ಬಡೆತ್ತಿನ ಕಣಿವೆ - ಭೈರಜ್ಜಿಕಣಿವೆ ಮಧ್ಯೆ ಹರಿಯುತ್ತಿದ್ದ ಬಸವನ ಹೊಳೆ ಮಗ್ಗುಲ ಬಯಲಲ್ಲಿದ್ದ ಕೆನ್ನಳ್ಳಿ ಅಥವಾ ಕಂದಗಾನಹಳ್ಳಿ ತಮ್ಮೆದುರಲ್ಲೇ ಹಾಳಾದುದನ್ನು ಕಂಡಿದ್ದ ಸುಂತರ (ಸುಂಕ- ಸುಂತ ಆಗಿದೆ, ವಂಶಸ್ಥರು ಹಿರಿಯೂರಿನಲ್ಲಿ ಸುಂಕ ವಸೂಲಿ ಮಾಡುತ್ತಿದ್ದರಂತೆ) ದಾಸಣ್ಣ, ಸಂಬಂಧಿ ಮಾರನಾಯ್ಕ ಹಾಳೂರನ್ನು ತೊರೆಯಲು ತೀರ್ಮಾನಿಸಿದ್ದರು. ದಾಸಣ್ಣ ಹೆಂಡತಿ ಹುಚ್ಚಮ್ಮಳ ತೌರೂರು ಮರಡಿಹಳ್ಳಿಗೆ, ಮಾರನಾಯ್ಕ ಚಿತ್ರದುರ್ಗ ಸಮೀಪದ ಇಂಗಳದಾಳಿಗೆ (ಆತನಿಗೂ ಅಲ್ಲಿ ಬಂಧುಗಳಿದ್ದರು) ಹೋಗಿ ನೆಲೆಸಲು ತೀರ್ಮಾನಿಸಿದ್ದರು.
ನಸುಕಿನಲ್ಲಿಯೇ ಹೊರಡಬೇಕೆಂದು ತೀರ್ಮಾನಿಸಿದ್ದರಿಂದ, ರಾತ್ರಿಯೇ ಎರಡು ಎತ್ತಿನ ಬಂಡಿಗಳಿಗೆ ಬೇಕಾಗುವ ಸಾಮಾನು ಸರಂಜಾಮು ತುಂಬಿದ್ದರು. ಮೊದಲ ಕೋಳಿ ಕೂಗುತ್ತಲೇ ಎದ್ದು ಕೊನೆ ಅಡಿಗೆ ಮಾಡಿ ಆಡಿನ ಹಾಲು, ಆಕಳ ಹಾಲಿಗೆ ಒಂದೆರಡು ಪಾವು ಬೆಳ್ಳುಳ್ಳಿ - ಒಂದೆರಡು ಮೆಣನಸಿನಕಾಯಿ ಕೆಂಡದ ಮೇಲೆ ಬಿಸಿ ಮಾಡಿ ಹಾಕಿ ಕಿವಿಚಿಕೊಂಡು ಒಂದೊಂದು ಬಿಸಿ ಬಿಸಿ ರಾಗಿ ಮುದ್ದೆ ಉಂಡ ಶಾಸ್ತ್ರ ಮಾಡಿದ್ದರು. ಹಾದಿ ಮಧ್ಯೆ ಮಕ್ಕಳಿಗೆಂದು ಬುತ್ತಿಯನ್ನೂ ಕಟ್ಟಿದ್ದರು, ಹೆಂಗಸರು.
ಮಲಗಿದ್ದ ಮಕ್ಕಳನ್ನು ಏಳಿಸಿ ಮುಖಕ್ಕೆ ನೀರೆರಚಿ ಅವಕ್ಕೂ ತಿನ್ನೋವಷ್ಟು ಮುದ್ದೆ ತಿನ್ನಿಸಿ ಹೆಂಗಸರು, ಮಕ್ಕಳನ್ನು ಬಂಡಿಯಲ್ಲಿ ಕೂರಿಸಿ, ಖಾಲಿ ಮನೆಗಳಿಗೆ ಕಾಡು ಮಿಕಗಳು ಸೇರಬಾರದಲ್ಲ ಎಂದು ಬೀಗ ಹಾಕಿದ್ದರು. ಬೆಳೆದ ಗಂಡು ಮಕ್ಕಳು ಆಕಳು ಮೇಕೆಗಳನ್ನು ನಡೆಸಿಕೊಂಡು ಮುಂದೆ ಮುಂದೆ ನಡೆದರೆ, ದಾಸಣ್ಣ, ಮಾರನಾಯ್ಕ ಮತ್ತು ಹೆಂಗಸರು ಕಟ್ಟಿ ಬೆಳೆದ ಊರು ತೊರೆಯಬೇಕಲ್ಲಾ ಎಂಬ ಅವ್ಯಕ್ತ ಪ್ರೀತಿಯಿಂದ ಒತ್ತಿಬಂದ ಕಣ್ಣೀರನ್ನು ಒರೆಸಿಕೊಂಡು ಹೊರಟರು. ಮೂಡಲಲ್ಲಿ ಕೆಮ್ಮೋಡಗಳು ಹೊತ್ತು ಮೂಡುತ್ತಿರುವುದನ್ನು ಸೂಚಿಸುತ್ತಿದ್ದವು.
ಮೂಡಲ ಗುಡ್ಡದ ಸಂತೆ ಕಣಿವೆಯಲ್ಲಿ ಕಗ್ಗಲ್ಲ ದಾರಿಯಲ್ಲಿ ಒಗ್ಗಾಲಿ, ಗುಂಡಿ ಗೊಟರುಗಳಲ್ಲಿ ಬಂಡಿಗಳನ್ನು ಹತ್ತಿಸಿ, ಕಣಿವೆ ಭೂತಪ್ಪನಿಗೆ ಅಡ್ಡ ಬಿದ್ದು, ದೂರದಲ್ಲಿ ಕನ್ನಳ್ಳಿ ದಿಕ್ಕಿಗೆ ಕಾಣುತ್ತಿದ್ದ ಭೂಚಕ್ರದ ಕೊಡೆಯಂತಿದ್ದ ದೊಡ್ಡ ಕಮರದ ಮರ, ಹಾಲಗುಡ್ಡ, ಭೈರಜ್ಜಿಕಣಿವೆ, ರಾಮದಾಸನ ಮರಡಿ ಮುಂತಾದುವನ್ನು ನಿರ್ವಿಕಾರ ಮನೋಭಾವದಿಂದ ನೋಡಿ, ಬಂಡಿಗಳನ್ನು ಬಡಗಲು ದಿಕ್ಕಿಗೆ ತಿರುಗಿಸಿದರು.
ಆ ತನಕ ದಿಕ್ಕೆ ತೋಚದೆ ಶೂನ್ಯ ಮನಸ್ಕರಾಗಿ ಬಂಡಿ ಹಿಂದೆ ನಡೆಯುತ್ತಿದ್ದ ದಾಸಣ್ಣ, ಮಾರನಾಯ್ಕರಿಗೆ ಹಾಳಾದ ಊರು ಬಿಟ್ಟು ನೆಂಟರಿಷ್ಟರ ಊರುಗಳಿಗೆ ಹೋಗುವ ಪರಿಸ್ಥಿತಿ ಬಂದುದಕ್ಕೆ ನಿರಾಶೆ, ವ್ಯಾಕುಲ ಮನಸ್ಸು ತುಂಬಿದ್ದವು. `ಹೆಂಗಾದ್ರೂ ಮಾಡಿ ಬದುಕಬೇಕು, ಇದಕ್ಕೆ ಅಂಜಿದರೆ ಅವನು ಹೇಡಿ` ಅನ್ನುವ ಭಾವನೆಕೂಡ ಇಬ್ಬರಲ್ಲೂ ಮೂಡಿತ್ತು. ಆದರೂ `ಪರಸ್ಥಳ ಪರಮಕಷ್ಟ` ಅನ್ನೋ ಗಾದೆ ಮಾತಿನಂತೆ ಏನೇನು ಅನುಭವಿಸಬೇಕೋ ಎಂದು ಯೋಚಿಸುತ್ತಿದ್ದರು.
`ಎಣ್ತಿ ಅಣ್ಣಂದಿರು ದೇವರಂಥ ಮನುಷ್ಯರು, ಊರು ಬಿಟ್ಟು ಬರ್ರಿ ಅಲ್ಲೇನೈತೇ ಅಂತ ಇದೀರಾ` ಅಂತ ನಾಕೈದು ಬಾರಿ ವಿವೇಕದ ಮಾತು ಹೇಳಿದ್ರು. ಆದ್ರೂ ಏಸು ದಿನಾ ನೆಂಟರ ಮನೆಯಾಗಿರೋದು. ಬ್ಯಾರೆ ಮನೆ ಕಟ್ಟಿಕೋಬೇಕು. ಕೂಲಿ ನಾಲಿ ಮಾಡಿ ಮರುವಾದೆಯಿಂದ ಬಾಳಬೇಕು ಅನ್ನೋ ವಿಚಾರ ಮಾಡಿದ್ದರು.
ಆಕಳು ಆಡಿನ ಹುಡುಗರು ಹಿಂದೆ ಉಳಿದಿದ್ದರು. ಅವರನ್ನು ಕೂಡಿಕೊಳ್ಳುವ ಸಲುವಾಗಿ ಬಂಡಿಗಳನ್ನು ಕರೇ ಚಿಕ್ಕಯ್ಯನ ಕೊಪ್ಪದ ಹಳ್ಳದ ಬಳಿ ನಿಲ್ಲಿಸಿ ಎತ್ತುಗಳಿಗೆ ನೀರು ಕುಡಿಸಲು, ಬಂಡಿ ನಡೆಸುತ್ತಿದ್ದವರಿಗೆ ತಿಳಿಸಿ ಹಿಂದೆ ಉಳಿದರು. ದಾಸಣ್ಣನ ಮಗ ಓಬಳೇಶಿ ಗಾಡಿ ಕುಲುಕಾಟಕ್ಕೆ ರೋಸಿ ಬಂಡಿಯಿಂದ ನಡೆದು ಬರುತ್ತಿದ್ದವರನ್ನು ಕೂಡಿಕೊಂಡಿದ್ದ. `ಬಾಳ ದೂರ ನಡೀಬೇಕಪ್ಪಾ, ಕಾಲು ನೋವು ಬರುತ್ತೆ ಹೋಗಿ ಬಂಡಿ ಹತ್ಕೋ` ಅಂದರೂ ಕೇಳದೆ ಅವರ ಜೊತೆಯಲ್ಲಿಯೇ ನಡೆದಿದ್ದ.
ಆವಾಗ ಮಾರನಾಯ್ಕ `ಮಾಮಾ ಊರಂತೂ ಹಾಳಾಗೋಯ್ತು. ದೇವರ ಶಾಪಾನೇ ಇರಬೇಕು ಒಂದು ನರಪಿಳ್ಳೆ ಕೂಡ ಉಳೀಲಿಲ್ಲ. ಮುಂದೆ ಹೊಲ- ಮನೆಗತಿ ಹೆಂಗೆ` ಎಂದು ತನ್ನ ಸಂಕಟವನ್ನು ದಾಸಣ್ಣನ ಮುಂದಿಟ್ಟ. `ಈಗ ಮೂರು ವರ್ಸಾತು ಮಳೆ ಹನಿ ಅಂಬೋದು ನೆಲ ಮುಟ್ಟಿಲ್ಲ. ಮುಂದೇ ಕಾಲಕ್ಕೆ ಸರಿಯಾಗಿ ಬರುತ್ತೆ ಎಂಬ ನಂಬ್ಕೆ ಸಾಲ್ದು. ಸಾಕಿದ ಮ್ಯಾಕೆ ಮಾರಿಕೊಂಡು ಏಸು ದಿನ ಬದುಕಾಕಾದೀತು. ನೋಡ ಅಂಥ ಸುಭಿಕ್ಷದ ಕಾಲ ಬಂದ್ರೆ ಗೌನಳ್ಳೀಗ್ಯಾರಾನ ಕೋರಿಗೆ ಮಾಡ್ಯಾರು` ಮುಂದೆ ಹೆಂಗೋ, ಇರುವ ಎಂಬತ್ತು ಕೋಟಿ ಸಾಕೋನು ಅವನು ಅದಾನಲ್ಲಾ, ಏನಾದ್ರೂ ದಾರಿ ತೋರುಸ್ತಾನೆ` ಅಂದು ದಾಸಣ್ಣ ದಾರೀ ಕಡೆ ನೋಡಿದ. ದೂರದಲ್ಲಿ ಹುಡುಗರು ಮೇಕೆಗಳನ್ನು ಕರೆಯುತ್ತಿರುವ ಸಿಳ್ಳು, ಮುಂತಾದವು ಕೇಳಿಸುತ್ತಿದ್ದುವು.
`ದೇವ್ರೂ ಅಂಬೋನು ಇದಾನೇ ಅಂತೀಯಾ. ಇದ್ದಿದ್ರೇ ಮಳೆ ಯಾಕೆ ಮುಗಿಲು ಸೇರ್‌ಕೊಂಡ್ವೋ ನಾವು ಕೆನ್ನಳ್ಳಿ ಯಾಕೆ ಬಿಡಬೇಕಾಗಿತ್ತು` ಮಾರಯ್ಯನ ಹತಾಶೆಯ ಪ್ರತಿಕ್ರಿಯೆ. ನೀನೇ ನೋಡಿದ್ಯೆಲ್ಲಪ್ಪ ಮಾಡಬಾರದ್ದು ಮಾಡಿದ್ರೆ ಆಗಬಾರದು ಆಗುತ್ತೆ, ಅನ್ನೋದಕ್ಕೆ ಸಾಕ್ಷಿಯಂಗೆ ತಾವು ಸಾಯೋದಲ್ದೇ ಇಡೀ ವಂಶವೇ ನಿರ್ವಂಸ ಆಗೋದ್ವು ಊರಿಗೆ ಮುನಿ ನೆಳ್ಳು ಬಿದ್ದತೇ ಅಂತ ಒಂದಲ್ಲ ಎಳ್ಡುಕಡೆ ಊರು ಕಟ್ಗಂಡ್ರು ಅದ್ರೆ ತಮ್ಮ ಅನ್ಯಾಯ, ಅತ್ಯಾಚಾರ ಬಿಡಲಿಲ್ಲ. ಕಾಣದೋರ ಕುರಿ, ಮ್ಯಾಕೆ ಮೆಯ್ಯಾಕೆ ಹಳ್ಳದ ನೀರಿಗಂತ ಇತ್ಲಾಗೆ ಬಂದ್ರೆ ಅವನ್ನೇ ಹಿಡಿಕಂಡು ಕೊಯ್ಕುಂಡು ತಿಂದ್ರು. ಯಾರಾದ್ರೂ ದಾರಿ ಹೋಕರು ಬಸವನಹಳ್ಳದ ಕಡೇಲಿಂದ ತ್ರಿಶೂಲ್ಡಳ್ಳದ ಕಡೇಲಿಂದ ಬಂದ್ರೆ ಬಚ್ಚಿಟ್ಟುಕೊಂಡು ಹಳ್ಳದಾಗೆ ಹಿಡಕಂಡು ಅವರ ಹತ್ತಿರ ಇದ್ದಿದ್ದನ್ನೆಲ್ಲಾ ದೋಚುತ್ತಿದ್ದರು.
ದಾಸಪ್ಪನ ಬಂಡಿ ನೆಂಟರ ಮನೆಯಂಗಳದಲ್ಲಿ ಹೋಗಿ ನಿಂತಾಗ ಪಡುವಲಲ್ಲಿ ಹೊತ್ತು ಎರಡು ಮಾರು ಅಂತರದಲ್ಲಿತ್ತು. ಆಡು, ಆಕಳ ಸಮೇತ ಬಂದಿಳಿದ ಬೀಗರ ಕುಟುಂಬವನ್ನು ಮರಡಿಹಳ್ಳಿಯವರು ಸಂತೈಸುವ ರೀತಿಯಲ್ಲೇ ಸ್ವಾಗತಿಸಿದರು. ಅವರ ಮನೆಯ ಓಲೆಗಳು ಧಗ್ಗನೆ ಹೊತ್ತಿಕೊಂಡವು
ಸಂಜೆ ಆಕಳು, ಎಮ್ಮೆ ಕರ -ಮರೀನೆಲ್ಲಾ ದನದ ಕೊಟ್ಟಿಗೇಲಿ ಕಣ್ಣಿ ಹಾಕಿ ಕದಾ ಮುಂದಕ್ಕೆಳಕೊಂಡು ಬಂದ ಎಂಜಪ್ಪ ಗೌಡ್ರಿಗೆ ಅಟ್ ಮಾಳಿಗೆ ಜಗುತಿ ಮ್ಯಾಲೆ ಕುಂತುಕೊಂಡಿದ್ದ ಎಂಟತ್ತು ವರ್ಷ ಪ್ರಾಯದ ಹುಡುಗನ್ನ ನೋಡಿ ಆಶ್ಚರ್ಯವಾಯಿತು. ಇವನನ್ನ ಈ ಮುಂಚೆ ಎಲ್ಲೂ ಕಂಡ ನೆನೆಪಿರಲಿಲ್ಲ. ಹಾಗಾಗಿ ‘ಯಾವೂರಪ್ಪ, ಹೆಸರೇನು' ಎಂದು ವಿಚಾರಿಸಿದರು. ಹುಡುಗ ಬಾಯಿ ಬಿಡಲಿಲ್ಲ. ಬದಲು ಕೆಳ ಮಾರೇ ಮಾಡಿ ಕುಳಿತಿದ್ದವನು ಎದ್ದು ನಿಂತ. ಮೂಕಗೀಕ ಇರಬೇಕೆಂದುಕೊಂಡು ಮನೆ ಒಳಗೆ ಕರೆದರು. ಹುಡುಗ ಗೌಡರನ್ನು ಹಿಂಬಾಲಿಸಿದ್ದ.
ಎಂಜಪ್ಪಗೌಡರು ಆಕಳು, ಎಮ್ಮೆ ಹಾಲು ಕರೆಯಲು ಕರುಗಳನ್ನು ಊಡಲು ಬಿಟ್ಟು , ಅವುಗಳ ತಾಯಂದಿರು ಹಾಲು ಇಳಿಸಿದಾಗ ಕರುಗಳನ್ನು ಗೂಟಕ್ಕೆ ಕಣ್ಣಿ ಹಾಕಲು ಮುಂದಾದಾಗ ಹುಡುಗ ಕರುಗಳನ್ನು ಅವುಗಳ ಅಮ್ಮಂದಿರ ಮುಂದೆ ಹಿಡಿದು ನಿಂತು ಅವು ಮಕ್ಕಳನ್ನು ನೆಕ್ಕುತ್ತಾ ಚೊಂಬು ತುಂಬಾ ಹಾಲು ನೀಡಿದ್ದವು. ಹುಡುಗನಿಗೆ ಕರೆದುಕೊಟ್ಟಿದ್ದರು. ಹೊದೆಯಲು ಕಂಬಳಿ ನೀಡಿದ್ದರು, ಗೌಡರ ಮನೆಯವರು.
ಅಟ್‌ಮಾಳಿಗೇಲಿ ಮಲಗಿದ್ದ ಹುಡುಗ ಪಲ್ಪರಿಯುತ್ತಲೇ ಎದ್ದು ದನಕರುಗಳ ಸಗಣಿ ಬಾಚಿ ಈಚಲ ಪುಟ್ಟಿಗಳಿಗೆ ತುಂಬಿಸಿದ್ದ. ಗೌಡರ ಮನೆ ಮಂದಿಗೆ ಇದನ್ನು ನೋಡಿ ಸೋಜಿಗವಾಗಿತ್ತು. ಯಾರೋ ‘ಬದುಕಿ ಬಾಳಿದವರ ಮಗನಿರಬೇಕು' ಅಂದುಕೊಂಡಿದ್ದರು. ಕೈ ತೊಳೆದುಕೊಳ್ಳಲು ಬಿಸಿ ನೀರು ನೀಡಿದ್ದರು.
ಚಿಕ್ಕುಂಬತ್ತಿಗೆ ಬಿಸಿ ಬಿಸಿ ರಾಗಿಮುದ್ದೆ ಸೊಪ್ಪಿನ ಸಾರು ಊಟಕ್ಕೆ ನೀಡಿದ್ದರು. ಬಿಸಿ ಸಾರಿಗೆ ಕವಣಿಗಲ್ಲಷ್ಟು ಬೆಣ್ಣೆ ಹಾಕಿದ್ದರು. ಹುಡುಗ ಇಂಥಾ ಊಟ ಉಂಡು ಎಷ್ಟೋ ವರ್ಷವಾಗಿದ್ದವು. ಕಣ್ಣೀರು ಬಳ ಬಳ ಇಳಿದಿದ್ದವು. ಉಂಡು ಹೊಲಕ್ಕೆ ಹೊರಟ ಗೌಡರ ಮನೆ ಮಂದಿ ಜತೆ ಹುಡುಗನೂ ಹೊಲಕ್ಕೆ ಹೋಗಿದ್ದ. ಅಲ್ಲಿ ಕಳೆ ಕೀಳುವ ಕೂಲಿಜನರೊಂದಿಗೆ ಕಳೆ ಕಿತ್ತ. ಕಿತ್ತ ಕಳೆಯನ್ನು ಮೆಟ್ಟಿ ತುಂಬಾ ತುಂಬಿ ಹೊಲದ ಬದುವಿಗೆ ಹೊತ್ತೊಯ್ದು ಸುರುವಿದ್ದ. ಹುಡುಗ ಮೂಕನಿರಬೇಕೆಂದು ಗೌಡರ ಮನೆಯವರು ಸಂಜ್ಞೆ ಮೂಲಕ ನಡೆಸಿಕೊಂಡಿದ್ದರು.
ಹುಡುಗ ಬಂದು ಮೂರು ದಿನ ಕಳೆದಿದ್ದವು. ಆ ಸಂಜೆ ಕೆನ್ನಳ್ಳಿ ಕುಂತರ ದಾಸಣ್ಣ ಮತ್ತೊಬ್ಬರು ಗೌಡರ ಮನೆ ಬಳಿ ಬಂದರು. ‘ನಿಮ್ಮ ಮನೆಗೊಬ್ಬ ಹುಡುಗ ಬಂದಿದಾನಂತೆ, ನಿಜವೆ? ಯಾಕಂದ್ರೆ ನನ್ನ ಒಂಬತ್ತು ವರ್ಷದ ಮಗ ಓಬಳೀಶಿ ಮಳ್ದೀಹಳ್ಳಿಯಿಂದ ತಪ್ಪಿಸಿಕೊಂಡು ಈಗ ಮೂರ್ ದಿನ ಆಗೈತೆ, ಯಾರೋ ಇಂಗಿಂಗೆ ಅಂತ ಹೇಳಿದ್ರು. ನೋಡಾನಾಮ್ತ ಬಂದೆ' ಎಂದು ಅವರು ವಿಚಾರಿಸಿದ್ದರು. ‘ಯಾರೋ ಒಬ್ಬ ಹುಡುಗ ಬಂದೈದಾನೆ. ಮೂಕ ಇದ್ದಂಗೈದಾನೆ. ನಿಮ್ಮುಡುಗನೋ ಏನೋ ಗೊತ್ತಿಲ್ಲ. ಮೂರು ದಿನಕ್ಕೆ ಒಗ್ಕ್ಯಂಡ್ ಬಿಟ್ಟಿದ್ದಾನೆ. ಮಗ್ಗುಲ ಅಟ್ ಮಾಳಗೇಗೆ ಇರಬೇಕು ನೋಡ್ರಿ' ಗೌಡರ ಮನೆಯವರು ತಿಳಿಸಿದ್ದರು.
ಅಟ್ ಮಾಳಿಗೇಲಿ ಬಿಳೀ ಆಕಳು ಒಂದರ ಮೈ ಸವರುತ್ತಾ ತನ್ಮಯನಾಗಿದ್ದ ಮಗನನ್ನು ಕಂಡು ದಾಸಣ್ಣನ ಹೃದಯ ತುಂಬಿ ಬಂದಿತ್ತು. ಕಣ್ಣು ತೇವವಾಗಿದ್ದವು. ‘ಅಪ್ಪಯಾ ಓಬಳೇಶಿ' ಅನ್ನುತ್ತಾ ಮಗನ ಮಖ ಮೈ ಸವರಿ ಅಪ್ಪಿಕೊಂಡು ನಿಟ್ಟುಸಿರು ಬಿಟ್ಟ ದಾಸಣ್ಣ. ಕೂಡಲೇ ಓಬಳೇಶಿ ‘ತಗೀ ನಾನು ಬರಲ್ಲಾ ಇಲ್ಲೇ ಇರ್‍ತೀನಿ' ಎಂದು ಕಣ್ತುಂಬಿಕೊಂಡು ಪ್ರತಿಭಟಿಸಿದ. ಹುಡುಗನ ವರ್ತನೆ ನೋಡಿ ದಾಸಣ್ಣನಿಗೂ ಆತನ ಜೊತೆಗಾರನಿಗೂ ಮತ್ತು ಗೌಡರ ಮನೆಯವರಿಗೂ ಆಶ್ಚರ್ಯವಾಗಿತ್ತು.
‘ಇರಲಿ ಬುದ್ದಿಮಾತು ಹೇಳಿ ಕರಕಂಡೊಗೋನ' ಎಂದು ಆಗ ಸುಮ್ಮನಾಗಿದ್ದರು. ದಾಸಣ್ಣ ಆತನ ಭಾವಮೈದುನ ರಾತ್ರಿ ಗೌಡರ ಮನೆಯಲ್ಲಿ ತಂಗಿ, ಬೆಳಗೀಲೇ ಎದ್ದರೆ ಓಬಲೇಶಿ ಅಷ್ಟೊತ್ತಿಗೇ ಎದ್ದು ಸಗಣಿ ಬಾಚುತ್ತಿರುವುದನ್ನು ಕಂಡು ಆಶ್ಚರ್ಯವೂ, ಅನುಮಾನವೂ ಏಕಕಾಲದಲ್ಲಿ ಉಂಟಾಗಿದ್ದವು. ‘ಕೈತೊಳಕಳಪ್ಪಾ ಊರಿಗೆ ಹೋಗಾನ' ಎಂದು ದಾಸಣ್ಣ ತಿಳಿಸಿದರೂ ಹುಡುಗ , ತಂದೆಯ ಮಾತನ್ನು ಕಿವಿಯೊಳಗೆ ಹಾಕಿಕೊಂಡಿರಲಿಲ್ಲ.
ಅಷ್ಟೊತ್ತಿಗೆ ಎದ್ದು ಅಲ್ಲಿಗೆ ಬಂದಿದ್ದ ಗೌಡರು ಪಟೇಲ್ ಸಿದ್ದಯ್ಯ ‘ದಾಸಣ್ಣ ಬಡಾ ತನಕ ಚಿಕ್ಕುಂಬತ್ತಿಗೆಲೇ ಉಂಡು ಸಮಾಧಾನ ಮಾಡಿ, ಅವನ್ನಾ ಕರಕೊಂಡು ಹೋದಿಯಂತೆ' ಅಂದು ತಡೆದಿದ್ದರು. ಊಟ ಮಾಡಿ ಹೊರಟಾಗಲೂ ಹುಡುಗ ಅಪ್ಪನ ಜೊತೆ ಮರಡಿಹಳ್ಳಿಗೆ ಹೊರಡದೇ ಜಗ್ಗಾಡಿದ್ದ. ದಾಸಣ್ಣನಿಗೆ ಅರ್ಥವಾಗದೇ ಮತ್ತು ತಾಳ್ಮೆಯಿಂದಲೇ ‘ಓಬಳಿ ಹಠಾ ಮಾಡಬ್ಯಾಡಪ್ಪಾ, ಅಲ್ಲಿ ನಿಮ್ಮಮ್ಮಯ್ಯ ಏಟು ಎದಿಯಾರ ಪಡ್ತಾ ಇದಾಳೋ ಏನೋ. ನಿನ್ನ ತಮ್ಮ ತಿಮ್ಮಣ್ಣ ಹೆಂಗೆ ಆಟ ಆಡ್ತಾ ಐದಾನೇ ನೀನೇ ನೋಡಿಯಂತೆ, ನಡೀ ಮರೀ ಜಾಣ ' ಮುಂತಾಗಿ ಕಕ್ಕುಲತೆಯ ಮಾತಾಡಿದರೂ ಓಬಳೇಶಿ ಹೊರಡಲಿಲ್ಲ.
ದಾಸಣ್ಣನಿಗೆ ಸಿಟ್ಟು ಬಂದು ಎರಡೇಟು ಕೊಟ್ಟರೂ ಹುಡುಗ ಜಪ್ಪಯ್ಯ ಅಂದಿರಲಿಲ್ಲ. ಬದಲು ಅವನೇ ಅಳುತ್ತಲೇ ಮಾತಾಡಿದ್ದ. ‘ನಾನು ಬಿಲ್ಕುಲ್ ಅಲ್ಲಿಗೆ ಬರಲ್ಲ. ನೀನೇ ಈ ಊರಿಗೆ ಬಂದು ಇರು' ಅಂದ. ದಾಸಣ್ಣನಿಗೆ ಕೆಲ ಹೊತ್ತು ಏನೂ ತಿಳಿಯದಾಯಿತು.
ಆವಾಗ ಪಟೇಲರು ‘ನೋಡೋ ದಾಸಣ್ಣ ಮರಡಿಹಳ್ಳಿ ನಿನ್ನೇಣ್ತಿ ತೌರೂರು ನಿಜ. ಆದ್ರೂ ಬ್ಯಾರೆ ಊರು ತಾನೆ. ನೆಂಟರ ಮನೆಯಾಗೆ ಎಸ್ ದಿನಾ ಆಮ್ತ ಇರ್ತೀಯ. ಅಲ್ಲ್ಯಾದ್ರೂ ಒಂದು ಬೇರೆ ಮನೆ ಕಟ್ಗಾ ಬೇಕು. ನಿನಮಗ ಈ ಊರ್‍ನ ಇಷ್ಟ ಪಟ್ಟಿದ್ದಾನೆ. ಅವನ ಇಷ್ಟದಂಗೇ ಇಲ್ಲಿಗೇ ಬಂದು ಒಂದು ಮನೆ ಕಟ್ಗಂಡು, ನಿನ್ನ ಕೆನ್ನಳ್ಳಿ ಜಮೀನನ್ನೂ ನೋಡ್ಕೋ ಬೌದು. ಇದರಾಗೆ ವಿವೇಕಾನೂ ಐತೆ. ಯೋಚ್ನೆ ಮಾಡು' ಅಂದು ಸಲಹೆ ನೀಡಿದರು.
ಮಗನ ಮಾತು ಮತ್ತು ಪಟೇಲರ ಸಲಹೆಯನ್ನು ತೂಗಿ ನೋಡಿ ‘ಇದರಾಗೆ ಒಳ್ಳೇದು ಇದ್ದೀತು. ಅದ್ಕೇ ಮಗ ಹಠ ಮಾಡ್ತಾ ಇದಾನೆ. ಆ ಭಗವಂತನಿಚ್ಛೆ ಏನೈತೋ` ಎಂದು ತನ್ನ ಭಾಮೈದನ ಜತೆ ಸ್ವಲ್ಪ ಹೊತ್ತು ಚರ್ಚಿಸಿ ` ಹಂಗೆ ಆಗ್ಲೀ ಗೌಡ್ರೇ, ಈ ವೊತ್ತು ದೇವ್ರು ಮಗನ ರೂಪದಾಗೆ, ನಿಮ್ಮ ರೂಪ ರೂಪದಾಗೆ ನನಗೊಂದು ಹಾದಿ ತೋರುಸ್ತಾ ಇದಾನೆ ಅಂದ್ಕೊಂಡೀನಿ. ನಾವು ಮರಿಡೀಹಳ್ಳೀಗೋಗಿ ತಿರಿಗ್ಕಂಡ್ ಬರಾತಂಕ ಇವನ್ನ ನಿಮ್ಮ ಮಗನಂಗೆ ಅಂದ್ಕಳ್ರಿ` ಅನ್ನುವಾಗ ದಾಸಣ್ಣನಿಗೆ ಎದೆಯ ಮೇಲಿನ ಭಾರವೊಂದು ಸಲೀಸಾಗಿ ಇಳಿದಂಗಾಗಿತ್ತು.
ಗೌನಹಳ್ಳಿಗೆ ಬಂದು ಮೊದಲೊಂದು ಗುಡಿಸಲು ಕಟ್ಟಿಕೊಂಡು ಆನಂತರ ಅದೇ ಜಾಗದಲ್ಲಿ ಮಾಳಿಗೆ ಮನೆಯನ್ನೂ ಕಟ್ಟಿದ ದಾಸಣ್ಣನ ಸಂಸಾರ ಸುಸೂತ್ರವಾಗಿ ನಡೆದಿತ್ತು.
(ಕೃಪೆ: ಕೆಂಡಸಂಪಿಗೆ)
Tuesday, June 10, 2008
Subscribe to:
Post Comments (Atom)
No comments:
Post a Comment