Monday, January 7, 2008

'ಇವತ್ತಿಗೂ ಹಾಂಟ್ ಮಾಡುವ ಚಿತ್ರದುರ್ಗದ ಕೋಟೆ'



“ ಚಿತ್ರದುರ್ಗದ ಕೋಟೆಗೆ ಒಂದು ಅಪೂರ್ವವಾದ ಕಲಾತ್ಮಕತೆಯಿದೆ. "
ಹೀಗನ್ನುತ್ತಾರೆ ರೇಖಾ ಪ್ರವೀಣ ಪ.ಸ.ಕುಮಾರ್. ಕನ್ನಡದ ವಿಶಿಷ್ಟ ಕಲಾವಿದರಲ್ಲಿ ಒಬ್ಬರು. ಅವರ ಕಲಾಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಚಿರಪರಿಚಿತರೋ ಅದರ ಎರಡು ಪಟ್ಟು ಸಾಹಿತ್ಯದ ಒಡನಾಟದಲ್ಲಿರುವವ ಒಡನಾಡಿ. ಇವರು ಚಿತ್ರ ಬರೆಯುತ್ತಾರೆ ಎಂಬ ಕಾರಣಕ್ಕೆ ಕಥೆ, ಕವಿತೆಗಳನ್ನು ಇವರಲ್ಲಿಗೆ ಕಳುಹಿಸುವವರು ಅನೇಕರು. ಯಾಕಂದರೆ ಕುಮಾರ್ ರೇಖೆಗಳಿಗೆ, ಅವರ ಕುಂಚಕ್ಕೆ ಅಂಥದ್ದೊಂದು ಶಕ್ತಿ ಇದೆ. ಕತೆ, ಕವಿತೆ ಓದುಗನಿಗೆ ಚಿತ್ರವನ್ನು ಕಟ್ಟಿಕೊಡದಿದ್ದರೆ, ಕುಮಾರ್ ಬರೆಯುವ ಚಿತ್ರ ಅವರಿಗೆ ಕವಿತೆಯನ್ನು, ಕತೆಯನ್ನು ಬಿಡಿಸಿ ಹೇಳುತ್ತದೆ. ಇದು ಪ.ಸ.ಕುಮಾರ್ ವೈಶಿಷ್ಟ್ಯ!
ಅವರ ಕಲಾವಂತಿಕೆ, ಕಲಾಸಾಮರ್ಥ್ಯವೇ ಚಿತ್ರದುರ್ಗದ ನಂಟು ಬೆಳೆಸಿದ್ದು.
ದುರ್ಗದ ಹುಡುಗರೊಂದಿಗೆ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ ಎರಡು ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ.. ಓವರ್ ಟು ಪ.ಸ.ಕುಮಾರ್.....
‘ನಾನು ಮೊದಲ ಬಾರಿ ಚಿತ್ರದುರ್ಗಕ್ಕೆ ಹೋಗಿದ್ದು ೧೯೮೫-೮೬ರ ಸುಮಾರಿನಲ್ಲಿ. ನಾ’ಡಿಸೋಜ ಅವರ ಧಾರಾವಾಹಿಗೆ ಚಿತ್ರ ಬರೆಯಬೇಕಿತ್ತು. ಅದು ಕೋಟೆ ಸುತ್ತಲ ವಾತಾವರಣದಲ್ಲಿ ನಡೆಯುವಂಥದ್ದು. ಅದಕ್ಕಾಗಿ ತರಂಗದ ಸಂಪಾದಕರಾಗಿದ್ದ ಚಿರಂಜೀವಿ, ನಾನು ಮತ್ತು ಫೋಟೋಗ್ರಾಫರ್ ಒಬ್ಬರನ್ನು ಕರೆದುಕೊಂಡು ಹೋಗಿದ್ದೆವು. ಕೋಟೆಯ ಬಹುಭಾಗ ಸುತ್ತಿ. ಫೋಟೋ ತೆಗೆದುಕೊಂಡೆವು. ಆ ಕೋಟೆಯದ್ದು ಎಂಥ ವೈಶಿಷ್ಟ್ಯ ಅಂತೀರಿ. ಯಾವ ಸ್ಥಳದಲ್ಲಿ ನಿಂತು ತೆಗೆದರು ಒಳ್ಳೆಯ ಫ್ರೇಮ್ ಸಿಗುತ್ತೆ. ಒಂದೇ ಸ್ಥಳದಲ್ಲಿ ೨೦ ಶಾಟ್‌ಗಳನ್ನು ತೆಗೆಯಬಹುದು. ಹೇಗೆ ತೆಗೆದರೂ ಭಿನ್ನ. ಅಂಥ ಕಲಾತ್ಮಕತೆ ಅದಕ್ಕಿದೆ.’
ಹೀಗೆ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡು ಬಂದು ನನ್ನ ಇಲ್ಲಸ್ಟ್ರೇಷನ್ ಜೊತೆಗೆ ಆ ಚಿತ್ರಗಳನ್ನು ಬಳಸಿಕೊಂಡು ಧಾರಾವಾಹಿಗೆ ಬಳಸಿಕೊಂಡೆವು. ಒಳ್ಳೆಯ ಪ್ರತಿಕ್ರಿಯೆ ಬಂತು.
ಇದು ಅವರ ಮೊದಲ ಭೇಟಿಯ ಬಗ್ಗೆ ಹೇಳಿದ್ದು.
ಎರಡನೆ ಬಾರಿ ಅವರು ಹೋಗಿದ್ದು, ಮತ್ತೊಂದು ಕೆಲಸದ ನಿಮಿತ್ತ. ಚಿತ್ರದುರ್ಗದ ರೇಲ್ವೆ ಸ್ಟೇಷನ್‌ನಲ್ಲಿ ಒಂದು ಮ್ಯೂರಲ್ ಮಾಡಿಕೊಡುವ ಆಹ್ವಾನ ಬಂದಿತ್ತು. ಒಪ್ಪಿಕೊಂಡಿದ್ದ ಪ.ಸ.ಕುಮಾರ್ ಮಿತ್ರರೊಂದಿಗೆ ದುರ್ಗಕ್ಕೆ ಬಂದಿದ್ದರು. ೧೫ ದಿನ ದುರ್ಗದಲ್ಲಿಯೇ ಉಳಿದು ಒಂದು ಸುಂದರವಾದ ಕಲಾಕೃತಿಯನ್ನು ಚಿತ್ರದುರ್ಗದ ರೈಲ್ವೆ ಸ್ಟೇಷನ್ನಿನಲ್ಲಿ ಸೃಷ್ಟಿಸಿದರು.
ಈ ಅವಧಿಯಲ್ಲಿ ಅವರು ಚಿತ್ರದುರ್ಗದ ಕೋಟೆಗೆ ಮತ್ತೆ ಹೋಗಿದ್ದರು. ಆಗ ಅದ ಅನುಭವ....
‘ತುಪ್ಪದ ಕೊಳವನ್ನು ಹತ್ತಿ ಇಳಿದಿದ್ದೀನಪ್ಪ.. ಸಣ್ಣ ಸಣ್ಣ ಗುಂಡಿಗಳ ಹಾಗಿರುವ ಮೆಟ್ಟಿಲುಗಳ ಮೇಲೆ ಕಾಲಿಟ್ಟು ಅರ್ಧ ದಾರಿ ಹೋಗಿ ತಿರುಗಿ ನೋಡಿದ್ದೆ. ಕಾಲು ತರತರ ನಡುಗಿ ಬಿಟ್ಟಿದ್ದವು. ಜೊತೆಗಿದ್ದವರು, ಮೇಲೆ ಬರ್‍ತಾನೋ.. ಕೆಳಗೇ ಹೋಗ್ತಾನೋ ಅಂದುಕೊಳ್ಳುತ್ತಿದ್ದರು. ಆದರೂ ಹತ್ತಿದ್ದೆ. ಅಂಥದ್ದೊಂದು ಥ್ರಿಲ್ ಕೊಟ್ಟಿದೆ ಕೋಟೆ.’
'ಒಳಕ್ಕೆ ಹೋದ ಹಾಗೆಲ್ಲಾ ಆವರಿಸಿಕೊಳ್ಳುತ್ತದೆ. ಬೆಳಗ್ಗೆ ಕಂಡ ಹಾಗೆ, ಸಂಜೆ ಕಾಣುವುದಿಲ್ಲ. ಹಾಗಂತ ಆ ಎರಡೂ ಕ್ಷಣಗಳಲ್ಲಿ ಕಾಣುವ ಕೋಟೆ ಇಷ್ಟವಾಗದೇ ಹೋಗುವುದಿಲ್ಲ. ಚಿತ್ರದುರ್ಗದ ಕೋಟೆಗೊಂದು ಆರ್ಟಿಸ್ಟಿಕ್ ಕ್ಯಾರೆಕ್ಟರ್ ಇದೆ. ಅಲ್ಲಿ ಕಲ್ಲು ಜೋಡಿಸಿರುವ ರೀತಿ. ತಿರುವುಗಳು ಎಲ್ಲದರಲ್ಲೂ ಆ ಕಲೆಯ ಅಂಶವನ್ನು ಕಾಣಬಹುದು.... ನನನ್ನು ಇವತ್ತಿಗೂ ಹಾಂಟ್ ಮಾಡುವ ಸ್ಥಳ ಚಿತ್ರದುರ್ಗದ ಕೋಟೆ’
'
ಹೀಗೆ ಹೇಳುವ ಪ.ಸ.ಕುಮಾರ್ ಅವರಿಗೆ ಚಿತ್ರದುರ್ಗ ಕೋಟೆಯ ಕಲ್ಲುಗಳನ್ನು ತಮ್ಮ ಬಣ್ಣದಲ್ಲಿ, ಕುಂಚದಲ್ಲಿ ಕರಗಿಸುವ, ಅರಳಿಸುವ ಆಸೆಯಂತೆ.
ಅವರನ್ನು ದುರ್ಗಕ್ಕೆ ಸ್ವಾಗತಿಸಲು ನಾವು ಸದಾ ಕಾತರರು...

3 comments:

Anonymous said...

ಹಾಯ್ ಗೆಳೆಯರೆ,
ಚಿತ್ರದುರ್ಗದ ಬಗ್ಗೆ ಖ್ಯಾತ ಕಲಾವಿದರೊಬ್ಬರ ಅನುಭವವನ್ನು ಓದುವಂತೆ ಮಾಡಿದಿರಿ. ಖುಷಿಯಾಯಿತು. ನಮ್ಮ ಚಿತ್ರದುರ್ಗದ ಬಗ್ಗೆ ಕಲಾವಿದರೊಬ್ಬರು ಹೆಮ್ಮೆಯಿಂದ ಹೇಳಿಕೊಂಡ ಮಾತುಗಳನ್ನು ಕೇಳಿ, ಓದಿ ತುಂಬಾ ಖುಷಿಯಾಯ್ತು. ಇಂಥ ಹತ್ತಾರು ನೂರಾರು ಮಾತುಗಳನ್ನು ಕೇಳುವಂತಾಗಲಿ...

Anonymous said...

ಪ.ಸ. ಕುಮಾರ್ ಹೇಳಿದ್ದು ನಿಜ. ಕೋಟೆಗಷ್ಟೇ ಅಲ್ಲ, ದುರ್ಗದ ವಾತಾರವಣವೇ ಕಲಾತ್ಮಕ. ಇಲ್ಲಿನ ಆಕಾಶವನ್ನು ಗಮನಿಸಿ... ಆಕಾಶ ನೀಲಿ ಬಣ್ಣಕ್ಕೆ ಇಲ್ಲಿ ಅದರದ್ದೇ ಆದ ವೈಶಿಷ್ಟ್ಯ ಹಾಗೂ ವೈವಿಧ್ಯ ಇದೆ. ಬೇಕಿದ್ದರೆ, ಬೆಟ್ಟದ ಬೇರೆ ಬೇರೆ ಭಾಗದಲ್ಲಿ ಆಕಾಶವನ್ನು ಗಮನಿಸಿ. ನೀಲಿಯಲ್ಲೇ ನೂರು ಛಾಯೆಗಳು ದೊರೆತಾವು. ಸಂಜೆಯ ವೇಳೆಗೆ ಆಕಾಶದಲ್ಲಿ ಓಕುಳಿಯಾಟ. ಚಿತ್ರದುರ್ಗದ ಬಾನು ಲಂಡನ್ನಿನ ಆಕಾಶದಷ್ಟೇ ವರ್ಣರಂಜಿತವಾಗಿರುತ್ತದೆ ಎಂದು ಖ್ಯಾತ ವಿದೇಶಿ ಛಾಯಾಗ್ರಾಹಕನೊಬ್ಬನ ಅನುಭವ ಓದಿದ ನೆನಪು.
(ಆಕಾಶ ಎಲ್ಲಿದ್ದರೂ ಒಂದೇ ಬಿಡಿ ಅಂದುಕೊಳ್ಳುವ ಅಗತ್ಯವಿಲ್ಲ. ಭೌಗೋಳಿಕ ರಚನೆ,ಋುತುಮಾನ, ಹವಾಮಾನ, ಮೋಡಗಳ ಸಾಂದ್ರತೆ ಇತ್ಯಾದಿ ಅಂಶಗಳ ಮೇಲೆ ಆಗಸದ ಭಿತ್ತಿ ರಚನೆಯಾಗುತ್ತದೆ ಎಂಬುದು ಹೆಚ್ಚಿನ ಮಾಹಿತಿಗಾಗಿ.)

ಸುಧನ್ವಾ ದೇರಾಜೆ. said...

ಬಹಳ ಬೇಗ ಇಷ್ಟು ಒಳ್ಳೆಯ ಕೆಲಸ ಶುರು ಮಾಡೋರು ಕಡಿಮೆ ! ನೀವು ಮಾಡುತ್ತಿದ್ದೀರಿ. ಸಮ್ಮೇಳನದ ಬಗ್ಗೆ ನಿಮಗಿರುವ ಆಸ್ಥೆ ದೊಡ್ಡದು. ಬ್ಲಾಗ್ ಚೆನ್ನಾಗಿದೆ.