Thursday, January 22, 2009

75ರ ಸಮ್ಮೇಳನ...... ೭೫ ಮಂದಿ ಗಾಯನ


ಚಿತ್ರದುರ್ಗ: ಅಖಿಲ ಭಾರತ ೭೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿತ್ಯದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆ ಗಾಯನ ಮಾಡಲು ಸುಮಾರು ೭೫ ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು ಅವರೆಲ್ಲರಿಗೂ ಇಲ್ಲಿನ ಜಿಲ್ಲಾ ರಂಗಮಂದಿರಲ್ಲಿ ಗುರುವಾರ ತರಬೇತಿ ಹಮ್ಮಿಕೊಳ್ಳಲಾಗಿತ್ತು.
೭೫ ನೇ ಸಮ್ಮೇಳನವಾದ್ದರಿಂದ ಸಾಂದರ್ಭಿಕವಾಗಿ ಅಷ್ಟೇ ಮಂದಿ ಕಲಾವಿದರನ್ನು ನಾಡಗೀತೆ ಗಾಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ೩೫ ಮಂದಿ ಪುರುಷರು ಹಾಗೂ ೪೦ ಮಹಿಳೆಯರು ನಾಡಗೀತೆ ಗಾಯನ ಮಾಡಲಿದ್ದಾರೆ. ಇದಲ್ಲದೆ ‘ಹಚ್ಚೇವು ಕನ್ನಡದ ದೀಪ’ ಹಾಡಿನ ಗಾಯನ ಕೂಡ ಸೇರಿದೆ. ಎಲ್ಲ ೭೫ ಮಂದಿ ಕಲಾವಿದರಿಗೂ ಸಮ್ಮೇಳನ ಸಮಿತಿ ವತಿಯಿಂದ ಉಡುಪು ನೀಡಲಾಗುತ್ತಿದೆ.
ಖ್ಯಾತ ಸಂಗೀತ ನಿರ್ದೇಶಕ ಮೃತ್ಯುಂಜಯಕ ದೊಡ್ಡವಾಡ, ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನಲೆ ಗಾಯಕ ಜ್ಯೋತಿ ರವಿಪ್ರಕಾಶ್, ರಂಗ ನಿರ್ದೇಶಕ ಕೆ.ಪಿ. ಗಣೇಶಯ್ಯ, ಸಂಗೀತ ಶಿಕ್ಷಕ ಸತೀಶ್ಕುಮಾರ್ಜೆಟ್ಟಿ, ತಬಲ ವಾದಕ ಲಕ್ಷ್ಮಿಪತಿ ಅವರುಗಳು ನಾಡಗೀತ ಗಾಯನದ ತರಬೇತಿ ಉಸ್ತುವಾರಿ ವಹಿಸಿದ್ದಾರೆ.
ಟಿ ೬.೧೯ ಲಕ್ಷ ರು. ದೇಣಿಗೆ
ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವ ಪ್ರಕ್ರಿಯೆ ಗುರುವಾರವೂ ಮುಂದುವರಿದಿತ್ತು. ವಿವಿಧ ಸಂಘ ಸಂಸ್ಥೆಗಳು, ಗಣ್ಯರು ಒಟ್ಟು ೬.೧೯ ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ರಸಗೊಬ್ಬರ ಮಾರಾಟ ಸಂಘದಿಂದ ೧.೩೭ ಲಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಒಂದು ಲಕ್ಷ, ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಿಂದ ೬೬ ಸಾವಿರ, ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ೫೦ ಸಾವಿರ, ಹೈಮಾಸ್ಕ್ ದೀಪ ಅಳವಡಿಕೆಗೆ ಬೆಸ್ಕಾಂನಿಂದ ಒಂದು ಲಕ್ಷ ರು, ಅನುದಾನ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಂದ ೪೦ ಸಾವಿರ, ಹೆಚ್. ಮೋಹನ್ ೨೫ ಸಾವಿರ, ಪೌರ ಕಾರ್ಮಿಕ ಸಂಘದಿಂದ ೨೮ ಸಾವಿರ, ಕನಕ ಪತ್ತಿನ ಸಹಕಾರ ಸಂಘದಿಂದ ಐದು ಸಾವಿರ, ಹಿರಿಯೂರು ಎಪಿಎಂಸಿ ದಲಾಲರಿಂದ ೧೦ ಸಾವಿರ, ಕೆಎಸ್ಎಫ್ಸಿ ನೌಕರರಿಂದ ೧೩,೧೦೦, ಚಿತ್ರಹಳ್ಳಿ ಗ್ರಾ.ಪಂ ೧೦ ಸಾವಿರ, ಸ್ವಿನ್ ಸ್ವಸಹಾಯ ಸಂಘ ಒಕ್ಕೂಟದಿಂದ ೫ ಸಾವಿರ, ಶ್ರೀರಾಂಪುರದ ಗೋಪಾಲಕೃಷ್ಣ ವಾಚನಾಲಯ ಕೇಂದ್ರದಿಂದ ೨೦೧೦೧ ರು. ಕನ್ನಿಕಾ ಪರಮೇಶ್ವರಿ ಪತ್ತಿನ ಸಹಕಾರ ಸಂಘದಿಂದ ೧೦ ಸಾವಿರ ರು.ದೇಣಿಗೆ ಸಮ್ಮೇಳನ ಸಮಿತಿ ಖಾತೆಗೆ ಜಮ ಆಗಿದೆ.
ಟಿ ಪ್ರಚಾರ ಪರಿಕರ
ಸಾಹಿತ್ಯ ಸಮ್ಮೇಳನದ ಪ್ರಚಾರ ಮಾಡಲು ಪರಿಕರಗಳು ಸಮಿತೆ ಕಚೇರಿಗೆ ತಲುಪಿವೆ. ಆರು ಸಾವಿರ ಪೋಸ್ಟರ್, ೫೦೦ ಬ್ಯಾನರ್, ಐದು ಸಾವಿರ ಸ್ಟಿಕರ್, ಆರು ಸಾವಿರ ಫ್ಲಾಗ್, ೧೦ ಸಾವಿರ ಪೆನ್ನುಗಳು ಸರಬರಾಜು ಆಗಿವೆ.
ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉಪ ವಿಭಾಗಾಧಿಕಾರಿ ವೆಂಕಟೇಶ್ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಸಭೆ ಕರೆದು ಎಲ್ಲ ತಾಲೂಕಿಗೆ ವಿತರಣೆ
ಮಾಡಿದರು. ಜಿಲ್ಲೆಯ ಪ್ರತಿ ಗ್ರಾಮಕ್ಕೆ ಒಂದು ಪೋಸ್ಟರ್ ತಲುಪಿಸುವಂತೆ ನಿರ್ದೇಶನ ನೀಡಿದರು.

No comments: