Friday, January 23, 2009

ಬರುವವರಿಗೆ ಬೆಚ್ಚನೆ ಹಾಸಿಗೆಗಳು ಸಿದ್ಧವಾಗುತ್ತಿವೆ...







ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ !

ಹೌದು ಮೊನ್ನೆ ಸೋಮವಾರ(19/01/2009) ಚಿತ್ರದುರ್ಗ ಬಸ್‌ ನಿಲ್ದಾಣದ ಬಳಿ ಬಂದಾಗ.. ನನ್ನ ಮನಸ್ಸು ಫ್ಲಾಶ್‌ ಬ್ಯಾಕ್ ಹೋಗಿತ್ತು.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿ, ಅಲ್ಲೇ ಪ್ಲಸ್‌ ೨ ತನಕ ಶಿಕ್ಷಣ ಪಡೆದ ನನಗೆ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮ ಪದವಿ ಶಿಕ್ಷಣ ಕೊಟ್ಟಿದ್ದು ಕರ್ನಾಟಕ. ಗಡಿನಾಡ ಕನ್ನಡಿಗರು ಎನಿಸಿಕೊಂಡಿದ್ದಾಗಿದೆ. ಮಲೆಯಾಳ ಓದೋಕು, ಬರೆಯೋಕು ಕಲಿತಿಲ್ಲ. ಹಾಗಾಗಿ ಅಲ್ಲಿ ಕೆಲಸ ಖಾತ್ರಿ ಇಲ್ಲ. ಇನ್ನೇನು ಅನ್ನೋ ಹೊತ್ತಿಗೆ ಕರಾವಳಿಯ ನಂ.೧ ಕನ್ನಡ ದೈನಿಕ ಉದಯವಾಣಿ ನನ್ನ ಕೈ ಬೀಸಿ ಕರೆದಿತ್ತು. ಹಾಗೆ ಉದಯವಾಣಿಯಲ್ಲಿ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದೆ. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂದೋ ಚಿತ್ರದುರ್ಗಕ್ಕೆ ಹೋಗಬೇಕು ಎಂಬ ಕನಸು ಕಂಡಿದ್ದೆ. ಅಲ್ಲಿ ಇತಿಹಾಸ ಕೇಳಿದ್ದರಿಂದಲೇ ಇರಬೇಕು. ಅದು ಹೀಗೆ ನನಸಾಗತ್ತೆ ಅಂತ ಊಹಿಸಿ ಕೂಡಾ ಇರಲಿಲ್ಲ. ಅಂಥದ್ದೊಂದು ಅವಕಾಶ ನೀಡಿತ್ತು ಕರ್ನಾಟಕದ ನಂ.೧ ದಿನ ಪತ್ರಿಕೆ.
ಅದು ೨೦೦೫ರ ಜುಲೈ ೨೧ರ ಸಂಜೆ ೫.೩೦ರ ಸಮಯ. ಇನ್ನೇನು ಸೂರ್ಯ ಕಂತುವ ಆ ಹೊತ್ತು. ಬಾನು ಕೆಂಪಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಚಿತ್ರದುರ್ಗಕ್ಕೆ ಕಾಲಿರಿಸಿದ ಆ ಕ್ಷಣ. ಆದರೂ ವಿಜಯಕರ್ನಾಟಕದ ದಾಖಲೆಯಲ್ಲಿ ನಾನು ಚಿತ್ರದುರ್ಗಕ್ಕೆ ಕಾಲಿಟ್ಟ ಕ್ಷಣ ಒಂದು ದಿನ ತಡವಾಗಿ ಅಂದರೆ ೨೧ರ ಸಂಜೆ ಆಗಿತ್ತು. ಹ್ಞಾಂ… ಹೇಗಿತ್ತು ಗೊತ್ತಾ ಅಂದು ನಾನು ಕಂಡ ದೃಶ್ಯ ! ಹೀಗೆ ಕಲ್ಲು ಬಂಡೆಗಳ ಏಳುಸುತ್ತಿನ ಕೋಟೆ ಕಣ್ಸೆಳೆದರೆ.. ಬಸ್‌ ಇಳಿದಾಕ್ಷಣ ಚಿತ್ರದುರ್ಗದ ಇನ್ನೊಂದು ಮುಖ ಹೇಗೆ ಕಂಡಿತ್ತು ಗೊತ್ತಾ ?
ಹೌದು. ಕುಗ್ರಾಮವೊಂದರ ಬಸ್‌ ನಿಲ್ದಾಣ ಹೇಗಿರಬಹುದು ? ಊಹಿಸಿಕೊಂಡ್ರಾ… ಹಾಗಿತ್ತು. ನಾನು ಅಂದು ಕಂಡ ಚಿತ್ರದುರ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ! ಯಾವಾಗ ಬಿದ್ದು ಹೋಗತ್ತೋ ಎಂಬಂತಿದ್ದ ಹಳೆ ಕಟ್ಟಡ ! ಅಲ್ಲೊಂದು ಹೋಟೆಲ್‌, ಮಧ್ಯಭಾಗದ ಪ್ರವೇಶ ದ್ವಾರದಲ್ಲಿ ಎಸ್ಟಿಡಿ ಬೂತ್, ಹಣ್ಣಿನ ರಸದ ಅಂಗಡಿ, ನಂದಿನಿ ಹಾಲಿನ ಬೂತ್ ಹೀಗೆ. ಆ ಮೇಲೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿದ್ದ ಎಲ್ಲ ಬಸ್‌ ನಿಲ್ದಾಣಗಳಂತೆ ಇಲ್ಲೂ ಎಲ್ಲೆಲ್ಲೂ ಗಲೀಜು. ಗುಟ್ಕಾ ತಿನ್ನೋರು, ಬೀಡಾ ತಿನ್ನೋರು ಎಲ್ಲರೂ ಉಗುಳೋದು ಎಲ್ಲೆಂದರಲ್ಲಿ.. ಇನ್ನು ಬಸ್‌ ನಿಲ್ದಾಣದ ಶೌಚಾಲಯದ ಗಬ್ಬೋ ಅದು ಕಿ.ಮೀ. ದೂರಕ್ಕೆ ರಾಚುತ್ತಿತ್ತು. ಆದರೆ ಚಿತ್ರದುರ್ಗ ಐತಿಹಾಸಿಕ ಕ್ಷೇತ್ರ ಎಂಬುದು ಈ ಎಲ್ಲ ಕೊರತೆಗಳನ್ನೂ ನನ್ನಿಂದ ಮರೆ ಮಾಡಿಸಿತ್ತು. ಹಾಗಾಗಿ ನನ್ನ ಗೆಳೆಯರು, ಹಿತೈಷಿಗಳು ಬಂಧುಗಳು, ಏ ! ನೀನು ನೀರಿಲ್ಲದ ಊರಿಗೆ ಹೋಗ್ತಾ ಇದ್ದೀಯಾ.. ಅಲ್ಲಿ ಜೀವನ ನಡೆಸೋದು ಕಷ್ಟ.. ಒರಟು ಜನ ಎಂದು ಎಷ್ಟೇ ಹೇಳಿದರೂ ಕೇಳದೇ ಚಿತ್ರದುರ್ಗ ಬಸ್‌ ಏರಿದ್ದೆ.
ಇಷ್ಟ ಪಟ್ಟ ಊರಿಗೆ ಕಾಲಿಟ್ಟ ಸಂಭ್ರಮ ನನ್ನಲ್ಲಿ ಮನೆ ಮಾಡಿತ್ತು. ಹಾಗೆ ವಿಜಯ ಕರ್ನಾಟಕ ಪತ್ರಿಕೆಗೆ ಉಪಸಂಪಾದಕ/ವರದಿಗಾರನಾಗಿ ಕರ್ತವ್ಯಕ್ಕೆ ಸೇರುವ ತವಕ ನನ್ನನ್ನು ಕಾಡಿತ್ತು. ಹಾಗೆ ಐತಿಹಾಸಿಕ ಚಿತ್ರದುರ್ಗವನ್ನು ಕಾಣುವ ಭಾಗ್ಯ ನನ್ನದಾಗಿತ್ತು. ಆಗ ವಿಜಯ ಕರ್ನಾಟಕದ ಕಚೇರಿ ನಗರದ ಹೃದಯಭಾಗದ ಬಿ.ಡಿ.ರಸ್ತೆಯ ರೆಡ್ಡಿ ಬಿಲ್ಡಿಂಗ್‌ ನಲ್ಲಿತ್ತು. ಎದುರಿಗೇ ಎಸ್‌ಜೆಎಂ ಡೆಂಟಲ್‌ ಕಾಲೇಜು. ಹಾಗೆ ಬಸ್‌ ನಿಲ್ದಾಣದಿಂದ ಪತ್ರಿಕೆಯ ಆಗಿನ ಸ್ಥಾನಿಕ ಸಂಪಾದಕರಿಗೆ ದೂರವಾಣಿ ಕರೆ ಮಾಡಿದೆ. ಅವರು ಹೇಳಿದಂತೆ ರಿಕ್ಷಾವೊಂದನ್ನು ಏರಿ ಪತ್ರಿಕೆ ಕಚೇರಿಗೆ ಹೋಗಿದ್ದೆ. ಅಲ್ಲಿಗೆ ಬಂದರೆ ಆ ಕಚೇರಿ ಕೇವಲ ವರದಿಗಾರಿಕೆ, ಜಾಹೀರಾತು ಮತ್ತು ಆಯ ವ್ಯಯಕ್ಕೆ ಸಂಬಂಧಿಸಿದ್ದಾಗಿತ್ತು. ಇನ್ನು ಸಂಪಾದಕೀಯ ಮತ್ತು ಪ್ರಿಂಟಿಂಗ್‌ ಪ್ರೆಸ್‌ ಇದ್ದಿದ್ದು ಹತ್ತು ಹನ್ನೆರಡು ಕಿ.ಮೀ. ದೂರದ ಇಂಗಳದಾಳು ಎಂಬಲ್ಲಿ. ವಿಆರ್‍ಎಲ್‌ ಚೆಕ್‌ ಪಾಯಿಂಟ್‌ ಜೊತೆಗಿತ್ತು ಅದು. ಬೆಂಗಳೂರು ದಾವಣಗರೆರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದರೂ ಎಲ್ಲೋ ಮರುಭೂಮಿಯಲ್ಲಿದ್ದಂತೆ ಬಾಸವಾಗತ್ತಿತ್ತು. ಸುತ್ತಲೂ ಗುಡ್ಡ… ಎದುರು ಭಾಗದಲ್ಲಿ ರಿಲಯನ್ಸ್ ಪೆಟ್ರೋಲ್ ಬಂಕ್‌. ಹೀಗೆ ಪ್ರಾರಂಭವಾದ ಚಿತ್ರದುರ್ಗದ ಜೀವನ ಅಲ್ಲಿನ ಒಂದೊಂದೇ ವಿಶೇಷಗಳನ್ನು ನನ್ನೆದುರು ಅನಾವರಣಗೊಳಿಸತ್ತಾ ಹೋಯಿತು.
ಯಾರೇನೇ ಹೇಳಲಿ ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದು ಕಲ್ಲಿನ ಕೋಟೆ, ಒನಕೆ ಓಬವ್ವ. ಇಂತಹ ಇತಿಹಾಸ ಹೊಂದಿರುವ ಪ್ರದೇಶದ ಕುರಿತು ಮೈನವಿರೇಳಿಸುವ ಇತಿಹಾಸ ಇಲ್ಲದಿದ್ದೀತೇ? ಹಾಗೆ ತಕ್ಷಣ ನೆನಪಾದುದು ತರಾಸು ಅವರ ದುರ್ಗಾಸ್ತಮಾನ ಕಾದಂಬರಿ. ಆದರೆ ಅದನ್ನು ಓದೋಕೆ ಆಗಿರಲಿಲ್ಲ. ಅದನ್ನು ಓದುವ ಅವಕಾಶ ಲಭಿಸಿದ್ದು ೨೦೦೫ರ ನವರಾತ್ರಿ ಸಮಯದಲ್ಲಿ. ಹೌದು ಅಂದು ಆಯುಧ ಪೂಜೆ ನಿಮಿತ್ತ ಕಚೇರಿಗೆ ರಜಾ ಇತ್ತು. ಹಾಗೆ ಅಂದು ಸ್ನೇಹಿತರೊಡಗೂಡಿ ಚಿತ್ರದುರ್ಗದ ಬೆಟ್ಟ ಏರಿದ್ದೆ.
ಹಾಗೆ ಬೆಳಗ್ಗೆ ೯ ಗಂಟೆಗೆ ಸ್ನೇಹಿತರ ಜೊತೆ ಬಿ.ಡಿ.ರೋಡಲ್ಲಿ ಹೆಜ್ಜೆ ಹಾಕುತ್ತಾ ಗಾಂಧಿ ಸರ್ಕಲ್ ಬಳಿ ಹೋಗಿ ಅಲ್ಲಿಂದ ಕೋಟೆ ಬಾಗಕ್ಕೆ ತಿರುಗಿದೆ. ಹೌದು ಅಲ್ಲಿ ಆನೆ ಬಾಗಿಲಿದೆ. ಮುಂದೆ ಸಾಗಿದರೆ ಅಲ್ಲಿ ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮನ ದೇವಾಲಯ.. ಹಾಗೆ ಮುಂದೆ ಹೋದರೆ ಕೋಟೆ ಹೆಬ್ಬಾಗಿಲು ಕಾಣಸಿಗುತ್ತದೆ. ಇನ್ನೊಂದು ಕಡೆಯಿಂದ ಹೋದರೆ ಅಲ್ಲೂ ಬಾಗಿಲುಗಳಿವೆ. ಹೀಗೆ ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ. ರಂಗಯ್ಯನ ಬಾಗಿಲು, ಸಿದ್ದಯ್ಯನ ಬಾಗಿಲು, ಉಚ್ಚಂಗಿ ಬಾಗಿಲು, ಜೋಡು ಬತೇರಿ ಬಾಗಿಲು, ಹನುಮನ ಬಾಗಿಲು, ಗಾರೆ ಬಾಗಿಲು, ಕಾಮನಬಾಗಿಲು ಹೀಗೆ ಪ್ರತಿಯೊಂದನ್ನು ಕೂಡಾ ನೋಡಿದೆ. ಎಲ್ಲ ಸ್ಥಳಗಳನ್ನೂ ಸ್ಮೃತಿ ಪಟಲಕ್ಕೆ ಸೇರಿಸುತ್ತಾ ಹೋದೆ. ಮನೆಗೆ ಬಂದು ತರಾಸು ಅವರ ದುರ್ಗಾಸ್ತಮಾನ ಓದಲು ಕುಳಿತೆ. ನಿಜವಾಗಿಯೂ ಚಿತ್ರದುರ್ಗ ಪ್ರತಿಯೊಂದು ಕಲ್ಲು ಕೂಡಾ ಒಂದೊಂದು ಕತೆ ಹೇಳುತ್ತಿದೆಯೇನೋ ಎಂದು ಭಾಸವಾಗಿತ್ತು. ರಿಯಲಿ ಹ್ಯಾಟ್ಸ್‌ ಆಫ್‌ ಹೇಳಲೇ ಬೇಕು ತರಾಸು ಅವರಿಗೆ…!
ಹ್ಞಾಂ ಇಷ್ಟೆಲ್ಲಾ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿರುವುದು ಯಾಕೆ ಅಂತ್ಲಾ ? ಏನಿಲ್ಲಾ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಚಿತ್ರದುರ್ಗದಲ್ಲಲ್ವೇ ನಡೀತಿರೋದು ! ಹೋಗೋಕೆ ಮುಂಚೆ ದಯವಿಟ್ಟು ದುರ್ಗಾಸ್ತಮಾನ ಓದ್ತೀರಲ್ವಾ ?
(ಕೃಪೆ :http://samshayapishachi.wordpress.com/)

Thursday, January 22, 2009

ದಾಖಲೆದೇಣಿಗೆ ಸಂಗ್ರಹ

ದಾಖಲೆದೇಣಿಗೆ ಸಂಗ್ರಹ


75ರ ಸಮ್ಮೇಳನ...... ೭೫ ಮಂದಿ ಗಾಯನ


ಚಿತ್ರದುರ್ಗ: ಅಖಿಲ ಭಾರತ ೭೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿತ್ಯದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆ ಗಾಯನ ಮಾಡಲು ಸುಮಾರು ೭೫ ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು ಅವರೆಲ್ಲರಿಗೂ ಇಲ್ಲಿನ ಜಿಲ್ಲಾ ರಂಗಮಂದಿರಲ್ಲಿ ಗುರುವಾರ ತರಬೇತಿ ಹಮ್ಮಿಕೊಳ್ಳಲಾಗಿತ್ತು.
೭೫ ನೇ ಸಮ್ಮೇಳನವಾದ್ದರಿಂದ ಸಾಂದರ್ಭಿಕವಾಗಿ ಅಷ್ಟೇ ಮಂದಿ ಕಲಾವಿದರನ್ನು ನಾಡಗೀತೆ ಗಾಯನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ೩೫ ಮಂದಿ ಪುರುಷರು ಹಾಗೂ ೪೦ ಮಹಿಳೆಯರು ನಾಡಗೀತೆ ಗಾಯನ ಮಾಡಲಿದ್ದಾರೆ. ಇದಲ್ಲದೆ ‘ಹಚ್ಚೇವು ಕನ್ನಡದ ದೀಪ’ ಹಾಡಿನ ಗಾಯನ ಕೂಡ ಸೇರಿದೆ. ಎಲ್ಲ ೭೫ ಮಂದಿ ಕಲಾವಿದರಿಗೂ ಸಮ್ಮೇಳನ ಸಮಿತಿ ವತಿಯಿಂದ ಉಡುಪು ನೀಡಲಾಗುತ್ತಿದೆ.
ಖ್ಯಾತ ಸಂಗೀತ ನಿರ್ದೇಶಕ ಮೃತ್ಯುಂಜಯಕ ದೊಡ್ಡವಾಡ, ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನಲೆ ಗಾಯಕ ಜ್ಯೋತಿ ರವಿಪ್ರಕಾಶ್, ರಂಗ ನಿರ್ದೇಶಕ ಕೆ.ಪಿ. ಗಣೇಶಯ್ಯ, ಸಂಗೀತ ಶಿಕ್ಷಕ ಸತೀಶ್ಕುಮಾರ್ಜೆಟ್ಟಿ, ತಬಲ ವಾದಕ ಲಕ್ಷ್ಮಿಪತಿ ಅವರುಗಳು ನಾಡಗೀತ ಗಾಯನದ ತರಬೇತಿ ಉಸ್ತುವಾರಿ ವಹಿಸಿದ್ದಾರೆ.
ಟಿ ೬.೧೯ ಲಕ್ಷ ರು. ದೇಣಿಗೆ
ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವ ಪ್ರಕ್ರಿಯೆ ಗುರುವಾರವೂ ಮುಂದುವರಿದಿತ್ತು. ವಿವಿಧ ಸಂಘ ಸಂಸ್ಥೆಗಳು, ಗಣ್ಯರು ಒಟ್ಟು ೬.೧೯ ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ರಸಗೊಬ್ಬರ ಮಾರಾಟ ಸಂಘದಿಂದ ೧.೩೭ ಲಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಒಂದು ಲಕ್ಷ, ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದಿಂದ ೬೬ ಸಾವಿರ, ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ೫೦ ಸಾವಿರ, ಹೈಮಾಸ್ಕ್ ದೀಪ ಅಳವಡಿಕೆಗೆ ಬೆಸ್ಕಾಂನಿಂದ ಒಂದು ಲಕ್ಷ ರು, ಅನುದಾನ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಂದ ೪೦ ಸಾವಿರ, ಹೆಚ್. ಮೋಹನ್ ೨೫ ಸಾವಿರ, ಪೌರ ಕಾರ್ಮಿಕ ಸಂಘದಿಂದ ೨೮ ಸಾವಿರ, ಕನಕ ಪತ್ತಿನ ಸಹಕಾರ ಸಂಘದಿಂದ ಐದು ಸಾವಿರ, ಹಿರಿಯೂರು ಎಪಿಎಂಸಿ ದಲಾಲರಿಂದ ೧೦ ಸಾವಿರ, ಕೆಎಸ್ಎಫ್ಸಿ ನೌಕರರಿಂದ ೧೩,೧೦೦, ಚಿತ್ರಹಳ್ಳಿ ಗ್ರಾ.ಪಂ ೧೦ ಸಾವಿರ, ಸ್ವಿನ್ ಸ್ವಸಹಾಯ ಸಂಘ ಒಕ್ಕೂಟದಿಂದ ೫ ಸಾವಿರ, ಶ್ರೀರಾಂಪುರದ ಗೋಪಾಲಕೃಷ್ಣ ವಾಚನಾಲಯ ಕೇಂದ್ರದಿಂದ ೨೦೧೦೧ ರು. ಕನ್ನಿಕಾ ಪರಮೇಶ್ವರಿ ಪತ್ತಿನ ಸಹಕಾರ ಸಂಘದಿಂದ ೧೦ ಸಾವಿರ ರು.ದೇಣಿಗೆ ಸಮ್ಮೇಳನ ಸಮಿತಿ ಖಾತೆಗೆ ಜಮ ಆಗಿದೆ.
ಟಿ ಪ್ರಚಾರ ಪರಿಕರ
ಸಾಹಿತ್ಯ ಸಮ್ಮೇಳನದ ಪ್ರಚಾರ ಮಾಡಲು ಪರಿಕರಗಳು ಸಮಿತೆ ಕಚೇರಿಗೆ ತಲುಪಿವೆ. ಆರು ಸಾವಿರ ಪೋಸ್ಟರ್, ೫೦೦ ಬ್ಯಾನರ್, ಐದು ಸಾವಿರ ಸ್ಟಿಕರ್, ಆರು ಸಾವಿರ ಫ್ಲಾಗ್, ೧೦ ಸಾವಿರ ಪೆನ್ನುಗಳು ಸರಬರಾಜು ಆಗಿವೆ.
ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉಪ ವಿಭಾಗಾಧಿಕಾರಿ ವೆಂಕಟೇಶ್ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಸಭೆ ಕರೆದು ಎಲ್ಲ ತಾಲೂಕಿಗೆ ವಿತರಣೆ
ಮಾಡಿದರು. ಜಿಲ್ಲೆಯ ಪ್ರತಿ ಗ್ರಾಮಕ್ಕೆ ಒಂದು ಪೋಸ್ಟರ್ ತಲುಪಿಸುವಂತೆ ನಿರ್ದೇಶನ ನೀಡಿದರು.

ಊಟದ ಮೆನು, ನಕ್ಷೆ.... ಒಳಗೊಂಡ ಮಾಹಿತಿ ಕೈಪಿಡಿ

ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 6 ದಿನ ಮಾತ್ರ ಬಾಕಿ ಇದೆ. ಉಳಿದಿದ್ದು ಒಂದು ಕಡೆ ಸಮ್ಮೇಳನದ ಸಿದ್ಧತೆಗಳು ಮುಕ್ತಾಯದ ಹಂತ ತಲುಪಿದ್ದರೆ ಮತ್ತೊಂದು ಕಡೆ ಹೊಸ ಆಲೋಚನಗಳ ಅನುಷ್ಠಾನ ಮಾಡುವ ಕೆಲಸ ಆರಂಭವಾಗಿದೆ.ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಅತಿಥಿಗಳಿಗೆ ಈ ಕೈಪಿಡಿ ಸಿದ್ಧವಾಗಿದೆ. ಸಮ್ಮೇಳನದಲ್ಲಿ ಯಾವ ದಿನ ಏನು ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಏನು ? ಯಾವ ಜಿಲ್ಲೆಯವರಿಗೆ ಎಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ ? ಯಾವ ಬಸ್ಸಿನಲ್ಲಿ ಅವರು ಪ್ರಧಾನ ಹಾಗೂ ಸಮಾನಾಂತರ ವೇದಿಕೆಗೆ ಆಗಮಿಸಬೇಕು, ಪ್ರಮುಖ ಪ್ರವಾಸಿ ತಾಣಗಳು ಯಾವುವು ? ಅಲ್ಲಿಗೆ ಹೋಗಲು ಕಲ್ಪಿಸಲಾದ ಸೌಲಭ್ಯಗಳು ಏನು ? ಎಂಬಿತ್ಯಾದಿ ವಿವರಗಳುಳ್ಳ ಮಾಹಿತಿ ಕೈಪಿಡಿ ಇದು. ಊಟದ ಮೆನು ಪ್ರತಿನಿಧಿಗಳಿಗೆ ನೀಡಲಾಗುವ ಕಿಟ್‌ನಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ. ನಕ್ಷೆಯನ್ನೊಳಗೊಂಡ ಈ ಮಾಹಿತಿ ಕೈಪಿಡಿಯನ್ನು ವಿಶೇಷವಾಗಿ ಮುದ್ರಿಸಲಾಗಿದೆ.

Tuesday, January 20, 2009

ಮಳಿಗೆ ಮಳಿಗೆ ಎಲ್ಲಿ ನೋಡಿದರೂ ಮಳಿಗೆ..

ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಧಾನ ವೇದಿಕೆ ಬಳಿ ನಿರ್ಮಿಸಲಾದ ವ್ಯಾಪಾರಿ ಹಾಗೂ ಪುಸ್ತಕ ಮಳಿಗೆಗಳಿಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದ್ದು ಹೆಚ್ಚುವರಿ ೫೦ ಮಳಿಗೆ ನಿರ್ಮಾಣ ಮಾಡಲು ಸಮ್ಮೇಳನ ಸಮಿತಿ ತೀರ್ಮಾನ ಕೈಗೊಂಡಿದೆ.ಈ ಮೊದಲು ೫೦೦ ಮಳಿಗೆ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ೩೦೦ ಪುಸ್ತಕ ಮಳಿಗೆ ಹಾಗೂ ೨೦೦ ವಾಣಿಜ್ಯ ಮಳಿಗೆಗಳಿಗೆ ಮೀಸಲಿಡಲಾಗಿತ್ತು. ಮಳಿಗೆಗೆ ಅರ್ಜಿ ಸಲ್ಲಿಸಲು ಜ.೧೫ ರಂದು ಕಡೆ ದಿನವಾಗಿದ್ದ ನಿಗದಿತ ಸಮಯದ ಒಳಗೆ ಎಲ್ಲ ಮಳಿಗೆಗಳು ಬುಕ್ ಆಗಿವೆ. ಬೇಡಿಕೆ ಹೆಚ್ಚಿದ ಕಾರಣ ಮತ್ತೆ ೫೦ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.ಟಿ ವಸತಿ ಪೂರ್ಣ: ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳು ಹಾಗೂ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು ೭೫ ಕಡೆ ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಉಸ್ತುವಾರಿಗೆ ೯೬೦ ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅತಿಥಿಗಳು ಹಾಗೂ ಪ್ರತಿನಿಧಿಗಳನ್ನು ಕರೆದೊಯ್ಯಲು ೪೩ ವಾಹನಗಳನ್ನು ಓಡಿಸಲಾಗುವುದು. ವಸತಿ ವ್ಯವಸ್ಥೆ ಪಟ್ಟಿಗೆ ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಗಳ ನೂತನ ಬಂಗಲೆ ಸೇರ್ಪಡೆಯಾಗಿದೆ. ಗಣ್ಯ ಅತಿಥಿಗಳಿಗೆ ಅಲ್ಲಿ ಜಾಗ ಕಾಯ್ದಿರಿಸಲಾಗಿದೆ. ಎಸ್ಸೆನ್ ನಿವಾಸಕ್ಕೆ ಮೆರುಗು:
ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಮುಕ್ತಗೊಳಿಸಿರುವ ಜಿಲ್ಲಾಡಳಿತ ಈ ಸಂಬಂಧ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ರೂಪಾಂತರ ಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ನಿವಾಸಕ್ಕೆ ಸುಣ್ಣ ಬಣ್ಣ ಬಳಿಯಲಾಗುತ್ತಿದ್ದು ಆವರಣದಲ್ಲಿದ್ದ ಕಸತೆಗೆದು ಸ್ವಚ್ಚಗೊಳಿಸಲಾಗಿದೆ.ತಿರುಗಿ ನೋಡದ ಶಾಸಕರು:
ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತೆ ಚಟುವಟಿಕೆಗಳಲ್ಲಿ ಜಿಲ್ಲೆಯ ಯಾರೊಬ್ಬ ಶಾಸಕರು ಕಾಣಿಸಿಕೊಳ್ಳುತ್ತಿಲ್ಲ. ಚಿತ್ರದುರ್ಗದ ಶಾಸಕ ಎಸ್.ಕೆ. ಬಸವರಾಜನ್ ಆರಂಭದಲ್ಲಿಯೇ ಅಪಸ್ವರವೆತ್ತಿ ದೂರ ಸರಿದಿದ್ದರು. ನಗರದೆಲ್ಲೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದರೂ ಅವುಗಳ ಕಡೆ ಕಣ್ಣೆತ್ತಿ ಕೂಡಾ ನೋಡುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಉಳಿದಂತೆ ತಿಪ್ಪೇಸ್ವಾಮಿ, ಚಂದ್ರಪ್ಪ ಮಾತ್ರ ಏನಾದರೂ ಉದ್ಘಾಟನೆಯಿದ್ದಲ್ಲಿ ಮಾತ್ರ ಪ್ರತ್ಯಕ್ಷರಾಗುತ್ತಿದ್ದಾರೆ. ಶಾಸಕ ಎನ್.ವೈ. ಗೋಪಾಲಕೃಷ್ಣ ದೂರದಲ್ಲಿಯೇ ನಿಂತು ವೀಕ್ಷಿಸುತ್ತಿದ್ದಾರೆ.
(ವರದಿ ಕೃಪೆ: ಕನ್ನಡ ಪ್ರಭ)