ಸಮ್ಮೇಳನದ ಸದ್ದಿಲ್ಲ... ಎಲ್ಲೂ ಮಾತಿಲ್ಲ...
ಕಳೆದ ೧೫ ದಿನಗಳಲ್ಲಿ ನಮ್ಮ ಕೆಲಸಗಳ ನಡುವೆ ನಾವೊಂದಿಷ್ಟು ಸಂಗತಿಗಳನ್ನು ಚರ್ಚಿಸುತ್ತಾ ಕೂತಿದ್ದೆವು. ಅದರ ಜೊತೆಗೆ ನಿಮ್ಮ ಓದಿಗೆ ಹೊಸ ಹೊಸ ಲೇಖನಗಳನ್ನು ಹೊಂಚುವುದಕ್ಕಾಗಿ ಸ್ನೇಹಿತರು, ಹಿರಿಯರನ್ನು ಭೇಟಿ ಮಾಡಿ ಅವರಿಗೊಂದು ಪ್ರೀತಿ ಪೂರ್ವಕ ವಿನಂತಿಯನ್ನು ಸಲ್ಲಿಸಿದೆವು.ಈ ನಡುವೆ ನಾವು ಗಮನಿಸಿದ ಅಂಶಗಳು ಕೊಂಚ ಮಟ್ಟಿಗೆ ನಿರಾಶೆ ಹುಟ್ಟಿಸಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸಮ್ಮೇಳನದ ಬಗ್ಗೆ ಚಿತ್ರದುರ್ಗದಲ್ಲಿ ಸದ್ಯ ಯಾವುದೇ ಸುದ್ದಿಯಿಲ್ಲ. ಲೇಖಕರು, ಸಾಹಿತಿಗಳು ನೆಮ್ಮದಿಯಿಂದಿದ್ದಾರೆ. ಸಾಹಿತ್ಯಕ ಸಂಘಟನೆಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆಯಾಗಿ ಸಮ್ಮೇಳನಕ್ಕೂ ಚಿತ್ರದುರ್ಗಕ್ಕೂ ಸಂಬಂಧವಿಲ್ಲ ಎನ್ನುವ ಹಾಗೇ ಇದೆ.ಇದು ತೀರಾ ಅಸಹನೆಯ ಮಾತು ಎನಿಸಬಹುದು. ಆದರೆ ಇದು ನಿಜ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯೊಬ್ಬರು ಸಾಹಿತ್ಯ ಸಮ್ಮೇಳನ ಘೋಷಣೆಯಾದ ಕೆಲ ದಿನಗಳಲ್ಲೇ ನೇತ್ಯಾತ್ಮಕವಾಗಿಯೇ ಮಾತನಾಡಿದ್ದರು.ಅಷ್ಟಾದರೂ ಆಯಿತು. ಆಮೇಲೆ ಮತ್ತೇನು ಸುದ್ದಿಯಾಗಲಿಲ್ಲ. ಈ ಮಟ್ಟಿನ ನಿರ್ಲಿಪ್ತತೆ ಯಾಕಿರಬಹುದು? ಚಿತ್ರದುರ್ಗ ನೆಲದ ಗುಣವೂ ಕಾರವೆನ್ನಿಸುತ್ತದೆ. ಇಲ್ಲಿ ಅನಗತ್ಯ ಭಾವೋದ್ವೇಗ ಕಾಣಸಿಗುವುದಿಲ್ಲ. ಉತ್ಸಾಹವಿರುತ್ತದೆ. ಅತಿರೇಕದ ಉತ್ಸಾಹ ಕಾಣಿಸುವುದಿಲ್ಲ. ಇದೇ ಕಾರಣವೇ ಸಮ್ಮೇಳನದ ಬಗ್ಗೆ ಸುಮ್ಮನಿರುವುದಕ್ಕೆ?ಇರಲಿಕ್ಕಿಲ್ಲ. ಇನ್ನೂ ಕೆಲವೊಂದು ಅಂಶಗಳು ಇವೆ. ಈಗ ಅಸ್ತಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ತನ್ನ ಅವಧಿ ಪೂರ್ಣಗೊಳಿಸಿದೆ. ಸದ್ಯ ಅದರದ್ದು ಎಕ್ಸ್ ಟೆಂಡೆಡ್ ಅವಧಿ. ಬಹುಶಃ ಇನ್ನೂ ಮೂರ್‍ನಾಲ್ಕು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಏಪ್ರಿಲ್ -ಮೇ ಹೊತ್ತಿಗೆ ಮುಗಿದು ಕೇಂದ್ರ ಸಮಿತಿ ರಚನೆಯಾಗಬಹುದು. ನಂತರ ಜಿಲ್ಲಾವಾರು ಸಮಿತಿಗಳ ರಚನೆಯಾಗಬೇಕು. ಆ ಹೊತ್ತಿಗಾಗಲೇ ಅರ್ಧವರ್ಷವೇ ಕಳೆದು ಹೋಗಿರುತ್ತದೆ. ನವೆಂಬರ್ ಹೊತ್ತಿಗೆ ಸಮ್ಮೇಳನ ನಡೆಸುವುದು ತೀರಾ ಆತುರದ ಕೆಲಸವಾಗುತ್ತದೆ. ಹಾಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಪತ್ರಕರ್ತರು, ಜಿಲ್ಲೆ ಕೆಲ ಹಿರಿಯರು. ಹೌದು ಎನ್ನಿಸುತ್ತದೆ. ಮತ್ತೆರಡು ಅಂಶ ಜಿಲ್ಲೆಯಲ್ಲಿ ಸದ್ಯದ ಅವಧಿಯಲ್ಲಿ ಆದ ಸಾಹಿತ್ಯ ಚಟುವಟಿಕೆಗಳು ಮತ್ತು ಮುಂದೆ ಆಯ್ಕೆಯಾಗಿ ಬರಲಿರುವ ಅಭ್ಯರ್ಥಿ ನಿಭಾಯಿಸಬಲ್ಲ ಜವಾಬ್ದಾರಿ. ಹಾಲಿ ಅಧ್ಯಕ್ಷ ಕೆ.ಎಂ.ವೀರೇಶ್ ಅವರ ಅವಧಿಯಲ್ಲಿ ಆದ ಸಾಹಿತ್ಯಕ ಕಾರ್‍ಯಕ್ರಮಗಳು ಅತ್ಯಲ್ಪ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ತಾಲೂಕಿನ ಗಡಿ ಭಾಗಗಳಲ್ಲೂ ಕಾರ್‍ಯಕ್ರಮಗಳು ಆಗಿದ್ದವು. ಆದರೆ ವೀರೇಶ್ ಅವರ ಕಾರ್‍ಯಕ್ರಮಗಳೆಲ್ಲಾ ಸಹಯೋಗದಲ್ಲೇ ಮುಗಿದವು ಎಂಬ ಆರೋಪವಿದೆ.ತೀರಾ ಅಚ್ಚರಿ ಉಂಟು ಮಾಡುವ ಸಂಗತಿಯೆಂದರೆ ಇಲ್ಲಿಯವರೆಗೆ ಜಿಲ್ಲಾಮಟ್ಟದ ಸಮಿತಿ ರಚನೆಯಾಗಿಲ್ಲ ಎನ್ನುವುದು!!ಸಾಹಿತ್ಯಕವಾಗಿ ಹೆಚ್ಚೇನು ಆಸ್ಥೆಯಿಂದ ಕ್ರಿಯಾಶೀಲರಾಗದೇ ಇರುವ ವೀರೇಶ್ ಅವರೇ ಮುಂದಿನ ಚುನಾವಣೆಯ ಅಭ್ಯರ್ಥಿ. ಇವರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ಅಭ್ಯರ್ಥಿಗಳ ಸಂಖ್ಯೆ ತೀರಾ ವಿರಳ. ಕಳೆದ ಬಾರಿ ಸೋತ ಪತ್ರಕರ್ತ, ಮಾಜಿ ಅಧ್ಯಕ್ಷ ಶ. ಮಂಜುನಾಥ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.ಮತ್ತೊಂದೆಡೆ ಕವಿ, ವಿಮರ್ಶಕ ಹಾಗೂ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆಯವರಿಗೆ ಮಠಾಧೀಶರು, ಗಣ್ಯರು ಬೆಂಬಲ ವ್ಯಕ್ತಪಡಿಸಿ ಸ್ಪರ್ಧಿಸುವುದಕ್ಕೆ ಹೇಳಿದ್ದರೂ ಎಂಬ ಸಂಗತಿಯೂ ತಿಳಿದು ಬಂದಿದೆ. ಬೆನ್ನ ಹಿಂದೆಯೇ ಸಮ್ಮೇಳನದಂಥ ಜವಾಬ್ದಾರಿ ಎದುರುಗಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಯೇ ಸ್ಪರ್ಧಿಸುವುದು ಸರಿ ಎನ್ನುವ ಕಾರಣ ನೀಡಿ ಅವರ ಸಲಹೆಯನ್ನು ನಮ್ರರಾಗಿಯೇ ತಳ್ಳಿ ಹಾಕಿದ್ದಾರೆಂಬ ವರ್ತಮಾನವೂ ದೊರೆತಿದೆ.ಇವರನ್ನು ಬಿಟ್ಟರೆ, ಆಸಕ್ತಿಯಿಂದ ಮಾಡಬಲ್ಲ, ಮತ್ತೊಬ್ಬ ವ್ಯಕ್ತಿ ಚಳ್ಳಕೆರೆ ಪ್ರಾಧ್ಯಾಪಕರಾಗಿರುವ, ಅಭಿರುಚಿ ಸಾಹಿತ್ಯಕ ವೇದಿಕೆ ನಡೆಸಿಕೊಂಡು ಬರುತ್ತಿರುವ ಬಿ.ಪಿ.ವೀರೇಂದ್ರಕುಮಾರ್. ಇವರ ಹೆಸರು ಅಲ್ಲಲ್ಲೇ ಪ್ರಸ್ತಾಪವಾಗಿದೆಯಾದರೂ ವೀರೇಂದ್ರಕುಮಾರ್ ಅವರ ನಿಲುವು ಎಲ್ಲೂ ಪ್ರಕಟವಾಗಿಲ್ಲ.ಚಿತ್ರದುರ್ಗದಲ್ಲಿ ಸಮ್ಮೇಳನವಾಗುವುದು ಎಷ್ಟು ವಿಶಿಷ್ಟವೋ ಅಷ್ಟೇ, ಸಂಕಷ್ಟ, ಸಂದಿಗ್ದ ಸಂಗತಿಗಳಿವೆ.ದುರ್ಗದಲ್ಲಿ ಉದ್ಯಮಿಗಳಿಲ್ಲ. ಆದರೆ ಅಂಥ ಆರ್ಥಿಕವಾಗಿ ಸಬಲರಾಗಿರುವವರನ್ನು ಮುಂದೆ ನಿಲ್ಲಿಸುವ ನಾಲ್ಕು ಮಠಗಳಿವೆ. ಮುರುಘರಾಜೇಂದ್ರ ಮಠ, ಸಿರಿಗೆರೆ ಮಠ, ಸಾಣೆಹಳ್ಳಿ ಮಠ ಮತ್ತು ಕಬೀರಾನಂದ ಮಠ.ಏನೇ ಭಿನ್ನಾಭಿಪ್ರಾಯವಿದ್ದರೂ ಈ ನಾಲ್ಕು ಮಠಾಧೀಶರನ್ನು ವಿಶ್ವಾಸದೊಂದಿಗೆ ಅವರನ್ನು ಒಳಗೊಂಡಂತೆ ಸಮ್ಮೇಳನದ ರೂಪುರೇಷೆಗಳನ್ನು, ಈ ಕುರಿತ ಚರ್ಚೆಗಳನ್ನು ನಡೆಸುತ್ತಾ ಹೋಗುವ, ಆರ್ಥಿಕವಾಗಿ ಸಮ್ಮೇಳನದ ಅಗತ್ಯತೆಗಳನ್ನು ಪೂರೈಸುವ, ಸಂಘಟನೆಯ ಜವಾಬ್ದಾರಿಯನ್ನು ಹೊರಬಲ್ಲ ಸಮರ್ಥ ವ್ಯಕ್ತಿಯ ಅಗತ್ಯವಿದೆ.ಇದೆಲ್ಲಾ ಹೇಗೆ ಸರಿಹೋಗುತ್ತದೆ? ಎಂಬ ಆತಂಕದ ಪ್ರಶ್ನೆ ನಮ್ಮ ಮುಂದೆ. ಅದನ್ನುನಿಮ್ಮಮುಂದಿಟ್ಟಿದ್ದೇವೆ.
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳಂತೆ..ಮುಂದಿನ ಬೆಳವಣಿಗೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ.
No comments:
Post a Comment