Wednesday, July 23, 2008

ಪ್ರೋತ್ಸಾಹದ ಸೆಲೆ ಎಂ.ವ್ಯಾಸ ಇನ್ನಿಲ್ಲ..

೬೯ರ ಅಂಚಿನಲ್ಲಿದ್ದೇನೆ... ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು? ಒಂದು ಆಗಾಧ ದೈಹಿಕ ನೋವು ಇಂಥ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ... ‘ಜೀವ ಒಂದು ಉಳಿದರೆ ಸಾಕು’ ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತದೆ- ಕೊನೆಯ ಉಸಿರಿರುವವರೆಗೂ..
ವಾರದ ಕೆಳಗೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕತೆಗಾರ ಎಂ. ವ್ಯಾಸ ಬರೆದ ಪತ್ರ ಅದು. ತಮ್ಮ ಕೊನೆಯ ದಿನಗಳ ಸುಳಿವು ತಮಗೆ ಸಿಕ್ಕಿದೆಯೇನೋ ಎಂಬ ಸೂಚನೆ ಅವರು, ಗೆಳೆಯರಿಗೆ ಕಿರಿಯ ಕತೆಗಾರರಿಗೆ ಬರೆದ ಪತ್ರದಲ್ಲಿತ್ತು.
ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ವಿಭಿನ್ನ ಸ್ಥಾನ ಸಂಪಾದಿಸಿಕೊಂಡಿದ್ದವರು ಎಂ. ವ್ಯಾಸ. ಅವರ ಕತೆಗಳ ಜಗತ್ತೂ ಮನೋಜಗತ್ತೂ ವಿಕ್ಷಿಪ್ತವಾಗಿರುತ್ತಿತ್ತು. ಸಂಭಾಷಣೆ ಧಾಟಿಯಲ್ಲಿ, ಪಾತ್ರಗಳ ಒಳಗುದಿ, ಒಳತೋಟಿ, ತಲ್ಲಣ ಮತ್ತು ಆತಂಕಗಳನ್ನು ಅವರು ಮನೋವಿಜ್ಞಾನಿಯ ನಿಖರತೆ ಹಾಗೂ ಕಥೆಗಾರನ ಕಸಬುದಾರಿಕೆಯ ಸಮ್ಮಿಶ್ರದಲ್ಲಿ ನಿಭಾಯಿಸುತ್ತಿದ್ದರು.
ಎರಡರಕ್ಷರದ ಕತೆಗಳಿಗೆ ಹೆಸರುವಾಸಿಯಾಗಿದ್ದವರು ವ್ಯಾಸ. ಆರಂಭದ ಮಿನಿ ಕಾದಂಬರಿ ‘ಕಂಬನಿ’ಯನ್ನು ಹೊರತುಪಡಿಸಿದರೆ, ಉಳಿದೆಲ್ಲ ಕತೆಗಳಿಗೆ ಎರಡೇ ಅಕ್ಷರದ ಆಕರ್ಷಕ ಶೀರ್ಷಿಕೆ. ಬೇರು, ಸ್ನಾನ, ಗೆಜ್ಜೆ, ರಥ, ವೃದ್ಧ, ದೋಣಿ, ಕೇಳಿ, ಯಕ್ಷಿ, ಹೆಣ, ಹದ್ದು.. ಹೀಗೆ. ಇಂಥ ಎರಡಕ್ಷರದ ಕತೆಗಾರನ್ನು ಇದೀಗ ಎರಡಕ್ಷರದ ಸಾವು ಕಥಾಲೋಕದಿಂದ ಕಣ್ಮರೆಯಾಗಿಸಿದೆ.
ನಗರ ಪರಿಸರದಿಂದ ದೂರ ಉಳಿದು, ತಮ್ಮದೇ ಕಲ್ಪನೆಯ ದುರ್ಗಾಪುರ, ಶಂಕರಿ ನದಿಗಳನ್ನು ಸೃಷ್ಟಿಸಿದರು, ಆ ನದೀತೀರದ ಊರಲ್ಲಿ ಮನೋಲೋಕದ ಸೂಕ್ಷ್ಮವ್ಯಾಪಾರಗಳನ್ನು ಚಿತ್ರಿಸುತ್ತಿದ್ದ ಎಂ. ವ್ಯಾಸ, ಸಾಹಿತ್ಯದ ಚಳವಳಿಗಳಿಂದ ದೂರ ಉಳಿದವರು. ಅವರು ಬರೆದ ಕತೆಗಳ ಸಂಖ್ಯೆ ಸುಮಾರು ಏಳುನೂರು. ಅವುಗಳ ಪೈಕಿ ಪ್ರಕಟಿತ ಕತೆಗಳು ಮುನ್ನೂರಕ್ಕೂ ಹೆಚ್ಚು. ಕಿರುಕಾದಂಬರಿಗಳು ಓದುಗರ ಮೆಚ್ಚುಗೆಗೆ ಪಾತ್ರವಾದದ್ದಷ್ಟೇ ಅಲ್ಲ ನಾಟಕರೂಪಕ್ಕೆ ಬಂದು ಅನೇಕ ಪ್ರದರ್ಶನಗಳನ್ನೂ ಕಂಡಿದ್ದವು.
ಕಿರಿಯ ಕತೆಗಾರರಿಗೆ ಸದಾ ಪ್ರೆತ್ಸಾಹದ ಸೆಲೆಯಾಗಿದ್ದವರು ವ್ಯಾಸ. ತಾವು ಒಂದು ಒಳ್ಳೆಯ ಕತೆ ಓದಿದರೆ ಸಾಕು, ತಕ್ಷಣವೇ ಪತ್ರ ಬರೆದು ಮೆಚ್ಚಿಕೊಳ್ಳುವ ಹವ್ಯಾಸ ಅವರಿಗಿತ್ತು. ನಾ ಡಿಸೋಜಾ ಸೇರಿದಂತೆ ಹಲವಾರು ಕತೆಗಾರರ ಆರಂಭದ ಕತೆಗಳು ಪ್ರಕಟವಾದದ್ದು ವ್ಯಾಸ ಅವರು ಹೊರತರುತ್ತಿದ್ದ ಅಜಂತಾ ಮಾಸಪತ್ರಿಕೆಯಲ್ಲಿ.
ತನ್ನ ವಿಶಿಷ್ಟ ಶೈಲಿ, ಹರಿತವಾದ ಮಾತುಗಾರಿಕೆ ಮತ್ತು ಅಂತರಂಗದ ಮಾತುಗಳಿಗೆ ದನಿಯಾಗುವ ಕತೆಗಳ ಮೂಲಕ ತಮ್ಮದೇ ಆದ ಓದುಗವಲಯದಿಂದ ವ್ಯಾಸರು ಹೊರನಡೆದಿದ್ದಾರೆ. ಅವರು ಇತ್ತೀಚೆಗಷ್ಟೇ ಅಂಕಣಬರಹಗಳ ಸಂಕಲನ ‘ವ್ಯಾಸಪಥ’ ಹೊರತಂದಿದ್ದರು.
ಇನ್ನು ವ್ಯಾಸರ ಹಳೆಯ ಕತೆಗಳ ಸಹವಾಸದಲ್ಲೇ ಅವರ ಅಭಿಮಾನಿ ಓದುಗರು ತೃಪ್ತರಾಗಬೇಕು. ಅವರು ಸೃಷ್ಟಿಸಿದ ದುರ್ಗಾಪುರದಲ್ಲಿ ಇನ್ನು ಬರೀ ಮೌನ.

( ಬುಧವಾರ ಸಾರಸ್ವತ ಲೋಕವನ್ನು ಅಗಲಿದ ವ್ಯಾಸರನ್ನು ಕುರಿತು ಜೋಗಿ ಬರೆದಿದ್ದು.)

No comments: