ಗಾಡಿ ಹಿಂದೆ ಬರುತ್ತಿದ್ದ ಈರಬಡಪ್ಪ, ದ್ಯಾಮಣ್ಣ ಇಂಥದೇ ಯೋಚನೆಯಲ್ಲಿದ್ದರು. ಗಾಡಿ ನಡೆಸುತ್ತಿದ್ದ ಗುರುಸಿದ್ದ ಮತ್ತು ಗಾಡಿ ಮೇಲೆ ಕುಳಿತಿದ್ದ ಪಾರತವ್ವರಿಗೂ ಏನೇನೋ ಆಲೋಚನೆಗಳು. ಹೆಂಗೋ ಊರು ಮುಟ್ಟಿ ರಾಗಿ ಎಲ್ಲಾ ಮನೆ ಮುಟ್ಟಿಸಿದರೆ ಸಾಕಾಗಿತ್ತು. ಮುಂದೆ ನಡೆಯುತ್ತಿದ್ದ ರಂಗಜ್ಜ, ಪುರುದಣ್ಣ ಸರವೊಂದರ ಮುಂದೆ ನಿಂತು, ಗಾಡಿಯನ್ನು ಆಚೆ ದಡಕ್ಕೆ ಹೆಂಗೆ ಒಯ್ಯಬೇಕು ಎಂದು ಯೋಚಿಸುತ್ತಿದ್ದರು. ಗಾಡಿ ಅಲ್ಲಿಗೆ ಬಂದು ನಿಂತು ಕೊಂಡಿತು. ಎಲ್ಲಾದರೂ ಇಳುಕಲು ಐತೇನೋ ನೋಡಾನ ನಿಲ್ರಪ್ಪಾ ಅನ್ನುತ್ತಾ ಸರದ ಉದ್ದಕ್ಕೆ ಎಡಾ-ಬಲಕ್ಕೆ ನಡೆದರು. ಎಲ್ಲೋ ಒಂದು ಕಡೆ ತಿರಾ ಕಡಿದಾಗಿಲ್ಲದ ಜಾಗವನ್ನು ಹುಡುಕಿ ಅಲ್ಲಿಗೆ ಗಾಡಿಯನ್ನು ನಡೆಸಿಕೊಂಡು ಹೋಗಿ ಹುಷಾರಾಗಿ ಗಾಡಿ ನಡೆಸಿ ಸರದ ಕೊರಕಲನ್ನು ಹತ್ತಿಸಿದರು.ಮೂರ್ ಪಯಣ ಬಂದರಬೌದು, ಒಂದೀಟು ನಿಲ್ಲಿಸ್ರಪ್ಪಾ ಎತ್ತುಗಳು ಸುಧಾರಿಸಿಗ್ಯಮ್ಲಿ ಎಂದು ರಂಗಜ್ಜ ನೀಡಿದ ಸಲಹೆಗೆ ಎತ್ತುಗಳ ಕೊಳ್ಳು ಹರಿದು ಅವುಗಳ ಮುಂದೆ ಹುಲ್ಲು ಹಾಕಿ ಕೊಡದಲ್ಲಿ ತಂದಿದ್ದ ನೀರು ಕುಡಿದರು. ಎಲ್ಲರೂ ಅಡಿಕೆ ಚೂರುಗಳನ್ನು ಬಾಯೊಳಗೆ ಹಾಕಿಕೊಂಡು, ಎಲೆಗೆ ಸುಣ್ಣ ಹಚ್ಚುತ್ತಾ ಆಕಳಿಸಿದರು. ಈರಬಡಪ್ಪ ತಲೆ ಎತ್ತಿ ಆಕಾ ನೋಡಿ ಎಟೋತ್ತಾಗಿರಬೌದು? ಸರುವೋತ್ತಾಗಿರಬೌದೆ? ಎಂದು ಪ್ರಶ್ನೆ ಹಾಕಿದ. ಇದಕ್ಕೆ ಆಗಿರಬೌದು. ಏಟು ದೂರ ಬಂದಿರಬೌದು? ಒಂದ್ ಎಂಟೊಂಬತ್ತು ಮೈಲಿ ಬಂದರಬೌದೆ? ಪಾರತವ್ವ ಅಂದಳು.ಎಂಟೊಂಬತ್ತು ಮೈಲಿ ಬಂದಿದ್ರೆ ಅರ್ಧಾದಾರಿ ಮುಗದಂಗಾತು. ಇನ್ನಾ ಊರು ಅತ್ತು ಮೈಲಿ ಇರಬೇಕು ಅಲ್ವೇನಣ್ಣಾ ಅಂದಳು ಆಕೆ. ಅದೆಂಗವ್ವಾ? ಕಾಡು ಮೇಡು ಅಲೆದಾಡಿಕ್ಯಂಡ್ ಬಂದಿದೀವಿ. ಏಳೋ ಎಂಟೋ ಮೈಲಿ ಬಂದಿರಬೇಕು ಅಂದ ರಂಗಜ್ಜ, ಎಲ್ಲಾರಿಗೂ ಹಂಗೆ ನಿದ್ದೆ ಮಂಪರು ಕವಿದಂಗಾತು. ಎದ್ದೆಳ್ರೋ ಮಾಯದ ನಿದ್ದೆ ಅಡರಿಕೆಂಬತ್ತೆ. ಪಯಣ ಸಾಗಬೇಕು. ಒಂದೀಸು ನೀರು ಕೊಡವ್ವಾ ಮಕಕ್ಕೆ ನೀರು ಹಾಕೈಂಡು ಒಳ್ದ್ರ್‌ಪ್ಪಾ ಅಂದು ನೀರು ಇಸಕಂಡು ಮಕಕ್ಕೆ ನೀರಾಕ್ಯೆಂಡು ಎಲ್ಲರನ್ನು ಏಳಿಸಿದ.
ಎಲ್ಲರೂ ದಡಾಬಡಾ ಎದ್ದು ಗಾಡಿ ಕಟ್ಟಿ ಮುಂದೆ ಹೊರಟರು. ಮೊದಲ ಕೋಳಿ ಕೂಗೋ ಹೊತ್ತಿಗೆ ಇನ್ನೊಂದು ಸರ ಅಡ್ಡಬಂತು. ಗಾಡಿ ನಿಲ್ಲಿಸಿ ಎತ್ತುಗಳ ಅಗಡು ಬಿಚ್ಚಿ ಗಾಡಿ ಹತ್ರ ಪಾರತವ್ವ ಮತ್ತೆ ಗರುರುಸಿದ್ದರನ್ನು ಬಿಟ್ಟು ಸರದ ಉದ್ದಕ್ಕೂ ನಡೆದರು. ಎಲ್ಲಿಯೂ ಅದನ್ನು ದಾಟುವಂಥಾಜಾಗ ಕಂಡು ಬರಲಿಲ್ಲ. ಹಿಂತಿರುಗುವಾಗ ರಂಗಜ್ಜನಿಗೆ ಒಂದು ಉಪಾಯ ಹೊಳೆಯಿತು. ಗಾಡಿ ಬಳಿಗೆ ಬಂದು ಬರ್ರೊನಿಮ್ಮಾ ಅದಕ್ಯಾಕೆ ಹೆದರಬೇಕೂ? ಅನ್ನುತ್ತಾ ಹಿಂದಕ್ಕೆ ಬಂದವನು ಗಾಡಿ ಗುಜ್ಜು ಎಲ್ಲಾ ಬಿಚ್ಚೀರಿ. ರಾಗಿ ಚೀಲಾ ಎಲ್ಲಾ ಇಳಿಸನಾ. ಆಚೆಕಡಿಗೆ ರಾಗಿ ಚೀಲ ಎಲ್ಲಾ ಹೊತ್ತಾಕಿ ಗಾಡಿಗಳಿಪಿಳಿ ಮಾಡಿ ಚಕ್ರಮದ್ಲು ಬಿಚ್ಚಿ ಆಚೆಕಡಿಗೆ ಹೊತ್ತಾಕನ. ಆಮೇಲೆ ಗಾಡಿ ಮೂಕು-ಪಾರು ಹೊತ್ತಾಕಿ ಚಕ್ರ ಕೂಡಿಸಿ ರಾಗಿಚೀಳ ಗಾಡ್ಯಾಗಾಕ್ಕೆಂಡ್ ಹೊಡಕಂಡ್ ಹೋಗನಾ ಎಂದು ಸಲಹೆ ನೀಡಿದ. ಅದರಂತೆ ಗಾಡಿಯಲ್ಲಿದ್ದ ರಾಗಿ ಚೀಲಗಳನ್ನು ಕೆಲಗಿಳಿಸಿ ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರ ಮತ್ತೆ ಪಾರು ಮೂಕಿ ಇತ್ಯಾದಿಗಳನ್ನು ಆಚೆಕಡೆ ದಡಕ್ಕೆ ಸಾಗಿಸಿದರು. ರಾಗಿ ಚೀಲಗಳನ್ನು ಸರದಾಚೆಗೆ ಸಾಗಿಸುವುದು ಸುಲಭ ಸಾಧ್ಯವಾದ ಮಾತಾಗಿರಲಿಲ್ಲ. ಚೀಲದ ಮಧ್ಯೆ ಒಂದು ಬಂಡಿಗುಜ್ಜನ್ನು ಕೊಟ್ಟು ಆಚೆಕಡೆ ಒಬ್ಬರು ಈಚೆಕಡೆ ಒಬ್ಬರು ಹಿಡಿದುಕೊಂಡರೆ ಮತ್ತಿಬ್ಬರು ಚೀಲದ ಹಿಂದೆ ಮುಂದೆ ಹಿಡಿದುಕೊಂಡು ನಿಧಾನವಾಗಿ ಸರದೊಳಕ್ಕೆ ಇಳಿದು ಮತ್ತೆ ಆಚೆ ಕಡೆ ಗಡ್ಡೆ ಹತ್ತಿ ಅಂತೂ ಚೀಲಗಳನ್ನು ಸಾಗಿಸಿ ಗಾಡಿಯಲ್ಲಿ ಹೇರಿದರು.
ಗಾಡಿಹೂಡಿ ಸ್ವಲ್ಪ ದೂರ ಹೋಗಿಲ್ಲ. ಮತ್ತೊಂದು ಸಮಸ್ಯೆ ಎದುರಾಯಿತು. ಒಂದು ಎತ್ತು ಕುಂಟು ಬಿತ್ತು. ಅದು ಮುಂದೆ ನಡೆಯದಾಯಿತು. ಆಗ ಒಬ್ಬರಾಗುತ್ಲೂ ಒಬ್ಬರು ಪುರುದಣ್ಣ, ದ್ಯಾಮಣ್ಣ ಮತ್ತೆ ರಂಗಜ್ಜ ಎತ್ತಿನ ಜೊತೆ ನೊಗಕ್ಕೆ ಕೈ ಹಾಕಿ ಗಾಡಿಯನ್ನು ಸುಮಾರು ದೂರ ಎಳೆದರು. ಪಲ್ಪರಿಯಾ ಹೊತ್ತಿಗೆ ಪರಿಚಯದ ಕಾಡು ಮೇಡು ಕಾಣಿಸಿತು. ಸ್ವಲ್ಪ ಹೊತ್ತು ನಿಲ್ಲಿಸಿ ಸುಧಾರಿಸಿಕೊಂಡರು. ಎತ್ತುಗಳು ರಾಗಿಕಡ್ಡಿಯನ್ನು ತಿನ್ನಲು ನಿರಾಕರಿಸಿದವು. ಅವಕ್ಕೆ ಪೂರಾ ದಣಿವಾಗಿತ್ತು. ಗಾಡಿಯಲ್ಲಿದ್ದ ಎರಡು ತುಂಬಿದ ಕೊಡಗಳ ನೀರುಕುಡಿಸಿ ಮತ್ತೆ ಗಾಡಿ ಹೂಡಿದರು. ಎತ್ತುಗಳಿಗೂ ಕಾಡಿನ ಪರಿಚಯ ಇದ್ದಿರಬೇಕು. ಅವೂ ಸಲೀಸಾಗಿ ಗಾಡಿಯನ್ನು ಎಳೆಯುತ್ತಿದ್ದವು. ಪೂರಾ ಬೆಳ್ಳಂಬೆಳಕಾಯಿತು. ಪರಿಚಯದ ಕಾಡಿನಲ್ಲಿ ಊರ ಕಡೆಗೆ ಸಾಗುವ ದಾರಿಯಲ್ಲಿ ಸಾಗುತ್ತಿದ್ದರು.
ಅಷ್ಟರಲ್ಲಿ ದ್ಯಾಮಣ್ಣನಿಗೆ ಒಂದು ಅನುಮಾನ ಕಾಡಿತು. ಆಗ ಅವನು ಗಾಡಿ ನಿಲ್ಲಿಸ್ರಪ್ಪಾ. ಮುಂದೆ ಯಾರಾನಾ ಪೊಲೀಸರು ಗೀಲೀಸರು ದಾರಿ ಕಾಯ್ತಾ ಐದಾರೇನೋ ನೋಡಬೇಕು, ಎಂದು ಸಲಹೆ ನೀಡಿದ. ತರ್‍ಲೆ ಜನ ಹೇಳಾಕ್ ಬರಲ್ಲ. ಯಾರಾನಾ ಪೋಲೀಸ್ರಿಗೆ ಸುದ್ದಿ ಕೊಟ್ಟಿದ್ರೆ. ಸಿಗೆ ಆಕ್ಯಂಡ್ ಬಿಡ್ತೀವಿ. ಕಣಿಮೆ ಉದಿಗೆ ಹೋಗಿ ನೋಡಿಕ್ಯೆಂಡು ಬರಬೇಕಾಗುತ್ತೆ ಎಂದು ಸಲಹೆ ನೀಡಿದ. ಅದರಂತೆ ನಾಲ್ಕು ಜನ ಮತ್ತು ಪಾರವ್ವ ಅತ್ತ ಹೊರಟರು. ಎಲ್ಲರೂ ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಾ ನಡೆಯುತ್ತಿರುವಾಗ ಕಣಿಮೆ ಉದಿಹತ್ರ ಒಂದು ಮರದ ಪಕ್ಕ ಒಂದು ಸೈಕಲ್ ನಿಲ್ಲಿಸಿರುವುದ ಕಾಣಿಸಿತು. ತಕ್ಷಣ ಎಲ್ಲರೂ ಏನೇನೋ ಗುಟ್ಟಾಗಿ ಮಾತಾಡಿಕೊಂಡರು.
ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲಾ ಅಲ್ಲಿಂದ ಚದುರಿದರು. ಪಾರತವ್ವ ಸೀರೆ ಕಾಶಿಕಟ್ಟಿಕೊಂಡು ಹತ್ತಿರದಲ್ಲಿದ್ದ ಹಳ್ಳದ ಕಡೆಗೆ ಹೊರಟಳು. ಹೊತ್ತು ಮೂಡಿ ನಿಧಾನವಾಗಿ ಮೇಲಕ್ಕೆ ಬರುತ್ತಿದ್ದ. ಪೊಲೀಸ್ ಪೇದೆ ಮರ ಏರಿ ಕುಳಿತು ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಿದ್ದ. ಮರ ಹಿಡಿದಿದ್ದ ಕೈ ಜಾರುತ್ತಿದ್ದವು. ಕಾಲು ಬೆವರಿದ್ದವು. ಆದರೂ ಪಟ್ಟು ಬಿಡದೆ ತನ್ನ ಬೇಟೆಯ ನಿರೀಕ್ಷೆಯಲ್ಲಿದ್ದ. ಎತ್ತಲಿಂದಲೋ ಭರ್ರನೇ ಬೀಸಿ ಬಂದ ಕವಣೆಗಲ್ಲೊಂದು ಪೊಲೀಸಪ್ಪನ ಟೋಪಿಯನ್ನು ಕೆಳಗೆ ಬೀಳಿಸಿತು. ಅದನ್ನು ಹಿಡಿಯಲು ಮುಂದೆ ಬಾಗಿ ತಾನೂ ಜಾರಿ ಕೆಳಗೆ ಬಿದ್ದ. ಸೊಂಟ ನೋವಾಗಿ ಮೇಲೇಳಲು ಸಾಧ್ಯವಾಗದಾಯಿತು. ಕಾಲು ಕೂಡಾ ನೋಯುತ್ತಿದ್ದವು. ಈ ನೋವಿನಲ್ಲೇ ಯಾರೋ ಆಸಾಮಿಗಳು ಇರೋ ಹಂಗಿದೆ ಅನ್ನಿಸಿತು ಪೋಲೀಸಪ್ಪನಿಗೆ. ಯಾವನ್ರಲೋ ಕಲ್ಲು ಹೊಡೆದಿದ್ದೂ? ಎಂದು ಕೂಗು ಹಾಕಿದ. ಮೇಲೇಳಲು ಪ್ರಯತ್ನಿಸಿ ವಿಫಲನಾದ ಅವನಿಗೆ ಯಾರದೋ ಮಾತು ಕೇಳಿ ಮಂಗನಾದೆ ಅನ್ನಿಸಿತು.
ಕಂಟ್ರೋಲ್ ಕಾಲದಲ್ಲಿ ಇಂಥಾ ಕೇಸು ಹಿಡಿದು ಕೊಟ್ಟರೆ ಇನಾಮು ಸಿಗುತ್ತಿತ್ತು ಮತ್ತು ಬಡ್ತಿ ಸಿಗುತ್ತಿತ್ತು. ಪಕ್ಕದ ಊರಿನ ಕೆಲವು ಚಾಡಿಕೋರರ ಮಾತು ಕೇಳು ಈ ಸಾಹಸಕ್ಕೆ ಮುಂದಾಗಿದ್ದ ಅವನಿಗೆ ಎಂಥಾ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡೆನಲ್ಲಾ ಎಂದು ಪರಿತಪಿಸುವಂತಾಯಿತು. ತಾನು ಈ ಟೋಪಿಯನ್ನು ಹಾಕಿಕೊಂಡು ಬರಬಾರದಿತ್ತು. ಟೋಪಿ ಇರದಿದ್ದರೆ ಪೋಸನೆಂದು ಯಾರು ನಂಬುತ್ತಾರೆ? ಹೀಗೆಲ್ಲಾ ಯೋಚಿಸುತ್ತಾ ಬಲು ತ್ರಾಸುಪಟ್ಟುಕೊಂಡು ಸೈಕಲ್ ಇದ್ದ ಮರದ ಬಳಿಗೆ ತೆವಳಿಕೊಂಡು ಹೋದ. ಮೈಯೆಲ್ಲಾ ಬೆವರಿತ್ತು. ಒರೆಸಿಕೊಂಡು ಮತ್ತೆ ಮೇಲೇಳಲು ಪ್ರಯತ್ನಿಸಿ ಮರದ ಬೊಡ್ಡೆ ಹಿಡಿದು ನಿಧಾನವಾಗಿ ಮೇಲೆದ್ದ. ಸುತ್ತಲೂ ನೋಡಿದ. ಯಾವನು ಕಲ್ಲಿನಲ್ಲಿ ಹೊಡಿದಿರಬಹುದು ಅದು ತಲೆಗೆನಾದರೂ ಬಿದ್ದಿದ್ದರೆ ಪ್ರಾಣಾಪಾಯವಾಗುತ್ತಿತ್ತಲ್ಲಾ ದೇವರೇ ಎಂದು ಕೂಡಾ ಆತಂಕಪಟ್ಟುಕೊಂಡ. ಸಿಗಲಿ ಮಾಡ್ತೀನಿ. ಹುಟ್ಟಿದ್ದಿನ ತೋರಿಸ್ತೀನಿ ಅಂದುಕೊಂಡು ಹಲ್ಲು ಕಡಿದ. ಹೊತ್ತು ಮೇಲೇರುತ್ತಿತ್ತು.
ಇತ್ತ ದ್ಯಾಮಣ್ಣ, ರಂಗಜ್ಜ ಮತ್ತೆ ಪುರದಣ್ಣರು ಕೂಡಿಕೊಂಡು ಗಾಡಿಯಲ್ಲಿದ್ದ ರಾಗಿಚೀಲಗಳನ್ನು ಇಳಿಸಿ ಪೊದೆಯಲ್ಲಿ ಬಚ್ಚಿಟ್ಟರು. ಗಾಡಿಯನ್ನು ಗಳಿಪಿಳಿ ಮಾಡಿ ಚಕ್ರಮತ್ತೆ ಪಾರು, ಮೂಕಿಯನ್ನು ಇನ್ನೊಂದು ಪೊದೆಯಲ್ಲಿ ಬಚ್ಚಿಟ್ಟರು. ಇವುಗಳನ್ನು ಕಾಯಲು ಈರಬಡಪ್ಪನನ್ನು ಅಲ್ಲಿ ಬಿಟ್ಟು ಎತ್ತುಗಳಿಗೆ ನೀರು ಕುಡಿಸಲು ಹಳ್ಳದ ದಂಡೆಗುಂಟಾ ಹೊರಟರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಳ್ಳದ ಒಂದು ಗುಂಡಿಯಲ್ಲಿ ನೀರು ಇರುವುದು ಕಾಣಿಸಿತು. ಎತ್ತುಗಳಿಗೆ ನೀರು ಕುಡಿಸಿ, ತಮ್ಮ ಹೊಟ್ಟೆಗೆ ಒಂದೆರಡು ಈಚಲ ಗಿಡಗಳನ್ನು ಕೊಚ್ಚಿ ಕಡಿದು ಅವುಗಳ ಗೆಡ್ಡೆಗಳನ್ನು ತಿಂದು, ಗುರುಸಿದ್ದ-ಪಾರತವ್ವರಿಗೆ ಒಂದಿಷ್ಟು ಕಟ್ಟಿಕೊಂಡು ಹೊರಟು ಬಂದರು. ಎತ್ತುಗಳು ಅಲ್ಲಿ ಬೆಳೆದಿದ್ದ ಕಳ್ಡವನ್ನು ಮೇಯುತ್ತಿದ್ದವು. ಅತ್ತ ಕಡೇಲಿಂದ ಪಾರತವ್ವ ಬಂದು ಪೋಲೀಸಪ್ಪನಿಗೆ ಆಗಿರುವ ಪರಿಸ್ಥಿತಿಯನ್ನು ಬಣ್ಣನೆ ಮಾಡಿ ಹೇಳಿದಳು. ಸ್ವಲ್ಪ ಹೊತ್ತು ಎಲ್ಲರೂ ನಗಾಡಿದರು. ಕೂಡಲೇ ಪರಿಸ್ಥಿತಿಯ ಅರಿವಾಗಿ ತುಂಬಾ ಹೊತ್ತು ಚರ್ಚೆ ಮಾಡಿ ಪಾರತವ್ವ ಗುರುಸಿದ್ದರಿಗೆ ಒಂದು ಪಿಳಾನು ಹೇಳಿಕೊಟ್ಟರು.
ಅವರು ಇನ್ನೊಂದು ಕಡೇಲಿಂದ ಗೌರೀ ಗೌರೀ ಎಂದು ಕೂಗು ಹಾಕುತ್ತಾ ಪೋಲೀಸಪ್ಪನಿದ್ದ ಮರದ ಬಳಿಗೆ ತೆರಳಿದರು. ಅಲ್ಲಿದ್ದ ಪೋಲೀಸಪ್ಪನನ್ನ ಕಂಡು ಯಾಕಣ್ಣಾ ಪೊಲೀಸಣ್ಣಾ ಸೈಕಲ್ ಇಡಕಂಡ್ ನಿಂತಿದ್ದೀಯಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕೇಳಿದರು. ಪೋಲೀಸ್ ಪೇದೆ ಹೇಯ್ ಬಾರೋ ಇಲ್ಲಿ, ಯಾರೋ ನಿಮ್ಮನ್ನ ಕಳಿಸಿದ್ದು ಎಂದು ಗುರುಸಿದ್ದನನ್ನು ಕೇಳಿದ. ಯಾಕಣ್ಣಾ ಇಂಗೆ ಗದರಿಸಿ ಕೇಳ್ತೀಯಾ? ಅನ್ನುತ್ತಾ ಪಾರತವ್ವ ಅವನ ಬಳಿಗೆ ತೆರಳಿದಳು. ಆಕೆ ವ್ಯಸನ ತೋರಿಸುತ್ತಾ ನಮುದೊಂದು ಗಬ್ಬದಾಕಳಾ ರಾತ್ರಿ ತಪ್ಪಿಸ್ಗಂಡೈತೆ ಕಣಣ್ಣಾ. ರಾತ್ರಿ ಎಲ್ಲಾ ಉಡುಕಿದಿವಿ ಸಿಕಿಲ್ಲ ಕಣಣ್ಣಾ. ಅದನ್ನು ಹುಡಿಕ್ಕೆಂಡ್ ಬಂದ್ವಿ ಕಣಣ್ಣಾ ಅಂದಳು ಅಷ್ಟೇ ರಾಗವಾಗಿ.
ಯಾಕಣ್ಣಾ ನಿಂತ್ಗಂಡೇ ಇದ್ದೀಯಾ ಅಂದ ಗುರುಸಿದ್ದ. ಬಿದ್ದು ಸೊಂಟ ನೋವು ಮಾಡಿಕೆಂಡಿದೀನೀ ಕಣಯ್ಯಾ. ಈಗ ನಾನು ಸೈಕಲ್ ಮೇಲೆ ಕುತ್ಗಮ್ತೀನಿ, ನೀನು ಸೈಕಲ್ ತಳ್ಳಿಕೊಂಡು ಒಂದೀಟು ರಸ್ತೆಗೆ ಬಿಟ್ ಬಿಡಯ್ಯಾ. ಅಲ್ಲಿಂದ ಯಾವುದಾದ್ರೂ ಬಸ್ಸಿಗೆ ಹಿರಿವೂರಿಗೆ ಹೋಗ್ತಿನಿ. ಪುಣ್ಯ ಬರುತ್ತೆ, ಎಳ್ಡ್ ರೂಪಾಯ್ ಕೊಡ್ತೀನಿ ಎಂದು ಪುಸಲಾಯಿಸಿದ. ಅಕ್ಕಾ ಗೌರಿ ಹುಡಕೋಡು ಹೆಂಗೆ ಮತ್ತೆ? ಎಂದು ಪಾರತವ್ವಳ ಕಡೆಗೆ ನೋಡಿದ ಗುರುಸಿದ್ದ. ಇದೊಳ್ಳೆ ಫಜೀತಿ ಗಿಕ್ಯಂಡ್ ಬಿಡ್ತಲ್ಲೊ. ಈಟೊತ್ತಿಗೇಲೆ ಈಯಪ್ಪಾ ಯಾಕೆ ಬೀಳಬೇಕಾಗಿತ್ತೂ. ಕಷ್ಟದಾಗಿರೋರಿಗೆ ಸಹಾಯ ಮಾಡಬೇಕು. ಕರಕಂಡ್ ಹೋಗಿ ರಸ್ತೆ ಮುಟ್ಟಿಸಿಬಾರಪ್ಪಾ. ಎಳ್ಡ್ ರೂಪಾಯೀನೂ ಬ್ಯಾಡ ಯಾತ್ತೂ ಬ್ಯಾಡಾ ಅಂದಳು ಆಕೆ.
ಸ್ವಲ್ಪ ದೂರ ಮೂವರು ನಡೆದು ಊರ ಕಡೆಗೆ ತಿರುಗುವಲ್ಲಿ ಪಾರತವ್ವ ನಿಂತುಕೊಂಡಳು. ಇವರು ಮುಂದೆ ನಡೆದರು. ಪೋಲೀಸಪ್ಪ ಏನು ಕೇಳುತ್ತಾನೆ. ಅದಕ್ಕೆ ಏನು ಉತ್ತರ ಹೇಳಬೇಕು ಎಂಬುದನ್ನು ಗುರುಸಿದ್ದನಿಗೆ ಪಾರತವ್ವ ತಿಳಿಸಿದ್ದಳು. ಇದನ್ನೆಲ್ಲಾ ದ್ಯಾಮಣ್ಣಾ, ರಂಗಜ್ಜರು ನೋಡಿದ್ದರು. ಗುರುಸಿದ್ದ-ಪೋಲೀಸಪ್ಪರು ಮರೆಯಾಗುತ್ತಲೇ ಸರಬರಾ ನಡೆದು, ಪಾರತವ್ವ ತನ್ನವರನ್ನು ಕೂಡಿಕೊಂಡಿದ್ದಳು. ಅಷ್ಟೊತ್ತಿಗೆ ಮುಂದೆ ಹೋಗಿದ್ದವರು ಗಾಡಿಯನ್ನು ಸಿದ್ದಪಡಿಸಿದ್ದರು. ರಾಗಿಚೀಲಗಳನ್ನು ಹೇರಿಕೊಂಡು ಸದ್ದುಮಾಡದೇ ಇನ್ನೊಂದು ದಾರಿಯಿಲ್ಲದ ದಾರಿಯಲ್ಲಿ ಹೊರಟು ಊರಬಳಿಯ ತಮ್ಮ ಹೊಲವನ್ನು ತಲುಪಿ, ಅಲ್ಲಿ ರಾಗಿ ಚೀಲಗಳನ್ನು ತಾಬಂದು ಮಾಡಿದರು. ಮತ್ತೆ ಗಾಡಿಯನ್ನು ಗಳಿಪಿಳಿ ಮಾಡಿ ಬಣವೆಯಲ್ಲಿ ಬಚ್ಚಿಟ್ಟು ಒಬ್ಬೊಬ್ಬರೇ ಒಂದೊಂದು ದಾರಿಯಲ್ಲಿ ಊರು ಸೆರಿಕೊಂಡರು.
ಪಾರತವ್ವ ದೂರವಾಗುತ್ತಲೇ ಗುರುಸಿದ್ದನಿಗೆ ಕೇಳಬಾರದ್ದೆಲ್ಲಾ ಕೇಳಿದ್ದ ಪೋಲೀಸಪ್ಪ. ಅವನು ಬೇಜಾರಾಗಿ ತಾನು ಮುಂದೆ ಬರುವುದಿಲ್ಲವೆಂದು ಎರಡು ಬಾರಿಧಮಕಿಕೊಟ್ಟ ಮೇಲೆ ಸುಮ್ಮನಾಗಿದ್ದ. 'ಲೇ ಹುಡುಗ ನೀನು ಈಗ ಏನೂ ಹೇಳೋಲ್ಲ ಕಣೋ, ನನಿಗೆ ಗೊತ್ತೈತೆ, ನಿಮ್ಮನ್ನ ಹೆಂಗೆ ಬಾಯಿಬಿಡಿಸಬೇಕು ಅಂಬಾದು, ನಡೀ ಈವಾಗ, ಆಮೇಲೆ ನೊಡಿಕೆಮ್ತೀನಿ' ಎಂದು ಕೊಂಡಿದ್ದ ಪೋಲೀಸಪ್ಪ ಮನಸ್ಸಿನಲ್ಲೇ.
ಮುಂದುಗಡೆ ಯಾರೋ ನಡೆದು ಹೋಗುತ್ತಿರುವುದು ಕಾಣಿಸಿತು ಇವರಿಗೆ. ಅಮಲ್ಲಾರ್ರು ಊರಿಗೆ ಬರ್‍ತಾರಂತೆ ಜಮಾಬಂದಿಗೆ, ನಾನು ಹಿರಿಯೂರಿಗೆ ಹೋಗಿ ಬರ್‍ತೀನಿ, ಎಂದು ಮನೆಯಲ್ಲಿ ತಿಳಿಸಿ ಸಿದ್ದಪ್ಪ ಗೌಡರು ಬೆಳಿಗ್ಗೇನೆ ಹೊರಟಿದ್ದರು. ಕಮರದ ದಾರಿ ಕೂಡಿಕೊಳ್ಳೋದಾರಿ ದಾಟಿ ಮುಂದಕ್ಕೆ ನಡೆದರೆ ಹಿಂದುಗಡೆ ಯಾರೋ ಸೈಕಲ್ ಮೇಲೆ ಕುಳಿತುಕೊಂಡು ಸೈಕಲನ್ನು ತಳ್ಳಿಸಿಕೊಂಡು ಬರುತ್ತಿರುವುದು ಕಾಣಿಸಿತು. ತಮ್ಮ ನಡಿಗೆಯನ್ನು ಸ್ವಲ್ಪ ನಿಧಾನ ಮಾಡಿದರು ಗೌಡರು. ಇವರು ಹತ್ತಿರ ಬರುತ್ತಲೇ ನೋಡಿದರೆ ಪೋಲೀಸ್ ನೋನು ಮತ್ತೆ ಗುರುಸಿದ್ದ. ಯಾಕಪ್ಪಾ ಏನಾತು ಎಂದು ಗೌಡರು ಕೇಳಿದರೆ ಪೋಲೀಸ್ ಪೇದೆ ಸೈಕಲ್ ಮೇಲಿಂದ ಬಿದ್ದು ಬಿಟ್ಟೆ ಗೌಡ್ರೇ. ಸೊಂಟ ಬಾಳ ನೋವಾಗೈತೆ. ಇವನು ದಾರ್‍ಯಾಗ್ ಸಿಕ್ಕ. ರಸ್ತೇಗೆ ಬಿಟ್ ಬಿಡಪ್ಪಾ ಅಂತ ಕರಕಂಡ್ ಬಂದೆ ಅಂದ. ಗುರುಸಿದ್ದನ ವಿಚಾರ ಗೌಡರಿಗೆ ಗೊತ್ತಿತ್ತು ಆದ್ದರಿಂದ ಅದನ್ನು ವಿಚಾರಿಸಿದೆ, ನಾನು ಹಿರಿಯೂರಿಗೆ ಹೊಲ್ಟಿದೀನಿ. ನೀನು ಹಿಂದಗಡೆ ಕುತ್ಗ. ನಾನು ಸೈಕಲ್ ತುಳಕಂಡು ಹಿರಿಯೂರಿಗೆ ಸೇರಿಸ್ತೀನಿ ಅನ್ನುತ್ತಾ ಗೌಡರು ಸೈಕಲ್ ಹತ್ತಿದರು. ಗುರುಸಿದ್ದನಿಗೂ ಇದೇ ಬೇಕಾಗಿತ್ತು.
(ಕೃಪೆ: ಕೆಂಡಸಂಪಿಗೆ)
No comments:
Post a Comment