Sunday, December 14, 2008

ಯಾರಾಗ್ತಾರೆ ಸಮ್ಮೇಳನಾಧ್ಯಕ್ಷರು?

ಸಮ್ಮೇಳನಕ್ಕೆ ಇನ್ನು 47 ದಿನ ಬಾಕಿ ಇದೆ. ಸಿದ್ಧತೆಗಳು ಭರದಿಂದ ಸಾಗಿವೆ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನವಿದು. ಜತೆಗೆ ಅಮೃತ ಮಹೋತ್ಸವದ ಸಮ್ಮೇಳನ.
ಈ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗ್ತಾರೆ?
ಇದು ಸದ್ಯದ ಕುತೂಹಲ.
ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿಂದು ಸ್ವಾಗತಸಮಿತಿಯ ಸಭೆ ನಡೆಯಿತು. ಈ ಬಾರಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಒಮ್ಮತದ ಅಭಿಪ್ರಾಯದೊಂದಿಗೆ ಒಂದು ಹೆಸರನ್ನು ಕೇಂದ್ರ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡುವ ಉದ್ದೇಶದೊಂದಿಗೆ ಸಭೆ ಆರಂಭವಾಗಿತ್ತು.
ಬಹುಮತದ ಮೇರೆಗೆ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ. ಕೇಂದ್ರ ಸಮಿತಿಗೆ ಶಿಫಾರಸು ಮಾಡುವುದಾಗಿ ಹೇಳಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಸಭೆ ಮುಗಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚಿಮೂ ಹೆಸರು ಬಿಟ್ಟರೆ ಡಾ.ಎಲ್. ಬಸವರಾಜು, ಬರಗೂರು ರಾಮಚಂದ್ರಪ್ಪನವರ ಹೆಸರು ಪ್ರಸ್ತಾಪವಾಯಿತು.
ಸಂಶೋಧಕರಾದ ಬಿ.ರಾಜಶೇಖರಪ್ಪ, ಶ್ರೀಶೈಲಾರಾಧ್ಯ ಸೇರಿದಂತೆ ಅನೇಕರು ಚಿಮೂ ಅವರನ್ನೇ ಪ್ರಸ್ತಾಪಿಸಿದರು. ಅನುಮೋದಿಸುವಂತೆ ಅನೇಕರನ್ನು ಪ್ರೇರೇಪಿಸಿದರು. ಬಂಡಾಯ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡು ಬಂದ ಸಿ.ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಶಿವಣ್ಣನಂಥವರು ಕೂಡ ಚಿಮೂ ಆಯ್ಕೆಯನ್ನು ಅನುಮೋದಿಸಿದ್ದು ಅಚ್ಚರಿ, ಬೇಸರಕ್ಕೆ ಕಾರಣವಾಯಿತು. ಇವರ ಬಂಡಾಯದ ನಿಲುವಿನ ಬಗ್ಗೆಯೇ ಸಂಶಯ ಹುಟ್ಟಿಸಿತು. ಜಾತಿ ಕಾರಣಕ್ಕೆ ಇವರು ಚಿಮೂ ಬೆಂಬಿಲಿಸಿದ್ದಾರೆಂದಾದ್ದಲ್ಲಿ ಸಾಮಾಜಿಕ ಬದ್ಧತೆ, ಸಾಹಿತ್ಯಕ ನಿಲುವು ಇತ್ಯಾದಿ ಮಾತುಗಳೆಲ್ಲ ಬೊಗಳೆ ಎಂದಷ್ಟೆ ಹೇಳಬೇಕಾಗುತ್ತದೆ. ನಿಷ್ಠುರವಾದಿ ಎನಿಸಿಕೊಂಡು ಇಂಥ ಸಾಹಿತಿಗಳಿಂದ ದೂರವೇ ಉಳಿಯುತ್ತಿದ್ದ ಬಿ.ಎಲ್. ವೇಣು ಕೂಡ ಈ ನಿಲುವಿನಿಂದ ಹೊರತಾಗಿರಲಿಲ್ಲ.
ಇವರೇ ಎಂಟು ಹತ್ತು ಮಂದಿ ಬಿಟ್ಟರೆ ಮತ್ತೊಬ್ಬ ಜಿಲ್ಲೆಯ ಹಿರಿಯ ಸಾಹಿತಿಗಳು ಕಾಣಿಸಲಿಲ್ಲ. ಕೆ.ಆರ್.ಸಂಧ್ಯಾರೆಡ್ಡಿ, ಬಿ.ವಿ.ವೈಕುಂಠರಾಜು ರಂಥ ಹಿರಿಯರು ಸಭೆಯಲ್ಲಿ ಕಾಣಿಸಲಿಲ್ಲ. 150 ಮಂದಿ ಸೇರುವ ಕೊಠಡಿಯೊಂದರಲ್ಲಿ ಹೀಗೊಂದು ಅಭಿಪ್ರಾಯ ಮೂಡಿಸುವ ಸಭೆ ಇಟ್ಟುಕೊಂಡು ಪೂರ್ವ ನಿರ್ಧರಿತ ಅಭಿಪ್ರಾಯವನ್ನು ಹೇಳುವುದಕ್ಕೆ ಸಭೆ ನಡೆಸಿದ ಹಾಗಿತ್ತು.
ಕನ್ನಡ-ಕರ್ನಾಟಕ-ಕನ್ನಡಿಗ, ಈ ನಿಟ್ಟಿನಲ್ಲಿ ಚಿಮೂ ಕೆಲಸ ಅದ್ಭುತವಾದದ್ದು. ಅವರು ಈ ಗೌರವಕ್ಕೆ ಅರ್ಹರು ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಲೇ ಹೋದರು.
ಇದೇ ಚಿಮೂ ಕಳೆದ ವರ್ಷ-ಎರಡು ವರ್ಷಗಳಿಂದ ಸಾಮಾಜಿ ಬದ್ಧತೆಯನ್ನು, ಸಾಮರಸ್ಯವನ್ನು ಕಿಂಚಿತ್ತೂ ಕಾಳಜಿ ಮಾಡದೆ ಇತಿಹಾಸದ ದಾಖಲೆಗಳನ್ನು ಉಲ್ಲೇಖಿಸುತ್ತಾ ಕೋಮುವಾದಿಯ ಹಾಗೇ ಮಾತನಾಡುತ್ತಾ ಅಲೆಯುತ್ತಿದ್ದಾರೆ. ಇಂಥವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಿರುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.
ಸಮ್ಮೇಳನವನ್ನು ರಾಜಕೀಯದಿಂದ, ಜಾತಿ ಮತಗಳಿಂದ ದೂರವಿಟ್ಟು, ಕನ್ನಡ, ಕರ್ನಾಟಕದ ಹಿನ್ನೆಲೆಯಲ್ಲಿ ಮಾಡಬೇಕೆಂದು ಭಾಷಣ ಬಿಗಿಯುತ್ತಾರೆ ಸಾಹಿತಿಗಳು. ಕೋಮುದಳ್ಳುರಿ ಹಚ್ಚುವ ಮಾತುಗಳನ್ನು ಆಡುತ್ತಿರುವ ವ್ಯಕ್ತಿಯೊಬ್ಬರನ್ನು ಯಾವ ಸಾಮಾಜಿಕ ಬದ್ಧತೆಯನ್ನು ಮಾನ್ಯ ಮಾಡಿ ಈ ಸ್ಥಾನವನ್ನು ಅಲಂಕರಿಸುವ ಅವಕಾಶ ಮಾಡಬೇಕು ಹೇಳಿ?
ನಾವು ಅಂದುಕೊಂಡದ್ದೆಲ್ಲ ಸುಳ್ಳಾಗುತ್ತಲೇ ಇದೆ. ಹಿಂದುಳಿದ ಜಿಲ್ಲೆ, ಶರಣರಂಥವರು ಇರುವ ಈ ಜಿಲ್ಲೆಯಲ್ಲಿ ನಡೆವ ಸಮ್ಮೇಳನ, ಕೋಮು ಸಾಮರಸ್ಯಕ್ಕೆ, ವರ್ಗಗಳ ತರತಮಕ್ಕೆ ಉತ್ತರವಾಗುವಂಥ, ಈ ನಿಟ್ಟಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಂಥ ಸಮ್ಮೇಳನವಾಗುತ್ತದೆ ಎಂದು ದೊಡ್ಡ ನಿರೀಕ್ಷೆ ಹುಸಿಯಾಗುತ್ತಲೇ ಇದೆ.
ಹಿಂದುಳಿದ ವರ್ಗವನ್ನು ಪ್ರತಿಬಿಂಬಿಸುವ, ದಮನಿತ ವರ್ಗದ ದನಿಯಾಗುವಂಥ, ಪ್ರಸ್ತುತ ಸಮಾಜದ ಚಿತ್ರಣಗಳ ನಿಕಷವಾಗಿ ವಿಮರ್ಶಿಸುವ ಮನಸ್ಸಿನ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪನವರು ಸಮ್ಮೇಳನಾಧ್ಯಕ್ಷರಾಗುವುದು ಇಂದಿನ ಅಗತ್ಯ.
ಚಿಮೂ ಸಮ್ಮೇಳಾಧ್ಯಕ್ಷ ಸ್ಥಾನದಲ್ಲಿ ದ್ವೇಷ ಕಾರುವ ಮಾತನಾಡಿ ಬಿಟ್ಟರೆ ಸಮ್ಮೇಳನದ ಗೋಷ್ಠಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಮಾನವೀಯತೆ ಬಗ್ಗೆ ಎಷ್ಟು ಚರ್ಚೆಯಾಗಿ ಏನು ಪ್ರಯೋಜನ? ನಮಗಿದು ಆತಂಕದ ಸಂಗತಿಯೂ ಆಗಿದೆ.
ಡಿಸೆಂಬರ್ 19ರಂದು ಕೇಂದ್ರ ಕಾರ್ಯಸಮಿತಿ ಸಮ್ಮೇಳನಾಧ್ಯಕ್ಷರನ್ನು ಘೋಷಿಸಲಿದೆ. ಈ ಸಮಿತಿಯಲ್ಲಿರುವ ಜವಾಬ್ದಾರಿಯುತ ವ್ಯಕ್ತಿಗಳಾದರೂ ಸಮ್ಮೇಳಾನಾಧ್ಯಕ್ಷರನ್ನು ಆರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ನಿರ್ಧರಿಸಲಿ.
ಚಿಮೂರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಚಿತ್ರದುರ್ಗದ ಪ್ರಖಾಂಡ ಪಂಡಿತರು ಪಣತೊಟ್ಟಿದ್ದಾರೆ. ಹಾಗೇನಾದರೂ ಆದಲ್ಲಿ ಪ್ರಜ್ಞಾವಂತ ಮಂದಿ ಸಮ್ಮೇಳನದಿಂದ ದೂರ ಉಳಿಯಲಿದ್ದಾರೆ ಎಂಬುದು ಬರೀ ಮಾತಲ್ಲ.
ಚಿಮೂ ಆಯ್ಕೆಯಾದರೆಂಬ ಸುದ್ದಿ ಪ್ರಕಟವಾದ ದಿನ ನಾವೂ ಈ ಬ್ಲಾಗ್ ಗೆ ಬರೆಯುವುದನ್ನು ನಿಲ್ಲಿಸಲಿದ್ದೇವೆ.

3 comments:

Anonymous said...

chimu aykeya vicharadalli durgada hudugara pratibatane matige nannadu dani ide. indina samayadalli komu samarasya kapaduva riti mataduva vyakti Baraguru nija. adare avaru opputtara annuva prashne ide. adare KASAPA prayatna madali. jotege durgada jana edurisutthiruva aneka samasyegallige uttara kandukolluva vedikeyu e sammelana agali.

Anonymous said...

ಬಿಜೆಪಿ ಸಕರ್ಾರ ಇರೋವಾಗ ಚಿಮೊ ಸಮ್ಮೇಳನಾಧ್ಯಕ್ಷ ಆಗೋದರಲ್ಲಿ ಸಂಶಯವಿಲ್ಲ....

Anonymous said...

ನಿಮ್ಮ ಬ್ಲಾಗ್ ನೋಡಿ ಖುಷಿಯಾಗಿತ್ತು. ವಸ್ತುನಿಷ್ಠವಾಗಿ ಯೋಚಿಸುತ್ತೀರಿ ಎಂದು ಕೊಂಡಿದ್ದೆ. ಆದರೆ ಚಿ.ಮೂ.ಆಯ್ಕೆಕುರಿತು ನಿಮ್ಮ ಅಭಿಪ್ರಾಯ ಸರಿ ಅಲ್ಲ. ಅವರು ಆಯ್ಕೆಯಾಗಿಲ್ಲ ಬಿಡಿ. ಆದರೆ ಅವರ ಸಂಶೋಧನೆಯನ್ನೇ ಅನುಮಾನ ಪಡುವಂತೆ ನೀವು ಬರೆದಿರುವುದು ಯಾಕೋ ನೀವು ಆದಷ್ಟೂ ಭೇಗ ಬುದ್ದಿಜೀವಿ, ಸೆಕ್ಯುಲರ್ ವಾದಿಗಳಾಗಬೇಕೆಂದು ಹಾತೊರೆಯುವಂತೆ ಕಾಣುತ್ತಿದೆ. ಚಿ.ಮು.ಅವರೊಂದಿಗೆ ಒಂದು ದಿನ ಕಳೆದು, ಅವರ ಸಂಶೋಧನೆ ಸರಿಯೋ ತಪ್ಪೋ ತಿಳಿಯುವ ಪ್ರಯತ್ನ ಮಾಡಿ. ಅವರನ್ನೇ ಪ್ರಶ್ನಿಸಿ. ಹಂಪಿ ವಿಚಾರದಿಂದ ಟಿಪ್ಟು ವಿಚಾರದವರೆಗೆ ಅವರ ಸಂಶೋಧನೆ ಏನೆಂದು ತಿಳಿಯಿರಿ. ಯಾರದ್ದೋ ಅಭಿಪ್ರಾಯದ ಮೂಸೆಯಲ್ಲಿ ಬೆಂದು ತಪ್ಪು ಅಭಿಪ್ರಾಯ ಹೊತ್ತ ಮನಸ್ಸು ಹದಗೊಳಿಸಬೇಡಿ. ಇನ್ನೂ ಯುವಕರು. ಸರಿ-ತಪ್ಪು ಗಳ ಬಗ್ಗೆ ಸೂಕ್ಮ ಒಳನೋಟವಿರಲಿ. ಬುದ್ದಿಜೀವಿಗಳ ಸಿನಿಕತನ ನಿಮಗೆ ಬೇಡ.