Tuesday, June 10, 2008

ಗೌನಹಳ್ಳಿಯ ವೃತ್ತಾಂತಗಳು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಯುವ್ಯ ದಿಕ್ಕಿನ ಗಡಿ ಗ್ರಾಮ ಗೌನಹಳ್ಳಿ. ವಾಯುವ್ಯ ದಿಕ್ಕಿನಿಂದ ಹರಿದು ಬರುವ ಬಸವನಹೊಳೆ ಹಳ್ಳ ಮೂಡಲಕ್ಕೆ ಹರಿದು ಅನಂತರ ತೆಂಕಲಿಗೆ ತಿರುಗಿ ಊರ ಮುಂದೆ ಅಂದರೆ ಕೇವಲ ಫರ್ಲಾಂಗು ದೂರದಲ್ಲಿ ತೆಂಕಲು ದಿಕ್ಕಿಗೆ ಹರಿಯುತ್ತದೆ. ಊರಿನ ಮೂಡಲ ದಿಕ್ಕು ಮತ್ತು ಪಡುವಲ ದಿಕ್ಕಿಗೆ ಎರಡು ಗುಡ್ಡದ ಸಾಲು ಹಬ್ಬಿದೆ. ಗುಡ್ಡಗಳ ಅಂತರ ಕೇವಲ ಎರಡೇ ಮೈಲಿ. ಮಧ್ಯದ ಪ್ರದೇಶ, ಜಿಲ್ಲೆಯಲ್ಲೇ ಅತ್ಯಂತ ಫಲವತ್ತಾದ ಗೂಡು ಮಿಶ್ರಿತ ಕೆಂಪು ಮಣ್ಣಿನ ಭೂಮಿ.
ಪಡವಲ ಗುಡ್ಡದಾಚೆಗೆ ಸಹಸ್ರಾರು ಏಕರೆ ಕಾಯ್ದಿಟ್ಟ ಅರಣ್ಯವಿದೆ. ಹೀಗಾಗಿ 40-50 ವರ್ಷಗಳ ಹಿಂದೆ ಕಾಡಿನಲ್ಲಿ ವಾಸಿಸುತ್ತಿದ್ದ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳವಿತ್ತು. ಆಗಾಗ್ಗ ಗೌನಹಳ್ಳಿಯ ರೈತರ ಒಂದಿಲ್ಲೊಂದು ಆಕಳವೂ, ಎತ್ತೋ, ಎಮ್ಮೆಯೋ ಇವುಗಳಿಗೆ ಆಹುತಿಯಾಗುತ್ತಿದ್ದವು.
ಈ ನಿಸರ್ಗ ಸುಂದರ ಪ್ರದೇಶದಲ್ಲಿ ಭೂಮಾಪನ ಕಾಲಕ್ಕೆ ಮೊದಲು ಮುಂಗರಾಯ ಪಟ್ಟಣ, ನಡವಲಹಳ್ಳಿ, ಶಂಕರನಹಳ್ಳಿ ಎಂಬುವು ಇದ್ದವೆಂಬುದಕ್ಕೆ ಕುರುಹುಗಳಿವೆ. ಮಂಗರಾಯ ಕಟ್ಟಿಸಿರಬಹುದಾದ ಎತ್ತರದ ಕೆರೆಯ ಏರಿ ಈಗಲೂ ಸಾಕ್ಷಿಯಾಗಿದೆ. ಇವು ಹೇಗೆ ನಾಶವಾದವೋ ಗೊತ್ತಿಲ್ಲ. ಈ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಹಿರಿಯರಾರೂ ಈಗ ಬದುಕಿಲ್ಲ.
ಇತ್ತೀಚೆಗೆ ಅಂದರೆ 50 ವರ್ಷಗಳ ಹಿಂದೆ ಇದ್ದ ಕೆನ್ನಳ್ಳಿ (ಕೆಂದಗಾನಹಳ್ಳಿ) ಹಾಳಾಯಿತು. ಈ ಊರು ಎರಡು ಮೂರು ಕಡೆಗಳಲ್ಲಿ ಕಟ್ಟಿದರೂ ಉಳಿಯಲಿಲ್ಲ. ಆ ಹಳ್ಳಿಗರು ದರೋಡೆ, ಲೂಟಿ ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದದ್ದನ್ನು ಗೌನಹಳ್ಳಿಯ ಜನ ಇನ್ನೂ ಮರೆತಿಲ್ಲ.
ಗೌನಹಳ್ಳಿಗೆ ರಸ್ತೆ ಎಂಬ ಸೌಕರ್ಯ ಮತ್ತು ಪ್ರಾಥಮಿಕ ಶಾಲೆಯ ಅನುಕೂಲ ದೊರಕಿದ್ದೇ ದೇಶ ಸ್ವಾತಂತ್ರ್ಯ ಪಡೆದುಕೊಂಡ ವರ್ಷ. ಅಲ್ಲಿಯ ತನಕ ಊರ ನಿವಾಸಿಗಳು ಬಂಡಿ ಜಾಡಿನಲ್ಲಿ ಊರಿನ ಆಗ್ನೇಯ ದಿಕ್ಕಿಗಿರುವ ಕಳ್ಗಣಿವೆ ಮಾರ್ಗವಾಗಿ ಸಂಚರಿಸುತ್ತಿದ್ದರು.
ಗೌನಹಳ್ಳಿಯ ತೆಂಕಲಿಗೆ ಎರಡು ಮೈಲು ದೂರದಲ್ಲಿ ಗುಡಿಹಳ್ಳಿ ಎಂಬ ಗ್ರಾಮ ಬೇಚರಾಕ್ ಆಗಿದ್ದು ಈಗೀಗ ಈ ಭಾಗದಲ್ಲಿ ಜಮೀನು ಹೊಂದಿರುವವರು ವಾಸದ ಮನೆ ನಿರ್ಮಿಸುತ್ತಿದ್ದಾರೆ. ಇಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನವಿದೆ.
ಕಡಿದಾಳ್ ಮಂಜಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೌನಹಳ್ಳಿಗೊಂದು ಹೊಸಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಒಂದು ದಶಕ ಕಾಲ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. 1956-57 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಮರು ಅಂದಾಜು ಇತ್ಯಾದಿಗಳಿಂದ ವಿಳಂಬವಾಗಿ ಕೊನೆಗೆ 1963-64ರ ಹೊತ್ತಿಗೆ ಮುಕ್ತಾಯಗೊಂಡಿತು. ಆರ್. ಸಣ್ಣರಂಗಯ್ಯ ಎಂಬ ದಕ್ಷ ಇಂಜಿನೀಯರ್ ಕೆರೆ ನಿರ್ಮಾಣಕ್ಕೆ ಶ್ರಮಿಸಿದರು.
ಆ ಕಾಲದಲ್ಲಿ ಬಿಳಿಜೋಡಿನಿಂದ ಕೆರೆ ನಿರ್ಮಾಣಕ್ಕೆ ಬಂದಿದ್ದ ಮಣ್ಣು ಒಡ್ಡರು `ಸಂಗ್ಯಾ-ಬಾಳ್ಯಾ` ನಾಟಕವನ್ನು ಅಭಿನಯಿಸಿ, ಗೌನಹಳ್ಳಿಯ ಹಲವಾರು ಕಲಾವಿದರು ಅರಳುವಂತೆ ಮಾಡಿದ್ದರು. ಕೆರೆ ನಿರ್ಮಾಣ ಆರಂಭವಾಗಿ ಮುಕ್ತಾಯವಾಗುವಷ್ಟರಲ್ಲಿ ಮುಗ್ದೆಯಂತಿದ್ದ ಗೌನಹಳ್ಳಿಯ ನಿರುಮ್ಮಳ ಬದುಕು ಹಲವಾರು ಆಕರ್ಷಣೆಗಳಿಗೆ ಪಕ್ಕಾಯಿತು. ಯಾವ್ಯಾವ ಊರುಗಳಿಂದಲೋ ಜನ ವಲಸೆ ಬಂದರು. ಗೌನಹಳ್ಳಿಯ ಸುಮಾರು 25-30 ಹೆಣ್ಣು ಮಕ್ಕಳು ಪರ ಊರಿನ ಗಂಡುಗಳನ್ನು ಲಗ್ನವಾದರು. ಗಂಡಂದಿರ ಸಮೇತ ತೌರೂರಿಗೆ ಹಿಂತಿರುಗಿ ಸರ್ಕಾರಿ ಭೂಮಿಯನ್ನು ( ಆಹಾರ ಕಂಡ ಬಂಜರು) ಬಗರ್ ಹುಕುಂ ಸಾಗುವಳಿ ಮಾಡಿ, ಆನಂತರ ಭೂಮಿಯ ಒಡೆತನ ಪಡೆದುಕೊಂಡರು. ಗ್ರಾಂಟಿನ ಮನೆಗಳನ್ನು ಕಟ್ಟಿಸಿಕೊಂಡು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ವಲಸೆ ಬಂದವರೇ ಪ್ರತ್ಯೇಕವಾಗಿ ಕಟ್ಟಿಕೊಂಡಿರುವ ಕರ್ಲಹಟ್ಟಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳಿವೆ. ಪರಿಶಿಷ್ಠ ಪಂಗಡದವರೇ ಹೆಚ್ಚಾಗಿರುವ ಗೌನಹಳ್ಳಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮೇಕೆ ಸಾಕಿಕೊಂಡಿದ್ದಾರೆ.
ಹಳೇ ತಲೆಮಾರಿನ ವಾಸಿಗಳಿಗೆ ಮೂಡಲಗುಡ್ಡದ ಕಳ್ಗಣಿವೆ, ಹುಣಸೆಕಣಿವೆ, ಪಟ್ಣಮರಡಿ (ಮಂಗರಾಯನ ಪಟ್ಣ ಇದ್ದ ಸ್ಥಳ) ಸಂತೇಕಣಿವೆ, ಮೂಡಲಗುಡ್ಡ, ನೆಲ್ಲಿಮಲೆಕಲ್ಲು, ಸಿಡಿಲುಬಡಿದ ಕಲ್ಲು, ಗೋಡೆಕಲ್ಲು ಇತ್ಯಾದಿ ಸಾಂಸ್ಕೃತಿಕ ಸಂಬಂಧ ಪಡೆದುಕೊಂಡಿರುವಂತೆ ಪಡುವಲ ಗುಡ್ಡದ ಸಾಲಿನ, ಬಡೆತ್ತಿನ ಕಣಿವೆ, ಹಾಲಗುಡ್ಡ, ರಾಮದಾಸನ ಮರಡಿ, ಗಾಳಿಕೊಲ್ರ, ಎಮ್ಮೆ ತಿರುಗಿದ ನೆತ್ತಿ, ಭೂತನ ಕಣಿವೆ, ಎಮ್ಮೆ ಕಣಿವೆ, ಗೊಲ್ರ ಗುಡ್ಡ, ಜಾಮೇನಪ್ಪನ ಏಣು, ಕಣಿಮೆ ಉದಿ, ಕೋಣನ ಗುಂಡಿ ಮತ್ತು ನೀರಗುಡ್ಡ ಕೂಡಾ ಸಾಂಸ್ಕೃತಿಕ ಸಂಬಂಧ ಉಳಿಸಿಕೊಂಡಿವೆ.
ಮುಂಗಾರಿನಲ್ಲಿ ಬೀಜ ಬಿತ್ತಿದ ಮೇಲೆ ಮತ್ತು ಕೊಯ್ಲು ಮುಗಿದು, ಸುಗ್ಗಿಕಾಲ ಬಂತೆಂದರೆ ಗೌನಹಳ್ಳಿಯ ನೂರಾರು ದನಕರುಗಳು ಎಮ್ಮೆ ಕಣಿವೆ ಮೂಲಕ ಹಾಯ್ದು ಪಡುವಲ ಗುಡ್ಡವನ್ನು ಇಳಿದು ಕಮರದಲ್ಲಿ (ಕಾಯ್ದಿಟ್ಟ ಅರಣ್ಯ), ಬೆಳೆದಿರುವ ಹುಲ್ಲು ಮೇಯಲು ಹೋಗುತ್ತವೆ. ಈ ದಿನಗಳಲ್ಲಿ ದನ-ಕುರಿಗಾಹಿಗಳ ಪಿಳ್ಳಂಗೋವಿಯ ಸದ್ದು, ಕೇಕೆ ಮುಂತಾದವುಗಳಿಂದ ಅರಣ್ಯದಲ್ಲಿನ ಗಿಡಮರಗಳೇ ಲವಲವಿಕೆಯಿಂದ ಇರುವಂತೆ ಭಾಸವಾಗುತ್ತದೆ. ಈ ಮಧ್ಯೆ ಮರ ಕಡಿಯುವ ದುಷ್ಕರ್ಮಿ ನಿಕ್ಕರ್ಮಿಗಳು ಗೋಚರಿಸುತ್ತಾರೆ.
ಅರಣ್ಯ ಇಲಾಖೆಯ, ಗಾರ್ಡ್ ಕರ್ತವ್ಯ ನಿರ್ವಹಿಸುತ್ತಿದ್ದ ಹೀರಾ ಸಿಂಗ್‌ನನ್ನು ಹಳ್ಳಿಗರು ಮರೆತಿಲ್ಲ. ಸೋಮವಾರಗಳಂದು ಮೀಸಲು ಅರಣ್ಯದ ಬದಿಗೆ ಬೆಳೆದಿದ್ದ ಗಿಡಗಳನ್ನು ಸವರಲು ಮತ್ತು ಗುಡ್ಡದ ಬಾದೆ ಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಅದನ್ನು ನಂದಿಸಲು ಊರ ಯುವಕರನ್ನು ಈತ ಕರೆದೊಯ್ಯುತ್ತಿದ್ದ.
ಗೌನಹಳ್ಳಿಗೆ ವಾಸಕ್ಕೆ ಬಂದ ಹಿರಿಯೂರು ಶಾಸಕರಾಗಿದ್ದ ದಿವಂಗತ ಎ. ಮಸಿಯಪ್ಪನವರ ಪ್ರಯತ್ನದಿಂದ ಗಡಿಗ್ರಾಮವಾದ ಗೌನಹಳ್ಳಿಗೆ ೧೯೬೨ರಲ್ಲಿ ವಿದ್ಯುತ್ ಬಂತು. ಇದೇ ಮಹರಾಯರ ಶ್ರೀ ರಂಗನಾಥ ಬಸ್ ಗೌನಹಳ್ಳಿ ಮಾರ್ಗವಾಗಿ ಹಿರಿಯೂರು- ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸಿತ್ತು. ಅದಕ್ಕೆ ಮೊದಲು ಗೌನಹಳ್ಳಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಚಿತ್ರದುರ್ಗದ ಮಾರುಕಟ್ಟೆಗೆ ಗಾಡಿಗಳ ಮೂಲಕ (೨೫ ಮೈಲಿ ದೂರ) ರಾತ್ರಿಯೆಲ್ಲಾ ಪ್ರಯಾಸದಿಂದ ಸಾಗಿಸುತ್ತಿದ್ದರು.
ರಾಜಕೀಯ ಸ್ಥಿತ್ಯಂತರಗಳಿಂದ ಹಾಗೂ ಹೊರಗಿನ ಪ್ರಚೋದನೆಗಳಿಂದ ಊರಿನಲ್ಲಿ ತಳ ಊರಿರುವ ಕೆಲವರ ಉಪಟಳದಿಂದ ಊರಿಗೆ ಹುಗ್ಗಿ ಹೊಯ್ದು ಊರು ಕಟ್ಟಿದ ಕುಂಚಿಟಿಗ ಲಿಂಗಾಯ್ತರು ಬಳಲಿದ್ದಾರೆ. ಇವರ ಪರಿಶ್ರಮದಿಂದ ಇತ್ತೀಚೆಗೆ ಅಡಿಕೆ, ತೆಂಗು, ಬಾಳೆ ಮುಂತಾದ ಬೆಳೆ ಬೆಳೆದು ಕೊಂಚ ನೆಮ್ಮದಿಯತ್ತ ಸಾಗಿರುವ ಹಳ್ಳಿಗರ ಬದುಕಿನಲ್ಲಿ ಗುಡಿಹಳ್ಳಿಯ ಏಳುಕೋಟಿ ಮೈಲಾರಲಿಂಗೇಶ್ವರ, ಗೌನಹಳ್ಳಿಯ ಆಂಜುನೇಯ, ಮಾರಿ ದೈವಗಳ ಪ್ರಭಾವವೇ ಹೆಚ್ಚು. ಮೈಲಾರಲಿಂಗೇಶ್ವರ ಜಾತ್ರೆ ಮಾಡುವವರೇ ಈ ಹಳ್ಳಿಯ ನಿವಾಸಿಗಳು. ಉಗಾದಿಯಿಂದ ಬರುವ ಹುಣ್ಣಿಮೆಗೆ(ಹಟ್ಟಿ ಹುಣ್ಣಿಮೆ ಎಂದು ಖ್ಯಾತಿ) ಜಾತ್ರೆ ಆರಂಭವಾಗಿ ಐದು ದಿನ ನಡೆಯುತ್ತದೆ. ಈ ಸಂದರ್ಭದಲ್ಲಿ ರೈತರು ನೇಗಿಲು ಹೂಡುವುದಿಲ್ಲ.
ಗುಡಿಗೌಡ ಮತ್ತಿತರ ಮುಖಂಡರ ತೀರ್ಮಾನದಂತೆ ‘ದೋಸೆ ಮಾರಿ' ಮತ್ತು ಹಿಟ್ಟಿನ ಮಾರಿ' ಜಾತ್ರೆಗಳು ಗೌನಹಳ್ಳಿಯಲ್ಲಿ ಜರುಗುತ್ತವೆ. ಹಿಟ್ಟಿನ ಮಾರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ದೋಸೆ ಮಾರಿ ಜಾತ್ರೆಯಲ್ಲಿ ಅದು ನಿಷಿದ್ಧ. ಊರ ಗೌಡರ ಪೂಜೆಯೇ ಮುಖ್ಯವಾಗಿರುವ ಎರಡೂ ಜಾತ್ರೆಗಳಲ್ಲಿ ಲಿಂಗಾಯ್ತರಿಂದ ಖರ್ಚು ವಸೂಲಾತಿ ಕಡ್ಡಾಯವಾಗಿದೆ.

(ಕೃಪೆ: ಕೆಂಡಸಂಪಿಗೆ)

ಉಜ್ಜನಪ್ಪ ಬರೆದ ಕೊಳಹಾಳದ ಕಥೆ

ಹಿರಿಯ, ಉತ್ಸಾಹಿ ಪತ್ರಕರ್ತ ಜಿ.ಎಸ್.ಉಜ್ಜನಪ್ಪ. ಕಥೆ, ಜಾನಪದ ಸಾಹಿತ್ಯದ ಬಗ್ಗೆ ಅಪಾರ ಒಲವಿಟ್ಟುಕೊಂಡಿರುವ ವ್ಯಕ್ತಿ. ಜಿಲ್ಲೆಯ ಮಣ್ಣಿನ ಗಂಧ, ಘಮಲು, ಅದರೊಳಗಿರುವ ಹತ್ತಾರು ಕಥೆಗಳನ್ನು ಬಲ್ಲ ವ್ಯಕ್ತಿ. ಅವರ ಲೇಖನಿಯಿಂದ ಅರಲಿದ ಲೇಖನ ಇಲ್ಲಿವೆ..


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೂಡಲ ದಿಕ್ಕಿನಲ್ಲಿರುವ ಗಡಿಗ್ರಾಮ ಕೊಳಹಾಳ. ಈ ಊರಿನಿಂದ ಪಕ್ಷಿ ಮಾರ್ಗದಲ್ಲಿ ಸುಮಾರು ೨೫ ಕಿಲೋಮೀಟರ್ ದೂರವಿರುವ ತಾಲೂಕು ಕೇಂದ್ರಕ್ಕೆ ನೇರ ಸಂಪರ್ಕವಿಲ್ಲ. ಕೊಳಹಾಳಿನಿಂದ ೧೨ ಕಿಲೋಮೀಟರ್ ಪಡುವಲ ದಿಕ್ಕಿಗೆ ಪ್ರಯಾಣಿಸಿದರೆ ಸಿಗುವ ಹೊರಕೇರಿ ದೇವರಪುರ (ಎಚ್ ಡಿ ಪುರ) ದಿಂದ ೧೦ ಕಿಲೋಮೀಟರ್ ಬಡಗಲು ದಿಕ್ಕಿಗೆ ಹೋಗಿ ಅಲ್ಲಿನ ಚಿತ್ರಹಳ್ಳಿ ಕ್ರಾಸ್ ನಿಂದ ಮತ್ತೆ ೧೪ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಪ್ರಯಾಣಿಸಿ ಹೊಳಲ್ಕೆರೆ ತಲುಪಬೇಕು.
ಗ್ರಾಮದ ಬಡಗಣ ದಿಕ್ಕಿಗೆ ಸಾಲು ಗುಡ್ಡ, ಅವುಗಳ ಆಚೆ ಕಡೆ ಮಗ್ಗುಲಿಗೆ ಚಿತ್ರದುರ್ಗ ತಾಲೂಕಿನ ಗಡಿ. ಮೂಡಲಕ್ಕೆ ಹಿರಿಯೂರು ಮತ್ತು ತೆಂಕಲಿಗೆ ಹೊಸದುರ್ಗ ತಾಲೂಕಿನ ಗಡಿಗಳು ಹೊಂದಿಕೊಂಡಿವೆ. ಈ ಹಳ್ಳಿಗೆ ಕುಡಿಯುವ ನೀರಿನ ಸೇದೋಬಾವಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಥಮಿಕ ಶಾಲೆ ದೊರೆತಿದ್ದು ಸ್ವಾಂತಂತ್ರ್ಯ ಗಳಿಸಿದ ಮೇಲೆಯೇ.
ಕೊಳಹಾಳಿಗೆ ಮೂಡಲ ದಿಕ್ಕಿನಲ್ಲಿ ೧ ಕಿಲೋಮೀಟರ್ ದೂರದ ಗೊಲ್ಲರಹಟ್ಟಿ, ೨ ಕಿಲೋಮೀಟರ್ ಈಶಾನ್ಯಕ್ಕೆ ಎಲಕೂರನಹಳ್ಳಿ, ಬಡಗಣಕ್ಕೆ ೨ ಕಿಲೋಮೀಟರ್ ದೂರದಲ್ಲಿ (ಗುಡ್ಡಾದಾಚೆಗೆ) ಎರೆಹಳ್ಳಿ , ಪಡುವಣಕ್ಕೆ ೫ ಕಿಲೋಮೀಟರ್ ದೂರದಲ್ಲಿ ತೇಕಲವಟ್ಟಿ ಮತ್ತು ೬ ಕಿಲೋಮೀಟರ್ ನೈರುತ್ಯಕ್ಕೆ ಕೊಮಾರನಹಳ್ಳಿ ಹತ್ತಿರದ ಹಳ್ಳಿಗಳು.
ಈ ಊರು ಕಟ್ಟಿರುವುದೇ ಮಟ್ಟಿಯ ಮಗ್ಗುಲಲ್ಲಿ. ಮಟ್ಟಿಯ (ಮರಡಿ) ಮೇಲೊಂದು ಗುಂಡವ್ವರ ಮಾರನಾಯ್ಕ ಎಂಬುವವನು ಕಟ್ಟಿಸಿರುವ ಕಾವಲು ಬುರುಜು ಇದೆ. ದರೋಡೆ, ಸುಲಿಗೆಗಾರರು ಇತ್ತ ಬಂದಾಗ ಕಾವಲಿನವರು ಎಚ್ಚರಿಸುತ್ತಿದ್ದರಂತೆ. ಕೊಳಹಾಳಿನ ಪೂರ್ವದ ಹೆಸರು ‘ಕೊಳಪಾಲ' ಎಂದು ೧೦ನೇ ಶತಮಾನದ ಶಿಲಾಲೇಖ ತಿಳಿಸುತ್ತದೆ.
ಕೊಳಹಾಳಿನ ಬಡಗಣಕ್ಕೆ ಎರಡು ಫರ್ಲಾಂಗ್ ದೂರದಲ್ಲಿ ಪಡುವಲಿಂದ ಮೂಡಲಕ್ಕೆ ಇರುವ ದಾರಿಯನ್ನು ‘ತಿರುಪತಿ ಹಾದಿ' ಎಂದು ಕರೆಯುತ್ತಿದ್ದುದು ವಾಡಿಕೆ. ಇದು ಪಡುವಲ ಸೀಮೆಯಿಂದ ನೇರವಾಗಿ ಎಚ್ ಡಿ ಪುರ, ಸಂಗೇನಹಳ್ಳಿ, ತೇಕಲವಟ್ಟಿ, ಎಲಕೂರನಹಳ್ಳಿ, ಕುಂಬಾರಕಟ್ಟೆ ಮಾರ್ಗವಾಗಿ ಐಮಂಗಲವನ್ನು ತಲುಪುತ್ತದೆ.
ಇದೇ ಹಾದಿಯಲ್ಲಿ ಕೊಳಹಾಳಿಗೆ ಒಂದು ಕಿಲೋಮೀಟರ್ ಪಡುವಲಿಗೆ ಇರುವ ಕೊಗೋಮಟ್ಟಿ ಮಗ್ಗುಲಲ್ಲಿದ್ದ ತಿಮ್ಮಪ್ಪನಹಳ್ಳಿ ಹಾಳಾಗಿದೆ. ಈ ಹಳ್ಳಿಗರು ಮಟ್ಟಿ ಪಕ್ಕದಲ್ಲಿ ಹಾಯುವ ತಿರುಪತಿ ಹಾದಿಯಲ್ಲಿ ಬಂದು ಹೋಗುವ ದಾರಿಹೋಕರನ್ನು ಅಲ್ಲಿನ ಹಳ್ಳದಲ್ಲಿ ಸುಲಿಗೆ ಮಾಡಲಾಗುತ್ತಿತ್ತೆಂದೂ, ಇದರಿಂದ ನೊಂದವರ ಶಾಪದಿಂದ ಈ ಊರು ಹಾಳಾಯಿತೆಂದೂ ಈ ಪ್ರದೇಶದ ಜನರ ನಂಬುಗೆ.
ಒಮ್ಮೆ ಕೊಳಹಾಳಿನ ಲಿಂಗಾಯ್ತರ ಸಂಬಂಧಿಗಳು ಕೊಂಡ ರಾಗಿಯನ್ನು ಬಂಡಿಯಲ್ಲಿ ಹೇರಿಕೊಂಡು ಗೂಳಿಹೊಸಳ್ಳಿಗೆ ಸಾಗಿಸುತ್ತಿರುವಾಗ ದಾರಿ ಕಾಯುತ್ತಿದ್ದ ಸುಲಿಗೆಗಾರರ ಕೈಗೆ ಸಿಕ್ಕಿ ಕೊಳಹಾಳಿಗೆ ಕೇಳಿಸುವಂತೆ ಕೂಗುಹಾಕಿ, ತಮ್ಮ ಬವಣೆಯನ್ನು ತಲುಪಿಸಿದ್ದರಂತೆ. ಕೂಗು ಕೇಳಿಸಿಕೊಂಡ ಊರವರು ತಮ್ಮವರಿಗೆ ಆಗಿರಬಹುದಾದ ಸಂಕಷ್ಟದ ಅರಿವಾಗಿ ಓಡೋಡಿ ಹೋಗಿ ಸುಲಿಗೆಗಾರರಿಂದ ತಮ್ಮ ಬಂಧುಗಳನ್ನು ಬಿಡಿಸಿದ್ದರಂತೆ. ಅಂದು ಒಪ್ಪಂದ ಏರ್ಪಟ್ಟು ತಮ್ಮವರು ಈ ಹಾದಿಯಲ್ಲಿ ಬಂದಾಗ ‘ಕೆಂಚಪ್ಪರ ಸಂಬಂಧಿಗಳು' ‘ಕಾಡಪ್ಪರ ಸಂಬಂಧಿಗಳು' ಎಂದು ಹೇಳಿಕೊಂಡು ಪಾರಾಗುತ್ತಿದ್ದರಂತೆ. ಅಂದಿನಿಂದ ಇಲ್ಲಿನ ಮಟ್ಟಿಗೆ ‘ಕೂಗೋಮಟ್ಟಿ' ಎಂದು ಹೆಸರಾಯಿತಂತೆ ಎಂದು ತಿಳಿಸುತ್ತಾರೆ.
ಕೊಳಹಾಳ ಬೆನ್ನಿಗೇ ಆಗ್ನೇಯ ದಿಕ್ಕಿಗಿರುವ ಗುಡ್ಡದ ಸಾಲು ಮತ್ತು ಈ ಸಾಲಿನಲ್ಲಿರುವ ಭೈರಜ್ಜಿ ಕಣಿವೆ, ಈ ಕಣಿವೆಯ ಮೂಲಕ ಮುಂದೆ ನಡೆದರೆ ಸಿಗುವ ಬಸವನಹಳ್ಳ , ಅದರ ಪಕ್ಕದಲ್ಲಿದ್ದ ಕೆನ್ನಳ್ಳಿ ಇವು ಕೊಳಹಾಳಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ಮಿಳಿತಗೊಂಡಿವೆ. ಈ ಊರಿನ ಸುತ್ತಾ ಇರುವ ಕಪ್ಪು ಮಿಶ್ರಿತ ಕೆಂಪುಭೂಮಿ ತುಂಬಾ ಫಲವತ್ತಾಗಿದ್ದು ಕೊಳಹಾಳು ಮತ್ತು ಗೊಲ್ಲರಹಟ್ಟಿಯ ನಿವಾಸಗಳು ವರ್ಷಕ್ಕೆ ಎರಡು ಫಸಲು ಬೆಳೆಯಲು ಸಕಾಲದಲ್ಲಿ ಮಳೆ ಬೀಳುತ್ತಿತ್ತೆಂದು ರೈತರು ಸ್ಮರಿಸುತ್ತಾರೆ.
ಗೊಲ್ಲರಹಟ್ಟಿಯ ನಿವಾಸಿಗಳ ಜೊತೆಗೆ ಕೊಳಹಾಳಿನ ಕೆಲವು ಕುಂಚಿಟಿಗ ಲಿಂಗಾಯ್ತರೂ, ಬೇಡರೂ ಹಿಂದೆ ಕುರಿ ಮೇಕೆ ಸಾಕುತ್ತಿದ್ದರು. ಈಗ ಲಿಂಗಾಯ್ತರು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿದ್ದರೆ, ಗೊಲ್ಲರು ತಮ್ಮ ಕುಲ ಕಸುಬನ್ನು ಬಿಟ್ಟುಕೊಟ್ಟಿಲ್ಲ.
ಪಾರಂಪರಿಕ ಬೆಳೆಗಳಾದ ಗಿಡದಿಮ್ಮಿನ ಜೋಳ, ಕೇಸರಿಜೋಳ (ಮುಂಗಾರು), ನವಣೆ (ಪಶುಗಳ ತಲಮೇವು) ಸಜ್ಜೆ, ರಾಗಿ, ಅಲಸಂದೆ, ತೊಗರಿ , ಹರಳು, ಹುಚ್ಚೆಳ್ಳು ಮತ್ತು ಹಿಂಗಾರಿನಲ್ಲಿ ಬಿಳಿಜೋಳ ಮುಂತಾದವನ್ನು ಬೆಳೆದುಕೊಂಡು ಸುಖವಾಗಿದ್ದ ಜನ, ಇತ್ತೀಚೆಗೆ ಮಳೆ ಬೀಳುವುದರಲ್ಲಿ ಏರುಪೇರಾಗಿ ಈ ಬೆಳೆಗಳಿಗೆ ವಿದಾಯ ಹೇಳುತ್ತಿದ್ದಾರೆ. ತೋಡು ಬಾವಿಗಳು ಬತ್ತಿದವು. ಬೇಕು-ಬೇಕಿಲ್ಲದ ಕಡೆಗಳಲ್ಲೆಲ್ಲಾ ಭೂಮಿ ಕೊರೆದು ಕೊಳವೆ ಬಾವಿ ಮಾಡಿಕೊಂಡು ವಿಳ್ಳೆದೆಲೆ, ಕನಕಾಂಬರ, ಮಲ್ಲೆ, ಮಲ್ಲಿಗೆ., ಸುಗಂಧರಾಜ ಇತ್ಯಾದಿ ಹೂ ಮತ್ತು ಅಡಿಕೆ ತೋಟ ಮಾಡಿಕೊಂಡಿರುವ ಹಲವರು ನಿರುಮ್ಮಳವಾಗಿ ಬದುಕುತ್ತಿದ್ದಾರೆ.
ಕೊಳಹಾಳು ಪಡುವಲಕ್ಕೆ ಊರಿಗೆ ಹೊಂದಿಕೊಂಡೇ ಇರುವ ಹಿಂದೊಮ್ಮೆ ಕೆರೆಯಾಗಿದ್ದ ೧೨೦ ಎಕರೆ ಕೆರೆಯಂಗಳ ಪಟೇಲರ ವಂಶಸ್ಥರಿಗೆ ಸೇರಿದೆ. ಇವರು ಬಹಳ ಹಿಂದೆಯೇ ಕೊಳಹಾಳನ್ನು ತೊರೆದು ಚಿತ್ರದುರ್ಗ ಸಮೀಪದ ಪಾಲವ್ವನಹಳ್ಳಿಯಲ್ಲಿ ವಾಸಿಸುತ್ತಾ ಕೆರೆಯಂಗಳವನ್ನು ಊರಿನ ಬೇಡ ಮನೆತನಗಳಿಗೆ ಕೋರಿ ಉಳುಮೆಗೆ ನೀಡಿದ್ದರು. ಇತ್ತೀಚೆಗೆ ಸ್ಥಿತಿವಂತರಾದ ಕೊಳಹಾಳಿನ ಕೆಲವರು , ಕೆರೆಯ ಮುಕ್ಕಾಲು ಭಾಗವನ್ನು ಕೊಂಡು ಅಡಿಕೆ ಮಾಡಿಕೊಂಡಿದ್ದಾರೆ.
ಕೊಳಹಾಳಿನ ಸಾಂಸ್ಕೃತಿಕ ಬದುಕಿನಲ್ಲಿ ಊರಿನ ‘ಗದ್ದುಗೆ' ಯವರ ಮನೆತನ ಅತ್ಯಂತ ಹೆಸರುವಾಸಿಯಾದುದು. ಲಿಂಗವಂತರಾದ ಈ ಮನೆತನದ ಪೂರ್ವಿಕರು ಮತ್ತೋಡು ಸಮೀಪದ ನಿರುವುಗಲ್ಲಿನ ಹರಿಹರೇಶ್ವರ ದೇವರ ಪೂಜಾರಿಗಳಾಗಿದ್ದರು. ಮತ್ತೋಡು ದೊರೆ ಹಾಲಪ್ಪ ನಾಯಕನ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತ ಸಮಾರಂಭದ ನಿಮಿತ್ತ ಹೊರಡಿಸಿದ ಮರ್ಯಾದಾ ಶಾಸನದ (ಕ್ರಿ.ಶ ೧೬೫೧) ಅನುಸಾರ ಹಿರಿಯೂರು ತಾಲೂಕು ಮಾರೀಕಣಿವೆಯ (ವಾಣಿ ವಿಲಾಸಪುರ) ಕಣಿವೆ ಮಾರಿಕಾಂಬೆಯ ಪೂಜಾರಿಗಳಾಗಿ ನಿಯೋಜನೆಗೊಳ್ಳುತ್ತಾರೆ. ಮಾರೀಕಣೀವೆ ಸಮೀಪದ ಭರಮಗಿರಿಗೆ ಸ್ಥಳಾಂತರಗೊಂಡು ಕಣಿಮೆ ಮಾರಿಕಾಂಬೆಯ ಮೂಲಕ ಪೂಜಾರಿಕೆ ಕೈಂಕರ್ಯ ಮಾಡುತ್ತಿರುವಾಗ ಕಾಲಾನುಕ್ರಮದಲ್ಲಿ ಭರಮಗಿರಿಯ ಪಾಳೇಗಾರನ ಕಿರುಕುಳ ಸಹಿಸಲಸಾಧ್ಯವಾಗಿ ಒಂದು ಕುಟುಂಬ ದನಕುರಿ ಇತ್ಯಾದಿ ಸಮೇತ ಅಲ್ಲಿಂದ ಗುಳೇಹೊರಟು ಕೊಳಹಾಳಿಗೆ ಬಂದು ಸೇರುತ್ತಾರೆ.
‘ಉತ್ತಮರು' ಊರಿಗೆ ಬಂದುದು ಊರಿನ ಸೌಭಾಗ್ಯವೆಂದು ಭಾವಿಸಿದ ಕೊಳಹಾಳಿನ ಬೇಡ ಜನಾಂಗದವರು ಅವರಿಗೆ ಜಮೀನು ನೀಡಿದ್ದಲ್ಲದೆ ವಾಸಕ್ಕೆ ೪೮ ಕಂಬದ ಒಂದು ದೊಡ್ಡ ಮಾಳಿಗೆ ಮನೆಯನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇಲ್ಲಿ ನೆಲೆಸಿದ ಅವರ ‘ದೊಡ್ಡಮನೆ' ಅಥವಾ ಗದ್ದುಗೆ ಮನೆಯಲ್ಲೇ ಐದಾರು ತಲೆಮಾರಿನ ಬಳಿಕ ಮುಂದೆ ಅವಧೂತನಾದ ಕೆಂಚಪ್ಪ ಆತನ ಅತ್ಯಂತ ಚೆಲುವೆ ಮಗಳು ಭೈರಮ್ಮ ಜನಿಸಿದ್ದು.
ಕೆಂಚಪ್ಪ ಬಾಲಕನಾಗಿದ್ದಾಗಲೇ ಸದಾ ಅನ್ಯಮನಸ್ಕನಾಗಿರುತ್ತಿದ್ದನು. ಉಂಡು ಮಲಗುವ ಕ್ರಿಯೆಗಳು ಇವನಿಗೆ ಯಾಂತ್ರಿಕವಾಗಿದ್ದವು. ಅವನ ವಿಲಕ್ಷಣ ಸ್ಥಿತಿ ನಡವಳಿಕೆಗಳಿಂದ ‘ತಿಕಲ' ‘ಯೇಗಿ' ಎಂದು ಕರೆಯಿಸಿಕೊಂಡಿದ್ದನು. ಹುಚ್ಚಮ್ಮ ಎಂಬ ಕನ್ನೆಯೊಂದಿಗೆ ಲಗ್ನವಾದರೂ ಕೃಷಿ ಬದುಕಿಗಿಂತ ದನಗಾಹಿಯಾಗಿದ್ದವನು. ಇಂಥವನನ್ನು ಹುಡುಕಿಕೊಂಡು ಹೊಸಪೇಟೆ ಸಮೀಪದ ಕಾಳಘಟ್ಟ ಗುಡ್ಡದಲ್ಲಿ ವಾಸಿಯಾಗಿದ್ದ ರುದ್ರಮುನಿ ಅವಧೂತರೆಂಬುವವರು ಕುದುರೆ ಹತ್ತಿಸಿಕೊಂಡು ಬರುತ್ತಾರೆ.
ದನಗಾಹಿ ಕೆಂಚಪ್ಪ ತನ್ನ ಇಷ್ಟ ತಾಣವಾದ ಕೂಗೋಮಟ್ಟಿ ಬಡಗಣ ದಿಕ್ಕಿಗಿರುವ ಗುಡ್ಡದಾಚೆಗಿನ ಕಣಿವೆಯಲ್ಲಿನ ‘ಸಿದ್ದಪನ ವಜ್ರ'ದ ಬಳಿ ಕುಳಿತುಕೊಂಡು ತನ್ನ ಭಾವನಾಲೋಕದಲ್ಲಿ ವಿಹರಿಸುತ್ತಿರುವಾಗ ರುದ್ರಾವಧೂತರು ಈತನ ಎದುರಿಗೆ ಧುತ್ತೆಂದು ಕಾಣಿಸಿಕೊಳ್ಳುತ್ತಾರೆ. ಎದ್ದು ಅವರಿಗೆ ಅಡ್ಡಬಿದ್ದು ಕೆಂಚಪ್ಪನಿಗೆ ನನಗೆ ಹಸಿವಾಗಿದೆ ತಾಯಿ ಸ್ತನದಿಂದಾಗಲಿ ಪ್ರಾಣಿಗಳಿಂದಾಗಲಿ ಹಿಂಡಿ ಕರೆಯದ ಹಾಲನ್ನು ತಂದುಕೊಡು. ಅಲ್ಲಿಯವರೆಗೆ ಇಲ್ಲೇ ಕಾಯ್ತೀನಿ ಎಂದು ಅಪ್ಪಣೆ ಇತ್ತರು.
ಕೆಂಚಪ್ಪ ಕೆಲಕಾಲ ವಿಚಲಿತನಾದರೂ ಗುರುಗಳ ಮನದಿಚ್ಛೆಯನ್ನು ಅರ್ಥಮಾಡಿಕೊಂಡು ಹೋಗಿ ಈಚಲಮರದ ಹಾಲನ್ನು ಗಡಿಗೆ ತುಂಬಾ ಹೊತ್ತು ತರುತ್ತಾನೆ. ಅದನ್ನು ಪಡೆದ ಗುರುಗಳು ಸಾಕಾಗುವಷ್ಟು ಕುಡಿದು ಸಂತೃಪ್ತರಾಗಿ ಉಳಿದುದನ್ನು ಕುಡಿಯಲು ಕೆಂಚಪ್ಪನಿಗೆ ಸೂಚಿಸುತ್ತಾರೆ. ಅದುವರೆಗೆ ಅದೇನೆಂದು ಅರಿಯದಿದ್ದ ಕೆಂಚಪ್ಪ ಈಚಲುಮರದ ಹಾಲನ್ನು ಗಟಗಟನೆ ಕುಡಿದಿದ್ದ. ಗುರುಗಳು ಕೆಲಕಾಲ ಅಲ್ಲೇ ಇದ್ದು ಕೆಂಚಪ್ಪನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿ ಗುರುಭೋದೆ ನೀಡಿ ಹೋಗುತ್ತಾರೆ.
ಅವಾಗಿನಿಂದ ಕೆಂಚಪ್ಪ ತನ್ನವರ, ಕುಲಬಾಂಧವರ ತಿರಸ್ಕಾರಕ್ಕೆ ಈಡಾದರೂ ಅವಧೂತನಾಗುವ ಹಾದಿಯಲ್ಲಿ ಸಾಗುತ್ತಿದ್ದ. ಕಾಲ ಸರಿದಂತೆ ಕೆಂಚಪ್ಪನ ನಡವಳಿಕೆಗಳು ಅತ್ಯಂತ ವಿಲಕ್ಷಣವಾಗುತ್ತಿದ್ದವು. ಈತ ಅನಾಚಾರಿಯೆಂಬ ದೂರು ಚಿತ್ರದುರ್ಗದ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾಗಿದ್ದ ಮರುಘರಾಜೇಂದ್ರ ಸ್ವಾಮಿಗಳ ಮುಂದೆ ಪ್ರಸ್ತಾಪವಾಯ್ತು. ಗುರುಗಳು ಕೆಂಚಪ್ಪನನ್ನು ಪರೀಕ್ಷಿಸಿದ ಬಳಿಕ ಇವನೊಬ್ಬ ಅಸಾಮಾನ್ಯ ಮನುಷ್ಯ ಕಣ್ರಪ್ಪ, ಇವನು ನಿಮ್ಮಂತೆ ಸಾಮಾನ್ಯನಲ್ಲ ಅವನಗೊಡವೆಗೆ ಅವನನ್ನು ಬಿಟ್ಟು ಬಿಡಿ ಯಾರೂ ಪೀಡಿಸಬೇಡಿರಿ ಎಂಬುದಾಗಿ ಆದೇಶಿಸಿದರು.
ಕೆಂಚಪ್ಪನ ಮಗಳು ಕಡು ಚೆಲವೆ ಭೈರಮ್ಮಳೂ ಎಲ್ಲರಂತೆ ತಂದೆಯನ್ನು ಅಲಕ್ಷಿಸಿದ್ದಳು. ಆದರೆ ಈಕೆಯನ್ನು ಪ್ರೀತಿಯಿಂದ ಮತ್ತು ಅವಳಾಡುತ್ತಿದ್ದ ವಯಸ್ಸಿಗಿಂತ ವಿವೇಕದ ಮಾತುಗಳಿಗೆ ತಲೆದೂಗಿ ಭೈರಜ್ಜಿ ಎಂದು ಕರೆಯುತ್ತಿದ್ದರು. ಈಕೆಯ ಚೆಲವಿಗೆ ಮನಸೋತಿದ್ದ ಕೆನ್ನಳ್ಳಿಯ ಬೇಡರ ರಣಹದ್ದಿನಂಥವನೊಬ್ಬ ಭೈರಮ್ಮಳನ್ನು ಉಪಾಯದಿಂದ ತನ್ನ ತೆಕ್ಕೆಗೆ ಹಾಕಿಕೊಂಡ. ಇದರ ಸುಳಿವು ಕೆಂಚಪ್ಪನ ಒಳಗಣ್ಣಿಗೆ ಗೋಚರಿಸಿ ಅವಳಿಗೆ ಮುಂದೊದಗಬಹುದಾದುದನ್ನು ನೊಂದು ನುಡಿದಿದ್ದ. ಭೈರಮ್ಮ ತನ್ನ ಯೌವನದ ಅಮಲಿನಲ್ಲಿ ಕೊಳಾಳು- ಕೆನ್ನಳ್ಳಿಗಳ ಗುಡ್ಡದ ಕಣಿವೆ ಮಾರ್ಗವಾಗಿ ಓಡಾಡುತ್ತಿರುವಾಗ ತನ್ನ ಪ್ರಿಯಕರನ ಹೆಂಡತಿಯ ಹಿಕಮತ್ತಿನಲ್ಲಿ ಕಣಿವೆಯಲ್ಲಿ ಕೊಲೆಯಾದಳು. ಕೊಲೆಗಡುಕರಿಗೆ ‘ನಿಮ್ಗೆ ಹಾಲು ತುಪ್ದಾಗೆ ಕೈತೊಳಸಿದ್ನೆಲ್ರೋ ಹೆಂಗೆ ಮನಸ್ಸು ಬಂತ್ರೋ ನಿಮ್ಗೆ, ಬ್ಯಾಡಕಣ್ರೋ'ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಳಂತೆ. ಅಪರಾಧಿಗಳಲ್ಲೊಬ್ಬನಾದ ನಿಂಗನಾಯ್ಕ ಎಂಬುವವನು ತನಗೆ ಕೋರ್ಟಿನಿಂದ ಶಿಕ್ಷೆಯಾದಾಗ ಹಲುಬಿಕೊಂಡಿದ್ದನಂತೆ ಎಂದು ಅನೇಕ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಭೈರಮ್ಮ ಕೊಲೆಯಾದ ಕಣಿವೆಗೆ ಭೈರಜ್ಜಿ ಕಣಿವೆ ಎಂದು ಹೆಸರಿಡಲಾಗಿದೆ.
ಕೆಂಚಪ್ಪನ ಬದುಕಿನುದ್ದಕ್ಕೂ ಜನ ಬರೀ ಕಿರುಕುಳಗಳನ್ನು ಕೊಟ್ಟರು. ಐಮಂಗಲದ ಗೌಡರು ಒಂದು ಹಗಲು - ರಾತ್ರಿ ಕಂಬಕ್ಕೆ ಕಟ್ಟಿಸಿದ್ದರು. ಮತ್ಯಾರೋ ಹೊಳಲ್ಕೆರೆ ಪೊಲೀಸರಿಗೆ ಈತನ ಮೇಲೆ ಸಮಾಜದ್ರೋಹಿ ಎಂದು ದೂರು ನೀಡಿದರು. ಪೊಲೀಸರು ಸಾಕಷ್ಟು ಸತಾಯಿಸಿ ದೂರನ್ನು ಕೂರ್ಟಿಗೆ ಸಲ್ಲಿಸಿದರು. ಶಿವಮೊಗ್ಗೆಯಲ್ಲಿದ್ದ ಸೆಷನ್ಸ್ ಕೋರ್ಟಿನಲ್ಲಿ ಕೆಂಚಪ್ಪನನ್ನು ಹಾಜರುಪಡಿಸಲಾಯಿತು. ಅಲ್ಲಿಯೂ ಈತನ ವಿಲಕ್ಷಣ ವರ್ತನೆ ನಡದೇ ಇತ್ತು. ವಕೀಲರು ನ್ಯಾಯಾಧೀಶರೂ ‘ಏನು ಘನಂದಾರಿ ಕೇಸಯ್ಯಾ ಇದು, ಇವನು ಸಮಾಜ ದ್ರೋಹಿ ಹೆಂಗೆ ಆಗಿದ್ದಾನು, ತನ್ನ ಪಾಡಿಗೆ ತಾನು ಅರೆ ಹುಚ್ಚನಂತೆ ಇರೋನಿಗೆ ಕೋರ್ಟಿಗ್ಯಾಕೆ ಕರೆತಂದಿರಯ್ಯಾ' ಎಂದು ಪೊಲೀಸರಿಗೇ ಎಚ್ಚರಿಕೆ ನೀಡಿ ಕೆಂಚಪ್ಪನನ್ನು ಖುಲಾಸೆ ಮಾಡಿದ್ದರಂತೆ.
ಹೀಗಾಗಿ ಕೆಲವರು ಕೆಂಚಪ್ಪ ಅವಧೂತನೆಂದು ಗೌರವಿಸುತ್ತಿದ್ದರೆ ಈತ ಎತ್ತಲೋ ನೋಡುತ್ತಾ ವಿಲಕ್ಷಣವಾಗಿ ನಗುತ್ತಿದ್ದನಂತೆ. ಮತ್ತೆ ಕೆಲವೊಮ್ಮೆ ತಾನೂ ಪ್ರತಿಯಾಗಿ ಕೈಮುಗಿದು ಹುಸಿನೆಗೆ ನಗುತ್ತಿದ್ದನಂತೆ.
ನಿರಕ್ಷರಕುಕ್ಷಿಯಾಗಿದ್ದ ಕೆಂಚಪ್ಪ ಚಿದಾನಂದಾವಧೂತರು ರಚಿಸಿರುವ ದೇವಿಪುರಾಣದ ಮೊದಲ ಪದ್ಯ `ಪರಮ ಪರತರ ಪರಮ ಮಂಗಳ ಪರಮ ಪೂರ್ಣ ಜ್ಯೋತಿ ಪರಮಾಕಾಶ ಪರಮೇಶ` ದಿಂದ ಕೊನೆಯ ಮಂಗಳದ ಸಾಲಿನವರೆಗೆ ನಿರರ್ಗಳವಾಗಿ ಪಠಿಸುತ್ತಿದ್ದುದನ್ನು ಅವರ ಮೊಮ್ಮಗ ದಿವಂಗತ ಮೇಷ್ಟ್ರು ಕೆಂಚಪ್ಪ ಕೊಂಡಾಡುತ್ತಿದ್ದರು. ಇದನ್ನು ಇವರ ಮಗ ನಿವೃತ್ತ ಇಂಜಿನಿಯರ್ ಕೆ. ತಿಪ್ಪೇರುದ್ರಪ್ಪ ಈಗಲೂ ಸ್ಮರಿಸುತ್ತಾರೆ. ಭಂಗಿ ಸೊಪ್ಪಿನ ಚಿಲುಮೆ ಎಳೆದು ಭಜನೆಗೆ ಕುಳಿತರೆಂದರೆ ವಾಗ್ದೇವಿ ಕೆಂಚಪ್ಪರ ನಾಲಗೆ ಮೇಲೆ ಕಣೀತಿದ್ಲು ಎಂದು ಕೂಡ ದಿವಂಗತ ಮೇಷ್ಟ್ರು ಕೊಂಡಾಡುತ್ತಿದ್ದರಂತೆ.
ಅವಧೂತ ಕೆಂಚಪ್ಪರ ಸಮಾಧಿ ಇಂದು ಯಾತ್ರಾ ಸ್ಥಳವಾಗಿದೆ. ಪ್ರತಿ ಸೋಮವಾರ ನೂರಾರು ಭಕ್ತರು ಬಂದು ಭಕ್ತಿಯಿಂದ ಅವಧೂತರ ಪೊಜೆ ಮಾಡಿ ಹೆಂಡ, ಮಾಂಸದ ಅಡುಗೆ, ಸಿಹಿ ಅಡುಗೆ ಎಡೆ ಅರ್ಪಿಸುತ್ತಾರೆ. ರೋಗ ರುಜಿನಗಳಿಂದ ಹಿಡಿದು ಗೃಹಕೃತ್ಯದ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪದ ಅಪ್ಪಣೆ ಪಡೆಯುತ್ತಾರೆ. ಈ ಬಿಲ್ವಪತ್ರೆಯ ಅಪ್ಪಣೆಯಲ್ಲಿ ಏನು ಬೀಜ ಬಿತ್ತಲಿ, ಯಾವ ಫಸಲು ಚಂದಗಾದೀತು ಇಂಥಾ ಮನೆಯಿಂದ ಹೆಣ್ಣು ತಂದರೆ ಒಳ್ಳೇದಾದೀತೆ, ಮುಂತಾಗಿಯಲ್ಲದೆ ಕೋರ್ಟು ಖಟ್ಲೆಗಳನ್ನೂ ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಕೆಲವು ಭಕ್ತರು ತಮ್ಮ ಭಾದೆಗಳ ಪರಿಹಾರಕ್ಕೆ ಕೆಂಚಪ್ಪರಿಗೆ ಅತ್ಯಂತ ಪ್ರಿಯವಾಗಿದ್ದ ಹೊಗೆ ಸೊಪ್ಪು, ಎಲೆ ಅಡಿಕೆ ಇತ್ಯಾದಿಗಳನ್ನು ಸಮರ್ಪಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಕಾಳ ಘಟ್ಟದ ರುದ್ರಮುನಿ ಅವಧೂತರು ತಮ್ಮ ಶಿಷ್ಯ ಕೆಂಚಪ್ಪನಿಗೆ ಆರ್ಶೀವಾದ ಮಾಡಿ ನೀಡಿದ್ದ ಕನ್ನಡ ಮೋಡಿ ಲಿಫಿಯ ತಾಳೆಗರಿಗಳ ಕಟ್ಟು, ಪುರಾಣಗಳ ಗಂಟುಗಳನ್ನು ಗದ್ದುಗೆ ಮನೆತನದವರು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿಕೊಂಡು ಬರುತ್ತಿದ್ದಾರೆ. ಅವುಗಳೊಳಗೇನಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಅವಧೂತರ ಮರಿಮಗ ಜಿ.ಎಸ್.ಕೆಂಚಪ್ಪ ತಿಳಿಸುತ್ತಾರೆ.


(ಕೃಪೆ: ಕೆಂಡಸಂಪಿಗೆ)

ಚುನಾವಣೆ ಮುಗಿದಿದೆ.. ಚುನಾವಣೆ ಬಾಕಿ ಇದೆ....

ದೊಡ್ಡ ತಲೆ ಭಾರ ಇಳಿದೆ. ಆದರೆ ಚಿತ್ರದುರ್ಗದ ಮಟ್ಟಿಗೆ ಸಾಹಿತ್ಯ ಸಮ್ಮೇಳನ.. ದೊಡ್ಡ ಕನಸಿನ ಭಾರವಿದೆ. ಅದನ್ನು ಯಶಸ್ವಿಯಾಗಿ ಹೊತ್ತೊಯ್ಯುವುದಕ್ಕೆ ಇನ್ನು ಮೇಲೆ ಸಿದ್ಧತೆಗಳು ಆರಂಭವಾಗಬೇಕು.
ಮೇ ಅಂತ್ಯಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಬಹುಶಃ ಇನ್ನೊಂದು ತಿಂಗಳಲ್ಲಿ ನಡೆಯಬಹುದು. ಹಾಗಾದರೂ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದಾ?
ಯಾಕೋ ಇದೊಂದು ಅನುಮಾನ ಕಾಡುತ್ತಿದೆ. ಗಣಿ ಧಣಿ, ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವುದು ಸಮ್ಮೇಳನಕ್ಕೆ ಹಣದ ಕೊರತೆಯ ಮಾತಿಲ್ಲ. ಪ್ರಶ್ನೆ ಇರುವುದು ಒಗ್ಗಟ್ಟಿನದು.... ಚಿತ್ರದುರ್ಗದ ಕ್ಷೇತ್ರದ ಶಾಸಕ ಎಸ್.ಕೆ.ಬಸವರಾಜನ್, ಮುರುಘ ಶ್ರೀ, ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್, ಜಿಲ್ಲೆಯ ಸಿರಿಗೆರೆ, ಹೊಸದುರ್ಗ, ಕಬೀರಾನಾಂದಾಶ್ರಮದ ಶ್ರೀಗಳು.. ಹೀಗೆ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದವರು ಒಗ್ಗಟ್ಟಾಗಿ ದುಡಿದರೆ ಸಮ್ಮೇಳನಕ್ಕೊಂದು ಕಳೆ ಎನ್ನುವುದು ಜಿಲ್ಲೆಯ ಸಾಹಿತ್ಯಾಸಕ್ತರ ಅಭಿಮತ.
ಸದ್ಯದ ರಾಜಕೀಯ ಬೆಳವಣಿಗೆ ಜಿಲ್ಲೆಯ ಕೆಲ ಹಿರಿಯರಲ್ಲಿ ವೈಮನಸ್ಸು ಉಂಟು ಮಾಡಿವೆ ಎಂಬುದೇ ಈ ಗುಮಾನಿಯ ಮಾತುಗಳಿಗೆ ಕಾರಣ.
ಜಿಲ್ಲೆಯ ಬುದ್ದಿಜೀವಿಗಳು, ಸಾಹಿತ್ಯಾಸಕ್ತರು ಒಂದೆಡೆ ಇನ್ನಾದರೂ ಸಮ್ಮೇಳನದ ಕುರಿತು ನಾಲ್ಕು ಮಾತುಗಳನ್ನು ಆಡಿ ಎಲ್ಲರೂ ಕೈಜೋಡಿಸಲು ಪ್ರೇರೇಪಿಸುವ ಅಗತ್ಯವಿದೆ..

Sunday, March 23, 2008

ತಿಪ್ಪೇರುದ್ರನ ತೇರು ಎಳೆದರು...

ಸುರಿವ ಮಳೆ ನಡುವೆಯೂ ನಡೆಯಿತು ಸಂಭ್ರಮದ ನಾಯಕನಹಟ್ಟಿ ಜಾತ್ರೆ..

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರ ಸ್ವಾಮಿಗಳ ರಥೋತ್ಸವ ಭಾನುವಾರ ಸುರಿವ ಮಳೆಯ ನಡುವೆ ವಿಜೃಂಭಣೆಯಿಂದ ನಡೆಯಿತು. ಸುಮಾರು ಮೂರು ಲಕ್ಷಕ್ಕೂ ಸೇರಿದ ಅಧಿಕ ಭಕ್ತಸಾಗರ ಸಂಭ್ರಮದ ವಾರ್ಷಿಕ ಸಂಪ್ರದಾಯಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ ೩-೨೦ ನಿಮಿಷಕ್ಕೆ ಸರಿಯಾಗಿ ರಥದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಸ್ವಾಮಿಗೆ ಉಪವಿಭಾಗಾಧಿಕಾರಿ ರಾಜಮ್ಮ ಚೌಡರೆಡ್ಡಿ, ವಿಧಾನಸಭಾ ಮಾಜಿ ಉಪಾಧ್ಯಕ್ಷ ಎನ್.ವೈ. ಗೋಪಾಲಕೃಷ್ಣ, ತಹಸೀಲ್ದಾರ್ ಹೆಚ್. ಜ್ಞಾನೇಶ್ ಸಾಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಬಾರಿ ಆರಂಭ ಸ್ಥಳದಿಂದ ರಥ ಚಲಿಸಿ ಕೇವಲ ೨೫ ನಿಮಿಷದಲ್ಲಿ ಗಮ್ಯಸ್ಥಾನವಾದ ಪಾದಗಟ್ಟೆ ತಲುಪಿತು. ಬೃಹತ್ ರಥ ಪ್ರತಿ ವರ್ಷ ಪಾದಗಟ್ಟೆ ತಲುಪಲು ಕನಿಷ್ಟ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಈ ವರ್ಷ ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ರಥ ಚಲಿಸಿ ಪಾದಗಟ್ಟೆ ತಲುಪಿತು. ರಥ ಬೇಗನೆ ಸೇರಿದ್ದರಿಂದ ಪಾದಗಟ್ಟೆ ಬಳಿ ತುಂಬ ಹೊತ್ತು ನಿಲ್ಲಿಸಲಾಗಿತ್ತು.
ಶನಿವಾರದಿಂದಲೇ ಮಳೆಯ ಆರ್ಭಟ ಆರಂಭವಾಗಿ ಭಾನುವಾರವೂ ಮುಂದುವರಿಯಿತು. ಮಳೆ ಸುರಿಯುವುದು, ನಿಲ್ಲುವುದು ದಿನಪೂರ್ತಿ ನಡೆದೇ ಇತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆ ರಭಸವಾಗಿ ಸುರಿಯತೊಡಗಿದ ಮಳೆ ಸುಮಾರು ಮುಕ್ಕಾಲು ಗಂಟೆ ನಿಲ್ಲಲೇ ಇಲ್ಲ. ಮಳೆಯಲ್ಲಿ ತೊಯುತ್ತಲೇ ಭಕ್ತಾಧಿಗಳು ರಥವನ್ನು ಜಯಘೋಷದೊಂದಿಗೆ ಎಳೆದರು. ಕಾಲಿಡಲೂ ಜಾಗವಿಲ್ಲದಷ್ಟು ಭಕ್ತಸಾಗರ ಜಮಾವಣೆಯಾಗುತ್ತಿದ್ದ ರಥ ಬೀದಿ ಮಳೆಯ ಕಾರಣದಿಂದ ಬೀಕೋ ಎನ್ನುತ್ತಿತ್ತು.
ರಥೋತ್ಸವ ಆರಂಭವಾಗುತ್ತಿದ್ದಂತೆ ಒಂದಷ್ಟು ಭಕ್ತಸಾಗರ ರಥವನ್ನು ಎಳೆಯಲು ನಿರತರಾದರೆ ಒಂದಷ್ಟು ಭಕ್ತರು ದೇವಸ್ಥಾನದತ್ತ ಪಾದಬೆಳೆಸಿ ದೇವರ ದರ್ಶನಕ್ಕ ಸರದಿಸಾಲಿಲ್ಲಿ ನಿಲ್ಲತೊಡಗಿದರು. ಕೆಲವೇ ಭಕ್ತರು ಮಾತ್ರ ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಬಳಸಿದರೆ ಬುಹುತೇಕ ಭಕ್ತರು ಮಳೆಯಲ್ಲಿ ತೋಯ್ದು ತೊಪ್ಪೆಯಾದರು.
ಪ್ರತಿವರ್ಷ ಜಾತ್ರೆ ಬಿಸಿಲ ಧಗೆ, ದೂಳಿನಿಂದ ಕೂಡಿದ ವಾತಾವರಣ ಸಾಮಾನ್ಯವಾಗಿರುತ್ತಿತ್ತು. ಈ ಬಾರಿ ಮಳೆ ಸುರಿದಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿ ಊರೆಲ್ಲ ಕೆಸರುಮಯವಾಯಿತು. ಕಳೆದ ೪೦ ವರ್ಷದಿಂದ ಇಂತಹ ವಾತಾವರಣ ಕಂಡಿರಲಿಲ್ಲ ಎಂಬುದು ಸ್ಥಳೀಯ ನಾಗರೀಕರ ಅಭಿಪ್ರಾಯ. ಜಾತ್ರೆ ಹಿಂದೆ -ಮುಂದೆ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರಾಗಿ ಮಳೆಹನಿ ಉದುರಿ ಶುಭ ಸೂಚನೆ ನೀಡುವ ಪರಂಪರೆಯಿತ್ತು. ಈ ವರ್ಷ ಎಲ್ಲರ ನಿರೀಕ್ಷೆ ಮೀರಿ ಅಕಾಲ ಮಳೆ ಸುರಿದು ಭಕ್ತರ ಸಂಭ್ರಮಕ್ಕೆ ತುಸು ಅಡ್ಡಿಯುಂಟು ಮಾಡಿತು.
ಬರುವ ಲಕ್ಷಾಂತರ ಭಕ್ತರು ಬಯಲಲ್ಲಿ, ತೋಟದಲ್ಲಿ ಗುಡಾರ ಹಾಕಿ ಬಿಡಾರ ಹೂಡುತ್ತಿದ್ದರಿಂದ ಈ ಅಕಾಲ ಮಳೆ ಬಾರಿ ಅಡಚಣೆ ಉಂಟುಮಾಡಿತು. ಬಯಲಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುವವರಿಗೆ ಬಾರಿ ತೊಂದರೆಯಾಯಿತು. ಆದರೆ ಜಾತ್ರೆಯಲ್ಲಿ ಸುತ್ತುಹಾಕುವ ಭಕ್ತರಿಗೆ ನಿರಾಶೆಯಾದಂತೆ ಕಾಣಲಿಲ್ಲ. ಸುರಿವ ಮಳೆಯಲ್ಲಿ ತೊಯ್ಯುತ್ತಲೆ ಜಾತ್ರೆಯ ಸೊಬಗು ಸವಿದರು.
ಜಾತ್ರೆಯ ವ್ಯಾಪಾರಕ್ಕೆ ಮಳೆ ಕೆಲವು ಅಡ್ಡಿಗನ್ನು ಉಂಟು ಮಾಡಿತು. ಗ್ರಾಮೀಣ ಜನರ ಜಾತ್ರೆಯ ವಿಶೇಷ ತಿಂಡಿಯಾದ ಕಾರ ಮಂಡಕ್ಕಿ ವ್ಯಾಪಾರದಲ್ಲಿ ಅಷ್ಟೇನು ವ್ಯತ್ಯಯ ಉಂಟಾಗದಿದ್ದರೂ, ಬಿಸಿಲಿನ ಧಗೆಯಿಂದ ಜೋರಾಗಿ ನಡೆಯುತ್ತಿದ್ದ ತಂಪು ಪಾನೀಯಗಳ ವ್ಯಾಪಾರ ನೆಲಕಚ್ಚಿತು. ತಂಪು ಪಾನೀಯ ವ್ಯಾಪಾರಿಯೊಬ್ಬರ ಪ್ರಕಾರ ರಥೋತ್ಸವದಂದು ಕನಿಷ್ಟ ೩೦ ಸಾವಿರ ವ್ಯಾಪಾರವಾಗುತ್ತಿದ್ದರೆ, ಈ ಬಾರಿ ೧ ಸಾವಿರ ಕೂಡಾ ವ್ಯಾಪಾರವಾಗಿಲ್ಲ ಎಂದು ಬೇಸರದಿಂದ ತಿಳಿಸಿದರು.
ಭಕ್ತರು ಸ್ವಾಮಿಯ ಜೀವೈಕ್ಯ ಸಮಾಧಿಯಾದ ಹೊರಮಠ ಮತ್ತು ಒಳಮಠಗಳೆರಡಕ್ಕೂ ಭೇಟಿನೀಡಿ ನಮನ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದರು. ಜಾತ್ರೆಯ ಮಾಮೂಲಿ ಪದ್ಧತಿಯಂತೆ ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸಿದರು. ಮಳೆ ಈ ಸಂಪ್ರದಾಯಕ್ಕೆ ಅಷ್ಟಾಗಿ ಅಡ್ಡಿಯಾಗಲಿಲ್ಲ.

Friday, March 21, 2008

ಒಂದು ಹಿಡಿ ಕ್ಷಮೆ ನಮಗಾಗಿ ಇಟ್ಟಿರಿ...

ಆಪ್ತರು ವಾಚಾಮಗೋಚರವಾಗಿ ಬೈದರು. ಆರಂಭ ಶೂರತ್ವ ಅಂತಾ ಅಣಕಿಸಿದರು. ಏನು ಮಾಡುವುದು ಸ್ವಾಮಿ. ಕೆಲಸದ ಒತ್ತಡ ಅಂದರೆ ನಂಬುವ ಮಾತೆ ಅಂತೀರಾ. ಯಾವುದೋ ತಾಂತ್ರಿಕ ತೊಂದರೆ ಅಂದರೆ ನಗುತ್ತೀರ. ಇರಲಿ. ನಿಜ ಹೇಳಬೇಕೆಂದರೆ ನಾವು ಮಾಡುತ್ತಿರುವ ಕೆಲಸಗಳ ನಡುವೆ ಏನನ್ನಾದರೂ ಬರೆಯಬೇಕು ಎನ್ನುವುದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದೇವೆ. ಕೆಲಸದ ಒತ್ತಡ ಹಾಗಿತ್ತು. ಆದರೆ ನಿಮಗೆ ಹಿಸಿ ಹೋಳಿಗೆ ಬಡಿಸುವುದಕ್ಕೆ ಬೇಳೆ, ಬೆಲ್ಲ ಹೊಂಚು ಕೆಲಸವನ್ನಂತು ಕೈಬಿಟ್ಟಿಲ್ಲ. ಜಿಲ್ಲೆಯ ಮಿತ್ರರನ್ನು ಪರಿಚಯಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯ ಕಾವ್ಯ ಪರಂಪರೆ ಕುರಿತ ಒಳನೋಟದ ಲೇಖನವೊಂದು ನಿಮ್ಮ ಮುಂದೆ ಬರಲಿದೆ... ನಿರೀಕ್ಷೆಯಲ್ಲಿರಿ...
ಆದರೆ ಒಂದು ಮನವಿ.. ಇಂಥ ಗ್ಯಾಪ್ ಗಳು ಆಗಾಗ ಸೃಷ್ಟಿಯಾಗುತ್ತಿರುತ್ತವೆ. ಅದಕ್ಕಾಗಿ ಒಂದು ಹಿಡಿ ಕ್ಷಮೆ ನಮಗಾಗಿ ಎತ್ತಿಟ್ಟಿರಿ...
ದುರ್ಗದ ಹುಡುಗರು...

ಇವರು ಅಪಾರ ನಮ್ಮ ಜಿಲ್ಲೆಯವರು...

ನಮಗೆ ಅಪಾರ ಭಾವನದ ಕಥೆಯೊಂದರ ಮೂಲಕ ಪರಿಚಯ. ಇವರ ನಿಜ ಹೆಸರು ಪಿ. ರಘು. ಆದರೆ ಅವರು ಹೆಚ್ಚು ಚಿರಪರಿಚಿತರಾಗಿರುವುದು ಅಪಾರ ಎಂಬ ಹೆಸರಿನಿಂದ. ಭಾವನದ ಕಥೆಯಲ್ಲಿ ಇವರು ಹಿರಿಯೂರು ಚಿತ್ರಣವನ್ನು ಕೊಟ್ಟಿದ್ದರು. ಹಾಗಾಗಿ ಅಪಾರ ಎನ್ನುವವರು ನಮ್ಮ ಜಿಲ್ಲೆಯವರೇ ಎಂದುಕೊಂಡಿದ್ದೆವು. ಅದಾದ ಮೇಲೆ ಅಲ್ಲಿ ಇಲ್ಲಿ ಕೇಳಲ್ಪಟ್ಟ ಸಂಗತಿಗಳ ಪ್ರಕಾರ ಇವರು ಹಿರಿಯೂರಿನವರು, ಸದ್ಯ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಅದೂ ಅಲ್ಲದೆ ನಮ್ಮ ಬ್ಲಾಗ್ ಆರಂಭವಾದ ಮೇಲೆ ಅವರು ಕೂಡ ಕಮೆಂಟ್ ಮಾಡಿ ನಾನು ನಿಮ್ಮ ಜಿಲ್ಲೆಯವನು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅಪಾರ ಮೊದಲೇ ಹೇಳಿದಂತೆ ಕಥೆ ಬರೆಯುತ್ತಾರೆ. ಕವಿತೆಗಳನ್ನು ಬರೆಯುತ್ತಾರೆ. ಜೊತೆಗೆ ಕಲಾವಿದರೂ ಹೌದು. ಇವರು ಕನ್ನಡದ ಹತ್ತಾರು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಸದ್ಯ ಅವರು ಹೆಚ್ಚು ಸುದ್ದಿಯಲ್ಲಿರುವುದು ಅವರ ಮದ್ಯಸಾರ ನಾಲ್ಕು ಸಾಲುಗಳ ಪದ್ಯಗಳ ಮೂಲಕ. ರತ್ನನ ಪದಗಳನ್ನು ನೆನಪಿಸುವ ಈ ಸಾಲುಗಳು ತುಂಬಾ ಖುಷಿ ಕೊಡುವ ಸಾಲುಗಳು. ಸ್ಯಾಂಪಲ್ಲಿಗೆ ಮೂರು ಮದ್ಯಸಾ(ಲು)ರಗಳನ್ನು ಅವರ ಬ್ಲಾಗಿನಿಂದ ಭಟ್ಟಿ ಇಳಿಸಿದ್ದೇವೆ. ಓದಿ ಆನಂದಿಸಿ....

ಮದ್ಯಸಾರ
1

ಮಧುಪಾತ್ರೆ ಕಣ್ಣಿನಂತೆ ಗೆಳೆಯಾ

ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ

ಕುಡಿತ ಸಾವಿದ್ದಂತೆ ಗೆಳೆಯಾ

ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ.

2

ಎಲ್ಲ ಗೆಳತಿಯರೂ ನೆನಪಾಗುತಿಹರೀಗ

ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು

ತಿಳಿಯುತಿಲ್ಲ ಯಾರ ವಿರಹ ಯಾವ ತರಹ

ಕುಡುಕನದು ಎಂದೂ ಇದೇ ಹಣೆಬರಹ.

3

ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ

ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ

ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ

ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ.