ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೂಡಲ ದಿಕ್ಕಿನಲ್ಲಿರುವ ಗಡಿಗ್ರಾಮ ಕೊಳಹಾಳ. ಈ ಊರಿನಿಂದ ಪಕ್ಷಿ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರ್ ದೂರವಿರುವ ತಾಲೂಕು ಕೇಂದ್ರಕ್ಕೆ ನೇರ ಸಂಪರ್ಕವಿಲ್ಲ. ಕೊಳಹಾಳಿನಿಂದ ೧೨ ಕಿಲೋಮೀಟರ್ ಪಡುವಲ ದಿಕ್ಕಿಗೆ ಪ್ರಯಾಣಿಸಿದರೆ ಸಿಗುವ ಹೊರಕೇರಿ ದೇವರಪುರ (ಎಚ್ ಡಿ ಪುರ) ದಿಂದ ೧೦ ಕಿಲೋಮೀಟರ್ ಬಡಗಲು ದಿಕ್ಕಿಗೆ ಹೋಗಿ ಅಲ್ಲಿನ ಚಿತ್ರಹಳ್ಳಿ ಕ್ರಾಸ್ ನಿಂದ ಮತ್ತೆ ೧೪ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಪ್ರಯಾಣಿಸಿ ಹೊಳಲ್ಕೆರೆ ತಲುಪಬೇಕು.
ಗ್ರಾಮದ ಬಡಗಣ ದಿಕ್ಕಿಗೆ ಸಾಲು ಗುಡ್ಡ, ಅವುಗಳ ಆಚೆ ಕಡೆ ಮಗ್ಗುಲಿಗೆ ಚಿತ್ರದುರ್ಗ ತಾಲೂಕಿನ ಗಡಿ. ಮೂಡಲಕ್ಕೆ ಹಿರಿಯೂರು ಮತ್ತು ತೆಂಕಲಿಗೆ ಹೊಸದುರ್ಗ ತಾಲೂಕಿನ ಗಡಿಗಳು ಹೊಂದಿಕೊಂಡಿವೆ. ಈ ಹಳ್ಳಿಗೆ ಕುಡಿಯುವ ನೀರಿನ ಸೇದೋಬಾವಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಥಮಿಕ ಶಾಲೆ ದೊರೆತಿದ್ದು ಸ್ವಾಂತಂತ್ರ್ಯ ಗಳಿಸಿದ ಮೇಲೆಯೇ.
ಕೊಳಹಾಳಿಗೆ ಮೂಡಲ ದಿಕ್ಕಿನಲ್ಲಿ ೧ ಕಿಲೋಮೀಟರ್ ದೂರದ ಗೊಲ್ಲರಹಟ್ಟಿ, ೨ ಕಿಲೋಮೀಟರ್ ಈಶಾನ್ಯಕ್ಕೆ ಎಲಕೂರನಹಳ್ಳಿ, ಬಡಗಣಕ್ಕೆ ೨ ಕಿಲೋಮೀಟರ್ ದೂರದಲ್ಲಿ (ಗುಡ್ಡಾದಾಚೆಗೆ) ಎರೆಹಳ್ಳಿ , ಪಡುವಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ತೇಕಲವಟ್ಟಿ ಮತ್ತು ೬ ಕಿಲೋಮೀಟರ್ ನೈರುತ್ಯಕ್ಕೆ ಕೊಮಾರನಹಳ್ಳಿ ಹತ್ತಿರದ ಹಳ್ಳಿಗಳು.
ಈ ಊರು ಕಟ್ಟಿರುವುದೇ ಮಟ್ಟಿಯ ಮಗ್ಗುಲಲ್ಲಿ. ಮಟ್ಟಿಯ (ಮರಡಿ) ಮೇಲೊಂದು ಗುಂಡವ್ವರ ಮಾರನಾಯ್ಕ ಎಂಬುವವನು ಕಟ್ಟಿಸಿರುವ ಕಾವಲು ಬುರುಜು ಇದೆ. ದರೋಡೆ, ಸುಲಿಗೆಗಾರರು ಇತ್ತ ಬಂದಾಗ ಕಾವಲಿನವರು ಎಚ್ಚರಿಸುತ್ತಿದ್ದರಂತೆ. ಕೊಳಹಾಳಿನ ಪೂರ್ವದ ಹೆಸರು ‘ಕೊಳಪಾಲ' ಎಂದು ೧೦ನೇ ಶತಮಾನದ ಶಿಲಾಲೇಖ ತಿಳಿಸುತ್ತದೆ.
ಕೊಳಹಾಳಿನ ಬಡಗಣಕ್ಕೆ ಎರಡು ಫರ್ಲಾಂಗ್ ದೂರದಲ್ಲಿ ಪಡುವಲಿಂದ ಮೂಡಲಕ್ಕೆ ಇರುವ ದಾರಿಯನ್ನು ‘ತಿರುಪತಿ ಹಾದಿ' ಎಂದು ಕರೆಯುತ್ತಿದ್ದುದು ವಾಡಿಕೆ. ಇದು ಪಡುವಲ ಸೀಮೆಯಿಂದ ನೇರವಾಗಿ ಎಚ್ ಡಿ ಪುರ, ಸಂಗೇನಹಳ್ಳಿ, ತೇಕಲವಟ್ಟಿ, ಎಲಕೂರನಹಳ್ಳಿ, ಕುಂಬಾರಕಟ್ಟೆ ಮಾರ್ಗವಾಗಿ ಐಮಂಗಲವನ್ನು ತಲುಪುತ್ತದೆ.
ಇದೇ ಹಾದಿಯಲ್ಲಿ ಕೊಳಹಾಳಿಗೆ ಒಂದು ಕಿಲೋಮೀಟರ್ ಪಡುವಲಿಗೆ ಇರುವ ಕೊಗೋಮಟ್ಟಿ ಮಗ್ಗುಲಲ್ಲಿದ್ದ ತಿಮ್ಮಪ್ಪನಹಳ್ಳಿ ಹಾಳಾಗಿದೆ. ಈ ಹಳ್ಳಿಗರು ಮಟ್ಟಿ ಪಕ್ಕದಲ್ಲಿ ಹಾಯುವ ತಿರುಪತಿ ಹಾದಿಯಲ್ಲಿ ಬಂದು ಹೋಗುವ ದಾರಿಹೋಕರನ್ನು ಅಲ್ಲಿನ ಹಳ್ಳದಲ್ಲಿ ಸುಲಿಗೆ ಮಾಡಲಾಗುತ್ತಿತ್ತೆಂದೂ, ಇದರಿಂದ ನೊಂದವರ ಶಾಪದಿಂದ ಈ ಊರು ಹಾಳಾಯಿತೆಂದೂ ಈ ಪ್ರದೇಶದ ಜನರ ನಂಬುಗೆ.
ಒಮ್ಮೆ ಕೊಳಹಾಳಿನ ಲಿಂಗಾಯ್ತರ ಸಂಬಂಧಿಗಳು ಕೊಂಡ ರಾಗಿಯನ್ನು ಬಂಡಿಯಲ್ಲಿ ಹೇರಿಕೊಂಡು ಗೂಳಿಹೊಸಳ್ಳಿಗೆ ಸಾಗಿಸುತ್ತಿರುವಾಗ ದಾರಿ ಕಾಯುತ್ತಿದ್ದ ಸುಲಿಗೆಗಾರರ ಕೈಗೆ ಸಿಕ್ಕಿ ಕೊಳಹಾಳಿಗೆ ಕೇಳಿಸುವಂತೆ ಕೂಗುಹಾಕಿ, ತಮ್ಮ ಬವಣೆಯನ್ನು ತಲುಪಿಸಿದ್ದರಂತೆ. ಕೂಗು ಕೇಳಿಸಿಕೊಂಡ ಊರವರು ತಮ್ಮವರಿಗೆ ಆಗಿರಬಹುದಾದ ಸಂಕಷ್ಟದ ಅರಿವಾಗಿ ಓಡೋಡಿ ಹೋಗಿ ಸುಲಿಗೆಗಾರರಿಂದ ತಮ್ಮ ಬಂಧುಗಳನ್ನು ಬಿಡಿಸಿದ್ದರಂತೆ. ಅಂದು ಒಪ್ಪಂದ ಏರ್ಪಟ್ಟು ತಮ್ಮವರು ಈ ಹಾದಿಯಲ್ಲಿ ಬಂದಾಗ ‘ಕೆಂಚಪ್ಪರ ಸಂಬಂಧಿಗಳು' ‘ಕಾಡಪ್ಪರ ಸಂಬಂಧಿಗಳು' ಎಂದು ಹೇಳಿಕೊಂಡು ಪಾರಾಗುತ್ತಿದ್ದರಂತೆ. ಅಂದಿನಿಂದ ಇಲ್ಲಿನ ಮಟ್ಟಿಗೆ ‘ಕೂಗೋಮಟ್ಟಿ' ಎಂದು ಹೆಸರಾಯಿತಂತೆ ಎಂದು ತಿಳಿಸುತ್ತಾರೆ.
ಕೊಳಹಾಳ ಬೆನ್ನಿಗೇ ಆಗ್ನೇಯ ದಿಕ್ಕಿಗಿರುವ ಗುಡ್ಡದ ಸಾಲು ಮತ್ತು ಈ ಸಾಲಿನಲ್ಲಿರುವ ಭೈರಜ್ಜಿ ಕಣಿವೆ, ಈ ಕಣಿವೆಯ ಮೂಲಕ ಮುಂದೆ ನಡೆದರೆ ಸಿಗುವ ಬಸವನಹಳ್ಳ , ಅದರ ಪಕ್ಕದಲ್ಲಿದ್ದ ಕೆನ್ನಳ್ಳಿ ಇವು ಕೊಳಹಾಳಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ಮಿಳಿತಗೊಂಡಿವೆ. ಈ ಊರಿನ ಸುತ್ತಾ ಇರುವ ಕಪ್ಪು ಮಿಶ್ರಿತ ಕೆಂಪುಭೂಮಿ ತುಂಬಾ ಫಲವತ್ತಾಗಿದ್ದು ಕೊಳಹಾಳು ಮತ್ತು ಗೊಲ್ಲರಹಟ್ಟಿಯ ನಿವಾಸಗಳು ವರ್ಷಕ್ಕೆ ಎರಡು ಫಸಲು ಬೆಳೆಯಲು ಸಕಾಲದಲ್ಲಿ ಮಳೆ ಬೀಳುತ್ತಿತ್ತೆಂದು ರೈತರು ಸ್ಮರಿಸುತ್ತಾರೆ.
ಗೊಲ್ಲರಹಟ್ಟಿಯ ನಿವಾಸಿಗಳ ಜೊತೆಗೆ ಕೊಳಹಾಳಿನ ಕೆಲವು ಕುಂಚಿಟಿಗ ಲಿಂಗಾಯ್ತರೂ, ಬೇಡರೂ ಹಿಂದೆ ಕುರಿ ಮೇಕೆ ಸಾಕುತ್ತಿದ್ದರು. ಈಗ ಲಿಂಗಾಯ್ತರು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿದ್ದರೆ, ಗೊಲ್ಲರು ತಮ್ಮ ಕುಲ ಕಸುಬನ್ನು ಬಿಟ್ಟುಕೊಟ್ಟಿಲ್ಲ.
ಪಾರಂಪರಿಕ ಬೆಳೆಗಳಾದ ಗಿಡದಿಮ್ಮಿನ ಜೋಳ, ಕೇಸರಿಜೋಳ (ಮುಂಗಾರು), ನವಣೆ (ಪಶುಗಳ ತಲಮೇವು) ಸಜ್ಜೆ, ರಾಗಿ, ಅಲಸಂದೆ, ತೊಗರಿ , ಹರಳು, ಹುಚ್ಚೆಳ್ಳು ಮತ್ತು ಹಿಂಗಾರಿನಲ್ಲಿ ಬಿಳಿಜೋಳ ಮುಂತಾದವನ್ನು ಬೆಳೆದುಕೊಂಡು ಸುಖವಾಗಿದ್ದ ಜನ, ಇತ್ತೀಚೆಗೆ ಮಳೆ ಬೀಳುವುದರಲ್ಲಿ ಏರುಪೇರಾಗಿ ಈ ಬೆಳೆಗಳಿಗೆ ವಿದಾಯ ಹೇಳುತ್ತಿದ್ದಾರೆ. ತೋಡು ಬಾವಿಗಳು ಬತ್ತಿದವು. ಬೇಕು-ಬೇಕಿಲ್ಲದ ಕಡೆಗಳಲ್ಲೆಲ್ಲಾ ಭೂಮಿ ಕೊರೆದು ಕೊಳವೆ ಬಾವಿ ಮಾಡಿಕೊಂಡು ವಿಳ್ಳೆದೆಲೆ, ಕನಕಾಂಬರ, ಮಲ್ಲೆ, ಮಲ್ಲಿಗೆ., ಸುಗಂಧರಾಜ ಇತ್ಯಾದಿ ಹೂ ಮತ್ತು ಅಡಿಕೆ ತೋಟ ಮಾಡಿಕೊಂಡಿರುವ ಹಲವರು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ಕೊಳಹಾಳು ಪಡುವಲಕ್ಕೆ ಊರಿಗೆ ಹೊಂದಿಕೊಂಡೇ ಇರುವ ಹಿಂದೊಮ್ಮೆ ಕೆರೆಯಾಗಿದ್ದ ೧೨೦ ಎಕರೆ ಕೆರೆಯಂಗಳ ಪಟೇಲರ ವಂಶಸ್ಥರಿಗೆ ಸೇರಿದೆ. ಇವರು ಬಹಳ ಹಿಂದೆಯೇ ಕೊಳಹಾಳನ್ನು ತೊರೆದು ಚಿತ್ರದುರ್ಗ ಸಮೀಪದ ಪಾಲವ್ವನಹಳ್ಳಿಯಲ್ಲಿ ವಾಸಿಸುತ್ತಾ ಕೆರೆಯಂಗಳವನ್ನು ಊರಿನ ಬೇಡ ಮನೆತನಗಳಿಗೆ ಕೋರಿ ಉಳುಮೆಗೆ ನೀಡಿದ್ದರು. ಇತ್ತೀಚೆಗೆ ಸ್ಥಿತಿವಂತರಾದ ಕೊಳಹಾಳಿನ ಕೆಲವರು , ಕೆರೆಯ ಮುಕ್ಕಾಲು ಭಾಗವನ್ನು ಕೊಂಡು ಅಡಿಕೆ ಮಾಡಿಕೊಂಡಿದ್ದಾರೆ.
ಕೊಳಹಾಳಿನ ಸಾಂಸ್ಕೃತಿಕ ಬದುಕಿನಲ್ಲಿ ಊರಿನ ‘ಗದ್ದುಗೆ' ಯವರ ಮನೆತನ ಅತ್ಯಂತ ಹೆಸರುವಾಸಿಯಾದುದು. ಲಿಂಗವಂತರಾದ ಈ ಮನೆತನದ ಪೂರ್ವಿಕರು ಮತ್ತೋಡು ಸಮೀಪದ ನಿರುವುಗಲ್ಲಿನ ಹರಿಹರೇಶ್ವರ ದೇವರ ಪೂಜಾರಿಗಳಾಗಿದ್ದರು. ಮತ್ತೋಡು ದೊರೆ ಹಾಲಪ್ಪ ನಾಯಕನ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತ ಸಮಾರಂಭದ ನಿಮಿತ್ತ ಹೊರಡಿಸಿದ ಮರ್ಯಾದಾ ಶಾಸನದ (ಕ್ರಿ.ಶ ೧೬೫೧) ಅನುಸಾರ ಹಿರಿಯೂರು ತಾಲೂಕು ಮಾರೀಕಣಿವೆಯ (ವಾಣಿ ವಿಲಾಸಪುರ) ಕಣಿವೆ ಮಾರಿಕಾಂಬೆಯ ಪೂಜಾರಿಗಳಾಗಿ ನಿಯೋಜನೆಗೊಳ್ಳುತ್ತಾರೆ. ಮಾರೀಕಣೀವೆ ಸಮೀಪದ ಭರಮಗಿರಿಗೆ ಸ್ಥಳಾಂತರಗೊಂಡು ಕಣಿಮೆ ಮಾರಿಕಾಂಬೆಯ ಮೂಲಕ ಪೂಜಾರಿಕೆ ಕೈಂಕರ್ಯ ಮಾಡುತ್ತಿರುವಾಗ ಕಾಲಾನುಕ್ರಮದಲ್ಲಿ ಭರಮಗಿರಿಯ ಪಾಳೇಗಾರನ ಕಿರುಕುಳ ಸಹಿಸಲಸಾಧ್ಯವಾಗಿ ಒಂದು ಕುಟುಂಬ ದನಕುರಿ ಇತ್ಯಾದಿ ಸಮೇತ ಅಲ್ಲಿಂದ ಗುಳೇಹೊರಟು ಕೊಳಹಾಳಿಗೆ ಬಂದು ಸೇರುತ್ತಾರೆ.
‘ಉತ್ತಮರು' ಊರಿಗೆ ಬಂದುದು ಊರಿನ ಸೌಭಾಗ್ಯವೆಂದು ಭಾವಿಸಿದ ಕೊಳಹಾಳಿನ ಬೇಡ ಜನಾಂಗದವರು ಅವರಿಗೆ ಜಮೀನು ನೀಡಿದ್ದಲ್ಲದೆ ವಾಸಕ್ಕೆ ೪೮ ಕಂಬದ ಒಂದು ದೊಡ್ಡ ಮಾಳಿಗೆ ಮನೆಯನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇಲ್ಲಿ ನೆಲೆಸಿದ ಅವರ ‘ದೊಡ್ಡಮನೆ' ಅಥವಾ ಗದ್ದುಗೆ ಮನೆಯಲ್ಲೇ ಐದಾರು ತಲೆಮಾರಿನ ಬಳಿಕ ಮುಂದೆ ಅವಧೂತನಾದ ಕೆಂಚಪ್ಪ ಆತನ ಅತ್ಯಂತ ಚೆಲುವೆ ಮಗಳು ಭೈರಮ್ಮ ಜನಿಸಿದ್ದು.
ಕೆಂಚಪ್ಪ ಬಾಲಕನಾಗಿದ್ದಾಗಲೇ ಸದಾ ಅನ್ಯಮನಸ್ಕನಾಗಿರುತ್ತಿದ್ದನು. ಉಂಡು ಮಲಗುವ ಕ್ರಿಯೆಗಳು ಇವನಿಗೆ ಯಾಂತ್ರಿಕವಾಗಿದ್ದವು. ಅವನ ವಿಲಕ್ಷಣ ಸ್ಥಿತಿ ನಡವಳಿಕೆಗಳಿಂದ ‘ತಿಕಲ' ‘ಯೇಗಿ' ಎಂದು ಕರೆಯಿಸಿಕೊಂಡಿದ್ದನು. ಹುಚ್ಚಮ್ಮ ಎಂಬ ಕನ್ನೆಯೊಂದಿಗೆ ಲಗ್ನವಾದರೂ ಕೃಷಿ ಬದುಕಿಗಿಂತ ದನಗಾಹಿಯಾಗಿದ್ದವನು. ಇಂಥವನನ್ನು ಹುಡುಕಿಕೊಂಡು ಹೊಸಪೇಟೆ ಸಮೀಪದ ಕಾಳಘಟ್ಟ ಗುಡ್ಡದಲ್ಲಿ ವಾಸಿಯಾಗಿದ್ದ ರುದ್ರಮುನಿ ಅವಧೂತರೆಂಬುವವರು ಕುದುರೆ ಹತ್ತಿಸಿಕೊಂಡು ಬರುತ್ತಾರೆ.
ದನಗಾಹಿ ಕೆಂಚಪ್ಪ ತನ್ನ ಇಷ್ಟ ತಾಣವಾದ ಕೂಗೋಮಟ್ಟಿ ಬಡಗಣ ದಿಕ್ಕಿಗಿರುವ ಗುಡ್ಡದಾಚೆಗಿನ ಕಣಿವೆಯಲ್ಲಿನ ‘ಸಿದ್ದಪನ ವಜ್ರ'ದ ಬಳಿ ಕುಳಿತುಕೊಂಡು ತನ್ನ ಭಾವನಾಲೋಕದಲ್ಲಿ ವಿಹರಿಸುತ್ತಿರುವಾಗ ರುದ್ರಾವಧೂತರು ಈತನ ಎದುರಿಗೆ ಧುತ್ತೆಂದು ಕಾಣಿಸಿಕೊಳ್ಳುತ್ತಾರೆ. ಎದ್ದು ಅವರಿಗೆ ಅಡ್ಡಬಿದ್ದು ಕೆಂಚಪ್ಪನಿಗೆ ನನಗೆ ಹಸಿವಾಗಿದೆ ತಾಯಿ ಸ್ತನದಿಂದಾಗಲಿ ಪ್ರಾಣಿಗಳಿಂದಾಗಲಿ ಹಿಂಡಿ ಕರೆಯದ ಹಾಲನ್ನು ತಂದುಕೊಡು. ಅಲ್ಲಿಯವರೆಗೆ ಇಲ್ಲೇ ಕಾಯ್ತೀನಿ ಎಂದು ಅಪ್ಪಣೆ ಇತ್ತರು.
ಕೆಂಚಪ್ಪ ಕೆಲಕಾಲ ವಿಚಲಿತನಾದರೂ ಗುರುಗಳ ಮನದಿಚ್ಛೆಯನ್ನು ಅರ್ಥಮಾಡಿಕೊಂಡು ಹೋಗಿ ಈಚಲಮರದ ಹಾಲನ್ನು ಗಡಿಗೆ ತುಂಬಾ ಹೊತ್ತು ತರುತ್ತಾನೆ. ಅದನ್ನು ಪಡೆದ ಗುರುಗಳು ಸಾಕಾಗುವಷ್ಟು ಕುಡಿದು ಸಂತೃಪ್ತರಾಗಿ ಉಳಿದುದನ್ನು ಕುಡಿಯಲು ಕೆಂಚಪ್ಪನಿಗೆ ಸೂಚಿಸುತ್ತಾರೆ. ಅದುವರೆಗೆ ಅದೇನೆಂದು ಅರಿಯದಿದ್ದ ಕೆಂಚಪ್ಪ ಈಚಲುಮರದ ಹಾಲನ್ನು ಗಟಗಟನೆ ಕುಡಿದಿದ್ದ. ಗುರುಗಳು ಕೆಲಕಾಲ ಅಲ್ಲೇ ಇದ್ದು ಕೆಂಚಪ್ಪನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿ ಗುರುಭೋದೆ ನೀಡಿ ಹೋಗುತ್ತಾರೆ.
ಅವಾಗಿನಿಂದ ಕೆಂಚಪ್ಪ ತನ್ನವರ, ಕುಲಬಾಂಧವರ ತಿರಸ್ಕಾರಕ್ಕೆ ಈಡಾದರೂ ಅವಧೂತನಾಗುವ ಹಾದಿಯಲ್ಲಿ ಸಾಗುತ್ತಿದ್ದ. ಕಾಲ ಸರಿದಂತೆ ಕೆಂಚಪ್ಪನ ನಡವಳಿಕೆಗಳು ಅತ್ಯಂತ ವಿಲಕ್ಷಣವಾಗುತ್ತಿದ್ದವು. ಈತ ಅನಾಚಾರಿಯೆಂಬ ದೂರು ಚಿತ್ರದುರ್ಗದ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾಗಿದ್ದ ಮರುಘರಾಜೇಂದ್ರ ಸ್ವಾಮಿಗಳ ಮುಂದೆ ಪ್ರಸ್ತಾಪವಾಯ್ತು. ಗುರುಗಳು ಕೆಂಚಪ್ಪನನ್ನು ಪರೀಕ್ಷಿಸಿದ ಬಳಿಕ ಇವನೊಬ್ಬ ಅಸಾಮಾನ್ಯ ಮನುಷ್ಯ ಕಣ್ರಪ್ಪ, ಇವನು ನಿಮ್ಮಂತೆ ಸಾಮಾನ್ಯನಲ್ಲ ಅವನಗೊಡವೆಗೆ ಅವನನ್ನು ಬಿಟ್ಟು ಬಿಡಿ ಯಾರೂ ಪೀಡಿಸಬೇಡಿರಿ ಎಂಬುದಾಗಿ ಆದೇಶಿಸಿದರು.
ಕೆಂಚಪ್ಪನ ಮಗಳು ಕಡು ಚೆಲವೆ ಭೈರಮ್ಮಳೂ ಎಲ್ಲರಂತೆ ತಂದೆಯನ್ನು ಅಲಕ್ಷಿಸಿದ್ದಳು. ಆದರೆ ಈಕೆಯನ್ನು ಪ್ರೀತಿಯಿಂದ ಮತ್ತು ಅವಳಾಡುತ್ತಿದ್ದ ವಯಸ್ಸಿಗಿಂತ ವಿವೇಕದ ಮಾತುಗಳಿಗೆ ತಲೆದೂಗಿ ಭೈರಜ್ಜಿ ಎಂದು ಕರೆಯುತ್ತಿದ್ದರು. ಈಕೆಯ ಚೆಲವಿಗೆ ಮನಸೋತಿದ್ದ ಕೆನ್ನಳ್ಳಿಯ ಬೇಡರ ರಣಹದ್ದಿನಂಥವನೊಬ್ಬ ಭೈರಮ್ಮಳನ್ನು ಉಪಾಯದಿಂದ ತನ್ನ ತೆಕ್ಕೆಗೆ ಹಾಕಿಕೊಂಡ. ಇದರ ಸುಳಿವು ಕೆಂಚಪ್ಪನ ಒಳಗಣ್ಣಿಗೆ ಗೋಚರಿಸಿ ಅವಳಿಗೆ ಮುಂದೊದಗಬಹುದಾದುದನ್ನು ನೊಂದು ನುಡಿದಿದ್ದ. ಭೈರಮ್ಮ ತನ್ನ ಯೌವನದ ಅಮಲಿನಲ್ಲಿ ಕೊಳಾಳು- ಕೆನ್ನಳ್ಳಿಗಳ ಗುಡ್ಡದ ಕಣಿವೆ ಮಾರ್ಗವಾಗಿ ಓಡಾಡುತ್ತಿರುವಾಗ ತನ್ನ ಪ್ರಿಯಕರನ ಹೆಂಡತಿಯ ಹಿಕಮತ್ತಿನಲ್ಲಿ ಕಣಿವೆಯಲ್ಲಿ ಕೊಲೆಯಾದಳು. ಕೊಲೆಗಡುಕರಿಗೆ ‘ನಿಮ್ಗೆ ಹಾಲು ತುಪ್ದಾಗೆ ಕೈತೊಳಸಿದ್ನೆಲ್ರೋ ಹೆಂಗೆ ಮನಸ್ಸು ಬಂತ್ರೋ ನಿಮ್ಗೆ, ಬ್ಯಾಡಕಣ್ರೋ'ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಳಂತೆ. ಅಪರಾಧಿಗಳಲ್ಲೊಬ್ಬನಾದ ನಿಂಗನಾಯ್ಕ ಎಂಬುವವನು ತನಗೆ ಕೋರ್ಟಿನಿಂದ ಶಿಕ್ಷೆಯಾದಾಗ ಹಲುಬಿಕೊಂಡಿದ್ದನಂತೆ ಎಂದು ಅನೇಕ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಭೈರಮ್ಮ ಕೊಲೆಯಾದ ಕಣಿವೆಗೆ ಭೈರಜ್ಜಿ ಕಣಿವೆ ಎಂದು ಹೆಸರಿಡಲಾಗಿದೆ.
ಕೆಂಚಪ್ಪನ ಬದುಕಿನುದ್ದಕ್ಕೂ ಜನ ಬರೀ ಕಿರುಕುಳಗಳನ್ನು ಕೊಟ್ಟರು. ಐಮಂಗಲದ ಗೌಡರು ಒಂದು ಹಗಲು - ರಾತ್ರಿ ಕಂಬಕ್ಕೆ ಕಟ್ಟಿಸಿದ್ದರು. ಮತ್ಯಾರೋ ಹೊಳಲ್ಕೆರೆ ಪೊಲೀಸರಿಗೆ ಈತನ ಮೇಲೆ ಸಮಾಜದ್ರೋಹಿ ಎಂದು ದೂರು ನೀಡಿದರು. ಪೊಲೀಸರು ಸಾಕಷ್ಟು ಸತಾಯಿಸಿ ದೂರನ್ನು ಕೂರ್ಟಿಗೆ ಸಲ್ಲಿಸಿದರು. ಶಿವಮೊಗ್ಗೆಯಲ್ಲಿದ್ದ ಸೆಷನ್ಸ್ ಕೋರ್ಟಿನಲ್ಲಿ ಕೆಂಚಪ್ಪನನ್ನು ಹಾಜರುಪಡಿಸಲಾಯಿತು. ಅಲ್ಲಿಯೂ ಈತನ ವಿಲಕ್ಷಣ ವರ್ತನೆ ನಡದೇ ಇತ್ತು. ವಕೀಲರು ನ್ಯಾಯಾಧೀಶರೂ ‘ಏನು ಘನಂದಾರಿ ಕೇಸಯ್ಯಾ ಇದು, ಇವನು ಸಮಾಜ ದ್ರೋಹಿ ಹೆಂಗೆ ಆಗಿದ್ದಾನು, ತನ್ನ ಪಾಡಿಗೆ ತಾನು ಅರೆ ಹುಚ್ಚನಂತೆ ಇರೋನಿಗೆ ಕೋರ್ಟಿಗ್ಯಾಕೆ ಕರೆತಂದಿರಯ್ಯಾ' ಎಂದು ಪೊಲೀಸರಿಗೇ ಎಚ್ಚರಿಕೆ ನೀಡಿ ಕೆಂಚಪ್ಪನನ್ನು ಖುಲಾಸೆ ಮಾಡಿದ್ದರಂತೆ.
ಹೀಗಾಗಿ ಕೆಲವರು ಕೆಂಚಪ್ಪ ಅವಧೂತನೆಂದು ಗೌರವಿಸುತ್ತಿದ್ದರೆ ಈತ ಎತ್ತಲೋ ನೋಡುತ್ತಾ ವಿಲಕ್ಷಣವಾಗಿ ನಗುತ್ತಿದ್ದನಂತೆ. ಮತ್ತೆ ಕೆಲವೊಮ್ಮೆ ತಾನೂ ಪ್ರತಿಯಾಗಿ ಕೈಮುಗಿದು ಹುಸಿನೆಗೆ ನಗುತ್ತಿದ್ದನಂತೆ.
ನಿರಕ್ಷರಕುಕ್ಷಿಯಾಗಿದ್ದ ಕೆಂಚಪ್ಪ ಚಿದಾನಂದಾವಧೂತರು ರಚಿಸಿರುವ ದೇವಿಪುರಾಣದ ಮೊದಲ ಪದ್ಯ `ಪರಮ ಪರತರ ಪರಮ ಮಂಗಳ ಪರಮ ಪೂರ್ಣ ಜ್ಯೋತಿ ಪರಮಾಕಾಶ ಪರಮೇಶ` ದಿಂದ ಕೊನೆಯ ಮಂಗಳದ ಸಾಲಿನವರೆಗೆ ನಿರರ್ಗಳವಾಗಿ ಪಠಿಸುತ್ತಿದ್ದುದನ್ನು ಅವರ ಮೊಮ್ಮಗ ದಿವಂಗತ ಮೇಷ್ಟ್ರು ಕೆಂಚಪ್ಪ ಕೊಂಡಾಡುತ್ತಿದ್ದರು. ಇದನ್ನು ಇವರ ಮಗ ನಿವೃತ್ತ ಇಂಜಿನಿಯರ್ ಕೆ. ತಿಪ್ಪೇರುದ್ರಪ್ಪ ಈಗಲೂ ಸ್ಮರಿಸುತ್ತಾರೆ. ಭಂಗಿ ಸೊಪ್ಪಿನ ಚಿಲುಮೆ ಎಳೆದು ಭಜನೆಗೆ ಕುಳಿತರೆಂದರೆ ವಾಗ್ದೇವಿ ಕೆಂಚಪ್ಪರ ನಾಲಗೆ ಮೇಲೆ ಕಣೀತಿದ್ಲು ಎಂದು ಕೂಡ ದಿವಂಗತ ಮೇಷ್ಟ್ರು ಕೊಂಡಾಡುತ್ತಿದ್ದರಂತೆ.
ಅವಧೂತ ಕೆಂಚಪ್ಪರ ಸಮಾಧಿ ಇಂದು ಯಾತ್ರಾ ಸ್ಥಳವಾಗಿದೆ. ಪ್ರತಿ ಸೋಮವಾರ ನೂರಾರು ಭಕ್ತರು ಬಂದು ಭಕ್ತಿಯಿಂದ ಅವಧೂತರ ಪೊಜೆ ಮಾಡಿ ಹೆಂಡ, ಮಾಂಸದ ಅಡುಗೆ, ಸಿಹಿ ಅಡುಗೆ ಎಡೆ ಅರ್ಪಿಸುತ್ತಾರೆ. ರೋಗ ರುಜಿನಗಳಿಂದ ಹಿಡಿದು ಗೃಹಕೃತ್ಯದ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪದ ಅಪ್ಪಣೆ ಪಡೆಯುತ್ತಾರೆ. ಈ ಬಿಲ್ವಪತ್ರೆಯ ಅಪ್ಪಣೆಯಲ್ಲಿ ಏನು ಬೀಜ ಬಿತ್ತಲಿ, ಯಾವ ಫಸಲು ಚಂದಗಾದೀತು ಇಂಥಾ ಮನೆಯಿಂದ ಹೆಣ್ಣು ತಂದರೆ ಒಳ್ಳೇದಾದೀತೆ, ಮುಂತಾಗಿಯಲ್ಲದೆ ಕೋರ್ಟು ಖಟ್ಲೆಗಳನ್ನೂ ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಕೆಲವು ಭಕ್ತರು ತಮ್ಮ ಭಾದೆಗಳ ಪರಿಹಾರಕ್ಕೆ ಕೆಂಚಪ್ಪರಿಗೆ ಅತ್ಯಂತ ಪ್ರಿಯವಾಗಿದ್ದ ಹೊಗೆ ಸೊಪ್ಪು, ಎಲೆ ಅಡಿಕೆ ಇತ್ಯಾದಿಗಳನ್ನು ಸಮರ್ಪಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಕಾಳ ಘಟ್ಟದ ರುದ್ರಮುನಿ ಅವಧೂತರು ತಮ್ಮ ಶಿಷ್ಯ ಕೆಂಚಪ್ಪನಿಗೆ ಆರ್ಶೀವಾದ ಮಾಡಿ ನೀಡಿದ್ದ ಕನ್ನಡ ಮೋಡಿ ಲಿಫಿಯ ತಾಳೆಗರಿಗಳ ಕಟ್ಟು, ಪುರಾಣಗಳ ಗಂಟುಗಳನ್ನು ಗದ್ದುಗೆ ಮನೆತನದವರು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಕೊಂಡು ಬರುತ್ತಿದ್ದಾರೆ. ಅವುಗಳೊಳಗೇನಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಅವಧೂತರ ಮರಿಮಗ ಜಿ.ಎಸ್.ಕೆಂಚಪ್ಪ ತಿಳಿಸುತ್ತಾರೆ.
(ಕೃಪೆ: ಕೆಂಡಸಂಪಿಗೆ)
No comments:
Post a Comment