Monday, December 24, 2007

ಬಯಲು ಬನದ ಹಕ್ಕಿ


ಇದು ಎಂಬಿ, ಜಿಬಿ ಮೆಮೊರಿ ಕಾಲ. ಹನ್ನೆರಡಾರಲಿ ಎಷ್ಟು ಎಂಬುದು ಥಟ್ಟಂತ ಹೊಳೆಯುವುದಿಲ್ಲ. ನಾಲ್ಕು ಮಂದಿ ಸ್ನೇಹಿತರ ಮೊಬೈಲ್ ನಂಬರ್ ಕೇಳಿದರೆ, ಎರಡನ್ನು ತಡವರಿಸುತ್ತಾ ಹೇಳಿ, ಮೂರನೆಯದ್ದಕ್ಕೆ ಮೊಬೈಲ್‌ನಲ್ಲಿ ಹುಡುಕುವವರ ಕಾಲವಿದು. ಇಂಥವರ ನಡುವೆ ಸಾವಿರಾರು ಪದ್ಯಗಳನ್ನು ತಡವರಿಸದೆ, ನಿರರ್ಗಳವಾಗಿ ಹಾಡುವವರಿದ್ದಾರೆ. ಅಂಥ ಒಂದು ಅಚ್ಚರಿ ಪ್ರತಿಭೆ, ಮೌಖಿಕ ಪರಂಪರೆಯ ದನಿ ನಮ್ಮೂರಲ್ಲಿದೆ. ಅದು ಜಾನಪದ ಸಿರಿ. ಹೆಸರು ಸಿರಿಯಜ್ಜಿ!

ಸಿರಿಯಜ್ಜಿ!



ಹೆಸರಿನಲ್ಲೇ ಸಿರಿ ಇದೆ. ಅದು ಜಾನಪದ ಸಿರಿ. ನಮ್ಮೊಡನೇ ಇರುವ ಮೌಖಿಕ ಪರಂಪರೆಯ ದನಿ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿ ಯಾರಿಗೆ ಗೊತ್ತಿದೆ? ಇಂಥ ಅಜ್ಞಾತವೆನ್ನಬಹುದಾದ ಹಳ್ಳಿಯಲ್ಲಿ ಹುಟ್ಟಿದಾಕೆ ಸಿರಿಯಜ್ಜಿ.
ಯಾವಾಗ ಹುಟ್ಟಿದ್ದೋ ಆಕೆಗೆ ಅದು ತಿಳಿಯದು. ಯಾವುದಾದರೂ ಒಂದು ಹಬ್ಬದ ಹಿಂದು ಮುಂದು, ಹುಣ್ಣಿಯ ಆಚೀಚೆ ಎಂದು ನೆನಪಿಸಿ ಕೊಂಡೂ ಹೇಳಲಾರಳು.
ಆದರೆ ಆಕೆ ದನಿ ಎತ್ತಿದರೆ ಸಾವಿರಾರು ಹಾಡುಗಳು ಅನುರಣಿಸುತ್ತವೆ. ಗೊಲ್ಲರಹಟ್ಟಿಯಲ್ಲಷ್ಟೇ ಅಲ್ಲ, ಜಾನಪದ ಜಗತ್ತಿನ ತುಂಬಾ.
ಅಕ್ಕಿ ಆರಿಸುವಾಗ, ಸುಗ್ಗಿ ಹಬ್ಬದಲ್ಲಿ, ಊರ ದೇವತೆಯ ಜಾತ್ರೆಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ ಜೋಗುಳ ಹಾಡುತ್ತಾ ಎಲ್ಲಾ ಸಂತಸದ, ಸಮಾಧಾನದ ಗಳಿಗೆಗೂ ಹಾಡುತ್ತಾ ಹಾಡುಗಳ ಸಾಮ್ರಾಜ್ಞಿ ಎನಿಸಿಕೊಂಡಾಕೆ ಈ ಸಿರಿಯಜ್ಜಿ.
ಎಲ್ಲಿ ಕಲಿತೆ? ಎಂದು ಕೇಳಿದ್ದೆವು
ಆಕೆ ಬಿಚ್ಚಿಟ್ಟಿದ್ದು ತನ್ನ ಹಿಂದಿದ್ದ ಮೌಖಿಕ ಸಂಸ್ಕೃತಿಯೊಂದರ ಕಥೆ. ಅದರ ಭಾಗವಾಗಿದ್ದ ತನ್ನಂತೆ ತಮ್ಮ ನಿತ್ಯದ ಬದುಕನ್ನು ಹಾಡುತ್ತಾ ಕಳೆದ ತನ್ನ ತಾಯಿ, ಅಜ್ಜಿಯರ, ತನ್ನೊಂದಿಗೆ ದನಿಗೂಡಿಸಿದ್ದ ಗೆಳತಿಯರ ಕಥೆ.
ಕುರಿ ಕಾಯುತ್ತಾ, ಮನೆಯ ಕೆಲಸ ಗಳನ್ನು ಮಾಡುತ್ತಾ, ತಾವೇ ಕಟ್ಟಿದ ಪದಗಳನ್ನು ಹಾಡಿದರು. ಮನೆಯಲ್ಲಿ ಹುಟ್ಟಿದ ಮಗುವಿನ ಸಂಭ್ರಮ, ಗಂಡನಿಲ್ಲದ ಬೇಸರದ ನೋವು ಎಲ್ಲವೂ ಅಲ್ಲಿ ಪದಗಳಾದವು. ಕಾಯುವ ದೇವರ ಆರಾಧಿಸಿದರು.
ಸಿರಿಯಜ್ಜಿ ಇಂಥ ಸಾವಿರ ಪದಗಳನ್ನು ಹಾಡುತ್ತಲೇ ಬಂದರು ಎಂಬುದು ಜಿಬಿ ಮೆಮೊರಿ ಕುರಿತು ಮಾತನಾಡುವ ನಮ್ಮ ಕಾಲಕ್ಕೆ ನಿಜಕ್ಕೂ ಅಚ್ಚರಿ.
ಮೂರು ಮೊಬೈಲ್ ನಂಬರಗಳನ್ನು ಹೇಳಿ, ನಾಲ್ಕನೆಯದಕ್ಕೆ ತಲೆ ಕೆರೆದುಕೊಳ್ಳುವ ನಾವು ಯಾವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇವೋ?
ಇಂಥ ಸಿರಿಯಜ್ಜಿ ಗೊಲ್ಲರ ಹಟ್ಟಿಯಿಂದ ಆಚೆ ಬಂದಿದ್ದು ಜನರಿಗೆ ಗೊತ್ತಾಗಿದ್ದು ಎರಡೂವರೆ ದಶಕಗಳ ಹಿಂದೆ ಇರಬೇಕು.
೧೯೮೦ರಲ್ಲಿ ಸಾಹಿತಿ ಹನೂರು ಕೃಷ್ಣಮೂರ್ತಿ ಸಿರಿಯಜ್ಜಿಯನ್ನು, ಆಕೆಯ ಪ್ರತಿಭೆಯನ್ನು ಜನರಿಗೆ ಪರಿಚಯಿಸಿದರು. ಅಷ್ಟೇ ಅಲ್ಲ ಆಕೆಯೊಂದಿಗೆ ಮೂರು ವರ್ಷಗಳ ಕಾಲ ಇದ್ದು ೧೦ ಸಾವಿರ ಪದ್ಯಗಳನ್ನು ಅಕ್ಷರರೂಪಕ್ಕೆ ಇಳಿಸಿದರು!
ಆಗಿನ ಮುಖ್ಯಮಂತ್ರಿ ಗುಂಡೂರಾವ್ ಸಿರಿಯಜ್ಜಿ ಗೌರವಿಸಿದರು. ಭಾರತದ ಜಾನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಎ.ಕೆ.ರಾಮಾನುಜನ್ ಅವರಿಗೂ ಈಕೆಯ ಪ್ರತಿಭೆಗೆ ತಲೆ ಬಾಗಿದ್ದರಂತೆ. ಅಷ್ಟೇ ಅಲ್ಲದ ಜಾನಪದ ಅಧ್ಯಯನದಲ್ಲಿ ಅಪೂರ್ವ ಸಾಧನೆ ಮಾಡಿದ ದಿವಂಗತ ಎಚ್.ಎಲ್.ನಾಗೇಗೌಡರು ಅನೇಕ ದಿನಗಳ ಕಾಲ ಕೂತು ಆಕೆಯ ಹಾಡುಗಳನ್ನು ಧ್ವನಿ ಮುದ್ರಿಸಿಕೊಂಡಿದ್ದರು ಕೂಡ.
ಕಲ್ಲು ಕೋಟೆಯ ನಾಡಿನಲ್ಲಿ, ಕೋಗಿಲೆ ಈ ನಮ್ಮ ಸಿರಿಯಜ್ಜಿ.

2 comments:

Anonymous said...

siriyajji bagge bareda lekhana chhalo aitri. heege agaga chitradurga pratibhegala parichaya madri, chalo irtada

'ಸವೀ' Sahana said...

ದುರ್ಗದ ಹುಡುಗರ ಅಕ್ಷರ ಪ್ರೀತಿ ಮತ್ತು ತಮ್ಮ ನೆಲದ ಇತಿಹಾಸ, ಜೀವನ ಕುರಿತ ಕಾಳಜಿಗಳನ್ನು ಕಂಡು ಖುಶಿಯಾಯಿತು. ಕನ್ನಡ ಸಾಹಿತ್ಯ ಸಮ್ಮೆಳನ ಅಂದ ತಕ್ಷಣ ಬ್ಲಾಗ್ ಕನ್ನಡ ಡಿಂಡಿಮ/ತುತ್ತೂರಿ ಅಷ್ಟೇ ಆಗದೇ, ದುರ್ಗದ-ಕನ್ನಡ ನಾಡಿನ ಹಲವು ಮುಖಗಳ ದರ್ಶನ ಮಾಡಿಸುವ ವಿಸ್ತಾರ ನಿಮಗಿದೆ ಅನ್ನೋದನ್ನ ನಿಮ್ಮ ಈವರೆಗಿನ ಪೋಸ್ಟ್ ಗಳು ತೋರಿಸ್ತವೆ.

ದುರ್ಗವನ್ನ ಐತಿಹಾಸಿಕ ಪ್ರವಾಸೀತಾಣವಾಗಿಯೋ, 'ನಾಗರಹಾವು'ನ ಊರಾಗಿಯೋ ಬಲ್ಲವರಿಗೆ ದುರ್ಗ ಒಂದು ಜಿಲ್ಲೆಯಾಗಿ ಹೇಗಿದೆ ಅಂತ ಒಂದೇ flick ನಲ್ಲಿ ಚನ್ನಾಗಿ ಮೂಡಿಸಿದ್ದೀರ.

ದಾವಣಗೆರೆಯಲ್ಲಿ ಬೆಳೆದ ನನಗೆ ದುರ್ಗದೊಡನೆ ಅಮ್ಮನ ಮನೆಯಂಥ ಸಂಬಂಧ.

ಸಿರಿಯಜ್ಜಿಯಂಥ 'ಜವಾರಿ ಮೆಮೋರಿ ಡಿಸ್ಕ್' ಕುರಿತ ಪೋಸ್ಟ್ ನಮ್ಮ ಉತ್ಸಾಹದ ಗುರುತಾದರೆ 'ಹೀಗೊಂದು ಸುದ್ದಿ ಬಂದಿದೆ' ನಿಮ್ಮ ಎಚ್ಚರ ಕಣ್ಣಿಗೆ ಸಾಕ್ಷಿ.

ಸಂತೋಷವಾಯಿತು, ಬ್ಲಾಗ್ ನೋಡಿ