Monday, July 28, 2008

ಕಸಾಪ ಜಿಲ್ಲಾಧ್ಯಕ್ಷರಾಗಿ ವೀರೇಶ್ ಪುನಾ ಆಯ್ಕೆ..




ಇನ್ನೂ ಸಾಹಿತ್ಯ ಪರಿಷತ್ ಚುನಾವಣೆ ನಡೆದಿಲ್ಲ. ಆಗಲೇ ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷರ ಘೋಷಣೆಯಾಗಿದೆ. ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಂಟು ಮಂದಿ ನಾಮಪತ್ರ ವಾಪಸು ಪಡೆಯುವ ಕಡೇ ದಿನವಾದ ಶನಿವಾರ ವೀರೇಶ್ ಎರಡನೆ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಹಿಂದಿನ ಪೋಸ್ಟ್ನಲ್ಲಿ ಹೇಳಿದ ಮಾತುಗಳು ಇಲ್ಲಿ ಸ್ಪಷ್ಟವಾದಂತಿವೆ. ಸಮ್ಮೇಳನ ಒಪ್ಪಿಕೊಂಡವರ ಮೇಲೆ ಸಮ್ಮೇಳನ ನಡೆಸುವ ಹೊಣೆ ಹೊರಿಸಲಾಗಿದೆ. ಇದರ ಹಿಂದೆ ಯಾರದೋ ಕೈವಾಡ ಎನ್ನುವ ಮೂಲಕ ವೀರೇಶ್ ಅವರ ಆಯ್ಕೆ ಸಂಶಯಿಸುವ ಅಗತ್ಯವಿಲ್ಲ. ಅದರ ಔಚಿತ್ಯ ನಮಗಿಲ್ಲಿ ಕಾಣುತ್ತಿಲ್ಲ.


ವೀರೇಶ್ ಅಲ್ಲದೆ ಬೇರಾರೆ ಸಮ್ಮೇಳನ ಒಪ್ಪಿಕೊಂಡು ಬಂದು, ಅವರೇ ಆಯ್ಕೆ ಯಾಗಿದ್ದರೂ ಈ ಮಾತುಗಳೇ ವ್ಯಕ್ತವಾಗುತ್ತಿದ್ದವೇನೋ? ಇರಲಿ.. ವೀರೇಶ್ ಈಗ ಏನು ಮಾಡುತ್ತಾರೆಂಬುದೇ ಕುತೂಹಲ...ವೀರೇಶ್ ವಿಸ್ತೃತ ಅವಧಿ ಸೇರಿ ಮೂರೂವರೆ ವರ್ಷಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಜಿಲ್ಲಾ ಕಸಾಪದ ಮೂಲಕ ಮಾಡಿದ ಚಟುವಟಿಕೆಗಳೆಷ್ಟು? ಜಿಲ್ಲೆಯಲ್ಲಿ ಕಸಾಪವನ್ನು ಬೆಳೆಸಲು ಅವರು ಮಾಡಿದ ಕೆಲಸಗಳೇನು? (ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆದಿದ್ದವು, ಅಷ್ಟೇ ಅಲ್ಲ ದತ್ತಿ ನಿಧಿಗಳ ಸ್ಥಾಪನೆಯೂ ಆಗಿದ್ದವು.) ಹೀಗೆ ಪ್ರಶ್ನೆಗಳನ್ನು ಕೇಳಿದರೆ ಸ್ವತಃ ವೀರೇಶ್ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಾರೆನೋ? ಮೂರೂವರೆ ವರ್ಷಗಳ ಅವಧಿಯಲ್ಲಿ ಕೆಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದೇ ಅವರ ಸಾಧನೆ.ಇದನ್ನೇ ಜಿಲ್ಲಾ ಸಾಹಿತ್ಯ ವಲಯ ಮಾತಾಡಿಕೊಳ್ಳುತ್ತದೆ. ಹೀಗಾಗಿ ಯಾವುದೇ ನಿರೀಕ್ಷೆಗಳೇ ಇಲ್ಲದ ನಿರುತ್ಸಾಹದ ಮಾತುಗಳನ್ನಾಡುತ್ತಾರೆ.



ಹಾಗಾಗಿ ವೀರೇಶ್ ಮುಂದೆ ದೊಡ್ಡ ಸವಾಲುಗಳೇ ಇವೆ. ಸಮ್ಮೇಳನ ಅಂಥ ಸವಾಲುಗಳಲ್ಲಿ ದೊಡ್ಡದು. ಆದರೆ ಅವರು ಇದಕ್ಕೂ ಮೊದಲು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಡೀ ಜಿಲ್ಲಾ ಸಾಹಿತ್ಯ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಮುಂದಿರುವ ಸವಾಲುಗಳಲ್ಲಿ ಒಂದು. ಇದುವರೆಗೂ ಏನೂ ಮಾಡಿಲ್ಲ ಎಂದೇ ಹೇಳುವ ಮಂದಿ ಮುಂದೆ ವೀರೇಶ್ ಬೆಂಬಲ, ನೆರವು, ಸಹಕಾರ ಕೇಳಬೇಕಾಗಿದೆ. ಇದನ್ನು ಯಾವುದೇ ಬಿಗುಮಾನವಿಲ್ಲದೆ ವೀರೇಶ್ ಮಾಡುತ್ತಾರಾ? ಮಾಡಲೇಬೇಕು, ಕಸಾಪ ಚುನಾವಣೆ ಮುಗಿಯಲು ಇನ್ನೊಂದು ತಿಂಗಳಾದರೂ ಬೇಕು, ಅಷ್ಟರೊಳಗೆ ಜಿಲ್ಲೆ ಸಾಹಿತಿಗಳು, ಹಿರಿಯರು, ವಿವಿಧ ಮುಖಂಡರಗಳ ಸಭೆ ಕರೆದು ಚರ್ಚೆ ಮಾಡಬಹುದು. ಈ ಸಮ್ಮೇಳನದ ಮಹತ್ವ, ಅದಕ್ಕಾಗಿ ಏನೆಲ್ಲಾ ಆಗಬೇಕಿದೆ ಎಂಬುದನ್ನೆಲ್ಲಾ ಚರ್ಚಿಸಬಹುದು. ಅವರಿಂದ ಸಲಹೆಗಳನ್ನು ಸ್ವೀಕರಿಸುವ ಮೂಲಕ ಅವರೆಲ್ಲಾ ವಿಶ್ವಾಸ ಪಡೆಯಬಹುದು. ವೀರೇಶ್ ಏನು ಮಾಡುತ್ತಾರೆ? ಕಾದು ನೋಡೋಣ.

No comments: