಂದು ಸಲೀಸಾಗಿ ಇಳಿದಂಗಾಗಿತ್ತು.
ಗೌನಹಳ್ಳಿಗೆ ಬಂದು ಮೊದಲೊಂದು ಗುಡಿಸಲು ಕಟ್ಟಿಕೊಂಡು ಆನಂತರ ಅದೇ ಜಾಗದಲ್ಲಿ ಮಾಳಿಗೆ ಮನೆಯನ್ನೂ ಕಟ್ಟಿದ ದಾಸಣ್ಣನ ಸಂಸಾರ ಸುಸೂತ್ರವಾಗಿ ನಡೆದಿತ್ತು.
(ಕೃಪೆ: ಕೆಂಡಸಂಪಿಗೆ)

ಗೌನಹಳ್ಳಿಯ ವೃತ್ತಾಂತಗಳು - ರಾಗಿಚೀಲ ಮತ್ತು ಪೊಲೀಸಪ್ಪ

ಊರೆಲ್ಲಾ ಮಲಗಿ ಸದ್ದಡಗಿದ ಮೇಲೆ ಗಾಡಿ ಕಟ್ಟಿದ್ದರು. ಗಾಡಿ ಅಚ್ಚಿಗೆ ಕೀಲೆಣ್ಣೆ ಹಾಕಿದ್ದರಿಂದ ಗಾಡಿ ಸದ್ದು ಮಾಡುತ್ತಿರಲಿಲ್ಲ. ಗಾಡಿಯಲ್ಲಿ ರಾಗಿ ಹುಲ್ಲು ಒಟ್ಟಿ ಅದರ ನಡುವೆ ಆರು ರಾಗಿ ಚೀಲಗಳನ್ನು ಬಚ್ಚಿಟ್ಟುಕೊಂಡು ಕಾಡು ದಾರಿಯಲ್ಲಿ ಹೊರಟಿದ್ದರು. ಎಲ್ಲೆಲ್ಲೊ ಪೋಲೀಸರ ಕಾಟ. ಅದನ್ನು ತಪ್ಪಿಸಿಕೊಂಡು ಬೆಳಕು ಹರಿಯುವ ಹೊತ್ತಿಗೆ ಊರ ಸಮೀಪಕ್ಕೆ ಹೋದರೆ ಸಾಕು ರಾಗಿ ಚೀಲಗಳನ್ನು ಹೊಲದ ಬಣವೆಗಳಲ್ಲಿ ಬಚಾವು ಮಾಡಿ ರಾತ್ರಿ ಮನೆಗಳಿಗೆ ಒಯ್ಯಬಹುದೆಂದು ಅವರ ಅಂದಾಜು. ಆಕಾಶದಲ್ಲಿ ಚಂದ್ರ ಬೆಳಗುತ್ತಿದ್ದ. ದನಕರುಗಳು ಓಡಾಡಿ, ಸೌದೆ-ಸೊಪ್ಪು ಹೇರಿ ಉಂಟಾಗಿದ್ದ ದಾರಿಗಳವು. ಆ ದಾರಿ ಎಲ್ಲೋ ಕಾಡಿನ ಮಧ್ಯಕ್ಕೆ ಕರೆದೊಯ್ಯಿತು. ಊರ ದಿಕ್ಕನ್ನು ಗುರುತಿಸಿಕೊಂಡು ಆ ದಿಕ್ಕಿಗೆ ಗಾಡಿಯನ್ನು ತಿರುಗಿಸಿಕೊಂಡು ಹೊರಟರು. ಗಾಡಿಗೆ ದಾರಿ ತೋರಿಸಿಕೊಂಡು ಮುಂದೆ ಮುಂದೆ ಹೋಗುತ್ತಿದ್ದ ರಂಗಜ್ಜ, ಪುರುದಣ್ಣ ಕಣ್ಣಲ್ಲಿ ಕಣ್ಣಿಟ್ಟು ನಡೆಯುತ್ತಾ ಮುಂದೆ ಎಂಥಾ ವಿಪತ್ತು ಕಾದಿದೆಯೋ ಎಂದು ಚಿಂತಿತರಾಗಿದ್ದರು. ತಮ್ಮ ಪರಿಸ್ಥಿತಿಯನ್ನು ನೆನೆದು ಕೊಂಚ ಭಯವಿಹ್ವಲರಾಗಿದ್ದರು. ಹೊಟ್ಟೆ ಹೊರೆಯಾಕೂ ಕಷ್ಟಕ್ಕೆ ಬಂತು. ಬರಬಾರದ ಗೊಟ್ಟು ಬಂದಿರೋವಾಗ ಜನ ಹೆಂಗೋ ಬದುಕಿದರೆ ಸಾಕು ಅಂಬಾದ್ ಬಿಟ್ಟು ಸರ್ಕಾರದೋರು ರಾತ್ರೋ ರಾತ್ರಿ ಬಂದು ಪಳತದಾಗಿನ ರಾಗಿ, ಹಗೇವುದಾಗಿನ ನವಣೆ, ಜ್ವಾಳಾ ಎಲ್ಲಾ ಹೆದರಿಸಿ ಬೆದರಿಸಿ ಬೆಚ್ಚಿಸಿ ಹೇರಿಕೊಂಡು ಹೋಗ್ತಾರೆ. ಅವು ಮುಗಿದ ಮ್ಯಾಲೆ ಇನ್ನೇನ್ ಮಾಡ್ತಾರೋ. ಹೊಟ್ಟೆ ಹೊರಿಯಾಕೂ ಕಳ್ಳತನದಾಗೆ ಕಾಳು-ಕಡಿ ಹೇರಿಕ್ಯಂಡು ಹೋಗ್‌ಬೇಕಾಗೈತೆ. ಇದೆಂಥಾ ಸರ್ಕಾರ. ಎಲ್ಲೆಲ್ಲೂ ಪೊಲೀಸರ ಕಾಟ. ಮಾರಾಜರ ಸರ್ಕಾರದಾಗಿಂಥಾವೆಲ್ಲಾ ನಡಿಯೋಲ್ಲ ಅಮ್ತಾರೆ, ಆದ್ರೆ ಯಾಕಿಂಗೆ ಅದೇ ಹೊಳಿಯಲ್ಲ ಎಂಬ ವಿಚಾರ ಅವರಿಬ್ಬರನ್ನೂ ಕಾಡಿತ್ತು. ಇಂಗ್ಲೀಸ್ರ ಜಬರ್‌ದಸ್ತ್‌ಬಾಳ. ಅಮಲ್‌ದಾರ, ಶೇಕ್‌ದಾರ, ಶಾನ್‌ಬೋಗ ಇವರ್‍ದೆ ಎಲ್ಲಾ. ಏನ್ ಮಾಡಾಕಾಗುತ್ತೆ? ಅಂದುಕೊಂಡರು.
ಗಾಡಿ ಹಿಂದೆ ಬರುತ್ತಿದ್ದ ಈರಬಡಪ್ಪ, ದ್ಯಾಮಣ್ಣ ಇಂಥದೇ ಯೋಚನೆಯಲ್ಲಿದ್ದರು. ಗಾಡಿ ನಡೆಸುತ್ತಿದ್ದ ಗುರುಸಿದ್ದ ಮತ್ತು ಗಾಡಿ ಮೇಲೆ ಕುಳಿತಿದ್ದ ಪಾರತವ್ವರಿಗೂ ಏನೇನೋ ಆಲೋಚನೆಗಳು. ಹೆಂಗೋ ಊರು ಮುಟ್ಟಿ ರಾಗಿ ಎಲ್ಲಾ ಮನೆ ಮುಟ್ಟಿಸಿದರೆ ಸಾಕಾಗಿತ್ತು. ಮುಂದೆ ನಡೆಯುತ್ತಿದ್ದ ರಂಗಜ್ಜ, ಪುರುದಣ್ಣ ಸರವೊಂದರ ಮುಂದೆ ನಿಂತು, ಗಾಡಿಯನ್ನು ಆಚೆ ದಡಕ್ಕೆ ಹೆಂಗೆ ಒಯ್ಯಬೇಕು ಎಂದು ಯೋಚಿಸುತ್ತಿದ್ದರು. ಗಾಡಿ ಅಲ್ಲಿಗೆ ಬಂದು ನಿಂತು ಕೊಂಡಿತು. ಎಲ್ಲಾದರೂ ಇಳುಕಲು ಐತೇನೋ ನೋಡಾನ ನಿಲ್ರಪ್ಪಾ ಅನ್ನುತ್ತಾ ಸರದ ಉದ್ದಕ್ಕೆ ಎಡಾ-ಬಲಕ್ಕೆ ನಡೆದರು. ಎಲ್ಲೋ ಒಂದು ಕಡೆ ತಿರಾ ಕಡಿದಾಗಿಲ್ಲದ ಜಾಗವನ್ನು ಹುಡುಕಿ ಅಲ್ಲಿಗೆ ಗಾಡಿಯನ್ನು ನಡೆಸಿಕೊಂಡು ಹೋಗಿ ಹುಷಾರಾಗಿ ಗಾಡಿ ನಡೆಸಿ ಸರದ ಕೊರಕಲನ್ನು ಹತ್ತಿಸಿದರು.ಮೂರ್ ಪಯಣ ಬಂದರಬೌದು, ಒಂದೀಟು ನಿಲ್ಲಿಸ್ರಪ್ಪಾ ಎತ್ತುಗಳು ಸುಧಾರಿಸಿಗ್ಯಮ್ಲಿ ಎಂದು ರಂಗಜ್ಜ ನೀಡಿದ ಸಲಹೆಗೆ ಎತ್ತುಗಳ ಕೊಳ್ಳು ಹರಿದು ಅವುಗಳ ಮುಂದೆ ಹುಲ್ಲು ಹಾಕಿ ಕೊಡದಲ್ಲಿ ತಂದಿದ್ದ ನೀರು ಕುಡಿದರು. ಎಲ್ಲರೂ ಅಡಿಕೆ ಚೂರುಗಳನ್ನು ಬಾಯೊಳಗೆ ಹಾಕಿಕೊಂಡು, ಎಲೆಗೆ ಸುಣ್ಣ ಹಚ್ಚುತ್ತಾ ಆಕಳಿಸಿದರು. ಈರಬಡಪ್ಪ ತಲೆ ಎತ್ತಿ ಆಕಾ ನೋಡಿ ಎಟೋತ್ತಾಗಿರಬೌದು? ಸರುವೋತ್ತಾಗಿರಬೌದೆ? ಎಂದು ಪ್ರಶ್ನೆ ಹಾಕಿದ. ಇದಕ್ಕೆ ಆಗಿರಬೌದು. ಏಟು ದೂರ ಬಂದಿರಬೌದು? ಒಂದ್ ಎಂಟೊಂಬತ್ತು ಮೈಲಿ ಬಂದರಬೌದೆ? ಪಾರತವ್ವ ಅಂದಳು.ಎಂಟೊಂಬತ್ತು ಮೈಲಿ ಬಂದಿದ್ರೆ ಅರ್ಧಾದಾರಿ ಮುಗದಂಗಾತು. ಇನ್ನಾ ಊರು ಅತ್ತು ಮೈಲಿ ಇರಬೇಕು ಅಲ್ವೇನಣ್ಣಾ ಅಂದಳು ಆಕೆ. ಅದೆಂಗವ್ವಾ? ಕಾಡು ಮೇಡು ಅಲೆದಾಡಿಕ್ಯಂಡ್ ಬಂದಿದೀವಿ. ಏಳೋ ಎಂಟೋ ಮೈಲಿ ಬಂದಿರಬೇಕು ಅಂದ ರಂಗಜ್ಜ, ಎಲ್ಲಾರಿಗೂ ಹಂಗೆ ನಿದ್ದೆ ಮಂಪರು ಕವಿದಂಗಾತು. ಎದ್ದೆಳ್ರೋ ಮಾಯದ ನಿದ್ದೆ ಅಡರಿಕೆಂಬತ್ತೆ. ಪಯಣ ಸಾಗಬೇಕು. ಒಂದೀಸು ನೀರು ಕೊಡವ್ವಾ ಮಕಕ್ಕೆ ನೀರು ಹಾಕೈಂಡು ಒಳ್ದ್ರ್‌ಪ್ಪಾ ಅಂದು ನೀರು ಇಸಕಂಡು ಮಕಕ್ಕೆ ನೀರಾಕ್ಯೆಂಡು ಎಲ್ಲರನ್ನು ಏಳಿಸಿದ.
ಎಲ್ಲರೂ ದಡಾಬಡಾ ಎದ್ದು ಗಾಡಿ ಕಟ್ಟಿ ಮುಂದೆ ಹೊರಟರು. ಮೊದಲ ಕೋಳಿ ಕೂಗೋ ಹೊತ್ತಿಗೆ ಇನ್ನೊಂದು ಸರ ಅಡ್ಡಬಂತು. ಗಾಡಿ ನಿಲ್ಲಿಸಿ ಎತ್ತುಗಳ ಅಗಡು ಬಿಚ್ಚಿ ಗಾಡಿ ಹತ್ರ ಪಾರತವ್ವ ಮತ್ತೆ ಗರುರುಸಿದ್ದರನ್ನು ಬಿಟ್ಟು ಸರದ ಉದ್ದಕ್ಕೂ ನಡೆದರು. ಎಲ್ಲಿಯೂ ಅದನ್ನು ದಾಟುವಂಥಾಜಾಗ ಕಂಡು ಬರಲಿಲ್ಲ. ಹಿಂತಿರುಗುವಾಗ ರಂಗಜ್ಜನಿಗೆ ಒಂದು ಉಪಾಯ ಹೊಳೆಯಿತು. ಗಾಡಿ ಬಳಿಗೆ ಬಂದು ಬರ್ರೊನಿಮ್ಮಾ ಅದಕ್ಯಾಕೆ ಹೆದರಬೇಕೂ? ಅನ್ನುತ್ತಾ ಹಿಂದಕ್ಕೆ ಬಂದವನು ಗಾಡಿ ಗುಜ್ಜು ಎಲ್ಲಾ ಬಿಚ್ಚೀರಿ. ರಾಗಿ ಚೀಲಾ ಎಲ್ಲಾ ಇಳಿಸನಾ. ಆಚೆಕಡಿಗೆ ರಾಗಿ ಚೀಲ ಎಲ್ಲಾ ಹೊತ್ತಾಕಿ ಗಾಡಿಗಳಿಪಿಳಿ ಮಾಡಿ ಚಕ್ರಮದ್ಲು ಬಿಚ್ಚಿ ಆಚೆಕಡಿಗೆ ಹೊತ್ತಾಕನ. ಆಮೇಲೆ ಗಾಡಿ ಮೂಕು-ಪಾರು ಹೊತ್ತಾಕಿ ಚಕ್ರ ಕೂಡಿಸಿ ರಾಗಿಚೀಳ ಗಾಡ್ಯಾಗಾಕ್ಕೆಂಡ್ ಹೊಡಕಂಡ್ ಹೋಗನಾ ಎಂದು ಸಲಹೆ ನೀಡಿದ. ಅದರಂತೆ ಗಾಡಿಯಲ್ಲಿದ್ದ ರಾಗಿ ಚೀಲಗಳನ್ನು ಕೆಲಗಿಳಿಸಿ ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರ ಮತ್ತೆ ಪಾರು ಮೂಕಿ ಇತ್ಯಾದಿಗಳನ್ನು ಆಚೆಕಡೆ ದಡಕ್ಕೆ ಸಾಗಿಸಿದರು. ರಾಗಿ ಚೀಲಗಳನ್ನು ಸರದಾಚೆಗೆ ಸಾಗಿಸುವುದು ಸುಲಭ ಸಾಧ್ಯವಾದ ಮಾತಾಗಿರಲಿಲ್ಲ. ಚೀಲದ ಮಧ್ಯೆ ಒಂದು ಬಂಡಿಗುಜ್ಜನ್ನು ಕೊಟ್ಟು ಆಚೆಕಡೆ ಒಬ್ಬರು ಈಚೆಕಡೆ ಒಬ್ಬರು ಹಿಡಿದುಕೊಂಡರೆ ಮತ್ತಿಬ್ಬರು ಚೀಲದ ಹಿಂದೆ ಮುಂದೆ ಹಿಡಿದುಕೊಂಡು ನಿಧಾನವಾಗಿ ಸರದೊಳಕ್ಕೆ ಇಳಿದು ಮತ್ತೆ ಆಚೆ ಕಡೆ ಗಡ್ಡೆ ಹತ್ತಿ ಅಂತೂ ಚೀಲಗಳನ್ನು ಸಾಗಿಸಿ ಗಾಡಿಯಲ್ಲಿ ಹೇರಿದರು.
ಗಾಡಿಹೂಡಿ ಸ್ವಲ್ಪ ದೂರ ಹೋಗಿಲ್ಲ. ಮತ್ತೊಂದು ಸಮಸ್ಯೆ ಎದುರಾಯಿತು. ಒಂದು ಎತ್ತು ಕುಂಟು ಬಿತ್ತು. ಅದು ಮುಂದೆ ನಡೆಯದಾಯಿತು. ಆಗ ಒಬ್ಬರಾಗುತ್ಲೂ ಒಬ್ಬರು ಪುರುದಣ್ಣ, ದ್ಯಾಮಣ್ಣ ಮತ್ತೆ ರಂಗಜ್ಜ ಎತ್ತಿನ ಜೊತೆ ನೊಗಕ್ಕೆ ಕೈ ಹಾಕಿ ಗಾಡಿಯನ್ನು ಸುಮಾರು ದೂರ ಎಳೆದರು. ಪಲ್ಪರಿಯಾ ಹೊತ್ತಿಗೆ ಪರಿಚಯದ ಕಾಡು ಮೇಡು ಕಾಣಿಸಿತು. ಸ್ವಲ್ಪ ಹೊತ್ತು ನಿಲ್ಲಿಸಿ ಸುಧಾರಿಸಿಕೊಂಡರು. ಎತ್ತುಗಳು ರಾಗಿಕಡ್ಡಿಯನ್ನು ತಿನ್ನಲು ನಿರಾಕರಿಸಿದವು. ಅವಕ್ಕೆ ಪೂರಾ ದಣಿವಾಗಿತ್ತು. ಗಾಡಿಯಲ್ಲಿದ್ದ ಎರಡು ತುಂಬಿದ ಕೊಡಗಳ ನೀರುಕುಡಿಸಿ ಮತ್ತೆ ಗಾಡಿ ಹೂಡಿದರು. ಎತ್ತುಗಳಿಗೂ ಕಾಡಿನ ಪರಿಚಯ ಇದ್ದಿರಬೇಕು. ಅವೂ ಸಲೀಸಾಗಿ ಗಾಡಿಯನ್ನು ಎಳೆಯುತ್ತಿದ್ದವು. ಪೂರಾ ಬೆಳ್ಳಂಬೆಳಕಾಯಿತು. ಪರಿಚಯದ ಕಾಡಿನಲ್ಲಿ ಊರ ಕಡೆಗೆ ಸಾಗುವ ದಾರಿಯಲ್ಲಿ ಸಾಗುತ್ತಿದ್ದರು.
ಅಷ್ಟರಲ್ಲಿ ದ್ಯಾಮಣ್ಣನಿಗೆ ಒಂದು ಅನುಮಾನ ಕಾಡಿತು. ಆಗ ಅವನು ಗಾಡಿ ನಿಲ್ಲಿಸ್ರಪ್ಪಾ. ಮುಂದೆ ಯಾರಾನಾ ಪೊಲೀಸರು ಗೀಲೀಸರು ದಾರಿ ಕಾಯ್ತಾ ಐದಾರೇನೋ ನೋಡಬೇಕು, ಎಂದು ಸಲಹೆ ನೀಡಿದ. ತರ್‍ಲೆ ಜನ ಹೇಳಾಕ್ ಬರಲ್ಲ. ಯಾರಾನಾ ಪೋಲೀಸ್ರಿಗೆ ಸುದ್ದಿ ಕೊಟ್ಟಿದ್ರೆ. ಸಿಗೆ ಆಕ್ಯಂಡ್ ಬಿಡ್ತೀವಿ. ಕಣಿಮೆ ಉದಿಗೆ ಹೋಗಿ ನೋಡಿಕ್ಯೆಂಡು ಬರಬೇಕಾಗುತ್ತೆ ಎಂದು ಸಲಹೆ ನೀಡಿದ. ಅದರಂತೆ ನಾಲ್ಕು ಜನ ಮತ್ತು ಪಾರವ್ವ ಅತ್ತ ಹೊರಟರು. ಎಲ್ಲರೂ ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಾ ನಡೆಯುತ್ತಿರುವಾಗ ಕಣಿಮೆ ಉದಿಹತ್ರ ಒಂದು ಮರದ ಪಕ್ಕ ಒಂದು ಸೈಕಲ್ ನಿಲ್ಲಿಸಿರುವುದ ಕಾಣಿಸಿತು. ತಕ್ಷಣ ಎಲ್ಲರೂ ಏನೇನೋ ಗುಟ್ಟಾಗಿ ಮಾತಾಡಿಕೊಂಡರು.
ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲಾ ಅಲ್ಲಿಂದ ಚದುರಿದರು. ಪಾರತವ್ವ ಸೀರೆ ಕಾಶಿಕಟ್ಟಿಕೊಂಡು ಹತ್ತಿರದಲ್ಲಿದ್ದ ಹಳ್ಳದ ಕಡೆಗೆ ಹೊರಟಳು. ಹೊತ್ತು ಮೂಡಿ ನಿಧಾನವಾಗಿ ಮೇಲಕ್ಕೆ ಬರುತ್ತಿದ್ದ. ಪೊಲೀಸ್ ಪೇದೆ ಮರ ಏರಿ ಕುಳಿತು ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಿದ್ದ. ಮರ ಹಿಡಿದಿದ್ದ ಕೈ ಜಾರುತ್ತಿದ್ದವು. ಕಾಲು ಬೆವರಿದ್ದವು. ಆದರೂ ಪಟ್ಟು ಬಿಡದೆ ತನ್ನ ಬೇಟೆಯ ನಿರೀಕ್ಷೆಯಲ್ಲಿದ್ದ. ಎತ್ತಲಿಂದಲೋ ಭರ್ರನೇ ಬೀಸಿ ಬಂದ ಕವಣೆಗಲ್ಲೊಂದು ಪೊಲೀಸಪ್ಪನ ಟೋಪಿಯನ್ನು ಕೆಳಗೆ ಬೀಳಿಸಿತು. ಅದನ್ನು ಹಿಡಿಯಲು ಮುಂದೆ ಬಾಗಿ ತಾನೂ ಜಾರಿ ಕೆಳಗೆ ಬಿದ್ದ. ಸೊಂಟ ನೋವಾಗಿ ಮೇಲೇಳಲು ಸಾಧ್ಯವಾಗದಾಯಿತು. ಕಾಲು ಕೂಡಾ ನೋಯುತ್ತಿದ್ದವು. ಈ ನೋವಿನಲ್ಲೇ ಯಾರೋ ಆಸಾಮಿಗಳು ಇರೋ ಹಂಗಿದೆ ಅನ್ನಿಸಿತು ಪೋಲೀಸಪ್ಪನಿಗೆ. ಯಾವನ್ರಲೋ ಕಲ್ಲು ಹೊಡೆದಿದ್ದೂ? ಎಂದು ಕೂಗು ಹಾಕಿದ. ಮೇಲೇಳಲು ಪ್ರಯತ್ನಿಸಿ ವಿಫಲನಾದ ಅವನಿಗೆ ಯಾರದೋ ಮಾತು ಕೇಳಿ ಮಂಗನಾದೆ ಅನ್ನಿಸಿತು.
ಕಂಟ್ರೋಲ್ ಕಾಲದಲ್ಲಿ ಇಂಥಾ ಕೇಸು ಹಿಡಿದು ಕೊಟ್ಟರೆ ಇನಾಮು ಸಿಗುತ್ತಿತ್ತು ಮತ್ತು ಬಡ್ತಿ ಸಿಗುತ್ತಿತ್ತು. ಪಕ್ಕದ ಊರಿನ ಕೆಲವು ಚಾಡಿಕೋರರ ಮಾತು ಕೇಳು ಈ ಸಾಹಸಕ್ಕೆ ಮುಂದಾಗಿದ್ದ ಅವನಿಗೆ ಎಂಥಾ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡೆನಲ್ಲಾ ಎಂದು ಪರಿತಪಿಸುವಂತಾಯಿತು. ತಾನು ಈ ಟೋಪಿಯನ್ನು ಹಾಕಿಕೊಂಡು ಬರಬಾರದಿತ್ತು. ಟೋಪಿ ಇರದಿದ್ದರೆ ಪೋಸನೆಂದು ಯಾರು ನಂಬುತ್ತಾರೆ? ಹೀಗೆಲ್ಲಾ ಯೋಚಿಸುತ್ತಾ ಬಲು ತ್ರಾಸುಪಟ್ಟುಕೊಂಡು ಸೈಕಲ್ ಇದ್ದ ಮರದ ಬಳಿಗೆ ತೆವಳಿಕೊಂಡು ಹೋದ. ಮೈಯೆಲ್ಲಾ ಬೆವರಿತ್ತು. ಒರೆಸಿಕೊಂಡು ಮತ್ತೆ ಮೇಲೇಳಲು ಪ್ರಯತ್ನಿಸಿ ಮರದ ಬೊಡ್ಡೆ ಹಿಡಿದು ನಿಧಾನವಾಗಿ ಮೇಲೆದ್ದ. ಸುತ್ತಲೂ ನೋಡಿದ. ಯಾವನು ಕಲ್ಲಿನಲ್ಲಿ ಹೊಡಿದಿರಬಹುದು ಅದು ತಲೆಗೆನಾದರೂ ಬಿದ್ದಿದ್ದರೆ ಪ್ರಾಣಾಪಾಯವಾಗುತ್ತಿತ್ತಲ್ಲಾ ದೇವರೇ ಎಂದು ಕೂಡಾ ಆತಂಕಪಟ್ಟುಕೊಂಡ. ಸಿಗಲಿ ಮಾಡ್ತೀನಿ. ಹುಟ್ಟಿದ್ದಿನ ತೋರಿಸ್ತೀನಿ ಅಂದುಕೊಂಡು ಹಲ್ಲು ಕಡಿದ. ಹೊತ್ತು ಮೇಲೇರುತ್ತಿತ್ತು.
ಇತ್ತ ದ್ಯಾಮಣ್ಣ, ರಂಗಜ್ಜ ಮತ್ತೆ ಪುರದಣ್ಣರು ಕೂಡಿಕೊಂಡು ಗಾಡಿಯಲ್ಲಿದ್ದ ರಾಗಿಚೀಲಗಳನ್ನು ಇಳಿಸಿ ಪೊದೆಯಲ್ಲಿ ಬಚ್ಚಿಟ್ಟರು. ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರಮತ್ತೆ ಪಾರು, ಮೂಕಿಯನ್ನು ಇನ್ನೊಂದು ಪೊದೆಯಲ್ಲಿ ಬಚ್ಚಿಟ್ಟರು. ಇವುಗಳನ್ನು ಕಾಯಲು ಈರಬಡಪ್ಪನನ್ನು ಅಲ್ಲಿ ಬಿಟ್ಟು ಎತ್ತುಗಳಿಗೆ ನೀರು ಕುಡಿಸಲು ಹಳ್ಳದ ದಂಡೆಗುಂಟಾ ಹೊರಟರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಳ್ಳದ ಒಂದು ಗುಂಡಿಯಲ್ಲಿ ನೀರು ಇರುವುದು ಕಾಣಿಸಿತು. ಎತ್ತುಗಳಿಗೆ ನೀರು ಕುಡಿಸಿ, ತಮ್ಮ ಹೊಟ್ಟೆಗೆ ಒಂದೆರಡು ಈಚಲ ಗಿಡಗಳನ್ನು ಕೊಚ್ಚಿ ಕಡಿದು ಅವುಗಳ ಗೆಡ್ಡೆಗಳನ್ನು ತಿಂದು, ಗುರುಸಿದ್ದ-ಪಾರತವ್ವರಿಗೆ ಒಂದಿಷ್ಟು ಕಟ್ಟಿಕೊಂಡು ಹೊರಟು ಬಂದರು. ಎತ್ತುಗಳು ಅಲ್ಲಿ ಬೆಳೆದಿದ್ದ ಕಳ್ಡವನ್ನು ಮೇಯುತ್ತಿದ್ದವು. ಅತ್ತ ಕಡೇಲಿಂದ ಪಾರತವ್ವ ಬಂದು ಪೋಲೀಸಪ್ಪನಿಗೆ ಆಗಿರುವ ಪರಿಸ್ಥಿತಿಯನ್ನು ಬಣ್ಣನೆ ಮಾಡಿ ಹೇಳಿದಳು. ಸ್ವಲ್ಪ ಹೊತ್ತು ಎಲ್ಲರೂ ನಗಾಡಿದರು. ಕೂಡಲೇ ಪರಿಸ್ಥಿತಿಯ ಅರಿವಾಗಿ ತುಂಬಾ ಹೊತ್ತು ಚರ್ಚೆ ಮಾಡಿ ಪಾರತವ್ವ ಗುರುಸಿದ್ದರಿಗೆ ಒಂದು ಪಿಳಾನು ಹೇಳಿಕೊಟ್ಟರು.
ಅವರು ಇನ್ನೊಂದು ಕಡೇಲಿಂದ ಗೌರೀ ಗೌರೀ ಎಂದು ಕೂಗು ಹಾಕುತ್ತಾ ಪೋಲೀಸಪ್ಪನಿದ್ದ ಮರದ ಬಳಿಗೆ ತೆರಳಿದರು. ಅಲ್ಲಿದ್ದ ಪೋಲೀಸಪ್ಪನನ್ನ ಕಂಡು ಯಾಕಣ್ಣಾ ಪೊಲೀಸಣ್ಣಾ ಸೈಕಲ್ ಇಡಕಂಡ್ ನಿಂತಿದ್ದೀಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕೇಳಿದರು. ಪೋಲೀಸ್ ಪೇದೆ ಹೇಯ್ ಬಾರೋ ಇಲ್ಲಿ, ಯಾರೋ ನಿಮ್ಮನ್ನ ಕಳಿಸಿದ್ದು ಎಂದು ಗುರುಸಿದ್ದನನ್ನು ಕೇಳಿದ. ಯಾಕಣ್ಣಾ ಇಂಗೆ ಗದರಿಸಿ ಕೇಳ್ತೀಯಾ? ಅನ್ನುತ್ತಾ ಪಾರತವ್ವ ಅವನ ಬಳಿಗೆ ತೆರಳಿದಳು. ಆಕೆ ವ್ಯಸನ ತೋರಿಸುತ್ತಾ ನಮುದೊಂದು ಗಬ್ಬದಾಕಳಾ ರಾತ್ರಿ ತಪ್ಪಿಸ್ಗಂಡೈತೆ ಕಣಣ್ಣಾ. ರಾತ್ರಿ ಎಲ್ಲಾ ಉಡುಕಿದಿವಿ ಸಿಕಿಲ್ಲ ಕಣಣ್ಣಾ. ಅದನ್ನು ಹುಡಿಕ್ಕೆಂಡ್ ಬಂದ್ವಿ ಕಣಣ್ಣಾ ಅಂದಳು ಅಷ್ಟೇ ರಾಗವಾಗಿ.
ಯಾಕಣ್ಣಾ ನಿಂತ್ಗಂಡೇ ಇದ್ದೀಯಾ ಅಂದ ಗುರುಸಿದ್ದ. ಬಿದ್ದು ಸೊಂಟ ನೋವು ಮಾಡಿಕೆಂಡಿದೀನೀ ಕಣಯ್ಯಾ. ಈಗ ನಾನು ಸೈಕಲ್ ಮೇಲೆ ಕುತ್ಗಮ್ತೀನಿ, ನೀನು ಸೈಕಲ್ ತಳ್ಳಿಕೊಂಡು ಒಂದೀಟು ರಸ್ತೆಗೆ ಬಿಟ್ ಬಿಡಯ್ಯಾ. ಅಲ್ಲಿಂದ ಯಾವುದಾದ್ರೂ ಬಸ್ಸಿಗೆ ಹಿರಿವೂರಿಗೆ ಹೋಗ್ತಿನಿ. ಪುಣ್ಯ ಬರುತ್ತೆ, ಎಳ್ಡ್ ರೂಪಾಯ್ ಕೊಡ್ತೀನಿ ಎಂದು ಪುಸಲಾಯಿಸಿದ. ಅಕ್ಕಾ ಗೌರಿ ಹುಡಕೋಡು ಹೆಂಗೆ ಮತ್ತೆ? ಎಂದು ಪಾರತವ್ವಳ ಕಡೆಗೆ ನೋಡಿದ ಗುರುಸಿದ್ದ. ಇದೊಳ್ಳೆ ಫಜೀತಿ ಗಿಕ್ಯಂಡ್ ಬಿಡ್ತಲ್ಲೊ. ಈಟೊತ್ತಿಗೇಲೆ ಈಯಪ್ಪಾ ಯಾಕೆ ಬೀಳಬೇಕಾಗಿತ್ತೂ. ಕಷ್ಟದಾಗಿರೋರಿಗೆ ಸಹಾಯ ಮಾಡಬೇಕು. ಕರಕಂಡ್ ಹೋಗಿ ರಸ್ತೆ ಮುಟ್ಟಿಸಿಬಾರಪ್ಪಾ. ಎಳ್ಡ್ ರೂಪಾಯೀನೂ ಬ್ಯಾಡ ಯಾತ್ತೂ ಬ್ಯಾಡಾ ಅಂದಳು ಆಕೆ.
ಸ್ವಲ್ಪ ದೂರ ಮೂವರು ನಡೆದು ಊರ ಕಡೆಗೆ ತಿರುಗುವಲ್ಲಿ ಪಾರತವ್ವ ನಿಂತುಕೊಂಡಳು. ಇವರು ಮುಂದೆ ನಡೆದರು. ಪೋಲೀಸಪ್ಪ ಏನು ಕೇಳುತ್ತಾನೆ. ಅದಕ್ಕೆ ಏನು ಉತ್ತರ ಹೇಳಬೇಕು ಎಂಬುದನ್ನು ಗುರುಸಿದ್ದನಿಗೆ ಪಾರತವ್ವ ತಿಳಿಸಿದ್ದಳು. ಇದನ್ನೆಲ್ಲಾ ದ್ಯಾಮಣ್ಣಾ, ರಂಗಜ್ಜರು ನೋಡಿದ್ದರು. ಗುರುಸಿದ್ದ-ಪೋಲೀಸಪ್ಪರು ಮರೆಯಾಗುತ್ತಲೇ ಸರಬರಾ ನಡೆದು, ಪಾರತವ್ವ ತನ್ನವರನ್ನು ಕೂಡಿಕೊಂಡಿದ್ದಳು. ಅಷ್ಟೊತ್ತಿಗೆ ಮುಂದೆ ಹೋಗಿದ್ದವರು ಗಾಡಿಯನ್ನು ಸಿದ್ದಪಡಿಸಿದ್ದರು. ರಾಗಿಚೀಲಗಳನ್ನು ಹೇರಿಕೊಂಡು ಸದ್ದುಮಾಡದೇ ಇನ್ನೊಂದು ದಾರಿಯಿಲ್ಲದ ದಾರಿಯಲ್ಲಿ ಹೊರಟು ಊರಬಳಿಯ ತಮ್ಮ ಹೊಲವನ್ನು ತಲುಪಿ, ಅಲ್ಲಿ ರಾಗಿ ಚೀಲಗಳನ್ನು ತಾಬಂದು ಮಾಡಿದರು. ಮತ್ತೆ ಗಾಡಿಯನ್ನು ಗಳಿಪಿಳಿ ಮಾಡಿ ಬಣವೆಯಲ್ಲಿ ಬಚ್ಚಿಟ್ಟು ಒಬ್ಬೊಬ್ಬರೇ ಒಂದೊಂದು ದಾರಿಯಲ್ಲಿ ಊರು ಸೆರಿಕೊಂಡರು.
ಪಾರತವ್ವ ದೂರವಾಗುತ್ತಲೇ ಗುರುಸಿದ್ದನಿಗೆ ಕೇಳಬಾರದ್ದೆಲ್ಲಾ ಕೇಳಿದ್ದ ಪೋಲೀಸಪ್ಪ. ಅವನು ಬೇಜಾರಾಗಿ ತಾನು ಮುಂದೆ ಬರುವುದಿಲ್ಲವೆಂದು ಎರಡು ಬಾರಿಧಮಕಿಕೊಟ್ಟ ಮೇಲೆ ಸುಮ್ಮನಾಗಿದ್ದ. 'ಲೇ ಹುಡುಗ ನೀನು ಈಗ ಏನೂ ಹೇಳೋಲ್ಲ ಕಣೋ, ನನಿಗೆ ಗೊತ್ತೈತೆ, ನಿಮ್ಮನ್ನ ಹೆಂಗೆ ಬಾಯಿಬಿಡಿಸಬೇಕು ಅಂಬಾದು, ನಡೀ ಈವಾಗ, ಆಮೇಲೆ ನೊಡಿಕೆಮ್ತೀನಿ' ಎಂದು ಕೊಂಡಿದ್ದ ಪೋಲೀಸಪ್ಪ ಮನಸ್ಸಿನಲ್ಲೇ.
ಮುಂದುಗಡೆ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು ಇವರಿಗೆ. ಅಮಲ್ಲಾರ್ರು ಊರಿಗೆ ಬರ್‍ತಾರಂತೆ ಜಮಾಬಂದಿಗೆ, ನಾನು ಹಿರಿಯೂರಿಗೆ ಹೋಗಿ ಬರ್‍ತೀನಿ, ಎಂದು ಮನೆಯಲ್ಲಿ ತಿಳಿಸಿ ಸಿದ್ದಪ್ಪ ಗೌಡರು ಬೆಳಿಗ್ಗೇನೆ ಹೊರಟಿದ್ದರು. ಕಮರದ ದಾರಿ ಕೂಡಿಕೊಳ್ಳೋದಾರಿ ದಾಟಿ ಮುಂದಕ್ಕೆ ನಡೆದರೆ ಹಿಂದುಗಡೆ ಯಾರೋ ಸೈಕಲ್ ಮೇಲೆ ಕುಳಿತುಕೊಂಡು ಸೈಕಲನ್ನು ತಳ್ಳಿಸಿಕೊಂಡು ಬರುತ್ತಿರುವುದು ಕಾಣಿಸಿತು. ತಮ್ಮ ನಡಿಗೆಯನ್ನು ಸ್ವಲ್ಪ ನಿಧಾನ ಮಾಡಿದರು ಗೌಡರು. ಇವರು ಹತ್ತಿರ ಬರುತ್ತಲೇ ನೋಡಿದರೆ ಪೋಲೀಸ್ ನೋನು ಮತ್ತೆ ಗುರುಸಿದ್ದ. ಯಾಕಪ್ಪಾ ಏನಾತು ಎಂದು ಗೌಡರು ಕೇಳಿದರೆ ಪೋಲೀಸ್ ಪೇದೆ ಸೈಕಲ್ ಮೇಲಿಂದ ಬಿದ್ದು ಬಿಟ್ಟೆ ಗೌಡ್ರೇ. ಸೊಂಟ ಬಾಳ ನೋವಾಗೈತೆ. ಇವನು ದಾರ್‍ಯಾಗ್ ಸಿಕ್ಕ. ರಸ್ತೇಗೆ ಬಿಟ್ ಬಿಡಪ್ಪಾ ಅಂತ ಕರಕಂಡ್ ಬಂದೆ ಅಂದ. ಗುರುಸಿದ್ದನ ವಿಚಾರ ಗೌಡರಿಗೆ ಗೊತ್ತಿತ್ತು ಆದ್ದರಿಂದ ಅದನ್ನು ವಿಚಾರಿಸಿದೆ, ನಾನು ಹಿರಿಯೂರಿಗೆ ಹೊಲ್ಟಿದೀನಿ. ನೀನು ಹಿಂದಗಡೆ ಕುತ್ಗ. ನಾನು ಸೈಕಲ್ ತುಳಕಂಡು ಹಿರಿಯೂರಿಗೆ ಸೇರಿಸ್ತೀನಿ ಅನ್ನುತ್ತಾ ಗೌಡರು ಸೈಕಲ್ ಹತ್ತಿದರು. ಗುರುಸಿದ್ದನಿಗೂ ಇದೇ ಬೇಕಾಗಿತ್ತು.

(ಕೃಪೆ: ಕೆಂಡಸಂಪಿಗೆ)

ಗೌನಹಳ್ಳಿಯ ವೃತ್ತಾಂತಗಳು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಯುವ್ಯ ದಿಕ್ಕಿನ ಗಡಿ ಗ್ರಾಮ ಗೌನಹಳ್ಳಿ. ವಾಯುವ್ಯ ದಿಕ್ಕಿನಿಂದ ಹರಿದು ಬರುವ ಬಸವನಹೊಳೆ ಹಳ್ಳ ಮೂಡಲಕ್ಕೆ ಹರಿದು ಅನಂತರ ತೆಂಕಲಿಗೆ ತಿರುಗಿ ಊರ ಮುಂದೆ ಅಂದರೆ ಕೇವಲ ಫರ್ಲಾಂಗು ದೂರದಲ್ಲಿ ತೆಂಕಲು ದಿಕ್ಕಿಗೆ ಹರಿಯುತ್ತದೆ. ಊರಿನ ಮೂಡಲ ದಿಕ್ಕು ಮತ್ತು ಪಡುವಲ ದಿಕ್ಕಿಗೆ ಎರಡು ಗುಡ್ಡದ ಸಾಲು ಹಬ್ಬಿದೆ. ಗುಡ್ಡಗಳ ಅಂತರ ಕೇವಲ ಎರಡೇ ಮೈಲಿ. ಮಧ್ಯದ ಪ್ರದೇಶ, ಜಿಲ್ಲೆಯಲ್ಲೇ ಅತ್ಯಂತ ಫಲವತ್ತಾದ ಗೂಡು ಮಿಶ್ರಿತ ಕೆಂಪು ಮಣ್ಣಿನ ಭೂಮಿ.
ಪಡವಲ ಗುಡ್ಡದಾಚೆಗೆ ಸಹಸ್ರಾರು ಏಕರೆ ಕಾಯ್ದಿಟ್ಟ ಅರಣ್ಯವಿದೆ. ಹೀಗಾಗಿ 40-50 ವರ್ಷಗಳ ಹಿಂದೆ ಕಾಡಿನಲ್ಲಿ ವಾಸಿಸುತ್ತಿದ್ದ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳವಿತ್ತು. ಆಗಾಗ್ಗ ಗೌನಹಳ್ಳಿಯ ರೈತರ ಒಂದಿಲ್ಲೊಂದು ಆಕಳವೂ, ಎತ್ತೋ, ಎಮ್ಮೆಯೋ ಇವುಗಳಿಗೆ ಆಹುತಿಯಾಗುತ್ತಿದ್ದವು.
ಈ ನಿಸರ್ಗ ಸುಂದರ ಪ್ರದೇಶದಲ್ಲಿ ಭೂಮಾಪನ ಕಾಲಕ್ಕೆ ಮೊದಲು ಮುಂಗರಾಯ ಪಟ್ಟಣ, ನಡವಲಹಳ್ಳಿ, ಶಂಕರನಹಳ್ಳಿ ಎಂಬುವು ಇದ್ದವೆಂಬುದಕ್ಕೆ ಕುರುಹುಗಳಿವೆ. ಮಂಗರಾಯ ಕಟ್ಟಿಸಿರಬಹುದಾದ ಎತ್ತರದ ಕೆರೆಯ ಏರಿ ಈಗಲೂ ಸಾಕ್ಷಿಯಾಗಿದೆ. ಇವು ಹೇಗೆ ನಾಶವಾದವೋ ಗೊತ್ತಿಲ್ಲ. ಈ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಹಿರಿಯರಾರೂ ಈಗ ಬದುಕಿಲ್ಲ.
ಇತ್ತೀಚೆಗೆ ಅಂದರೆ 50 ವರ್ಷಗಳ ಹಿಂದೆ ಇದ್ದ ಕೆನ್ನಳ್ಳಿ (ಕೆಂದಗಾನಹಳ್ಳಿ) ಹಾಳಾಯಿತು. ಈ ಊರು ಎರಡು ಮೂರು ಕಡೆಗಳಲ್ಲಿ ಕಟ್ಟಿದರೂ ಉಳಿಯಲಿಲ್ಲ. ಆ ಹಳ್ಳಿಗರು ದರೋಡೆ, ಲೂಟಿ ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದದ್ದನ್ನು ಗೌನಹಳ್ಳಿಯ ಜನ ಇನ್ನೂ ಮರೆತಿಲ್ಲ.
ಗೌನಹಳ್ಳಿಗೆ ರಸ್ತೆ ಎಂಬ ಸೌಕರ್ಯ ಮತ್ತು ಪ್ರಾಥಮಿಕ ಶಾಲೆಯ ಅನುಕೂಲ ದೊರಕಿದ್ದೇ ದೇಶ ಸ್ವಾತಂತ್ರ್ಯ ಪಡೆದುಕೊಂಡ ವರ್ಷ. ಅಲ್ಲಿಯ ತನಕ ಊರ ನಿವಾಸಿಗಳು ಬಂಡಿ ಜಾಡಿನಲ್ಲಿ ಊರಿನ ಆಗ್ನೇಯ ದಿಕ್ಕಿಗಿರುವ ಕಳ್ಗಣಿವೆ ಮಾರ್ಗವಾಗಿ ಸಂಚರಿಸುತ್ತಿದ್ದರು.
ಗೌನಹಳ್ಳಿಯ ತೆಂಕಲಿಗೆ ಎರಡು ಮೈಲು ದೂರದಲ್ಲಿ ಗುಡಿಹಳ್ಳಿ ಎಂಬ ಗ್ರಾಮ ಬೇಚರಾಕ್ ಆಗಿದ್ದು ಈಗೀಗ ಈ ಭಾಗದಲ್ಲಿ ಜಮೀನು ಹೊಂದಿರುವವರು ವಾಸದ ಮನೆ ನಿರ್ಮಿಸುತ್ತಿದ್ದಾರೆ. ಇಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನವಿದೆ.
ಕಡಿದಾಳ್ ಮಂಜಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೌನಹಳ್ಳಿಗೊಂದು ಹೊಸಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಒಂದು ದಶಕ ಕಾಲ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. 1956-57 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಮರು ಅಂದಾಜು ಇತ್ಯಾದಿಗಳಿಂದ ವಿಳಂಬವಾಗಿ ಕೊನೆಗೆ 1963-64ರ ಹೊತ್ತಿಗೆ ಮುಕ್ತಾಯಗೊಂಡಿತು. ಆರ್. ಸಣ್ಣರಂಗಯ್ಯ ಎಂಬ ದಕ್ಷ ಇಂಜಿನೀಯರ್ ಕೆರೆ ನಿರ್ಮಾಣಕ್ಕೆ ಶ್ರಮಿಸಿದರು.
ಆ ಕಾಲದಲ್ಲಿ ಬಿಳಿಜೋಡಿನಿಂದ ಕೆರೆ ನಿರ್ಮಾಣಕ್ಕೆ ಬಂದಿದ್ದ ಮಣ್ಣು ಒಡ್ಡರು `ಸಂಗ್ಯಾ-ಬಾಳ್ಯಾ` ನಾಟಕವನ್ನು ಅಭಿನಯಿಸಿ, ಗೌನಹಳ್ಳಿಯ ಹಲವಾರು ಕಲಾವಿದರು ಅರಳುವಂತೆ ಮಾಡಿದ್ದರು. ಕೆರೆ ನಿರ್ಮಾಣ ಆರಂಭವಾಗಿ ಮುಕ್ತಾಯವಾಗುವಷ್ಟರಲ್ಲಿ ಮುಗ್ದೆಯಂತಿದ್ದ ಗೌನಹಳ್ಳಿಯ ನಿರುಮ್ಮಳ ಬದುಕು ಹಲವಾರು ಆಕರ್ಷಣೆಗಳಿಗೆ ಪಕ್ಕಾಯಿತು. ಯಾವ್ಯಾವ ಊರುಗಳಿಂದಲೋ ಜನ ವಲಸೆ ಬಂದರು. ಗೌನಹಳ್ಳಿಯ ಸುಮಾರು 25-30 ಹೆಣ್ಣು ಮಕ್ಕಳು ಪರ ಊರಿನ ಗಂಡುಗಳನ್ನು ಲಗ್ನವಾದರು. ಗಂಡಂದಿರ ಸಮೇತ ತೌರೂರಿಗೆ ಹಿಂತಿರುಗಿ ಸರ್ಕಾರಿ ಭೂಮಿಯನ್ನು ( ಆಹಾರ ಕಂಡ ಬಂಜರು) ಬಗರ್ ಹುಕುಂ ಸಾಗುವಳಿ ಮಾಡಿ, ಆನಂತರ ಭೂಮಿಯ ಒಡೆತನ ಪಡೆದುಕೊಂಡರು. ಗ್ರಾಂಟಿನ ಮನೆಗಳನ್ನು ಕಟ್ಟಿಸಿಕೊಂಡು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ವಲಸೆ ಬಂದವರೇ ಪ್ರತ್ಯೇಕವಾಗಿ ಕಟ್ಟಿಕೊಂಡಿರುವ ಕರ್ಲಹಟ್ಟಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿವೆ. ಪರಿಶಿಷ್ಠ ಪಂಗಡದವರೇ ಹೆಚ್ಚಾಗಿರುವ ಗೌನಹಳ್ಳಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮೇಕೆ ಸಾಕಿಕೊಂಡಿದ್ದಾರೆ.
ಹಳೇ ತಲೆಮಾರಿನ ವಾಸಿಗಳಿಗೆ ಮೂಡಲಗುಡ್ಡದ ಕಳ್ಗಣಿವೆ, ಹುಣಸೆಕಣಿವೆ, ಪಟ್ಣಮರಡಿ (ಮಂಗರಾಯನ ಪಟ್ಣ ಇದ್ದ ಸ್ಥಳ) ಸಂತೇಕಣಿವೆ, ಮೂಡಲಗುಡ್ಡ, ನೆಲ್ಲಿಮಲೆಕಲ್ಲು, ಸಿಡಿಲುಬಡಿದ ಕಲ್ಲು, ಗೋಡೆಕಲ್ಲು ಇತ್ಯಾದಿ ಸಾಂಸ್ಕೃತಿಕ ಸಂಬಂಧ ಪಡೆದುಕೊಂಡಿರುವಂತೆ ಪಡುವಲ ಗುಡ್ಡದ ಸಾಲಿನ, ಬಡೆತ್ತಿನ ಕಣಿವೆ, ಹಾಲಗುಡ್ಡ, ರಾಮದಾಸನ ಮರಡಿ, ಗಾಳಿಕೊಲ್ರ, ಎಮ್ಮೆ ತಿರುಗಿದ ನೆತ್ತಿ, ಭೂತನ ಕಣಿವೆ, ಎಮ್ಮೆ ಕಣಿವೆ, ಗೊಲ್ರ ಗುಡ್ಡ, ಜಾಮೇನಪ್ಪನ ಏಣು, ಕಣಿಮೆ ಉದಿ, ಕೋಣನ ಗುಂಡಿ ಮತ್ತು ನೀರಗುಡ್ಡ ಕೂಡಾ ಸಾಂಸ್ಕೃತಿಕ ಸಂಬಂಧ ಉಳಿಸಿಕೊಂಡಿವೆ.
ಮುಂಗಾರಿನಲ್ಲಿ ಬೀಜ ಬಿತ್ತಿದ ಮೇಲೆ ಮತ್ತು ಕೊಯ್ಲು ಮುಗಿದು, ಸುಗ್ಗಿಕಾಲ ಬಂತೆಂದರೆ ಗೌನಹಳ್ಳಿಯ ನೂರಾರು ದನಕರುಗಳು ಎಮ್ಮೆ ಕಣಿವೆ ಮೂಲಕ ಹಾಯ್ದು ಪಡುವಲ ಗುಡ್ಡವನ್ನು ಇಳಿದು ಕಮರದಲ್ಲಿ (ಕಾಯ್ದಿಟ್ಟ ಅರಣ್ಯ), ಬೆಳೆದಿರುವ ಹುಲ್ಲು ಮೇಯಲು ಹೋಗುತ್ತವೆ. ಈ ದಿನಗಳಲ್ಲಿ ದನ-ಕುರಿಗಾಹಿಗಳ ಪಿಳ್ಳಂಗೋವಿಯ ಸದ್ದು, ಕೇಕೆ ಮುಂತಾದವುಗಳಿಂದ ಅರಣ್ಯದಲ್ಲಿನ ಗಿಡಮರಗಳೇ ಲವಲವಿಕೆಯಿಂದ ಇರುವಂತೆ ಭಾಸವಾಗುತ್ತದೆ. ಈ ಮಧ್ಯೆ ಮರ ಕಡಿಯುವ ದುಷ್ಕರ್ಮಿ ನಿಕ್ಕರ್ಮಿಗಳು ಗೋಚರಿಸುತ್ತಾರೆ.
ಅರಣ್ಯ ಇಲಾಖೆಯ, ಗಾರ್ಡ್ ಕರ್ತವ್ಯ ನಿರ್ವಹಿಸುತ್ತಿದ್ದ ಹೀರಾ ಸಿಂಗ್‌ನನ್ನು ಹಳ್ಳಿಗರು ಮರೆತಿಲ್ಲ. ಸೋಮವಾರಗಳಂದು ಮೀಸಲು ಅರಣ್ಯದ ಬದಿಗೆ ಬೆಳೆದಿದ್ದ ಗಿಡಗಳನ್ನು ಸವರಲು ಮತ್ತು ಗುಡ್ಡದ ಬಾದೆ ಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಅದನ್ನು ನಂದಿಸಲು ಊರ ಯುವಕರನ್ನು ಈತ ಕರೆದೊಯ್ಯುತ್ತಿದ್ದ.
ಗೌನಹಳ್ಳಿಗೆ ವಾಸಕ್ಕೆ ಬಂದ ಹಿರಿಯೂರು ಶಾಸಕರಾಗಿದ್ದ ದಿವಂಗತ ಎ. ಮಸಿಯಪ್ಪನವರ ಪ್ರಯತ್ನದಿಂದ ಗಡಿಗ್ರಾಮವಾದ ಗೌನಹಳ್ಳಿಗೆ ೧೯೬೨ರಲ್ಲಿ ವಿದ್ಯುತ್ ಬಂತು. ಇದೇ ಮಹರಾಯರ ಶ್ರೀ ರಂಗನಾಥ ಬಸ್ ಗೌನಹಳ್ಳಿ ಮಾರ್ಗವಾಗಿ ಹಿರಿಯೂರು- ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಮೊದಲು ಗೌನಹಳ್ಳಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಚಿತ್ರದುರ್ಗದ ಮಾರುಕಟ್ಟೆಗೆ ಗಾಡಿಗಳ ಮೂಲಕ (೨೫ ಮೈಲಿ ದೂರ) ರಾತ್ರಿಯೆಲ್ಲಾ ಪ್ರಯಾಸದಿಂದ ಸಾಗಿಸುತ್ತಿದ್ದರು.
ರಾಜಕೀಯ ಸ್ಥಿತ್ಯಂತರಗಳಿಂದ ಹಾಗೂ ಹೊರಗಿನ ಪ್ರಚೋದನೆಗಳಿಂದ ಊರಿನಲ್ಲಿ ತಳ ಊರಿರುವ ಕೆಲವರ ಉಪಟಳದಿಂದ ಊರಿಗೆ ಹುಗ್ಗಿ ಹೊಯ್ದು ಊರು ಕಟ್ಟಿದ ಕುಂಚಿಟಿಗ ಲಿಂಗಾಯ್ತರು ಬಳಲಿದ್ದಾರೆ. ಇವರ ಪರಿಶ್ರಮದಿಂದ ಇತ್ತೀಚೆಗೆ ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆ ಬೆಳೆದು ಕೊಂಚ ನೆಮ್ಮದಿಯತ್ತ ಸಾಗಿರುವ ಹಳ್ಳಿಗರ ಬದುಕಿನಲ್ಲಿ ಗುಡಿಹಳ್ಳಿಯ ಏಳುಕೋಟಿ ಮೈಲಾರಲಿಂಗೇಶ್ವರ, ಗೌನಹಳ್ಳಿಯ ಆಂಜುನೇಯ, ಮಾರಿ ದೈವಗಳ ಪ್ರಭಾವವೇ ಹೆಚ್ಚು. ಮೈಲಾರಲಿಂಗೇಶ್ವರ ಜಾತ್ರೆ ಮಾಡುವವರೇ ಈ ಹಳ್ಳಿಯ ನಿವಾಸಿಗಳು. ಉಗಾದಿಯಿಂದ ಬರುವ ಹುಣ್ಣಿಮೆಗೆ(ಹಟ್ಟಿ ಹುಣ್ಣಿಮೆ ಎಂದು ಖ್ಯಾತಿ) ಜಾತ್ರೆ ಆರಂಭವಾಗಿ ಐದು ದಿನ ನಡೆಯುತ್ತದೆ. ಈ ಸಂದರ್ಭದಲ್ಲಿ ರೈತರು ನೇಗಿಲು ಹೂಡುವುದಿಲ್ಲ.
ಗುಡಿಗೌಡ ಮತ್ತಿತರ ಮುಖಂಡರ ತೀರ್ಮಾನದಂತೆ ‘ದೋಸೆ ಮಾರಿ' ಮತ್ತು ಹಿಟ್ಟಿನ ಮಾರಿ' ಜಾತ್ರೆಗಳು ಗೌನಹಳ್ಳಿಯಲ್ಲಿ ಜರುಗುತ್ತವೆ. ಹಿಟ್ಟಿನ ಮಾರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ದೋಸೆ ಮಾರಿ ಜಾತ್ರೆಯಲ್ಲಿ ಅದು ನಿಷಿದ್ಧ. ಊರ ಗೌಡರ ಪೂಜೆಯೇ ಮುಖ್ಯವಾಗಿರುವ ಎರಡೂ ಜಾತ್ರೆಗಳಲ್ಲಿ ಲಿಂಗಾಯ್ತರಿಂದ ಖರ್ಚು ವಸೂಲಾತಿ ಕಡ್ಡಾಯವಾಗಿದೆ.

(ಕೃಪೆ: ಕೆಂಡಸಂಪಿಗೆ)

ಉಜ್ಜನಪ್ಪ ಬರೆದ ಕೊಳಹಾಳದ ಕಥೆ

ಹಿರಿಯ, ಉತ್ಸಾಹಿ ಪತ್ರಕರ್ತ ಜಿ.ಎಸ್.ಉಜ್ಜನಪ್ಪ. ಕಥೆ, ಜಾನಪದ ಸಾಹಿತ್ಯದ ಬಗ್ಗೆ ಅಪಾರ ಒಲವಿಟ್ಟುಕೊಂಡಿರುವ ವ್ಯಕ್ತಿ. ಜಿಲ್ಲೆಯ ಮಣ್ಣಿನ ಗಂಧ, ಘಮಲು, ಅದರೊಳಗಿರುವ ಹತ್ತಾರು ಕಥೆಗಳನ್ನು ಬಲ್ಲ ವ್ಯಕ್ತಿ. ಅವರ ಲೇಖನಿಯಿಂದ ಅರಲಿದ ಲೇಖನ ಇಲ್ಲಿವೆ..


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೂಡಲ ದಿಕ್ಕಿನಲ್ಲಿರುವ ಗಡಿಗ್ರಾಮ ಕೊಳಹಾಳ. ಈ ಊರಿನಿಂದ ಪಕ್ಷಿ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರ್ ದೂರವಿರುವ ತಾಲೂಕು ಕೇಂದ್ರಕ್ಕೆ ನೇರ ಸಂಪರ್ಕವಿಲ್ಲ. ಕೊಳಹಾಳಿನಿಂದ ೧೨ ಕಿಲೋಮೀಟರ್ ಪಡುವಲ ದಿಕ್ಕಿಗೆ ಪ್ರಯಾಣಿಸಿದರೆ ಸಿಗುವ ಹೊರಕೇರಿ ದೇವರಪುರ (ಎಚ್ ಡಿ ಪುರ) ದಿಂದ ೧೦ ಕಿಲೋಮೀಟರ್ ಬಡಗಲು ದಿಕ್ಕಿಗೆ ಹೋಗಿ ಅಲ್ಲಿನ ಚಿತ್ರಹಳ್ಳಿ ಕ್ರಾಸ್ ನಿಂದ ಮತ್ತೆ ೧೪ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಪ್ರಯಾಣಿಸಿ ಹೊಳಲ್ಕೆರೆ ತಲುಪಬೇಕು.
ಗ್ರಾಮದ ಬಡಗಣ ದಿಕ್ಕಿಗೆ ಸಾಲು ಗುಡ್ಡ, ಅವುಗಳ ಆಚೆ ಕಡೆ ಮಗ್ಗುಲಿಗೆ ಚಿತ್ರದುರ್ಗ ತಾಲೂಕಿನ ಗಡಿ. ಮೂಡಲಕ್ಕೆ ಹಿರಿಯೂರು ಮತ್ತು ತೆಂಕಲಿಗೆ ಹೊಸದುರ್ಗ ತಾಲೂಕಿನ ಗಡಿಗಳು ಹೊಂದಿಕೊಂಡಿವೆ. ಈ ಹಳ್ಳಿಗೆ ಕುಡಿಯುವ ನೀರಿನ ಸೇದೋಬಾವಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಥಮಿಕ ಶಾಲೆ ದೊರೆತಿದ್ದು ಸ್ವಾಂತಂತ್ರ್ಯ ಗಳಿಸಿದ ಮೇಲೆಯೇ.
ಕೊಳಹಾಳಿಗೆ ಮೂಡಲ ದಿಕ್ಕಿನಲ್ಲಿ ೧ ಕಿಲೋಮೀಟರ್ ದೂರದ ಗೊಲ್ಲರಹಟ್ಟಿ, ೨ ಕಿಲೋಮೀಟರ್ ಈಶಾನ್ಯಕ್ಕೆ ಎಲಕೂರನಹಳ್ಳಿ, ಬಡಗಣಕ್ಕೆ ೨ ಕಿಲೋಮೀಟರ್ ದೂರದಲ್ಲಿ (ಗುಡ್ಡಾದಾಚೆಗೆ) ಎರೆಹಳ್ಳಿ , ಪಡುವಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ತೇಕಲವಟ್ಟಿ ಮತ್ತು ೬ ಕಿಲೋಮೀಟರ್ ನೈರುತ್ಯಕ್ಕೆ ಕೊಮಾರನಹಳ್ಳಿ ಹತ್ತಿರದ ಹಳ್ಳಿಗಳು.
ಈ ಊರು ಕಟ್ಟಿರುವುದೇ ಮಟ್ಟಿಯ ಮಗ್ಗುಲಲ್ಲಿ. ಮಟ್ಟಿಯ (ಮರಡಿ) ಮೇಲೊಂದು ಗುಂಡವ್ವರ ಮಾರನಾಯ್ಕ ಎಂಬುವವನು ಕಟ್ಟಿಸಿರುವ ಕಾವಲು ಬುರುಜು ಇದೆ. ದರೋಡೆ, ಸುಲಿಗೆಗಾರರು ಇತ್ತ ಬಂದಾಗ ಕಾವಲಿನವರು ಎಚ್ಚರಿಸುತ್ತಿದ್ದರಂತೆ. ಕೊಳಹಾಳಿನ ಪೂರ್ವದ ಹೆಸರು ‘ಕೊಳಪಾಲ' ಎಂದು ೧೦ನೇ ಶತಮಾನದ ಶಿಲಾಲೇಖ ತಿಳಿಸುತ್ತದೆ.
ಕೊಳಹಾಳಿನ ಬಡಗಣಕ್ಕೆ ಎರಡು ಫರ್ಲಾಂಗ್ ದೂರದಲ್ಲಿ ಪಡುವಲಿಂದ ಮೂಡಲಕ್ಕೆ ಇರುವ ದಾರಿಯನ್ನು ‘ತಿರುಪತಿ ಹಾದಿ' ಎಂದು ಕರೆಯುತ್ತಿದ್ದುದು ವಾಡಿಕೆ. ಇದು ಪಡುವಲ ಸೀಮೆಯಿಂದ ನೇರವಾಗಿ ಎಚ್ ಡಿ ಪುರ, ಸಂಗೇನಹಳ್ಳಿ, ತೇಕಲವಟ್ಟಿ, ಎಲಕೂರನಹಳ್ಳಿ, ಕುಂಬಾರಕಟ್ಟೆ ಮಾರ್ಗವಾಗಿ ಐಮಂಗಲವನ್ನು ತಲುಪುತ್ತದೆ.
ಇದೇ ಹಾದಿಯಲ್ಲಿ ಕೊಳಹಾಳಿಗೆ ಒಂದು ಕಿಲೋಮೀಟರ್ ಪಡುವಲಿಗೆ ಇರುವ ಕೊಗೋಮಟ್ಟಿ ಮಗ್ಗುಲಲ್ಲಿದ್ದ ತಿಮ್ಮಪ್ಪನಹಳ್ಳಿ ಹಾಳಾಗಿದೆ. ಈ ಹಳ್ಳಿಗರು ಮಟ್ಟಿ ಪಕ್ಕದಲ್ಲಿ ಹಾಯುವ ತಿರುಪತಿ ಹಾದಿಯಲ್ಲಿ ಬಂದು ಹೋಗುವ ದಾರಿಹೋಕರನ್ನು ಅಲ್ಲಿನ ಹಳ್ಳದಲ್ಲಿ ಸುಲಿಗೆ ಮಾಡಲಾಗುತ್ತಿತ್ತೆಂದೂ, ಇದರಿಂದ ನೊಂದವರ ಶಾಪದಿಂದ ಈ ಊರು ಹಾಳಾಯಿತೆಂದೂ ಈ ಪ್ರದೇಶದ ಜನರ ನಂಬುಗೆ.
ಒಮ್ಮೆ ಕೊಳಹಾಳಿನ ಲಿಂಗಾಯ್ತರ ಸಂಬಂಧಿಗಳು ಕೊಂಡ ರಾಗಿಯನ್ನು ಬಂಡಿಯಲ್ಲಿ ಹೇರಿಕೊಂಡು ಗೂಳಿಹೊಸಳ್ಳಿಗೆ ಸಾಗಿಸುತ್ತಿರುವಾಗ ದಾರಿ ಕಾಯುತ್ತಿದ್ದ ಸುಲಿಗೆಗಾರರ ಕೈಗೆ ಸಿಕ್ಕಿ ಕೊಳಹಾಳಿಗೆ ಕೇಳಿಸುವಂತೆ ಕೂಗುಹಾಕಿ, ತಮ್ಮ ಬವಣೆಯನ್ನು ತಲುಪಿಸಿದ್ದರಂತೆ. ಕೂಗು ಕೇಳಿಸಿಕೊಂಡ ಊರವರು ತಮ್ಮವರಿಗೆ ಆಗಿರಬಹುದಾದ ಸಂಕಷ್ಟದ ಅರಿವಾಗಿ ಓಡೋಡಿ ಹೋಗಿ ಸುಲಿಗೆಗಾರರಿಂದ ತಮ್ಮ ಬಂಧುಗಳನ್ನು ಬಿಡಿಸಿದ್ದರಂತೆ. ಅಂದು ಒಪ್ಪಂದ ಏರ್ಪಟ್ಟು ತಮ್ಮವರು ಈ ಹಾದಿಯಲ್ಲಿ ಬಂದಾಗ ‘ಕೆಂಚಪ್ಪರ ಸಂಬಂಧಿಗಳು' ‘ಕಾಡಪ್ಪರ ಸಂಬಂಧಿಗಳು' ಎಂದು ಹೇಳಿಕೊಂಡು ಪಾರಾಗುತ್ತಿದ್ದರಂತೆ. ಅಂದಿನಿಂದ ಇಲ್ಲಿನ ಮಟ್ಟಿಗೆ ‘ಕೂಗೋಮಟ್ಟಿ' ಎಂದು ಹೆಸರಾಯಿತಂತೆ ಎಂದು ತಿಳಿಸುತ್ತಾರೆ.
ಕೊಳಹಾಳ ಬೆನ್ನಿಗೇ ಆಗ್ನೇಯ ದಿಕ್ಕಿಗಿರುವ ಗುಡ್ಡದ ಸಾಲು ಮತ್ತು ಈ ಸಾಲಿನಲ್ಲಿರುವ ಭೈರಜ್ಜಿ ಕಣಿವೆ, ಈ ಕಣಿವೆಯ ಮೂಲಕ ಮುಂದೆ ನಡೆದರೆ ಸಿಗುವ ಬಸವನಹಳ್ಳ , ಅದರ ಪಕ್ಕದಲ್ಲಿದ್ದ ಕೆನ್ನಳ್ಳಿ ಇವು ಕೊಳಹಾಳಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ಮಿಳಿತಗೊಂಡಿವೆ. ಈ ಊರಿನ ಸುತ್ತಾ ಇರುವ ಕಪ್ಪು ಮಿಶ್ರಿತ ಕೆಂಪುಭೂಮಿ ತುಂಬಾ ಫಲವತ್ತಾಗಿದ್ದು ಕೊಳಹಾಳು ಮತ್ತು ಗೊಲ್ಲರಹಟ್ಟಿಯ ನಿವಾಸಗಳು ವರ್ಷಕ್ಕೆ ಎರಡು ಫಸಲು ಬೆಳೆಯಲು ಸಕಾಲದಲ್ಲಿ ಮಳೆ ಬೀಳುತ್ತಿತ್ತೆಂದು ರೈತರು ಸ್ಮರಿಸುತ್ತಾರೆ.
ಗೊಲ್ಲರಹಟ್ಟಿಯ ನಿವಾಸಿಗಳ ಜೊತೆಗೆ ಕೊಳಹಾಳಿನ ಕೆಲವು ಕುಂಚಿಟಿಗ ಲಿಂಗಾಯ್ತರೂ, ಬೇಡರೂ ಹಿಂದೆ ಕುರಿ ಮೇಕೆ ಸಾಕುತ್ತಿದ್ದರು. ಈಗ ಲಿಂಗಾಯ್ತರು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿದ್ದರೆ, ಗೊಲ್ಲರು ತಮ್ಮ ಕುಲ ಕಸುಬನ್ನು ಬಿಟ್ಟುಕೊಟ್ಟಿಲ್ಲ.
ಪಾರಂಪರಿಕ ಬೆಳೆಗಳಾದ ಗಿಡದಿಮ್ಮಿನ ಜೋಳ, ಕೇಸರಿಜೋಳ (ಮುಂಗಾರು), ನವಣೆ (ಪಶುಗಳ ತಲಮೇವು) ಸಜ್ಜೆ, ರಾಗಿ, ಅಲಸಂದೆ, ತೊಗರಿ , ಹರಳು, ಹುಚ್ಚೆಳ್ಳು ಮತ್ತು ಹಿಂಗಾರಿನಲ್ಲಿ ಬಿಳಿಜೋಳ ಮುಂತಾದವನ್ನು ಬೆಳೆದುಕೊಂಡು ಸುಖವಾಗಿದ್ದ ಜನ, ಇತ್ತೀಚೆಗೆ ಮಳೆ ಬೀಳುವುದರಲ್ಲಿ ಏರುಪೇರಾಗಿ ಈ ಬೆಳೆಗಳಿಗೆ ವಿದಾಯ ಹೇಳುತ್ತಿದ್ದಾರೆ. ತೋಡು ಬಾವಿಗಳು ಬತ್ತಿದವು. ಬೇಕು-ಬೇಕಿಲ್ಲದ ಕಡೆಗಳಲ್ಲೆಲ್ಲಾ ಭೂಮಿ ಕೊರೆದು ಕೊಳವೆ ಬಾವಿ ಮಾಡಿಕೊಂಡು ವಿಳ್ಳೆದೆಲೆ, ಕನಕಾಂಬರ, ಮಲ್ಲೆ, ಮಲ್ಲಿಗೆ., ಸುಗಂಧರಾಜ ಇತ್ಯಾದಿ ಹೂ ಮತ್ತು ಅಡಿಕೆ ತೋಟ ಮಾಡಿಕೊಂಡಿರುವ ಹಲವರು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ಕೊಳಹಾಳು ಪಡುವಲಕ್ಕೆ ಊರಿಗೆ ಹೊಂದಿಕೊಂಡೇ ಇರುವ ಹಿಂದೊಮ್ಮೆ ಕೆರೆಯಾಗಿದ್ದ ೧೨೦ ಎಕರೆ ಕೆರೆಯಂಗಳ ಪಟೇಲರ ವಂಶಸ್ಥರಿಗೆ ಸೇರಿದೆ. ಇವರು ಬಹಳ ಹಿಂದೆಯೇ ಕೊಳಹಾಳನ್ನು ತೊರೆದು ಚಿತ್ರದುರ್ಗ ಸಮೀಪದ ಪಾಲವ್ವನಹಳ್ಳಿಯಲ್ಲಿ ವಾಸಿಸುತ್ತಾ ಕೆರೆಯಂಗಳವನ್ನು ಊರಿನ ಬೇಡ ಮನೆತನಗಳಿಗೆ ಕೋರಿ ಉಳುಮೆಗೆ ನೀಡಿದ್ದರು. ಇತ್ತೀಚೆಗೆ ಸ್ಥಿತಿವಂತರಾದ ಕೊಳಹಾಳಿನ ಕೆಲವರು , ಕೆರೆಯ ಮುಕ್ಕಾಲು ಭಾಗವನ್ನು ಕೊಂಡು ಅಡಿಕೆ ಮಾಡಿಕೊಂಡಿದ್ದಾರೆ.
ಕೊಳಹಾಳಿನ ಸಾಂಸ್ಕೃತಿಕ ಬದುಕಿನಲ್ಲಿ ಊರಿನ ‘ಗದ್ದುಗೆ' ಯವರ ಮನೆತನ ಅತ್ಯಂತ ಹೆಸರುವಾಸಿಯಾದುದು. ಲಿಂಗವಂತರಾದ ಈ ಮನೆತನದ ಪೂರ್ವಿಕರು ಮತ್ತೋಡು ಸಮೀಪದ ನಿರುವುಗಲ್ಲಿನ ಹರಿಹರೇಶ್ವರ ದೇವರ ಪೂಜಾರಿಗಳಾಗಿದ್ದರು. ಮತ್ತೋಡು ದೊರೆ ಹಾಲಪ್ಪ ನಾಯಕನ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತ ಸಮಾರಂಭದ ನಿಮಿತ್ತ ಹೊರಡಿಸಿದ ಮರ್ಯಾದಾ ಶಾಸನದ (ಕ್ರಿ.ಶ ೧೬೫೧) ಅನುಸಾರ ಹಿರಿಯೂರು ತಾಲೂಕು ಮಾರೀಕಣಿವೆಯ (ವಾಣಿ ವಿಲಾಸಪುರ) ಕಣಿವೆ ಮಾರಿಕಾಂಬೆಯ ಪೂಜಾರಿಗಳಾಗಿ ನಿಯೋಜನೆಗೊಳ್ಳುತ್ತಾರೆ. ಮಾರೀಕಣೀವೆ ಸಮೀಪದ ಭರಮಗಿರಿಗೆ ಸ್ಥಳಾಂತರಗೊಂಡು ಕಣಿಮೆ ಮಾರಿಕಾಂಬೆಯ ಮೂಲಕ ಪೂಜಾರಿಕೆ ಕೈಂಕರ್ಯ ಮಾಡುತ್ತಿರುವಾಗ ಕಾಲಾನುಕ್ರಮದಲ್ಲಿ ಭರಮಗಿರಿಯ ಪಾಳೇಗಾರನ ಕಿರುಕುಳ ಸಹಿಸಲಸಾಧ್ಯವಾಗಿ ಒಂದು ಕುಟುಂಬ ದನಕುರಿ ಇತ್ಯಾದಿ ಸಮೇತ ಅಲ್ಲಿಂದ ಗುಳೇಹೊರಟು ಕೊಳಹಾಳಿಗೆ ಬಂದು ಸೇರುತ್ತಾರೆ.
‘ಉತ್ತಮರು' ಊರಿಗೆ ಬಂದುದು ಊರಿನ ಸೌಭಾಗ್ಯವೆಂದು ಭಾವಿಸಿದ ಕೊಳಹಾಳಿನ ಬೇಡ ಜನಾಂಗದವರು ಅವರಿಗೆ ಜಮೀನು ನೀಡಿದ್ದಲ್ಲದೆ ವಾಸಕ್ಕೆ ೪೮ ಕಂಬದ ಒಂದು ದೊಡ್ಡ ಮಾಳಿಗೆ ಮನೆಯನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇಲ್ಲಿ ನೆಲೆಸಿದ ಅವರ ‘ದೊಡ್ಡಮನೆ' ಅಥವಾ ಗದ್ದುಗೆ ಮನೆಯಲ್ಲೇ ಐದಾರು ತಲೆಮಾರಿನ ಬಳಿಕ ಮುಂದೆ ಅವಧೂತನಾದ ಕೆಂಚಪ್ಪ ಆತನ ಅತ್ಯಂತ ಚೆಲುವೆ ಮಗಳು ಭೈರಮ್ಮ ಜನಿಸಿದ್ದು.
ಕೆಂಚಪ್ಪ ಬಾಲಕನಾಗಿದ್ದಾಗಲೇ ಸದಾ ಅನ್ಯಮನಸ್ಕನಾಗಿರುತ್ತಿದ್ದನು. ಉಂಡು ಮಲಗುವ ಕ್ರಿಯೆಗಳು ಇವನಿಗೆ ಯಾಂತ್ರಿಕವಾಗಿದ್ದವು. ಅವನ ವಿಲಕ್ಷಣ ಸ್ಥಿತಿ ನಡವಳಿಕೆಗಳಿಂದ ‘ತಿಕಲ' ‘ಯೇಗಿ' ಎಂದು ಕರೆಯಿಸಿಕೊಂಡಿದ್ದನು. ಹುಚ್ಚಮ್ಮ ಎಂಬ ಕನ್ನೆಯೊಂದಿಗೆ ಲಗ್ನವಾದರೂ ಕೃಷಿ ಬದುಕಿಗಿಂತ ದನಗಾಹಿಯಾಗಿದ್ದವನು. ಇಂಥವನನ್ನು ಹುಡುಕಿಕೊಂಡು ಹೊಸಪೇಟೆ ಸಮೀಪದ ಕಾಳಘಟ್ಟ ಗುಡ್ಡದಲ್ಲಿ ವಾಸಿಯಾಗಿದ್ದ ರುದ್ರಮುನಿ ಅವಧೂತರೆಂಬುವವರು ಕುದುರೆ ಹತ್ತಿಸಿಕೊಂಡು ಬರುತ್ತಾರೆ.
ದನಗಾಹಿ ಕೆಂಚಪ್ಪ ತನ್ನ ಇಷ್ಟ ತಾಣವಾದ ಕೂಗೋಮಟ್ಟಿ ಬಡಗಣ ದಿಕ್ಕಿಗಿರುವ ಗುಡ್ಡದಾಚೆಗಿನ ಕಣಿವೆಯಲ್ಲಿನ ‘ಸಿದ್ದಪನ ವಜ್ರ'ದ ಬಳಿ ಕುಳಿತುಕೊಂಡು ತನ್ನ ಭಾವನಾಲೋಕದಲ್ಲಿ ವಿಹರಿಸುತ್ತಿರುವಾಗ ರುದ್ರಾವಧೂತರು ಈತನ ಎದುರಿಗೆ ಧುತ್ತೆಂದು ಕಾಣಿಸಿಕೊಳ್ಳುತ್ತಾರೆ. ಎದ್ದು ಅವರಿಗೆ ಅಡ್ಡಬಿದ್ದು ಕೆಂಚಪ್ಪನಿಗೆ ನನಗೆ ಹಸಿವಾಗಿದೆ ತಾಯಿ ಸ್ತನದಿಂದಾಗಲಿ ಪ್ರಾಣಿಗಳಿಂದಾಗಲಿ ಹಿಂಡಿ ಕರೆಯದ ಹಾಲನ್ನು ತಂದುಕೊಡು. ಅಲ್ಲಿಯವರೆಗೆ ಇಲ್ಲೇ ಕಾಯ್ತೀನಿ ಎಂದು ಅಪ್ಪಣೆ ಇತ್ತರು.
ಕೆಂಚಪ್ಪ ಕೆಲಕಾಲ ವಿಚಲಿತನಾದರೂ ಗುರುಗಳ ಮನದಿಚ್ಛೆಯನ್ನು ಅರ್ಥಮಾಡಿಕೊಂಡು ಹೋಗಿ ಈಚಲಮರದ ಹಾಲನ್ನು ಗಡಿಗೆ ತುಂಬಾ ಹೊತ್ತು ತರುತ್ತಾನೆ. ಅದನ್ನು ಪಡೆದ ಗುರುಗಳು ಸಾಕಾಗುವಷ್ಟು ಕುಡಿದು ಸಂತೃಪ್ತರಾಗಿ ಉಳಿದುದನ್ನು ಕುಡಿಯಲು ಕೆಂಚಪ್ಪನಿಗೆ ಸೂಚಿಸುತ್ತಾರೆ. ಅದುವರೆಗೆ ಅದೇನೆಂದು ಅರಿಯದಿದ್ದ ಕೆಂಚಪ್ಪ ಈಚಲುಮರದ ಹಾಲನ್ನು ಗಟಗಟನೆ ಕುಡಿದಿದ್ದ. ಗುರುಗಳು ಕೆಲಕಾಲ ಅಲ್ಲೇ ಇದ್ದು ಕೆಂಚಪ್ಪನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿ ಗುರುಭೋದೆ ನೀಡಿ ಹೋಗುತ್ತಾರೆ.
ಅವಾಗಿನಿಂದ ಕೆಂಚಪ್ಪ ತನ್ನವರ, ಕುಲಬಾಂಧವರ ತಿರಸ್ಕಾರಕ್ಕೆ ಈಡಾದರೂ ಅವಧೂತನಾಗುವ ಹಾದಿಯಲ್ಲಿ ಸಾಗುತ್ತಿದ್ದ. ಕಾಲ ಸರಿದಂತೆ ಕೆಂಚಪ್ಪನ ನಡವಳಿಕೆಗಳು ಅತ್ಯಂತ ವಿಲಕ್ಷಣವಾಗುತ್ತಿದ್ದವು. ಈತ ಅನಾಚಾರಿಯೆಂಬ ದೂರು ಚಿತ್ರದುರ್ಗದ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾಗಿದ್ದ ಮರುಘರಾಜೇಂದ್ರ ಸ್ವಾಮಿಗಳ ಮುಂದೆ ಪ್ರಸ್ತಾಪವಾಯ್ತು. ಗುರುಗಳು ಕೆಂಚಪ್ಪನನ್ನು ಪರೀಕ್ಷಿಸಿದ ಬಳಿಕ ಇವನೊಬ್ಬ ಅಸಾಮಾನ್ಯ ಮನುಷ್ಯ ಕಣ್ರಪ್ಪ, ಇವನು ನಿಮ್ಮಂತೆ ಸಾಮಾನ್ಯನಲ್ಲ ಅವನಗೊಡವೆಗೆ ಅವನನ್ನು ಬಿಟ್ಟು ಬಿಡಿ ಯಾರೂ ಪೀಡಿಸಬೇಡಿರಿ ಎಂಬುದಾಗಿ ಆದೇಶಿಸಿದರು.
ಕೆಂಚಪ್ಪನ ಮಗಳು ಕಡು ಚೆಲವೆ ಭೈರಮ್ಮಳೂ ಎಲ್ಲರಂತೆ ತಂದೆಯನ್ನು ಅಲಕ್ಷಿಸಿದ್ದಳು. ಆದರೆ ಈಕೆಯನ್ನು ಪ್ರೀತಿಯಿಂದ ಮತ್ತು ಅವಳಾಡುತ್ತಿದ್ದ ವಯಸ್ಸಿಗಿಂತ ವಿವೇಕದ ಮಾತುಗಳಿಗೆ ತಲೆದೂಗಿ ಭೈರಜ್ಜಿ ಎಂದು ಕರೆಯುತ್ತಿದ್ದರು. ಈಕೆಯ ಚೆಲವಿಗೆ ಮನಸೋತಿದ್ದ ಕೆನ್ನಳ್ಳಿಯ ಬೇಡರ ರಣಹದ್ದಿನಂಥವನೊಬ್ಬ ಭೈರಮ್ಮಳನ್ನು ಉಪಾಯದಿಂದ ತನ್ನ ತೆಕ್ಕೆಗೆ ಹಾಕಿಕೊಂಡ. ಇದರ ಸುಳಿವು ಕೆಂಚಪ್ಪನ ಒಳಗಣ್ಣಿಗೆ ಗೋಚರಿಸಿ ಅವಳಿಗೆ ಮುಂದೊದಗಬಹುದಾದುದನ್ನು ನೊಂದು ನುಡಿದಿದ್ದ. ಭೈರಮ್ಮ ತನ್ನ ಯೌವನದ ಅಮಲಿನಲ್ಲಿ ಕೊಳಾಳು- ಕೆನ್ನಳ್ಳಿಗಳ ಗುಡ್ಡದ ಕಣಿವೆ ಮಾರ್ಗವಾಗಿ ಓಡಾಡುತ್ತಿರುವಾಗ ತನ್ನ ಪ್ರಿಯಕರನ ಹೆಂಡತಿಯ ಹಿಕಮತ್ತಿನಲ್ಲಿ ಕಣಿವೆಯಲ್ಲಿ ಕೊಲೆಯಾದಳು. ಕೊಲೆಗಡುಕರಿಗೆ ‘ನಿಮ್ಗೆ ಹಾಲು ತುಪ್ದಾಗೆ ಕೈತೊಳಸಿದ್ನೆಲ್ರೋ ಹೆಂಗೆ ಮನಸ್ಸು ಬಂತ್ರೋ ನಿಮ್ಗೆ, ಬ್ಯಾಡಕಣ್ರೋ'ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಳಂತೆ. ಅಪರಾಧಿಗಳಲ್ಲೊಬ್ಬನಾದ ನಿಂಗನಾಯ್ಕ ಎಂಬುವವನು ತನಗೆ ಕೋರ್ಟಿನಿಂದ ಶಿಕ್ಷೆಯಾದಾಗ ಹಲುಬಿಕೊಂಡಿದ್ದನಂತೆ ಎಂದು ಅನೇಕ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಭೈರಮ್ಮ ಕೊಲೆಯಾದ ಕಣಿವೆಗೆ ಭೈರಜ್ಜಿ ಕಣಿವೆ ಎಂದು ಹೆಸರಿಡಲಾಗಿದೆ.
ಕೆಂಚಪ್ಪನ ಬದುಕಿನುದ್ದಕ್ಕೂ ಜನ ಬರೀ ಕಿರುಕುಳಗಳನ್ನು ಕೊಟ್ಟರು. ಐಮಂಗಲದ ಗೌಡರು ಒಂದು ಹಗಲು - ರಾತ್ರಿ ಕಂಬಕ್ಕೆ ಕಟ್ಟಿಸಿದ್ದರು. ಮತ್ಯಾರೋ ಹೊಳಲ್ಕೆರೆ ಪೊಲೀಸರಿಗೆ ಈತನ ಮೇಲೆ ಸಮಾಜದ್ರೋಹಿ ಎಂದು ದೂರು ನೀಡಿದರು. ಪೊಲೀಸರು ಸಾಕಷ್ಟು ಸತಾಯಿಸಿ ದೂರನ್ನು ಕೂರ್ಟಿಗೆ ಸಲ್ಲಿಸಿದರು. ಶಿವಮೊಗ್ಗೆಯಲ್ಲಿದ್ದ ಸೆಷನ್ಸ್ ಕೋರ್ಟಿನಲ್ಲಿ ಕೆಂಚಪ್ಪನನ್ನು ಹಾಜರುಪಡಿಸಲಾಯಿತು. ಅಲ್ಲಿಯೂ ಈತನ ವಿಲಕ್ಷಣ ವರ್ತನೆ ನಡದೇ ಇತ್ತು. ವಕೀಲರು ನ್ಯಾಯಾಧೀಶರೂ ‘ಏನು ಘನಂದಾರಿ ಕೇಸಯ್ಯಾ ಇದು, ಇವನು ಸಮಾಜ ದ್ರೋಹಿ ಹೆಂಗೆ ಆಗಿದ್ದಾನು, ತನ್ನ ಪಾಡಿಗೆ ತಾನು ಅರೆ ಹುಚ್ಚನಂತೆ ಇರೋನಿಗೆ ಕೋರ್ಟಿಗ್ಯಾಕೆ ಕರೆತಂದಿರಯ್ಯಾ' ಎಂದು ಪೊಲೀಸರಿಗೇ ಎಚ್ಚರಿಕೆ ನೀಡಿ ಕೆಂಚಪ್ಪನನ್ನು ಖುಲಾಸೆ ಮಾಡಿದ್ದರಂತೆ.
ಹೀಗಾಗಿ ಕೆಲವರು ಕೆಂಚಪ್ಪ ಅವಧೂತನೆಂದು ಗೌರವಿಸುತ್ತಿದ್ದರೆ ಈತ ಎತ್ತಲೋ ನೋಡುತ್ತಾ ವಿಲಕ್ಷಣವಾಗಿ ನಗುತ್ತಿದ್ದನಂತೆ. ಮತ್ತೆ ಕೆಲವೊಮ್ಮೆ ತಾನೂ ಪ್ರತಿಯಾಗಿ ಕೈಮುಗಿದು ಹುಸಿನೆಗೆ ನಗುತ್ತಿದ್ದನಂತೆ.
ನಿರಕ್ಷರಕುಕ್ಷಿಯಾಗಿದ್ದ ಕೆಂಚಪ್ಪ ಚಿದಾನಂದಾವಧೂತರು ರಚಿಸಿರುವ ದೇವಿಪುರಾಣದ ಮೊದಲ ಪದ್ಯ `ಪರಮ ಪರತರ ಪರಮ ಮಂಗಳ ಪರಮ ಪೂರ್ಣ ಜ್ಯೋತಿ ಪರಮಾಕಾಶ ಪರಮೇಶ` ದಿಂದ ಕೊನೆಯ ಮಂಗಳದ ಸಾಲಿನವರೆಗೆ ನಿರರ್ಗಳವಾಗಿ ಪಠಿಸುತ್ತಿದ್ದುದನ್ನು ಅವರ ಮೊಮ್ಮಗ ದಿವಂಗತ ಮೇಷ್ಟ್ರು ಕೆಂಚಪ್ಪ ಕೊಂಡಾಡುತ್ತಿದ್ದರು. ಇದನ್ನು ಇವರ ಮಗ ನಿವೃತ್ತ ಇಂಜಿನಿಯರ್ ಕೆ. ತಿಪ್ಪೇರುದ್ರಪ್ಪ ಈಗಲೂ ಸ್ಮರಿಸುತ್ತಾರೆ. ಭಂಗಿ ಸೊಪ್ಪಿನ ಚಿಲುಮೆ ಎಳೆದು ಭಜನೆಗೆ ಕುಳಿತರೆಂದರೆ ವಾಗ್ದೇವಿ ಕೆಂಚಪ್ಪರ ನಾಲಗೆ ಮೇಲೆ ಕಣೀತಿದ್ಲು ಎಂದು ಕೂಡ ದಿವಂಗತ ಮೇಷ್ಟ್ರು ಕೊಂಡಾಡುತ್ತಿದ್ದರಂತೆ.
ಅವಧೂತ ಕೆಂಚಪ್ಪರ ಸಮಾಧಿ ಇಂದು ಯಾತ್ರಾ ಸ್ಥಳವಾಗಿದೆ. ಪ್ರತಿ ಸೋಮವಾರ ನೂರಾರು ಭಕ್ತರು ಬಂದು ಭಕ್ತಿಯಿಂದ ಅವಧೂತರ ಪೊಜೆ ಮಾಡಿ ಹೆಂಡ, ಮಾಂಸದ ಅಡುಗೆ, ಸಿಹಿ ಅಡುಗೆ ಎಡೆ ಅರ್ಪಿಸುತ್ತಾರೆ. ರೋಗ ರುಜಿನಗಳಿಂದ ಹಿಡಿದು ಗೃಹಕೃತ್ಯದ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪದ ಅಪ್ಪಣೆ ಪಡೆಯುತ್ತಾರೆ. ಈ ಬಿಲ್ವಪತ್ರೆಯ ಅಪ್ಪಣೆಯಲ್ಲಿ ಏನು ಬೀಜ ಬಿತ್ತಲಿ, ಯಾವ ಫಸಲು ಚಂದಗಾದೀತು ಇಂಥಾ ಮನೆಯಿಂದ ಹೆಣ್ಣು ತಂದರೆ ಒಳ್ಳೇದಾದೀತೆ, ಮುಂತಾಗಿಯಲ್ಲದೆ ಕೋರ್ಟು ಖಟ್ಲೆಗಳನ್ನೂ ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಕೆಲವು ಭಕ್ತರು ತಮ್ಮ ಭಾದೆಗಳ ಪರಿಹಾರಕ್ಕೆ ಕೆಂಚಪ್ಪರಿಗೆ ಅತ್ಯಂತ ಪ್ರಿಯವಾಗಿದ್ದ ಹೊಗೆ ಸೊಪ್ಪು, ಎಲೆ ಅಡಿಕೆ ಇತ್ಯಾದಿಗಳನ್ನು ಸಮರ್ಪಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಕಾಳ ಘಟ್ಟದ ರುದ್ರಮುನಿ ಅವಧೂತರು ತಮ್ಮ ಶಿಷ್ಯ ಕೆಂಚಪ್ಪನಿಗೆ ಆರ್ಶೀವಾದ ಮಾಡಿ ನೀಡಿದ್ದ ಕನ್ನಡ ಮೋಡಿ ಲಿಫಿಯ ತಾಳೆಗರಿಗಳ ಕಟ್ಟು, ಪುರಾಣಗಳ ಗಂಟುಗಳನ್ನು ಗದ್ದುಗೆ ಮನೆತನದವರು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಕೊಂಡು ಬರುತ್ತಿದ್ದಾರೆ. ಅವುಗಳೊಳಗೇನಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಅವಧೂತರ ಮರಿಮಗ ಜಿ.ಎಸ್.ಕೆಂಚಪ್ಪ ತಿಳಿಸುತ್ತಾರೆ.


(ಕೃಪೆ: ಕೆಂಡಸಂಪಿಗೆ)

ಚುನಾವಣೆ ಮುಗಿದಿದೆ.. ಚುನಾವಣೆ ಬಾಕಿ ಇದೆ....

ದೊಡ್ಡ ತಲೆ ಭಾರ ಇಳಿದೆ. ಆದರೆ ಚಿತ್ರದುರ್ಗದ ಮಟ್ಟಿಗೆ ಸಾಹಿತ್ಯ ಸಮ್ಮೇಳನ.. ದೊಡ್ಡ ಕನಸಿನ ಭಾರವಿದೆ. ಅದನ್ನು ಯಶಸ್ವಿಯಾಗಿ ಹೊತ್ತೊಯ್ಯುವುದಕ್ಕೆ ಇನ್ನು ಮೇಲೆ ಸಿದ್ಧತೆಗಳು ಆರಂಭವಾಗಬೇಕು.
ಮೇ ಅಂತ್ಯಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಹುಶಃ ಇನ್ನೊಂದು ತಿಂಗಳಲ್ಲಿ ನಡೆಯಬಹುದು. ಹಾಗಾದರೂ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದಾ?
ಯಾಕೋ ಇದೊಂದು ಅನುಮಾನ ಕಾಡುತ್ತಿದೆ. ಗಣಿ ಧಣಿ, ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವುದು ಸಮ್ಮೇಳನಕ್ಕೆ ಹಣದ ಕೊರತೆಯ ಮಾತಿಲ್ಲ. ಪ್ರಶ್ನೆ ಇರುವುದು ಒಗ್ಗಟ್ಟಿನದು.... ಚಿತ್ರದುರ್ಗದ ಕ್ಷೇತ್ರದ ಶಾಸಕ ಎಸ್.ಕೆ.ಬಸವರಾಜನ್, ಮುರುಘ ಶ್ರೀ, ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್, ಜಿಲ್ಲೆಯ ಸಿರಿಗೆರೆ, ಹೊಸದುರ್ಗ, ಕಬೀರಾನಾಂದಾಶ್ರಮದ ಶ್ರೀಗಳು.. ಹೀಗೆ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದವರು ಒಗ್ಗಟ್ಟಾಗಿ ದುಡಿದರೆ ಸಮ್ಮೇಳನಕ್ಕೊಂದು ಕಳೆ ಎನ್ನುವುದು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಮತ.
ಸದ್ಯದ ರಾಜಕೀಯ ಬೆಳವಣಿಗೆ ಜಿಲ್ಲೆಯ ಕೆಲ ಹಿರಿಯರಲ್ಲಿ ವೈಮನಸ್ಸು ಉಂಟು ಮಾಡಿವೆ ಎಂಬುದೇ ಈ ಗುಮಾನಿಯ ಮಾತುಗಳಿಗೆ ಕಾರಣ.
ಜಿಲ್ಲೆಯ ಬುದ್ದಿಜೀವಿಗಳು, ಸಾಹಿತ್ಯಾಸಕ್ತರು ಒಂದೆಡೆ ಇನ್ನಾದರೂ ಸಮ್ಮೇಳನದ ಕುರಿತು ನಾಲ್ಕು ಮಾತುಗಳನ್ನು ಆಡಿ ಎಲ್ಲರೂ ಕೈಜೋಡಿಸಲು ಪ್ರೇರೇಪಿಸುವ ಅಗತ್ಯವಿದೆ..

Sunday, March 23, 2008

ತಿಪ್ಪೇರುದ್ರನ ತೇರು ಎಳೆದರು...

ಸುರಿವ ಮಳೆ ನಡುವೆಯೂ ನಡೆಯಿತು ಸಂಭ್ರಮದ ನಾಯಕನಹಟ್ಟಿ ಜಾತ್ರೆ..

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರ ಸ್ವಾಮಿಗಳ ರಥೋತ್ಸವ ಭಾನುವಾರ ಸುರಿವ ಮಳೆಯ ನಡುವೆ ವಿಜೃಂಭಣೆಯಿಂದ ನಡೆಯಿತು. ಸುಮಾರು ಮೂರು ಲಕ್ಷಕ್ಕೂ ಸೇರಿದ ಅಧಿಕ ಭಕ್ತಸಾಗರ ಸಂಭ್ರಮದ ವಾರ್ಷಿಕ ಸಂಪ್ರದಾಯಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ ೩-೨೦ ನಿಮಿಷಕ್ಕೆ ಸರಿಯಾಗಿ ರಥದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಸ್ವಾಮಿಗೆ ಉಪವಿಭಾಗಾಧಿಕಾರಿ ರಾಜಮ್ಮ ಚೌಡರೆಡ್ಡಿ, ವಿಧಾನಸಭಾ ಮಾಜಿ ಉಪಾಧ್ಯಕ್ಷ ಎನ್.ವೈ. ಗೋಪಾಲಕೃಷ್ಣ, ತಹಸೀಲ್ದಾರ್ ಹೆಚ್. ಜ್ಞಾನೇಶ್ ಸಾಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಬಾರಿ ಆರಂಭ ಸ್ಥಳದಿಂದ ರಥ ಚಲಿಸಿ ಕೇವಲ ೨೫ ನಿಮಿಷದಲ್ಲಿ ಗಮ್ಯಸ್ಥಾನವಾದ ಪಾದಗಟ್ಟೆ ತಲುಪಿತು. ಬೃಹತ್ ರಥ ಪ್ರತಿ ವರ್ಷ ಪಾದಗಟ್ಟೆ ತಲುಪಲು ಕನಿಷ್ಟ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಈ ವರ್ಷ ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ರಥ ಚಲಿಸಿ ಪಾದಗಟ್ಟೆ ತಲುಪಿತು. ರಥ ಬೇಗನೆ ಸೇರಿದ್ದರಿಂದ ಪಾದಗಟ್ಟೆ ಬಳಿ ತುಂಬ ಹೊತ್ತು ನಿಲ್ಲಿಸಲಾಗಿತ್ತು.
ಶನಿವಾರದಿಂದಲೇ ಮಳೆಯ ಆರ್ಭಟ ಆರಂಭವಾಗಿ ಭಾನುವಾರವೂ ಮುಂದುವರಿಯಿತು. ಮಳೆ ಸುರಿಯುವುದು, ನಿಲ್ಲುವುದು ದಿನಪೂರ್ತಿ ನಡೆದೇ ಇತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆ ರಭಸವಾಗಿ ಸುರಿಯತೊಡಗಿದ ಮಳೆ ಸುಮಾರು ಮುಕ್ಕಾಲು ಗಂಟೆ ನಿಲ್ಲಲೇ ಇಲ್ಲ. ಮಳೆಯಲ್ಲಿ ತೊಯುತ್ತಲೇ ಭಕ್ತಾಧಿಗಳು ರಥವನ್ನು ಜಯಘೋಷದೊಂದಿಗೆ ಎಳೆದರು. ಕಾಲಿಡಲೂ ಜಾಗವಿಲ್ಲದಷ್ಟು ಭಕ್ತಸಾಗರ ಜಮಾವಣೆಯಾಗುತ್ತಿದ್ದ ರಥ ಬೀದಿ ಮಳೆಯ ಕಾರಣದಿಂದ ಬೀಕೋ ಎನ್ನುತ್ತಿತ್ತು.
ರಥೋತ್ಸವ ಆರಂಭವಾಗುತ್ತಿದ್ದಂತೆ ಒಂದಷ್ಟು ಭಕ್ತಸಾಗರ ರಥವನ್ನು ಎಳೆಯಲು ನಿರತರಾದರೆ ಒಂದಷ್ಟು ಭಕ್ತರು ದೇವಸ್ಥಾನದತ್ತ ಪಾದಬೆಳೆಸಿ ದೇವರ ದರ್ಶನಕ್ಕ ಸರದಿಸಾಲಿಲ್ಲಿ ನಿಲ್ಲತೊಡಗಿದರು. ಕೆಲವೇ ಭಕ್ತರು ಮಾತ್ರ ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಬಳಸಿದರೆ ಬುಹುತೇಕ ಭಕ್ತರು ಮಳೆಯಲ್ಲಿ ತೋಯ್ದು ತೊಪ್ಪೆಯಾದರು.
ಪ್ರತಿವರ್ಷ ಜಾತ್ರೆ ಬಿಸಿಲ ಧಗೆ, ದೂಳಿನಿಂದ ಕೂಡಿದ ವಾತಾವರಣ ಸಾಮಾನ್ಯವಾಗಿರುತ್ತಿತ್ತು. ಈ ಬಾರಿ ಮಳೆ ಸುರಿದಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿ ಊರೆಲ್ಲ ಕೆಸರುಮಯವಾಯಿತು. ಕಳೆದ ೪೦ ವರ್ಷದಿಂದ ಇಂತಹ ವಾತಾವರಣ ಕಂಡಿರಲಿಲ್ಲ ಎಂಬುದು ಸ್ಥಳೀಯ ನಾಗರೀಕರ ಅಭಿಪ್ರಾಯ. ಜಾತ್ರೆ ಹಿಂದೆ -ಮುಂದೆ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರಾಗಿ ಮಳೆಹನಿ ಉದುರಿ ಶುಭ ಸೂಚನೆ ನೀಡುವ ಪರಂಪರೆಯಿತ್ತು. ಈ ವರ್ಷ ಎಲ್ಲರ ನಿರೀಕ್ಷೆ ಮೀರಿ ಅಕಾಲ ಮಳೆ ಸುರಿದು ಭಕ್ತರ ಸಂಭ್ರಮಕ್ಕೆ ತುಸು ಅಡ್ಡಿಯುಂಟು ಮಾಡಿತು.
ಬರುವ ಲಕ್ಷಾಂತರ ಭಕ್ತರು ಬಯಲಲ್ಲಿ, ತೋಟದಲ್ಲಿ ಗುಡಾರ ಹಾಕಿ ಬಿಡಾರ ಹೂಡುತ್ತಿದ್ದರಿಂದ ಈ ಅಕಾಲ ಮಳೆ ಬಾರಿ ಅಡಚಣೆ ಉಂಟುಮಾಡಿತು. ಬಯಲಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುವವರಿಗೆ ಬಾರಿ ತೊಂದರೆಯಾಯಿತು. ಆದರೆ ಜಾತ್ರೆಯಲ್ಲಿ ಸುತ್ತುಹಾಕುವ ಭಕ್ತರಿಗೆ ನಿರಾಶೆಯಾದಂತೆ ಕಾಣಲಿಲ್ಲ. ಸುರಿವ ಮಳೆಯಲ್ಲಿ ತೊಯ್ಯುತ್ತಲೆ ಜಾತ್ರೆಯ ಸೊಬಗು ಸವಿದರು.
ಜಾತ್ರೆಯ ವ್ಯಾಪಾರಕ್ಕೆ ಮಳೆ ಕೆಲವು ಅಡ್ಡಿಗನ್ನು ಉಂಟು ಮಾಡಿತು. ಗ್ರಾಮೀಣ ಜನರ ಜಾತ್ರೆಯ ವಿಶೇಷ ತಿಂಡಿಯಾದ ಕಾರ ಮಂಡಕ್ಕಿ ವ್ಯಾಪಾರದಲ್ಲಿ ಅಷ್ಟೇನು ವ್ಯತ್ಯಯ ಉಂಟಾಗದಿದ್ದರೂ, ಬಿಸಿಲಿನ ಧಗೆಯಿಂದ ಜೋರಾಗಿ ನಡೆಯುತ್ತಿದ್ದ ತಂಪು ಪಾನೀಯಗಳ ವ್ಯಾಪಾರ ನೆಲಕಚ್ಚಿತು. ತಂಪು ಪಾನೀಯ ವ್ಯಾಪಾರಿಯೊಬ್ಬರ ಪ್ರಕಾರ ರಥೋತ್ಸವದಂದು ಕನಿಷ್ಟ ೩೦ ಸಾವಿರ ವ್ಯಾಪಾರವಾಗುತ್ತಿದ್ದರೆ, ಈ ಬಾರಿ ೧ ಸಾವಿರ ಕೂಡಾ ವ್ಯಾಪಾರವಾಗಿಲ್ಲ ಎಂದು ಬೇಸರದಿಂದ ತಿಳಿಸಿದರು.
ಭಕ್ತರು ಸ್ವಾಮಿಯ ಜೀವೈಕ್ಯ ಸಮಾಧಿಯಾದ ಹೊರಮಠ ಮತ್ತು ಒಳಮಠಗಳೆರಡಕ್ಕೂ ಭೇಟಿನೀಡಿ ನಮನ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದರು. ಜಾತ್ರೆಯ ಮಾಮೂಲಿ ಪದ್ಧತಿಯಂತೆ ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸಿದರು. ಮಳೆ ಈ ಸಂಪ್ರದಾಯಕ್ಕೆ ಅಷ್ಟಾಗಿ ಅಡ್ಡಿಯಾಗಲಿಲ್ಲ.

Friday, March 21, 2008

ಒಂದು ಹಿಡಿ ಕ್ಷಮೆ ನಮಗಾಗಿ ಇಟ್ಟಿರಿ...

ಆಪ್ತರು ವಾಚಾಮಗೋಚರವಾಗಿ ಬೈದರು. ಆರಂಭ ಶೂರತ್ವ ಅಂತಾ ಅಣಕಿಸಿದರು. ಏನು ಮಾಡುವುದು ಸ್ವಾಮಿ. ಕೆಲಸದ ಒತ್ತಡ ಅಂದರೆ ನಂಬುವ ಮಾತೆ ಅಂತೀರಾ. ಯಾವುದೋ ತಾಂತ್ರಿಕ ತೊಂದರೆ ಅಂದರೆ ನಗುತ್ತೀರ. ಇರಲಿ. ನಿಜ ಹೇಳಬೇಕೆಂದರೆ ನಾವು ಮಾಡುತ್ತಿರುವ ಕೆಲಸಗಳ ನಡುವೆ ಏನನ್ನಾದರೂ ಬರೆಯಬೇಕು ಎನ್ನುವುದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದೇವೆ. ಕೆಲಸದ ಒತ್ತಡ ಹಾಗಿತ್ತು. ಆದರೆ ನಿಮಗೆ ಹಿಸಿ ಹೋಳಿಗೆ ಬಡಿಸುವುದಕ್ಕೆ ಬೇಳೆ, ಬೆಲ್ಲ ಹೊಂಚು ಕೆಲಸವನ್ನಂತು ಕೈಬಿಟ್ಟಿಲ್ಲ. ಜಿಲ್ಲೆಯ ಮಿತ್ರರನ್ನು ಪರಿಚಯಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯ ಕಾವ್ಯ ಪರಂಪರೆ ಕುರಿತ ಒಳನೋಟದ ಲೇಖನವೊಂದು ನಿಮ್ಮ ಮುಂದೆ ಬರಲಿದೆ... ನಿರೀಕ್ಷೆಯಲ್ಲಿರಿ...
ಆದರೆ ಒಂದು ಮನವಿ.. ಇಂಥ ಗ್ಯಾಪ್ ಗಳು ಆಗಾಗ ಸೃಷ್ಟಿಯಾಗುತ್ತಿರುತ್ತವೆ. ಅದಕ್ಕಾಗಿ ಒಂದು ಹಿಡಿ ಕ್ಷಮೆ ನಮಗಾಗಿ ಎತ್ತಿಟ್ಟಿರಿ...
ದುರ್ಗದ ಹುಡುಗರು...

ಇವರು ಅಪಾರ ನಮ್ಮ ಜಿಲ್ಲೆಯವರು...

ನಮಗೆ ಅಪಾರ ಭಾವನದ ಕಥೆಯೊಂದರ ಮೂಲಕ ಪರಿಚಯ. ಇವರ ನಿಜ ಹೆಸರು ಪಿ. ರಘು. ಆದರೆ ಅವರು ಹೆಚ್ಚು ಚಿರಪರಿಚಿತರಾಗಿರುವುದು ಅಪಾರ ಎಂಬ ಹೆಸರಿನಿಂದ. ಭಾವನದ ಕಥೆಯಲ್ಲಿ ಇವರು ಹಿರಿಯೂರು ಚಿತ್ರಣವನ್ನು ಕೊಟ್ಟಿದ್ದರು. ಹಾಗಾಗಿ ಅಪಾರ ಎನ್ನುವವರು ನಮ್ಮ ಜಿಲ್ಲೆಯವರೇ ಎಂದುಕೊಂಡಿದ್ದೆವು. ಅದಾದ ಮೇಲೆ ಅಲ್ಲಿ ಇಲ್ಲಿ ಕೇಳಲ್ಪಟ್ಟ ಸಂಗತಿಗಳ ಪ್ರಕಾರ ಇವರು ಹಿರಿಯೂರಿನವರು, ಸದ್ಯ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಅದೂ ಅಲ್ಲದೆ ನಮ್ಮ ಬ್ಲಾಗ್ ಆರಂಭವಾದ ಮೇಲೆ ಅವರು ಕೂಡ ಕಮೆಂಟ್ ಮಾಡಿ ನಾನು ನಿಮ್ಮ ಜಿಲ್ಲೆಯವನು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅಪಾರ ಮೊದಲೇ ಹೇಳಿದಂತೆ ಕಥೆ ಬರೆಯುತ್ತಾರೆ. ಕವಿತೆಗಳನ್ನು ಬರೆಯುತ್ತಾರೆ. ಜೊತೆಗೆ ಕಲಾವಿದರೂ ಹೌದು. ಇವರು ಕನ್ನಡದ ಹತ್ತಾರು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಸದ್ಯ ಅವರು ಹೆಚ್ಚು ಸುದ್ದಿಯಲ್ಲಿರುವುದು ಅವರ ಮದ್ಯಸಾರ ನಾಲ್ಕು ಸಾಲುಗಳ ಪದ್ಯಗಳ ಮೂಲಕ. ರತ್ನನ ಪದಗಳನ್ನು ನೆನಪಿಸುವ ಈ ಸಾಲುಗಳು ತುಂಬಾ ಖುಷಿ ಕೊಡುವ ಸಾಲುಗಳು. ಸ್ಯಾಂಪಲ್ಲಿಗೆ ಮೂರು ಮದ್ಯಸಾ(ಲು)ರಗಳನ್ನು ಅವರ ಬ್ಲಾಗಿನಿಂದ ಭಟ್ಟಿ ಇಳಿಸಿದ್ದೇವೆ. ಓದಿ ಆನಂದಿಸಿ....

ಮದ್ಯಸಾರ
1

ಮಧುಪಾತ್ರೆ ಕಣ್ಣಿನಂತೆ ಗೆಳೆಯಾ

ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ

ಕುಡಿತ ಸಾವಿದ್ದಂತೆ ಗೆಳೆಯಾ

ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ.

2

ಎಲ್ಲ ಗೆಳತಿಯರೂ ನೆನಪಾಗುತಿಹರೀಗ

ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು

ತಿಳಿಯುತಿಲ್ಲ ಯಾರ ವಿರಹ ಯಾವ ತರಹ

ಕುಡುಕನದು ಎಂದೂ ಇದೇ ಹಣೆಬರಹ.

3

ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ

ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ

ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ

ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ.

Friday, February 29, 2008

ಲಾವಣಿಗಳಲ್ಲಿ ಚಿತ್ರದುರ್ಗ...

ಚಿತ್ರದುರ್ಗ ಎಂದರೆ ನೆನಪಾಗುವ ಅನೇಕ ಸಂಗತಿಗಳಲ್ಲಿ ಇಲ್ಲಿನ ಜಾನಪದವೂ ಒಂದು. ಸಿರಿಯಜ್ಜಿಯಂಥ ಅಚ್ಚರಿಗಳಿರುವ ಈ ಜಿಲ್ಲೆಯಲ್ಲಿ ನಿಮಗೆ ಅವರು ಹಾಡುವ ಲಾವಣಿಗಳಲ್ಲಿ ನೆಲದ ಸಂಸ್ಕೃತಿ ಮುಖಗಳು ಪರಿಚಯವಾಗುತ್ತವೆ. ಅಂಥವುಗಳಲ್ಲಿ ಲಾವಣಿಯೂ ಒಂದು.

ಲಾವಣಿ ವ್ಯಕ್ತಿಯೊಬ್ಬ ಬದುಕು, ಸಾಧನೆಯನ್ನು ಫ್ಯಾಂಟಸಿ ಮತ್ತು ಫ್ಯಾಕ್ಟ್ ಗಳಿಟ್ಟುಕೊಂಡು ಕಾವ್ಯ ಪ್ರಕಾರ ಎನ್ನಬಹುದು. ಲಾವಣಿ ಕಥನಾತ್ಮಕವಾದುದು. ಲಾವಣಿ ಹಾಡಿನ ರೂಪದಲ್ಲಿರುತ್ತದೆ. ವಸ್ತು, ಶೈಲಿ ಮತ್ತು ಸ್ವರೂಪಗಳಲ್ಲಿ ಲಾವಣಿ ಜನಪದ ಮೂಲಕ್ಕೆ ಸೇರಿದುದು. ಲಾವಣಿ ವಸ್ತು ನಿಷ್ಠವಾದುದು. ಕ್ರಿಯೆ, ಸಂಭಾಷಣೆ ಹಾಗೂ ಘಟನೆಗಳ ಮೂಲಕ ಅಂತ್ಯವನ್ನು ತೀವ್ರಗತಿಯಲ್ಲಿ ತಲುಪುವಂಥದು.

ಚಿತ್ರದುರ್ಗದಲ್ಲಿ ಇಂಥ ಲಾವಣಿಗಳಿಗೇನು ಕೊರತೆಯಿಲ್ಲ. ಸ್ಯಾಂಪಲ್ಲಿಗೆ

ಚಿತ್ರದುರ್ಗದ ಲಾವಣಿಗಳಲ್ಲಿ ಸಾಕಷ್ಟು ದೀರ್ಘವಾಗಿ ಮೂಡಿ ಬಂದಿರುವುದು ನಿಂಗಣ್ಣನ ಕಥೆ. ಇದನ್ನು ಖಂಡಕಾವ್ಯವೆಂದೇ ಕರೆಯಬಹುದು. ಸುಮಾರು ಏಳುನೂರು ತ್ರಿಪದಿಗಳಲ್ಲಿ ಈ ಕಾವ್ಯ ಅನಾವರಣಗೊಂಡಿದೆ. ಚಳ್ಳಕೆರೆ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಲಾವಣಿ ಪ್ರಸಿದ್ಧವಾಗಿದೆ. ನಿಂಗಣ್ಣ ಗೊಲ್ಲರದೇವತೆ, ಬೊಮ್ಮಣ್ಣನೆಂಬುವನು ಅತ್ತಿಗೆಯಾಡಿದ ಮಾತಿಗೆ ಸಿಟ್ಟು ಮಾಡಿಕೊಂಡು ಹೋಗಿ ಹೇಮರೆಡ್ಡಿಗಳ ಪಟ್ಟಣ ಸೇರಿದ. ಅಲ್ಲಿ ಬಾವಿ ನೀರಿಗೆಂದು ಬಂದ ಅತ್ತೆಮನೆ ಸೊಸೆಯರು ಊರ ಹೊರಗೆ ಅವನ್ನು ನೆಡಿ ಕೂಲಿಗೆ ಕರೆದರು. ಇದಕ್ಕೆ ಒಪ್ಪಿ ಬೊಮ್ಮಣ್ಣ ದನಕರುಗಳನ್ನು ಕಾಯಲು ನಿಂತ. ಅಲ್ಲಿ ನಿಂಗಣ್ಣ ದೇವರು ಬೊಮ್ಮಣ್ಣನ ಹತ್ತಿರ ಬಂದು ನಿನ್ನ ಹಿಂದೆ ನಾನೂ ಬರುತ್ತೇನೆ ಎಂದನು. ಅವನನ್ನು ಹೊತ್ತುಕೊಡು ಊರು ಸೇರಬೇಕೆಂದುಕೊಂಡಾಗ ನಿಂಗಣ್ಣ ದಾರಿಯೊಳಗೆ ಬಾವಿ ಪಾಲಾದನು. ಸಿರಿಯಮ್ಮ ಎಂಬುವಳು ನೀರಿಗಾಗಿ ಬಾವಿಗೆ ಬಂದಾಗ ನಿಂಗಣ್ಣ ಕೊಡದಲ್ಲಿ ಸೇರಿಕೊಂಡ. ಹಾಗೆ ಬಂದ ನಿಂಗಣ್ಣನನ್ನು ಸಿರಿಯಣ್ಣ ಎಂಬವನು ತನ್ನ ಊರಿಗೆ ಒಯ್ದು ಕಂಬಳಿ ಗದ್ದಿಗೆ ಹಾಸಿ ಕೂರಿಸಿದನು. ಹೀಗೆ ನಿಂಗಣ್ಣ ದೇವರಾದನು.

ದುರ್ಗದ ಕಡೆಯಿಂದ ಭರಮಣ್ಣನಾಯಕನ ದಂಡು ಗೊಲ್ಲರ ಹಟ್ಟಿಗೆ ಬಂದಿತು. ನಿಂಗಣ್ಣ ಗೊಲ್ಲರ ಹಿರಿಯರಿಗೆಲ್ಲ ಕನಸಿನಲ್ಲಿ ಬಂದು ಧೈರ್ಯ ಕೊಟ್ಟ. ಕರಿಯಣ್ಣ ಯುದ್ಧಕ್ಕೆ ಹೋದ ದಾರಿಯಲ್ಲಿ ಬೇಡರು, ತುರುಕರು ಇದಿರಾದರು. ಕರಿಯಣ್ಣ ಯುದ್ಧದಲ್ಲಿ ತೀರಿಕೊಂಡ. ಮುಸಲ್ಮಾನರು ನಿಂಗಣ್ಣನನ್ನು ಹೊತ್ತುಕೊಂಡು ದುರ್ಗದ ಕಡೆಗೆ ಹೊರಟರು. ಈಶ್ವರನ ಮಗಳಾದ ಗೌರಸಂದ್ರದ ಮಾರಮ್ಮ ಉರಿಗಣ್ಣು ಬಿಟ್ಟು ಮೇಲುದುರ್ಗಕ್ಕೆ ಬಂದಳು. ಮತ್ತೆ ನಿಂಗಣ್ಣನನ್ನು ಸಕಲ ಮರ್ಯಾದೆಗಳಿಂದ ಹೊತ್ತು ತಂದರು.

ಈ ಕಾವ್ಯದಲ್ಲಿ ಐತಿಹ್ಯಾಂಶಗಳಿಗಿಂತ, ಪೌರಾಣಿಕಾಂಶಗಳೇ ಹೆಚ್ಚಾಗಿದ್ದರೂ, ಐತಿಹಾಸಿಕ ಅಂಶಗಳು ಕೂಡ ಸೂಚ್ಯವಾಗಿವೆ. ಮುಸ್ಲಿಮರು ಗೊಲ್ಲರ ಹಟ್ಟಿಯನ್ನು ಲೂಟಿ ಮಾಡಿದ ಸನ್ನಿವೇಶವಿದೆ. ಚಿತ್ರದುರ್ಗ ಪಟ್ಟಣವನ್ನು ವಶಪಡಿಸಿಕೊಳ್ಳಲು ಹೈದರಾಲಿ ತನ್ನ ಸೈನ್ಯ ಸಮೇತ ಬಂದು ದುರ್ಗದ ಕೋಟೆಯ ಮುಂದೆ ಆರು ತಿಂಗಳು ಬೀಡು ಬಿಟ್ಟನೆಂದೂ ಆಗ ಸಿಪಾಯಿಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಮೇಲೆ ದಾಳಿಮಾಡಿದರೆಂದೂ ಊಹಿಸಲಾಗಿದೆ. ಚಿತ್ರದುರ್ಗದ ಪಾಳೆಯಗಾರ ಭರಮಣ್ಣನಾಯಕ ಮುಸ್ಲಿಮರ ದೊರೆಯೆಂದು ಕಾವ್ಯದಲ್ಲಿ ಹೇಳಿದೆ. ದುರ್ಗದ ಕಡೆಯಿಂದ ಬಂದ ಮುಸ್ಲಿಮರನ್ನು ಭರಮಣ್ಣನ ಕಡೆಯವರೇ ಎಂದು ತಿಳಿದಿದ್ದರಿಂದ ಹೀಗೆ ಲಾವಣಿಕಾರ ಭಾವಿಸಿರಬಹುದು

ರಣಸಾಗರ ಗೌಡ:

ಸುಮಾರು ತೊಂಬತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮದಲ್ಲಿ ನಡೆದ ಘಟನೆ ಜನಪದ ಗೀತರೂಪ ಪಡೆದಿದೆ. ಅದನ್ನು ಕೋಲುಪದದ ಧಾಟಿಯಲ್ಲಿ ಜನ ಹಾಡುತ್ತಾರೆ. ಪಾಪನಾಯಕನೆಂಬುವನು ಕೋನಸಾಗರದ ಪಟೇಲನಾಗಿದ್ದ. ಯಾರ ಮನೆಯಲ್ಲಿ ಲಗ್ನವಾದರೂ ಗೌಡನ ಮನೆಗೆ ಎಡೆಕೊಟ್ಟು ಮುಂದಿನ ಕಾರ್ಯ ನೆರವೇರಿಸಬೇಕಿತ್ತು. ಒಮ್ಮೆ ಊರಿನ ಇತರ ಪಂಗಡದವರು ಎಡೆಕೊಡದೆ ಲಗ್ನದ ದಿಬ್ಬಣವನ್ನು ಬೀದಿಯಲ್ಲಿ ತೆಗೆದುಕೊಂಡು ಬರುತ್ತಿದ್ದರು. ಪಟೇಲ ದಿಬ್ಬಣದ ಮುಂದೆ ಬಂದು ಅಗಸರಿಂದ ಪಂಜು ಕಿತ್ತುಕೊಂಡು ನೆಲಕ್ಕೆ ಹಾಕಿ ಮೆಟ್ಟಿನಿಂದ ಉಜ್ಜಿಬಿಟ್ಟ. ಈ ಅವಮಾನ ಸಹಿಸಲಾರದೆ ದಿಬ್ಬಣದ ಹಿರಿಯರು ಪಟೇಲನನ್ನು ಕೋರ್ಟಿಗೆ ಎಳೆದರು. ಚಿತ್ರದುರ್ಗದ ಕೋರ್ಟಿನಲ್ಲಿ ಮೊಕದ್ದಮೆ ಗೆದ್ದ ಪಾಪನಾಯಕ ಕೊರಳಿಗೆ ಹಾರ ಹಾಕಿಸಿಕೊಂಡು ಊರಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡ. ಅವನ ದಬ್ಬಾಳಿಕೆಯನ್ನು ಸಹಿಸಲಾರದ ಕೆಲವರು ಅವನನ್ನು ಕೊಲ್ಲಲು ಸಂಚು ಹೂಡಿದರು.
ಒಂದು ದಿನ ಗೌಡ ಕೋನಸಾಗರಕ್ಕೆ ಬರುತ್ತಿದ್ದಾಗ ಆಳೊಬ್ಬ ಬಂದು ಆತನನ್ನು ನಾಟಕದ ಮನೆಗೆ ಬರುವಂತೆ ಕರೆದ. ನಾಯಕನ ಹೆಂಡತಿ ಹಾಗೂ ಮಕ್ಕಳು ಹೋಗಬೇಡವೆಂದು, ಉಂಡು ಮಲಗು ಎಂದು ಬೇಡಿಕೊಂಡರು. ಆದರೆ ಪಾಪನಾಯಕ ಅವರ ಮಾತನ್ನು ಲೆಕ್ಕಿಸಲಿಲ್ಲ. ನಾಟಕ ಶಾಲೆಯಲ್ಲಿ ಯಾರೂ ಇರಲಿಲ್ಲ. ಕತ್ತಲೆಯೊಳಗೆ ಆವಿತಿದ್ದವನೊಬ್ಬ ನಾಯಕನ ಮೇಲೆ ಕತ್ತಿ ಬೀಸಿದ. ನಾಯಕ ಕೈ ಒಡ್ಡಿದಾಗ ಕೈಬೆರಳು ಕತ್ತರಿಸಿಕೊಂಡು ಹೋಯಿತು. ಗೌಡ ಸರ್ಪದಂತೆ ಬುಸುಗುಟ್ಟಿದ. ಸಂಚು ಹೂಡಿದವರಿಗೆ ಹಾವನ್ನು ಅರ್ಧಕೆಣಕಿ ಬಿಟ್ಟಂತೆ ಭಯವಾಯಿತು. ಮತ್ತೆ ಸೇರಿ ಉಪಾಯ ಮಾಡಿದರು. ಆಸ್ಪತ್ರೆಯ ವೈದ್ಯರ ಹೆಂಡತಿಗೆ ಆಸೆ ತೋರಿಸಿದರು. ಪರಿಣಾಮವಾಗಿ ಪಾಪನಾಯಕನ ಕೈಯ ಗಾಯಕ್ಕೆ ಹಚ್ಚುತ್ತಿದ್ದ ಮುಲಾಮಿಗೆ ವಿಷ ಸೇರಿಸಲಾಯಿತು. ವಿಷ ದೇಹಕ್ಕೆಲ್ಲಾ ವ್ಯಾಪಿಸಿತು. ಗೌಡನನ್ನು ಚಿತ್ರದುರ್ಗಕ್ಕೆ ಕರೆತಂದರು. ಆದರೂ ಗುಣಮುಖವಾಗದೆ ಗೌಡ ತೀರಿಕೊಂಡ. ಗೀತೆಯಲ್ಲಿ ಬರುವಂತೆ ನಾಯಕನ ಕೊಲೆಗೆ, ಮದುವೆ ದಿಬ್ಬಣದ ಪಂಜು ತುಳಿದದ್ದೊಂದೇ ಕಾರಣವಲ್ಲವೆಂದೂ, ಇನ್ನೂ ಬೇರೆ ಬೇರೆ ಕಾರಣಗಳಿದ್ದುವೆಂದೂ ಊರಿನವರು ಹೇಳುತ್ತಾರೆ.

ಮತ್ತಿ ತಿಮ್ಮಣ್ಣ: ಚಿತ್ರದುರ್ಗ ಸಂಸ್ಥಾನದ ನಾಯಕರಲ್ಲಿ ಮೊದಲನೆಯವನಾದ ಮತ್ತಿ ತಿಮ್ಮಣ್ಮ ನಾಯಕನನ್ನು ಕುರಿತ ಅನೇಕ ಲಾವಣಿಗಳಿವೆ. ತಿಮ್ಮಣ್ಣ ಕಲ್ಬುರ್ಗಿಯ ಮೇಲೆ ಏರಿ ಹೋಗಿ ಅಲ್ಲಿಯ ನವಾಬನನ್ನು ಗೆದ್ದು ವಿಜಯನಗರದ ಪತಾಕೆಯನ್ನು ಅಲ್ಲಿಯ ಕೋಟೆಯ ಮೇಲೆ ಹಾರಿಸಿದನೆಂದು ಹೇಳಲಾದ ಸಂದರ್ಭವನ್ನು ಜನಪದ ಕವಿಗಳು ಹಾಡಿನಲ್ಲಿ ಸೆರೆಹಿಡಿದಿದ್ದಾರೆ. ‘ಗಾದ್ರಿಮಲೆ ಹೆಬ್ಬುಲಿ’ ಹಾಡನ್ನು ಇಲ್ಲಿ ಹೆಸರಿಸಬಹುದು.

‘ಕಲ್ಬುರ್ಗಿ ಕೋಟೆಯ ಹತ್ತಿ

ಮೆದಕೇರಿ ಕಿತ್ತಾನು ಫೀರಂಗಿ ಕತ್ತಿ

ಸುತ್ತಾಲು ಹತ್ತಾವು ಬತ್ತಿ

ಮೆದಕೇರಿ ಕಿತ್ತೀದ ವಿಜಯಾದ ಕತ್ತಿ.’

ಮುಂತಾದವುಗಳಲ್ಲಿ ಮದಕರಿನಾಯಕ ಎಂದು ಮಾತ್ರ ಬರುತ್ತದೆ. ವಿಜಯನಗರದ ಅರಸರು ತಿಮ್ಮಣ್ಣನಾಯಕನಿಗೆ ನೀಡಿದರೆನ್ನಲಾದ ‘ಹಗಲು ಕಗ್ಗೊಲೆಯ ಮಾನ್ಯ’ ಎಂಬ ಬಿರುದಿನ ವಿಷಯ ಈ ನಾಯಕನನ್ನು ಕುರಿತ ‘ವಂಶಾವಳಿ’ಯಲ್ಲಿ ಉಲ್ಲೇಖಗೊಂಡಿದೆಯೇ ಹೊರತು ಶಾಸನಗಳಲ್ಲಿ ಕಂಡುಬರುವುದಿಲ್ಲ. ಕ್ರಿ.ಶ.1653ರಲ್ಲಿ ‘ಯಿಂದಡಿ ಮದಕರಿ ನಾಯಕನು’ ನೀಡಿರುವ ಹಾಗೂ ಕ್ಯಾಸಾಪುರದಲ್ಲಿ ದೊರೆತ ತಾಮ್ರ ಪಟದಲ್ಲಿ ಈ ಬಿರುದು ಮೊತ್ತ ಮೊದಲ ಬಾರಿಗೆ ಉಲ್ಲೇಖಗೊಂಡಿರುವಂತೆ ಕಾಣುತ್ತದೆ. ಆದ್ದರಿಂದ ತಿಮ್ಮಣ್ಣನಾಯಕನನ್ನು ಕುರಿತ ಗೀತೆಗಳು “ಅವನಿಗೇ ನೇರವಾಗಿ ಸಂಬಂಧಿಸಿದುವೆಂದು ತಿಳಿಯುವಲ್ಲಿ ಪುನರಾಲೋಚಿಸುವುದು ಸೂಕ್ತ” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.


ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಗೀತೆಗಳು ಪ್ರಚಲಿತದಲ್ಲಿವೆ. ಚಿತ್ರದುರ್ಗದ ಮದಕರಿನಾಯಕನ ಬಗ್ಗೆ ದೀರ್ಘಕಾವ್ಯಗಳೇ ಇರುವುದರಿಂದ ಅವುಗಳನ್ನು ವಿಶೇಷವಾಗಿ ಪರಿಶೀಲಿಸಬೇಕಾಗಿದೆ. ಇತರ ಗೀತೆಗಳಲ್ಲಿ ಜನಪದ ಗೀತೆಗಳಿಂದ ಹಿಡಿದು ಲಾವಣಿಗಳವರೆಗೆ ಅನೇಕ ತರಹದ ಸಾಹಿತ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಲಭಿಸುತ್ತದೆ. “ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಚಾರದಲ್ಲಿರುವಷ್ಟು ಚಾರಿತ್ರಿಕ ಗೀತೆಗಳು ಬೇರೆ ಯಾವ ಜಿಲ್ಲೆಯಲ್ಲೂ ಕಂಡುಬರುತ್ತಿಲ್ಲ. ಚಿತ್ರದುರ್ಗ ಪಾಳೆಯಗಾರರಿಗೆ ಸಂಬಂಧಿಸಿದ ಹಲವು ಗೀತೆಗಳನ್ನು ಆ ಜಿಲ್ಲೆಯ ಕೋಲಾಟಗಾರರು ಇಂದಿಗೂ ಉಳಿಸಿಕೊಂಡು ಬಂದಿರುವುದು ಒಂದು ಭಾಗ್ಯ. ಹಳೆಯ ಮೈಸೂರು ಪ್ರದೇಶದಲ್ಲಿ ಚಾರಿತ್ರಿಕ ಜನಪದ ಗೀತೆಗಳಿಗೆ ಚಿತ್ರದುರ್ಗ ಜಿಲ್ಲೆ ಪ್ರಖ್ಯಾತವಾಗಿದೆ” ಎಂಬ ಮಾತುಗಳಿಂದ ಈ ಜಿಲ್ಲೆಯ ವೀರ ಸಾಹಿತ್ಯದ ಸಮೃದ್ಧಿ ತಿಳಿಯುತ್ತದೆ. ‘ಜನಪದ ಸಾಹಿತ್ಯದಲ್ಲಿ ಚಿತ್ರದುರ್ಗ’ ಎಂಬ ತಮ್ಮ ಲೇಖನದ ಮೂಲಕ ಕೃಷ್ಣಮೂರ್ತಿ ಹನೂರು ಚಿತ್ರದುರ್ಗದ ಐತಿಹಾಸಿಕ ಕಡೆ ಗಮನ ಸೆಳೆದಿದ್ದಾರೆ .
(ಈ ಮಾಹಿತಿಯನ್ನು ಜಯಲಕ್ಷ್ಮಿ ಅವರ ಕನ್ನಡದಲ್ಲಿ ಐತಿಹಾಸಿಕ ಜನಪದ ಕಾವ್ಯಗಳು ಪ್ರಬಂಧದಿಂದ ತೆಗೆದುಕೊಂಡಿದ್ದೇವೆ.)

Wednesday, February 6, 2008

ಮನಮೋಹಕ ಮರಗಾಲು ಕುಣಿತ-ಮಟ್ಟಿ ಪೂಜೆಒಂದೊಂದು ಭೂಪ್ರದೇಶದಲ್ಲಿ ಒಂದೊಂದು ಕಲಾಪ್ರಕಾರ ಜನಪ್ರಿಯವಾಗಿರುತ್ತದೆ. ನಮ್ಮ ಜನಪದೊಂದಿಗೆ ಬೆರೆತ ಈ ಕಲಾ ಪ್ರಕಾರಗಳು ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿವೆ ಅನ್ನು ಮಾತುಗಳಂತು ಕೇಳಿ ಬರುತ್ತಲೇ ಇವೆ. ಹಾಗೆ ನಮ್ಮ ಜಿಲ್ಲೆಯನ್ನ ಪ್ರತಿನಿಧಿಸುವ, ಈಗ ಕಣ್ಮರೆಯಾಗುತ್ತಿದೆ ಎನ್ನುವಂಥ ಒಂದು ಕಲಾ ಪ್ರಕಾರ ಮರಗಾಲು ಕುಣಿತ... ವಿಶಿಷ್ಟ ಕುಣಿತದ ಬಗ್ಗೆ ಸಿ.ಎಲ್. ಏಕನಾಥ್ ಒಂದು ಲೇಖನ ನಮಗೆ ಕಳಿಸಿದ್ದಾರೆ.....
ಶ್ರಾವಣ ಮಾಸದಲ್ಲಿ ಭೂತಾಯಿ ಹಸಿರುಟ್ಟು ಹಸನ್ಮುಖಿಯಾಗಿರುತ್ತಾಳೆ. ಜಿನುಗುಟ್ಟುವ ಜಡಿ ಮಳೆ, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತ. ಮನೆಮನೆಗಳಲ್ಲಿ ಪುರಾಣ. ಕಥೆಗಳ ಪಠಣ ನಡೆಯುತ್ತಿರುತ್ತದೆ. ನೂಲಿನುಣ್ಣಿಮೆಯ ಸಮಯದಲ್ಲಿ ಹೆಂಗಳೆಯರಿಗೆ ತಮ್ಮ ಸಹೋದರರಿಗೆ ರಾಕಿ ಕಟ್ಟುವ ಸಂಭ್ರಮ ಇಂತಹ ಸಂವೃದ್ದಿಯ ಸುಸಂದರ್ಭದಲ್ಲಿ ಚಿತ್ರದುರ್ಗ ನಗರದ ಪ್ರಮುಖ ಗರಡಿಗಳಾದ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿ ಗರಡಿ ಮತ್ತು ಹಗಲು ದಿವಟಿಗೆ ಗರಡಿಗಳಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮರಗಾಲು ಕುಣಿತ ಮತ್ತು ಮಟ್ಟಿ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಮರಗಾಲು ಕುಣಿತದ ಹಿನ್ನಲೆ: ಮರಗಾಲು ಕುಣಿತ ಅನಾದಿಕಾಲದಿಂದಲೂ ಬಂದಂತಹ ಜನಪದ ಕಲೆ. ದೇಶದ ವಿವಿಧ ಭಾಗಗಳಲ್ಲಿ ಈ ಮರಗಾಲು ಕುಣಿತ ಆಯಾಯ ಪ್ರದೇಶಗಳಿಗೆ ತಕ್ಕಂತೆ ವಿಭಿನ್ನವಾಗಿದೆ. ರಾಜರ ಕಾಲದಲ್ಲಿ ಜಟ್ಟಿಗಳಿಗೆ ಪ್ರಮುಖ ಪ್ರಾತಿನಿಧ್ಯವಿತ್ತು. ವಿಶೇಷವಾಗಿ ಯುದ್ದ ಸಮಯದಲ್ಲಿ ಕೋಟೆ ಕೊತ್ತಲಗಳ ಬಳಿ ಹೋದಾಗ ಹಂದರಗಳನ್ನು ದಾಟಿ ಶತ್ರುಕೋಟೆಯನ್ನೇರಲು ಮರಗಾಲುಗಳನ್ನು ಬಳಸುತ್ತಿದ್ದರು. ಹಾಗೆಯೇ ಮರಗಾಲು ಕಟ್ಟಿ ಕುಣಿಯುವುದರಿಂದ ಊರಿಗೆ ಉತ್ತಮ ಮಳೆಬೆಳೆಯಾಗುತ್ತದೆ ಎಂಬ ನಂಬಿಕೆಯು ಉಂಟು. ಹಿಂದೆ ಪೈಲ್ವಾನರು ಮಾತ್ರ ಮರಗಾಲು ಕಟ್ಟುತ್ತಿದ್ದರು. ಆದರೆ ಇಂದು ಪೈಲ್ವಾನರೊಂದಿಗೆ ಯುವಕರು ಈ ಕಲೆಯನ್ನು ಪ್ರೋತ್ಸಾಹಿಸಲು ಮರಗಾಲನ್ನು ಕಟ್ಟುತ್ತಾರೆ.
ಮರಗಾಲು ಕುಣಿತದ ಪ್ರಾರಂಭದ ವಿಧಾನ: ಶ್ರಾವಣ ಮಾಸದಲ್ಲಿ ನಡೆಯುವ ಈ ಮರಗಾಲು ಕುಣಿತಕ್ಕೆ ವಿಶೇಷತೆ ಇದೆ. ಗರಡಿಯ ಚೌಕಾಕೃತಿಯ ಕಣದಲ್ಲಿನ ಕೆಮ್ಮಣ್ಣಿಗೆ ಹತ್ತು ಮೂಟೆ ಜೇಕಿನ ಗಡ್ಡೆ ಹಿಟ್ಟು, ಸುಮಾರು 9 ಕೆ.ಜಿ. ಕಪರ್ೂರ ಮತ್ತು ಕುಂಕುಮ, 21ಕೆ.ಜಿ ಟಿಂಚರ್, 9ಕೆ.ಜಿ ದೇವದಾರು ಎಣ್ಣೆ, 9ಕೆ.ಜಿ. ಶ್ರೀಗಂಧದ ಪುಡಿ, 230 ಗ್ರಾಂ ಸುಗಂಧ ದ್ರವ್ಯ ಪ್ರತಿ ನೂರು ಮೂಟೆ ಮಣ್ಣಿಗೆ 20ಕೆ.ಜಿ ಎಳ್ಳೆಣ್ಣೆ ಮತ್ತು ಬೇವಿನ ಎಣ್ಣೆ ಮಿಶ್ರಣ ಮಾಡಿ ಕಣಕ್ಕೆ ತುಂಬುತ್ತಾರೆ. ಈ ಸಾಮಗ್ರಿಗಳ ಮಣ್ಣು ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ ಮತ್ತು ರೋಗಾಣು ನಾಶಕ ಗುಣವನ್ನು ಹೊಂದಿರುತ್ತದೆ. ಇಂತಹ ಮಣ್ಣನ್ನು ಐದು ಅಡಿಗೆ ಏರಿಸುತ್ತಾರೆ. ಮಟ್ಟಿ ಏರಿಸುವಾಗ ನೀರನ್ನು ಚಿಮುಕಿಸುತ್ತಾ ಮರದ ದಿಮ್ಮೆಯಿಂದ ಬಡಿದು ಗಟ್ಟಿ ಮಾಡುತ್ತಾರೆ. ಉಸ್ತಾದರು(ಪೈಲ್ವಾನರ ಗುರು) ಮಟ್ಟಿಯೊಳಗೆ ಗೌಪ್ಯವಾಗಿ ಒಣ ತೆಂಗಿನಕಾಯಿ ಮುಚ್ಚಿಡುತ್ತಾರೆ. ಮುಂದೆ ಮಟ್ಟಿಯನ್ನು ಇಳಿಸುವಾಗ ಆ ಕಾಯಿಯನ್ನು ಪೈಲ್ವಾನರು ಹುಡುಕಬೇಕು. ಮಟ್ಟಿಯನ್ನು ಏರಿಸಿದ ಮೇಲೆ ಅದರ ಮೇಲೆ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ತಂದ ಬೀಟೆ ಸೊಪ್ಪಿನಿಂದ ಅಲಂಕರಿಸುತ್ತಾರೆ. ಈ ವಿಧಿ-ವಿಧಾನಗಳನ್ನು ಶುಕ್ರವಾರದಂದು ಮಾಡುತ್ತಾರೆ.
ಶನಿವಾರ ಬೆಳಗ್ಗೆ ಗಂಗಾ ಪೂಜೆಯನ್ನು ಮಾಡಿಸಿಕೊಂಡು ಬಂದು ಏರಿಸಿರುವ ಮಟ್ಟಿಗೆ ಪೂಜೆ ಸಲ್ಲಿಸಿ ಮಟ್ಟಿಯ ಮೇಲೆ ಕಳಶ ಸ್ಥಾಪಿಸುತ್ತಾರೆ. ನಂತರ ಮರಗಾಲನ್ನು ಪೂಜೆಗೆ ಇಡುತ್ತಾರೆ. ಮಧ್ಯಾಹ್ನ 2-30ರ ಸಮಯದಲ್ಲಿ ಪಲ್ಲಕ್ಕಿಯನ್ನು ಅಲಂಕರಿಸಿ ಅದರಲ್ಲಿ ಶಕ್ತಿ ಸಂಕೇತಗಳಾದ ಮಾರುತಿ ಮತ್ತು ಆದಿ ಶಕ್ತಿಯ ಪೋಟೋಗಳನ್ನು ಇಡುತ್ತಾರೆ. ಆ ಪಲ್ಲಕ್ಕಿಯ ಮುಂದೆ ಯುವಕರಿಂದ ಹಿರಿಯರವರೆಗೆ ನಾಲ್ಕು ಅಡಿಯಿಂದ ಹನ್ನೆರಡು ಅಡಿಯವರೆಗಿನ ಮರಗಾಲನ್ನು ಕಟ್ಟುತ್ತಾರೆ. ಮರಗಾಲುಗಳನ್ನು ಪಾಲಾವಣ, ಎಸಳಿ ಮುಂತಾದ ಹಗುರವಾಗಿದ್ದು ಗಟ್ಟಿಯಾಗಿರುವ ಮರದಿಂದ ಮಾಡಿರುತ್ತಾರೆ. ಅವು ಐದಾರು ಇಂಚು ಸುತ್ತಳತೆಯನ್ನು ಹೊಂದಿರುತ್ತವೆ. ಪಾದವನ್ನು ಊರಲು ಅನುಕೂಲವಾಗುವಂತೆ ಮೆಟ್ಟಿಲಿನ ಆಕಾರದಲ್ಲಿ 'ಕಂಡು'ಮಾಡಿ ಮರವನ್ನು ನಯಗೊಳಿಸಿರುತ್ತಾರೆ.
ಮರಗಾಲನ್ನು ಕಟ್ಟಿದವರು ವಿಶೇಷವಾದ ವೇಷಭೂಷಣಗಳಿಂದ ಅಲಂಕೃತರಾಗಿರುತ್ತಾರೆ. ಕಚ್ಚೆ ಪಂಚೆ, ಜುಬ್ಬ, ಜುಬ್ಬದ ಮೇಲೆ ವ್ಯಾಸ್ ಕೋಟ್, ತಲೆಗೆ ಮಹಾರಾಜರ ಪೇಟ ಅಥವಾ ರುಮಾಲು ಕೈಯಲ್ಲಿ ಗರಡಿಯ ನಿಶಾನಿಯಾದ ಕಲ್ಕಿ ತುರಾಯಿ ಹಿಡಿದಿರುತ್ತಾರೆ. ವಾದ್ಯಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ 'ರಾಮ್, ರಾಮ್ ಗೋವಿಂದ' ಎಂದು ದೇವರ ನಾಮ ಸ್ಮರಿಸುತ್ತಿರುತ್ತಾರೆ. ಅವರ ಮುಂದೆ ಗರಡಿಯ ಪೈಲ್ವಾನರಲ್ಲಿ ದಷ್ಠಪುಷ್ಠನಾದ ಜಟ್ಟಿಗೆ ಕೆಂಪು ಮಣ್ಣನ್ನು ಬಳಿದಿರುತ್ತಾರೆ. ಅವನು ಕೈ, ಕೊರಳು ಮತ್ತು ರಟ್ಟಿಗಳಿಗೆ ಕುರಿಯ ಉಣ್ಣೆಯಿಂದ ಮಾಡಿದ ದಂಡೆಯನ್ನು ಕಟ್ಟಿರುತ್ತಾನೆ. ಬಾಯಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂದು 40-50 ಕೆ.ಜಿ. ತೂಕದದುಂಡು ಮರದ, ಗದೆಯ ರೂಪದ ದಿಂಡನ್ನು ಹೆಗಲ ಮೇಲೇರಿಸಿ ವಾದ್ಯಗಳ ಮೇಳಕ್ಕೆ ತಕ್ಕಂತೆ ನತರ್ಿಸುತ್ತಾನೆ. ಈ ಮರಗಾಲು ಮೆರವಣಿಗೆಯೂ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ.
ಮಟ್ಟಿ ಪೂಜೆ ಕಾರ್ಯಕ್ರಮ: ಮರಗಾಲು ಮೆರವಣಿಗೆ ಮುಗಿದು ನಂತರ ಬರುವ ಶನಿವಾರ ಗರಡಿ ಮನೆಯಲ್ಲಿ 'ಮಟ್ಟಿಪೂಜೆ'. ಇದನ್ನು 'ಹೂಗಂಧ' ಪೂಜೆಯಂತಲೂ ಕರೆಯುತ್ತಾರೆ. ಅಂದು ಮಟ್ಟಿಯ ಮೇಲೆ ಆದಿಶಕ್ತಿ ಮತ್ತು ಮಾರುತಿಯ ಪೋಟೋ ಇಟ್ಟು ಹೂವಿನಿಂದ ಅಲಂಕರಿಸಿರುತ್ತಾರೆ. ಪೈಲ್ವಾನರು ವ್ಯಾಯಾಮಕ್ಕೆ ಬಳಸುವ ಎಲ್ಲ ಸಾಮಾಗ್ರಿಗಳನ್ನು ಶೃಂಗರಿಸುತ್ತಾರೆ. ಈ ಪೂಜೆಯ ಸಮಯದಲ್ಲಿ ಪೂಜೆ ನೆರವೇರಿಸುವ ಗರಡಿಯವರು ಇತರೆ ಗರಡಿಯ ಕುಸ್ತಿಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಕುಸ್ತಿಯಲ್ಲಿ ಸಂಫರ್ಷ ಸಹಜ ಅಂತಹ ಸಂಘದಿಂದುಂಟಾದ ವೈಷಮ್ಯ ಮರೆತು ಸಹೋದರತೆಯನ್ನು ಸಾರಲು ಇದೊಂದು ಸುಸಂದರ್ಭ. ಈ ಪೂಜಾ ಕಾರ್ಯಕ್ರಮಕ್ಕೆ ನಾಡಿನ ಹಿರಿಯರು ಮತ್ತು ಗಣ್ಯರನ್ನು ಸ್ವಾಗತಿಸಲಾಗುತ್ತದೆ. ಆ ಸಮಾರಂಭದಲ್ಲಿ ಆ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಪೈಲ್ವಾನರಿಗೆ ಬಹುಮಾನ ನೀಡಿ ಸನ್ಮಾನಿಸಲಾಗುವುದು. ಪೈಲ್ವಾನರಿಗೆ ಇದೊಂದು ಶಾಲಾ ವಾಪರ್ಿಕೋತ್ಸವ ಇದ್ದ ಹಾಗೆ.
ಮರುದಿನ ಗರಡಿ ಮನೆಗೆ ಮಹಿಳೆಯರಿಗೆ ಪ್ರವೇಶ. ರೈತರಿಗೆ ಭೂಮಿತಾಯಿ ಹೇಗೋ ಹಾಗೇ ಮಟ್ಟಿ ಪೈಲ್ವಾನರಿಗೆ ಭೂಮಿತಾಯಿ. ಈ ಮಟ್ಟಿ ಪೂಜೆಯ ಸಮಯದಲ್ಲಿ ಮಹಿಳೆಯರಿಗೆ ವರ್ಷಕ್ಕೊಂದು ಬಾರಿ ಮಾತ್ರ ಪ್ರವೇಶ. ಅಂದು ಮಹಿಳೆಯರಿಗೆ ಆರಿಶಿನ ಕುಂಕುಮ ಫಲಪುಷ್ಪ ನೀಡಿ ಸತ್ಕರಿಸುತ್ತಾರೆ. ಮಹಿಳೆಯರು ಗರಡಿ ಮನೆಗೆ ಬಂದು ಹೋದರೆ ಶಾಂತಿ ನೆಮ್ಮದಿಯಿರುತ್ತದೆಂಬ ನಂಬಿಕೆ.
ಮಟ್ಟಿ ಪೂಜೆಯ ನಂತರ ಬರುವ ಶನಿವಾರದಂದು ಮಟ್ಟಿಯೊಡೆಯುವ ದಿನ ಪೈಲ್ವಾನರು ತಮ್ಮ ಮುಷ್ಠಿ, ಮೊಣಕೈ ಮತ್ತು ಭುಜದಿಂದ ಮಟಿಯನ್ನು ಅಗೆದು ಮಟ್ಟಿಯಲ್ಲಿ ಗೌಪ್ಯವಾಗಿಟ್ಟ ಕಾಯಿ ಹುಡುಕುತ್ತಾರೆ. ಯಾವ ಪೈಲ್ವಾನನಿಗೆ ಕಾಯಿ ಸಿಗುತ್ತದೋ ಆ ಪೈಲ್ವಾನನಿಗೆ ಆ ವರ್ಷ ಕುಸ್ತಿಯಲ್ಲಿ ವಿಜಯಮಾಲೆ ಖಂಡಿತ ಎಂಬ ಭಾವನೆಯಿದೆ. ನಂತರ ಪೂಜೆ ಮಾಡಿ, ಮೊಸರನ್ನ ನೈವೇದ್ಯ ಮಾಡುತ್ತಾರೆ. ಚಿತ್ರದುರ್ಗದ ಗರಡಿಯವರು ವಿಶೇಷವಾಗಿ ದೊಡ್ಡ ಗರಡಿ ಯುವಕ ಸಂಘದವರು ಆಗಾಗ ಕಾರ್ಯಕ್ರಮ ನೀಡುತ್ತಿರುತ್ತಾರೆ. ಈ ಕಲೆಯ ರಕ್ಷಣೆ ನಮ್ಮೆಲ್ಲರದಲ್ಲವೇ?

ಏಕನಾಥೇಶ್ವರಿ ಜಾತ್ರಾ ಮಹೋತ್ಸವ ಭಕ್ತಿ ಭಾವದ ಸಂಕೇತ


ತಿಹಾಸಿಕ ಚಿತ್ರದುರ್ಗ ಕೋಟೆಯೂ ತನ್ನಲ್ಲಿ ಧರ್ಮ ಮತ್ತು ಸಂಸ್ಕೃತಿಯ ಖಜಾನೆಯನ್ನು ಅಂತರ್ಗತ ಮಾಡಿಕೊಂಡಿದೆ. ಏಳು ಸುತ್ತಿನ ಕೋಟೆಯಲ್ಲಿ ದೇವಾಲಯಗಳು, ಬುರುಜುಗಳು, ಹೊಂಡಗಳು, ಬತ್ತೇರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ತಮ್ಮ ಐತಿಹ್ಯವನ್ನು ಬಿಚ್ಚಿ ಹೇಳುತ್ತಿವೆ. ಅದರಲ್ಲಿಯೂ ದೇವಾಲಯಗಳು ಧರ್ಮ ಮತ್ತು ಸಂಸ್ಕೃತಿಯ ಪೋಷಣೆ ಮಾಡುವ ಕೇಂದ್ರಗಳಾಗಿ ರಾಜರಿಂದ ಪೋಷಿಸಲ್ಪಡುತ್ತಿದ್ದವು. ಮದಕರಿ ನಾಯಕರ ಆರಾಧ್ಯ ದೇವಿಯಾಗಿ ಇಂದು ಸರ್ವರಿಂದ ಪೊಜಿಸಲ್ಪಡುತ್ತಿರುವ ದೇವಿ ಶ್ರೀ ಏಕನಾಥೇಶ್ವರಿ ಅವುಗಳಲ್ಲಿ ಒಂದು. ಚಿತ್ರದುರ್ಗದ ಮೇಲುದುರ್ಗವು ಒಂದಾನೊಂದು ಕಾಲದಲ್ಲಿ ಕೈಲಾಸ ಪರ್ವತವಾಗಿತ್ತಂತೆ. ಪಾರ್ವತಿ ಪರಮೇಶ್ವರರು ಈ ಸ್ಥಳದಲ್ಲೆ ವಾಸಿಸುತ್ತಿದ್ದರಂತೆ ಎಂಬ ಪ್ರತೀತಿ ಇದೆ. ವಿಫ್ನೇಶ್ವರ ಗಜಾನನಾದುದು ಇಲ್ಲಿಯೇ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆ ಪುಷ್ಠಿ ನೀಡುವ ಸಂಪಿಗೆ ಸಿದ್ದೇಶ್ವರ ಮತ್ತು ಗಣಪತಿಯ ದೇವಸ್ಥಾನಗಳು ಮೇಲುದುರ್ಗದಲ್ಲಿವೆ.
ಈ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷ ವಸಂತ ಮಾಸದ ಆರಂಭದಲ್ಲಿ ನಡೆಯುತ್ತದೆ. ಹಿಂದೂಗಳ ಹೊಸ ವರ್ಷ ಯುಗಾದಿಯ ಚಂದ್ರ ದರ್ಶನವು ಮಂಗಳವಾರ ಬಂದರೆ ಆ ದಿನವೇ ಈ ದೇವಿಯ ಜಾತ್ರೆಯ 'ಸಾರು' ಹಾಕಲಾಗುತ್ತದೆ. (ಸಾರು ಎಂದರೆ ತಿಳಿಸು ಎಂದರ್ಥ) ಒಂದು ವೇಳೆ ಚಂದ್ರ ದರ್ಶನವು ಬೇರೆ ಇನ್ನಾವುದೇ ದಿನದಂದು ಬಂದರೆ ಮಂಗಳವಾರ ಬರುವವರೆಗೆ ಕಾಯಲಾಗುತ್ತದೆ. ಸಾರುವ ಸಮಯದಲ್ಲಿ ದೇವಿಯ ಜಾತ್ರೆಯನ್ನು ನೆರವೇರಿಸುವ ಕೈವಾಡದ ಹನ್ನೆರಡು ಜನಾಂಗಗಳ ಪ್ರಮುಖರಿರುತ್ತಾರೆ. ಈ ಹನ್ನೆರಡು ಜನ ಕೈವಾಡದವರಿಗೆ ಜಾತ್ರೆಯ ಸಮಯದಲ್ಲಿ ನಿರ್ದಿಷ್ಟ ಕರ್ತವ್ಯಗಳಿರುತ್ತವೆ.
ಈ ದೇವಿಯ ಸಾರಿನ ವಿಶೇಷತೆ ಎಂದರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಮಾರು 66 ದೇವತೆಗಳ ಜಾತ್ರಾ ಮಹೋತ್ಸವಗಳು ಈ ದೇವಿಯ ಜಾತ್ರೆಯ ಸಾರಿನಡಿಯಲ್ಲಿಯೇ ನಡೆಯುತ್ತವೆ. ಜಾತ್ರೆಯ ಸಾರು ಹಾಕಿದ ನಂತರ ಎರಡು ದಿನಗಳು ದೇವಸ್ಥಾನದ ಸ್ವಚ್ಚತೆಗೆ ಮೀಸಲು. ಮೂರನೆಯ ದಿನ ರಾತ್ರಿ ಅಂದರೆ ಶುಕ್ರವಾರ ದೇವಿಗೆ ಭಂಡಾರ ಪೂಜೆ ಮಾಡುತ್ತಾರೆ. (ಭಂಡಾರ ಪೂಜೆ ಎಂದರೆ ಆರಿಶಿನ ಕೊಂಬನ್ನು ಬಹಳ ಶ್ರದ್ದೆ ಮತ್ತು ಭಕ್ತಿಗಳಿಂದ ಕುಟ್ಟಿ ದೇವಿಯ ಮುಖಕ್ಕೆ ಲೇಪನ ಮಾಡುತ್ತಾರೆ.) ಜಾತ್ರೆಯಲ್ಲಿ ಭಂಢಾರ ಪೂಜೆಯನ್ನು ಮೂರು ಬಾರಿ ನೆರವೇರಿಸಲಾಗುವುದು. ಮೊದಲ ಭಂಢಾರ ಪೂಜೆಯಲ್ಲಿ ದೇವಿಯೂ ಶಾಂತ ಸ್ವರೂಪಿಣಿಯಾಗಿರುತ್ತಾಳೆಂಬ ನಂಬಿಕೆ. ಈ ಪೂಜೆಯ ವಿಸರ್ಜನೆಯ ನಂತರ ಅದನ್ನು ಕಟ್ಲೆ ಭಂಢಾರವೆಂದು ಸೇವನೆಗೆ ಬಳಸುತ್ತಾರೆ. ಹಾಗೆಯೇ ಬಿತ್ತನೆಯ ಸಮಯದಲ್ಲಿ ಬೆಳೆಯೂ ಹುಲುಸಾಗಿ ಬೆಳೆದು ಅಧಿಕ ಉತ್ಪಾದನೆ ನೀಡಲು ಇದನ್ನು ಬಳಸುತ್ತಾರೆ.
ಮಾರನೆಯ ದಿನ ಶನಿವಾರದಂದು ದೇವಿಗೆ 'ಮದುವಣ ಗಿತ್ತಿ' ಪೂಜೆಯನ್ನು ಮಾಡಲಾಗುವುದು. ಅಂದು ಉದ್ಭವ ಮೂರ್ತಿ ಮತ್ತು ಉತ್ಸವ ಮೂರ್ತಿಗಳೆರಡನ್ನು ಶೃಂಗರಿಸಿ ಕಂಕಣಧಾರಣೆ ಮಾಡುತ್ತಾರೆ. ಅಂದು ದೇವಿಯೂ 'ಸಿಂಹವಾಹಿನಿ'ಯಾಗಿರುತ್ತಾಳೆ. ಮರುದಿನ ಭಾನುವಾರ ರಾತ್ರಿ ದೇವಿಯೂ 'ಸರ್ಪ ವಾಹಿನಿ'ಯಾಗಿಯೂ ಮತ್ತು ಸೋಮವಾರ ರಾತ್ರಿ 'ಮಯೂರವಾಹಿನಿ'ಯಾಗಿರುತ್ತಾಳೆ. ಈ ಮೂರು ದಿನಗಳ ಸೇವೆಯನ್ನು ಚಿತ್ರದುರ್ಗ ನಗರದ ಬುರುಜನ ಹಟ್ಟಿ ಭಕ್ತಾಧಿಗಳು ನೆರವೇರಿಸುತ್ತಾರೆ.
ಪ್ರತಿದಿನ ದೇವಿಗೆ ಬುರುಜನ ಹಟ್ಟಿಯಲ್ಲಿರುವ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಲಾಗುವುದು. ಭಕ್ತಾಧಿಗಳು ದೇವಿಯನ್ನು ಹೊತ್ತ ಸೇವಾಕರ್ತರಿಗೆ ಪಾನಕ-ಫಲಹಾರದ ಏರ್ಪಾಡು ಮಾಡುವರು.
ಮಂಗಳವಾರ ಅಶ್ವವನ್ನೊಳಗೊಂಡ ಉಚ್ಚಾಯವನ್ನು ಕಟ್ಟಲಾಗುವುದು. ಬುಧವಾರ ದೇವಿಯ ಜಾತ್ರೆಯ ಪ್ರಮುಖ ಫಟ್ಟ. ಅಂದು ದೇವಿಗೆ ಮತ್ತೊಮ್ಮೆ ಭಂಢಾರ ಪೂಜೆಯನ್ನು ನೆರವೇರಿಸಲಾಗುವುದು. ಅಂದು ದೇವಿಯೂ ಭಂಢಾರ ಪೂಜೆಯಲ್ಲಿ ರೌದ್ರವತಾರದಲ್ಲಿ ಕಾಣುತ್ತಾಳೆ ಎಂಬ ನಂಬಿಕೆ. ಅರುಣೆ-ಕುಂಭಗಳನ್ನು ಹೂಡಿ ದೇವಿಯನ್ನು ವಿಜೃಂಭಣೆಯಿಂದ ಶೃಂಗಾರಿಸಲಾಗುವುದು. ಎಲ್ಲಿ ನೋಡಿದರಲ್ಲಿ ಸಡಗರವೋ ಸಡಗರ. ಅಂದು ದೇವಿಯೂ ತನ್ನ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಬರುವಳೆಂಬ ವಾಡಿಕೆ. ಗರ್ಭಗುಡಿಯಿಂದ ದೇವಿಯನ್ನು ಅಶ್ವದಿಂದ ಸುಸಜ್ಜಿತವಾದ ಉಚ್ಚಾಯದಲ್ಲಿ ಕುಳ್ಳಿರಿಸಲು ಮಡಿ ಹಾಸಿನ ಮೇಲೆ ಮಂಗಳ ವಾದ್ಯಗಳ ಫೋಷಣೆಯೊಂದಿಗೆ ಕರೆತರಲಾಗುವುದು.
ಅಂದು ಪೋತೆದಾರ ಚಾಟಿಯಿಂದ ತನ್ನ ಮೈಗೆ ಸೆಳೆದುಕೊಳ್ಳತ್ತಾನೆ. 'ಫಟಬಾಯಿ' ಪೂಜೆಯನ್ನು ನೆರವೇರಿಸಲಾಗುವುದು. ಈ ದೇವಿಯೂ ಶಕ್ತಿ ದೇವಿಯಾಗಿರುವುದರಿಂದ ಸುರಪಾನವನ್ನು ಹೋಲುವ ಈ ರೀತಿಯ ಪೂಜೆಯನ್ನು ನೆರವೇರಿಸಲಾಗುವುದು. ಮೇಲುದುರ್ಗದ ದೇವಸ್ಥಾನದಿಂದ ದೇವಿಯೂ ಕೆಳಗಿಳಿದು ಬರುವ ದಾರಿಯಲ್ಲಿ ನೀರನ್ನು ಹಾಕಿ ತಳಿರು ತೋರಣ ಕಟ್ಟಿ ಸ್ವಾಗತಿಸುತ್ತಾರೆ. ದೇವಿಯನ್ನು ಚಂದ್ರಮಾಸ್ತಮ್ಮನ ಹೊಂಡದ ಹತ್ತಿರ ಕರೆದುಕೊಂಡು ಹೋಗಿ ಗಂಗಾ ಪೂಜೆಯನ್ನು ಮಾಡುತ್ತಾರೆ. ದೊಡ್ಡಗರಡಿ, ಕರುವಿನ ಕಟ್ಟೆ, ಸುಣ್ಣಗಾರ ಬೀದಿ ಮತ್ತು ಜೋಗಿಮಟ್ಟಿ ರಸ್ತೆಯಲ್ಲಿರುವ ಭಕ್ತಾಧಿಗಳು ವಿಜೃಂಭಣೆಯಿಂದ ದೇವಿಯನ್ನು ಸ್ವಾಗತಿಸಿ ದೇವಿಯನ್ನು ಹೊತ್ತು ತಂದವರಿಗೆ ಪಾನಕ-ಫಲಹಾರಗಳನ್ನು ನೀಡುತ್ತಾರೆ. ಎಲ್ಲೆಲ್ಲೂ ಲವಲವಿಕೆ, ಉತ್ಸಾಹ. ಪ್ರಮುಖ ಬೀದಿಗಳ ಮೆರಗಣಿಗೆಯ ನಂತರ ದೇವಿಯನ್ನು ಫಿಲ್ಟರ್ ಹೌಸ್ ಎದುರಿನಲ್ಲಿರುವ ಪಾದಗುಡಿಯಲ್ಲಿ ಕುಳ್ಳಿರಿಸಲಾಗುವುದು.
ದೇವಿಯ ಜಾತ್ರೆಯ ಪ್ರಮುಖ ಆಕರ್ಷಣೀಯ ದಿನಗಳೆಂದರೆ ಶುಕ್ರವಾರ ಮತ್ತು ಶನಿವಾರ. ಶುಕ್ರವಾರ ದಿನವನ್ನು ಬೇವು-ಬೇಟೆಯ ದಿನವೆಂದು ಕರೆಯುವರು. ಶನಿವಾರ 'ಸಿಡಿ' ಉತ್ಸವ. ಶಕ್ತಿ ದೇವತೆಗಳಿಗೆ ಭಕ್ತಾಧಿಗಳು ಸಲ್ಲಿಸುವ ಹರಕೆಗಳಲ್ಲಿ ಸಿಡಿ ಆಡುವ ಹರಕೆಯೂ ಒಂದು. ಹರಕೆ ಹೊತ್ತ ಭಕ್ತಾಧಿಗಳು ಅಂದು ಉಪವಾಸವಿದ್ದು, ಎಣ್ಣೆ ನೀರಿನ ಸ್ನಾನ ಮಾಡಿ ದೇಹಕ್ಕೆಲ್ಲ ಗಂಧ ಲೇಪನ ಮಾಡಿಕೊಂಡು ಕಚ್ಚೆ ಪಂಚೆ, ಪೇಟ ಧರಿಸಿ ನಿಂಬೆ ಹಣ್ಣನ್ನು ಸಿಕ್ಕಿಸಿಕೊಂಡ ಕತ್ತಿಯನ್ನಿಡಿದು ಯುದ್ದಕ್ಕೆ ಹೊರಡುವ ಯೋಧರಂತೆ ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳತ್ತಾರೆ. ನೆಲಗಂಬದ ಮೇಲೆ ನಿಲ್ಲಿಸಿದ ಸುಮಾರು 40 ಅಡಿ ಉದ್ದದ ಮರದ ಮುಂಭಾಗಕ್ಕೆ ಸಿಡಿ ಆಡುವವರನ್ನು ಕಟ್ಟಿ ಮೂರು ಸುತ್ತು ಸುತ್ತಿಸಲಾಗುವುದು. ಮೊದಲು ಕೈವಾಡದವರಲ್ಲಿ ಒಬ್ಬರಾದ 'ಮಾತಂಗಿ' ಸಿಡಿ ಆಡುವರು. ನಂತರ ಇತರರು. ಈ ಕಾರ್ಯವನ್ನು ಕೊಂಡಿಕಾರ ನೆರವೇರಿಸುತ್ತಾನೆ. ಹಿಂದೆ ಸಿಡಿ ಆಡುವವರಿಗೆ ಕಬ್ಬಿಣದ ಕೊಕ್ಕೆಯನ್ನು ಬೆನ್ನು ಮೂಳೆಗೆ ಸಿಕ್ಕಿಸಿ ತಿರುಗಿ ಸುತ್ತಿಸುತ್ತಿದ್ದರಂತೆ ಸ್ವಲ್ಪವೂ ರಕ್ತ ಬರುತ್ತಿರಲಿಲ್ಲವಂತೆ.
- ಸಿ.ಎಲ್.ಏಕನಾಥ್.
(ಏಕನಾಥ್ ಚಿತ್ರದುರ್ಗ ಸಮೀಪದ ಐನಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಬೋಧಿಸುತ್ತಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರು.)

Wednesday, January 30, 2008

ಬಂಡಾಯದ ಬಲ್ಲಾಳರು ಇನ್ನಿಲ್ಲ...


'ಕನ್ನಡದ ಕೆಲ್ಸಕ್ಕೆ ಎಲ್ರೂ ಒಂದಾಗ್ತಾರೆ ಅನ್ನೋ ಭರವಸೆ ಇದೆ'

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಕುರಿತು ಹಿರಿಯ ಸಾಹಿತಿಯಾದ ಬಿ.ಎಲ್.ವೇಣು ಅವರು ದುರ್ಗದ ಹುಡುಗರೊಂದಿಗೆ ಹಂಚಿಕೊಂಡ ಮಾತುಗಳು...

ಸಮ್ಮೇಳನ ನಡೆಯುವುದು ಸಂತೋಷದ ಸಂಗತಿ. ಆದರೆ ಜಿಲ್ಲಾ ಸಮ್ಮೇಳನವನ್ನೂ ಮಾಡಲಾಗದಿರುವವರು ಇಷ್ಟು ದೊಡ್ಡ ಸಮ್ಮೇಳನ ಹೇಗೆ ಮಾಡ್ತಾರೆ ಅನ್ನೋದು ನಮ್ಮ ಮುಂದಿನ ಸವಾಲು. ನಮ್ಮಲ್ಲಿ ಸಂಘಟನೆ ಕಡಮೆ. ಜಿಲ್ಲೆಯಲ್ಲಿ ಹೃದಯವಂತರಿದ್ದಾರೆ. ಆದರೆ ಹಣವಂತರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ಎರಡು ದೊಡ್ಡ ಮಠಗಳು ಕೈಜೋಡಿಸಬೇಕು. ಅವರಿಬ್ಬರು ಜೊತೆಯಾಗುವುದರ ಮೇಲೆ ಸಮ್ಮೇಳನದ ಯಶಸ್ಸು ನಿಂತಿದೆ. ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮಗಳಾದ ತರಳಬಾಳು ಹುಣ್ಣಿಮೆ, ಶರಣ ಸಂಸ್ಕೃತಿ ಉತ್ಸವಗಳು ನಡೆಯುತ್ತವೆ. ಆದರೆ ಅಲ್ಲಿ ಸೇರುವ ಜನ ೨೫-೩೦ ಸಾವಿರ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಕ್ಕೂ ಹೆಚ್ಚು ಜನಸೇರ್‍ತಾರೆ. ಅದಕ್ಕೆ ತಕ್ಕ ಸಿದ್ಧತೆಯಾಗಬೇಕು. ಸಮರ್ಥ ಸಂಘಟನೆಯಾಗಬೇಕು. ಇದು ಕನ್ನಡದ ಕೆಲಸವಾದ್ದರಿಂದ ಎಲ್ಲೂ ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಇದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿಯಾದ್ದರಿಂದ ಎಲ್ಲರೂ ಒಂದಾಗುತ್ತಾರೆ ಎಂಬ ವಿಶ್ವಾಸವೂ ಇದೆ.

ಮತ್ತೊಂದು ವಿಷಯ

ಬಿಎಲ್ ವೇಣು ಅವರ ಜನಪ್ರಿಯತೆ ರಾಜ್ಯದೆಲ್ಲೆಡೆ ಹಬ್ಬಿದ. ತಮ್ಮ ಕಾದಂಬರಿಗಳ ಮೂಲಕ ಓದುಗ ವರ್ಗವನ್ನು ಮುಟ್ಟಿದ ಇವರು ಅವುಗಳಲ್ಲಿ ಕೆಲವನ್ನು ಚಲನಚಿತ್ರವಾಗುವ ಮೂಲಕ ಮತ್ತೊಂದು ವರ್ಗವನ್ನು ತಲುಪಿದವರು ವೇಣು.
ವೇಣು ಎಂದರೆ ನೆನಪಾಗುವುದೇ ನೇರ, ನಿಷ್ಠುರ ಮಾತುಗಳು. ನಿಜ ಪ್ರತಿಪಾದನೆಯಲ್ಲದೇ ಮತ್ತಾವುದೋ ಓಲೈಕೆಗೆ ಅವಕಾಶವಾಗುವುದನ್ನು ವೇಣು ಯಾವತ್ತೂ ಇಷ್ಟಪಟ್ಟವರಲ್ಲ. ಕಂಡು ಸಹಿಸಿಕೊಂಡವರೂ ಅಲ್ಲ. ಹಾದಿ ತಪ್ಪಿದ ರಾಜಕಾರಣಿಗಳನ್ನು, ಮಠಾಧೀಶರು ಎಲ್ಲರನ್ನೂ ಟೀಕಿಸಿದವರು. ಇದು ವೇಣು ವ್ಯಕ್ತಿತ್ವದ ಒಂದು ಝಲಕ್ ಅಷ್ಟೇ.
ಅವರ ಕಥೆ, ಕಾದಂಬರಿ, ಬಿಡಿ ಬರಹಗಳಲ್ಲೂ ನಿರ್ದಾಕ್ಷಿಣ್ಯವಾದ, ನೇರವಾದ ಟೀಕೆ ಎದ್ದು ಕಾಣುತ್ತದೆ. ಬಂಡಾಯದ ಸ್ವರೂಪ, ಅಸಹನೆಯೊಂದು ಆಕ್ರೋಶವಾಗಿ ಸಿಡಿಯುವ ಗುಣಗಳು ಅವರ ಬರಹದಲ್ಲಿ ವ್ಯಕ್ತವಾಗಿದೆ.
ಮೂರು ಕಥಾಸಂಕಲನಗಳನ್ನು, ೧೫ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ವೇಣು ಫೆಬ್ರವರಿ ೩ರಂದು ಇನ್ನೂ ಎರಡು ಕೃತಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಒಂದು ೧೫ ಕತೆಗಳಿರುವ ‘ಬಣ್ಣದ ಬೊಂಬಿ’ ಕಥಾಸಂಕಲನ. ಇನ್ನೊಂದು ‘ಚುನಾವಣೆಗೆ ನಿಂತ ಮಠಾಧೀಶರು ಮತ್ತು ಇತರ ಅಣಕಗಳು’ಅಂಕಣ ಬರಹಗಳ ಸಂಗ್ರಹ. ಇದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಅಣಕಗಳ ಅಂಕಣಗಳ ಸಂಕಲನ.
ನೇರ ನಿಷ್ಠುರಿಯಾಗಿರುವ ವೇಣು ಜಿಲ್ಲೆಯ ಸಾಹಿತ್ಯಕ ವಲಯದಲ್ಲಿ ಐಸೋಲೇಟ್ ಆಗಿದ್ದರೂ ತಮ್ಮ ಮತ್ತು ಓದುಗನ ನಡುವಿನ ಸೇತುವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.


Tuesday, January 29, 2008

ಒಂದು ಪ್ರತಿಕ್ರಿಯೆ..

ದು ಬೇಸರದ ಸಂಗತಿ. 2008 ಡಿಸೆಂಬರ್ ಹೊತ್ತಿಗಾದರೂ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆಡಯಬೇಕಿದೆ. ಆದರೆ ಇನ್ನೂ ತಯಾರಿಯ ಮಾತಿಲ್ಲ. ತಯಾರಿ ಮಾತಿರಲಿ, ನಡೆಯುತ್ತದಾ ಎಂಬುದರ ಬಗ್ಗೆ ಸಂಶಯದ ಮಾತುಗಳು ದುರ್ಗದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿರುವುದು ಬೇಸರದ ಸಂಗತಿ. ಚಿತ್ರದುರ್ಗದ ಜನತೆಗೆ ನೆನಪಿರಬಹುದು. ಕೇವಲ ಎರಡು ವರ್ಷಗಳ ಹಿಂದೆ ಚಿತ್ರದುರ್ಗ ಸಿರಿಗೆರೆ ಶ್ರೀಗಳ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆದಿತ್ತು. ಅದ್ಧೂರಿ ಕಾರ್ಯಕ್ರಮ. ನೂರಾರು ಗಣ್ಯರು ದೂರದ ಊರುಗಳಿಂದ ಭಾಗವಹಿಸಿದರು.
ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆದಾಗ ಭೀಮಸಮುದ್ರದ ಮೂವರು 'ರಾಜಕಾರಣಿ ಕಂ ಅಡಿಕೆ ಧಣಿಗಳು' ತಲಾ ಒಂದೊಂದು ಕೋಟಿ ರೂಗಳನ್ನು ಹುಣ್ಣಿಮೆ ಕಾರ್ಯಕ್ರಮಕ್ಕಾಗಿ ಹೊಂದಿಸುವ ಆಶ್ವಾಸನೆಯನ್ನು ಸಿರಿಗೆರೆ ಶ್ರೀಗಳಿಗೆ ನೀಡಿದ್ದರು. ಅಂತೆಯೇ ನಡೆದುಕೊಂಡರು. ಆದರೆ ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವುದು ಖಾತ್ರಿಯಾಗಿ ತಿಂಗಳಾದರೂ ಯಾವ ರಾಜಕಾರಣಿಯೂ, ಹಣ ಹೊಂದಿಸುವುದಿರಲಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಉತ್ಸಾಹ ತೋರುತ್ತಿಲ್ಲ.ಇದು ದೌರ್ಭಾಗ್ಯದ ಸಂಗತಿ. ಮಠದ ಕಾರ್ಯಕ್ರಮಕ್ಕೆ ಹಣ ಹೊಂದಿಸಿದರೆ ಶ್ರೀಗಳ ಆಶೀರ್ವಾದ ಆ ಮೂಲಕ ಜನರ ಮತ ಕಟ್ಟಿಟ್ಟಬುತ್ತಿ. ಸಾಹಿತ್ಯ ಸಮ್ಮೇಳನದಿಂದ ತಮಗೇನೂ ದಕ್ಕುವುದಿಲ್ಲ ಎಂಬ ಅಭಿಪ್ರಾಯ ಅವರದಿರಬಹುದು.
ಸಾಹಿತ್ಯ ಸಮ್ಮೇಳನದಿಂದ ಚಿತ್ರದುರ್ಗ ಪ್ರವಾಸೋದ್ಯಮ ತಾಣವಾಗಿ ಗಮನ ಸೆಳೆಯುತ್ತದೆ. ಪ್ರವಾಸಿಗಳು ಹೆಚ್ಚಾದರೆ ದುರ್ಗದ ಸಣ್ಣ ವ್ಯಾಪಾರಿಗಳಿಗೆ ಆದಾಯ ದೊರಕುತ್ತೆ. ಆದರೆ ಇದಾವುದೂ ಇವರಿಗೇಕೆ ಅರ್ಥವಾಗುತ್ತಿಲ್ಲ.ರಾಜಕಾರಣಿಗಳು ಸಮ್ಮೇಳನಕ್ಕಾಗಿ ತಮ್ಮ ಕಿಸೆಯಿಂದ ರೊಕ್ಕ ನೀಡಬೇಕಿಲ್ಲ. ರಾಜ್ಯ ಸರಕಾರ, ಜಿಲ್ಲಾ ಪಂಚಾಯತ್, ನೌಕರರ ಸಂಘ ಹಾಗೂ ಇತರೆ ಸಂಥ ಸಂಸ್ಥೆಗಳಿಂದ ಹಣ ಹೊಂದಿಸುವ ಕೆಲಸ ಮಾಡಬೇಕಿದೆ. ಹಣಕ್ಕಿಂತ ಮುಖ್ಯವಾಗಿ ಸಮರ್ಥ ನೇತೃತ್ವ ವಹಿಸಿ ಸಮ್ಮೇಳನ ಯಶಸ್ವಿ ಮಾಡಬೇಕಾಗಿದೆ.
ಈಗ ಎಂಎಲ್ಎಗಳೆಲ್ಲ ಮಾಜಿ. ಹಾಲಿ ಇದ್ದಾಗಲೂ ಮಾಡಿದ್ದೆಷ್ಟು ಎನ್ನುವುದು ಚರ್ಚೆ ಮಾಡಬೇಕಾದ್ದೇ. ಅದಿರಲಿ, ಇನ್ನೂ ತಮ್ಮ ಸ್ಥಾನ ಭದ್ರವಾಗಿಟ್ಟುಕೊಂಡಿರುವ ಎಂಪಿ ಹಾಗೂ ಎಂಎಲ್ಸಿಗಳು ಮಾಡುತ್ತಿರುವುದೇನು?-
ಸತ್ಯ, ಬಾಪುದೇವರ ಹಟಿ

Monday, January 28, 2008

ಸದ್ಯ ಚಿತ್ರದುರ್ಗ ನಿರ್ಲಿಪ್ತವಾಗಿದೆ...

ಸಮ್ಮೇಳನದ ಸದ್ದಿಲ್ಲ... ಎಲ್ಲೂ ಮಾತಿಲ್ಲ...
ಳೆದ ೧೫ ದಿನಗಳಲ್ಲಿ ನಮ್ಮ ಕೆಲಸಗಳ ನಡುವೆ ನಾವೊಂದಿಷ್ಟು ಸಂಗತಿಗಳನ್ನು ಚರ್ಚಿಸುತ್ತಾ ಕೂತಿದ್ದೆವು. ಅದರ ಜೊತೆಗೆ ನಿಮ್ಮ ಓದಿಗೆ ಹೊಸ ಹೊಸ ಲೇಖನಗಳನ್ನು ಹೊಂಚುವುದಕ್ಕಾಗಿ ಸ್ನೇಹಿತರು, ಹಿರಿಯರನ್ನು ಭೇಟಿ ಮಾಡಿ ಅವರಿಗೊಂದು ಪ್ರೀತಿ ಪೂರ್ವಕ ವಿನಂತಿಯನ್ನು ಸಲ್ಲಿಸಿದೆವು.ಈ ನಡುವೆ ನಾವು ಗಮನಿಸಿದ ಅಂಶಗಳು ಕೊಂಚ ಮಟ್ಟಿಗೆ ನಿರಾಶೆ ಹುಟ್ಟಿಸಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸಮ್ಮೇಳನದ ಬಗ್ಗೆ ಚಿತ್ರದುರ್ಗದಲ್ಲಿ ಸದ್ಯ ಯಾವುದೇ ಸುದ್ದಿಯಿಲ್ಲ. ಲೇಖಕರು, ಸಾಹಿತಿಗಳು ನೆಮ್ಮದಿಯಿಂದಿದ್ದಾರೆ. ಸಾಹಿತ್ಯಕ ಸಂಘಟನೆಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆಯಾಗಿ ಸಮ್ಮೇಳನಕ್ಕೂ ಚಿತ್ರದುರ್ಗಕ್ಕೂ ಸಂಬಂಧವಿಲ್ಲ ಎನ್ನುವ ಹಾಗೇ ಇದೆ.ಇದು ತೀರಾ ಅಸಹನೆಯ ಮಾತು ಎನಿಸಬಹುದು. ಆದರೆ ಇದು ನಿಜ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯೊಬ್ಬರು ಸಾಹಿತ್ಯ ಸಮ್ಮೇಳನ ಘೋಷಣೆಯಾದ ಕೆಲ ದಿನಗಳಲ್ಲೇ ನೇತ್ಯಾತ್ಮಕವಾಗಿಯೇ ಮಾತನಾಡಿದ್ದರು.ಅಷ್ಟಾದರೂ ಆಯಿತು. ಆಮೇಲೆ ಮತ್ತೇನು ಸುದ್ದಿಯಾಗಲಿಲ್ಲ. ಈ ಮಟ್ಟಿನ ನಿರ್ಲಿಪ್ತತೆ ಯಾಕಿರಬಹುದು? ಚಿತ್ರದುರ್ಗ ನೆಲದ ಗುಣವೂ ಕಾರವೆನ್ನಿಸುತ್ತದೆ. ಇಲ್ಲಿ ಅನಗತ್ಯ ಭಾವೋದ್ವೇಗ ಕಾಣಸಿಗುವುದಿಲ್ಲ. ಉತ್ಸಾಹವಿರುತ್ತದೆ. ಅತಿರೇಕದ ಉತ್ಸಾಹ ಕಾಣಿಸುವುದಿಲ್ಲ. ಇದೇ ಕಾರಣವೇ ಸಮ್ಮೇಳನದ ಬಗ್ಗೆ ಸುಮ್ಮನಿರುವುದಕ್ಕೆ?ಇರಲಿಕ್ಕಿಲ್ಲ. ಇನ್ನೂ ಕೆಲವೊಂದು ಅಂಶಗಳು ಇವೆ. ಈಗ ಅಸ್ತಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ತನ್ನ ಅವಧಿ ಪೂರ್ಣಗೊಳಿಸಿದೆ. ಸದ್ಯ ಅದರದ್ದು ಎಕ್ಸ್ ಟೆಂಡೆಡ್ ಅವಧಿ. ಬಹುಶಃ ಇನ್ನೂ ಮೂರ್‍ನಾಲ್ಕು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಏಪ್ರಿಲ್ -ಮೇ ಹೊತ್ತಿಗೆ ಮುಗಿದು ಕೇಂದ್ರ ಸಮಿತಿ ರಚನೆಯಾಗಬಹುದು. ನಂತರ ಜಿಲ್ಲಾವಾರು ಸಮಿತಿಗಳ ರಚನೆಯಾಗಬೇಕು. ಆ ಹೊತ್ತಿಗಾಗಲೇ ಅರ್ಧವರ್ಷವೇ ಕಳೆದು ಹೋಗಿರುತ್ತದೆ. ನವೆಂಬರ್ ಹೊತ್ತಿಗೆ ಸಮ್ಮೇಳನ ನಡೆಸುವುದು ತೀರಾ ಆತುರದ ಕೆಲಸವಾಗುತ್ತದೆ. ಹಾಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಪತ್ರಕರ್ತರು, ಜಿಲ್ಲೆ ಕೆಲ ಹಿರಿಯರು. ಹೌದು ಎನ್ನಿಸುತ್ತದೆ. ಮತ್ತೆರಡು ಅಂಶ ಜಿಲ್ಲೆಯಲ್ಲಿ ಸದ್ಯದ ಅವಧಿಯಲ್ಲಿ ಆದ ಸಾಹಿತ್ಯ ಚಟುವಟಿಕೆಗಳು ಮತ್ತು ಮುಂದೆ ಆಯ್ಕೆಯಾಗಿ ಬರಲಿರುವ ಅಭ್ಯರ್ಥಿ ನಿಭಾಯಿಸಬಲ್ಲ ಜವಾಬ್ದಾರಿ. ಹಾಲಿ ಅಧ್ಯಕ್ಷ ಕೆ.ಎಂ.ವೀರೇಶ್ ಅವರ ಅವಧಿಯಲ್ಲಿ ಆದ ಸಾಹಿತ್ಯಕ ಕಾರ್‍ಯಕ್ರಮಗಳು ಅತ್ಯಲ್ಪ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ತಾಲೂಕಿನ ಗಡಿ ಭಾಗಗಳಲ್ಲೂ ಕಾರ್‍ಯಕ್ರಮಗಳು ಆಗಿದ್ದವು. ಆದರೆ ವೀರೇಶ್ ಅವರ ಕಾರ್‍ಯಕ್ರಮಗಳೆಲ್ಲಾ ಸಹಯೋಗದಲ್ಲೇ ಮುಗಿದವು ಎಂಬ ಆರೋಪವಿದೆ.ತೀರಾ ಅಚ್ಚರಿ ಉಂಟು ಮಾಡುವ ಸಂಗತಿಯೆಂದರೆ ಇಲ್ಲಿಯವರೆಗೆ ಜಿಲ್ಲಾಮಟ್ಟದ ಸಮಿತಿ ರಚನೆಯಾಗಿಲ್ಲ ಎನ್ನುವುದು!!ಸಾಹಿತ್ಯಕವಾಗಿ ಹೆಚ್ಚೇನು ಆಸ್ಥೆಯಿಂದ ಕ್ರಿಯಾಶೀಲರಾಗದೇ ಇರುವ ವೀರೇಶ್ ಅವರೇ ಮುಂದಿನ ಚುನಾವಣೆಯ ಅಭ್ಯರ್ಥಿ. ಇವರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ಅಭ್ಯರ್ಥಿಗಳ ಸಂಖ್ಯೆ ತೀರಾ ವಿರಳ. ಕಳೆದ ಬಾರಿ ಸೋತ ಪತ್ರಕರ್ತ, ಮಾಜಿ ಅಧ್ಯಕ್ಷ ಶ. ಮಂಜುನಾಥ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.ಮತ್ತೊಂದೆಡೆ ಕವಿ, ವಿಮರ್ಶಕ ಹಾಗೂ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆಯವರಿಗೆ ಮಠಾಧೀಶರು, ಗಣ್ಯರು ಬೆಂಬಲ ವ್ಯಕ್ತಪಡಿಸಿ ಸ್ಪರ್ಧಿಸುವುದಕ್ಕೆ ಹೇಳಿದ್ದರೂ ಎಂಬ ಸಂಗತಿಯೂ ತಿಳಿದು ಬಂದಿದೆ. ಬೆನ್ನ ಹಿಂದೆಯೇ ಸಮ್ಮೇಳನದಂಥ ಜವಾಬ್ದಾರಿ ಎದುರುಗಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಯೇ ಸ್ಪರ್ಧಿಸುವುದು ಸರಿ ಎನ್ನುವ ಕಾರಣ ನೀಡಿ ಅವರ ಸಲಹೆಯನ್ನು ನಮ್ರರಾಗಿಯೇ ತಳ್ಳಿ ಹಾಕಿದ್ದಾರೆಂಬ ವರ್ತಮಾನವೂ ದೊರೆತಿದೆ.ಇವರನ್ನು ಬಿಟ್ಟರೆ, ಆಸಕ್ತಿಯಿಂದ ಮಾಡಬಲ್ಲ, ಮತ್ತೊಬ್ಬ ವ್ಯಕ್ತಿ ಚಳ್ಳಕೆರೆ ಪ್ರಾಧ್ಯಾಪಕರಾಗಿರುವ, ಅಭಿರುಚಿ ಸಾಹಿತ್ಯಕ ವೇದಿಕೆ ನಡೆಸಿಕೊಂಡು ಬರುತ್ತಿರುವ ಬಿ.ಪಿ.ವೀರೇಂದ್ರಕುಮಾರ್. ಇವರ ಹೆಸರು ಅಲ್ಲಲ್ಲೇ ಪ್ರಸ್ತಾಪವಾಗಿದೆಯಾದರೂ ವೀರೇಂದ್ರಕುಮಾರ್ ಅವರ ನಿಲುವು ಎಲ್ಲೂ ಪ್ರಕಟವಾಗಿಲ್ಲ.ಚಿತ್ರದುರ್ಗದಲ್ಲಿ ಸಮ್ಮೇಳನವಾಗುವುದು ಎಷ್ಟು ವಿಶಿಷ್ಟವೋ ಅಷ್ಟೇ, ಸಂಕಷ್ಟ, ಸಂದಿಗ್ದ ಸಂಗತಿಗಳಿವೆ.ದುರ್ಗದಲ್ಲಿ ಉದ್ಯಮಿಗಳಿಲ್ಲ. ಆದರೆ ಅಂಥ ಆರ್ಥಿಕವಾಗಿ ಸಬಲರಾಗಿರುವವರನ್ನು ಮುಂದೆ ನಿಲ್ಲಿಸುವ ನಾಲ್ಕು ಮಠಗಳಿವೆ. ಮುರುಘರಾಜೇಂದ್ರ ಮಠ, ಸಿರಿಗೆರೆ ಮಠ, ಸಾಣೆಹಳ್ಳಿ ಮಠ ಮತ್ತು ಕಬೀರಾನಂದ ಮಠ.ಏನೇ ಭಿನ್ನಾಭಿಪ್ರಾಯವಿದ್ದರೂ ಈ ನಾಲ್ಕು ಮಠಾಧೀಶರನ್ನು ವಿಶ್ವಾಸದೊಂದಿಗೆ ಅವರನ್ನು ಒಳಗೊಂಡಂತೆ ಸಮ್ಮೇಳನದ ರೂಪುರೇಷೆಗಳನ್ನು, ಈ ಕುರಿತ ಚರ್ಚೆಗಳನ್ನು ನಡೆಸುತ್ತಾ ಹೋಗುವ, ಆರ್ಥಿಕವಾಗಿ ಸಮ್ಮೇಳನದ ಅಗತ್ಯತೆಗಳನ್ನು ಪೂರೈಸುವ, ಸಂಘಟನೆಯ ಜವಾಬ್ದಾರಿಯನ್ನು ಹೊರಬಲ್ಲ ಸಮರ್ಥ ವ್ಯಕ್ತಿಯ ಅಗತ್ಯವಿದೆ.ಇದೆಲ್ಲಾ ಹೇಗೆ ಸರಿಹೋಗುತ್ತದೆ? ಎಂಬ ಆತಂಕದ ಪ್ರಶ್ನೆ ನಮ್ಮ ಮುಂದೆ. ಅದನ್ನುನಿಮ್ಮಮುಂದಿಟ್ಟಿದ್ದೇವೆ.
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳಂತೆ..ಮುಂದಿನ ಬೆಳವಣಿಗೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ.

ಚಳ್ಳಕೆರೆ ತಾಲೂಕಲ್ಲಿ ಕೇತೇದೇವರ ಜಾತ್ರೆ...

ಅಪ್ಪಟ ಜಾನಪದ ಶೈಲಿಯ ಜಾತ್ರೆ
ಕೇತೇದೇವರ ಮುಳ್ಳಿನ ಜಾತ್ರೆಯು...ಕೇದಾರಲಿಂಗೇಶ್ವರನೂ....ಕಾರ್ತ್ಯಾಯನಿ ವ್ರತವೂ....
ಹಾಲುಕಲ್ಲಿನಲಿ ದೇಗುಲ ಕಟ್ಟಿ, ಆಕಾಶದೆತ್ತರ ಗೋಪುರ ನಿರ್ಮಿಸಿ, ಭಂಡಾರ ಕರಗಿಸುತ್ತಾ ಭಕ್ತಿ ಪ್ರದರ್ಶಿಸುವ ಆಧುನಿಕ ಕಾಲದಲ್ಲೂ ಪರಿಶಿಷ್ಟ ಜನಾಂಗವೊಂದು ಅಪ್ಪಟ ಜಾನಪದ ಶೈಲಿಯ ಜಾತ್ರೆಯನ್ನು ಎಲ್ಲಾ ಪ್ರಾಚೀನ ಸಂಪ್ರದಾಯಗಳನ್ನೂ ಉಳಿಸಿಕೊಂಡು ಮೂಲ ಸೊಗಸಿನೊಂದಿಗೆ ಆಚರಿಸುವ ಪರಿಪಾಠ ಇಂದಿಗೂ ಚಳ್ಳಕೆರೆ ತಾಲೂಕಲ್ಲಿ ಅಸ್ತಿತ್ವದಲ್ಲಿದೆ.
ಚಳ್ಳಕೆರೆ ತಾಲೂಕಿನ ಪುರ್‍ಲಹಳ್ಲಿ ಗ್ರಾಮಕ್ಕೆ ೧ ಕಿ. ಮೀ. ದೂರವಿರುವ ವಸಲು ದಿಬ್ಬ ಎಂಬ ೭೦ ಎಕರೆ ಬಯಲು ಪ್ರದೇಶದಲ್ಲಿ ನಡೆಯುವ ಗೊಲ್ಲಜನಾಂಗದ ಆರಾಧ್ಯ ದೈವ ಕೇತೇದೇವರ ಜಾತ್ರಗೆ ಸೋಮವಾರ ಸುಮಾರು ೧ ಲಕ್ಷಕ್ಕೂ ಹೆಚ್ಚು ಜನ ಸಾಕ್ಷಿಯಾಗಲಿದ್ದಾರೆ.
ಮೂಲತಃ ತಾಲೂಕಿನ ಚನ್ನಮ್ಮನಾಗ್ತಿಹಳ್ಳಿ ಗ್ರಾಮದ ಕೇತೇದೇವರನ್ನು ಪುರ್‍ಲಹಳ್ಳಿ ಗ್ರಾಮದ ರಿ.ಸ.ನಂ. ೫೬,೫೭ ನೇ ಜಮೀನಿನಲ್ಲಿರುವ ವಸಲು ದಿಬ್ಬ ಎಂಬ ವಿಶಾಲ ಬಯಲು ಪ್ರದೇಶಕ್ಕೆ ತಂದು ವಿಶೇಷವಾದ ಮುಳ್ಳಿನ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುವುದು ಜಾತ್ರೆಯ ವಿಶೇಷ.
ಜನವರಿ ೩ ರಿಂದ ಆರಂಭವಾಗಿ ಫೆ. ೨ ರವರೆಗೆ ಪೂರಾ ೧ ತಿಂಗಳ ಕಾಲ ನಿಯಮ-ನಿಷ್ಟೆಯಿಂದ ನಡೆಯುವ ಈ ಜಾತ್ರಯಲ್ಲಿ ಅಪ್ಪಿ ತಪ್ಪಿ ಕೂಡಾ ಈ ಜನ ಕಟ್ಟಳೆ ಮೀರುವುದಿಲ್ಲ. ೧೩ ಬುಡಕಟ್ಟುಗಳಿಗೆ ಸೇರಿದ ಈ ಗೊಲ್ಲ ಜನಾಂಗ ದೇವರಿಗೆ ಹುರುಳಿಯಿಂದ ಕೈತೊಳೆಸಿ ಪೂಜೆ ಆರಂಭಿಸಿದರೆಂದರೆ ತಿಂಗಳ ನಂತರ ಮತ್ತೆ ದೇವರಿಗೆ ಹುರುಳಿ ನೈವೇದ್ಯ ಮಾಡಿದ ನಂತರವೇ ಹುರುಳಿ ಸೇವನೆ. ಅಲ್ಲಿಯವರೆಗೂ ಸಂಪೂರ್ಣ ನಿಷಿಧ್ಧ.
ಸುಮಾರು ೭೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಸುಮಾರು ೬ ಸಾವಿರ ಹಳ್ಳಿಗಳಲ್ಲಿರುವ ಗೊಲ್ಲ ಜನಾಂಗದ ಭಕ್ತರು ಜಮಾವಣೆಗೊಂಡು ಕುಲ ದೈವ ಕೇತೇದೇವರಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಹರೆಕೆ ತೀರಿಸಿ ಪುನೀತರಾಗಿ ನವಣೆ, ಹುರುಳಿ ತಿಂದು ವ್ರತ ಬಿಡುವುದು ಜಾತ್ರೆಯ ಮುಖ್ಯ ಭಾಗ.
ಟಿ ಬಾರೆಕಳ್ಳೆಯ ಗುಡಿಯೇ ಇಲ್ಲಿ ಆಲಯ: ಗೊಲ್ಲ ಜನಾಂಗದ ೧೩ ಗುಡಿಕಟ್ಟಿನಲ್ಲಿ ಕೋಣನ ಗೌಡರು, ಬೊಮ್ಮನ ಗೌಡರು ಅಣ್ಣ ತಮ್ಮಂದಿರು ಸೇರಿಕೊಂಡು ೧ ತಿಂಗಳು ಮೊದಲೇ ಜಾತ್ರಗೆ ಸಿದ್ಧತೆ ಆರಂಭಿಸುತ್ತಾರೆ. ಹತ್ತಿ ಮರದ ಕಟ್ಟಿಗೆ ತಂದು ನೆಲಕ್ಕೆ ತಾಗಿಸದಂತೆ ಗುಡಿನಿರ್ಮಿಸುವ ವಸಲು ದಿಬ್ಬಕ್ಕೆ ತರುತ್ತಾರೆ. ಮೂಲ ದೇವಸ್ಥಾನದ ಸುತ್ತ ಕಳ್ಳೆ ಕಟ್ಟುವುದು, ಬಾರೆ ಕಳ್ಳೆ, ತುಗ್ಗಲಿ ಕಟ್ಟಿಗೆ ಕಡಿದು ವಸಲು ದಿಬ್ಬಕ್ಕೆ ತರುವುದು, ನಂತರ ಬಾರೆ ಮತ್ತು ತುಗ್ಗಲಿ ಕಟ್ಟಿಗೆಯಿಂದ ಗುಡಿ ಕಟ್ಟಿ ಕಳಶ ಪ್ರತಿಷ್ಟಾಪನೆ ಮಾಡುವುದು, ಬಂಜಗೆರೆ ಗ್ರಾಮದಿಂದ ವೀರಣ್ಣ ದೇವರನ್ನು, ಬತವಿನ ದೇವರನ್ನು (ವ್ರತದ ದೇವರು) ತರುವುದು, ಆಂಧ್ರದ ಐಗಾರ್‍ಲಹಳ್ಳಿ ಗ್ರಾಮದಿಂದ ತಾಳಿ ದೇವರು (ಎಲ್ಲಾ ಪೆಟ್ಟಿಗೆ ದೇವರು) ತಂದು, ಗುಡಿ ತುಂಬಿಸುವುದು.
ಸುಮಾರು ೨೦ ಅಡಿ ಎತ್ತರಕ್ಕೆ ಮದ್ಯದಲ್ಲಿ ಒಂದು ಕಂಬ ನೆಟ್ಟು ಸುಮಾರು ೧೫ಅಡಿ ಸತ್ತಳತೆಯಲ್ಲಿ ಸುತ್ತ ತುಗ್ಗಲಿ ಕಟ್ಟಿಗೆ ಆಧಾರವಾಗಿ ಕಟ್ಟಿ ಅದರ ಮೇಲೆ ಬಾರೆ ಮುಳ್ಳಿನ ಕಳ್ಳೆ ಹೊದಿಸುತ್ತಾರೆ. ನಂತರ ೧೩ ಬುಡಕಟ್ಟಿನ ಗೌಡರು ೫ ಕಳಶಗಳನ್ನು ೨೦ ಅಡಿ ಎತ್ತರದಲ್ಲಿ ಪ್ರತಿಷ್ಟಾಪಿಸುತ್ತಾರೆ. ಜಾತ್ರಯ ದಿನ ೧೩ ಬುಡಕಟ್ಟಿನ ಪೂಜಾರರು ನೇಮಿಸಿದ ೫ ಈರಗಾರರನ್ನು ಕಳಶ ಕೀಳಲು ಕಳಿಸುತ್ತಾರೆ. ಬರಿ ಮೈಯಲ್ಲಿ, ಬರಿಗಾಲಲ್ಲಿ ಇಳಿಜಾರಾದ ಗುಡಿಯನ್ನು ರಭಸವಾಗಿ ಹತ್ತುವುದೇ ರೋಚಕ. ೫ ಜನರಲ್ಲಿ ಯಾರಾದರು ಕಳಸ ಕೀಳಲು ಅಸಮರ್ಥರಾದರೆ ಅವರಲ್ಲೇ ಯಾರಾದರು ಕಿತ್ತು ತರಬಹುದು. ಬೇರೆ ಯಾರೂ ಗುಡಿ ಹತ್ತುವಂತಿಲ್ಲ. ಇದು ಜಾತ್ರೆಯ ಅಂತಿಮ ಹಂತ.
ಕಳಶ ಕೀಳುವುದಕ್ಕೆ ಮೊದಲು ಗಲಾಟೆಗಳಾಗುತ್ತಿದ್ದವು. ಯಾರು ಕೀಳಬೇಕೆಂಬ ವಿಚಾರದಲ್ಲಿ ಸಮಸ್ಯೆ ತಲೆದೋರಿ ವಿಚಾರ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿತ್ತು, ಗುಡಿಕಟ್ಟಿನ ಮಖಂಡರ ತೀರ್ಮಾನಕ್ಕೇ ಕೋರ್ಟ್ ಒಪ್ಪಿಸಿದ ನಂತರ ಜಾತ್ರೆ ಸಾಂಗವಾಗಿ ನಡೆಯುತ್ತಿದೆ ಎನ್ನುತ್ತಾರೆ ಜನಾಂಗದ ಮುಖಂಡರು..
ಟಿ ಏನಿದು ಕೇತೇದೇವರು: ಚನ್ನಮ್ಮನಾಗ್ತಿಹಳ್ಳಿ ಕೇತೇದೇವರ ಪೂಜಾರಿ ಚಂದ್ರಣ್ಣ ಅವರ ಪ್ರಕಾರ ಕೇತೇದೇವರೆಂಬುದು ಕೇದಾರೇಶ್ವರನಾಗಿದ್ದು ಬುಡಕಟ್ಟು ಜನರ ಬಾಯಲ್ಲಿ ಕೇತೇದೇವರಾಗಿದ್ದಾನೆ. ಬಂಜಗೆರೆ ಈರಣ್ಣ ದೇವರು ಸಹ ಈಶ್ವರನೇ. ಕಳಸ ಕೀಳುವುದಕ್ಕೆ ಎರಡು ದಿನ ಮೊದಲು ಐದು ಪೆಟ್ಟಿಗೆ ದೇವರುಗಳನ್ನು ಸೆರೆಯಲ್ಲಿಡುತ್ತೇವೆ. (ಮರೆಮಾಚಿ ಇಡುವುದು.) ನಂತರ ಎಲ್ಲಾ ಪಂಚ ಪೀಠದ ದೇವರುಗಳನ್ನು ಪೂಜೆಗೆ ಸಜ್ಜುಗೊಳಿಸುತ್ತೇವೆ. ಪಂಚಪೀಠದ ದೇವರೆಂದರೆ ಕೇದಾರೇಶ್ವರ, ಬಾಳೆಹೊನ್ನೂರು, ಉಜ್ಜಿನಿ, ಶ್ರೀಶೈಲ, ಕಾಶಿ ಪೀಠದ ದೇವರುಗಳು. ಬತದ ದೇವರು ಎಂದರೆ ವ್ರತದ ದೇವರು. ಈ ಜಾತ್ರೆಯ ಒಟ್ಟು ಆರಾಧನೆ “ಕಾರ್ತ್ಯಾಯನಿ ವ್ರತ" ಎಂಬುದು ಚಂದ್ರಣ್ಣನವರ ವಿಶ್ಲೇಷಣೆ.
ಒಂದು ತಿಂಗಳ ಕಾಲ ಈ ಜನಾಂಗ ಬೇರೆ ಕುಲಸ್ಥರ ಮನೆಗೆ ಹೋಗುವುದಿಲ್ಲ. ಬೇರೆಯವರನ್ನು ತಮ್ಮ ಮನೆಗೆ ಬಿಟ್ಟುಕೊಳ್ಳುವುದಿಲ್ಲ. ಹೊರಗಡೆ ಏನನ್ನೂ ತಿನ್ನುವುದಿಲ್ಲ. ಕಠೋರ ವ್ರತದಾರಿಗಳಿವರು. ಎಲ್ಲಾ ವಿಚಾರಗಳಲ್ಲೂ ರಾಜಿ ಮಾಡಿಕೊಂಡು ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರುವ ಇಂದಿನ ದಿನ ಮಾನದಲ್ಲಿ ಈ ಬುಡಕಟ್ಟು ಜನಾಂಗ ಇಂದಿಗೂ ಕಟ್ಟುನಿಟ್ಟಿನ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಮಾತ್ರ ಅನುಕರಣೀಯ.

Sunday, January 27, 2008

ಮಲ್ಲರನ್ನು ಕಟ್ಟಿ ಬೆಳೆಸಿದ ದುರ್ಗದ ಗರಡಿಗಳು...

ಮುಂದುವರೆದ ಭಾಗ...
ರಾಯರಹಟ್ಟಿ ಗರಡಿ
ಕೆಳಗೋಟೆಯೆಂದು ಸ್ಥೂಲವಾಗಿ ಕರೆಯುವಲ್ಲಿ ಇರುವ ಒಂದೆರಡು ಭಾಗಗಳಲ್ಲಿ ‘ಚೆನ್ನಕೇಶವಪುರ’ ಅಥವಾ ‘ಸಿ.ಕೆ.ಪುರ’ ಎಂದು ಈಗ ಕರೆಯುವ ಭಾಗವನ್ನು ಹಿಂದೆ ‘ಚೆನ್ನಯ್ಯನ ಹಟ್ಟಿ’ ಎಂದು ಕರೆಯುತ್ತಿದ್ದರು. ಚೆನ್ನಕೇಶವಸ್ವಾಮಿ ದೇವಾಲಯದ ಭಾಗವನ್ನು ‘ರಾಯರಹಟ್ಟಿ’ ಎಂದೇ ಕರೆಯುತ್ತಿದ್ದರು. ಈ ರಾಯರಹಟ್ಟಿಯ ಗರಡಿಯನ್ನು ಚೆನ್ನಕೇಶವಸ್ವಾಮಿ ದೇವಾಲಯದಲ್ಲಿ ಮಾಡಿಕೊಂಡಿದ್ದಂತೆ, ಕೆಳಗೋಟೆ ನಿಂಗಪ್ಪನವರು ಉಸ್ತಾದಿಯ ತರಹ ನಿಂತು ಈ ಗರಡಿಯನ್ನು ಮುನ್ನಡೆಸಿದಂತೆ ಕಾಣುತ್ತದೆ. ದೊಡ್ಡ ಗರಡಿಯ ಪೈಲ್ವಾನ್ ನಂಜನವರು ಜೊತೆ ಕುಸ್ತಿ ಮಾಡಿದ ನಾಗಪುರದ ದಿವಾನ ಮತ್ತು ಅಣ್ಣಪ್ಪ ಎಂಬುವವರು ಇಲ್ಲಿನ ಪೈಲ್ವಾನರ ಕರೆಯ ಮೇರೆಗೆ ನಿಂತು ಈ ಚೆನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿದ್ದ ಗರಡಿ ಹಾಗೂ ದೊಡ್ಡ ಗರಡಿಯ ಪೈಲ್ವಾನರುಗಳಿಗೆ ನಾಗಪುರದ ಪೈಲ್ವಾನರ ಕೆಲಸಗಳನ್ನು ಕಲಿಸಿಕೊಟ್ಟರಂತೆ. ಆದರೆ ಇಂಥ ಕೆಲಸಗಳು ಪೈಲ್ವಾನರಗಳ ಗುಟ್ಟು. ಇದು ಉಸ್ತಾದ್ಥ ಪೈಲ್ವಾನರ ಸಂಬಂಧದಿಂದ ಹುಷಾರಾಗಿ ಕಲಿಯುವಂಥದ್ದು, ಆದ್ದರಿಂದ ಕೆಲಸ ಕಲಿಸಿದ್ದನ್ನು ದೊಡ್ಡ ಗರಡಿಯ ಗಣೇಶರಾವ್ ಮುಜಮ್‌ದಾರ್ ಅಲ್ಲಗಳೆಯುತ್ತಾರೆ. ಆದರೆ ಆ ಗರಡಿಯ ಲಕ್ಷಣವೇ ಈಗ ಕಾಣುತ್ತಿಲ್ಲ. ಅಂದರೆ ಈ ದೇವಾಲಯದ ಆವರಣದಲ್ಲಿ ಗರಡಿಯಾಗಲಿ, ಪೈಲ್ವಾನರುಗಳಾಗಲಿ ಈಗ ಕಂಡುಬರುವುದಿಲ್ಲ.
ಆಂಜನೇಯಸ್ವಾಮಿ ಗರಡಿ
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗಕ್ಕೆ ಭೂತನಗುಡಿ ಎಂದು ಜನಸಾಮಾನ್ಯರ ಬಾಯಲ್ಲಿ ಪ್ರಚಲಿತವಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈಗ ಗರಡಿಯಿದ್ದಿತು. ಪ್ರೆ.ಕೆ.ಬಿ.ಪಾಲಯ್ಯನವರು ಹಾಗೂ ದೇವಸ್ಥಾನದ ಆರ್ಚಕ ಪೆನ್ನಪ್ಪ ಹೇಳುವ ಪ್ರಕಾರ ೧೯೨೦ರ ನಂತರದ ದಿನಗಳಲ್ಲಿ ಈ ಗರಡಿ ಕೊಟ್ಟ ಕೆಲವು ಪೈಲ್ವಾನರುಗಳ ದೆಸೆಯಿಂದ ಅದು ಸಾಕಷ್ಟು ಹೆಸರು ಮಾಡಿತ್ತು. ಕೆ.ಬಿ.ಪಾಲಯ್ಯನವರ ಸೋದರಮಾವನವರಾದ ನೆಡ್ಡಿ ಪಾಲಜ್ಜನವರು ಉಸ್ತಾದಿಯಲ್ಲಿ ಜಿಲ್ಲೆಯಾದ್ಯಂತ ಕುಸ್ತಿ ಮಾಡಿದ್ದ ಅನೇಕ ಪೈಲ್ವಾನರನ್ನು ಸೃಷ್ಟಿಸಿದ್ದ ಈ ಗರಡಿ ಈಗ ಯಾವ ಕುರುಹನ್ನೂ ಉಳಿಸದೆ ಕಣ್ಮರೆಯಾಗಿದೆ. ಕುತೂಹಲಕ್ಕಾಗಿ ‘ಈ ಗರಡಿಯಲ್ಲಿ ಯಾರೂ ಪೈಲ್ವಾನರು ಉಳಿಯಲಿಲ್ಲವೆ’ ಎಂದು ಕೇಳಿದ್ದಕ್ಕೆ ಪೂಜಾರ ಪೆನ್ನಪ್ಪ ಹೇಳುವುದು:‘ ಬೆಳಗ್ಗೆ ಅಚ್ಚೇರು ಹಾಲು, ಸಂಜೆ ಅಚ್ಚೇರು ಹಾಲು ಕುಡಿದು, ಉಂಡು ಚೆನ್ನಾಗಿ ತಯಾರಿ ಮಾಡಿಕೊಳ್ಳುತ್ತಿದ್ದೆವು ಆ ಕಾಲದಲ್ಲಿ. ಈಗೇನಿದೆ? ಬಡತನ. ಅದಕ್ಕಾಗಿ ಜನ ಕಡಮೆಯಾದರು’. ಇದು ಗರಡಿಯ ಅಳಿವು-ಉಳಿವಿನ ಕ್ರೂರ ಸತ್ಯವೇ ಆಗಿದೆ.
ಹೊರಪೇಟಿ ಅಂಜುಮನ್ ಗರಡಿ
ಕೇವಲ ಕೆಲವೇ ವರ್ಷಗಳ ಹಿಂದೆ ಹೊರಪೇಟೆಯ ಸುಂದರವಾದ ಮಸೀದಿಯ ಪಕ್ಕ ಈ ಅಂಜುಮನ್ ಗರಡಿಯಿತ್ತೆಂದು ಹೇಳುತ್ತಾರೆ. ‘ಸೈದಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪೈಲ್ವಾನ್ ಸೈಯದ್ ಖಾದರ್ ಹೇಳುವ ಪ್ರಕಾರ ಅವರ ತಂದೆ, ಅಜ್ಜ, ಎಲ್ಲಾ ಈ ಗರಡಿಯಲ್ಲಿ ಸಾಮು ತೆಗೆದವರು. ಆದರೆ ಅದು ವಿವಾದಗ್ರಸ್ಥವಾಗಿತ್ತೆಂಬುದಕ್ಕೆ ಈಗ ಸಾಕ್ಷಿಯೂ ಉಳಿದಿಲ್ಲ. ಗರಡಿಯೂ ಇಲ್ಲ.
(ಇನ್ನೂ ಇದೆ....)

Monday, January 21, 2008

ಮಲ್ಲರನ್ನು ಕಟ್ಟಿ ಬೆಳೆಸಿದ ದುರ್ಗದ ಗರಡಿಗಳು...

ಟಿ.ಆರ್.ರಾಧಾಕೃಷ್ಣ ಚಿತ್ರದುರ್ಗದ ಪ್ರಮುಖ ಕಥೆಗಾರರು. ಆದರೆ ಅತ್ಯಂತ ಕುತೂಹಲಹದಿಂದ ಕಾಡಿದ ಸಂಗತಿ ಕುಸ್ತಿ. ಮಧ್ಯಕರ್ನಾಟಕದ ಪ್ರಮುಖ ಕುಸ್ತಿ ಕೇಂದ್ರವಾದ ಚಿತ್ರದುರ್ಗದಲ್ಲಿ ಕುಸ್ತಿಪಟು, ಅವರನ್ನು ಪಳಗಿಸಿದ ಗರಡಿ ಮನೆಗಳ ಬಗ್ಗೆ ರಾಧಾಕೃಷ್ಣವರು ಲೇಖನಗಳು ಬರೆದಿದ್ದಾರೆ. ಚಿತ್ರದುರ್ಗದ ಪ್ರಖ್ಯಾತ ಕುಸ್ತಿ ಪಟು ಪೈಲ್ವಾನ್ ನಂಜಪ್ಪನನ್ನು ಕುರಿತು ಕೃತಿಯನ್ನು ಪ್ರಕಟಿಸಿದ್ದಾರೆ. ಚಿತ್ರದುರ್ಗದ ಗರಡಿ ಮನೆಗಳ ಕುರಿತು ಅವರು ಬರೆದಿರುವ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.


ಚಿತ್ರದುರ್ಗದ ಗರಡಿಗಳು:ಒಂದು ಸಾಂಸ್ಕೃತಿಕ ಇಣುಕುನೋಟ
ಮನುಷ್ಯನ ದೇಹ ಬಲಯುತವಾಗಿರುವುದು, ಜಟ್ಟಿಯಾಗಿರುವುದೇ ಒಂದ ಕಾಲದಲ್ಲಿ ಮುಖ್ಯವಾಗಿತ್ತು. ಪಾಳೆಯಗಾರರು ಆಳಿದ ಚಿತ್ರದುರ್ಗದ ಜನಜೀವನದಲ್ಲಿ ಗರಡಿಗಳ ಮಹತ್ವವನ್ನು ಕಡೆಗಣಿಸುವಂತಿಲ್ಲ. ಜಗತ್ತಿನಾದ್ಯಂತ ಇತಿಹಾಸದಲ್ಲಿ, ಪೌರಾಣಿಕ ಕಥಾಲೋಕಗಳಲ್ಲಿ ಅನೇಕ ವೀರರು ಜಟ್ಟಿಗಳಾಗಿ, ಮಲ್ಲಯುದ್ಧದಲ್ಲಿ ತಮ್ಮ ಪ್ರಾವೀಣ್ಯತೆ ಮೆರೆದ ಸಂಗತಿಗಳನ್ನು ನಾವು ತಿಳಿದಿದ್ದೇವೆ. ‘ಭರ್ಜಿಯನ್ನು ಚುಚ್ಚಿದರೆ ಭರ್ಜಿಯೇ ಬಾಗುತ್ತದೆ’ ಎನ್ನುವಂಥ ದೇಹದಾರ್ಢ್ಯ ಹೊಂದಿದ್ದ ಮಲ್ಲರು ರಾಜನ ಬೆಂಗಾವಲಿನವರಾಗಿರುತ್ತಿದ್ದರು. ಅವರು ಅದಕ್ಕಾಗಿ ಸಂಪಾದಿಸಿದ ಕೀರ್ತಿ ಗೌರವಗಳನ್ನು ನೋಡಿದರೆ ಮತ್ಸರ ಹುಟ್ಟುತ್ತದೆ. ಅನಾರೋಗ್ಯದಿಂದ ಪಾರಾದ ಸುಂದರ ಹಾಗೂ ಗುಟ್ಟಿಮುಟ್ಟಾದ ದೇಹವುಳ್ಳ ವೀರರನ್ನು ತಯಾರು ಮಾಡಿ ಕಳುಹಿಸುತ್ತಿದ್ದ ಗರಡಿಗಳ ಬಗ್ಗೆ ಸಮಾಜದಲ್ಲಿ ಗೌರವ-ಆದರ ಸ್ಥಾನಮಾನಗಳು ಇದ್ದುದು ಸಹಜ ಎನಿಸುತ್ತದೆ.
ಪಾಳೆಗಾರರ ಕಾಲದ ಅನೇಕ ಜಟ್ಟಿಗಳು ಕುಸ್ತಿಯಲ್ಲಿ ಪರಿಣತರಾಗಿದ್ದವಂತೆ, ವೈದ್ಯಕೀಯದಲ್ಲೂ ಪರಿಣತಿ ಹೊಂದಿದ್ದರಂತೆ. ತುಂಡಾಗಿದ್ದ ಕೈ, ಕಾಲುಗಳನ್ನು ತಕ್ಷಣ ಕೂಡಿಸುವ, ವಾಸಿ ಮಾಡುವ ಕ್ರಮಗಳು, ಔಷಧಗಳು ಅವರಿಗೆ ಗೊತ್ತಿದ್ದವು. ಅವರು ಕಲಾವಿದರೂ ಆಗಿದ್ದಂತೆ ಕಾಣುತ್ತದೆ. ಆನೆಗೊಂದಿಯಿಂದ ವೆಂಕಟಗಿರಿ ಜಟ್ಟಿ ಎಂಬುವವನು ಬಂದು ಭರಮಣ್ಣನಾಯಕನಿಗೆ ಮತ್ತು ಮುಂದಿನ ಪಾಳೆಯರಾಗಿರರಿಗೆ ವಿಜಯನಗರದ ಅರಸರ ರೀತಿಯಲ್ಲಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದನಂತೆ. ಇಲ್ಲಿನ ಹಗಲು ದೀವಟಿಗೆ ಗರಡಿಯ ಗೊಂಡೆಯ ಸಂಕೇತ, ದೊಡ್ಡ ಗರಡಿಯ ಕಲಿ ಸಂಕೇತ, ಸಣ್ಣಗರಡಿಯ ತುರಾ ಸಂಕೇತಗಳನ್ನು ಭರಮಣ್ಣನಾಯಕನ ಕಿರೀಟದಲ್ಲಿ ಅಳವಡಿಸಿಲಾಗಿತ್ತಂತೆ. ಅಂದರೆ ಭರಮಣ್ಣ ನಾಯಕನು ಮೂರೂ ಗರಡಿಗಳ ಒಡೆಯ ಎಂಬುದನ್ನು ಸಾರುವಂತೆ ಆ ಕಿರೀಟ ಇತ್ತಂತೆ. ಇಲ್ಲಿನ ಕೊನೆಯ ಪಾಳೆಯಗಾರನಾದ ಮದಕರಿನಾಯಕ ಜಾನಕಲ್ಲಿನಿಂದ ಬರುವಾಗ ರಮಣರಾಮಜಟ್ಟಿ ಎನ್ನುವನನ್ನು ತನ್ನ ಜೊತೆಗೆ ಚಿತ್ರದುರ್ಗಕ್ಕೆ ಕರೆತಂದನಂತೆ. ಹೇಮಾಜಟ್ಟಿ ಎಂಬಾತನ ವಜ್ರಋಷಿ, ಕತ್ತಿವರಸೆಗಳಲ್ಲಿ ಪ್ರವೀಣನಾಗಿದ್ದನಂತೆ. ಈತ ಎರಡು ಕೈಗಳಲ್ಲಿ ಕತ್ತಿ ತಿರುಗಿಸುತ್ತ, ಇಪ್ಪತ್ತು ಜನ ನಿಂಬೆ ಹಣ್ಣುಗಳನ್ನು ಆತನ ಮೇಲೆ ಎಸೆದರೂ ಅವು ತುಂಡಾಗಿ ಬೀಳುವಂಥ ಕೌಶಲವ್ಯವನ್ನು ಸಂಪಾದಿಸಿ, ಅಂದಿನ ಜಿಲ್ಲಾಧಿಕಾರಿಗಳ ಮುಂದೆ ಪ್ರದರ್ಶಿಸಿ ಇನಾಂ ಪಡೆದಿದ್ದನಂತೆ. ಇಂಥ ಚಮತ್ಕಾರವನ್ನು ಈಗ ನಾವು ಆಕಸ್ಮಾತ್ ನೋಡಬೇಕೆಂದರೆ ಪ್ರಖ್ಯಾತ ಐಂದ್ರಜಾಲಿಕ ಪಿ.ಸಿ.ಸರ್ಕಾರ್ ನೆನಪಾಗುತ್ತಾನೆಯೇ ಹೊರತು ಜಟ್ಟಿಗಳಲ್ಲ! ಆದರೆ ಇತಿಹಾಸದಲ್ಲಿ ಜನ ಜೀವನದಲ್ಲಿ, ಗರಡಿಮಲ್ಲರ ಜೀವನದಲ್ಲಿ ಇಂಥ ರಂಜನೆಯೂ ಸಹಜ ವಿಷಯವಾಗಿದ್ದವು. ಹಿಂದಿನ ಕಾಲದಲ್ಲಿ ಹೀಗೆ ಪ್ರಖ್ಯಾತರಾಗಿದ್ದ ಜಟ್ಟಿಗಳು ಬರುಬರುತ್ತ ಈಗ ಕಾಣದಂತಾಗಿದ್ದಾರೆ.
ಇಂಥವರ ಕಾಲದಲ್ಲಿ ಚಿತ್ರದುರ್ಗದಲ್ಲಿ ನಿರ್ಮಾಣವಾದ ಗರಡಿಗಳು ಇಂದು ಕಣ್ಮರೆಯಾಗುತ್ತಿವೆ. ಇದ್ದ ಹಾಗೂ ಸದ್ಯ ಉಳಿದಿರುವ ಚಿತ್ರದುರ್ಗದ ಗರಡಿಗಳ ಮೇಲೆ ಒಂದು ನೋಟ..
ಪೆರೆನಾಕನ ಮಗ ಗೋಪೆನಾಕ ಆಯಗಳ ಗರಡಿ:
ಚಿತ್ರದುರ್ಗದ ಕೋಟೆ ಕೊತ್ತಲಗಳ ಪ್ರದೇಶದಲ್ಲಿ ಗಣೇಶನ ಗುಡಿಯ ಪಕ್ಕದಲ್ಲಿರುವ ಕಲ್ಲಿನ ಮನೆಯೊಂದನ್ನು ತೋರಿಸಿ ಅದನ್ನು ಗರಡಿ ಎನ್ನುತ್ತಾರೆ. ರಹಸ್ಯವಾಗಿ ಜಟ್ಟಿಗಳು ಪಟ್ಟು, ವರಸೆಗಳನ್ನು ಕಲಿಸಲು, ಸಣ್ಣ ಬಾಗಿಲು ಗರಡಿಗೆ ಇರುತ್ತಿತ್ತು ಎನ್ನುವ ಕಾರಣದಿಂದ ನೋಡಿದರೆ, ಇದು ಗರಡಿಯಂತೆ ಕಾಣುತ್ತದೆ. ಆದರೆ ಇದು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಿದ ಕಣಜ ಎಂದು ಇತಿಹಾಸ ಸಂಶೋಧಕರ ಪ್ರೆ.ಬಿ. ರಾಜಶೇಖರಪ್ಪ ಹೇಳುತ್ತಾರೆ. ಅವರು ಮುಂದುವರಿದು ಏಕನಾಥೇಶ್ವರಿ ದೇವಾಲಯದ ಹಿಂಭಾಗಕ್ಕೆ, ವಾಯುವ್ಯ ದಿಕ್ಕಿನಲ್ಲಿರುವ ಗವಿಯೊಂದು ಗರಡಿಯಾಗಿದ್ದುದನ್ನೂ ಅದರ ಶಿಲಾಲೇಖವನ್ನೂ ಕುರಿತು ಹೇಳುತ್ತಾರೆ. ಈ ಗರಡಿಯನ್ನು ಈಗ ಕೆಲವರು ಕರೆಯುವುದು ‘ಪೀಕನಾಯಕನ ಗರಡಿ’ ಎಂದು. ಆದರೆ ಶಿಲಾಲೇಖದಲ್ಲಿ ಉಲ್ಲೇಖಿತವಾಗಿರುವಂತೆ ಇದು ‘ಪೆರೆನಾಕನ ಮಗ ಗೋಪೆನಾಕ ಆಯ(ಅಯ್ಯಗಳ)ಗರಡಿ’. ಇದು ವಿಜಯನಗರ ಸಾಮ್ರಾಜ್ಯದ ಮಧ್ಯಕಾಲದ ಅಂದರೆ ಕ್ರಿ.ಶ. ೧೫ನೇ ಶತಮಾನದ ಪೂರ್ವಾರ್ಧದಲ್ಲಿ ಆದದ್ದಿರಬಹುದೆಂದು ಅವರು ತಿಳಿಸುತ್ತಾರೆ. ಅವರ ಪ್ರಕಾರ ಈಗ ‘ಅರಮನೆಯ ಬಯಲು’ ಎಂದು ಗುರುತಿಸುವ ಪ್ರದೇಶದಲ್ಲಿಯೂ ಕೆಲವು ಗರಡಿಗಳಿದ್ದಿರಬಹುದು. ಈ ಗರಡಿಗಳಲ್ಲಿ ಅಂಗ ಸಾಧನೆ ನಡೆಯುತ್ತಿತ್ತು. ಇಲ್ಲಿ ಜಟ್ಟಿಗಳು ತಯಾರಾಗುತ್ತಿದ್ದರು ಎಂದು ಊಹಿಸಬಹುದೇ ಹೊರತು ಹೆಚ್ಚಿನ ಸಂಗತಿ ತಿಳಿಯುವುದಿಲ್ಲ.
ದೊಡ್ಡ ಗರಡಿ:
ಇದು ಕರುವಿನ ಕಟ್ಟೆಯಲ್ಲಿರುವ ಪಾದದೇವರ ಹಳೆಯ ತಿಪ್ಪಿನಗಟ್ಟಮ್ಮನ ಗುಡಿಯಿಂದ ಕೊಂಚ ಮೇಲಕ್ಕೆ ಹೋದರೆ ಸಿಕ್ಕುತ್ತದೆ. ದೊಡ್ಡ ಗರಡಿಯ ಇರವನ್ನು ದೂರಕ್ಕೇ ಸಾರುವಂತೆ ದೊಡ್ಡ ಅರಳಿಯ ಮರವೊಂದು ಗರಡಿಯ ಪ್ರಾಕಾರದಲ್ಲಿ ಬೆಳೆದು ನಿಂತಿದೆ. ಇದು ಸಾಕಷ್ಟು ಪ್ರಾಚೀನ ಪ್ರಖ್ಯಾತ ಗರಡಿಯಾದರೂ ಎಷ್ಟು ಪ್ರಾಚೀನ ಎಂಬುದು ತಿಳಿದು ಬಂದಿಲ್ಲ. ಸಾಮಾಜಿಕವಾಗಿ ಪ್ರತಿಷ್ಠೆಯ ಸ್ಥಾನ ಪಡೆದುಕೊಂಡಿರುವ ಚಿತ್ರದುರ್ಗಕ್ಕೆ, ಹಾಗೇ ನಾಡಿಗೇ ಲಾಡರ ನಂಜಪ್ಪನಂಥ ಒಬ್ಬ ಪೈಲ್ವಾನನನ್ನು ಕೊಟ್ಟ ಕೀರ್ತಿ ಇರುವ ಈ ದೊಡ್ಡ ಗರಡಿಯು ಇತಿಹಾಸಕ್ಕೆ ಸೇರಿಸಬೇಕಾದಷ್ಟು ರಸವತ್ತಾದ ಶೌರ್‍ಯ, ಧೈರ್ಯದ ಕಥೆಗಳನ್ನು ಹೇರಳವಾಗಿ ಹೊಂದಿದೆ.
ಸಣ್ಣ ಗರಡಿ:
ಇದು ಕೂಡಿಲಿ ಶೃಂಗೇರಿ ಮಠಕ್ಕೆ ಸಮೀಪದಲ್ಲಿ ಇದೆ. ಸುಮಾರು ಅರವತ್ತೈದು ಎಪ್ಪತ್ತು ವರ್ಷಗಳ ಹಿಂದೆ ಅಂದರೆ ೧೯೨೬ರಲ್ಲಿ ಸ್ಥಾಪನೆಯಾಗಿದೆ ಎನ್ನಲಾಗಿದೆ. ಆದರೆ ಇದು ಸ್ಥಾಪನೆಯಲ್ಲಿ ಜೀರ್ಣೋದ್ಧಾರ. ಕುರಿ ತಿಮ್ಮಜ್ಜ. ಉಪ್ಪಾರ ಮಲ್ಲಜ್ಜ, ತಿಪ್ಪೇರುದ್ರಪ್ಪ, ಸಾಬ್ಜಾನ್ ಸಾಬ್, ಖಾಸೀಮ್ ಸಾಬ್ ಮೊದಲಾದವರು ಇದರ ಸ್ಥಾಪನೆ ಅಥವಾ ಪುನರುತ್ಧಾನಕ್ಕೆ ಮುಂದಾಗಿ ದುಡಿದರೆಂದು ಹೇಳುತ್ತಾರೆ. ಚಿತ್ರದುರ್ಗದ ಕಾಶಿ ಮನೆತನದ ಶೆಟ್ಟರು ಕೊಟ್ಟ ಶ್ರೀಕೃಷ್ಣ ವಿಗ್ರಹದ ಬಗ್ಗೆ ಈ ಗರಡಿಯ ಜನಕ್ಕೆ ಎಲ್ಲಿಲ್ಲದ ಅಭಿಮಾನ.
ಬುರುಜಿನ ಹಟ್ಟಿಯ ಗರಡಿ:
ಬುರುಜಿನ ಹಟ್ಟಿಯಲ್ಲಿ ಮುಖ್ಯ ಸರ್ಕಲ್ಲಿನಿಂದ ದಕ್ಷಿಣಕ್ಕೆ ಕೊಂಚ ದೂರ ಹೋದರೆ ಇನ್ನೊಂದು ಸರ್ಕಲ್ ಬಳಿ ಈ ಗರಡಿ ಇದೆ. ಹಿರಿಯ ಉಸ್ತಾದ್ ಗಿಡಿದಿಮ್ಮಪ್ಪನವರ ಕೈಕೆಳಗೆ ಅನೇಕ ಕುಸ್ತಿಪಟುಗಳನ್ನು ತಯಾರಿಸಿದ ಈ ಗರಡಿಯೂ ಪುರಾತನ ಗರಡಿಗಳಲ್ಲೊಂದು.
ಹಗಲು ದೀವಟಿಗೆ ಗರಡಿ:
ಹಗಲು ದೀವಟಿಗೆ ಗರಡಿಯು ಬುರುಜಿನ ಹಟ್ಟಿಯ ಶ್ರೀರಾಘವೇಂದ್ರ ಮಠದಿಂದ ಆಚೆಗೆ ೨೦-೩೦ ಹೆಜ್ಜೆಗಳ ದೂರದಲ್ಲಿದೆ. ಈ ಗರಡಿಯು ಕೆಲ ಕಾಲದ ಹಿಂದೆ ಕುಸಿದಿತ್ತು. ಈಚೆಗೆ ಅಸ್‌ಬೆಸ್ಟಾಸ್ ಹೊದಿಕೆಯಿಂದ ನವೀಕರಣಗೊಂಡಿದೆ. ಈ ಗರಡಿಯ ಮೂಲವು ಸರಿಯಾಗಿ ತಿಳಿದು ಬಂದಿಲ್ಲ. ‘ಹಗಲು ದೀವಟಿಗೆ ಗರಡಿ’ ಎಂದು ಯಾಕೆ ಕರೆಯುತ್ತಾರೆ ಎಂದರೆ ಒಬ್ಬರು ತಿಳಿಸುವಂತೆ ಈ ಗರಡಿಯು ಹಗಲಿನಲ್ಲಿ ಮಾತ್ರ ತರೆಯುತ್ತಿದ್ದಿರಬೇಕು. ಅದಕ್ಕೆ, ಹಾಗೆಯೇ ಹಗಲಿನಲ್ಲಿ ದೀವಟಿಗೆ ಹಿಡಿದು ಮೆರವಣಿಗೆ ಹೋಗುವ ವಿಶೇಷ ಹಕ್ಕು ಮತ್ತು ಮಾನ್ಯತೆ ಇದಕ್ಕಿತ್ತು. ಅದು ಇದರ ಹೆಚ್ಚಳ ಎನ್ನುವವರೂ ಇದ್ದಾರೆ. ನೂರಾ ಹತ್ತನೆ ವಯಸ್ಸಿನಲ್ಲಿ ತೀರಿಕೊಂಡ ಖಾಸಿಂಸಾಬರು ಉಸ್ತಾದರಾಗಿ ಅನೇಕ ಪೈಲ್ವಾನರನ್ನು ಕೊಟ್ಟ ಕೀರ್ತಿ ಈ ಗರಡಿಯದು. ಪೈಲ್ವಾನ್ ಸಂಗಪ್ಪ, ಚಮ್ಮಿ ಬೋರಯ್ಯ, ಅಬ್ದುಲ್ ಖಾದರ್ ಮೊದಲಾದವರು ಇಲ್ಲಿನ ಹೆಸರಿಸಬೇಕಾದ ಪೈಲ್ವಾನರು.
(ಇನ್ನೂ ಇದೆ...)

Sunday, January 20, 2008

ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !ಹೊಳಲ್ಕೆರೆ ತೂಗ್ತಲೆ ಗಣೇಶ" ನ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆಯೇ, ಚಿತ್ರದುರ್ಗದ ಕಾಮಗೇತಿ ವಂಶದ ಪಾಳೆಯಗಾರರು ನಮ್ಮ ಮನಸ್ಸಿನಲ್ಲಿ ಹೊರಹೊಮ್ಮುತ್ತಾರೆ. ಅವರು ಹೊಳಲ್ಕೆರೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ ದಿನಗಳಲ್ಲಿ ಇದನ್ನು ಕಟ್ಟಿಸಿ ಕೃತಾರ್ಥರಾಗಿರಬಹುದು. ಎಲ್ಲಾ ಪಾಳೆಯಗಾರರೂ ದೈವಭಕ್ತರಾಗಿದ್ದರು. ಪ್ರಜೆಗಳ ಹಿತಾಸಕ್ತಿಯಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲಾ ಗಂಡುಗಲಿಗಳು. ಆ ಸಂತತಿಯಲ್ಲಿ ಬಂದ ಹಲವಾರು ಮದಕರಿನಾಯಕರುಗಳ ಹೆಸರುಗಳು ಇದನ್ನು ಖಚಿತಪಡಿಸುತ್ತವೆ.
ಮೇಲಿನ ಚಿತ್ರ , ನಮ್ಮ ಮನೆಯ ಫೋಟೊ ಆಲ್ಬಮ್ ನಿಂದ ಪ್ರಸ್ತುತ ಪಡಿಸಿದ್ದು. ಆಗಿನ ದಿನಗಳಲ್ಲಿ ಗಣೇಶ ಬಟ್ಟ ಬಯಲಿನಲ್ಲಿ ಸರ್ವರಿಗೂ ದರ್ಶನಕೊಟ್ಟು ನಮ್ಮ ಮನೋಕಾಮನೆಗಳನ್ನು ಈಡೇರಿಸುವ ದೇವನಾಗಿದ್ದ. ಈಗಲೂ ಮತ್ತು ಮುಂದಿನ ಅನಂತಾನಂತ ವರ್ಷಗಳಲ್ಲೂ ಅವನ ಕೃಪಾದೃಷ್ಟಿ ನಮ್ಮೆಲ್ಲರ ಮೇಲೆ ಇರುವುದರಲ್ಲಿ ಸಂಶಯವಿಲ್ಲ. ಗಣೇಶನಿಗೆ ಉದ್ದವಾದ ಜಡೆಯಿದೆ. ಅದಕ್ಕೆ ಭಕ್ತಾದಿಗಳು ಬೆಣ್ಣೆಹಚ್ಚಿ, ಪ್ರಸಾದವನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ. ಡಾ. ಬಾತ್ರ ರವರ ಭಾರಿಬಿಲ್ಲು ತೆತ್ತು ಬುದ್ಧಿಕಲಿತವರಿಗೆ, ಗಣೇಶನ ಸನ್ನಿಧಿ ಮನಸ್ಸಿಗೆ ಮುದನೀಡುತ್ತದೆ. ನಂಬಿಕೆ, ಭಕ್ತಿ, ಶ್ರದ್ಧೆ ಎಲ್ಲಾ ಒಳಿತಿಗೂ ಮೂಲ ಮಂತ್ರ. ಪ್ರಯತ್ನಿಸಬಹುದು. ಆ ಮಂಗಳಮೂರ್ತಿ ಗಣರಾಯನ ಅನುಗ್ರಹ ನಿಮ್ಮ ಮೇಲೆ ಇರಲಿ.
ಈಗ ಸುಮಾರು ೧೦ ವರ್ಷಗಳಿಂದೀಚೆಗೆ ಭಕ್ತರ ಮನೋಕಾಮನೆಯ ಮೇರೆಗೆ ಒಂದು ಗುಡಿಯನ್ನು ಕಟ್ಟಿದ್ದಾರೆ. ಇದಕ್ಕೆ ಬೀಗ ಇರುವುದಿಲ್ಲ. ದಿನವಿಡೀ ಅರ್ಚಕರು ಅಲ್ಲಿರುತ್ತಾರೆ. ಭಕ್ತರಿಗೆ ಹಣ್ಣು ಕಾಯಿ ಮಾಡಿಸಲು ಅನುವುಮಾಡಿಕೊಡುತ್ತಾರೆ.
ಪೌಳಿ ನಾಲ್ಕುಕಡೆಗೂ ಇದ್ದು, ಅಲ್ಲಿ ಪಕ್ಕದಲ್ಲೇ ಹಾಕಿರುವ ಕಲ್ಲು ಮಂಚಗಳ ಮೇಲೆ ಹುಣಸೇಮರದ ತಂಪು ಛಾಯೆಯಡಿಯಲ್ಲಿ ಬಂದವರು ದಣಿವಾರಿಸಿಕೊಳ್ಳಬಹುದು. ಈಗ ಭಕ್ತಾದಿಗಳಿಗಾಗಿ ಗಣಪತಿ ದೇವರ ಸನ್ನಿಧಾನದಲ್ಲಿ ಮದುವೆ ಮಾಡಲು ಒಂದು ಛತ್ರವನ್ನೂ ಕಟ್ಟಿಸುತ್ತಿದ್ದಾರೆ. ಅದು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಈಗ ನಮ್ಮ ಕಾಲದ ಬಯಲು ಗಣಪತಿ ಹೋಗಿ, ಗಣಪತಿ ದೇಗುಲ ಎಲ್ಲರನ್ನೂ ಆಕರ್ಶಿಸುತ್ತಿದೆ. ಬನ್ನಿ, ಗಣೇಶನ ಅನುಗ್ರಹಕ್ಕೆ ಪಾತ್ರರಾಗಿ. ನಿಮಗೆ ಮಂಗಳವಾಗಲಿ. ನಮ್ಮೆಲ್ಲರ, ನಿಮ್ಮೆಲ್ಲರ ಇಷ್ಟ ಕಾಮನೆಗಳು ನೆರವೇರಲಿ.
(ಇದು ಮುಂಬೈನಲ್ಲಿ ನೆಲೆಸಿರುವ ವೆಂಕಟೇಶ್ ಅವರು ಸಂಪದ.ನೆಟ್ ನ ತಮ್ಮ ಬ್ಲಾಗಿಗೆ ಬರೆದ ಲೇಖನ. ನಿಮ್ಮ ಓದಿದೆ..)

Thursday, January 10, 2008

ವರ್ಷದ ಮೊದಲ ಕೃತಿ ಬಿಡುಗಡೆಯಾಗುತ್ತಿದೆ....ಪವಿತ್ರ ಅವರ ಚೊಚ್ಚಲ ಕವನ ಸಂಕಲನ.


ಜೋಗಿ ಅವರ ಕಾದಂಬರಿ

ವಿತ್ರ ಪ್ರಿಯಭಾಷಿಣಿ ಅವರ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವರ್ತಮಾನವನ್ನು ತಂದಿದ್ದೇವೆ. ಬಹುಶಃ ಇದು ದುರ್ಗದಲ್ಲಿ ಬಿಡುಗಡೆಯಾಗುತ್ತಿರುವ ಈ ವರ್ಷದ ಮೊದಲ ಕೃತಿ. ಉಪನ್ಯಾಸಕಿಯಾಗಿ ಕೆಲ ಕಾಲ ಕೆಲಸ ಮಾಡಿ, ಸದ್ಯ ತುಮಕೂರು ಸಮೀಪದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಪವಿತ್ರ ಅವರ ಚೊಚ್ಚಲ ಮಗವಿನ ಸಂತೋಷದಲ್ಲಿರುವಾಗಲೇ ಮತ್ತೊಂದು ಸಂತೋಷ ಅವರ ಮಡಿಲಿನಲ್ಲಿದೆ. ಯಾಕೆಂದರೆ ಇದು ಅವರ ಚೊಚ್ಚಲ ಕೃತಿ- ‘ನಕ್ಷತ್ರಕೆ ಪಾತಿ’.
ಆರ್ ಪವಿತ್ರ ಪ್ರಿಯ ಭಾಷಿಣಿ ಚಿತ್ರದುರ್ಗದ ಪ್ರಮುಖ ಕತೆಗಾರರಾದ ಟಿ.ಆರ್.ರಾಧಾಕೃಷ್ಣ ಅವರ ದ್ವಿತೀಯ ಪುತ್ರಿ. ತಾಯಿ ಸಾವಿತ್ರಿ ನಿವೃತ್ತ ಅಧ್ಯಾಪಕಿ. ಪವಿತ್ರ ಅವರ ಹಿರಿಯ ಸಹೋದರಿ ತಾರಿಣಿ ಶುಭದಾಯಿನಿ ಕೂಡ ಕಾವ್ಯದೊಂದಿಗೆ ನಂಟುಳ್ಳವರು. ಇತ್ತೀಚೆಗೆ ಅವರು ‘ತೋಡಿ ರಾಗ’ ಕವನ ಸಂಕಲನ ಪ್ರಕಟಿಸಿದ್ದಾರೆ. ಸಾಹಿತ್ಯಿಕ ವಾತಾವರಣವಿರುವ ಕುಟುಂಬದಲ್ಲಿ ಬೆಳೆದವರು ಪವಿತ್ರ ಪ್ರಿಯಭಾಷಿಣಿ. ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿ, ಬಿ.ಇಡಿ ಮುಗಿಸಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಕಾವ್ಯವನ್ನು ಕೂಸಿನಂತೆ ಮಡಿಲಿನಲ್ಲಿಟ್ಟುಕೊಂಡು, ತಟ್ಟಿ, ತಡವಿ ತಮ್ಮದಾಗಿಸಿಕೊಳ್ಳುತ್ತಾ ಬಂದಿರುವವರು ಪವಿತ್ರ. ಮನೆಯ ಸಾಹಿತ್ಯಕ ವಾತಾವರಣ, ಅವರ ಅಧ್ಯಯನ ಎಲ್ಲವೂ ಅವರನ್ನು ಕಾವ್ಯ ವ್ಯಾಮೋಹಿಯನ್ನಾಗಿಸಿದೆ.
ಇವರ ಕಾವ್ಯದಲ್ಲಿ ಯಾವುದೇ ಇಸಮ್ಮಿನ ಪ್ರಭಾವ ಕಾಣದು. ಇದೇ ಮಾತನ್ನು ಬೆನ್ನುಡಿ ಬರೆದಿರುವ ಲೋಕೇಶ್ ಅಗಸನಕಟ್ಟೆಯವರು ಹೇಳಿದ್ದಾರೆ. ಇಲ್ಲಿನ ಪ್ರತಿ ಸಾಲು ಚಿತ್ರವನ್ನು ಕಟ್ಟಿಕೊಡುವಂಥವು.
ಈಗಾಗಲೇ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಹತ್ತಾರು ಕವನಗಳು ಪ್ರಕಟವಾಗಿವೆ. ಮೆಚ್ಚುಗೆ ಪಡೆದಿವೆ. ಹಾಗೆ ಮೆಚ್ಚುಗೆಗಳಿಸಿದ ಕವಿತೆಗಳು ಸೇರಿದಂತೆ ಒಟ್ಟು ೩೨ ಕವನಗಳಿರುವ ನಕ್ಷತ್ರಕೆ ಪಾತಿ ಜನವರಿ ೨೬ರಂದು ಬಿಡುಗಡೆಯಾಗುತ್ತಿದೆ.
’ ಅಂದು ಕಥೆಗಾರ ಜೋಗಿ ಕೃತಿ ಬಿಡುಗಡೆ ಮಾಡುತ್ತಿದ್ದಾರೆ. ಪವಿತ್ರ ಅವರ ಮಿತ್ರ ಶಶಿಸಂಪಳ್ಳಿ ಕೂಡ ಭಾಗಿಯಾಗಲಿದ್ದಾರೆ.
ಪವಿತ್ರ ಅವರ ಬರಲಿರುವ ಕವನ ಸಂಕಲನದ ಆಯ್ದ ಎರಡು ಪದ್ಯಗಳನ್ನು ಇಲ್ಲಿ ನಿಮಗಾಗಿ ಇಟ್ಟಿದ್ದೇವೆ. ಅದಕ್ಕೂ ಮೊದಲು ಕೃತಿ ಬಿಡುಗಡೆ ಮಾಡುತ್ತಿರುವ ಜೋಗಿ ಕುರಿತು ನಾಲ್ಕು ಮಾತು..
ಜೋಗಿ ಕನ್ನಡ ಪ್ರಭದಲ್ಲಿ ಅಸಿಸ್ಟೆಂಟ್ ಫೀಚರ್ ಎಡಿಟರ್ ಕೆಲಸ. ಅವರು ಅಪ್ಪಟ ಕಾವ್ಯ ಪ್ರೇಮಿ. ಕಾವ್ಯವನ್ನು ಧ್ಯಾನಿಸುವವರು. ಹೊಸ ತಲೆಮಾರಿನ ಕವಿಗಳನ್ನು ಯಾವಾಗಲೂ ಕೆಣಕುತ್ತಾ, ಅವರ ಕಾವ್ಯಪ್ರಿಯತೆಯನ್ನು, ಸೂಕ್ಷ್ಮತೆಯನ್ನು ತೀವ್ರಗೊಳಿಸುತ್ತಿರುವವರು.
ಬರೆಯದೇ ಬದುಕುವುದಿಲ್ಲ ಎನ್ನುವ ಹಾಗೆ ಸದಾ ಬರೆಯುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅಂಕಣ ಸಂಗ್ರಹ, ಒಂದು ಕಥಾ ಸಂಕಲವನ್ನು ಹೊರತಂದಿರುವ ಜೋಗಿ, ಮಕರ ಸಂಕ್ರಾಂತಿಯಂದು ಮೊದಲ ಕಾದಂಬರಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೆಸರು ‘ನದಿಯ ನೆನಪಿನ ಹಂಗು.’

ನಕ್ಷತ್ರಕೆ ಪಾತಿ
‘ಶಿವನು ಭಿಕ್ಷಕೆ
ಬಂದ-ನೀಡು ಬಾರೆ ತಂಗಿ
ಇವನಂಥ ಚೆಲ್ವರಿಲ್ಲ
ನೋಡು ಬಾರೆ’

ಈ ಮಣ್ಣ ಹುಡಿಯ ಶಿವನ
ನಾಲಿಗೆ ತುದಿ ಮೇಲಿವೆ-
ವಿರಹ ಒಳಿತು ಕೆಡುಕು
ನೆಮ್ಮದಿ ಪುರಾಣ ಮಸಣ
ನರರಂತೆ ಬುವಿಯ ಎಲ್ಲ
ಸೌಭಾಗ್ಯ ಪಡೆದ ದೇವನ
ಒಳಕಥೆಗಳ ನಾಕಾರು ತತ್ತ್ವ ಪದಗಳು.

ಇವನ ದಿಟ್ಟಿಗೆ ನಿಲುಕಲಾರರು:
ನವರತ್ನ ನನ ಮನೆಯ
ರಾಗಿಯ ಕಾಳು
ಮುತ್ತು ನನ ಮನೆಯ
ಜೋಳದ ಕಾಳು
ಎನುವ ಹೇಮಕೂಟದ ಹಂಪಾದೇವಿ
ಮೊರ ಮೊರ ಅಕ್ಕಿ ಸುರುವಲು
ಕದದ ಹಿಂದೆ ಇಣುಕುವ
ಕಂಕಣವಿಲ್ಲದ ಕನ್ಯಾಮಣಿ.

ಸುಂದರಾಂಗನ ಪಾದ ಒಲಿವ
ಮಟಮಟ ಮಧ್ಯಾಹ್ನದ ಹಾದಿಯಲಿ
ಕೊಳೆತ ಹೂಕೋಸು
ಸೌತೇಕಾಯಿ ರಾಶಿ
ಸೋನೆ ಅವರೆ ಮೆಲ್ಲುವ ಹಸುಗಳು
ಬೈಕು ಗಾಡಿಗಳ ಚಕ್ರದ ಅಡಿ
ಕಲ್ಲಂಗಡಿ ಸಿಪ್ಪೆ, ಸೋರೆಕಾಯಿ,
ಮಣಿಸರ, ವಸ್ತ್ರ ಮಂಗಳ ಗೌರಿ ಬಳೆಯ
ಸಾಲು ಗೂಡಂಗಡಿಗಳು

ಕಲೆಕ್ಷನ್ ಏನಾದರೇನಂತೆ?
ಚೆಲ್ಲಾಪಿಲ್ಲಿ ಸೊಪ್ಪು ಸೆದೆ ನಡುವೆ
ಉಸ್ಸೆನುವ ಸೊಲ್ಲು, ಅದ ಮೀರಿಸಿ
ಕವಯತ್ರಿಯರ ನವಿಲುಗರಿಯಂತೆ ನಗುವ
ಬಟ್ಟಲು ಕಂಗಳಿಗೇನು ಬರವಿಲ್ಲ
ಆಸಾಮಿ, ಒಂಥಾರ ಸ್ಥಿತಪ್ರಜ್ಞ!
ಜನಜಂಗುಳಿಯಲ್ಲಿ ಕಂಡೂ ಕಾಣದಾತ...

ಅಂಜಲೀ ಬದ್ಧ
ನಿತ್ರಾಣ...
ಮೂಟೆಕಟ್ಟಿ ಸುರುಟಿ ಸುರುಳಿ ಸುತ್ತಿ
ಕುಸಿದಿತ್ತು ಗೌತಮನ ತನುವ ತಡಿಕೆ
ಕಣ್ ಕತ್ತಲಿಟ್ಟು ತಟರಿಸಿ
ದೇಹ ದಂಡನೆ ಪರಂಪರೆಗೆ
ಚೀಂವ್‌ಗುಟ್ಟಿತ್ತು ಜೀವ ಇಲಿಯಂತೆ

ನಾಯಿಯಂತ ಬಡಕಲು ಶರೀರ
ಚುಂಗು ಹಿಡಿದ ಅಂಗಿ ತೂರಿದ ಗಾಳಿ
ಚುಚ್ಚಿತ್ತು ಉರುಟು ಮಣ್ಣು
ದುಮುಗುಟ್ಟಿತ್ತು ಹುಯ್ಯುವ ಮೌನ.
ಹೆಂಡತಿ-ಮಗುವ ಮರುಭೂಮಿ-ಬದುಕತ್ತ
ಹೆಜ್ಜೆಯ ಇಡಿಸಿದ ತಾನೆ
ಜೀವ-ಧ್ಯಾನ-ಪ್ರೇಮ-ಮನುಷ್ಯತ್ವ
ತಿದಿ ಊದುವುದು ಹೇಗೆ?

ಕ್ಷಣಕ್ಕೊಮ್ಮೆ ಮೀನಂತೆ ಪುಳಕ್
ಬದಲಾಗುವ ಮನ-ಧ್ಯಾಸ.
ತಡೆಯಲಾಗದಷ್ಟು ಹಸಿವೆ, ನೀರಡಿಕೆ
ತಲ್ಲಣದ ದೇಹ ಒಣಗಿ ವಾಟೆಗರಿ.
ಪಶ್ಚಾತ್ತಾಪದೊಂದು ಹನಿ
ಸಾವ ಜಿಗಣೆ ಯಾತನೆ,
ಒಂಟಿ ಕಾಯಿ ಸುಂಟರಗಾಯಿ-
ಧ್ಯಾನದ ಮಗ್ಗುಲ ಅಮರಿಕೊಂಡರೂ
ಸೋಲುತ್ತಿರುವ ಜೀವ
ಅಂತರಾತ್ಮಕೆ ಓಗೊಟ್ಟು.

ಮುಳುಗಿದ ಸೂರ್‍ಯ
ಮೇಲೆದ್ದು ಮೂಡಣದಲಿ.
ಬರೆದ ಕಾವ್ಯ ಇಳೆಯ ಪದರದಲಿ.
ಏನಾದರೂ ಆಗಲಿ,
ಸುಸ್ತು ಯಾರಪ್ಪನ ಮನೆ ಗಂಟು?

ಪಡೆದಿದ್ದು ಸುಗತನಾಗಿ

ಬೊಗಸೆ ಹಿಡಿದಿದ್ದೆ-
ಸುಜಾತೆ ಹಾಲು-ಖೀರು:
ಬಾದಾಮಿ, ಪಚ್ಚಕರ್ಪೂರ, ಕೊಬ್ಬರಿ ಪರಿಕರ-
ಆಟಕ್ಕುಂಟು ಲೆಕ್ಕಕ್ಕಿಲ್ಲ
ಮಬ್ಬಾಯ್ತು ಸಾವಿನ ಹೊಸ್ತಿಲು.

ಅಂತರಾಳದಿ ದ್ರವಿಸಿದ ಅದಮ್ಯ ಚೈತನ್ಯ
ಪೂರ್ಣಿಮೆಗೆ ಕದ ತೆರೆದಿದ್ದೆ ತಡ
ಸೆಳಕಾಯ್ತು-ನಿರ್ಲಿಪ್ತತೆ ಅನಿತ್ಯತೆ
ಜೀವಿ-ಅಕ್ಕರೆ ನಲು ಹಾರೈಕೆ
ಇದೆ ಅಲ್ಲವೇ-ಬದುಕು ಸಾವಿನ
ವಿಸ್ಮಯ ಗೂಡು..
ನಿಲುದಾಣ...