Monday, January 28, 2008

ಚಳ್ಳಕೆರೆ ತಾಲೂಕಲ್ಲಿ ಕೇತೇದೇವರ ಜಾತ್ರೆ...

ಅಪ್ಪಟ ಜಾನಪದ ಶೈಲಿಯ ಜಾತ್ರೆ
ಕೇತೇದೇವರ ಮುಳ್ಳಿನ ಜಾತ್ರೆಯು...ಕೇದಾರಲಿಂಗೇಶ್ವರನೂ....ಕಾರ್ತ್ಯಾಯನಿ ವ್ರತವೂ....
ಹಾಲುಕಲ್ಲಿನಲಿ ದೇಗುಲ ಕಟ್ಟಿ, ಆಕಾಶದೆತ್ತರ ಗೋಪುರ ನಿರ್ಮಿಸಿ, ಭಂಡಾರ ಕರಗಿಸುತ್ತಾ ಭಕ್ತಿ ಪ್ರದರ್ಶಿಸುವ ಆಧುನಿಕ ಕಾಲದಲ್ಲೂ ಪರಿಶಿಷ್ಟ ಜನಾಂಗವೊಂದು ಅಪ್ಪಟ ಜಾನಪದ ಶೈಲಿಯ ಜಾತ್ರೆಯನ್ನು ಎಲ್ಲಾ ಪ್ರಾಚೀನ ಸಂಪ್ರದಾಯಗಳನ್ನೂ ಉಳಿಸಿಕೊಂಡು ಮೂಲ ಸೊಗಸಿನೊಂದಿಗೆ ಆಚರಿಸುವ ಪರಿಪಾಠ ಇಂದಿಗೂ ಚಳ್ಳಕೆರೆ ತಾಲೂಕಲ್ಲಿ ಅಸ್ತಿತ್ವದಲ್ಲಿದೆ.
ಚಳ್ಳಕೆರೆ ತಾಲೂಕಿನ ಪುರ್‍ಲಹಳ್ಲಿ ಗ್ರಾಮಕ್ಕೆ ೧ ಕಿ. ಮೀ. ದೂರವಿರುವ ವಸಲು ದಿಬ್ಬ ಎಂಬ ೭೦ ಎಕರೆ ಬಯಲು ಪ್ರದೇಶದಲ್ಲಿ ನಡೆಯುವ ಗೊಲ್ಲಜನಾಂಗದ ಆರಾಧ್ಯ ದೈವ ಕೇತೇದೇವರ ಜಾತ್ರಗೆ ಸೋಮವಾರ ಸುಮಾರು ೧ ಲಕ್ಷಕ್ಕೂ ಹೆಚ್ಚು ಜನ ಸಾಕ್ಷಿಯಾಗಲಿದ್ದಾರೆ.
ಮೂಲತಃ ತಾಲೂಕಿನ ಚನ್ನಮ್ಮನಾಗ್ತಿಹಳ್ಳಿ ಗ್ರಾಮದ ಕೇತೇದೇವರನ್ನು ಪುರ್‍ಲಹಳ್ಳಿ ಗ್ರಾಮದ ರಿ.ಸ.ನಂ. ೫೬,೫೭ ನೇ ಜಮೀನಿನಲ್ಲಿರುವ ವಸಲು ದಿಬ್ಬ ಎಂಬ ವಿಶಾಲ ಬಯಲು ಪ್ರದೇಶಕ್ಕೆ ತಂದು ವಿಶೇಷವಾದ ಮುಳ್ಳಿನ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುವುದು ಜಾತ್ರೆಯ ವಿಶೇಷ.
ಜನವರಿ ೩ ರಿಂದ ಆರಂಭವಾಗಿ ಫೆ. ೨ ರವರೆಗೆ ಪೂರಾ ೧ ತಿಂಗಳ ಕಾಲ ನಿಯಮ-ನಿಷ್ಟೆಯಿಂದ ನಡೆಯುವ ಈ ಜಾತ್ರಯಲ್ಲಿ ಅಪ್ಪಿ ತಪ್ಪಿ ಕೂಡಾ ಈ ಜನ ಕಟ್ಟಳೆ ಮೀರುವುದಿಲ್ಲ. ೧೩ ಬುಡಕಟ್ಟುಗಳಿಗೆ ಸೇರಿದ ಈ ಗೊಲ್ಲ ಜನಾಂಗ ದೇವರಿಗೆ ಹುರುಳಿಯಿಂದ ಕೈತೊಳೆಸಿ ಪೂಜೆ ಆರಂಭಿಸಿದರೆಂದರೆ ತಿಂಗಳ ನಂತರ ಮತ್ತೆ ದೇವರಿಗೆ ಹುರುಳಿ ನೈವೇದ್ಯ ಮಾಡಿದ ನಂತರವೇ ಹುರುಳಿ ಸೇವನೆ. ಅಲ್ಲಿಯವರೆಗೂ ಸಂಪೂರ್ಣ ನಿಷಿಧ್ಧ.
ಸುಮಾರು ೭೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಸುಮಾರು ೬ ಸಾವಿರ ಹಳ್ಳಿಗಳಲ್ಲಿರುವ ಗೊಲ್ಲ ಜನಾಂಗದ ಭಕ್ತರು ಜಮಾವಣೆಗೊಂಡು ಕುಲ ದೈವ ಕೇತೇದೇವರಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಹರೆಕೆ ತೀರಿಸಿ ಪುನೀತರಾಗಿ ನವಣೆ, ಹುರುಳಿ ತಿಂದು ವ್ರತ ಬಿಡುವುದು ಜಾತ್ರೆಯ ಮುಖ್ಯ ಭಾಗ.
ಟಿ ಬಾರೆಕಳ್ಳೆಯ ಗುಡಿಯೇ ಇಲ್ಲಿ ಆಲಯ: ಗೊಲ್ಲ ಜನಾಂಗದ ೧೩ ಗುಡಿಕಟ್ಟಿನಲ್ಲಿ ಕೋಣನ ಗೌಡರು, ಬೊಮ್ಮನ ಗೌಡರು ಅಣ್ಣ ತಮ್ಮಂದಿರು ಸೇರಿಕೊಂಡು ೧ ತಿಂಗಳು ಮೊದಲೇ ಜಾತ್ರಗೆ ಸಿದ್ಧತೆ ಆರಂಭಿಸುತ್ತಾರೆ. ಹತ್ತಿ ಮರದ ಕಟ್ಟಿಗೆ ತಂದು ನೆಲಕ್ಕೆ ತಾಗಿಸದಂತೆ ಗುಡಿನಿರ್ಮಿಸುವ ವಸಲು ದಿಬ್ಬಕ್ಕೆ ತರುತ್ತಾರೆ. ಮೂಲ ದೇವಸ್ಥಾನದ ಸುತ್ತ ಕಳ್ಳೆ ಕಟ್ಟುವುದು, ಬಾರೆ ಕಳ್ಳೆ, ತುಗ್ಗಲಿ ಕಟ್ಟಿಗೆ ಕಡಿದು ವಸಲು ದಿಬ್ಬಕ್ಕೆ ತರುವುದು, ನಂತರ ಬಾರೆ ಮತ್ತು ತುಗ್ಗಲಿ ಕಟ್ಟಿಗೆಯಿಂದ ಗುಡಿ ಕಟ್ಟಿ ಕಳಶ ಪ್ರತಿಷ್ಟಾಪನೆ ಮಾಡುವುದು, ಬಂಜಗೆರೆ ಗ್ರಾಮದಿಂದ ವೀರಣ್ಣ ದೇವರನ್ನು, ಬತವಿನ ದೇವರನ್ನು (ವ್ರತದ ದೇವರು) ತರುವುದು, ಆಂಧ್ರದ ಐಗಾರ್‍ಲಹಳ್ಳಿ ಗ್ರಾಮದಿಂದ ತಾಳಿ ದೇವರು (ಎಲ್ಲಾ ಪೆಟ್ಟಿಗೆ ದೇವರು) ತಂದು, ಗುಡಿ ತುಂಬಿಸುವುದು.
ಸುಮಾರು ೨೦ ಅಡಿ ಎತ್ತರಕ್ಕೆ ಮದ್ಯದಲ್ಲಿ ಒಂದು ಕಂಬ ನೆಟ್ಟು ಸುಮಾರು ೧೫ಅಡಿ ಸತ್ತಳತೆಯಲ್ಲಿ ಸುತ್ತ ತುಗ್ಗಲಿ ಕಟ್ಟಿಗೆ ಆಧಾರವಾಗಿ ಕಟ್ಟಿ ಅದರ ಮೇಲೆ ಬಾರೆ ಮುಳ್ಳಿನ ಕಳ್ಳೆ ಹೊದಿಸುತ್ತಾರೆ. ನಂತರ ೧೩ ಬುಡಕಟ್ಟಿನ ಗೌಡರು ೫ ಕಳಶಗಳನ್ನು ೨೦ ಅಡಿ ಎತ್ತರದಲ್ಲಿ ಪ್ರತಿಷ್ಟಾಪಿಸುತ್ತಾರೆ. ಜಾತ್ರಯ ದಿನ ೧೩ ಬುಡಕಟ್ಟಿನ ಪೂಜಾರರು ನೇಮಿಸಿದ ೫ ಈರಗಾರರನ್ನು ಕಳಶ ಕೀಳಲು ಕಳಿಸುತ್ತಾರೆ. ಬರಿ ಮೈಯಲ್ಲಿ, ಬರಿಗಾಲಲ್ಲಿ ಇಳಿಜಾರಾದ ಗುಡಿಯನ್ನು ರಭಸವಾಗಿ ಹತ್ತುವುದೇ ರೋಚಕ. ೫ ಜನರಲ್ಲಿ ಯಾರಾದರು ಕಳಸ ಕೀಳಲು ಅಸಮರ್ಥರಾದರೆ ಅವರಲ್ಲೇ ಯಾರಾದರು ಕಿತ್ತು ತರಬಹುದು. ಬೇರೆ ಯಾರೂ ಗುಡಿ ಹತ್ತುವಂತಿಲ್ಲ. ಇದು ಜಾತ್ರೆಯ ಅಂತಿಮ ಹಂತ.
ಕಳಶ ಕೀಳುವುದಕ್ಕೆ ಮೊದಲು ಗಲಾಟೆಗಳಾಗುತ್ತಿದ್ದವು. ಯಾರು ಕೀಳಬೇಕೆಂಬ ವಿಚಾರದಲ್ಲಿ ಸಮಸ್ಯೆ ತಲೆದೋರಿ ವಿಚಾರ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿತ್ತು, ಗುಡಿಕಟ್ಟಿನ ಮಖಂಡರ ತೀರ್ಮಾನಕ್ಕೇ ಕೋರ್ಟ್ ಒಪ್ಪಿಸಿದ ನಂತರ ಜಾತ್ರೆ ಸಾಂಗವಾಗಿ ನಡೆಯುತ್ತಿದೆ ಎನ್ನುತ್ತಾರೆ ಜನಾಂಗದ ಮುಖಂಡರು..
ಟಿ ಏನಿದು ಕೇತೇದೇವರು: ಚನ್ನಮ್ಮನಾಗ್ತಿಹಳ್ಳಿ ಕೇತೇದೇವರ ಪೂಜಾರಿ ಚಂದ್ರಣ್ಣ ಅವರ ಪ್ರಕಾರ ಕೇತೇದೇವರೆಂಬುದು ಕೇದಾರೇಶ್ವರನಾಗಿದ್ದು ಬುಡಕಟ್ಟು ಜನರ ಬಾಯಲ್ಲಿ ಕೇತೇದೇವರಾಗಿದ್ದಾನೆ. ಬಂಜಗೆರೆ ಈರಣ್ಣ ದೇವರು ಸಹ ಈಶ್ವರನೇ. ಕಳಸ ಕೀಳುವುದಕ್ಕೆ ಎರಡು ದಿನ ಮೊದಲು ಐದು ಪೆಟ್ಟಿಗೆ ದೇವರುಗಳನ್ನು ಸೆರೆಯಲ್ಲಿಡುತ್ತೇವೆ. (ಮರೆಮಾಚಿ ಇಡುವುದು.) ನಂತರ ಎಲ್ಲಾ ಪಂಚ ಪೀಠದ ದೇವರುಗಳನ್ನು ಪೂಜೆಗೆ ಸಜ್ಜುಗೊಳಿಸುತ್ತೇವೆ. ಪಂಚಪೀಠದ ದೇವರೆಂದರೆ ಕೇದಾರೇಶ್ವರ, ಬಾಳೆಹೊನ್ನೂರು, ಉಜ್ಜಿನಿ, ಶ್ರೀಶೈಲ, ಕಾಶಿ ಪೀಠದ ದೇವರುಗಳು. ಬತದ ದೇವರು ಎಂದರೆ ವ್ರತದ ದೇವರು. ಈ ಜಾತ್ರೆಯ ಒಟ್ಟು ಆರಾಧನೆ “ಕಾರ್ತ್ಯಾಯನಿ ವ್ರತ" ಎಂಬುದು ಚಂದ್ರಣ್ಣನವರ ವಿಶ್ಲೇಷಣೆ.
ಒಂದು ತಿಂಗಳ ಕಾಲ ಈ ಜನಾಂಗ ಬೇರೆ ಕುಲಸ್ಥರ ಮನೆಗೆ ಹೋಗುವುದಿಲ್ಲ. ಬೇರೆಯವರನ್ನು ತಮ್ಮ ಮನೆಗೆ ಬಿಟ್ಟುಕೊಳ್ಳುವುದಿಲ್ಲ. ಹೊರಗಡೆ ಏನನ್ನೂ ತಿನ್ನುವುದಿಲ್ಲ. ಕಠೋರ ವ್ರತದಾರಿಗಳಿವರು. ಎಲ್ಲಾ ವಿಚಾರಗಳಲ್ಲೂ ರಾಜಿ ಮಾಡಿಕೊಂಡು ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರುವ ಇಂದಿನ ದಿನ ಮಾನದಲ್ಲಿ ಈ ಬುಡಕಟ್ಟು ಜನಾಂಗ ಇಂದಿಗೂ ಕಟ್ಟುನಿಟ್ಟಿನ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಮಾತ್ರ ಅನುಕರಣೀಯ.

No comments: