ಪಡವಲ ಗುಡ್ಡದಾಚೆಗೆ ಸಹಸ್ರಾರು ಏಕರೆ ಕಾಯ್ದಿಟ್ಟ ಅರಣ್ಯವಿದೆ. ಹೀಗಾಗಿ 40-50 ವರ್ಷಗಳ ಹಿಂದೆ ಕಾಡಿನಲ್ಲಿ ವಾಸಿಸುತ್ತಿದ್ದ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳವಿತ್ತು. ಆಗಾಗ್ಗ ಗೌನಹಳ್ಳಿಯ ರೈತರ ಒಂದಿಲ್ಲೊಂದು ಆಕಳವೂ, ಎತ್ತೋ, ಎಮ್ಮೆಯೋ ಇವುಗಳಿಗೆ ಆಹುತಿಯಾಗುತ್ತಿದ್ದವು.
ಈ ನಿಸರ್ಗ ಸುಂದರ ಪ್ರದೇಶದಲ್ಲಿ ಭೂಮಾಪನ ಕಾಲಕ್ಕೆ ಮೊದಲು ಮುಂಗರಾಯ ಪಟ್ಟಣ, ನಡವಲಹಳ್ಳಿ, ಶಂಕರನಹಳ್ಳಿ ಎಂಬುವು ಇದ್ದವೆಂಬುದಕ್ಕೆ ಕುರುಹುಗಳಿವೆ. ಮಂಗರಾಯ ಕಟ್ಟಿಸಿರಬಹುದಾದ ಎತ್ತರದ ಕೆರೆಯ ಏರಿ ಈಗಲೂ ಸಾಕ್ಷಿಯಾಗಿದೆ. ಇವು ಹೇಗೆ ನಾಶವಾದವೋ ಗೊತ್ತಿಲ್ಲ. ಈ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಹಿರಿಯರಾರೂ ಈಗ ಬದುಕಿಲ್ಲ.
ಇತ್ತೀಚೆಗೆ ಅಂದರೆ 50 ವರ್ಷಗಳ ಹಿಂದೆ ಇದ್ದ ಕೆನ್ನಳ್ಳಿ (ಕೆಂದಗಾನಹಳ್ಳಿ) ಹಾಳಾಯಿತು. ಈ ಊರು ಎರಡು ಮೂರು ಕಡೆಗಳಲ್ಲಿ ಕಟ್ಟಿದರೂ ಉಳಿಯಲಿಲ್ಲ. ಆ ಹಳ್ಳಿಗರು ದರೋಡೆ, ಲೂಟಿ ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದದ್ದನ್ನು ಗೌನಹಳ್ಳಿಯ ಜನ ಇನ್ನೂ ಮರೆತಿಲ್ಲ.
ಗೌನಹಳ್ಳಿಗೆ ರಸ್ತೆ ಎಂಬ ಸೌಕರ್ಯ ಮತ್ತು ಪ್ರಾಥಮಿಕ ಶಾಲೆಯ ಅನುಕೂಲ ದೊರಕಿದ್ದೇ ದೇಶ ಸ್ವಾತಂತ್ರ್ಯ ಪಡೆದುಕೊಂಡ ವರ್ಷ. ಅಲ್ಲಿಯ ತನಕ ಊರ ನಿವಾಸಿಗಳು ಬಂಡಿ ಜಾಡಿನಲ್ಲಿ ಊರಿನ ಆಗ್ನೇಯ ದಿಕ್ಕಿಗಿರುವ ಕಳ್ಗಣಿವೆ ಮಾರ್ಗವಾಗಿ ಸಂಚರಿಸುತ್ತಿದ್ದರು.
ಗೌನಹಳ್ಳಿಯ ತೆಂಕಲಿಗೆ ಎರಡು ಮೈಲು ದೂರದಲ್ಲಿ ಗುಡಿಹಳ್ಳಿ ಎಂಬ ಗ್ರಾಮ ಬೇಚರಾಕ್ ಆಗಿದ್ದು ಈಗೀಗ ಈ ಭಾಗದಲ್ಲಿ ಜಮೀನು ಹೊಂದಿರುವವರು ವಾಸದ ಮನೆ ನಿರ್ಮಿಸುತ್ತಿದ್ದಾರೆ. ಇಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನವಿದೆ.
ಕಡಿದಾಳ್ ಮಂಜಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೌನಹಳ್ಳಿಗೊಂದು ಹೊಸಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಒಂದು ದಶಕ ಕಾಲ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. 1956-57 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಮರು ಅಂದಾಜು ಇತ್ಯಾದಿಗಳಿಂದ ವಿಳಂಬವಾಗಿ ಕೊನೆಗೆ 1963-64ರ ಹೊತ್ತಿಗೆ ಮುಕ್ತಾಯಗೊಂಡಿತು. ಆರ್. ಸಣ್ಣರಂಗಯ್ಯ ಎಂಬ ದಕ್ಷ ಇಂಜಿನೀಯರ್ ಕೆರೆ ನಿರ್ಮಾಣಕ್ಕೆ ಶ್ರಮಿಸಿದರು.
ಆ ಕಾಲದಲ್ಲಿ ಬಿಳಿಜೋಡಿನಿಂದ ಕೆರೆ ನಿರ್ಮಾಣಕ್ಕೆ ಬಂದಿದ್ದ ಮಣ್ಣು ಒಡ್ಡರು `ಸಂಗ್ಯಾ-ಬಾಳ್ಯಾ` ನಾಟಕವನ್ನು ಅಭಿನಯಿಸಿ, ಗೌನಹಳ್ಳಿಯ ಹಲವಾರು ಕಲಾವಿದರು ಅರಳುವಂತೆ ಮಾಡಿದ್ದರು. ಕೆರೆ ನಿರ್ಮಾಣ ಆರಂಭವಾಗಿ ಮುಕ್ತಾಯವಾಗುವಷ್ಟರಲ್ಲಿ ಮುಗ್ದೆಯಂತಿದ್ದ ಗೌನಹಳ್ಳಿಯ ನಿರುಮ್ಮಳ ಬದುಕು ಹಲವಾರು ಆಕರ್ಷಣೆಗಳಿಗೆ ಪಕ್ಕಾಯಿತು. ಯಾವ್ಯಾವ ಊರುಗಳಿಂದಲೋ ಜನ ವಲಸೆ ಬಂದರು. ಗೌನಹಳ್ಳಿಯ ಸುಮಾರು 25-30 ಹೆಣ್ಣು ಮಕ್ಕಳು ಪರ ಊರಿನ ಗಂಡುಗಳನ್ನು ಲಗ್ನವಾದರು. ಗಂಡಂದಿರ ಸಮೇತ ತೌರೂರಿಗೆ ಹಿಂತಿರುಗಿ ಸರ್ಕಾರಿ ಭೂಮಿಯನ್ನು ( ಆಹಾರ ಕಂಡ ಬಂಜರು) ಬಗರ್ ಹುಕುಂ ಸಾಗುವಳಿ ಮಾಡಿ, ಆನಂತರ ಭೂಮಿಯ ಒಡೆತನ ಪಡೆದುಕೊಂಡರು. ಗ್ರಾಂಟಿನ ಮನೆಗಳನ್ನು ಕಟ್ಟಿಸಿಕೊಂಡು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ವಲಸೆ ಬಂದವರೇ ಪ್ರತ್ಯೇಕವಾಗಿ ಕಟ್ಟಿಕೊಂಡಿರುವ ಕರ್ಲಹಟ್ಟಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿವೆ. ಪರಿಶಿಷ್ಠ ಪಂಗಡದವರೇ ಹೆಚ್ಚಾಗಿರುವ ಗೌನಹಳ್ಳಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮೇಕೆ ಸಾಕಿಕೊಂಡಿದ್ದಾರೆ.
ಹಳೇ ತಲೆಮಾರಿನ ವಾಸಿಗಳಿಗೆ ಮೂಡಲಗುಡ್ಡದ ಕಳ್ಗಣಿವೆ, ಹುಣಸೆಕಣಿವೆ, ಪಟ್ಣಮರಡಿ (ಮಂಗರಾಯನ ಪಟ್ಣ ಇದ್ದ ಸ್ಥಳ) ಸಂತೇಕಣಿವೆ, ಮೂಡಲಗುಡ್ಡ, ನೆಲ್ಲಿಮಲೆಕಲ್ಲು, ಸಿಡಿಲುಬಡಿದ ಕಲ್ಲು, ಗೋಡೆಕಲ್ಲು ಇತ್ಯಾದಿ ಸಾಂಸ್ಕೃತಿಕ ಸಂಬಂಧ ಪಡೆದುಕೊಂಡಿರುವಂತೆ ಪಡುವಲ ಗುಡ್ಡದ ಸಾಲಿನ, ಬಡೆತ್ತಿನ ಕಣಿವೆ, ಹಾಲಗುಡ್ಡ, ರಾಮದಾಸನ ಮರಡಿ, ಗಾಳಿಕೊಲ್ರ, ಎಮ್ಮೆ ತಿರುಗಿದ ನೆತ್ತಿ, ಭೂತನ ಕಣಿವೆ, ಎಮ್ಮೆ ಕಣಿವೆ, ಗೊಲ್ರ ಗುಡ್ಡ, ಜಾಮೇನಪ್ಪನ ಏಣು, ಕಣಿಮೆ ಉದಿ, ಕೋಣನ ಗುಂಡಿ ಮತ್ತು ನೀರಗುಡ್ಡ ಕೂಡಾ ಸಾಂಸ್ಕೃತಿಕ ಸಂಬಂಧ ಉಳಿಸಿಕೊಂಡಿವೆ.
ಮುಂಗಾರಿನಲ್ಲಿ ಬೀಜ ಬಿತ್ತಿದ ಮೇಲೆ ಮತ್ತು ಕೊಯ್ಲು ಮುಗಿದು, ಸುಗ್ಗಿಕಾಲ ಬಂತೆಂದರೆ ಗೌನಹಳ್ಳಿಯ ನೂರಾರು ದನಕರುಗಳು ಎಮ್ಮೆ ಕಣಿವೆ ಮೂಲಕ ಹಾಯ್ದು ಪಡುವಲ ಗುಡ್ಡವನ್ನು ಇಳಿದು ಕಮರದಲ್ಲಿ (ಕಾಯ್ದಿಟ್ಟ ಅರಣ್ಯ), ಬೆಳೆದಿರುವ ಹುಲ್ಲು ಮೇಯಲು ಹೋಗುತ್ತವೆ. ಈ ದಿನಗಳಲ್ಲಿ ದನ-ಕುರಿಗಾಹಿಗಳ ಪಿಳ್ಳಂಗೋವಿಯ ಸದ್ದು, ಕೇಕೆ ಮುಂತಾದವುಗಳಿಂದ ಅರಣ್ಯದಲ್ಲಿನ ಗಿಡಮರಗಳೇ ಲವಲವಿಕೆಯಿಂದ ಇರುವಂತೆ ಭಾಸವಾಗುತ್ತದೆ. ಈ ಮಧ್ಯೆ ಮರ ಕಡಿಯುವ ದುಷ್ಕರ್ಮಿ ನಿಕ್ಕರ್ಮಿಗಳು ಗೋಚರಿಸುತ್ತಾರೆ.
ಅರಣ್ಯ ಇಲಾಖೆಯ, ಗಾರ್ಡ್ ಕರ್ತವ್ಯ ನಿರ್ವಹಿಸುತ್ತಿದ್ದ ಹೀರಾ ಸಿಂಗ್‌ನನ್ನು ಹಳ್ಳಿಗರು ಮರೆತಿಲ್ಲ. ಸೋಮವಾರಗಳಂದು ಮೀಸಲು ಅರಣ್ಯದ ಬದಿಗೆ ಬೆಳೆದಿದ್ದ ಗಿಡಗಳನ್ನು ಸವರಲು ಮತ್ತು ಗುಡ್ಡದ ಬಾದೆ ಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಅದನ್ನು ನಂದಿಸಲು ಊರ ಯುವಕರನ್ನು ಈತ ಕರೆದೊಯ್ಯುತ್ತಿದ್ದ.
ಗೌನಹಳ್ಳಿಗೆ ವಾಸಕ್ಕೆ ಬಂದ ಹಿರಿಯೂರು ಶಾಸಕರಾಗಿದ್ದ ದಿವಂಗತ ಎ. ಮಸಿಯಪ್ಪನವರ ಪ್ರಯತ್ನದಿಂದ ಗಡಿಗ್ರಾಮವಾದ ಗೌನಹಳ್ಳಿಗೆ ೧೯೬೨ರಲ್ಲಿ ವಿದ್ಯುತ್ ಬಂತು. ಇದೇ ಮಹರಾಯರ ಶ್ರೀ ರಂಗನಾಥ ಬಸ್ ಗೌನಹಳ್ಳಿ ಮಾರ್ಗವಾಗಿ ಹಿರಿಯೂರು- ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಮೊದಲು ಗೌನಹಳ್ಳಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಚಿತ್ರದುರ್ಗದ ಮಾರುಕಟ್ಟೆಗೆ ಗಾಡಿಗಳ ಮೂಲಕ (೨೫ ಮೈಲಿ ದೂರ) ರಾತ್ರಿಯೆಲ್ಲಾ ಪ್ರಯಾಸದಿಂದ ಸಾಗಿಸುತ್ತಿದ್ದರು.
ರಾಜಕೀಯ ಸ್ಥಿತ್ಯಂತರಗಳಿಂದ ಹಾಗೂ ಹೊರಗಿನ ಪ್ರಚೋದನೆಗಳಿಂದ ಊರಿನಲ್ಲಿ ತಳ ಊರಿರುವ ಕೆಲವರ ಉಪಟಳದಿಂದ ಊರಿಗೆ ಹುಗ್ಗಿ ಹೊಯ್ದು ಊರು ಕಟ್ಟಿದ ಕುಂಚಿಟಿಗ ಲಿಂಗಾಯ್ತರು ಬಳಲಿದ್ದಾರೆ. ಇವರ ಪರಿಶ್ರಮದಿಂದ ಇತ್ತೀಚೆಗೆ ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆ ಬೆಳೆದು ಕೊಂಚ ನೆಮ್ಮದಿಯತ್ತ ಸಾಗಿರುವ ಹಳ್ಳಿಗರ ಬದುಕಿನಲ್ಲಿ ಗುಡಿಹಳ್ಳಿಯ ಏಳುಕೋಟಿ ಮೈಲಾರಲಿಂಗೇಶ್ವರ, ಗೌನಹಳ್ಳಿಯ ಆಂಜುನೇಯ, ಮಾರಿ ದೈವಗಳ ಪ್ರಭಾವವೇ ಹೆಚ್ಚು. ಮೈಲಾರಲಿಂಗೇಶ್ವರ ಜಾತ್ರೆ ಮಾಡುವವರೇ ಈ ಹಳ್ಳಿಯ ನಿವಾಸಿಗಳು. ಉಗಾದಿಯಿಂದ ಬರುವ ಹುಣ್ಣಿಮೆಗೆ(ಹಟ್ಟಿ ಹುಣ್ಣಿಮೆ ಎಂದು ಖ್ಯಾತಿ) ಜಾತ್ರೆ ಆರಂಭವಾಗಿ ಐದು ದಿನ ನಡೆಯುತ್ತದೆ. ಈ ಸಂದರ್ಭದಲ್ಲಿ ರೈತರು ನೇಗಿಲು ಹೂಡುವುದಿಲ್ಲ.
ಗುಡಿಗೌಡ ಮತ್ತಿತರ ಮುಖಂಡರ ತೀರ್ಮಾನದಂತೆ ‘ದೋಸೆ ಮಾರಿ' ಮತ್ತು ಹಿಟ್ಟಿನ ಮಾರಿ' ಜಾತ್ರೆಗಳು ಗೌನಹಳ್ಳಿಯಲ್ಲಿ ಜರುಗುತ್ತವೆ. ಹಿಟ್ಟಿನ ಮಾರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ದೋಸೆ ಮಾರಿ ಜಾತ್ರೆಯಲ್ಲಿ ಅದು ನಿಷಿದ್ಧ. ಊರ ಗೌಡರ ಪೂಜೆಯೇ ಮುಖ್ಯವಾಗಿರುವ ಎರಡೂ ಜಾತ್ರೆಗಳಲ್ಲಿ ಲಿಂಗಾಯ್ತರಿಂದ ಖರ್ಚು ವಸೂಲಾತಿ ಕಡ್ಡಾಯವಾಗಿದೆ.
(ಕೃಪೆ: ಕೆಂಡಸಂಪಿಗೆ)
No comments:
Post a Comment