Monday, December 17, 2007

ಸಂಭ್ರಮಕ್ಕೆ ಕಾರಣವಿಷ್ಟೆ...



ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುವ ಸುದ್ದಿ ದುರ್ಗದ ಹುಡುಗರಿಗೆ ಸಂಭ್ರಮ ಸಂಗತಿ. ಕಾರಣ ಇಷ್ಟೆ. ಚಿತ್ರದುರ್ಗ ಅನೇಕ ಬಾರಿ ಅವಗಣನೆಗೆ ಗುರಿಯಾದ ಜಿಲ್ಲೆ. ಬರ, ಬರಡು, ಬಂಡೆ ಎಂಬ ರೂಪಕಗಳ ಮೂಲಕವೇ ಚಿತ್ರದುರ್ಗವನ್ನು ಚಿತ್ರಿಸುವ ಪರಿಪಾಠ ಬಹಳ ಕಾಲದಿಂದ ಬೆಳೆದಿದೆ. ಐತಿಹಾಸಿಕ ಕೋಟೆ, ಸುಂದರ ಗಿರಿಧಾಮ (ಜೋಗಿಮಟ್ಟಿ), ಅಶೋಕನ ಶಾಸನ, ಗುಹಾಂತರ ಚಿತ್ರಕಲೆ... ಹೀಗೆ ನಾನಾ ಕಾರಣಗಳಿಂದ ಮಹತ್ವ ಪಡೆದ ಜಿಲ್ಲೆಯಾದರೂ ಪ್ರವಾಸೋದ್ಯಮ ಇಲಾಖೆಗೆ ಇದು ಶೂನ್ಯ! ಅಕಾಡೆಮಿಗಳ ವಾಷರ್ಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲೂ ಮನ್ನಣೆ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲೇ ಬೇಕು ಎಂದು ಪಟ್ಟು ಹಿಡಿದರೆ ಅದು ಬೆಂಗಳೂರಿಗರನ್ನು ಮುಟ್ಟುವುದೇ ಇಲ್ಲ. ಇಂತಹ ಹಲವು ಲೋಪಗಳಿಗೆ ರಾಜಕಾರಣ ಕಾರಣ. ಚಿತ್ರದುರ್ಗ ಜಿಲ್ಲೆ ಇಡೀ ಜನಸಮುದಾಯವನ್ನು ಪ್ರತಿನಿಧಿಸುವ ಒಬ್ಬ ರಾಜಕಾರಣಿ ಇಲ್ಲ. ಮೂರು ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದರೂ ಕನಿಷ್ಠ ಮೂರು ನಿಮಿಷಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಸನ್ಮಾನ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದ್ದು ಯಾರಿಗೂ ನೆನಪಿಲ್ಲ. ಯಾಕೆ ನೆನಪಿಲ್ಲ? ಸನ್ಮಾನ್ಯರು ಮಾತನಾಡಿದ್ದರೆ ತಾನೆ? ಉಳಿದ ಶಾಸಕರ ಪಾಡು ಇದ್ದಕ್ಕಿಂತ ಭಿನ್ನವೇನಲ್ಲ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವ್ಯಕ್ತಿತ್ವ ಎಚ್. ಆಂಜನೇಯ. ಮೊದಲು ಕಾಂಗ್ರೆಸ್, ಜೆಡಿಯು, ನಂತರ ಜೆಡಿಎಸ್ ಈಗ ಎಂ.ಪಿ ಪ್ರಕಾಶ್ ಬಣ - ಹೀಗೆ ಹೆಸರಿಗೆ ತಕ್ಕಂತೆ ಒಂದೆಡೆ ನಿಲ್ಲದೆ ಹಾರುವ ಆಂಜನೇಯ ಮಾತನಾಡಿದರೂ ಮಹತ್ವ ದೊರಕದು.ಕನರ್ಾಟಕ ರಾಜಕೀಯ ಇತಿಹಾಸದಲ್ಲಿ ಚಿತ್ರದುರ್ಗವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ. ಆದರೆ ಅವರು ತಮ್ಮ ಅಧಿಕಾರ ವೇಳೆ ಚಿತ್ರದುರ್ಗಕ್ಕೆ ನೀಡಿದ ಕೊಡುಗೆ ಏನು? ಹಿರಿಯ ಪತ್ರಕರ್ತ ಡಾ. ಬಿ.ವಿ ವೈಕುಂಠರಾಜು ಮಾತಿನಲ್ಲೆ ಹೇಳುವುದಾದರೆ - ಏನೂ ಇಲ್ಲ.ಅದು 1998ರ ಜೂನ್. ಐತಿಹಾಸಿಕ ಕೋಟೆ ಆವರಣದಲ್ಲಿ ದುಗರ್ೋತ್ಸವ ಸಂಭ್ರಮದಿಂದ ನಡೆಯುತ್ತಿತ್ತು. ಚಿತ್ರದುರ್ಗ ಅಭಿವೃದ್ಧಿ ಕುರಿತ ಗೋಷ್ಠಿಯೊಂದರ ಅಧ್ಯಕ್ಷತೆವಹಿಸಬೇಕಿದ್ದವರು ನಿಯಲಿಂಗಪ್ಪ. ಅನಾರೋಗ್ಯ ಕಾರಣ ಸಭೆಗೆ ಬರಲಾಗಲಿಲ್ಲ. ಆದರೆ ಆ ಹೊತ್ತಿಗಾಗಲೇ ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ಸಭೆಯ ಅಧ್ಯಕ್ಷತೆ ಜವಾಬ್ದಾರಿ ವೈಕುಂಠರಾಜು ಅವರ ಮೇಲೆ ಬಿತ್ತು. ತಮ್ಮ ಮಾತುಗಳಲ್ಲಿ ಅವರು ಮೊದಲು ಟೀಕಿಸದ್ದು ನಿಜಲಿಂಗಪ್ಪನವರನ್ನೇ. "ಅವರು ಪ್ರಾಮಾಣಿಕರು. ಆದರೆ ಪ್ರಾಮಾಣಿಕತೆಯೊಂದಿದ್ದರೆ ಸಾಲದು. ಕೆಲಸ ಮಾಡಬೇಕು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಮನಸು ಮಾಡಿದ್ದರೆ ಭದ್ರಾ ನೀರು ಚಿತ್ರದುರ್ಗಕ್ಕೆ ಹರಿಸಬಹುದಿತ್ತು. ಆಗ ಏನು ಮಾಡದವರು ಈಗ ಉಪವಾಸ ಕೂರ್ತಾರಂತೆ. ಇವರ ಮಾತನ್ನು ಈಗ ಯಾರು ಕೇಳ್ತಾರೆ", ಎಂದರು.ಅದಿರಲಿ. ಇಂದಿನ ರಾಜಕಾರಣಿಗಳು ಮಾಡುತ್ತಿರುವುದಾದರೂ ಏನು? ಅವರೆಲ್ಲಾ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕುರಿತಂತೆ ಇಂದಿಗೂ ಹೋರಾಟ ನಡೆಯುತ್ತಿರುವುದು ಕೆಲ ಪ್ರಗತಿಪರ ಚಿಂತಕರು, ದಲಿತ ಸಂಘಟನೆ ಹಾಗೂ ಕೆಲ ಉತ್ಸಾಹಿ, ಬದ್ಧತೆಯುಳ್ಳ ಪತ್ರಕರ್ತರ ಕಾರಣದಿಂದ.ಇಂತಹ ಬೇಸರಗಳ ಮಧ್ಯೆ ಚಿತ್ರದುರ್ಗದಲ್ಲಿ ಸಮ್ಮೇಳನ ನಡೆಯುತ್ತದೆ ಎಂದರೆ ದುರ್ಗದ ಕೂಗಿಗೆ ಒಂದು ವೇದಿಕೆ ಸಿಗುತ್ತದೆ. ಆ ಮೂಲಕ ಬೇಡಿಕೆಗಳಿಗೆ ಒತ್ತು ನೀಡಬಹುದು. ಕೆಲದಿನಗಳ ಮಟ್ಟಿಗಾದರೂ ಮಾಧ್ಯಮಗಳ ಬಾಯಲ್ಲಿ ಚಿತ್ರದುರ್ಗ ನಲಿದಾಡುತ್ತದೆ. ಹಿಂಡುಗಟ್ಟಲೆ ಸಾಹಿತಿಗಳು, ಪತ್ರಕರ್ತರು ದುರ್ಗಕ್ಕೆ ಧಾವಿಸುತ್ತಾರೆ. ಒಂದಿಷ್ಟು ಹರಟುತ್ತಾರೆ.. ಈ ಎಲ್ಲಾ ಕಾರಣಗಳಿಗೆ ದುರ್ಗದ ಹುಡುಗರಾದ ನಾವು ಸಂಭ್ರಮ ಪಡುತ್ತೇವೆ.
- ಬೀರೇಶ್ ಬಾರಣ್ಣನವರ್

No comments: