ಹೌದು ಮೊನ್ನೆ ಸೋಮವಾರ(19/01/2009) ಚಿತ್ರದುರ್ಗ ಬಸ್ ನಿಲ್ದಾಣದ ಬಳಿ ಬಂದಾಗ.. ನನ್ನ ಮನಸ್ಸು ಫ್ಲಾಶ್ ಬ್ಯಾಕ್ ಹೋಗಿತ್ತು.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿ, ಅಲ್ಲೇ ಪ್ಲಸ್ ೨ ತನಕ ಶಿಕ್ಷಣ ಪಡೆದ ನನಗೆ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮ ಪದವಿ ಶಿಕ್ಷಣ ಕೊಟ್ಟಿದ್ದು ಕರ್ನಾಟಕ. ಗಡಿನಾಡ ಕನ್ನಡಿಗರು ಎನಿಸಿಕೊಂಡಿದ್ದಾಗಿದೆ. ಮಲೆಯಾಳ ಓದೋಕು, ಬರೆಯೋಕು ಕಲಿತಿಲ್ಲ. ಹಾಗಾಗಿ ಅಲ್ಲಿ ಕೆಲಸ ಖಾತ್ರಿ ಇಲ್ಲ. ಇನ್ನೇನು ಅನ್ನೋ ಹೊತ್ತಿಗೆ ಕರಾವಳಿಯ ನಂ.೧ ಕನ್ನಡ ದೈನಿಕ ಉದಯವಾಣಿ ನನ್ನ ಕೈ ಬೀಸಿ ಕರೆದಿತ್ತು. ಹಾಗೆ ಉದಯವಾಣಿಯಲ್ಲಿ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದೆ. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂದೋ ಚಿತ್ರದುರ್ಗಕ್ಕೆ ಹೋಗಬೇಕು ಎಂಬ ಕನಸು ಕಂಡಿದ್ದೆ. ಅಲ್ಲಿ ಇತಿಹಾಸ ಕೇಳಿದ್ದರಿಂದಲೇ ಇರಬೇಕು. ಅದು ಹೀಗೆ ನನಸಾಗತ್ತೆ ಅಂತ ಊಹಿಸಿ ಕೂಡಾ ಇರಲಿಲ್ಲ. ಅಂಥದ್ದೊಂದು ಅವಕಾಶ ನೀಡಿತ್ತು ಕರ್ನಾಟಕದ ನಂ.೧ ದಿನ ಪತ್ರಿಕೆ.
ಅದು ೨೦೦೫ರ ಜುಲೈ ೨೧ರ ಸಂಜೆ ೫.೩೦ರ ಸಮಯ. ಇನ್ನೇನು ಸೂರ್ಯ ಕಂತುವ ಆ ಹೊತ್ತು. ಬಾನು ಕೆಂಪಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಚಿತ್ರದುರ್ಗಕ್ಕೆ ಕಾಲಿರಿಸಿದ ಆ ಕ್ಷಣ. ಆದರೂ ವಿಜಯಕರ್ನಾಟಕದ ದಾಖಲೆಯಲ್ಲಿ ನಾನು ಚಿತ್ರದುರ್ಗಕ್ಕೆ ಕಾಲಿಟ್ಟ ಕ್ಷಣ ಒಂದು ದಿನ ತಡವಾಗಿ ಅಂದರೆ ೨೧ರ ಸಂಜೆ ಆಗಿತ್ತು. ಹ್ಞಾಂ… ಹೇಗಿತ್ತು ಗೊತ್ತಾ ಅಂದು ನಾನು ಕಂಡ ದೃಶ್ಯ ! ಹೀಗೆ ಕಲ್ಲು ಬಂಡೆಗಳ ಏಳುಸುತ್ತಿನ ಕೋಟೆ ಕಣ್ಸೆಳೆದರೆ.. ಬಸ್ ಇಳಿದಾಕ್ಷಣ ಚಿತ್ರದುರ್ಗದ ಇನ್ನೊಂದು ಮುಖ ಹೇಗೆ ಕಂಡಿತ್ತು ಗೊತ್ತಾ ?
ಹೌದು. ಕುಗ್ರಾಮವೊಂದರ ಬಸ್ ನಿಲ್ದಾಣ ಹೇಗಿರಬಹುದು ? ಊಹಿಸಿಕೊಂಡ್ರಾ… ಹಾಗಿತ್ತು. ನಾನು ಅಂದು ಕಂಡ ಚಿತ್ರದುರ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ! ಯಾವಾಗ ಬಿದ್ದು ಹೋಗತ್ತೋ ಎಂಬಂತಿದ್ದ ಹಳೆ ಕಟ್ಟಡ ! ಅಲ್ಲೊಂದು ಹೋಟೆಲ್, ಮಧ್ಯಭಾಗದ ಪ್ರವೇಶ ದ್ವಾರದಲ್ಲಿ ಎಸ್ಟಿಡಿ ಬೂತ್, ಹಣ್ಣಿನ ರಸದ ಅಂಗಡಿ, ನಂದಿನಿ ಹಾಲಿನ ಬೂತ್ ಹೀಗೆ. ಆ ಮೇಲೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿದ್ದ ಎಲ್ಲ ಬಸ್ ನಿಲ್ದಾಣಗಳಂತೆ ಇಲ್ಲೂ ಎಲ್ಲೆಲ್ಲೂ ಗಲೀಜು. ಗುಟ್ಕಾ ತಿನ್ನೋರು, ಬೀಡಾ ತಿನ್ನೋರು ಎಲ್ಲರೂ ಉಗುಳೋದು ಎಲ್ಲೆಂದರಲ್ಲಿ.. ಇನ್ನು ಬಸ್ ನಿಲ್ದಾಣದ ಶೌಚಾಲಯದ ಗಬ್ಬೋ ಅದು ಕಿ.ಮೀ. ದೂರಕ್ಕೆ ರಾಚುತ್ತಿತ್ತು. ಆದರೆ ಚಿತ್ರದುರ್ಗ ಐತಿಹಾಸಿಕ ಕ್ಷೇತ್ರ ಎಂಬುದು ಈ ಎಲ್ಲ ಕೊರತೆಗಳನ್ನೂ ನನ್ನಿಂದ ಮರೆ ಮಾಡಿಸಿತ್ತು. ಹಾಗಾಗಿ ನನ್ನ ಗೆಳೆಯರು, ಹಿತೈಷಿಗಳು ಬಂಧುಗಳು, ಏ ! ನೀನು ನೀರಿಲ್ಲದ ಊರಿಗೆ ಹೋಗ್ತಾ ಇದ್ದೀಯಾ.. ಅಲ್ಲಿ ಜೀವನ ನಡೆಸೋದು ಕಷ್ಟ.. ಒರಟು ಜನ ಎಂದು ಎಷ್ಟೇ ಹೇಳಿದರೂ ಕೇಳದೇ ಚಿತ್ರದುರ್ಗ ಬಸ್ ಏರಿದ್ದೆ.
ಇಷ್ಟ ಪಟ್ಟ ಊರಿಗೆ ಕಾಲಿಟ್ಟ ಸಂಭ್ರಮ ನನ್ನಲ್ಲಿ ಮನೆ ಮಾಡಿತ್ತು. ಹಾಗೆ ವಿಜಯ ಕರ್ನಾಟಕ ಪತ್ರಿಕೆಗೆ ಉಪಸಂಪಾದಕ/ವರದಿಗಾರನಾಗಿ ಕರ್ತವ್ಯಕ್ಕೆ ಸೇರುವ ತವಕ ನನ್ನನ್ನು ಕಾಡಿತ್ತು. ಹಾಗೆ ಐತಿಹಾಸಿಕ ಚಿತ್ರದುರ್ಗವನ್ನು ಕಾಣುವ ಭಾಗ್ಯ ನನ್ನದಾಗಿತ್ತು. ಆಗ ವಿಜಯ ಕರ್ನಾಟಕದ ಕಚೇರಿ ನಗರದ ಹೃದಯಭಾಗದ ಬಿ.ಡಿ.ರಸ್ತೆಯ ರೆಡ್ಡಿ ಬಿಲ್ಡಿಂಗ್ ನಲ್ಲಿತ್ತು. ಎದುರಿಗೇ ಎಸ್‌ಜೆಎಂ ಡೆಂಟಲ್ ಕಾಲೇಜು. ಹಾಗೆ ಬಸ್ ನಿಲ್ದಾಣದಿಂದ ಪತ್ರಿಕೆಯ ಆಗಿನ ಸ್ಥಾನಿಕ ಸಂಪಾದಕರಿಗೆ ದೂರವಾಣಿ ಕರೆ ಮಾಡಿದೆ. ಅವರು ಹೇಳಿದಂತೆ ರಿಕ್ಷಾವೊಂದನ್ನು ಏರಿ ಪತ್ರಿಕೆ ಕಚೇರಿಗೆ ಹೋಗಿದ್ದೆ. ಅಲ್ಲಿಗೆ ಬಂದರೆ ಆ ಕಚೇರಿ ಕೇವಲ ವರದಿಗಾರಿಕೆ, ಜಾಹೀರಾತು ಮತ್ತು ಆಯ ವ್ಯಯಕ್ಕೆ ಸಂಬಂಧಿಸಿದ್ದಾಗಿತ್ತು. ಇನ್ನು ಸಂಪಾದಕೀಯ ಮತ್ತು ಪ್ರಿಂಟಿಂಗ್ ಪ್ರೆಸ್ ಇದ್ದಿದ್ದು ಹತ್ತು ಹನ್ನೆರಡು ಕಿ.ಮೀ. ದೂರದ ಇಂಗಳದಾಳು ಎಂಬಲ್ಲಿ. ವಿಆರ್‍ಎಲ್ ಚೆಕ್ ಪಾಯಿಂಟ್ ಜೊತೆಗಿತ್ತು ಅದು. ಬೆಂಗಳೂರು ದಾವಣಗರೆರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದರೂ ಎಲ್ಲೋ ಮರುಭೂಮಿಯಲ್ಲಿದ್ದಂತೆ ಬಾಸವಾಗತ್ತಿತ್ತು. ಸುತ್ತಲೂ ಗುಡ್ಡ… ಎದುರು ಭಾಗದಲ್ಲಿ ರಿಲಯನ್ಸ್ ಪೆಟ್ರೋಲ್ ಬಂಕ್. ಹೀಗೆ ಪ್ರಾರಂಭವಾದ ಚಿತ್ರದುರ್ಗದ ಜೀವನ ಅಲ್ಲಿನ ಒಂದೊಂದೇ ವಿಶೇಷಗಳನ್ನು ನನ್ನೆದುರು ಅನಾವರಣಗೊಳಿಸತ್ತಾ ಹೋಯಿತು.
ಯಾರೇನೇ ಹೇಳಲಿ ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದು ಕಲ್ಲಿನ ಕೋಟೆ, ಒನಕೆ ಓಬವ್ವ. ಇಂತಹ ಇತಿಹಾಸ ಹೊಂದಿರುವ ಪ್ರದೇಶದ ಕುರಿತು ಮೈನವಿರೇಳಿಸುವ ಇತಿಹಾಸ ಇಲ್ಲದಿದ್ದೀತೇ? ಹಾಗೆ ತಕ್ಷಣ ನೆನಪಾದುದು ತರಾಸು ಅವರ ದುರ್ಗಾಸ್ತಮಾನ ಕಾದಂಬರಿ. ಆದರೆ ಅದನ್ನು ಓದೋಕೆ ಆಗಿರಲಿಲ್ಲ. ಅದನ್ನು ಓದುವ ಅವಕಾಶ ಲಭಿಸಿದ್ದು ೨೦೦೫ರ ನವರಾತ್ರಿ ಸಮಯದಲ್ಲಿ. ಹೌದು ಅಂದು ಆಯುಧ ಪೂಜೆ ನಿಮಿತ್ತ ಕಚೇರಿಗೆ ರಜಾ ಇತ್ತು. ಹಾಗೆ ಅಂದು ಸ್ನೇಹಿತರೊಡಗೂಡಿ ಚಿತ್ರದುರ್ಗದ ಬೆಟ್ಟ ಏರಿದ್ದೆ.
ಹಾಗೆ ಬೆಳಗ್ಗೆ ೯ ಗಂಟೆಗೆ ಸ್ನೇಹಿತರ ಜೊತೆ ಬಿ.ಡಿ.ರೋಡಲ್ಲಿ ಹೆಜ್ಜೆ ಹಾಕುತ್ತಾ ಗಾಂಧಿ ಸರ್ಕಲ್ ಬಳಿ ಹೋಗಿ ಅಲ್ಲಿಂದ ಕೋಟೆ ಬಾಗಕ್ಕೆ ತಿರುಗಿದೆ. ಹೌದು ಅಲ್ಲಿ ಆನೆ ಬಾಗಿಲಿದೆ. ಮುಂದೆ ಸಾಗಿದರೆ ಅಲ್ಲಿ ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮನ ದೇವಾಲಯ.. ಹಾಗೆ ಮುಂದೆ ಹೋದರೆ ಕೋಟೆ ಹೆಬ್ಬಾಗಿಲು ಕಾಣಸಿಗುತ್ತದೆ. ಇನ್ನೊಂದು ಕಡೆಯಿಂದ ಹೋದರೆ ಅಲ್ಲೂ ಬಾಗಿಲುಗಳಿವೆ. ಹೀಗೆ ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ. ರಂಗಯ್ಯನ ಬಾಗಿಲು, ಸಿದ್ದಯ್ಯನ ಬಾಗಿಲು, ಉಚ್ಚಂಗಿ ಬಾಗಿಲು, ಜೋಡು ಬತೇರಿ ಬಾಗಿಲು, ಹನುಮನ ಬಾಗಿಲು, ಗಾರೆ ಬಾಗಿಲು, ಕಾಮನಬಾಗಿಲು ಹೀಗೆ ಪ್ರತಿಯೊಂದನ್ನು ಕೂಡಾ ನೋಡಿದೆ. ಎಲ್ಲ ಸ್ಥಳಗಳನ್ನೂ ಸ್ಮೃತಿ ಪಟಲಕ್ಕೆ ಸೇರಿಸುತ್ತಾ ಹೋದೆ. ಮನೆಗೆ ಬಂದು ತರಾಸು ಅವರ ದುರ್ಗಾಸ್ತಮಾನ ಓದಲು ಕುಳಿತೆ. ನಿಜವಾಗಿಯೂ ಚಿತ್ರದುರ್ಗ ಪ್ರತಿಯೊಂದು ಕಲ್ಲು ಕೂಡಾ ಒಂದೊಂದು ಕತೆ ಹೇಳುತ್ತಿದೆಯೇನೋ ಎಂದು ಭಾಸವಾಗಿತ್ತು. ರಿಯಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು ತರಾಸು ಅವರಿಗೆ…!
ಹ್ಞಾಂ ಇಷ್ಟೆಲ್ಲಾ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿರುವುದು ಯಾಕೆ ಅಂತ್ಲಾ ? ಏನಿಲ್ಲಾ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಚಿತ್ರದುರ್ಗದಲ್ಲಲ್ವೇ ನಡೀತಿರೋದು ! ಹೋಗೋಕೆ ಮುಂಚೆ ದಯವಿಟ್ಟು ದುರ್ಗಾಸ್ತಮಾನ ಓದ್ತೀರಲ್ವಾ ?
(ಕೃಪೆ :http://samshayapishachi.wordpress.com/)
Friday, January 23, 2009
Subscribe to:
Post Comments (Atom)
No comments:
Post a Comment